ಅಂಕಣ

ಸುದ್ದಿ ಮಾದ್ಯಮಗಳ ಸೆಣಸಾಟ

            ಅದು 2011 ವರ್ಷದ ಮಾರ್ಚ 11, ಶುಕ್ರವಾರ ಕನ್ನಡಿಗರಿಗೊಂದು ಪರ್ವದ ದಿನವಾಗಿತ್ತು.  ವಿಶ್ವಮಟ್ಟದಲ್ಲಿ ನಾನಾ ಕ್ಷೇತ್ರಗಳಲ್ಲಿ ಹಲವರು ವಿಕ್ರಮಗಳನ್ನು ಸಾಧಿಸಿ ಪ್ರಪಂಚವನ್ನು ಮೆಟ್ಟಿ ನಿಂತ ಕೋಟ್ಯಂತರ ಕನ್ನಡಿಗರ ಡಿಂಡಿಮವು ಗಡಿನಾಡಿನ ಬೆಳಗಾವಿಯಲ್ಲಿ ಮೊಳಗುವ ದಿನ.  ನಿಮಗೆಲ್ಲ ಗೊತ್ತು ಅವತ್ತು ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ 2011 ರ ತೇರು, ಅದೂ 25 ವರ್ಷಗಳ ನಂತರ ಬೆಳಗಾವಿಯಲ್ಲಿ ಎರಡನೇ ಬಾರಿ ಲಕ್ಷಾಂತರ ಕನ್ನಡಿಗರು ಬೆಳಗಾವಿಗೆ ಹರಿದು ಬಂದಿದ್ದರು.   ಇನ್ನೂ ತಮ್ಮ ಕೆಲಸ ಕಾರ್ಯ ಬಿಟ್ಟು ಬರಲು ಸಾಧ್ಯವಾಗದವರು ಮನೆಯಲ್ಲಿಯೇ ಕುಳಿತು ಅಥವಾ ಆಫೀಸಿನಲ್ಲೋ, ಅಂಗಡಿಗಳಲ್ಲೋ ಟಿ.ವಿ. ಮುಂದೆ ಕುಳಿತು ವಿಕ್ಷಿಸಿ ಆನಂದ ಪಡುವ ಕನ್ನಡಿಗರು ಬೇರೆ.  ಯಾವ ವಾಹಿನಿಯಲ್ಲಿ ಬೆಳಗಾವಿಯಿಂದ ನೇರ ಪ್ರಸಾರ ಬಿತ್ತರಗೊಳ್ಳುತ್ತಿದೆ ಅಂತ ರಿಮೋಟ ಹಿಡಿದು ಚಾನೆಲ್ ಕಿತ್ತಾಕಿದ್ದೆ ಕಿತ್ತಾಕಿದ್ದು ಆಗ ಬಹುಪಾಲು ಸುದ್ದಿ ವಾಹಿನಿಗಳೇ ಹೆಚ್ಚಾಗಿ ನೇರ ಸುದ್ದಿಯನ್ನು ಬಿತ್ತರಿಸುತ್ತಿದ್ದವು.  ಈಗಂತೂ ತಾಂತ್ರಿಕತೆ ತುಂಬಾ ಮುಂದುವರೆದಿದೆ.  ಯಾವ ಸ್ಥಳದಲ್ಲೂ ಯಾವ ಸಮಯದಲ್ಲಿ ಏನೇನಾಗಿದೆ ಎಂಬುದನ್ನು ತಡ ಮಾಡದೆ ಜನರಿಗೆ ತಲುಪಿಸುವುದರಲ್ಲಿ ಸುದ್ದಿ ವಾಹಿಣಿಗಳ ಕಾಂಪಿಟೇಷನ್.  ಸುದ್ದಿಗೆ ಸ್ವಲ್ಪ ಉಪ್ಪು, ಖಾರ ಸೇರಿಸಿ ಸ್ವಲ್ಪ ಹೆಚ್ಚೇ ಹೇಳುವ ಚಟ (ಕೆಲವೊಂದು) ಸುದ್ದಿ ವಾಹಿನಿಗಳಿಗೆ ಯಾಕಂದ್ರೆ ಉಪ್ಪು-ಖಾರ ಇದ್ದರೆ ತಿನ್ನುವವರಿಗೆ (ವೀಕ್ಷಕರಿಗೆ) ರುಚಿಕರವಾಗಿರುತ್ತದೆ ಅಲ್ಲವೇ?

