Featured ಅಂಕಣ

ಸೈನಿಕರೊಂದಿಗೆ ದೀಪಾವಳಿ ಆಚರಿಸಲು ಮೋದಿಯವರು ಆಯ್ಕೆ ಮಾಡಿಕೊಂಡ “ಮಾನಾ”  ಎಂಬ ಪವಿತ್ರ ತಾಣ!!

ಭಾರತದ ಉತ್ತರದ ಕಟ್ಟ ಕಡೆಯ ಹಳ್ಳಿ ‘ಮಾನಾ ‘. ಇದು ಪವಿತ್ರ ಬದರೀನಾಥ ಕ್ಷೇತ್ರದಿಂದ ಮೂರು ಕಿಲೋಮೀಟರ್ ದೂರದಲ್ಲಿ, ಬಹುತೇಕ ಟಿಬೆಟಿಯನ್ ಬುಡಕಟ್ಟಿನ ಭೋಟಿಯಾ ಎಂಬ ಸಮುದಾಯ ವಾಸಿಸುವ ,ಸುಮಾರು ಇನ್ನೂರು ಇನ್ನೂರೈವತ್ತು ಮನೆಗಳಿರುವ ಹಳ್ಳಿ. ಉತ್ತರಾಖಂಡ್ ರಾಜ್ಯದ ಚಮೋಲಿ ಜಿಲ್ಲೆಯ ಈ ಹಳ್ಳಿ ಸಮುದ್ರಮಟ್ಟದಿಂದ ೩೨೦೦ ಮೀಟರ್ ಅಂದರೆ ಸರಾಸರಿ ಸುಮಾರು ೧೦,೨೨೯ ಅಡಿ ಎತ್ತರದಲ್ಲಿದೆ. ರಾಷ್ಟ್ರೀಯ ಹೆದ್ದಾರಿ ೫೮ರ ತುಟ್ಟ ತುದಿ ಈ ಗ್ರಾಮ.

೧೯೫೦ಕ್ಕೂ ಮೊದಲು ಟಿಬೆಟ್ಟಿನೊಂದಿಗೆ ವಾಣಿಜ್ಯ ಸಂಬಂಧ ಹೆಣೆದುಕೊಂಡಿದ್ದ ಇಲ್ಲಿಯ ಮಂದಿ, ಬೇಸಿಗೆಯ ದಿನಗಳಲ್ಲಿ ಟಿಬೆಟ್ಟಿಗೆ ಪಯಣಿಸಿ ವ್ಯಾಪಾರ ನಿರತರಾಗುತ್ತಿದ್ದರು.೧೯೫೦ರಲ್ಲಿ ಚೀನಾ ಎಂಬ ದೈತ್ಯ ಟಿಬೆಟ್ಟನ್ನು ಆಕ್ರಮಿಸಿಕೊಂಡ ಮೇಲೆ, ಇವರ ಟಿಬೆಟ್ ಸಂಚಾರ ಕೊನೆಯಾಯಿತು.ಅಲ್ಲಿಯವರೆಗೂ ಇಲ್ಲಿಗೆ ಕೇವಲ ೩೪ ಕಿಲೋಮೀಟರ್ ದೂರದಲ್ಲಿದ್ದ ಗಡಿ ಹೆಸರಿಗೆ ಮಾತ್ರಾ ಗಡಿ! ಅಲ್ಲಿ ಅಂತಹ ಗಡಿಬಿಡಿ ಇರುತ್ತಿರಲಿಲ್ಲ.ಇವರದೂ ಟಿಬೆಟ್ಟಿಗೆ ಮುಕ್ತ ಸಂಚಾರ ಇರುತ್ತಿತ್ತು.ಹಾಗಾಗಿ ಮಾನಾ ಒಂದು ಪುಟ್ಟ ವ್ಯಾಪಾರ ಕೇಂದ್ರವೇ ಆಗಿತ್ತು.

