ಅಂಕಣ

ನೀರೇ ಇಲ್ಲ, ಇನ್ನು ಲಿಫ್ಟ್ ಎಲ್ಲಿಂದ?

 ‘ನಾವೇನು ಯಾರಿಗೂ ಅನ್ಯಾಯ ಮಾಡಲ್ಲ, ಸಮುದ್ರಕ್ಕೆ ಎಷ್ಟೊಂದು ನೀರು ವೇಸ್ಟ್ ಆಗಿ ಹೋಗುತ್ತೆ, ಅಂಥ ನೀರನ್ನು ನಾವು ಲಿಫ್ಟ್ ಮಾಡ್ತೀವಿ ಅಷ್ಟೇ…ಇಂಥ ಮಾತು ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಕಾಮನ್. ಯಾರೋ ಕೆಳಸ್ತರದ ರಾಜಕಾರಣಿಯೋ, ಅಧಿಕಾರಿಯೋ ಇಂಥ ಮಾತನ್ನು ಹೇಳಿದ್ದರೆ ಏನೋ ಅಜ್ಞಾನದಿಂದ ಹೀಗೆ ಹೇಳುತ್ತಾರೆ ಎನ್ನಬಹುದಿತ್ತೇನೋ, ಆದರೆ ಹೀಗಂದವರು ಖುದ್ದು ಈ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ. ಇಡೀ ರಾಜ್ಯದ ಆಡಳಿತ ಸೂತ್ರವನ್ನೇ ಕೈಯಲ್ಲಿ ಹಿಡಿದವರು.

ಮಾನ್ಯ ಸಿದ್ದರಾಮಯ್ಯನವರು ಇಂಥ ಮಾತನ್ನು ಆಡಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇದೇ ಅರ್ಥ ಬರುವ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಆದರೆ ಈ  ಬಾರಿ ಅವರ ಧ್ವನಿಯಲ್ಲಿ ಖಚಿತತೆ ಇತ್ತು. ವಿಪರ್ಯಾಸವೆಂದರೆ ಸಿದ್ದರಾಮಯ್ಯನವರು ಈ ಹೇಳಿಕೆಯನ್ನು ನೀಡಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಹೃದಯ ಭಾಗದಲ್ಲಿ. ಬಂಟ್ವಾಳದ ಐಬಿಯಲ್ಲಿ ಕಳೆದ ಭಾನುವಾರ ಸ್ಥಳೀಯ ಪತ್ರಕರ್ತರಿಗೆ ನೀಡುವ ಸಂದರ್ಭ ಪಕ್ಕದಲ್ಲೇ ನೇತ್ರಾವತಿ ಹರಿಯುತ್ತಿತ್ತು. ಬಂಟ್ವಾಳ ಪ್ರವಾಸಿ ಬಂಗ್ಲೆಯ ಹೊರಗೆ ನಿಂತು ಕತ್ತು ಹೊರಳಿಸಿದ್ದರೆ ಅವರು ಲಿಫ್ಟ್ ಮಾಡೋ ನದಿ ಕಾಣಿಸುತ್ತಿತ್ತು. ಆದರೆ ಅದನ್ನು ನೋಡೋ ಗೋಜಿಗೆ ಹೋಗಲೇ ಇಲ್ಲ. ಅದರ ಅಗತ್ಯವೇ ಇಲ್ಲ ಎಂದು ಭಾವಿಸಿದರೋ ಏನೋ, ಒಟ್ಟಾರೆ ದಕ್ಷಿಣ ಕನ್ನಡ ಜನರ ದೌರ್ಭಾಗ್ಯ.

ಇದರ ಜೊತೆಗೆ ಎತ್ತಿನಹೊಳೆ ಯೋಜನೆಗೆ ಅರಣ್ಯ ಇಲಾಖೆಯ ಭೂಮಿ ಬಳಸಿಕೊಳ್ಳಲು ಮತ್ತು ಮರಗಳನ್ನು ಕಡಿಯಲು ಕೇಂದ್ರ ಅಸ್ತು ಎಂದಿದೆ. 13.93 ಎಕರೆ ಪ್ರದೇಶದಲ್ಲಿ ಮರ ಕಡಿಯಲು ಕೇಂದ್ರ ಅರಣ್ಯ ಸಚಿವಾಲಯ ಅನುಮತಿ ನೀಡಿದರೆ, ಆ ವ್ಯಾಪ್ತಿಯ 4995 ಮರಗಳನ್ನು 1332 ಬಿದಿರು ಮೆಳೆಗಳನ್ನು ಕಡಿದು ಹಾಸನದ ನಾಟಾ ಸಂಗ್ರಹಾಲಯಕ್ಕೆ ಸಾಗಿಸಲು ರಾಜ್ಯ ಇಲಾಖೆ ಆದೇಶ ಹೊರಡಿಸಿದೆ.