            ಅದರಲ್ಲೂ ಹೇಳಿ-ಕೇಳಿ ವಿಶ್ವ ಕನ್ನಡ ಸಮ್ಮೇಳನ ಕೇಳಿದಿರಾ ನಮ್ಮ ಸುದ್ದಿ ವಾಹಿನಿಗಳ ವರದಿಗಾರರ ಹರಿದಾಟ?  ಒಂದು ವಾರದ ಮೊದಲೇ ತಮ್ಮ ತಮ್ಮ ವಾಹಿಣಿಗಳ ವಾಹನ ಹತ್ತಿಕೊಂಡು ಎಕ್ಸಟ್ರಾ ಎರೆಡೆರೆಡು ವರದಿಗಾರರು ಬೆಳಗಾವಿಗೆ ಬಂದಿದ್ದರು ಮತ್ತು ವರದಿ ಕೊಡಲು ಪ್ರಾರಂಭಿಸಿದ್ದರು ಕೂಡ.  ಕೋಟ್ಯಂತರ ಜನರಿಂದ ಕಿಕ್ಕಿರಿದ ಬೆಳಗಾವಿ ಸಮ್ಮೇಳನಕ್ಕೆ ಸಿದ್ದವಾಯಿತು.  ಎರಡು ದಿನ ಮೊದಲಿಂದಲೇ ಸುದ್ದಿ ವಾಹಿನಿಗಳು ನೇರ ಪ್ರಸಾರದ ಜಾಹಿರಾತನ್ನು “ಕೇವಲ ನಮ್ಮ ಚಾನೆಲ್‍ನಲ್ಲಿ ಮಾತ್ರ” ಅಂತಾ ತೋರಿಸಿದ್ದೆ ತೋರಿಸಿದ್ದು.  ಅಂದು ಬೆಳಿಗ್ಗೆ ಪ್ರಾರಂಭವಾಯಿತು ವಾಹಿನಿಯ ನ್ಯೂಸ್ ಡೆಸ್ಕನಲ್ಲಿ ಸುದ್ದಿಯ ಕಾವು.  ಡೆಸ್ಕ್’ನಿಂದ ಹಿರಿಯ ವರದಿಗಾರರು ಪ್ರಶ್ನೆ ಕೇಳಿದ್ದಕ್ಕೆಲ್ಲ ಬೆಳಗಾವಿಯಿಂದ ವಾಹಿನಿಯ ಪ್ರತಿನಿಧಿಗಳು ಉತ್ತರ ಕೊಡುತ್ತಾ ಹೋಗಬೇಕು.  ಆ ಸ್ಥಳದಲ್ಲಿ ನಡೆದಿದ್ದನ್ನು, ನಡೆಯುತ್ತಿದ್ದುದ್ದನ್ನು ಹಾಗೂ ನಡೆಯಬೇಕಾದುದರ ನಿಖರ ಮಾಹಿತಿಯನ್ನು ಕೊಡಬೇಕು.  ಅದನ್ನು ಕ್ಯಾಮೆರಾಮನ್ ಚಿತ್ರಿಸುತ್ತಾ ಇರಲೇಬೇಕು.  ಕ್ಯಾಮೆರಾದ ವೈರ ಅತ್ತ-ಇತ್ತ ಎತ್ತಿ ಹಿಡಿದು ದೃಶ್ಯಗಳನ್ನು ಸ್ಪಷ್ಟವಾಗಿ ಚಿತ್ರೀಕರಿಸಿ ಅದನ್ನು ತಮ್ಮ ತಮ್ಮ ವಾಹಿನಿಗೆ ತಲುಪಿಸುವ ಪರಿ ಹೇಳ ತೀರದು.  ವಾಹಿನಿ ಪ್ರತಿನಿಧಿಗಳನ್ನು ನೋಡುತ್ತಿದ್ದರೆ, ಇದೇನಪ್ಪ ಇಷ್ಟು ಕಷ್ಟದ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಜನರಿಗೆ ಅನ್ನಿಸದೇ ಇರದು.  