ಅಂಕಣ ವಾಸ್ತವ

ನೈತಿಕತೆಗೀಗ ಡೇಂಜರ್ ಝೋನ್!

ಸರಿ ರಾತ್ರಿ (ಅದು ಮಧ್ಯರಾತ್ರಿ 12 ಗಂಟೆ) ಮಹಿಳೆಯೊಬ್ಬಳು ಒಂಟಿಯಾಗಿ ರಸ್ತೆಯಲ್ಲಿ ನಡೆದುಕೊಂಡು ಹೋದಾಗ ಯಾವುದೇ ಅಪಾಯ ಆಕೆಗೆ ಸಂಭವಿಸಿಲ್ಲ ಎಂದಾದರೆ ನಮಗೆ ಸ್ವಾತಂತ್ರ್ಯ ದೊರಕಿದ್ದು ಅರ್ಥಪೂರ್ಣ ಎನಿಸುತ್ತದೆ.

ನಮ್ಮ ದೇಶದ ತುಂಬಾ ಪಾಪ್ಯುಲರ್ ವಾಕ್ಯವಿದು.

ಹೌದಾ? ಎಲ್ಲಾದರೂ ಉಂಟೇ? ಮೇಲಿನ ವಾಕ್ಯ ಓದಲು, ಬಾಯಿಪಾಠದ ಭಾಷಣ, ಲೇಖನಗಳಿಗಷ್ಟೇ ಮೀಸಲು ಎಂಬುದು ಎಲ್ಲರಿಗೂ ಗೊತ್ತು. ಯಾರೂ ಇದರ ಪರೀಕ್ಷೆಗಿಳಿಯುವುದಿಲ್ಲ. ಏಕೆಂದರೆ ಸ್ವಾತಂತ್ರ್ಯ ಬಂದು 69 ವರ್ಷ ಕಳೆದರೂ ಒಂಟಿಯಾಗಿ ಮಹಿಳೆ ಮಧ್ಯರಾತ್ರಿ ನಡೆದುಕೊಂಡು ಹೋಗೋಕೆ ಸಾಧ್ಯವೇ ಇಲ್ಲ. ಇವತ್ತು ಭಾರತದ ಯಾವ ಮಹಾನಗರ, ಹಳ್ಳಿ, ಅರೆಪಟ್ಟಣಗಳೂ ಇದಕ್ಕೆ ಹೊರತಲ್ಲ. ಮಧ್ಯರಾತ್ರಿಯಾದೊಡನೆ ಸನ್ನಿವೇಶವೇ ಬದಲಾಗುತ್ತವೆ. ಸೂರ್ಯನ ಬಿಸಿಲಲ್ಲಿ ಇದ್ದ ಮೃದುತ್ವ ಸಂಜೆಯಾದೊಡನೆ ಕರಗುತ್ತವೆ, ರಾತ್ರಿಯಾದೊಡನೆ ಕ್ರೌರ್ಯ ಮೆರೆಯುತ್ತದೆ ಎಂಬ ಮಾತು ಇಲ್ಲಿ ಅನ್ವಯಿಸುತ್ತದೆ. ಹೀಗಾಗಿ ಮಧ್ಯರಾತ್ರಿ ಮಹಿಳೆಗೆ ಮಾತ್ರವಲ್ಲ, ಪುರುಷನಿಗೂ ಅಪಾಯಕಾರಿಯೇ. ಇದು ಮಧ್ಯರಾತ್ರಿಯಷ್ಟೇ ಅಲ್ಲ ಹಗಲೂ ಡೇಂಜರ್ ಎಂಬ ಮಾತು ಕೆಲ ಏರಿಯಾಗಳಲ್ಲಿವೆ. ಆದರೆ ಯಾರೋ ಕಳ್ಳ ನಿಮ್ಮ ಕತ್ತಲ್ಲಿರೋ ಸರ ಎಳೆದಾನು ಎಂಬುದು ಆ ವಾಕ್ಯದ ತಾತ್ಪರ್ಯವೇನಲ್ಲ. ಗಾಂಧೀಜಿ ಹೇಳಿದ ಆ ಮಾತಿನ ಅರ್ಥ ನಾವು ನೈತಿಕವಾಗಿ ಬೆಳೆಯಬೇಕು, ಮನುಷ್ಯರಾಗಿರಬೇಕು ಎಂದು. ಇದು ಗಾಂಧೀಜಿಯಷ್ಟೇ ಅಲ್ಲ, ನಮ್ಮ ದೇಶದ ಪ್ರಮುಖ ದಾರ್ಶನಿಕರು ಎಲ್ಲರೂ ಇದನ್ನೇ ಹೇಳಿದ್ದು. ನೈತಿಕ ಅರಿವು ನಮಗಾಗಬೇಕು.

ಇರಾಕ್’ನ ಈ ಕಥೆ ಸುಮ್ಮನೆ ಓದಿ.

ಆ ದೇಶದ ಉತ್ತರ ಭಾಗದಲ್ಲಿರುವ ಕೋಚಾ ಎಂಬ ಗ್ರಾಮದಲ್ಲಿ ಒಡಹುಟ್ಟಿದವರು ಮತ್ತು ತಾಯಿಯೊಂದಿಗೆ ವಾಸವಾಗಿದ್ದವಳು ನಾದಿಯಾ ಮುರದ್. ಎಲ್ಲ ಸಂತೋಷವಾಗಿದ್ದರು ಎಂದುಕೊಂಡರೆ ಹಾಗಾಗಲಿಲ್ಲ. ಐಸಿಸ್ ಉಗ್ರರು ಹಳ್ಳಿಗೆ ದಾಳಿ ಮಾಡಿದರು. ಎಲ್ಲರಿಗೂ ಶಾಲೆಯೊಳಕ್ಕೆ ಹೋಗುವಂತೆ ಸೂಚಿಸಿದರು. ಗುಂಪಿನಲ್ಲಿದ್ದ ಮಹಿಳೆಯರು ಮತ್ತು ಪುರುಷರನ್ನು ಬೇರ್ಪಡಿಸಿದರು. 314 ಪುರುಷರನ್ನು ನಿಷ್ಕರುಣೆಯಿಂದ ಕೊಂದರು. ಅವರಲ್ಲಿ ನಾದಿಯಾಳ ಆರು ಸಹೋದರರೂ ಇದ್ದರು. ನಾದಿಯಾ ಹಾಗೂ ಉಳಿದ ಯುವತಿಯರನ್ನೆಲ್ಲ ಐಸಿಸ್ ಉಗ್ರರು ಇರಾಕ್ನ ಮೋಸುಲ್ ನಗರಕ್ಕೆ ಕರೆದೊಯ್ದರು. ಅಲ್ಲಿ ಆಕೆಗೆ ನರಕಯಾತನೆ. ಕ್ರೂರ ಸಂಘಟನೆಯಾದ ಐಸಿಸ್’ಗೆ ಮಾನವೀಯತೆ ಎಂಬುದೆಲ್ಲಿದೆ? ನಾದಿಯಾ ಮೇಲೆ ಅತ್ಯಾಚಾರ ಎಸಗಿತ್ತು. ಆದರೂ ಅವರ ಬಿಗು ಹಿಡಿತದಿಂದ ತಪ್ಪಿಸಿಕೊಂಡು ಬಂದಳು. ಆಗಷ್ಟೇ ಜಗತ್ತಿಗೆ ಐಸಿಸ್’ನ ಇಂಥ ಮುಖ ಸ್ಪಷ್ಟವಾಗಿ ಗೊತ್ತಾಯಿತು.

ಈಗ ಭಾರತದತ್ತ ಬರೋಣ.

