ಅಕ್ಟೋಬರ್ ೩ ರಂದು ಜಪಾನಿನ ವಿಜ್ಞಾನಿಯಾದ ಯೊಶಿನೊರಿ ಅವರಿಗೆ “ಆಟೋಫೆಜಿ” ಎಂಬ ಕೋಶ ವಿಜ್ಞಾನಕ್ಕೆ ಸಂಬಂಧಿಸಿದ ಸಂಶೋಧನೆಗೆ ನೋಬೆಲ್ ಪಾರಿತೋಷಕ ಲಭ್ಯವಾಯಿತು. “ಆಟೋಫೆಜಿ” ಎಂದರೇನು? ಎಂಬ ಕುತೂಹಲದಿಂದ ಅದರ ಮಾಹಿತಿ ಸಂಗ್ರಹಕ್ಕೆ ಮುಂದಾದಾಗ “ಸೆಲ್ಪ್ ಇಟಿಂಗ್ ಸೆಲ್” ಎಂಬ ಸರಳ ರೂಪದ ಪದ ದಕ್ಕಿತು. ಅದಕ್ಕೊಂದು ಕನ್ನಡದ ಪದ ಹುಡುಕುವ ಸಾಹಸದಲ್ಲಿ ಗೆದ್ದು ನಾ ಪಡೆದ ಪದ ಸ್ವಭಕ್ಷ ಜೀವಕೋಶಗಳು. ಕೇಳಲು ಸ್ವಲ್ಪ ತಮಾಷೆಯಾಗಿದೆ ನಿಜ. ಆದರೆ ಸಂಶೋಧನೆ ಗಂಭೀರವಾದದ್ದಾಗಿದ್ದು. ಹಲವಾರು ಕ್ಯಾನ್ಸರ್ ಪೀಡಿತರನ್ನು ರೋಗಮುಕ್ತರಾಗಿಸಲು ಸಹಾಯವಾಗಬಲ್ಲ ಗಮನಾರ್ಹ ಸಂಶೋಧನೆ ಇದಾಗಿದೆ. ತಮ್ಮನ್ನು ತಾವು ಪ್ರಗತಿಪರರೂ ಎಂದು ಹೇಳಿಕೊಂಡು ನಮ್ಮ ಸಂಪ್ರದಾಯದ ಭಾಗವಾದ “ಉಪವಾಸ”ವನ್ನು ಡಾಂಭಿಕ ಮತ್ತು ಮೌಢ್ಯ ಎನ್ನುವವರಿಗೆ ಅದರ ಹಿಂದಿರುವ ವೈಜ್ಞಾನಿಕ ಹಿನ್ನೆಲೆಯನ್ನು ಹೇಳಲು ಮುಂದಾಗಿದೆ.
ತಮ್ಮ ಕೆಲಸ ಮುಗಿದ ತಕ್ಷಣ ಕಾಯ ಕ್ಷೀಣವಾಗಿ ಇಹದಿಂದ ನಿರ್ಗಮಿಸೋದು ಬರೀ ಮನುಷ್ಯ ಮತ್ತು ಪ್ರಾಣಿಗಳ ನೈಸರ್ಗಿಕ ನಿಯಮ ಎಂದರಿತ ನಮಗೆ ನಮ್ಮ ದೇಹದ ಮೂಲ ಘಟಕಗಳಾದ ಜೀವಕೋಶಗಳು ಸಹ ತಮ್ಮನ್ನು ತಾವು ಕೊಂದುಕೊಂಡು ಬಿಡುತ್ತವೆ ಎಂದು ತಿಳಿದಾಗ ಆಶ್ಚರ್ಯವಾಯಿತು. ಇದನ್ನು ಹಿಂದೆ ಜೀವಶಾಸ್ತ್ರದಲ್ಲಿ ಅಪೋಪ್ಟೆಸಿಸ್ ಅಂತ ಓದಿದ ನೆನಪು. ಅಟೋಫೆಜಿ ಕೂಡಾ ಅದರ ಮುಂದುವರಿದ ಭಾಗ. ಕ್ಯಾನ್ಸರ್, ಪಾರ್ಕಿನ್ಸನ್ , ಟೈಪ್ 2 ಡಯಾಬಿಟಿಸ್ ಜಗತ್ತಿನ ಬಹುದೊಡ್ಡ ಸವಾಲಾಗಿರುವ ರೋಗಗಳಿಗೆ ಈ ಸಂಶೋಧನೆಯಿಂದ ಚಿಕಿತ್ಸೆ ದೊರೆಯುತ್ತದೆ ಮತ್ತು ಯಾವುದೇ ಪಾರ್ಶ್ವ ಪರಿಣಾಮ (side effect)ಗಳಿಲ್ಲ. ಅದು ಹೇಗೆ?
ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಇರುವ ಒಂದು ಸರ್ವೇಸಾಮಾನ್ಯ ಚಿಕಿತ್ಸೆ ಎಂದರೆ ಕೆಮೋಥೆರಾಪಿ. ಕೆಮೋಥೆರಾಪಿಯಿಂದುಂಟಾಗುವ ಕೆಲವು ಗಂಭೀರ ಅಡ್ಡ ಪರಿಣಾಮಗಳನ್ನು ಗಮನಿಸಲಾಗಿ ಈ ಚಿಕಿತ್ಸೆ ವೇಗವಾಗಿ ಬೆಳೆಯುವ ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತದೆ. ಆದರೆ ಕೊಲ್ಲುವ ಭರದಲ್ಲಿ ಆರೋಗ್ಯಕರ ಜೀವಕೋಶಗಳನ್ನೂ ಕೊಂದು ಹಾಕುತ್ತದೆ. ರಕ್ತ ಹೆಪ್ಪುಗಟ್ಟಲು ಅವಶ್ಯಕವಾದ ಪ್ಲೇಟ್’ಲೆಟ್ಸ್’ಗಳನ್ನು ಕಡಿಮೆಗೊಳಿಸುತ್ತದೆ. ಒಂದು ಗಾಯವಾದರೆ ಅಧಿಕ ರಕ್ತಸ್ರಾವವಾಗುವ ಅಪಾಯವಿದೆ .ಕ್ಯಾನ್ಸರ್ ಗಡ್ಡೆ ಎಲ್ಲಿರುತ್ತೋ ದೇಹದ ಆ ಭಾಗದಲ್ಲಿ ಈ ಚಿಕಿತ್ಸೆ ಅಡ್ಡ ಪರಿಣಾಮ ಖಚಿತ. ಮೆದುಳಿನಲ್ಲಿದ್ದರಂತು ನಮ್ಮ ಯೋಚನಾಶಕ್ತಿಯ ಕುಸಿತಕ್ಕೆ ಈ ಚಿಕಿತ್ಸೆ ಕಾರಣವಾಗುತ್ತದೆ.
ಅಟೋಫೆಜಿ ಮತ್ತು ಅಪೊಪ್ಟೆಸಿಸ್ ಒಂದೇ ಆದರೂ ಅದರಲ್ಲಿ ಒಂದು ವ್ಯತ್ಯಾಸವಿದೆ. ಅಪೋಪ್ಟಿಸಿಸ್ ಅಂದರೆ ಒಂದು ಸಂಪೂರ್ಣ ಜೀವಕೋಶದ ನಾಶವಾದರೆ ಆಟೋಫೆಜಿ ಕೋಶದೊಳಗಿನ ಅನುಪಯುಕ್ತ ಕಣದಂಗ(organelles) ಗಳ ನಾಶ. ಜೀವಕೋಶದ ಒಂದು ಭಾಗವಾದ ಲೈಸೊಸೊಮಿಗೆ ನಾವು ಆತ್ಮಹತ್ಯಾ ಚೀಲ(suicide bag)ವೆಂದೂ ಕೂಡಾ ಕರೆಯುತ್ತೇವೆ. ಬೇಡವಾದ ದುರ್ಬಲ ಕಣದಂಗಗಳನ್ನು ಲೈಸೋಸೋಮಿಗೆ ಕಳಿಸಿದರೆ ಆ ಭಾಗದ ಸಂಪೂರ್ಣ ಹರಣದ ಕೆಲಸ ಅದು ಮಾಡುತ್ತದೆ. ಇನ್ನು ಉಪವಾಸಕ್ಕೂ ‘ಅಟೋಫೆಜಿ’ಗೂ ಏನು ಸಂಬಂಧ ? ಎಂದು ಕೇಳಿದರೆ. ವಿಜ್ಞಾನಿಗಳ ಅನ್ವೇಷಣೆಯ ಪ್ರಕಾರ ಗ್ಲುಕಾಗೊನ್ ಎಂಬುದರ ಉತ್ಪಾದನೆ ಲೈಸೋಸೊಮುಗಳ ಉತ್ಪಾದನೆಗೆ ಸಹಕಾರಿ.ಗ್ಲುಕಾಗೊನ್ ಎಂಬುದು ಪೆಪ್ಟೈಡ್ ಹಾರ್ಮೋನು ಪಾಂಕ್ರಿಯೆಸಿನ ಅಲ್ಫಾ ಕೋಶಗಳಿಂದ ಉತ್ಪಾದನೆಯಾಗುತ್ತದೆ. ಅದಲ್ಲದೆ ಇದು ಇನ್ಸುಲಿನ್ ಹಾರ್ಮೋನಿನ ವಿರುದ್ಧ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತದೆ. ಅಂದರೆ ಇನ್ಸುಲಿನ್ ಗ್ಲುಕೋಸ್ ಕಡಿಮೆ ಮಾಡಿದರೆ ಗ್ಲುಕಾಗೋನ್ ಅದರ ಪ್ರಮಾಣವನ್ನು ಹೆಚ್ಚು ಮಾಡುತ್ತದೆ. ಇನ್ಸುಲಿನ್ ಪ್ರತಿ ಜೀವಕೋಶದಲ್ಲಿನ ಹೆಚ್ಚಿನ ಗ್ಲುಕೋಸ್ ತೆಗೆದು ಹಾಕುತ್ತದೆ. ಊಟವಾದ ನಾಲ್ಕರಿಂದ ಆರು ಗಂಟೆಗಳ ನಂತರ ಗ್ಲುಕೋಸ್ ಪ್ರಮಾಣ ಗಣನೀಯವಾಗಿ ಕುಸಿದು ಬಿಟ್ಟಿರುತ್ತದೆ.ಆಗ ಪಾಂಕ್ರಿಯೇಸ್ ಗ್ಲುಕಾಗೋನ್ ಹಾರ್ಮೋನಿನ ಉತ್ಪಾದನೆಗೆ ನಿಲ್ಲುತ್ತದೆ. ಗ್ಲುಕಾಗೋನ್ ಉತ್ಪಾದನೆಯೇನೋ ಆಯಿತು ಆದರೆ ಕಡಿಮೆಯಾಗಿರುವ ಗ್ಲುಕೋಸ್ ಉತ್ಪಾದನೆ ಎಲ್ಲಿಂದ ಮಾಡುವುದು? ಅದು ಲಿವರ್ ಕೆಲಸ ಅದನ್ನು ಮಾಡಲು ಸಹಾಯಕಾರಿಯಾಗೋದು ಮತ್ತೊಮ್ಮೆ ಗ್ಲುಕಾಗೋನ್. ಗ್ಲೈಕೊಜಿನ್ ವಿಘಟಿಸಿ ಅದರಿಂದ ಗ್ಲುಕೊಸ್ ನಿರ್ಮಾಣ ಶುರುವಾಗುತ್ತದೆ. ಊಟವಾದ ಬಳಿಕ ಆಹಾರ ವಿಘಟನೆಗೊಂಡು ಸ್ವಲ್ಪ ಅಮೈನೋ ಆಮ್ಲದ ರೂಪದಲ್ಲಿ ಸ್ನಾಯುಗಳಲ್ಲಿ , ಲಿವರಿನಲ್ಲಿ ಗ್ಲೈಕೊಜಿನ್ ರೂಪದಲ್ಲಿ ಸಂಗ್ರಹವಾಗುತ್ತದೆ. ಉಳಿದದ್ದು ಗ್ಲುಕೋಸ್ ಆಗಿ ಶಕ್ತಿಯಾಗಿ ಪರಿವರ್ತನೆಯಾಗುತ್ತಿದ್ದಾರೆ. ಒಮ್ಮೊಮ್ಮೆ ಗ್ಲುಕೋಸ್ ಜಾಸ್ತಿಯಾದಾಗ ಇನ್ಸುಲಿನ್ ಉತ್ಪಾದನೆಯಾಗಿ ಕಡಿಮೆಗೊಳಿಸುತ್ತದೆ. ಅಗತ್ಯ ಪ್ರಮಾಣವನ್ನೂ ಉಳಿಸದೆ ಗ್ಲುಕೋಸ್ ಗಣನೀಯವಾಗಿ ಕಡಿಮೆಯಾದಾಗ ಗ್ಲುಕಾಗೋನ್ ಉತ್ಪಾದನೆಗೊಂಡು ಸಂಗ್ರಹಿಸಿಟ್ಟ ಗ್ಲೈಕೊಜಿನ್ ವಿಘಟನೆಗೊಳಿಸಿ ಗ್ಲುಕೋಸ್ ಆಗಿಸುತ್ತದೆ. ಉಪವಾಸವಿದ್ದಾಗ ಕೆಲವು ಸಮಯ ಹಸಿವಾದಂತಾಗಿ ನಿತ್ರಾಣವಾಗಿ ನಂತರ ಮತ್ತೆ ಹಸಿವು ಮರೆಮಾಚುತ್ತಲ್ಲವೇ ಈ ಮಧ್ಯೆ ನಡೆಯುವ ಪ್ರಕ್ರಿಯೆಗಳು ಈ ಮೇಲಿನಂತಿವೆ. ಕೆಲವೊಂದಿಷ್ಟು ಭಾಗ ಕೊಬ್ಬಿನ ರೂಪದಲ್ಲೂ ಶೇಖರಿಸಲ್ಪಟ್ಟಿರುತ್ತದೆ. ಅದೂ ಕೂಡಾ ವಿಘಟನೆಗೊಳ್ಳುವುದು ಉಪವಾಸದ ಸಂದರ್ಭದಲ್ಲಿಯೇ. ದೇಹದಲ್ಲಿನ ಅಮೈನೋ ಆಮ್ಲದ ಗಣನೀಯ ಇಳಿಕೆ ಅಟೋಫೇಜಿ ಜಾಸ್ತಿಯಾಗುತ್ತಿರುವ ಸೂಚನೆ. ಬೇಡವಾದ ಕೋಶದ ಭಾಗಗಳು ನಿರ್ನಾಮವಾದ ಮೇಲೆ ಅವು ಅಮೈನೋ ಆಮ್ಲಗಳಾಗುತ್ತವೆ ನಂತರ ಅವುಗಳು ಲಿವರ್’ಗೆ ಹೋಗಿ ಹೊಸ ಪ್ರೋಟೀನುಗಳಾಗಿ ಬದಲಾಗುತ್ತವೆ. ಅಮೈನೋ ಆಮ್ಲ ಪ್ರೋಟೀನ್ ಆಗುವುದರ ಜೊತೆಗೆ ಗ್ಲೈಕೊಜಿನ್ ಗ್ಲುಕೋಸ್ ಕೂಡಾ ಆಗುತ್ತದೆ.
