ಅಂಕಣ

‘ಚಿಕೂ’—(ಕತೆಗಳು) – ಕಥಾ ಸಂಕಲನದ ಕುರಿತೊಂದಿಷ್ಟು …..

‘ಚಿಕೂ’—(ಕತೆಗಳು)

ಲೇಖಕರು: ರಾಜೀವ ಅಜ್ಜೀಬಳ

ಪ್ರಕಾಶಕರು: ಮಂಗಳ ಪ್ರಕಾಶನ, 91, ಬಸಪ್ಪ ಬಡಾವಣೆ, ಪಟ್ಟಣಗೆರೆ, ರಾಜರಾಜೇಶ್ವರಿನಗರ, ಬೆಂಗಳೂರು-560098

ಪ್ರಥಮ ಮುದ್ರಣ: 2013, ಪುಟಗಳು: 126, ಬೆಲೆ: ರೂ.75-00

          ‘ಚಿಕೂ’, ರಾಜೀವ ಅಜ್ಜೀಬಳರ ಮೊದಲನೆಯ ಕಥಾಸಂಕಲನ. ಈ ಸಂಕಲನದಲ್ಲಿ ಹದಿನೈದು ಕತೆಗಳಿವೆ. ಇವುಗಳಲ್ಲಿ ಹಲವು ಕತೆಗಳು ಸಾಕಷ್ಟು ಹಿಂದೆಯೇ ಬರೆದವಾಗಿದ್ದರೂ ರಾಜೀವರ ಕತೆಗಳಿಗೆ ಈ ಪರಿಗಣನೆ ಸರಿಯಲ್ಲ. ಇವರಿಗೆ ಮಾತ್ರವಲ್ಲ, ರಾಜೀವರ ಹಾಗೆ ಬರೆಯುವ, ಅಂದರೆ ನಮ್ಮ ರಮ್ಯ ಭಾವನೆಗಳಿಗೆ ಅಭಿವ್ಯಕ್ತಿ ನೀಡುವ, ಯಾವುದೇ ಕೃತಿ ಹಳತಾಯಿತೆನ್ನಿಸುವುದಿಲ್ಲ. ಏಕೆಂದರೆ ಇವು ಮನುಷ್ಯನ ಜನ್ಮಜಾತ ಭಾವನೆಗಳು. ಮನುಷ್ಯ ಎಲ್ಲಿಯ ವರೆಗೆ ಕನಸು ಕಾಣುತ್ತಾನೆಯೋ, ಎಲ್ಲಿಯ ತನಕ ಭಾವನಾತ್ಮಕವಾದ ವರ್ತನೆ ತೋರುತ್ತಾನೆಯೋ ಆ ತನಕ ಇಂತಹ ಕಥಾವಸ್ತು ಪ್ರಶ್ನಾತೀತವಾಗಿರುತ್ತವೆ. ಇಷ್ಟು ಹೇಳಿದ ಮೇಲೆ, ಈ ಸಂಕಲನದ ಹೆಚ್ಚಿನ ಕತೆಗಳು ಭಾವಲೋಕದ ವಿದ್ಯಮಾನಗಳು ಎಂದು ಮತ್ತೆ ಹೇಳಬೇಕಾಗಿಲ್ಲ.