ಆದರೂ ಆ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಜನರಿಗೆ ತಲುಪಿಸಬೇಕೆಂಬ ಮತ್ತು ತಮ್ಮ ವಾಹಿನಿಯ ಮುಖ್ಯಸ್ಥರಿಂದ ಶಭಾಸ್‍ಗಿರಿ ಪಡೆಯುವ ಹಂಬಲ ಕೂಡ ಪ್ರತಿನಿಧಿಗಳಿಗೆ.  ಯಾವುದೇ ವಾಹಿನಿಯ ಮುಖ್ಯಸ್ಥರು ತಮ್ಮ ಪ್ರತಿನಿಧಿಗಳಿಂದ ಬಯಸುವುದು ಬೇರೆನು ಅಲ್ಲ.  ವಾರದಲ್ಲಿ ಎರಡು ವಿಶೇಷ ಕತೆಗಳನ್ನು.  ಅದಕ್ಕೆ ವಾಹಿನಿಗಳು ಬಳಸುವ ವಿಶೇಷ ಪದ “SPECIAL STORY” ಎಂದು ಇತ್ತೀಚಿನ ದಿನಗಳಲ್ಲಂತೂ ಸುದ್ದಿ ವಾಹಿಣಿಗಳು ಎಂತೆಂತ ಸುದ್ದಿಗಳನ್ನು ಬಿತ್ತರಿಸುತ್ತಿವೆ ಎಂದರೆ, ಆ ಸುದ್ದಿ ನೋಡುತ್ತಿದ್ದರೆ “ವಾಹಿನಿಗಳಿಗೆ ಬೇರೆ ಯಾವ ಸುದ್ದಿಯು ಸಿಗಲಿಲ್ಲವಾ” ಎಂದೆನಿಸಲು ಬಹಳ ಹೊತ್ತು ಬೇಕಾಗುವುದಿಲ್ಲ.  ಇಲ್ಲಿ ಬಿಡಿ ಡೆಸ್ಕ್’ನಲ್ಲಿ ಕುಳಿತವರಿಗೆ ಯಾವುದೇ ಸುದ್ದಿ ಸಿಗದಿದ್ದರೆ ಅವರಾದ್ರೂ ಏನು ಮಾಡಿಯಾರು.  ಹೇಗಾದರೂ ಮಾಡಿ ಯಾವುದಾರೊಂದು ಸುದ್ದಿ ಹೇಳಿ ಅರ್ಧ ಗಂಟೆ ಕಳೆಯಬೇಕು ಎನ್ನುವುದೊಂದೆ ಅವರ ತಲೆಯಲ್ಲಿ.  ಈಗಂತು ಅದು ಹದಿನೈದು ನಿಮಿಷಕ್ಕೆ ಬಂದು ತಲುಪಿದೆ.  ಉಳಿದ ಹದಿನೈದು ನಿಮಿಷ ಪ್ರತ್ಯೇಕವಾಗಿ ಜಾಹೀರಾತಿಗೆ ಮೀಸಲು.  ಅದರಲ್ಲೇ ಏನಾದ್ರು ರಾಜಕೀಯ ಚಟುವಟಿಕೆಗಳು ಹೆಚ್ಚಿದವೆಂದರೆ ಸಾಕು ವಾಹಿನಿಗಳಲ್ಲಿ ಬೇರೆ ಯಾವ ಸುದ್ದಿಗಳೇ ಬರುವುದಿಲ್ಲ.  ಆ ಸಮಯದಲ್ಲಿ ಎಲ್ಲ ಬೇರೆ ಸುದ್ದಿಗಳು ಮುಚ್ಚಿ ಹೋಗುತ್ತವೆ.  ರಾಜಕೀಯದ ರಭಸದಲ್ಲಿ.