ಅಲ್ಜೆಮಿರ್ ಮತ್ತು ಕ್ಯಾನ್ಸರ್’ಗಳ ಕಾರಣ ಮೆದುಳಿನ ಸುತ್ತ ನಿರುಪಯುಕ್ತ ಪ್ರೋಟೀನ್’ಗಳ (ಬೇಡದ ಕೋಶಗಳು)ಬೆಳವಣಿಗೆಯೇ. ಆ ನಿರುಪಯುಕ್ತವಾದ ಪ್ರೋಟೀನುಗಳನ್ನು ವಿಭಜಿಸಿ ಹೊಸ ಪ್ರೋಟೀನ್ ನಿರ್ಮಾಣವೇ ಅಟೋಫೆಜಿಯ ಕೆಲಸ.ಈಗ ಗೊತ್ತಾಯಿತಲ್ಲವೇ? ಅಟೋಫೆಜಿಯಿಂದ ಕ್ಯಾನ್ಸರ್ ಹೇಗೆ ನಿರ್ಮೂಲನೆಗೊಳ್ಳುತ್ತೆ ಅಂತ. ಅದಲ್ಲದೆ ಇನ್ಸುಲಿನ್ ಜೊತೆಗೆ ಬೆರೆತು ಅದರ ವಿರುದ್ಧ ಕ್ರಿಯೆಯಲ್ಲಿ ತೊಡಗಿಕೊಂಡು ದೇಹದ ಗ್ಲುಕೋಸ್ ಪ್ರಮಾಣದ ಸಮತೋಲನ ಕಾಪಾಡಿಕೊಂಡು ಹೋಗುವುದರಲ್ಲೂ ಗ್ಲುಕಾಗೋನ್ ಸಹಾಯಕಾರಿ. ಇನ್ಸುಲಿನ್ ಮತ್ತು ಗ್ಲುಕಾಗೋನ್ ಚಕ್ರೀಯವಾಗಿ ಒಂದಾದ ನಂತರ ಮತ್ತೊಂದು ಉತ್ಪಾದನೆಯಾಗುತ್ತವೆ.
ಈ ಗ್ಲುಕಾಗೊನ್ ಉತ್ಪಾದನೆಯಾಗಬೇಕಾದರೆ ನಿಯಮಿತ ಉಪವಾಸವಿರಬೇಕು. ನಾನು ನಿಯಮಿತ ಎಂಬ ಪದ ಬಳಸಿದ್ದಕ್ಕೂ ಅರ್ಥವಿದೆ ಅದನ್ನು ಬಿಡಿಸಿ ಹೇಳುವ ಅವಶ್ಯಕತೆ ಇಲ್ಲ ಅಲ್ಲವೇ? ಉಪವಾಸದಿಂದ ಹಳೆಯ ನಿರುಪಯುಕ್ತ ಕೋಶಗಳು ಸತ್ತು ಹೋಗುವುದಲ್ಲದೇ ಅದರ ಜೊತೆಗೆ ಕೆಲವು ಹಾರ್ಮೋನುಗಳ ಉತ್ಪಾದನೆಗೂ ಇದು ಪ್ರಚೋದನೆ ಕೊಡುತ್ತದೆ. ಆ ಹಾರ್ಮೋನುಗಳು ಅಟೋಫೆಜಿಯಿಂದ ಅಳಿದು ಉಳಿದ ಕೋಶದ ಭಾಗ(ಕಣದಂಗ)ಗಳಿಂದ ಹೊಸ ಸದೃಢ ಜೀವಕೋಶ ನಿರ್ಮಾಣಕ್ಕೆ ಸಹಾಯಕಾರಿ. ಅಟೋಫೆಜಿ ಜಾಸ್ತಿಯಾದರೂ ಕೂಡಾ ಅಪಾಯ.
