ಅಂಕಣ

ಹಾಕಿ ಎಂಬ ಪಟವೂ ….ಧ್ಯಾನ್ ಚಂದ್ ಎಂಬ ಸೂತ್ರಧಾರಿಯೂ…

ಕ್ರಿಕೆಟ್’ಗೆ  ಸಚಿನ್ ಎನ್ನುವುದಾದರೆ ಹಾಕಿಗೆ ಯಾರು..?ಎಂಬೊಂದು ಪ್ರಶ್ನೆಯೊಟ್ಟಿಗೆ ಹೊರಟರೆ ಪ್ರಾಯಶಃ ನಮಗೆ ಉತ್ತರ ಸಿಗದೇ ಇರಬಹುದು. ಸಿಕ್ಕರೂ ಅದು ‘ಹಾಕಿ ಮಾಂತ್ರಿಕ’  ದಿ ಗ್ರೇಟ್ ಧ್ಯಾನ್ ಚಂದ್ ಅವರ ಹೆಸರೇ ಆಗದಿರಬಹುದು.ಹೌದು..,ಧ್ಯಾನ್ ಚಂದ್. ವಿಶ್ವ ಹಾಕಿ ಕಂಡ ದಂತಕಥೆ. ಭಾರತ ದೇಶದ ಹಾಕಿಯ ಪುಸ್ತಕ!  ಇಂದು ಒಲಿಂಪಿಕ್ಸ್ ನಲ್ಲಿ ನಮ್ಮ ಆಟಗಾರರು ಕನಿಷ್ಠ ಒಂದು ಕಂಚಿನ ಪದಕವನ್ನು ತಂದರೆ ಸಾಕು, ಆತ/ ಆ ತಂಡ ಆ ‘ವರ್ಷದ ವ್ಯಕ್ತಿ/ತಂಡ’ವಾಗಿ ಬಿಡುತ್ತದೆ. ಅಂತಹದರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಗಲು ಎರಡು ದಶಕಗಳ ಮೊದಲೇ, ಬ್ರಿಟಿಷರ ಗುಲಾಮಗಿರಿಯಲ್ಲೇ, ಕನಿಷ್ಠ ಸೌಕರ್ಯಗಳಲ್ಲೇ, ವಿಶ್ವವನ್ನೇ ಬಗ್ಗುಬಡಿದು ನಿರಂತರವಾಗಿ ಒಲಿಂಪಿಕ್ಸ್ ನಲ್ಲಿ ದೇಶಕ್ಕೆ ಚಿನ್ನದ ಪದಕವನ್ನು ಗಳಿಸಿಕೊಟ್ಟ ಮಹಾನ್ ಆಟಗಾರ. ಕೈಗೆ ಒಂದು ಮರದ ಕೋಲನ್ನು ಕೊಟ್ಟರೂ ಗೋಲು ಬಾರಿಸಬಲ್ಲ ಒಬ್ಬನಿದ್ದ ಅಂದರೆ ಅದು ಧ್ಯಾನ್ ಚಂದ್. ದಶಕಗಳವರೆಗೆ ದೇಶದ ವಿಜಯ ಪತಾಕೆಯನ್ನು ವಿಶ್ವದ ಹೋದಡೆಯಲ್ಲ ಹಾರಿಸಿಯೇ ಬರುತ್ತಿದ್ದ ಧ್ಯಾನ್ ಚಂದ್ ಜನಿಸಿದ್ದು ಉತ್ತರಪ್ರದೇಶದ ಅಲಹಾಬಾದಿನಲ್ಲಿ. ತನ್ನ ೧೬ನೇ ವಯಸ್ಸಿಗೆ ಆಗಿನ ಭಾರತೀಯ ಸೇನೆಗೆ ಸೇರಿದ ಧ್ಯಾನ್ ಸೇನಾ ತುಕಡಿಯಲ್ಲಿ ಹಾಕಿಯನ್ನು ಆಡಲು ಶುರು ಮಾಡುತ್ತಾನೆ. ಹಾಕಿಯ ರುಚಿ ಹತ್ತಲು ಆತನಿಗೆ ಬಹಳ ದಿನಗಳೇನೂ ಹಿಡಿಯಲಿಲ್ಲ. ಕೆಲಸದ ಸಮಯದ ನಂತರ ಎಲ್ಲರೂ ನಿದ್ರಿಸುತ್ತಿದ್ದರೆ, ಧ್ಯಾನ್  ‘ಚಾಂದ್’ನ (ಚಂದಿರ)ಬೆಳಕಿನಲ್ಲಿ ಅಭ್ಯಾಸವನ್ನು ಮಾಡುತ್ತಿದ್ದ. ಇವನ ಈ ಪಾಟಿ ಅಭ್ಯಾಸವನ್ನು ಕಂಡ ಎಲ್ಲರೂ ಆತನಿಗೆ ಧ್ಯಾನ್ ‘ಚಾಂದ್’ಎಂಬ ಹೊಸ ನಾಮಕರಣವನ್ನೇ ಮಾಡಿಬಿಟ್ಟರು!