            ಅವತ್ತು ಬೆಳಿಗ್ಗೆ ಬೆಳ್ಳಿಯ ರಥವೇರಿದ ಭುವನೇಶ್ವರಿ ಬೆಳಗಾವಿಯ ಪ್ರಮುಖ ಬೀದಿಯಲ್ಲಿ ಭವ್ಯ ಬೆರವಣಿಗೆಯಲ್ಲಿ ಸಂಚರಿಸಿ ಸಮ್ಮೇಳನದ ಕೇಂದ್ರ ಬಿಂದುವಾದ ಚೆನ್ನಮ್ಮಾ ವೇದಿಕೆಯತ್ತ ಸಾಗುತ್ತಿದ್ದರೆ ಕನ್ನಡಿಗರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.  ಆ ಸುಂದರ ಕನ್ನಡೋತ್ಸಾಹವನ್ನು ದೃಶ್ಯದೊಂದಿಗೆ ಸೆರೆ ಹಿಡಿದು ಜನರಿಗೆ ತಲುಪಿಸುವ ಕೆಲಸ ಕೆಲ ಪ್ರತಿನಿಧಿಗಳಿಗೆ ಹಂಬಲವಾದರೆ ಇನ್ನೂ ಕೆಲವರಿಗೆ ಕರ್ಮವೆಂದೆನಿಸಿದ್ದೂ ಉಂಟು, ಏಕೆಂದರೆ ಯಾವುದೆ ಸುದ್ದಿ ಅಥವಾ ಇನ್ನಾವುದೋ ಕಾರ್ಯಕ್ರಮದ ನೇರ ಪ್ರಸಾರವನ್ನು ಯಾವುದೇ ತೊಂದರೆಗಳಿಲ್ಲದೇನೆ ಜನರಿಗೆ ತಲುಪಿಸುವುದು ಅಷ್ಟು ಸುಲಭದ ಕೆಲಸವಲ್ಲ.  ಆ ಸಮಯದಲ್ಲಿ ವಾಹಿನಿಯ ನಿರೂಪಕರಿಗೂ ವರದಿಗಾರರಿಗೂ ಹಾಗೂ ವಾಹಿನಿಯ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿರುವ ಟೆಕ್ನಿಶಿಯನಗಳ ಮದ್ಯ ಭಾರಿ ಹೊಂದಾಣಿಕೆ ಬೇಕಾಗುತ್ತದೆ. ಒಂದು ವೇಳೆ ಈ ಮೂವರಲ್ಲಿ ಒಬ್ಬರ ನಿಯಂತ್ರಣ ತಪ್ಪಿದರೂ ಅವಘಡ ನಡೆದು ಹೋಗುತ್ತದೆ.  ಅಲ್ಲದೇ ವಾಹಿನಿಯು ಮುಜುಗರಕ್ಕೆ ಒಳಗಾಗಬೇಕಾಗುತ್ತದೆ.  ಏಕೆಂದರೆ ಕೋಟಿ ಕೋಟಿ ಕಣ್ಣುಗಳು ಆ ಕಾರ್ಯಕ್ರಮ ವೀಕ್ಷಿಸುತ್ತಿರುತ್ತಾರೆ.  ಮೊನ್ನೆ ಒಂದು ಸುದ್ದಿ ವಾಹಿಣಿಯಲ್ಲಿ ಟೆಕ್ನಿಶಿಯನ ನಿಯಂತ್ರಣ ತಪ್ಪಿ ನಿರೂಪಕಿಯ ಮೇಕಪ್ ಮಾಡುವ ಮತ್ತು ಸ್ಟುಡಿಯೋದಲ್ಲಿ ಕುರ್ಚಿಗಳನ್ನು ಎತ್ತಿ ಬೇರೆಡೆ ಇಡುವ ದೃಶ್ಯಗಳು ಪ್ರಸಾರಗೊಂಡು ನಗೇ ಪಾಟಲಿಗೆ ಗುರಿಯಾಯಿತು.  ಅದು ವಾಹಿಣಿಯ ಸಿಬ್ಬಂದಿಗಳಿಗೆ ಕೋಪ ತಂದರೂ ವೀಕ್ಷಕರಿಗೆ ನಗು ತರುವುದು ಗ್ಯಾರಂಟೀ……..