ಅಟೋಫೆಜಿಯ ಹಿತಮಿತವಾಗಿದ್ದರೆ ಸರಿ. ಅದು ಅತಿಯಾದರೂ ಅಪಾಯ ಮಿತವಾದರೂ ಅಪಾಯ. ಅದು ಯಾವಾಗಲೂ ನಡೆಯುತ್ತಿರುವಂತೆ ಮಾಡಲೂ ಯಾವುದೇ ಔಷಧಿಯಿಲ್ಲ. ಅದೇನಾದರೂ ಇದ್ದರೆ ಉಪವಾಸ ಮಾತ್ರ. ಇದರ ಜೊತೆಗೆ ಇನ್ನೂ ಒಂದು ಗಮನಹರಿಸಬೇಕಾದ ಅಂಶವಿದೆ. ಕೆಲವು ಕ್ಯಾನ್ಸರ್ ಕೋಶಗಳು ಇದೇ ಅಟೋಫೇಜಿಯನ್ನು ತಮ್ಮ ಉಳಿವಿಗಾಗೂ ಉಪಯೋಗಿಸಿಕೊಳ್ಳಬಹುದು ಎಂಬ ಉಲ್ಲೇಖವಿದೆ. ಹಾಗಾಗಿ ಯೊಶಿನೊ ಅವರ ಸಂಶೋಧನೆಯ ಅಡಿಯಲ್ಲಿ ಹಲವಾರು ಹೊಸ ಅಧ್ಯಯನಗಳು ನಡೆಯಬೇಕಿದೆ. ಅವು ಯಾವುದೆಂದರೆ
೧. ಅಟೋಫೆಜಿ ನಿಯಂತ್ರಣ ಮತ್ತು ಅದು ನಿರಂತರವಾಗಿರುವಂತೆ ಮಾಡಲು ಔಷಧಿ ಕಂಡುಹಿಡಿಯಬೇಕಿದೆ.
೨. ಅಟೋಫೆಜಿ ಆಯ್ದ ಕೋಶದ ಕಣದಂಗಗಳ ಮೇಲಷ್ಟೆ ಆಗಬೇಕು. ಆಯ್ದ ಎಂದರೆ ಕ್ಯಾನ್ಸರ್ ಗಡ್ಡೆಗಳು ಮತ್ತು ಕೆಲವು ನಿರಪುಯುಕ್ತ ಜೀವಕೋಶಗಳು. ಕೊಲ್ಲುವ ಭರದಲ್ಲಿ ಆರೋಗ್ಯಕರ ಕೋಶಗಳನ್ನೂ ಕೊಂದರೆ ಇದು ಮತ್ತೊಮ್ಮೆ ಕೆಮೋಥೆರಾಪಿಯ ಮುಂದುವರೆದ ಭಾಗವಷ್ಟೆ.
೩. ಯಾವ ರೀತಿ ವೈರಲ್ ಅಟ್ಯಾಕ್ ಆದರೆ ರೋಗ ನಿರೋಧಕ ಶಕ್ತಿ ಜಾಗೃತವಾಗುವಂತ ಲಸಿಕೆಗಳು ಕಂಡು ಬಂದಿವೆಯೋ ಅದೇ ತರಹ ಒಂದೇ ಒಂದು ಕ್ಯಾನ್ಸರ್ ಜೀವಕೋಶವಾದರೂ ಸಹ ಅಟೋಫೆಜಿ ಜಾಗೃತವಾಗುವಂತ ಲಸಿಕೆಗಳನ್ನು ಕಂಡು ಹಿಡಿಯಬೇಕಿದೆ.
೪. ನಿಯಮಿತ ಉಪವಾಸದಿಂದಾಗುವ ಲಾಭವನ್ನು ತಿಳಿ ಹೇಳಬೇಕು.