ಅಲ್ಲಿಂದ ಮುಂದೆ ಭಾರತೀಯ ಸೇನಾ ತಂಡಕ್ಕೆ ಸೇರ್ಪಡೆಯಾದ ಧ್ಯಾನ್ ಚಂದ್ ೧೯೨೬ರ ನ್ಯೂಜಿಲ್ಯಾಂಡ್ ಸರಣಿಗೆ ಆಯ್ಕೆಯಾಗುತ್ತಾನೆ.ವಿದೇಶಕ್ಕೆ ಪ್ರವಾಸ ಕೈಕೊಂಡ ಭಾರತದ ಮೊದಲ ಕ್ರೀಡಾ ತಂಡ ಅದಾಗಿತ್ತು. ಮುಂದೆ ನಡೆಯುವುದೇ  ಇತಿಹಾಸ. ಅಂದು ಅಲ್ಲಿ ಆಡಿದ ೨೧ ಪಂದ್ಯಗಳಲ್ಲಿ ೧೮ ಪಂದ್ಯಗಳಲ್ಲಿ ಗೆದ್ದು ೨ ಪಂದ್ಯಗಳಲ್ಲಿ ಡ್ರಾ ಮಾಡಿಕೊಂಡಿದ್ದ ಭಾರತ ತಂಡ ಸೋತ ಪಂದ್ಯ ಕೇವಲ ಒಂದು!ಒಟ್ಟಾರೆ ಸರಣಿಯಲ್ಲಿ ೨೪ ಗೋಲುಗಳನ್ನು ಬಿಟ್ಟುಕೊಟ್ಟರೆ,ಬಾರಿಸಿದ್ದ ಗೋಲುಗಳ ಸಂಖ್ಯೆ ಬರೋಬ್ಬರಿ ೧೯೨!ಅದರಲ್ಲಿ  ಧ್ಯಾನ್ ಚಂದ್ ಒಬ್ಬನೇ ಸುಮಾರು ನೂರಕ್ಕಿಂತಲೂ ಹೆಚ್ಚು ಗೋಲುಗಳನ್ನು ಬಾರಿಸಿದ್ದಾನೆ ಎಂದರೆ ನೀವು ನಂಬಲೇಬೇಕು. ನ್ಯೂಜಿಲ್ಯಾಂಡ್ ನ ಅಭೂತಪೂರ್ವ ಯಶಸ್ಸು ಧ್ಯಾನ್ ಚಂದ್  ಜೀವನದ ಮಹತ್ತರವಾದ ಟರ್ನಿಂಗ್ ಪಾಯಿಂಟ್. ಆ ಯಶಸ್ಸೇ ಮುಂದೆ ಸೇನಾ ತಂಡ ಪ್ರತಿನಿಧಿಸುವ ಪ್ರತಿಯೊಂದು ಅಂತರಾಷ್ಟ್ರೀಯ ಪಂದ್ಯಕ್ಕೆ ಧ್ಯಾನ್ ಚಂದ್ ನನ್ನು ಆಯ್ಕೆಯಾಗಲು ಕಾರಣವಾಯಿತು. ಭಾರತದ ಇತಿಯಾಸದ ಪುಟಗಳು ಸುವರ್ಣಾಕ್ಷರಗಳಲ್ಲಿ ಧ್ಯಾನ್ ಚಂದ್ನ ಹೆಸರನ್ನು ತಮ್ಮ ಮೇಲೆ ಕೆತ್ತಿಸಿಕೊಳ್ಳಲು ಸಜ್ಜಾಗಿದ್ದವು.