೧೯೬೪ರಲ್ಲಿ ಚೀನಾ ಭಾರತದೊಂದಿಗೆ ವಿಶ್ವಾಸದ್ರೋಹಗೈದು, ಯುದ್ದಕ್ಕಿಳಿದ ಮೇಲೆ ಗಡಿ ಗದ್ದಲ ಬಿರುಸಾಯಿತು.ಇವರ ಬದುಕು ದುಸ್ತರವಾಯಿತು. ನಂತರ ಈ ಜನಾಂಗ ಜೀವನೋಪಾಯಕ್ಕಾಗಿ, ಕುರಿ ಸಾಕಣೆ,ಉಣ್ಣೆ ನೇಯ್ಗೆಯಂತಹ ಕಾಯಕಕ್ಕೆ ಅಂಟಿಕೊಂಡಿತು. ನಂತರದ ದಿನಗಳಲ್ಲಿ ಹೆಚ್ಚಿದ ಪ್ರವಾಸೋದ್ಯಮವೂ ಇವರ ಬದುಕಿಗೆ ಕಿರು ಆಸರೆಯಾಯಿತು.

ಇದೇ ಊರಿನ ತುದಿಯಲ್ಲಿರುವ ಟೀ ಅಂಗಡಿಯೊಂದರಲ್ಲಿ ಕನ್ನಡವೂ ಸೇರಿದಂತೆ ಭಾರತದ ಬಹುತೇಕ ಭಾಷೆಗಳಲ್ಲಿ, ಭಾರತದ ಕೊಟ್ಟ ಕೊನೆಯ ಚಹಾ ಅಂಗಡಿಯೆಂಬ ಫಲಕವನ್ನು ತೂಗು ಬಿಡಲಾಗಿದೆ.

ನವೆಂಬರ್ ತಿಂಗಳಿನಿಂದ ಏಪ್ರಿಲ್ ತಿಂಗಳವರೆಗೆ ಈ ಹಳ್ಳಿಯ ಜನರು ಗ್ರಾಮವನ್ನು ತೆರವುಗೊಳಿಸಿ ತಮ್ಮ ಕುರಿಮಂದೆಯೊಡನೆ ಅಲ್ಲಿಂದ ತಗ್ಗಿನ ಪ್ರದೇಶಗಳಾದ ಗೋಪೇಶ್ವರ ಜೋಶಿಮಠ, ಚಮೋಲಿ,ಶ್ರೀನಗರಗಳಿಗೆ ವಲಸೆ ಬರುತ್ತಾರೆ.

ಮಾನಾವೊಂದು ಪುರಾತನ ಗ್ರಾಮ.ಪುರಾಣ ಸಾಹಿತ್ಯದಲ್ಲಿ ಇದನ್ನು ಮಣಿಭದ್ರಪುರವೆಂದು ಕರೆಯಲಾಗಿದೆ.ಇದು ನಮಗೆ ಮುಖ್ಯವೆನಿಸುವುದು ಇದು ಮಹರ್ಷಿ ವೇದವ್ಯಾಸರ ಕರ್ಮಭೂಮಿಯಾಗಿ.

ನಾನು, ನನ್ನ ಪತ್ನಿ ಮತ್ತು ನನ್ನ ಸೋದರಿಯರೊಡನೆ ೨೦೧೧ರ ಸೆಪ್ಟೆಂಬರ್ ತಿಂಗಳಲ್ಲಿ ಇಲ್ಲಿಗೆ ಭೇಟಿಕೊಟ್ಟ ನೆನಪಾಯಿತು.ಇಲ್ಲಿ ನಾವು ಮೇಲೆಬಿದ್ದು ಭೇಟಿಕೊಡಲು ಹುಡುಕಿದ ಸ್ಥಳ ವ್ಯಾಸಗುಹೆ.

ಹೌದು, ಇಲ್ಲಿ ಕುಳಿತೇ ವ್ಯಾಸರು ಮಹಾಭಾರತ ಬರೆದರಂತೆ.ವೇದಗಳನ್ನು ವಿಭಾಗಿಸಿದರಂತೆ. ಬಾದರಾಯಣರೆನ್ನಿಸಿ ಬ್ರಹ್ಮಸೂತ್ರ ರಚಿಸಿದರಂತೆ. ಪುರಾಣಸಂಹಿತೆ ರಚಿಸಿದರಂತೆ.ಹದಿನೇಳು ಪುರಾಣ ಬರೆದರಂತೆ.ಆದರೂ ತೃಪ್ತಿಯಾಗದೇ ಹದಿನೆಂಟನೇ ಪುರಾಣವಾಗಿ ಶ್ರೀಮದ್ಭಾಗವತವನ್ನು ರಚಿಸಿದರಂತೆ. ಹಾಗಾಗಿ ನಮಗೆ ಮೊದಲು ವ್ಯಾಸಗುಹೆ ನೋಡಲೇಬೇಕಿತ್ತು. ನಾವು ಮಾನಾದ ಪ್ರವೇಶದಲ್ಲಿರುವ,ಜಿಲ್ಲಾ ಪಂಚಾಯತ್ ನಿರ್ಮಿಸಿದ ಪ್ರವೇಶ ದ್ವಾರದ ಬಳಿ ಇಳಿದು ಮುಂದೆ ಬರುತ್ತಿದ್ದಂತೆ ಎರಡು ದಾರಿ ಎದುರಾಯಿತು.ಯಾರನ್ನೋ ಕೇಳಿದಾಗ ಬಲಗಡೆಯ ದಾರಿ ವ್ಯಾಸಗುಹೆ,ಗಣಪತಿ ಗುಹೆಗೆ ಹೋಗುವುದೆಂದೂ,ಎಡಗಡೆಯ ದಾರಿ ಭೀಮಪುಲ್,ಸರಸ್ವತೀ ನದಿ, ಮುಂದೆ ವಸುಧಾರಾ,ಅಲಕ್ಪುರಿ ಸ್ವರ್ಗಾರೋಹಿಣಿ…ಎಂದೆಲ್ಲ ಹೇಳಿದರು.

ನಾವು ಮೊದಲು ವ್ಯಾಸರು,ಮಹಾಭಾರತ ಬರೆದ ವ್ಯಾಸಗುಹೆಯತ್ತ ಹೊರಟೆವು.ಎತ್ತರದ ಬೆಟ್ಟದ ಪಕ್ಕೆಯಲ್ಲಿ,ಅಕ್ಷರದೇವತೆಯು ತನ್ನ ಸೊಂಟದಲ್ಲಿ ವ್ಯಾಸರೆಂಬ ಮಗುವನ್ನು ಹೊತ್ತುಕೊಂಡಂತೆ ಅದರ ಪಕ್ಕೆಯಲ್ಲಿತ್ತು ವ್ಯಾಸಗುಹೆ.