ಐಸಿಸ್’ನಂಥ ಉಗ್ರ ಸಂಘಟನೆ ಇಂಥ ವಿಪರೀತ ಕೃತ್ಯಕ್ಕಿಳಿಯುವುದು ಅಸಹಜ ಎನಿಸುವುದಿಲ್ಲ. ಇರಾಕ್’ನಂಥ ಉಗ್ರಪೋಷಕ ರಾಷ್ಟ್ರಗಳಿಗೆ ಇದು ಮಾಮೂಲಿ ವಿಚಾರ ಎನಿಸಲೂಬಹುದು. ಈಗಂತೂ ಇಂಥ ಅಪರಾಧದ ಪರಾಕಾಷ್ಠೆಯ ಘಟನೆಗಳು ನಮ್ಮಲ್ಲಿ ಇಲ್ಲ ಎನ್ನಬಹುದು. ಮುಂದಾಗುವುದಿಲ್ಲ ಎಂಬುದು ಏನು ಗ್ಯಾರಂಟಿ?

ಹಾಗಾದರೆ ಬದಲಾಗಬೇಕಿರುವುದು ಏನು? ಅಪರಾಧ ಎಸಗುವ ಮನೋವೃತ್ತಿ. ಸರಿ, ತಪ್ಪುಗಳ ವಿಮರ್ಶೆ. ಜಗತ್ತು ಎಷ್ಟೇ ಬದಲಾದರೂ ಜನರಲ್ಲಿ ಅಪರಾಧ ಎಸಗುವ ಮನೋಭಾವ ಬದಲಾಗಲೇ ಇಲ್ಲ ಎಂಬುದು ವಾಸ್ತವ. ಇದಕ್ಕೆ ಅಪರಾಧವನ್ನು ಸಮಾಜವೇ ಲೀಗಲೈಸ್ ಮಾಡುತ್ತಿದೆಯೋ ಎಂಬ ಅನುಮಾನ ನನ್ನಲ್ಲಿ ಮೂಡುತ್ತಿದೆ. ಬಹುಶಃ ನಿಮ್ಮ ಅಭಿಪ್ರಾಯವೂ ಅದೇ ಇರಬಹುದು.

ಹೇಗೆಂದು ನೋಡಿ.

ಮಗುವಿಗೆ ತನ್ನ ಸುತ್ತಮುತ್ತಲಿನ ಜಗತ್ತಿನ ಅರಿವಾದೊಡನೆ ಎಲ್ಲವನ್ನೂ ಬಾಚಿಕೊಳ್ಳುವ ಸಹಜ ಬಯಕೆ ಇರುತ್ತದೆ. ಪಕ್ಕದಲ್ಲೇನಾದರೂ ಇನ್ನೊಂದು ಮಗುವಿದ್ದರೆ ಅದರಿಂದಲೂ ಕಿತ್ತುಕೊಳ್ಳಬೇಕು ಎಂಬ ಹಠ. ಇದು ಮಕ್ಕಳ ಸಾಮಾನ್ಯ ತುಂಟಾಟಗಳು. ಆದರೆ ಅದೇ ಮಗು ಬುದ್ಧಿ ಬೆಳೆಯುತ್ತಿರುವಾಗಲೂ ಅಂಥದ್ದೇ ಕೃತ್ಯ ಎಸಗಲು ಆರಂಭಿಸಿದರೆ, ತಿಳಿ ಹೇಳಬೇಕಾದವರು ಹೆತ್ತವರು. ಆದರೆ ಮಕ್ಕಳ ಅಪ್ಪ, ಅಮ್ಮಂದಿರೇ ಬೆಂಬಲಿಸಿದರೆ?