           ಸಂಕಲನಕ್ಕೆ ಬರೆದ ಮುನ್ನುಡಿಯಲ್ಲಿ ಅಶೋಕ ಹಾಸ್ಯಗಾರರು ಹೀಗೆ ಬರೆಯುತ್ತಾರೆ: “ಸಂಕಲನದ ಬಹುತೇಕ ಕತೆಗಳು ಪ್ರೀತಿ-ಪ್ರೇಮ-ಹತಾಶೆ-ನೊವುಗಳಂತಹ ಮನುಷ್ಯ ಸಹಜ ಭಾವಗುಣಗಳನ್ನು ಹೊಂದಿರುವ ಪಾತ್ರಗಳನ್ನು ಒಳಗೊಂಡಿವೆ. ಇದು ರಾಜೀವರ ಯೋಚನಾ ಲಹರಿಯೂ ಹೌದು. ಅವರಲ್ಲಿ ಮನುಷ್ಯ ಪ್ರೀತಿ ಸದಾ ಕಳಕಳಿಯ ವಿಷಯವಾಗಿದೆ.” ಇದು ನನ್ನೊಬ್ಬನ ಅಥವಾ ಅಶೋಕ ಹಾಸ್ಯಗಾರರೊಬ್ಬರ ಅನಿಸಿಕೆಯಲ್ಲ. ಇದು ರಾಜೀವರ ಓದುಗರಿಗೆಲ್ಲ ಪರಿಚಿತವೇ ಆಗಿರುವ ಅವರ ಸ್ವಭಾವ. ತಮ್ಮ ಕವಿತೆಗಳಲ್ಲಿ ಹೇಗೊ ಕತೆಗಳಲ್ಲಿ ಕೂಡ ಅವರಿಗೆ ತಮ್ಮ ವ್ಯಕ್ತಿತ್ವವನ್ನು ಮೀರಲಾಗಿಲ್ಲ; ಬಹುಶಃ ಮೀರಲಾಗದ ತೊಳಲಾಟವೂ ಅವರಿಗಿಲ್ಲ . ರಾಜೀವ ಅಜ್ಜೀಬಳ ಕಳೆದ ನಲವತ್ತು ವರ್ಷಗಳಿಂದ ಬರವಣಿಗೆಯನ್ನು ಏಕೋಭಾವದಿಂದ ಮಾಡುತ್ತ ಬಂದವರು. ಕವಿತೆ-ಕಥೆ-ಪ್ರಬಂಧ-ವರದಿಗಾರಿಕೆ-ಗ್ರಂಥಸಂಪಾದನೆ-ಹೀಗೆ  ವಿವಿಧ ಪ್ರಕಾದಲ್ಲಿ  ಅಕ್ಷರವ್ಯವಸಾಯ ಮಾಡಿರುವ ಅವರು  ಓದುಗರಿಗೆ ಪರಿಚಿತರು.