೧೯೨೮ ಆಮ್ಸ್ಟರ್ಡಮ್ ಒಲಿಂಪಿಕ್ಸ್.  ಒಲಿಂಪಿಕ್ಸ್ ನಲ್ಲಿ ಭಾರತದ ಹಾಕಿ ತಂಡವೊಂದು ಮೊದಲ ಬಾರಿಗೆ ದೇಶವನ್ನು ಪ್ರತಿನಿಧಿಸುತ್ತದೆ. ವಿಶ್ವವೇ ನಿಬ್ಬೆರಗಾಗಿ ಭಾರತೀಯ ಹಾಕಿಯನ್ನು ನೋಡುವಂತೆ ಮಾಡಿದ ಆ ಸರಣಿ ದೇಶಕ್ಕೆ ಮೊದಲ ಒಲಿಂಪಿಕ್ ಚಿನ್ನದ ಪದಕವನ್ನು ಗಳಿಸಿ ತರುತ್ತದೆ. ಅಂದು ಆಡಿದ ಅಷ್ಟೂ ಪಂದ್ಯಗಳಲ್ಲಿ ಭಾರತ ಒಂದೇ ಒಂದು ಗೋಲನ್ನು ಎದುರಾಳಿ ತಂಡಕ್ಕೆ ಬಿಟ್ಟುಕೊಡುವುದಿಲ್ಲ ಎಂಬುದು ವಿಸ್ಮಯವೇ ಸರಿ. ಆಸ್ಟ್ರಿಯಾದ ವಿರುದ್ಧ ೭-೦, ಬೆಲ್ಜಿಯಂನ ವಿರುದ್ಧ ೯-೦, ಡೆನ್ಮಾರ್ಕ್ ನ ವಿರುದ್ಧ ೫-೦, ಸೆಮಿಫೈನಲ್ ನಲ್ಲಿ ಸ್ವಿಜರ್ಲ್ಯಾಂಡ್ ವಿರುದ್ಧ ೬-೦ ಹಾಗೂ ಫೈನಲ್ ನಲ್ಲಿ ಹೋಲ್ಯಾಂಡ್ ವಿರುದ್ಧ ೩-೦ ಯ ಅಂತರದಲ್ಲಿ ಎದುರಾಳಿ ತಂಡಗಳನ್ನು ಬಗ್ಗುಬಡೆದು ಗೆಲುವನ್ನು ಮುಡಿಗೇರಿಸಿಕೊಳ್ಳುತ್ತದೆ. ಗಳಿಸಿದ ಒಟ್ಟು ಗೋಲುಗಳಲ್ಲಿ ಸುಮಾರು ಅರ್ಧದಷ್ಟು ಧ್ಯಾನ್ ಚಂದ್’ನದೇ ಎಂಬುದು ಮತ್ತೊಂದು ಗಮನಾರ್ಹ ವಿಷಯ. ಆತನ ಆಟಕ್ಕೆ ಮರುಳಾದ ಅಲ್ಲಿನ ಸ್ಥಳೀಯ ಪತ್ರಿಕೆಯೊಂದು ‘ಇದು ಕೇವಲ ಹಾಕಿಯ ಪಂದ್ಯವಲ್ಲ, ಇಂದೊಂದು ಮಂತ್ರ ವಿದ್ಯೆ..ಧ್ಯಾನ್ ಚಂದ್ ಇದರ ಮಾಂತ್ರಿಕ’ ಎಂಬ ಸುದ್ದಿಯನ್ನು ಪ್ರಸಾರ ಸಹ ಮಾಡುತ್ತದೆ. ಹೀಗೆ ಧ್ಯಾನ್ ಚಂದ್ ‘The Wizard’ (ಮಾಂತ್ರಿಕ) ನೆಂದು ಪ್ರಸಿದ್ದಿ ಪಡೆಯುತ್ತಾನೆ.