ಈ ರೀತಿಯ ಔಷಧಿ ಸಂಶೋಧನೆಗೆ ಸುಮಾರು ೪೦ ಅಧ್ಯಯನಗಳು ಜಾರಿಯಲ್ಲಿವೆ ಎಂದು ಒಂದು ಕಡೆ ಉಲ್ಲೇಖವಿದೆ. ನಮ್ಮ ಹಿರಿಯರು ಅದಕ್ಕೇ ಉಪವಾಸವನ್ನು ಸಂಪ್ರದಾಯಗಳೊಂದಿಗೆ ಬೆರೆಸಿದರು. ಅದನ್ನು ನಾವು ಅಷ್ಟಕ್ಕೇ ಪಾಲಿಸುವುದಿಲ್ಲ ಎಂದರಿತು ವೇಳಾಪಟ್ಟಿ ಹಾಕಿಕೊಟ್ಟರು. ಯಾವುದೇ ಕೆಲಸ ವೇಳಾಪಟ್ಟಿಯೊಂದು ಹಾಕಿದರೆ ಅದು ಸ್ವಲ್ಪ ಮಟ್ಟಿಗಾದರೂ ಕಾರ್ಯಗತವಾಗುತ್ತೆ. ನಮ್ಮ ಸಂಪ್ರದಾಯದಲ್ಲಿ ತಿಂಗಳಿಗೊಂದು ಸಂಕಷ್ಟಿ ಬರುವ ಹಾಗೆ ನೋಡಿ ಕೊಂಡಿದ್ದಾರೆ. ದೇವರ ಮೇಲಿನ ಶ್ರದ್ಧೆ ಜಾಸ್ತಿ ಇರುವುದರಿಂದಲೋ ವೈಜ್ಞಾನಿಕ ಹಿನ್ನೆಲೆ ಶ್ರೀಸಾಮಾನ್ಯರಿಗೆ ಅರಿಯುವುದಿಲ್ಲ ಅಂತಲೋ ಅದಕ್ಕೆ ದೇವರ ಕಾರಣ ಕೊಟ್ಟಿದ್ದಾರೆ. ದೈವಾರಾಧನೆಗಲ್ಲ ದೇಹಾರೋಗ್ಯಕ್ಕಾಗೆ ಉಪವಾಸ ಎಂಬುದು ನಾವು ಇನ್ನೂ ಅರಿಯದೆ ಇದ್ದದ್ದು ನಮ್ಮ ಜಾಢ್ಯವಷ್ಟೆ. ಅದನ್ನೊಂದು ಮೂಢನಂಬಿಕೆ ಎನ್ನುವುದು ನಮ್ಮ ಮೂರ್ಖತನದ ಪರಮಾವಧಿ.
ಒಂದು ಊರಿನಲ್ಲಿ ಒಬ್ಬ ಆಗರ್ಭ ಶ್ರೀಮಂತ ರತ್ನ ವೈಡೂರ್ಯಗಳನ್ನು ಎಲ್ಲಿಡಬೇಕೆಂಬುದು ತಿಳಿಯದೇ ನೆಲದಲ್ಲಿ ಇಟ್ಟು ತನ್ನ ಮಕ್ಕಳಿಗೂ ಹೇಳದೇ ತೀರಿ ಹೋಗುತ್ತಾನೆ. ಕಾಲಾಂತರದಲ್ಲಿ ಭೂಮಿಯಲ್ಲಿ ಚಿಕ್ಕ ಪುಟ್ಟ ಭೂಕಂಪಗಳು ಮತ್ತು ಇನ್ನಿತರ ಪ್ರಾಕೃತಿಕ ಬದಲಾವಣೆಗಳಿಂದ ಇಟ್ಟ ನಿಧಿ ಅಲ್ಪಸ್ವಲ್ಪ ಸ್ಥಾನಪಲ್ಲಟವಾಗುತ್ತದೆ. ಹಲವು ಪೀಳಿಗೆ ಕಳೆದ ಮೇಲೆ ಆ ಮನೆಯ ಪಕ್ಕದ ಮನೆಯವನು ಮನೆ ಕಟ್ಟಲಿಕ್ಕೆ ಪಾಯಕ್ಕೆ ನೆಲ ಅಗಿಯುವಾಗ ಸ್ಥಾನಪಲ್ಲಟವಾದ ನಿಧಿ ಸಿಗುತ್ತೆ. ಅದು ಅವನ ಜಾಗವಾಗಿದ್ದರಿಂದ ನಿಧಿಯೂ ಅವನದು. ತಪ್ಪು ಪಕ್ಕದ ಮನೆಯವನದಲ್ಲ ಅವನ ಪಾಡಿಗೆ ಅವನು ಮನೆ ನಿರ್ಮಾಣದ ಸಿದ್ಧತೆಯಲ್ಲಿದ್ದ ಅವನಿಗೆ ಆಕಸ್ಮಿಕವಾಗಿ ಅದು ದಕ್ಕಿತು. ಆದರೆ ತಪ್ಪು ಧನಿಕನ ಪೂರ್ವಜನು ಅಪಾರ ಸಂಪತ್ತಿನ ಬಗ್ಗೆ ಸಣ್ಣ ಮಾಹಿತಿಯನ್ನು ಕೊಡದಿರುವುದು. ಈಗ ಆಗುತ್ತಿರುವುದು ಅದೇ ನಮ್ಮ ಸಂಪ್ರದಾಯದ ಹಿಂದಿನ ವೈಜ್ಞಾನಿಕತೆ ಅರಿಯದೆ ಮೂಢರಾಗಿದ್ದೇವೆ. ಆದರೆ ಸುಮ್ಮನೆ ಸಂಶೋಧನೆಗೆ ಕುಳಿತ ಹೊರ ದೇಶದ ವಿಜ್ಞಾನಿಗಳು ಅದರ ಹಿಂದಿನ ವೈಜ್ಞಾನಿಕ ಹಿನ್ನೆಲೆ ಹೇಳ ಹೊರಟಿದ್ದಾರೆ. ವಿಚಿತ್ರವೆಂದರೆ ನಮ್ಮದೇ ದೇಶದ ಬುದ್ಧಿಜೀವಿಗಳು ಇದನ್ನು ಮೌಢ್ಯ ಎಂದು ಕರೆಯುತ್ತಿದ್ದಾರೆ. ಮುಂದೊಂದು ದಿನ ಆಧುನಿಕತೆಯ ಗಮ್ಯದೆಡೆಗೆ ಚಲಿಸುತ್ತಿದ್ದೇವೆ ಎಂಬ ಭ್ರಮೆಯಲ್ಲಿ ಹೊರಟ ನಾವೆಲ್ಲ ಮರಳಿ ಬಾರದಷ್ಟು ದೂರನಡೆದ ಮೇಲೆ ತಪ್ಪಿಗೆ ಪಶ್ಚಾತ್ತಾಪ ಪಡಬೇಕಾದೀತು. ಆಗ ಅರಿವಿಗೆ ಬಂದರೂ ಕಾಲ ಮಿಂಚಿ ಹೋಗಿರುತ್ತೆ. ನಾವು ನಮ್ಮ ಮುಂದಿನ ಪೀಳಿಗೆಗೆ ಸಂಪ್ರದಾಯದ ಬಗ್ಗೆ ಅರಿವು ಮೂಡಿಸಬೇಕು. ಹಾಗೆಂದು ಯೊಶಿನೊರಿ ನಮ್ಮಿಂದ ನಕಲು ಮಾಡಿದರು ಎಂದು ಹೇಳುತ್ತಿಲ್ಲ. ಅವರು ನೆರೆಮನೆಯವನ ಹಾಗೆ ತಮ್ಮ ಪಾಡಿಗೆ ತಾವು ಸಂಶೋಧನೆಯಲ್ಲಿ ತೊಡಗಿದರು ಸಂಶೋಧನೆಯಾಯಿತು.ಅವರ ಪರಿಶ್ರಮ ಪ್ರಶ್ನಾತೀತ. ಅದರ ಜೊತೆಗೆ ನಮ್ಮ ಸಂಪ್ರದಾಯದ ಹಿನ್ನೆಲೆ ಅನಾವರಣವಾಯಿತು. ನಿಜಕ್ಕೂ ಅವರಿಗೊಂದು ಧನ್ಯವಾದ ೪೦ ಜನರು ಇಡೀ ಜಗತ್ತನ್ನು ಆರೋಗ್ಯಕರವಾಗಿಸಲು ನಡೆಸುತ್ತಿರುವ ಅಧ್ಯಯನಕ್ಕೂ ಶುಭವಾಗಲಿ ಅವರ ಎಲ್ಲ ಉತ್ಖನನದ ಅಂತ್ಯ ನಮ್ಮ ಸಂಪ್ರದಾಯಗಳ ಮೂಲಕ್ಕೆ ಬರುವುದು ಖಚಿತ ನಾವು ಅದನ್ನರಿಯದೇ ಇರುವುದು ದುರಾದೃಷ್ಟಕರ.