ಒಟ್ಟಾರೆಯಾಗಿ ಇಡೀ ಯೋಜನೆಯೇ ಕರಾವಳಿ ಭಾಗದ ಜನತೆ ಹಾಗೂ ಘಟ್ಟದ ಮೇಲಿನ ಭಾಗದವರನ್ನು ನೀರಿನ ವಿಚಾರವಾಗಿ ಸಂಶಯದಿಂದ ನೋಡುವಂತೆ ಮಾಡಿದೆ ಎಂಬುದು ಬೇಸರದ ಸಂಗತಿ.

ಬಯಲು ಸೀಮೆಯಲ್ಲಿ ಕುಡಿಯಲು ನೀರಿಲ್ಲ ಎಂಬುದು ನೂರಕ್ಕೆ ನೂರರಷ್ಟು ನಿಜ. ಅದೇ ರೀತಿ ಕರಾವಳಿಯಲ್ಲೂ ನೀರಿಲ್ಲ ಎಂಬುದೂ ನಿಜ. ಹಾಗಾದರೆ ಇವರು ಲಿಫ್ಟ್ ಮಾಡೋದು ಎಲ್ಲಿಂದ? ಯಾತಕ್ಕೆ ಇಷ್ಟೊಂದು ಆಸೆಯನ್ನು ತೋರಿಸಲಾಗುತ್ತಿದೆ? ಕರಾವಳಿಯಲ್ಲಿ ನೀರು ಧಾರಾಳವಾಗಿ ಹರಿದು ಹೋಗುತ್ತಿದೆ ಅಲ್ಲಿಂದ ಸ್ವಲ್ಪ ನೀರು ಲಿಫ್ಟ್ ಮಾಡಿ ಬಯಲುಸೀಮೆಗೆ ನೀಡುತ್ತೇವೆ ಅಷ್ಟೇ, ಅದೇನೂ ದೊಡ್ಡ ವಿಷಯವೇ ಅಲ್ಲ ಎಂಬ ಥಿಯರಿಯನ್ನು ಹರಿಯ ಬಿಡಲಾಗಿದೆ. ಇದನ್ನು ವಿರೋಧಿಸಿದರೆ, ಕುಡಿಯಲು ನೀರಿಲ್ಲದೆ ಬಳಲುತ್ತಿರುವ ಮಂದಿಗೆ ನೀರೊದಗಿಸುವುದು ಮನುಷ್ಯತ್ವವಲ್ಲವೇ ಎಂಬ ವಾದ ಸರಣಿಯನ್ನು ಮುಂದಿಡಲಾಗುತ್ತಿದೆ.

ಆದರೆ ವಾಸ್ತವವೇ ಬೇರೆ.

ಅಪಾರ ಪ್ರಮಾಣದ ನೀರು ಸಮುದ್ರಕ್ಕೆ ಸೇರುತ್ತದೆ ಎಂಬ ಹೇಳಿಕೆ ಅಥವಾ ತೀರ್ಮಾನವೇ ಸರಿಯಲ್ಲ. ಏಕೆಂದರೆ ಸಮುದ್ರಕ್ಕೆ ಸೇರುವಷ್ಟು ಹೇರಳ ಪ್ರಮಾಣದ ನೀರು ನದಿಯಲ್ಲೇ ಕಾಣಿಸುತ್ತಿಲ್ಲ. ಇನ್ನು ಇಂಥ ನೀರಿನ ಹರಿವನ್ನೇ ಮೂಲದಲ್ಲೇ ತಿರುಗಿಸಿ ನೀರಿಲ್ಲದ ಪ್ರದೇಶಕ್ಕೆ ಹಾಯಿಸುತ್ತೇವೆ ಎಂಬ ರಮ್ಯ ಕಲ್ಪನೆಯನ್ನು ಬಿತ್ತಲಾಗಿದೆ. ಆದರೆ ಅದು ಸಾಧ್ಯವೇ ಎಂಬುದು ಪ್ರಶ್ನೆ. ಒಟ್ಟಾರೆಯಾಗಿ ಇದಕ್ಕೆ ಸಾವಿರ ಕೋಟಿ ರೂಪಾಯಿ ಪೋಲಾದದ್ದಂತು ಹೌದು.