ಹೀಗೆ ಒಂದನೇ ತರಗತಿ ಪ್ರವೇಶಿಸುವಾಗಲೇ ಅಪರಾಧ ಲೋಕವೊಂದು ಮಗುವಿನ ಹತ್ತಿರ ಬರಲು ಪ್ರಯತ್ನಿಸುತ್ತದೆ. ನೋಟ್ ಬುಕ್ ಹರಿಯುವುದು, ಪೆನ್ಸಿಲ್ ಕದಿಯುವುದು, ಈರ್ಷ್ಯೆ, ಓಡುವಾಗ ಇನ್ನೊಬ್ಬನ/ಳ ಬೀಳಿಸುವುದು, ಇವೆಲ್ಲ ಕಾಮನ್ ಎಂಬರ್ಥದಲ್ಲಿ ನಾವು ನೋಡುತ್ತೇವೆ. ಇವೇನು ಕೊಲೆ, ದರೋಡೆಯಾ ಎಂಬ ಭಾವನೆ ನಮ್ಮಲ್ಲಿ ಮೂಡುತ್ತದೆ. ಹೀಗಾಗಿ ಮಕ್ಕಳು ಇಂಥದ್ದೆಲ್ಲ ಹೇಳಿದಾಗ ನಮ್ಮಲ್ಲಿ ಅನೇಕ ಹೆತ್ತವರು ಕನಿಷ್ಠ ತಿಳಿ ಹೇಳುವುದನ್ನೂ ಮಾಡುವುದಿಲ್ಲ. ಆರಂಭದಲ್ಲೇ ಇದನ್ನು ಚಿವುಟಿ ಹಾಕಿ, ಯಾವುದು ತಪ್ಪು, ಯಾವುದು ಸರಿ ಎಂಬ ಸೂಕ್ಷ್ಮಗಳನ್ನಾದರೂ ಹೇಳಬೇಕು ಎಂದು ಹೆತ್ತವರೂ ಹೇಳುವುದಿಲ್ಲ. ಇದು ಮತ್ತಷ್ಟು ಕೃತ್ಯಗಳಿಗೆ ಪ್ರೇರೇಪಣೆಯಾಗುತ್ತದೆ ಎಂಬ ಅರಿವು ಅವರಿಗೆ ಇರುವುದಿಲ್ಲ. ಅದೇ ಮಗು ಕಾಲೇಜಿಗೆ ಬಂದಾಗ ಪುಂಡಾಟಗಳನ್ನು ಮಾಡಲು ಆರಂಭಿಸುತ್ತದೆ. ಆಗ ತುಂಟಾಟಗಳು ಗಂಭೀರ ಸ್ವರೂಪ ಪಡೆದರೂ ಹೆತ್ತವರು ನಿಯಂತ್ರಿಸುವ ಸಾಮರ್ಥ್ಯವನ್ನೇ ಕಳೆದುಕೊಳ್ಳುತ್ತಾರೆ.

ಈಗ ಏನಾಗಿದೆ?