ಅಲ್ಲಿಂದ ಶುರುವಾದ ಭಾರತದ ಒಲಿಂಪಿಕ್ ಬೇಟೆ ನಂತರದ ೧೯೩೨ರ ಲಾಸ್ ಏಂಜೆಲಿಸ್ ಹಾಗೂ ೧೯೩೬ ರ ಬರ್ಲಿನ್ ಒಲಿಂಪಿಕ್ಸ್ ನಲ್ಲೂ ಮುಂದುವರೆಯಿತ್ತದೆ.೧೯೩೨ ರ ಒಲಿಂಪಿಕ್ಸ್ ಫೈನಲ್ನಲ್ಲಿ ಭಾರತ ಅಮೇರಿಕಾವನ್ನು ೨೪-೧ ಗೋಲುಗಳ ಅಂತರ-ದಲ್ಲಿ ಮಣಿಸಿತು. ಅದು ಇಂದಿನವರೆಗೂ ಯಾವ ತಂಡದಿಂದಲೂ ಭೇದಿಸಲಾಗದ ವಿಶ್ವದಾಖಲೆ!೧೯೩೬ ರ ಬರ್ಲಿನ್ ಒಲಿಂಪಿಕ್ಸ್ ನಲ್ಲಿ ತಂಡದ ನಾಯಕನಾಗಿ ಜವಾಬ್ದಾರಿಯನ್ನು ಹೊತ್ತ ಧ್ಯಾನ್ ಚಂದ್ ತಂಡವನ್ನು ಫೈನಲ್’ವರೆಗೂ ಕೊಂಡೊಯ್ದು, ಬಲಿಷ್ಠ ಜೆರ್ಮನಿ ತಂಡವನ್ನು ೮-೧ ಗೋಲುಗಳ ಅಂತರದಲ್ಲಿ ಚಚ್ಚಿ ಕೆಡವುತ್ತಾನೆ. ಈ ಪಂದ್ಯವನ್ನು ವೀಕ್ಷಿಸಲು ಖುದ್ದು ಹಿಟ್ಲರ್ ಅಂದು ಅಲ್ಲಿಗೆ ಬಂದಿರುತ್ತಾನೆ. ವಿಶ್ವವನ್ನೇ ತನ್ನ ಅಧಿಕಾರಶಾಹಿ ನೀತಿಯಿಂದ ಭಯಬೀತಿಗೊಳಿಸಿದ್ದ ಹಿಟ್ಲರ್ ಅಂದು ಧ್ಯಾನ್’ನ ಆಟವನ್ನು ನೋಡಿ ಅಕ್ಷರ ಸಹ ನಡುಗಿ ಹೋಗುವುದಲ್ಲದೆ ತನ್ನ ಸೇನೆಯಲ್ಲಿ ಅತ್ಯುತ್ತಮ ಸ್ಥಾನವನ್ನೂ ಹಾಗೂ ಜರ್ಮನಿಯ ಪೌರತ್ವವನ್ನೂ ಕೊಡುವ ಬಗ್ಗೆ ಪ್ರಸ್ತಾಪ ಮಾಡುತ್ತಾನೆ. ಹಿಟ್ಲರ್’ನ ಮಾತೇ ವೇದ ವಾಕ್ಯವಾಗಿದ್ದ ಜರ್ಮನಿಯ ನೆಲದಲ್ಲಿ ಹಿಂದೂ ಮುಂದೂ ಯೋಚಿಸದೆ ಧೀರ ಧ್ಯಾನ್ ಅವನ ಪ್ರಸ್ತಾಪವನ್ನು ನಮ್ರತೆಯಿಂದಲೆ ತಿರಸ್ಕರಿಸುತ್ತಾನೆ. ಮತ್ತೊಮ್ಮೆ ವಿಶ್ವ ಧ್ಯಾನ್ ನನ್ನ ನಿಬ್ಬೆರಗಾಗಿ ನೋಡುತ್ತದೆ.