            ಅದಿರಲಿ, ಭುವನೇಶ್ವರಿಯ ರಥದ ಜೊತೆಗೆ ಚೆನ್ನಮ್ಮ ವೇದಿಕೆ ತಲುಪಿದ ಭವ್ಯ ಮೆರವಣಿಗೆ ಮುಂದೆ ಉದ್ಘಾಟನೆಗೊಂಡು ಕಾರ್ಯಕ್ರಮ ಪ್ರಾರಂಭವಾಗಿ ಸಮ್ಮೇಳನದ ಎಲ್ಲ ಕಾರ್ಯಕ್ರಮಗಳು ವಾಹಿನಿಗಳಲ್ಲಿ ನೇರ ಪ್ರಸಾರ ಗೊಳ್ಳುತ್ತಿದ್ದವು,  ಯಾವಾಗಲೂ ಬ್ರೇಕಿಂಗ್ ನ್ಯೂಸ್‍ಗಳಿಗೆ ಕಾಯುತ್ತಾ ಇರುತ್ತಿರುವ ಸುದ್ದಿವಾಹಿನಿಗಳು ಅವತ್ತು ಬೇರೆ ಯಾವ ಬ್ರೇಕ್ಕಿಂಗ್ ನ್ಯೂಸ್‍ಗಳಿಗೆ ತಲೆಗೊಡದೇ ನಮ್ಮ ಕನ್ನಡ ಸಮ್ಮೇಳನವನ್ನೇ ತಮ್ಮ ವಾಹಿನಿಗಳಲ್ಲಿ ಅಲಂಕೃತ ಗ್ರಾಫಿಕ್ಸ್ ಬಳಸಿಕೊಂಡು ಬಿತ್ತರಿಸುತ್ತಿದ್ದವು.  ಅನಿಮೇಶನ್ ತಂತ್ರಜ್ಞಾನ ಮುಂದುವರೆದಂತೆ ವಾಹಿನಿಗಳು ಪರದೆಯ ಮೇಲೆ ಸುದ್ದಿ ಬಿತ್ತರಿಸುವ ರೂಪವು ಕೂಡಾ ಅನೇಕ ಬದಲಾವಣೆಗಳನ್ನು ಕಂಡಿದೆ.  ಈಗ ಯಾವುದೆ ವಾಹಿನಿ ತೆಗೆದುಕೊಳ್ಳಿ ಅದರಲ್ಲಿ GRAPHICS ಹಾಗೂ VISUAL EFFECTS ಎಷ್ಟು ಮುಖ್ಯವೆಂದರೆ, ಅವು ವೀಕ್ಷಕರನ್ನು ತಮ್ಮ ವಾಹಿನಿಯತ್ತ, ಸೆಳೆಯುವಲ್ಲಿಯೂ ಮುಖ್ಯ ಪಾತ್ರ ವಹಿಸುತ್ತವೆ ಎಂದರೂ ತಪ್ಪಾಗಲಾರದು, ಅದರಲ್ಲಿ ಸುದ್ದಿ ವಾಹಿನಿಗಳಲ್ಲಿ GRAFICS , VISUAL EFFECTS ಗಳು ಇಲ್ಲವೆಂದರೆ ಅದು ನ್ಯೂಸ್ ಚಾನೆಲ್ಲೇ ಅಲ್ಲ ಅಂತ ಚಿಕ್ಕ ಮಗೂ ಕೂಡಾ ಹೇಳುತ್ತೇ.  ಕೆಲವೊಂದು ಸಮಯದಲ್ಲಿ ಸುದ್ದಿ ನೀಡಲು ಸುದ್ದಿ ವಾಹಿನಿ ಬಳಸುವ ನ್ಯೂಸ್ ಸ್ಕ್ರಾಲ್‍ಗಳು ಎಷ್ಟಿರುತ್ತವೆ ಎಂದರೆ ಪ್ರಸಾರವಾಗುತ್ತಿರುವ ದೃಶ್ಯಗಳೂ ಕೂಡಾ ಸ್ಕ್ರಾಲ್‍ನಲ್ಲಿ ಸಿಕ್ಕು ಮುಚ್ಚಿ ಹೋಗುತ್ತವೆ.  ಒಂದನ್ನು ಓದಬೇಕು ಅನ್ನುವಷ್ಟರಲ್ಲಿ ಇನ್ನೊಂದು ಅಷ್ಟರಲ್ಲೇ ಮತ್ತೊಂದು ಹೀಗೆ ಟಿ.ವಿ. ಪರದೆಯ ತುಂಬೆಲ್ಲಾ ಅಕ್ಷರಗಳದ್ದೆ ಕಾರುಬಾರು.