ನಮ್ಮನ್ನು ನಿಜಕ್ಕೂ ಚಕಿತಗೊಳಿಸಿದ್ದೆಂದರೆ ಅದರ ಆಕಾರ! ಅದು ಓಲೆಗರಿಯ ಕಟ್ಟುಗಳನ್ನು ಪೇರಿಸಿ ಇಟ್ಟಂತಿದ್ದ ಒಂದು ದೊಡ್ಡ ಬಂಡೆ.ಪ್ರಾಯಶಃ ಮೂರ್ನಾಲ್ಕು ಅಡಿ ಎತ್ತರ,ಎರಡು ಅಡಿ ಅಗಲದ ಧ್ವಾರ.ಒಳಗೆ ಸುಮಾರು ಆರು ಎಂಟು ಅಡಿ ವಿಶಾಲವಾದ ಕೊಠಡಿಯಂತಹ ಜಾಗ.ಅಲ್ಲಿ ಒಂದು ಭಗವಾನ್ ವೇದವ್ಯಾಸರ ಪ್ರತಿಮೆ. ಒಳಗೆ ಹೋಗಿ ಕುಳಿತುಕೊಳ್ಳುತ್ತಿದ್ದಂತೆಯೇ ಮೈಯೆಲ್ಲ ರೋಮಾಂಚನ! ಅದೇನೋ ಪುಳಕ! ಹೇಳಲಾರದ ಚೈತನ್ಯದ ಹರಿವು ನಮ್ಮೆದೆಯಲ್ಲಿ ಹರಿಯುತ್ತಿರುವ ಭಾವ! ( ಹೆಚ್ಚಿನ ವಿವರಣೆ ಈಗ,ಇಲ್ಲಿ ಅಸಾಧ್ಯ)

ಗುಹೆಯ ಹೊರಗೆ ಗುಹೆಯ ವಿವರಗಳನ್ನು ಬಂಡೆಯಮೇಲೇ ಕೆತ್ತಿದ್ದಾರೆ. ಅದರಲ್ಲಿ ಇದು ೫೧೧೧ ವರ್ಷದಷ್ಟು ಪುರಾತನ ಗುಹೆ ಎಂದು ೨೦೦೩ರ ದಿನಾಂಕ ಹಾಕಿ ಬರೆದಿದ್ದಾರೆ.ಅದರ ಪಕ್ಕದಲ್ಲಿ ಇನ್ನೊಂದಿಷ್ಟು ಶಿಲಾಲೇಖ.ಅದರಲ್ಲಿ ಒಂದು, “ನಾರಾಯಣಂ ನಮಸ್ಕೃತ್ಯಂನರಂಚೈವ ನರೋತ್ತಮಂ….” ಅದರ ಕೆಳಗೆ ಇನ್ನೊಂದು, ಬ್ರಹ್ಮನದ್ಯಾಂಸರಸ್ವತ್ಯಾಮಾಶ್ರಮಃ…..” ಮೂರನೆಯದು ತಸ್ಮಿನ್ ಸ್ವ ಆಶ್ರಮೋ ವ್ಯಾಸೋ…”. ವ್ಯಾಸರು ಈ ಗುಹೆಯಲ್ಲಿ ಕುಳಿತೇ ಅಕ್ಷರ ನದಿಯನ್ನು ಸೃಷ್ಟಿಸಿದರಂತೆ! ಕಾವ್ಯಗಂಗೆಯನ್ನು ಹರಿಸಿದಳಂತೆ.(ಇಲ್ಲಿ ಹೆಚ್ಚು ವಿವರ ಹೇಳಲು ಅವಕಾಶವಿಲ್ಲವಾಗಿ ಸುಮ್ಮನಾಗುತ್ತೇನೆ.) ನಾವು ಅಲ್ಲಿಂದ ಗಣಪತಿ ಗುಹೆಗೆ ಬಂದೆವು.ಸುಮಾರು ಮುನ್ನೂರು ಮೀಟರ್ ದೂರದಲ್ಲಿ ರುವ ಅದರಲ್ಲಿ ಕುಳಿತೇ,ವ್ಯಾಸರು ಅಲ್ಲಿಂದ ಹೇಳುತ್ತಿದ್ದ ಶ್ಲೋಕಗಳನ್ನು ಗಣಪತಿ ಬರೆಯುತ್ತಿದ್ದನಂತೆ( ವಿವರ ಇನ್ನೊಮ್ಮೆ) ಕೆಲವೊಮ್ಮೆ ಎದುರಿಗೆ ಹರಿಯುತ್ತಿದ್ದ ಸರಸ್ವತಿ ನದಿಯ ಗದ್ದಲದಿಂದ ಕೇಳಿಸದೇ ತೊಂದರೆಯಾಗುತ್ತಿತ್ತಂತೆ. ಅದಕ್ಕೇ ಸರಸ್ವತಿಗೆ ಗುಪ್ತಗಾಮಿನಿಯಾಗೆಂದು ವ್ಯಾಸರು ಶಾಪವಿತ್ತರಂತೆ!