ಹೊರನೋಟಕ್ಕೆ ಭವ್ಯ ಕಟ್ಟಡಗಳು, ಬೆಳಗ್ಗಿನಿಂದ ರಾತ್ರಿವರೆಗೆ ಪಾಠ ಪ್ರವಚನ, ಶಿಸ್ತು, ನೂರಕ್ಕೆ ನೂರು ಅಂಕ ಗಳಿಸುವ ಟಾರ್ಗೆಟ್ಟು ಇರೋ ಕಾಲೇಜುಗಳ ಮಕ್ಕಳೂ ದಿಢೀರನೆ ನಾಪತ್ತೆಯಾಗುತ್ತಾರೆ. ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಕೆಲವರು ಸರಿರಾತ್ರಿಯಲ್ಲಿ ಕಾಣಬಾರದ ಜಾಗಗಳಲ್ಲಿ ಸಿಗುತ್ತಾರೆ. ಎಲ್ಲರಿಗೂ ಎಲ್ಲಾ ಹೊತ್ತಿಗೂ ಎಲ್ಲವೂ ಸಿಗುವ ಪೂರ್ಣ ಸ್ವಾತಂತ್ರ್ಯದ ಫಲವಿದು. ಇದೇ ಮಕ್ಕಳು ಅಂಕಗಳನ್ನೂ ಗಳಿಸುತ್ತಾರೆ. ಡಾಕ್ಟರೋ, ಇಂಜಿನಿಯರೋ, ಐಎಎಸ್ ಆಫೀಸರೋ ಆಗಬಹುದು. ಅಥವಾ ಪೊಲೀಸರೂ ಆಗಬಹುದು. ಆಗ ಯಾವುದು ಸಮಾಜದ ದೃಷ್ಟಿಯಲ್ಲಿ ಅಪರಾಧವೋ ಅವು ಅಪರಾಧವೇ ಅಲ್ಲ ಎಂಬಂತೆ ಭಾಸವಾಗುತ್ತದೆ. ಅದಕ್ಕೊಂದು ಕಾರಣಗಳನ್ನು ಹುಡುಕಲು ಹೊರಡುತ್ತಾರೆ. ಸಿನಿಮಾಗಳ ಆ್ಯಂಟಿ ಹೀರೋ ಕ್ಯಾರೆಕ್ಟರ್ ಇದ್ದಂತೆ. ಆತ ಮಚ್ಚು ಹಿಡಿಯುವುದಕ್ಕೂ ಕಾರಣ, ಕುಡಿಯುವುದಕ್ಕೂ ಕಾರಣ, ಸಿಕ್ಕಸಿಕ್ಕವರನ್ನೆಲ್ಲ ಕೊಲ್ಲಲೂ ಒಂದು ಕಾರಣ ಇದೆ, ಅದ್ಯಾವುವೂ ತಪ್ಪಲ್ಲ ಎಂಬಂತೆ ಬಿಂಬಿಸಲಾಗುತ್ತದೆ. ಹೀಗಾಗಿಯೇ ನಮ್ಮ ಕಣ್ಣ ಮುಂದೆಯೇ ಇರುವ ಭ್ರಷ್ಟಾಚಾರಿಗಳು, ಅತ್ಯಾಚಾರಿಗಳು, ಕೊಲೆಗುಡುಕರು, ಮೋಸಗಾರರು ಕೆಲವರ ಪಾಲಿಗೆ ಹೀರೋಗಳಂತೆ ಕಾಣುತ್ತಾರೆ.

ಜೀವನವಿಡೀ ಪ್ರಾಮಾಣಿಕನಾಗಿ ದುಡಿದು ಬರುವ ಸಂಬಳವನ್ನೇ ನೆಚ್ಚಿ ಮನೆಯೊಂದನ್ನು ಕಟ್ಟುವವನನ್ನೂ, ಕೇವಲ ಐದಾರು ವರ್ಷಗಳ ಸಂಪಾದನೆಯಲ್ಲಿ ಭವ್ಯ ಬಂಗಲೆ ಕಟ್ಟುವವನನ್ನೂ ನಮ್ಮ ಸಮಾಜವೇ ತೂಗಿ ನೋಡುತ್ತದೆ. ಪುಟ್ಟ ಮಕ್ಕಳಿಗೂ ಐದಾರು ವರ್ಷಗಳಲ್ಲಿ ಮನೆ ಕಟ್ಟುವಾತ ಆದರ್ಶವಾಗಿ ಕಾಣುತ್ತಾನೆ. ಇದಕ್ಕೆ ಆತನ ತಂದೆ, ತಾಯಿಯೂ ನೀರೆರದರೆ ಮತ್ತೇನು ಬೇಕು?

ಹಿಂದೆಲ್ಲ ಲಂಚ ಪಡೆಯುವುದು ಘೋರ ಅಪರಾಧ ಎಂದೆಲ್ಲ ಹೇಳುತ್ತಿದ್ದರು. ಅಂಥದ್ದರಲ್ಲೆಲ್ಲ ಸಸ್ಪೆಂಡ್ ಆದರೆ ಅವನು ತಲೆಯೆತ್ತಿ ನಡೆಯಲೂ ನಾಚಿಕೆಪಡುತ್ತಿದ್ದ. ಈಗ ಹಾಗಲ್ಲ, ಭ್ರಷ್ಟಾಚಾರಿ ತಲೆಯೆತ್ತಿ ನಡೆಯುತ್ತಾನೆ. ಆತನಿಗೆ ಸಕಲ ಮರ್ಯಾದೆ, ಪ್ರಾಮಾಣಿಕ ಅಪ್ರಯೋಜಕ ಎಂಬಂತೆ ಸಮಾಜವೇ ನೋಡುತ್ತದೆ. ಅಲ್ಲಿಗೆ ನೈತಿಕತೆ ಎಂಬ ಶಬ್ದ ಮನುಷ್ಯನ ಡಿಕ್ಷನರಿಯಿಂದ ಅಳಿಸಿ ಹೋದಂತೆ.