ಇದು ಅರ್ಥವಾಗದಿದ್ದರೆ ಮತ್ತಷ್ಟು ಸರಳ ಉದಾಹರಣೆ ಜ್ವಲಂತ ಇದ್ದೇ ಇದೆ. ಅದು ಕಾವೇರಿ ನದಿ.

ತಿಂಗಳ ಹಿಂದಷ್ಟೇ ಮಂಡ್ಯ, ಮೈಸೂರು, ಬೆಂಗಳೂರು  ಹೊತ್ತಿ ಉರಿಯುವಷ್ಟು ಪ್ರತಿಭಟನೆ ಸಂದರ್ಭ ನಮ್ಮ ಹೋರಾಟಗಾರರು ಹೇಳಿದ ಮಾತು ನೆನಪಿಟ್ಟುಕೊಳ್ಳಿ. ನಮಗೇ ಕುಡಿಯಲು ನೀರಿಲ್ಲ, ಇನ್ನು ತಮಿಳುನಾಡಿಗೆ ಕೊಡೋದೆಲ್ಲಿಂದ? ಇಂಥದ್ದೇ ಮಾತು ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೂ ಅನ್ವಯಿಸುತ್ತದೆ. ಆದರೆ ಇಲ್ಲಿ ನೀರು ಬಿಡೆವು ಎಂಬ ಮಾತನ್ನೂ ಹೇಳಲು ಜಿಲ್ಲೆಯ ಜನರಿಗೆ ಸ್ವಾತಂತ್ರ್ಯ ಇಲ್ಲ, ಹೇಳುವವರೆಲ್ಲರೂ ಡೋಂಗಿ ವ್ಯಕ್ತಿಗಳು, ಅದರಲ್ಲೇನೋ ಅವರಿಗೆ ಲಾಭವಿದೆ ಎಂಬಂತೆ ರಾಜಕಾರಣಿಗಳು ಬಿಂಬಿಸಿ, ಅದನ್ನೇ ನೀರಿಲ್ಲದ ಭಾಗದ ಜನರಿಗೆ ಹೇಳುತ್ತಾ ದಕ್ಷಿಣ ಕನ್ನಡ ಜಿಲ್ಲೆಯ ಜನರೇ ಲೋಭಿಗಳು ಎಂಬಂತೆ ಬಿಂಬಿಸಿರುವುದು ವಿಪರ್ಯಾಸ. ವಾಸ್ತವ ಅರಿತುಕೊಳ್ಳಿ ಎಂದರೆ ಆಡಳಿತಕ್ಕೆ ಜಾಣಕಿವುಡು.

ನೀರು ಲಿಫ್ಟ್ ಮಾಡುವವರೇ ಇತ್ತ ನೋಡಿ.

ಕೇಂದ್ರ ಸರಕಾರದ ಅರಣ್ಯ ಹಾಗೂ ಪರಿಸರ ಇಲಾಖೆಯು ಹೊರ ತಂದಿರುವ ಅಧ್ಯಯನ ವರದಿಯ ಪ್ರಕಾರ ಎತ್ತಿನಹೊಳೆಯಲ್ಲಿ ಲಭ್ಯವಿರುವ ನೀರು ಕೇವಲ 9.5 ಟಿಎಂಸಿ. ಹಾಗಾದರೆ ಯೋಜನೆ ಬಯಸುವ 24 ಟಿಎಂಸಿ ನೀರು ಎಲ್ಲಿಂದ ದೊರಕುತ್ತದೆ, ಯಾರಿಗಾಗಿ ಈ ಲಿಫ್ಟ್ ಯೋಜನೆ?