ಅಲ್ಲಿಂದ ಕೆಳಗಿಳಿದು ನಾವು ಎಡಕ್ಕೆ ತಿರುಗಿ ಸರಸ್ವತಿ ನದಿಯೆಡೆಗೆ ಬಂದೆವು.ಅಲ್ಲಿ ಸ್ವರ್ಗಾರೋಹಣಕ್ಕೆ ಹೊರಟ ಪಾಂಡವರ ಪೈಕಿ ದ್ರೌಪದಿಗೆ ಸರಸ್ವತಿಯನ್ನು ದಾಟಲು ಕಷ್ಟವಾದಾಗ ಭೀಮ ಪಕ್ಕದ ಪರ್ವತದ ಬಂಡೆಯೊಂದನ್ನು ನದಿಗೆ ಅಡ್ಡಲಾಗಿ ಸೇತುವೆಯಂತೆ ಇರಿಸಿದನಂತೆ! ಅದು ಇಂದಿಗೂ ಸರಸ್ವತಿಗೆ ಸೇತುವೆ! ನಾವು ಅದರ ಮೇಲೆ ನಿಂತು ಸರಸ್ವತಿಯ ಫೋಟೋ ತೆಗೆದೆವು.ಅಲ್ಲಿಯೇ ಪಕ್ಕದಲ್ಲಿ ಸರಸ್ವತೀ ಗುಡಿ.ಅದರಾಚೆಗೇ ನರ ನಾರಾಯಣರ ಮಾತೆ ಶ್ರೀಮಾತೆಯ ಗುಡಿ.ನಮಗೆ ಕತ್ತಲೆಯಾದ್ದರಿಂದ ನಾವು ಮುಂದೆ ಹೋಗಲಾಗಲಿಲ್ಲ. ಅಲ್ಲಿಂದ ಮುಂದೆ ಅಷ್ಟವಸುಗಳು ತಪಸ್ಸು ಮಾಡಿದ ತಾಣ, ಅಲಕಾನಂದಾ ನದಿಯ ವಸುಧಾರಾ ಜಲಪಾತ , ಪ್ರತಿ ಏಕಾದಶಿಯಂದು ತ್ರಿಮೂರ್ತಿಗಳು ಸ್ನಾನಗೈದು ತಪೋನಿರತರಾಗುವ ಸತೋಪಂಥ್ ಸರೋವರ, ತಿರುಪತಿ ತಿಮ್ಮಪ್ಪನಿಗೆ ಕುಬೇರ ಸಾಲಕೊಟ್ಟ ತಾಣವೆಂದು ಹೇಳಲಾಗುವ ಅಲಕ್ಪುರಿ, ಲಕ್ಷ್ಮಿ ತಪಗೈದ ಲಕ್ಷ್ಮೀವನ, ಪಾಂಡವರು ಒಬ್ಬೊಬ್ಬರಾಗಿ ಕುಸಿದು ಬಿದ್ದ ಸ್ವರ್ಗಾರೋಹಿಣಿ ಪರ್ವತದ ಹಲವು ತಾಣ.

ಇನ್ನು ಪಕ್ಕದಲ್ಲೇ ನರನಾರಾಯಣ ಪರ್ವತ, ನೀಲಕಂಠ ಪರ್ವತ, ಸರಸ್ವತಿ ಅಲಕಾನಂದೆಯನ್ನು ಬೆರೆಯುವ ವಿಷ್ಣುಪ್ರಯಾಗ, ಬದರೀನಾಥ, ಬಿಸಿನೀರಿನ ಕುಂಡ, ಬ್ರಹ್ಮಕಪಾಲ,ನಾರದ ಶಿಲೆ ಹೇಳುತ್ತಾಹೋದರೆ ದೊಡ್ಡ ಗ್ರಂಥ.