ಭಾರತದ ಹಾಕಿ ಇತಿಹಾಸದಲ್ಲಿ ಧ್ಯಾನ್ ನನ್ನು ಸರಿದೂಗುವ ಮತ್ತೊಬ್ಬ ಆಟಗಾರ ಹುಟ್ಟಲಿಲ್ಲ.೨೨ ವರ್ಷಗಳ ಸುದೀರ್ಘ ವೃತ್ತಿ ಬದುಕಿನಲ್ಲಿ ಈತ ಸಾವಿರಕ್ಕಿಂತಲೂ ಹೆಚ್ಚು ಗೋಲುಗಳನು ಬಾರಿಸಿರುತ್ತಾನೆ. ಕ್ರಿಕೆಟ್ ದಂತಕತೆ ಡಾನ್ ಬ್ರಾಡ್ ಮ್ಯಾನ್ ಒಮ್ಮೆ ಈತನ ಆಟದ ಮೋಡಿಗೆ ಬೆರಗಾಗಿ ‘ಕ್ರಿಕೆಟ್ ನಲ್ಲಿ ನಾವುಗಳು ರನ್ ಗಳನ್ನು ಪೇರಿಸುವ ಹಾಗೆ ಧ್ಯಾನ್ ಹಾಕಿಯಲ್ಲಿ ಗೋಲುಗಳನ್ನು ಹೊಡೆಯುತ್ತಾನೆ’ ಎನ್ನುತ್ತಾನೆ.ಧ್ಯಾನ್ ಆಟವನ್ನು ಅದೆಷ್ಟರ ಮಟ್ಟಿಗೆ ಅರೆದು ಕುಡಿದಿದ್ದನೆಂದರೆ ಒಮ್ಮೆ ಆಡುವಾಗ ಆತನಿಗೆ ಎದುರಾಳಿ ತಂಡದ ವಿರುದ್ಧ ಒಂದೂ ಗೋಲನ್ನು ಗಳಿಸಲು ಸಾಧ್ಯವಾಗುವುದಿಲ್ಲ. ಹಲವಾರು ವ್ಯರ್ಥ ಪ್ರಯತ್ನಗಳ ನಂತರ ಧ್ಯಾನ್ ಪಂದ್ಯದ ರೆಫೆರೀ ಯೊಟ್ಟಿಗೆ ವಾಗ್ವಾದಕ್ಕಿಳಿಯುತ್ತಾನೆ.ಗೋಲ್ ಪೋಸ್ಟ್ ನ ವಿಸ್ತೀರ್ಣದ ಬಗ್ಗೆ ಸಂಶಯ ವ್ಯಕ್ತಪಡಿಸುವುದಲ್ಲದೇ ಮತ್ತೊಮ್ಮೆ ಅದರ ವಿಸ್ತೀರ್ಣವನ್ನು ಅಳೆದುನೋಡಲು ಅವನ್ನಲ್ಲಿ ಕೇಳಿಕೊಳ್ಳುತ್ತಾನೆ. ಆತನ ಕೋರಿಕೆಗೆ ಕೊನೆಗೂ ಬಗ್ಗಿದ ರೆಫೆರೀ   ವಿಸ್ತೀರ್ಣವನ್ನು ಅಳೆಸಿ ನೋಡಿದಾಗ ಅಲ್ಲಿದ್ದವರೆಲ್ಲ ಅವಕ್ಕಾಗುತ್ತಾರೆ!ಧ್ಯಾನ್ ನ ಊಹೆಯಂತೆ ಗೋಲ್ ಪೋಸ್ಟ್ ನ ಅಳತೆ ಅಂತರಾಷ್ಟ್ರೀಯ ಪಂದ್ಯಗಳಿಗಿರಬೇಕಾದ ವಿಸ್ತೀರ್ಣತೆಗಿಂತಲೂ ಕಡಿಮೆ ಇರುತ್ತದೆ!

