ಅಂಕಣ

ಸಣ್ಣ ಕತೆಗಳ ಸಂಕಲನ ‘ಹೆಗ್ಗುರುತು’ – ಒಂದು ವಿಮರ್ಶೆ

‘ಹೆಗ್ಗುರುತು’-(ಸಣ್ಣ ಕತೆಗಳ ಸಂಕಲನ)

ಲೇಖಕರು: ಕೆ.ಸತ್ಯನಾರಾಯಣ,

ಪ್ರಕಾಶಕರು: ಮನೋಹರ ಗ್ರಂಥ ಮಾಲಾ, ಧಾರವಾಡ,

ಪ್ರಥಮ ಮುದ್ರಣ: 2012, ಪುಟಗಳು: 160, ಬೆಲೆ: ರೂ.120-00

ಕೆ.ಸತ್ಯನಾರಾಯಣ ಮೂವತ್ತು ವರ್ಷಗಳಿಂದ ಸಣ್ಣ ಕತೆಗಳನ್ನು ಬರೆಯುತ್ತ ಬಂದಿದ್ದಾರೆ.  ಸೂಕ್ಷ್ಮವಾಗಿ ಗಮನಿಸಬೇಕಾದ ಕನ್ನಡದ ಸಣ್ಣ ಕತೆಗಾರರಲ್ಲಿ ಇವರೂ ಒಬ್ಬರು. ಕತೆಗಳಲ್ಲದೆ ಇವರು ಆರು ಕಾದಂಬರಿಗಳನ್ನೂ, ಪ್ರಬಂಧ ಪ್ರಕಾರದಲ್ಲಿ ನಾಲ್ಕು ಕೃತಿಗಳನ್ನೂ, ವಿಮರ್ಶೆ, ಪ್ರವಾಸಕಥನ, ಅಂಕಣಬರಹಗಳನ್ನೂ ಹೊರತಂದಿದ್ದಾರೆ; ಹಾಗೂ, ಕೃತಿಸಂಪಾದನೆಗಳನ್ನೂ ಮಾಡಿದ್ದಾರೆ. ಈ ವರೆಗೆ ಪ್ರಕಟವಾಗಿರುವ ಇವರ ಎಂಟು ಕಥಾಸಂಕಲನಗಳಲ್ಲಿ ‘ಹೆಗ್ಗುರುತು’ ಏಳನೆಯದು. ಈ ಸಂಕಲನದಲ್ಲಿ ಹತ್ತು ಕತೆಗಳಿವೆ; ಕೊನೆಯಲ್ಲಿ ಅನುಬಂಧವೊಂದಿದೆ. ಅದರಲ್ಲಿ ಕೆ.ಸತ್ಯನಾರಾಯಣ ಕತೆಯೊಂದು ಕತೆಯಾಗಿ ಅವತರಿಸುವ ಬಗೆಯ  ವಿಶ್ಲೇಷಣೆ ಮಾಡಿದ್ದಾರೆ. ‘ಕತೆ ಕತೆಯಾಗುವ ರೀತಿ’ ಒಂದು ಒಳ್ಳೆಯ ಪ್ರಬಂಧ. ಇದರಲ್ಲಿ, ಸತ್ಯನಾರಾಯಣ “ಕತೆಯೊಂದು ಹುಟ್ಟುವ, ಬೆಳೆಯುವ, ದಕ್ಕುವ ಕ್ರಮವನ್ನಾಗಲೀ, ಬರೆಯಿಸಿಕೊಳ್ಳುವ ರೀತಿಯನ್ನಾಗಲೀ”  ವಿವರಿಸಲಾಗದು ಎನ್ನುತ್ತಾರೆ.  ಇದು ಕತೆಯೊಂದು ಹುಟ್ಟಬಹುದಾದ ಅಥವಾ ತಪ್ಪಿಸಿಕೊಳ್ಳುವ ಸೋಜಿಗದ ಕಥನ. ಕತೆಗಾರರೆಲ್ಲರಿಗೂ ನಿಜವೆನ್ನಿಸುವ ಬರಹ ಇದು. ಹೀಗೆ ‘ಕತೆಯೊಂದನ್ನು ಬರೆಯುವ ರೀತಿಗೆ ಆಶ್ಚರ್ಯವಾಗುತ್ತದೆ’ ಎನ್ನುವುದನ್ನೇ ಶ್ರೀಯುತರಾದ ಎಸ್.ಎಲ್.ಭೈರಪ್ಪ, ನಿರಂಜನ, ಮೊದಲಾದವರೂ ಹೇಳಿಕೊಂಡಿರುವುದು ಇಲ್ಲಿ ನೆನಪಿಗೆ ಬರುತ್ತದೆ. ಈ ಸಂಕಲನದ ಕತೆಗಳಿಗೆ ಶ್ರೀ ಮಲ್ಲಿಕಾರ್ಜುನ ಹಿರೇಮಠ ಎನ್ನುವ ಹಿರಿಯರೊಬ್ಬರು ಮುನ್ನುಡಿ ಬರೆದು ಕೆ.ಸತ್ಯನಾರಾಯಣರ ಕತೆಗಳನ್ನು ಓದಬೇಕಾದ ಕ್ರಮವನ್ನು ಸೂಚಿಸುತ್ತಾರೆ. ಸತ್ಯನಾರಾಯಣ ಒಳ್ಳೆಯ ಕತೆಗಾರರಾಗಿರುವುದರ ಜೊತೆಗೆ ಅಲ್ಲಲ್ಲಿ ಕೊಂಚ ಕ್ಲಿಷ್ಟ ಎನ್ನಿಸುವ ಕತೆಗಾರರೂ ಆಗಿರುವುದರಿಂದ ಶ್ರೀ ಹಿರೇಮಠರ ಮುನ್ನುಡಿ ಓದುಗರಿಗೆ ನೆರವಾಗಬಹುದು.