ಇಂತಹ ಪುಣ್ಯಸ್ಥಳದಲ್ಲಿ ದೇಶಕಾಯುವ ಯೋಧರೊಂದಿಗೆ ದೀಪಾವಳಿ ಆಚರಿಸುವ ಮೋದಿ ನಿಜಕ್ಕೂ ಅಭಿನಾಂದನಾರ್ಹರು,ಅಭಿವಂದನಾರ್ಹರು.

ದೀಪಾವಳಿ ಕಳೆಯುತ್ತಿದ್ದಂತೆ, ಜಗದ್ರಕ್ಷಕ ಬದರೀನಾಥನೇ ಬದರಿಯನ್ನು ಬಿಟ್ಟು ಜೋಶೀಮಠಕ್ಕೆ ಬರುತ್ತಾನೆ ಚಳಿ ತಡೆಯದೇ!! ತಲತಲಾಂತರದಿಂದ ಮಾನಾದಲ್ಲೇ ವಾಸಿಸುವ ಭೋಟಿಯಾ ಜನರೂ ಗೋಪೇಶ್ವರಕ್ಕೆ ಬರುತ್ತಾರೆ! ಆದರೆ ನಮ್ಮ ಸೈನಿಕರು ಮಾತ್ರ ಅಲ್ಲಿನ ಹೆಪ್ಪುಗಟ್ಟದ ಹಿಮದ ನಡುವೆ ಬರಿ ಚಳಿ ಮತ್ತು ಬಿಳಿ ಹಿಮದ ನಡುವೆ ವಾಸಿಸಬೇಕು.ಅದೂ ಕ್ಷಣ ಮೈಮರೆಯುವಂತಿಲ್ಲ.ಮರೆತರೆ ಕೊಲ್ಲಲೆಂದೇ ಶತೃ ಬಾಯ್ದೆರೆದು ನಿಂತಿರುತ್ತಾನೆ!! ಈ ಚಳಿಯಲ್ಲಿ ಅವರು ಗಡಿ ಕಾಯುತ್ತಿದ್ದರಷ್ಟೇ ನಾವಿಲ್ಲಿ ನೆಮ್ಮದಿಯಿಂದ ದೀಪಾವಳಿ ಆಚರಿಸುವುದು!! ಅವರು ಅಲ್ಲಿ ಗುಂಡು ಹಾರಿಸುತ್ತಿದ್ದರೇ ನಾವಿಲ್ಲಿ ಪಟಾಕಿ ಹಾರಿಸುವುದು! ನಾವಿಲ್ಲಿ ಬೆಚ್ಚಗೆ ಹಬ್ಬದ ಹೋಳಿಗೆ ತಿನ್ನುತ್ತಿದ್ದಾಗ ಅವರಲ್ಲಿ ಚಳಿಯಲ್ಲಿ ಗುಂಡೇಟು ತಿನ್ನುತ್ತಿರುತ್ತಾರೆ!

ಹಾಗಾಗಿ ನಮ್ಮ ಶುಭಾಶಯಗಳೆಲ್ಲ ಈ ಬಾರಿ ಮೀಸಲಾಗಲಿ ನಮ್ಮ ಸೈನಿಕ ಮಿತ್ರರಿಗೆ.ಇಂತಹ ಪವಿತ್ರ ತಾಣದಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸುವ ದಿಟ್ಟ ನಿರ್ಧಾರ ಕೈಗೊಂಡ ಪ್ರಧಾನ ಮಂತ್ರಿ ನೂರ್ಕಾಲ ಬಾಳಲಿ.ಜೈ ಜವಾನ್.

ಗಜಾನನ ಶರ್ಮ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!