            ಉತ್ತರಕನ್ನಡದ ಹೆಚ್ಚಿನ ಬರಹಗಾರರಿಗೆ ಪರಿಸರ ಅಚ್ಚು ಮೆಚ್ಚಿನ ಕಥಾವಸ್ತು. ಅವರಲ್ಲಿ ಶಿವಾನಂದ ಕಳವೆಯಂಥವರು ಪರಿಸರದ ಒಂದು ಅವಿಭಾಜ್ಯ ಘಟನೆ ಎನ್ನುವಂತೆ ಮೊದಮೊದಲು ತಮ್ಮ ಕತೆಗಳನ್ನು ಬರೆಯುತ್ತಿದ್ದವರು ಅನಂತರ ಪೂರ್ತಿ ಪರಿಸರ ಬರಹಗಾರರಾಗಿ ಬದಲಾದ ಉದಾಹರಣೆಗಳಿವೆ. ರಾಜೀವರ ಕತೆ ಮತ್ತು ಕವಿತೆಗಳಲ್ಲಿ ಪರಿಸರದ ಕಾಳಜಿಯಿದೆ. ಇದು ರಾಜೀವರ ಸಾಹಿತ್ಯದ ವೈಶಿಷ್ಟ್ಯ . ಮೂಲತಃ ರಾಜೀವರಿಗೆ ಕಥನ ಬಹಳ ಇಷ್ಟ. ಅದು ಕತೆಯಾಗಿರಬಹುದು  ಅಥವಾ ಪ್ರಬಂಧವಾದರೂ ಆಗಿರಬಹುದು. ಈ ಸಂಕಲನದಲ್ಲಿ ಅವರ ‘ಚಿಕೂ’ ಎನ್ನುವ ಕತೆ ಪ್ರಬಂಧವಾಗಿಯೂ ಕತೆಯಾಗಿಯೂ ವಿಜೃಂಭಿಸುವ ಬರವಣಿಗೆ. ಇದರಲ್ಲಿ ಚಿಕೂ ಹೆಸರಿನ ಹಕ್ಕಿಯೊಡನೆ ನಿರೂಪಕನ ಸ್ನೇಹದ, ಒಡನಾಟದ, ಕಥನವಿದೆ. ‘ಚಿಕೂ’ ಕುರಿತು ಒಂದು ಉಪಕಥೆಯೂ ನನ್ನ ಬಳಿಯಿದೆ. ತುಂಬ ಹಿಂದೆ ಇದು ಪ್ರಕಟವಾದದ್ದು ಪ್ರಬಂಧ ಎನ್ನುವ ಪ್ರಕಾರದಡಿ. ‘ಚಿಕೂ’ ವಿಚಾರ ಪ್ರಧಾನವಾದ ಬರಹವಲ್ಲ, ಭಾವ ಪ್ರಧಾನವಾದದ್ದು ಎಂದೇ ಮನಗಂಡ ನಾನು  ಇದರತ್ತ ರಾಜೀವರ ಗಮನ ಸೆಳೆದುದಷ್ಟೇ ಅಲ್ಲ, ಇದನ್ನು ಕತೆಯೆಂದೇ ಪರಿಗಣಿಸಬೇಕು ಎಂದು ಸ್ನೇಹದ ಸಲುಗೆಯಲ್ಲಿ ಒತ್ತಾಯಿಸಿದ್ದೆ. ಆಮೇಲೆಯಷ್ಟೇ ಅವರಿಗೆ ಇದರೊಳಗಿನ ಕತೆ ಕಾಣಿಸಿದ್ದು. ನಿಜಕ್ಕೂ ನನಗೆ ಬರಹವೊಂದನ್ನು ಅಷ್ಟೊಂದು ನಿಷ್ಠುರವಾಗಿ ಒಂದು ನಿರ್ದಿಷ್ಟ ಪ್ರಕಾರದ ಅಡಿಯಲ್ಲಿ ಪರಿಗಣಿಸಬೇಕಾದ ಅಗತ್ಯ ಇಂದಿಗೂ ಮನವರಿಕೆಯಾಗಿಲ್ಲ. ‘ಮಹಾಭಾರತ’ ಯಾವ ಪ್ರಕಾರದಲ್ಲಿದೆ? ಕತೆ, ಕವಿತೆ, ಪ್ರಬಂಧ, ನಾಟಕೀಯ ವಿದ್ಯಮಾನಗಳು! ಏನಿಲ್ಲ ಇದರಲ್ಲಿ! ಇದನ್ನು ಇಂದಿಗೂ ಮಹಾಕಾವ್ಯವೆನ್ನುವುದು ಇದು ಛಂದೋಬದ್ಧವಾಗಿದೆ ಎನ್ನುವ ನಿಮಿತ್ತದಿಂದಾಗಿ. ಅಷ್ಟಾದಶ ವರ್ಣನೆಗಳಿವೆ ಎನ್ನುವುದಕ್ಕಾಗಿ. ರಾಜೀವ ಮೊದಮೊದಲು ನನ್ನ ಸೂಚನೆಯನ್ನು ಸೀರಿಯಸ್ಸಾಗಿ ತೆಗೆದುಕೊಳ್ಳಲಿಲ್ಲ ಎನ್ನುವದು ಕೂಡ ನನಗೆ ಇಷ್ಟವಾಗಿಯೇ ಕಂಡಿತ್ತು. ಈ ಅಸ್ಪಷ್ಟತೆಯಿಂದ  ರಾಜೀವರ ಕತೆಗಳಿಗೆ ಒಂದು ಹೆಚ್ಚಿನ ಆಯಾಮ ಪ್ರಾಪ್ತವಾಗುತ್ತದೆ. ‘ಚಿಕೂ’ ಯಾರಿಗಾದರೂ ಮೆಚ್ಚಿಗೆಯಾಗುವ ಕತೆ.