ಸತ್ಯನಾರಾಯಣ ಯಾಕೆ ಒಳ್ಳೆಯ ಕತೆಗಾರರು ಎನ್ನಲು ನನ್ನ ಸಮರ್ಥನೆ ಹೀಗಿದೆ: ಸೃಜನಶೀಲ ಕಲ್ಪನೆ, ತಾತ್ವಿಕತೆ ಹಾಗೂ, ಭಾಷೆ-ಈ ತ್ರಿಕೂಟಗಳಿಂದ ಒಳ್ಳೆಯ ಕತೆಯೊಂದು ಅವತರಿಸುತ್ತದೆ. ಇವುಗಳಲ್ಲಿ ಒಂದು ಊನವಾದರೂ ಕೂಡ ಕತೆ ಸೋಲುವುದು ನಿಶ್ಚಿತ. ಉದಾಹರಣೆಗೆ-ಸೃಜನಶೀಲತೆಯಿಲ್ಲದಿದ್ದರೆ ಕತೆ ಬರೀ ತತ್ವಬೋಧನೆಯಾಗಿ ವಾಗಾಡಂಬರದಲ್ಲಿ ಮುಗಿಯುತ್ತದೆ; ಭಾಷೆಯ ನೆರವಿಲ್ಲದಿದ್ದರೆ ಕತೆ ಅನುಭವದ ಅಭಿವ್ಯಕ್ತಿಯಾಗಲಾರದೆ ಸೋಲುತ್ತದೆ; ತಾತ್ವಿಕತೆಯ ಬೆಂಬಲವಿಲ್ಲದಿದ್ದರೆ ಕತೆಯಲ್ಲಿ  ಬದುಕಿನ ಸಂಕೀರ್ಣ ಆಯಾಮಗಳ ಶೋಧನೆ ನಡೆಯುವುದಿಲ್ಲ. ಈ ಸಂಕಲನದ ‘ಚಿಕ್ಕತಾಯಿ’, ‘ಮಾಸ್ತಿಗನ್ನಡಿ’, ‘ಓಬಳಯ್ಯನ ಸುತ್ತಮುತ್ತ’-ಈ ಮೂರು ಕತೆಗಳು ನನಗೆ ಬಹಳ ಇಷ್ಟವಾಗಲು ಇವುಗಳ ಸೃಜನಶೀಲ ಕಲ್ಪನೆ,  ತಾತ್ವಿಕ ನಿಲುವು ಹಾಗೂ ಭಾಷೆಯಲ್ಲಿ ಅನುಭವದ ಅಭಿವ್ಯಕ್ತಿ, ಮೂರೂ ಕಾರಣವಾಗಿವೆ. ‘ಚಿಕ್ಕತಾಯಿ’ ಕತೆಯಲ್ಲಿ ಜೇಪಿ ಎಂಬ ಯುವತಿಯ ಮೇಲಿನ ಲೈಂಗಿಕ ಕಿರುಕುಳದ ವಿವರದೊಂದಿಗೆ ಕತೆ ತೆರೆದು ಕೊಳ್ಳುತ್ತದೆ. ಆದರೆ ಕತೆ ಇದು ಮಾತ್ರವಲ್ಲ. ಲೈಂಗಿಕ ಕಿರುಕುಳದಿಂದ ರೋಸಿ ಹೋದ ಆಕೆ ಹಿರಿಯ ಅಧಿಕಾರಿಯನ್ನು ಕಂಡು ( ಮತ್ತೊಬ್ಬ ಅಧಿಕಾರಿಯ ಮೂಲಕ ಕೂಡ) ತನಗೆ ಅದೇ ಕಛೇರಿಯಲ್ಲಿ ಬೇರೊಂದು ವಿಭಾಗಕ್ಕೆ ವರ್ಗಾವಣೆ ನೀಡಬೇಕೆಂದು ಕೇಳಿಕೊಳ್ಳುತ್ತಾಳೆ. ಅವಳ ಆತಂಕ ಮತ್ತು ಅಸಹಾಯಕತೆಯನ್ನು ಅರ್ಥ ಮಾಡಿಕೊಂಡ ಹಿರಿಯ ಅಧಿಕಾರಿ ಆಕೆಗೆ ಬದಲಾವಣೆ ನೀಡುವ ಬದಲು ಮೇಲಧಿಕಾರಿಯನ್ನು ಬಹಳ ದೂರದ ನಗರಕ್ಕೆ ವರ್ಗಾಯಿಸುತ್ತಾನೆ. ಕತೆಗೊಂದು ನಾಟಕೀಯ ತಿರುವು ಇಲ್ಲಿ ಬರುತ್ತದೆ. ಜೇಪಿ ಹಿರಿಯ ಅಧಿಕಾರಿಯ ಬಳಿಗೆ ಬಂದು ತನ್ನ ಮೇಲಧಿಕಾರಿಗೆ ಆದ ವರ್ಗಾವಣೆ ಅಮಾನವೀಯ ಎನ್ನುತ್ತಾಳೆ. ವಾಸ್ತವವಾಗಿ ವರ್ಗಾವಣೆಗೆ ಒಳಗಾದ ಆತ ಕುಟುಂಬಜೀವನದಲ್ಲಿ ಅಸುಖಿ. ಒಂದಾದ ಮೇಲೆ ಒಂದರಂತೆ ಬಂದೆರಗಿದ ದುರಂತದಿಂದ ಆ ಕುಟುಂಬ ನಲುಗಿಹೋಗಿದೆ. ಈ  ಟ್ರಾನ್ಸ್‍ಫರ್ ಶಿಕ್ಷೆ ಬೇಡ ಅನ್ನುವುದು ಅವಳ ವಿನಂತಿ. ಜೇಪಿಯ ಮರುಕ ಓರ್ವ ತಾಯಿಯದು ಎನ್ನುವ ಧ್ವನಿ ಕತೆಯಲ್ಲಿ ಕಲಾತ್ಮಕವಾಗಿ ಸೃಷ್ಟಿಯಾಗಿದೆ. ‘ಓಬಳಯ್ಯನ ಸುತ್ತಮುತ್ತ’, ‘ಮಾಸ್ತಿಕನ್ನಡಿ’ಗಳು ಕೂಡ ಇಂಥವೇ. ಈ ಕತೆಗಳು ಮುಗಿಯುವುದೇ ಅದ್ಭುತವಾದ ಒಂದು ಅನಾವರಣದಲ್ಲಿ.