ಸ್ವಾತಂತ್ರ್ಯ ನಂತರ ೧೯೪೭ ರ ಡಿಸೆಂಬರ್ ನಲ್ಲಿ ಮೊದಲ ಬಾರಿಗೆ ಆಫ್ರಿಕಾದ AHF (Asian Sports Association) ಭಾರತವನ್ನು ಆಡಲು ಆಹ್ವಾನಿಸುತ್ತದೆ.ಆದರೆ ಅದರ ಒಂದೇ ಕಂಡೀಷನ್,ಹಾಕಿ ದಿಗ್ಗಜ ಧ್ಯಾನ್ ಚಂದ್ ಟೀಮ್‘ನಲ್ಲಿರಲೇಬೇಕೆಂಬುದು. ೧೯೪೫ರಲ್ಲಿ ಭಾಗಶಃ ನಿವೃತ್ತಿಯನ್ನು ಪಡೆದ್ದಿದ್ದ ಧ್ಯಾನ್ ಆಫ್ರಿಕಾದ ಆಹ್ವಾನ ಬಂದಾಗ ಆತನಿಗೆ ಸುಮಾರು ೪೨ ವರ್ಷ!ಆದರೂ ದೇಶಕ್ಕಾಗಿ ಮತ್ತೊಮ್ಮೆ ಸಿದ್ಧನಾಗುತ್ತಾನೆ.ಅಲ್ಲದೆ ಸರಣಿಯ ೨೨ ಪಂದ್ಯಗಳಲ್ಲಿ ೬೧ ಗೋಲುಗಲ್ಲನ್ನೂ ಗಳಿಸುತ್ತಾನೆ. ಈತನ ಮಿಂಚಿನ ವೇಗದ ಆಟವನ್ನು ಸಹಿಸಲಾರದೆ ಒಮ್ಮೆ ನೆದರ್ಲ್ಯಾಂಡ್ ನ ಅಧಿಕಾರಿಗಳು ಈತನ ಬ್ಯಾಟನ್ನು ಸೀಳಿ ಮ್ಯಾಗ್ನೆಟ್ ಇದೆಯೆಂದು ಪರೀಕ್ಷಿಸಿರುವುದುಂಟು! ಹೀಗೆ ದಾಖಲೆಗಳಿಗಿಂತಲೂ ವಿಸ್ಮಯಗಳನ್ನೇ ಹೆಚ್ಚಾಗಿ ಧ್ಯಾನ್ ಭಾರತೀಯ ಹಾಕಿಗೆ ನೀಡಿದ್ದಾನೆ.