            ‘ಚಿಕೂ’ಸಂಕಲನದ  ಒಳಗಿರುವ ಹದಿನೈದು ಕತೆಗಳಲ್ಲಿ ನನಗಿಷ್ಟವೆನ್ನಿಸಿದ ಕತೆಗಳು ‘ಬೆಳ್ಳಕ್ಕಿಗಳು’, ‘ತಿರುವುಗಳು’, ‘ಆ ಮುಖ ಈ ಮುಖ’, ‘ಅರ್ಥ’, ‘ಗೌರಿಹೂ’, ‘ನಿಯೋಲಿ’, ‘ಇವರ ನಡುವೆ ಮಿಡಿವ ಜೀವ’, ‘ಚಿಕೂ’, ‘ಪ್ರಾಪ್ತಿ’, ಮತ್ತು ‘ವೃತ್ತಗಳು’. ಈ ಕತೆಗಳ ಬಗ್ಗೆ ನನಗೆ ಅತೃಪ್ತಿಯೂ ಇದೆ. ಆದರೆ ರಾಜೀವರ ಮಿತಿ ನನಗೆ ಗೊತ್ತಿರುವುದರಿಂದ ಅವರ  ಕತೆಗಳನ್ನು ಸದ್ಯ ಅವು ಇರುವಂತೆಯೇ ಓದುವುದು ಕೂಡ ನನಗೆ ಖುಶಿ. ‘ಇವರ ನಡುವೆ ಮಿಡಿವ ಜೀವ’, ರೋಗಿಯ ಬಡ ತಂದೆಯೊಬ್ಬ ವ್ಯವಸ್ಥೆಯ ಕ್ರೌರ್ಯದಿಂದ ನಲುಗುವ ಕತೆ. ಇದು ನಿಷ್ಠುರವಾದ ಮನಸ್ಸಿನಿಂದ ರಾಜೀವ ವ್ಯವಸ್ಥೆಗೆ ತೋರುವ ಪ್ರತಿಭಟನೆ. ಇದರಲ್ಲಿ ಹೆಣ್ಣು-ಗಂಡುಗಳ ನಡುವಿನ ಪ್ರೀತಿ-ಪ್ರೇಮ ಮುಂತಾದವುಗಳ ಕಿರಿಕಿರಿಯಿಲ್ಲ. ಮತ್ತೊಂದು ಕತೆ ‘ನಿಯೋಲಿ’. ತುಂಬ ಆಧುನಿಕ ವಸ್ತುವುಳ್ಳ ಕತೆ ಇದು. ಇದರಲ್ಲಿ ರಾಜೀವರು ನಿಜಕ್ಕೂ ತನ್ನನ್ನು ಮೀರಿದ್ದಾರೆ. ಕತೆಯ ನಿರ್ವಹಣೆಯೂ ಪರಿಣಾಮಕಾರಿಯಾಗಿದೆ. ಈ ಕತೆ ಮತ್ತು ‘ಚಿಕೂ’ ಈ ಸಂಕಲನದಲ್ಲಿರುವ ಮಹತ್ವಾಕಾಂಕ್ಷೆಯ ಕತೆಗಳು. ನಾನು ರಾಜೀವರನ್ನು ಹೊಗಳಿದರೂ ಕಷ್ಟ; ಏಕೆಂದರೆ ನಾವು ಸ್ನೇಹಿತರು. ನಾನು ರಾಜೀವರ ಕತೆಗಳಲ್ಲಿನ ದೋಷಗಳತ್ತ ಬೊಟ್ಟು ಮಾಡುವುದೂ ಕಷ್ಟ; ಏಕೆಂದರೆ ನಾವು ಸ್ನೇಹಿತರು. ಸ್ನೇಹ ಒಳ್ಳೆಯ ಕತೆಗಿಂತ ದೊಡ್ಡದು. ಆದರೆ ರಾಜೀವರ ಕತೆಗಳ ವಿಷಯದಲ್ಲಿ ನಾನು ಮೌನ ಸಾಧಿಸಬಾರದು. ಏಕೆಂದರೆ ಮೌನ, ಸ್ನೇಹಕ್ಕೆ ಒಳ್ಳೆಯದಲ್ಲ.  ಒಟ್ಟಿನಲ್ಲಿ ಈ ಕತೆಗಳು ನನಗೆ ಖುಶಿ ಕೊಟ್ಟಿವೆ.

Facebook ಕಾಮೆಂಟ್ಸ್

ಲೇಖಕರ ಕುರಿತು

R D Hegade Aalmane

ರಘುಪತಿ ದೇವರು ಹೆಗಡೆ ( ಆರ್ ಡಿ ಹೆಗಡೆ ) ಹಿರಿಯ ಲೇಖಕರು ಹಾಗೂ ವಿಮರ್ಶಕರು. ವಯಸ್ಸು 68. ಸದ್ಯ ಶಿರಸಿ ತಾಲೂಕಿನ ಆಲ್ಮನೆಯಲ್ಲಿ ವಾಸ. ಸಂಸ್ಕೃತ ಹಾಗೂ ಆಂಗ್ಲ ಭಾಷಾ ಸಾಹಿತ್ಯ ದಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ಶಾಸನ ಶಾಸ್ತ್ರದಲ್ಲಿ ಡಿಪ್ಲೊಮಾವನ್ನೂ ಪಡೆದಿದ್ದಾರೆ. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿರುವ ಇವರು ಈಗ ಕೃಷಿಯಲ್ಲಿ ನಿರತರಾಗಿದ್ದಾರೆ. ಇವರ ಸಾಹಿತ್ಯ ಕೃಷಿಯ ವ್ಯಾಪ್ತಿ ದೊಡ್ಡದು.ಭಾರತೀಯ ತತ್ವಶಾಸ್ತ್ರದ ಮೇಲೆ ಹಲವು ಕೃತಿಗಳನ್ನು ಹೊರತಂದಿದ್ದಾರೆ. ವೈಚಾರಿಕ ಲೇಖನಗಳ ಸಂಕಲನ, ಕಥಾಸಂಕಲನಗಳು, ಕಿರುಕಾದಂಬರಿ ಕೂಡ ಪ್ರಕಟವಾಗಿದೆ. ಉಪನಿಷತ್ತುಗಳ ಅರ್ಥಲೋಕ, ವ್ಯಕ್ತಿ ಚಿತ್ರಣ ಕುರಿತಾದ ಎರಡು ಕೃತಿಗಳು,ಅಂಕಣ ಬರಹಗಳ ಎರಡು ಕೃತಿಗಳು,ವಿಮರ್ಶೆಯ ಕುರಿತಾದ ಒಂದು ಕೃತಿ, ಭಗವದ್ಗೀತೆ ಇವರ ಕೆಲವು ಕೃತಿಗಳು. ಆಂಗ್ಲಭಾಷೆಯಲ್ಲಿಯೂ ಕೂಡ ಭಾರತೀಯ ತತ್ವಶಾಸ್ತ್ರದ ಕುರಿತಾದ ಕೃತಿಯನ್ನು ರಚಿಸಿದ್ದಾರೆ. ಇವರ ಲೇಖನಗಳು ನಾಡಿನ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಸ್ತೂರಿ ಮಾಸಪತ್ರಿಕೆಯು ತನ್ನಲ್ಲಿ ಪ್ರಕಟಿಸಿದ ಸಾರ್ವಕಾಲಿಕ 20 ಶ್ರೇಷ್ಠ ಲೇಖನಗಳನ್ನು ಮರುಪ್ರಕಟಿಸಿದಾಗ ಇವರ ಲೇಖನವೂ ಇದ್ದದ್ದು ಇವರ ಹೆಗ್ಗಳಿಕೆ. ನೂರಾರು ಲೇಖಕರ ಪುಸ್ತಕಗಳಿಗೆ ಮುನ್ನುಡಿಯನ್ನೂ, ವಿಮರ್ಶೆಯನ್ನೂ ಬರೆದಿರುತ್ತಾರೆ. ಸದ್ಯ ಶಿರಸಿಯ ದಿನಪತ್ರಿಕೆ “ಲೋಕಧ್ವನಿ” ಯಲ್ಲಿ ಪ್ರತಿವಾರ “ಈ ಹೊತ್ತಿಗೆ” ಅಂಕಣವನ್ನು ಬರೆಯುತ್ತಿದ್ದು ಸಾಕಷ್ಟು ಜನಪ್ರಿಯವಾಗಿದೆ. ಇವರ ಇತ್ತೀಚಿನ ಕೃತಿ “ಜೆನ್ ಮಹಾಯಾನ” ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾಗಿದ್ದು ಈಗಾಗಲೇ 2 ಮರುಮುದ್ರಣಗಳನ್ನು ಕಂಡಿದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!