ಸತ್ಯನಾರಾಯಣರ ಕತೆಗಳಲ್ಲಿ ಕೆಲವು ಕೊಂಚ ಕ್ಲಿಷ್ಟ ಎಂದೂ ನಾನು ಹೇಳಿದೆ. ಹೇಗೆಂದರೆ, ಈ ಸಂಕಲನದ  ‘ಡಾಕ್ಟರನ ಹುಚ್ಚು ಮಗು’ ಹಾಗೂ ‘ಭವ-ರೋಗ-ವೈದ್ಯ’ ಎನ್ನುವ ಕತೆಗಳು. ಈ ಕತೆಗಳ ಥೀಮ್ ಅರ್ಥವಾದರೂ ಕತೆ ಹಿಡಿದ ದಿಕ್ಕು ಸ್ಪಷ್ಟವಾಗುವುದಿಲ್ಲ. ಕತೆಗಳ ಮುಗಿತಾಯದ ಮೇಲೆ ಕತೆಗಾರನ ಕೈವಾಡವಿರುವುದು ಸ್ಪಷ್ಟ. ‘ಡಾಕ್ಟರನ ಹುಚ್ಚು ಮಗು’ ಒತ್ತಾಯದಿಂದ ಒಳತಂದ ತರ್ಕದಲ್ಲಿ ಮುಗಿದಂತೆ ತೋರುತ್ತದೆ. ನನ್ನ ಓದುವ ತರಬೇತಿಗೆ ಇದು ಕ್ಲಿಷ್ಟವಾದ ಕಥಾಹಂದರ.