ಅಂದು ಉಡಲು ಕನಿಷ್ಠ ವಸ್ತ್ರಗಳು ಇಲ್ಲದೆ,ಲಭ್ಯವಿರುವ ವಸ್ತ್ರಗಳಲ್ಲೇ ವಿದೇಶ ಪ್ರಯಾಣ ಮಾಡಬೇಕಿತ್ತು .ವಿದೇಶಿಯರು ಒಳ್ಳೆಯ ಶೋ ಹಾಗೂ ಬಟ್ಟೆಯನ್ನು ತೊಟ್ಟು ಕಣಕ್ಕೆ ಇಳಿದರೆ ನಮ್ಮವರು ಸೈನ್ಯದಲ್ಲಿ ಕೊಟ್ಟ ಕಳಪೆ ಮಟ್ಟದ ಸಾಧನಗಳಿಂದಲೇ ದೇಶವನ್ನು ಗೆಲ್ಲಿಸಬೇಕಾಗುತ್ತಿತ್ತು. ವಿದೇಶಿಯರು ಕೆಲವೇ ಗಂಟೆಗಳಲ್ಲಿ ವಿಶ್ವದ ಮೂಲೆ ಮೂಲೆಗೂ ವಿಮಾನದಲ್ಲಿ ಪ್ರಯಾಣಿಸಿದರೆ ನಮ್ಮ ತಂಡ ವಾರಗಳು,ತಿಂಗಳುಗಳು ,ಸಾವಿರಾರು ಮೈಲುಗಳನ್ನು ಸಮುದ್ರದಲ್ಲಿ ಚಲಿಸಿ, ಸಮುದ್ರ ರೋಗಗಳನ್ನೂ ನಿಬಾಹಿಸಿ, ಅಲ್ಲಿನ ಹವಾಗುಣಕ್ಕೆ ಒಗ್ಗಿ, ಪಂದ್ಯದಲ್ಲಿ ಸೆಣೆಸಿ ದೇಶವನ್ನು ಗೆಲ್ಲಿಸಬೇಕಿತ್ತು. ಆದರೂ ಆಗಿನ ಭಾರತ ತಂಡ ಅದೆಷ್ಟು ಬಲಿಷ್ಟವಾಗಿತ್ತೆಂದರೆ ಸ್ವಾತಂತ್ರ್ಯ ಪೂರ್ವದ ಒಲಿಂಪಿಕ್ಸ್’ಗೆ ಬ್ರಿಟನ್ ಒಮ್ಮೆಯೂ ತನ್ನ ಸ್ವಂತ ತಂಡವನ್ನು ಕಲಿಸಿರಲಿಲ್ಲ.ಒಂದು ಪಕ್ಷ ಕಳಿಸಿದ್ದರೂ ತಾವು  ಆಳ್ವಿಕೆ ಮಾಡುವ ದೇಶದಿಂದ ಪರಾಭವ ಗೊಳ್ಳುವುದು ಖಚಿತ ಆಗ ಇಡೀ ವಿಶ್ವವೇ ತಮ್ಮನು ಗೇಲಿ ಮಾಡಲು ಶುರು ಮಾಡುತ್ತದೆ ಎಂಬ ಭಯದಿಂದ ಮರೆಮಾಚಿಕೊಳ್ಳುವುದು ಅದಕ್ಕೆ ಕಷ್ಟವಾಗುತ್ತಿತ್ತು.ಇಷ್ಟೆಲ್ಲಾ ಸವಾಲುಗಳ ನಡುವೆಯೂ ನಮ್ಮ ಹಾಕಿ ತಂಡ ಅಂದು ಸತತವಾಗಿ ೬ ಬಾರಿ ದೇಶಕ್ಕೆ ಚಿನ್ನದ ಪದಕವನ್ನು ಗಳಿಸಿಕೊಟ್ಟಿದೆ.ಭಾರತ ಇಲ್ಲಿಯವರೆಗೂ ಗಳಿಸಿರುವ ಒಟ್ಟು ೨೪ ಒಲಿಂಪಿಕ್ ಪದಕಗಳಲ್ಲಿ ೧೧ ಪದಕಗಳು ಹಾಕಿಯಿಂದ ಬಂದವುಗಳೆಂಬುದನ್ನು ನಾವು ಮರೆಯಬಾರದು.ಆದ ಕಾರಣಕ್ಕೆ ಇದು ನಮ್ಮ ಹೆಮ್ಮೆಯ ಕ್ರೀಡೆ.ದೇಶದ ರಾಷ್ಟ್ರೀಯ ಕ್ರೀಡೆ.