ಇದ್ದ ನೀರನ್ನೂ ಲಿಫ್ಟ್ ಮಾಡಿದರೆ, ನೇತ್ರಾವತಿ ಹರಿವು ಕುಂಠಿತಗೊಳ್ಳಲಿದೆ. ಅದನ್ನೇ ನಂಬಿ ಜೀವಿಸುತ್ತಿರುವವರು ಏನು ಮಾಡಬೇಕು? ಉತ್ತರಿಸುತ್ತಾರಾ ನಮ್ಮ ರಾಜಕಾರಣಿಗಳು? ಮೊನ್ನೆ ಮುಖ್ಯಮಂತ್ರಿಯೇ ಮಧ್ಯಾಹ್ನ ಭೋಜನ ಸವಿದ ಬಂಟ್ವಾಳ ಐಬಿಯಲ್ಲಿ ಕೈತೊಳೆಯಲಿಕ್ಕೂ ನೀರಿರಲಿಕ್ಕಿಲ್ಲ.

ಯೋಜನೆ ಕಾರ್ಯಗತವಾದರೆ ಲಕ್ಷಾಂತರ ಕೃಷಿಕರು ಅನಾಥರಾಗುತ್ತಾರೆ. ಇವರೂ ಮನುಷ್ಯರಲ್ಲವೇ? ಇವರ ಕೃಷಿ ಜೀವನಕ್ಕೆ ಪರಿಹಾರವೇನು? ಹೊಣೆ ಯಾರು? ಅಕ್ಕಿ, ಅಡಿಕೆ, ತೆಂಗು, ತರಕಾರಿಗಳನ್ನು ಹಾಳಾಗಲಿ ಎಂದು ಹಾಗೇ ಬಿಡಲು ಸಾಧ್ಯವೇ?  ಬಯಲು ಸೀಮೆಯ ನೀರಿನ ದಾಹವನ್ನು ಪರಿಹರಿಸುವುದು ಸರಕಾರದ ಕರ್ತವ್ಯವೆಂಬುದೇನೋ ನಿಜವೇ. ಆದರೆ 24 ಟಿಎಂಸಿ ನೀರನ್ನು ಹರಿಸಲು 12000 ಕೋಟಿಯಷ್ಟು ಹಣ ತೆತ್ತು ಯೋಜನೆ ರೂಪಿಸಿ, ಅದೂ ಕಾರ್ಯಗತಗೊಳ್ಳುವುದೇ ಅನುಮಾನ ಎಂದಾದರೆ ಲಾಭವಾಗುವುದು ಯಾರಿಗೆ?

ಯೋಜನೆಯಿಂದಾಗಿ ಹಲವಾರು ಪ್ರಬೇಧದ ಜೀವಚರಗಳು ನಾಶವಾಗುತ್ತದೆ. ಹಸಿರು ಸಿರಿಯ ಪಶ್ಚಿಮ ಘಟ್ಟವೇ ಅಪಾಯದಂಚಿಗೆ ಬರಬಹುದು. ಉಪನದಿಗಳಿಗೆ ಅಣೆಕಟ್ಟು ಕಟ್ಟಿ ಪೈಪ್‌ಲೈನ್‌ ಅಳವಡಿಸುದಕ್ಕಾಗಿ ಪಶ್ಚಿಮ ಘಟ್ಟ ಪ್ರದೇಶವನ್ನು ಕೊರೆಯಲಾಗುತ್ತದೆ. ಇದರಿಂದ ಪಶ್ಚಿಮ ಘಟ್ಟ ಸರ್ವನಾಶವಾಗುತ್ತದೆ. ಜತೆಗೆ ಉಪನದಿಗಳಲ್ಲಿ ನೀರಿನ ಹರಿವು ನಿಂತರೆ ನೇತ್ರಾವತಿ ಬರಿದಾಗಿ ಜಿಲ್ಲೆಯ ಸ್ಥಿತಿ ಭಯಾನಕವಾಗಲಿದೆ. ಈ ವರ್ಷ ಮಳೆ ಕಡಿಮೆಯಾಗಿದ್ದು, ನೇತ್ರಾವತಿಯಲ್ಲಿ ನೀರಿನ ಹರಿವು ಕಡಿಮೆ ಇದೆ. ಕಳೆದ ವರ್ಷ ಯೋಜನೆ ಜಾರಿಯಾಗದೆಯೇ ನೀರಿನ ಅಭಾವ ಎದುರಾಗಿತ್ತು.