ಕೆ.ಸತ್ಯನಾರಾಯಣ ತನ್ನ ಕತೆಗಳನ್ನು ಬೇರೆ ಬೇರೆ ತಂತ್ರಗಳಿಂದ ಆರಂಭಿಸುತ್ತಾರೆ. ಮಾಸ್ತಿ ವೆಂಕಟೇಶ ಅಯ್ಯಂಗಾರರ ಕಥನಕಲೆಯ ಪ್ರಭಾವವನ್ನು ಇಲ್ಲಿ ಸ್ಪಷ್ಟವಾಗಿ ಕಾಣುತ್ತೇವೆ. ಆದರೆ ಮೊದಲನೆಯ ಕತೆ ‘ಪೂರ್ವನಾಮದ ವಲಸೆ’ಯಲ್ಲಿ ಕಥೆಯ ನಿರೂಪಣೆ ಚಿತ್ತಾಲರ ಕತೆಗಾರಿಕೆಯನ್ನು ನೆನಪಿಸುತ್ತದೆ. ಇವರ ಕತೆಗಾರಿಕೆಯ ದೃಷ್ಟಿಯ ಅಳತೆ ಬಹಳ ವಿಶಾಲವಾದ ಹರಹಿನದು. ಇವರ ಕತೆಗಾರಿಕೆಯ ದಾಹವೂ ಅದ್ಭುತವಾದ್ದು. ಕತೆ ಬರೆಯದೆ ತಣಿಯಲಾರೆ ಎನ್ನುವ ದಾವ ಇವರಿಗೆ. ಯವುದಕ್ಕೂ ಕೆ.ಸತ್ಯನಾರಾಯಣರ ಎಲ್ಲಾ ಕತೆಗಳನ್ನು ಓದುವುದು ಅವರ ಕತೆಗಾರಿಕೆಯ ಅನನ್ಯತೆಯನ್ನು ಗ್ರಹಿಸಲು ನೆರವಾದೀತು. ಸಿರ್ಸಿಯ ಬಿ.ಎಚ್.ಶ್ರೀಧರ ಸಾಹಿತ್ಯ ಪ್ರಶಸ್ತಿ ಈ ಬಾರಿ ಕೆ.ಸತ್ಯನಾರಾಯಣರಿಗೆ ಲಭಿಸಿದೆ. ಅವರ ಕತೆಗಳ ಸಮಗ್ರ ಅಧ್ಯಯನಕ್ಕೆ ಈ ಸಂದರ್ಭ ಕಾರಣವಾಗಲಿ ಎನ್ನುವ ಆಶಯ ನನ್ನದು.