            ಅವತ್ತು ಕಾರ್ಯಕ್ರಮ ನೇರ ಪ್ರಸಾರವನ್ನು ನಾಮುಂದು ತಾಮುಂದು ಎಂದು ಪ್ರಾದೇಶಿಕ ಸುದ್ದಿವಾಹಿನಿಗಳು ನೀಡುತ್ತಿದ್ದರೆ ಅತ್ತ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿವಾಹಿನಿಗಳಲ್ಲಿ ಎನೋ ಒಂದು ಸಂಚಲನ ಶುರುವಾಯ್ತು,  ಅದು ಮಧ್ಯಾಹ್ನ 2 – 2.30 ರ ಹೊತ್ತು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸುದ್ದಿ ವಾಹಿನಿಗಳು ಬ್ರೇಕಿಂಗ್ ನ್ಯೂಸ್ ಒಂದನ್ನು ಬಿತ್ತರಿಸಲು ಪ್ರಾರಂಭ ಮಾಡಿದವು ಅದೇ “ಜಪಾನನಲ್ಲಿ ಸುನಾಮಿ ಅಬ್ಬರ”. 8.9 ರ ತೀವ್ರತೆಯ ಭೂಕಂಪ ಜಪಾನ್ ರಾಜದಾನಿ ಟೋಕಿಯೋ ವ್ಯಾಪ್ತಿಯಲ್ಲಿ ಎಂದು.  ಅಷ್ಟರಲ್ಲೇ ಆ ಸುದ್ದಿವಾಹಿನಿಗಳ ಸಂಚಲನ ನಮ್ಮ ಪ್ರಾದೇಶಿಕ ಸುದ್ದಿವಾಹಿನಿಗಳಿಗೂ ಟ್ರಾನ್ಸಫರ ಮಾಡಿದಂತಾಯಿತು.  ಅಲ್ಲಿಯವರೆಗೂ ಸುಮ್ಮನೇ ಕುಳಿತು ಸಮ್ಮೇಳನದ ಸುದ್ದಿ ನೀಡುತ್ತಿರುವವರಿಗೆ ಈ ಸುದ್ದಿ ಬಿಸಿ ತುಪ್ಪವಾಗಿ ಪರಿಣಮಿಸಿತ್ತು.  ಆದರೂ ಅದನ್ನು ಕೂಡಾ ಜನರಿಗೆ ತಲುಪಿಸಬೇಕಲ್ಲ.  ತಕ್ಷಣ ಬ್ರೇಕಿಂಗ್ ನ್ಯೂಸ್ ಸ್ಕ್ರಾಲ್ ಜಪಾನ್ ಸುನಾಮಿಯ ಸುದ್ದಿ ಹೊತ್ತುಕೊಂಡು ಬಂದೇ ಬಿಟ್ಟಿತು.  ಇಷ್ಟೊತ್ತೂ ಸಮ್ಮೇಳನದ ಕಾರ್ಯಕ್ರಮ ನೋಡುತ್ತಿದ್ದ ವಿಕ್ಷಕರಿಗೆ ಆತಂಕ ಸೃಷ್ಟಿಯಾದಂತಾಯಿತು.  ನಿದಾನವಾಗಿ ಟಿವಿ ಪರದೆಯ ತುಂಬ ಸುನಾಮಿಯ ಸುದ್ದಿಗಳೆ ತುಂಬಿತು ಅದು ಎಷ್ಟರ ಮಟ್ಟಿಗೆ ಎಂದರೆ ಕನ್ನಡ ಸಮ್ಮೇಳನ ಬೆಳಗಾವಿಯಲ್ಲಿ ನಡೆಯುತ್ತಿದೆ ಎಂಬುದನ್ನು ಮರೆಸುವಂತಿತ್ತು.  ಮತ್ತೇ ತಮ್ಮ ತಮ್ಮ ವಾಹಿನಿಗಳಲ್ಲಿ ಸುನಾಮಿ ದೃಶ್ಯಗಳನ್ನು ವೀಕ್ಷಕರಿಗೆ ತಲುಪಿಸುವ ಕೆಲಸದಲ್ಲಿ ಕಾಂಪಿಟೇಶನ್ ಶುರು….!  ರಾಷ್ಟ್ರೀಯ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದ ಸುನಾಮಿ ದೃಶ್ಯಗಳನ್ನು ಪ್ರಾದೇಶಿಕ ವಾಹಿನಿಗಳು ಎಷ್ಟರ ಮಟ್ಟಿಗೆ ಕಾಪಿ ಹೊಡೆಯುತ್ತಿದ್ದವೆಂದರೆ, ತಾವೇ ಸ್ವತಃ ತಮ್ಮ ರಿಪೋರ್ಟರ್‍ನನ್ನು ಜಪಾನಗೆ ಕಳುಹಿಸಿ ಸುದ್ದಿ ಪಡೆಯುತ್ತಿದ್ದೇವೆ ಎಂಬಂತೆ ನಟಿಸುತ್ತಿದ್ದವು.  