ಅಲ್ಪ ಪ್ರಮಾಣದ ನೀರಿಗಾಗಿ ಅಪಾರ ಪ್ರಮಾಣದ ಹಣವನ್ನು ವ್ಯಯಿಸಿಕೊಂಡು ಬಯಲು ಸೀಮೆಗೆ ನೀರುಣಿಸುವ ಬದಲು ಕೆರೆ, ಬಾವಿಗಳ ವೈಜ್ಞಾನಿಕ ಸಂರಕ್ಷಣೆ, ಹೂಳೆತ್ತುವಿಕೆ, ಮಳೆ ನೀರು ಕೊಯ್ಲು ಮುಂತಾದ ಇತರ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಬಹುದಲ್ವೇ ಎಂದವರನ್ನು ಬಾಯಿಗೆ ಬಂದಂತೆ ನಿಂದಿಸುವ ತಂಡವೇ ಇದೆ.

ಆದರೆ ತರಾತುರಿಯಾಗಿ ಯಾವ ವಿರೋಧವನ್ನೂ ಲೆಕ್ಕಿಸದೆ ಮುನ್ನುಗ್ಗುವುದು ಯಾಕೆ?  ಇದು ನೀರೆತ್ತುವುದೋ ಅಥವಾ ಬೇರೇನನ್ನೋ ಲಿಫ್ಟ್ ಮಾಡೋದೋ?

ಈಗಾಗಲೇ ಮಂಗಳೂರು ಸಹಿತ ದಕ್ಷಿಣ ಕನ್ನಡ ನೀರಿಲ್ಲದೆ ತತ್ತರಿಸಿ ಹೋಗಿದೆ. ನೇತ್ರಾವತಿ ನದಿಯಲ್ಲಿ ಈ ವರ್ಷ ಪ್ರವಾಹವೇ ಬಂದಿಲ್ಲ. ಕರುಣೆ ಇಲ್ಲದ ರಾಜಕಾರಣಿಗಳು ಪ್ರಕೃತಿ ನಿಯಮವನ್ನೇ ಮುರಿದರೆ ಘೋರ ಅನಾಹುತ ನಿಶ್ಚಿತ ಎಂಬ ಮಾತು ಸತ್ಯವಾಗಬಹುದೇ? ಪಶ್ಚಿಮ ಘಟ್ಟದಿಂದ ಅರಬ್ಬೀ ಸಮುದ್ರದವರೆಗಿನ ಸುಂದರ ಕರಾವಳಿ ಸಂಪೂರ್ಣ ನಾಶವಾಗಲು ಇದು ಮುನ್ನುಡಿಯೇ? ಕಡಲ ತೀರವಿನ್ನು ತೈಲ ಸಂಗ್ರಹಾಗಾರ, ಉಷ್ಣ ವಿದ್ಯುತ್, ಜಲವಿದ್ಯುತ್ ಯೋಜನೆಗಳ ಪ್ರಯೋಗ ಭೂಮಿಯಾಗಲಿದೆಯೇ? ಭವಿಷ್ಯ ಕರಾಳವಂತೂ ನಿಶ್ಚಿತ. ಇದು ನಿರಾಶಾವಾದವಲ್ಲ, ವಾಸ್ತವ ಕಥನ.

Facebook ಕಾಮೆಂಟ್ಸ್

ಲೇಖಕರ ಕುರಿತು

Harish mambady

ಕಳೆದ ಹದಿನಾರು ವರ್ಷಗಳಿಂದ ಹೊಸ ದಿಗಂತ, ಉದಯವಾಣಿ, ತರಂಗ, ಕನ್ನಡಪ್ರಭ ಹಾಗೂ ವಿಜಯವಾಣಿಯಲ್ಲಿ ಉಪಸಂಪಾದಕ, ವರದಿಗಾರ ಹಾಗೂ ಮುಖ್ಯ ಉಪಸಂಪಾದಕನ ಜವಾಬ್ದಾರಿ ನಿಭಾಯಿಸಿರುವ ಹರೀಶ ಮಾಂಬಾಡಿ ಸದ್ಯ ಫ್ರೀಲ್ಯಾನ್ಸ್ ಪತ್ರಕರ್ತರಾಗಿ ದುಡಿಯುತ್ತಿದ್ದಾರೆ. ಸಮಕಾಲೀನ ವಿದ್ಯಮಾನ,  ಸಿನಿಮಾ ಕುರಿತ ಲೇಖನಗಳು, ಬರೆಹಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.  ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡ್ ನಿವಾಸಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!