ಪ್ರಸ್ತುತ ಭಾರತ ಹಾಕಿ ತಂಡಗಳನ್ನು ಗಮನಿಸಿದಾಗ ನಾವುಗಳು ಅಕ್ಷರ ಸಹ ಮರುಗಬೇಕಾಗುತ್ತದೆ.ಕಳೆದ ೩೬ ವರ್ಷಗಳಲ್ಲಿ ಭಾರತ ಒಂದೂ ಪದಕವನ್ನು ಗಳಿಸದಿರುವುದು ಅದಕ್ಕೆ ಪೂರಕವಾಗಿದೆ. ಆದಷ್ಟು ಮಟ್ಟಿಗೆ ಒಳ್ಳೆಯ ಸೌಲಭ್ಯಗಳನ್ನೇ ಪಡೆದಿರುವ ನಮ್ಮ ತಂಡಗಳು ಪ್ರತಿ ಬಾರಿಯೂ ಕೇವಲ ನ್ಯೂನತೆಗಳನ್ನೇ ದೊಡ್ಡದಾಗಿಸಿ ಆಟದಲ್ಲಿ ಕಳಪೆ ಪ್ರದರ್ಶನಗಳನ್ನು ನೀಡುತ್ತಿರುವುದು ನಿಜವಾಗಿಯೂ ವಿಷಾದನೀಯ.ಕ್ರಿಕೆಟ್ ಎಂಬ ಪ್ರವಾಹದೊಟ್ಟಿಗೆ ಸೆಣೆಸುವಂತೆ ಕೇವಲ ಹಣ ಹಾಗೂ ಹೆಸರಿಗೆ ಮಾತ್ರ ಆಡುವಂತೆ ನಮ್ಮ ರಾಷ್ಟ್ರೀಯ ಕ್ರೀಡೆ ಮಾರ್ಪಾಡಾಗುತ್ತಿದೆ. ಇಂದೇನಾದರೂ ಧ್ಯಾನ್ ಚಂದ್ ಬದುಕ್ಕಿದ್ದರೆ ನಮ್ಮವರ ಈಗಿನ ಸಾಧನೆಯನ್ನು ನೋಡಿ ಕಣ್ಣೀರಿಡುತ್ತಿದ್ದನೇನೋ ಅನ್ನಿಸುತ್ತದೆ. ಆಟವೆಂಬುದು ದೇಶದ ಕೀರ್ತಿಗಾಗಿ,ಅದೆಂದೂ ನಮ್ಮ ಸ್ವಂತ ಭೋಗಕ್ಕಾಗಿ ಅಲ್ಲ ಎಂದು ಆಡಿದ ಧ್ಯಾನ್ ಚಂದ್ ಹಾಗೂ ತಂಡದಿಂದ ನಾವು ಕಲಿಯಬೇಕಿದೆ. ಇಷ್ಟೆಲ್ಲ ಸಾದನೆಗಳನ್ನು ಮಾಡಿ ದೇಶದ ಕೀರ್ತಿಯನ್ನು ಯಾರೂ ಕೊಂಡೊಯ್ಯದ ಮಟ್ಟಕ್ಕೆ ಮೇಲೇರಿಸಿದ್ದ ಇವರನ್ನು ನಮ್ಮವರೇ ‘ಹಾಕಿ ಏತಕ್ಕೆ ರಾಷ್ಟ್ರಿಯ ಕ್ರೀಡೆಯಾಗಬೇಕು?’ ‘ಧ್ಯಾನ್ ಚಂದ್ ಗೆ ಏಕೆ ಭಾರತರತ್ನ ಕೊಡಬೇಕು?’ಎಂದು ಪ್ರಶ್ನಿಸುವಾಗ ತೀರಾ ನೋವಾಗುತ್ತದೆ.

-ಸುಜಿತ್ ಕುಮಾರ್

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!