ನಮ್ಮ ಕಣ್ಣಿಗೆ ಕಾಣುವ ಅಪರಾಧಗಳ ಜೊತೆಗೆ ನಮ್ಮ ಸುತ್ತಲೂ ಇರುವ ಅಪರಾಧ ವಲಯವನ್ನು ನಾವು ಅಳಿಸಿ ಹಾಕಬೇಕಾಗಿದೆ. ಮಧ್ಯರಾತ್ರಿ ಮನುಷ್ಯ ಒಂಟಿಯಾಗಿ ನಡೆದುಕೊಂಡು ಹೋದಾಗ ಏನಾದರೂ ಸಂಭವಿಸಿದರೆ ತಪ್ಪೇನೂ ಅಲ್ಲ, ಪರಿಸ್ಥಿತಿ ಹಾಗೆ ಮಾಡಿತು ಎಂಬ ಮಾತುಗಳು ಹುಟ್ಟಿಕೊಂಡವು ಎಂದಾದರೆ ಅಪರಾಧ ಕೃತ್ಯಗಳು ಮರುವ್ಯಾಖ್ಯಾನಕ್ಕೊಳಗಾದವು ಎಂದೇ ಅರ್ಥ.

ಕದಿಯುವುದು, ಸುಳ್ಳು ಹೇಳುವುದು, ಭ್ರಷ್ಟಾಚಾರ ಎಸಗುವುದು, ಅತ್ಯಾಚಾರ ನಡೆಸುವುದು, ಕೊಲ್ಲುವುದು, ವಂಚಿಸುವುದು ಇತ್ಯಾದಿಗಳೆಲ್ಲ ತಪ್ಪೇನೂ ಅಲ್ಲ, ಅದು ಅವನ ಸಾಮರ್ಥ್ಯ, ನೀವು ಮಾಡದಿದ್ದರೆ ಅದು ನಿಮ್ಮ ದೌರ್ಬಲ್ಯ. ಎಲ್ಲರ ಮನಸ್ಸಿನಲ್ಲೂ ಈ ವಾಕ್ಯವೇ ಸರಿ ಎಂಬ ಭಾವನೆ ಬೇರೂರಿದರೆ ಅಪಾಯದ ಕರೆಗಂಟೆ ಬಾರಿಸಿದಂತೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Harish mambady

ಕಳೆದ ಹದಿನಾರು ವರ್ಷಗಳಿಂದ ಹೊಸ ದಿಗಂತ, ಉದಯವಾಣಿ, ತರಂಗ, ಕನ್ನಡಪ್ರಭ ಹಾಗೂ ವಿಜಯವಾಣಿಯಲ್ಲಿ ಉಪಸಂಪಾದಕ, ವರದಿಗಾರ ಹಾಗೂ ಮುಖ್ಯ ಉಪಸಂಪಾದಕನ ಜವಾಬ್ದಾರಿ ನಿಭಾಯಿಸಿರುವ ಹರೀಶ ಮಾಂಬಾಡಿ ಸದ್ಯ ಫ್ರೀಲ್ಯಾನ್ಸ್ ಪತ್ರಕರ್ತರಾಗಿ ದುಡಿಯುತ್ತಿದ್ದಾರೆ. ಸಮಕಾಲೀನ ವಿದ್ಯಮಾನ,  ಸಿನಿಮಾ ಕುರಿತ ಲೇಖನಗಳು, ಬರೆಹಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.  ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡ್ ನಿವಾಸಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!