ಅಂತಹದ್ರಲ್ಲಿ ಏನಾದ್ರೂ ವಿಶೇಷ ದೃಶ್ಯ ಸಿಕ್ಕಿತೆಂದರೆ ಆ ವಾಹಿನಿಯ ಗರ್ವ ಹೇಳತಿರದು.  ಆ ದೃಶ್ಯವನ್ನು ನಮ್ಮ ಚಾನೆಲ್‍ನ EXCLUSIVE ಅಂತ ತೋರಿಸಿದ್ದೇ ತೋರಿಸಿದ್ದು.  ಇನ್ನೂ ಆ ಸಮಯದಲ್ಲಿ ಒಂದು ಸುದ್ದಿವಾಹಿನಿ ಹೇಗೆ ಪ್ರಸಾರ ಮಾಡಿತೆಂದರೆ, ಪರದೆಯ ಅರ್ಧ ಎಡಭಾಗ ಕನ್ನಡ ಸಮ್ಮೇಳನದ ದೃಶ್ಯಗಳಾದರೆ ಇನ್ನರ್ಧ ಬಲಬಾಗ ಜಪಾನ ಸುನಾಮಿಯ ದೃಶ್ಯಗಳು ಇತ್ತ ಉತ್ಸಾಹವಾದರೆ ಅತ್ತ ಭೀಕರ ಪ್ರಳಯದ ನಡುವೆ ಜನರ ಆಕ್ರಂದನದ ದೃಶ್ಯಗಳು.  ಹೇಳಬೇಕೆಂದರೆ ಈ ರೀತಿ ಪ್ರಸಾರ ಮಾಡಿದ್ದು ವೀಕ್ಷಕರಿಗೆ ಒಳ್ಳೆಯದೇ ಏಕೆಂದರೆ ವೀಕ್ಷಕ ಚಾನೆಲ ಕಿತ್ತಾಕುವುದು ತಪ್ಪಿತ್ತು. ಒಂದೆ ಸಮಯದಲ್ಲಿ ಎರಡೂ ಸುದ್ದಿ ಪಡೆದಂತಾಯಿತು.  ಅಷ್ಟು ಅಚ್ಚುಕಟ್ಟಾಗಿ ಕೆಲಸ ಮಾಡಿ ಆ ಸುದ್ದಿವಾಹಿನಿ. ಆ ಸಮಯದಲ್ಲಿ ವಾಹಿನಿಗಳ ಕೆಲಸಗಾರರ, ನಿರೂಪಕರ ಹಾಗೂ ಟೆಕ್ನಿಷಿಯನ್‍ರ ಪಾಡು ಹೇಳತೀರದು.  ಕೆಲವೊಮ್ಮೆ ಊಟ ನಿದ್ರೆ ಬಿಟ್ಟು ಕೆಲಸ ಮಾಡುವ ಸಮಯ ಬರುತ್ತದೆ.  ಅದು ನಮ್ಮ ಭಾಗ್ಯ  (ಕರ್ಮ) ಎಂದು ಕೆಲಸ ಮುಂದುವರೆಸುತ್ತಾರೆ.

            ಸುದ್ದಿವಾಹಿನಿಗಳ ಸುದ್ದಿ ಪ್ರಸಾರದ ಶೈಲಿ ಕಾರ್ಯಕ್ರಮಗಳ ಜೋಡಣೆ ಹೊಸ ಕಾರ್ಯಕ್ರಮಗಳ (ಬೇರೆ ವಾಹಿನಿಗಳಲ್ಲಿ ಇರದ) ಚಿಂತೆ ಆ ವಾಹಿಣಿಯ ಮುಖ್ಯಸ್ಥರ ಮೇಲೆ ಅವಲಂಭಿಸಿರುತ್ತದೆ.  ಈಗಂತೂ ಸುದ್ದಿ ಮನೆಗಳಿಗೆ ಮುಖ್ಯಸ್ಥರ ವಲಸೆ ಜಾರಿಯಲ್ಲಿದೆ.  ಒಂದು ವಾಹಿನಿಯಿಂದ ಇನ್ನೊಂದು ಹೀಗೆ ಸ್ಥಾನ ಪಲ್ಲಟಗೊಳ್ಳುತ್ತಿರುತ್ತದೆ.  ಅದೆಷ್ಟೇ ವಾಹಿನಿಗಳನ್ನು ಬದಲಾಯಿಸಿದರೂ ಆ ಮುಖ್ಯಸ್ಥನಿಗೆ ಒಂದೆ ಕನಸು ಅದು ತಾನು ಕೆಲಸ ಮಾಡುತ್ತಿರುವ ಆ ವಾಹಿನಿ ಜನಪ್ರಿಯವಾಗಬೇಕೆಂಬುದೇ ಆಗಿರುತ್ತದೆ.  ಅದು ಸುದ್ದಿ ನೀಡುವ ಶೈಲಿ ಮತ್ತು ನಿಖರತೆಯಲ್ಲಿ ಒಳ್ಳೆಯ ಬೆಳವಣಿಗೆಗೆ ಸಹಾಯವಾಗುತ್ತದೆ.  ಹಾಗೂ ಹೊಸ ಹೊಸ ಪ್ರಯೋಗಗಳಿಗೆ ನಾಂದಿಯಾಗುತ್ತದೆ.  ಇದರಲ್ಲಿ ಆ ಸಂಸ್ಥೆಯ ಒಟ್ಟು ಸಹೋದ್ಯೋಗಿಗಳ ಪರಿಶ್ರಮ ಕೂಡ ಬೇಕಾಗುತ್ತದೆ.

            ಈಗಂತೂ ಟಿವಿ ಆನ್ ಮಾಡಿದ್ರೆ ಸಾಕು ಮೊದಲಿಗೆ ಕಣ್ಣು ಮುಂದೆ ಬರುವುದೆ ಒಂದು ನ್ಯೂಸ ಚಾನೆಲ್, ಜನರು ಅದನ್ನು ವೀಕ್ಷಿಸಲು ಆಸಕ್ತಿ ತೋರಿಸುತ್ತಾರೆ ಕೂಡ.  ಮನರಂಜನೆ ವಾಹಿಣಿಗಳಿಗಿಂತ ಸುದ್ದಿ ವಾಹಿಣಿಗಳು ಈಗ ವೀಕ್ಷಕರನ್ನು ಮುಟ್ಟುವಲ್ಲಿ ಯಶಸ್ವಿ ಆಗ್ತಾ ಇದೆ ಮತ್ತು ಅವು ಪರಿಣಾಮಕಾರಿಯೂ ಆಗಿವೆ.  ಕೆಲಸುದ್ದಿ ವಾಹಿನಿಗಳು ಬೇರೆ ಸುದ್ದಿ ಸಿಗದಿದ್ದ ಸಮಯದಲ್ಲಿ ತಪ್ಪು ದಾರಿ ಹಿಡಿಯುತ್ತಿವೆ.  ಯಾವುದೇ ಅಧೀಕೃತ ಆದಾರಗಳಿಲ್ಲದೆ ಮುಂದೆ ಆಗದೇ ಇರಬಹುದಾದ ಪ್ರಕೃತಿ ವಿಕೋಪಗಳನ್ನು ವೀಕ್ಷಕರಿಗೆ ತೋರಿಸಿ ಹಿಗಾಗುತ್ತೆ, ಹಾಗಾಗುತ್ತೆ ಅಂತ ತೋರಿಸಿ ಭಯ ಹುಟ್ಟಿಸಿ ಜನರ ಅರ್ಧ ಜೀವವನ್ನು ಈಗಲೇ ಹೀರುತ್ತಿವೆ.

            ಯಾವುದೋ ಒಂದು ಚಲನಚಿತ್ರದ ದೃಶ್ಯವನ್ನು ಬಳಸಿ ಅದಕ್ಕೆ ಆ ವಿಜ್ಞಾನಿ ಹೇಳಿದ, ಈ ವಿಜ್ಞಾನಿ ಹೇಳಿದ ಅಂತಾ ಕತೆ ಕಟ್ಟಿ ಮುಂದಿನ ದಿನಗಳಲ್ಲಿ ಹಾಗಾಗುತ್ತೆ, ಹೀಗಾಗುತ್ತೆ ಅಂತ ಜನರನ್ನು ಭಯಭೀತರನ್ನಾಗಿಸುವ ಕಾರ್ಯಕ್ರಮಗಳು ನಿಲ್ಲಬೇಕು.

            ಒಂದು ವಾಹಿನಿ ಎಷ್ಟರ ಮಟ್ಟಿಗೆ ಜನರ ಮನ ಮುಟ್ಟಿದೆ ಎಂದು ಲೆಕ್ಕ ಹಾಕಬೇಕೆಂದರೆ ಅದು ಎಷ್ಟು ಜನರನ್ನು ಭಯಭೀತರನ್ನಾಗಿ ಮಾಡಿದೆ ಎಂಬುದರ ಮೇಲೆ ಅಲ್ಲ.  ಎಷ್ಟು ಜನರಿಗೆ ಮುಂದೆ ಆಗಬಹುದಾದ, ಆಗುತ್ತಿರುವ ಘಟನೆಗಳಿಗೆ ಅಭಯ ನೀಡುತ್ತಿದೆ ಎಂಬುದರ ಮೇಲೆ ಅವಲಂಭಿಸಿದೆ.

ಗಂಗಾಧರ್ ಅಮ್ಮಲಜೇರಿ

gammalajeri@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!