Facebook ಕಾಮೆಂಟ್ಸ್

ಲೇಖಕರ ಕುರಿತು

R D Hegade Aalmane

ರಘುಪತಿ ದೇವರು ಹೆಗಡೆ ( ಆರ್ ಡಿ ಹೆಗಡೆ ) ಹಿರಿಯ ಲೇಖಕರು ಹಾಗೂ ವಿಮರ್ಶಕರು. ವಯಸ್ಸು 68. ಸದ್ಯ ಶಿರಸಿ ತಾಲೂಕಿನ ಆಲ್ಮನೆಯಲ್ಲಿ ವಾಸ. ಸಂಸ್ಕೃತ ಹಾಗೂ ಆಂಗ್ಲ ಭಾಷಾ ಸಾಹಿತ್ಯ ದಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ಶಾಸನ ಶಾಸ್ತ್ರದಲ್ಲಿ ಡಿಪ್ಲೊಮಾವನ್ನೂ ಪಡೆದಿದ್ದಾರೆ. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿರುವ ಇವರು ಈಗ ಕೃಷಿಯಲ್ಲಿ ನಿರತರಾಗಿದ್ದಾರೆ. ಇವರ ಸಾಹಿತ್ಯ ಕೃಷಿಯ ವ್ಯಾಪ್ತಿ ದೊಡ್ಡದು.ಭಾರತೀಯ ತತ್ವಶಾಸ್ತ್ರದ ಮೇಲೆ ಹಲವು ಕೃತಿಗಳನ್ನು ಹೊರತಂದಿದ್ದಾರೆ. ವೈಚಾರಿಕ ಲೇಖನಗಳ ಸಂಕಲನ, ಕಥಾಸಂಕಲನಗಳು, ಕಿರುಕಾದಂಬರಿ ಕೂಡ ಪ್ರಕಟವಾಗಿದೆ. ಉಪನಿಷತ್ತುಗಳ ಅರ್ಥಲೋಕ, ವ್ಯಕ್ತಿ ಚಿತ್ರಣ ಕುರಿತಾದ ಎರಡು ಕೃತಿಗಳು,ಅಂಕಣ ಬರಹಗಳ ಎರಡು ಕೃತಿಗಳು,ವಿಮರ್ಶೆಯ ಕುರಿತಾದ ಒಂದು ಕೃತಿ, ಭಗವದ್ಗೀತೆ ಇವರ ಕೆಲವು ಕೃತಿಗಳು. ಆಂಗ್ಲಭಾಷೆಯಲ್ಲಿಯೂ ಕೂಡ ಭಾರತೀಯ ತತ್ವಶಾಸ್ತ್ರದ ಕುರಿತಾದ ಕೃತಿಯನ್ನು ರಚಿಸಿದ್ದಾರೆ. ಇವರ ಲೇಖನಗಳು ನಾಡಿನ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಸ್ತೂರಿ ಮಾಸಪತ್ರಿಕೆಯು ತನ್ನಲ್ಲಿ ಪ್ರಕಟಿಸಿದ ಸಾರ್ವಕಾಲಿಕ 20 ಶ್ರೇಷ್ಠ ಲೇಖನಗಳನ್ನು ಮರುಪ್ರಕಟಿಸಿದಾಗ ಇವರ ಲೇಖನವೂ ಇದ್ದದ್ದು ಇವರ ಹೆಗ್ಗಳಿಕೆ. ನೂರಾರು ಲೇಖಕರ ಪುಸ್ತಕಗಳಿಗೆ ಮುನ್ನುಡಿಯನ್ನೂ, ವಿಮರ್ಶೆಯನ್ನೂ ಬರೆದಿರುತ್ತಾರೆ. ಸದ್ಯ ಶಿರಸಿಯ ದಿನಪತ್ರಿಕೆ “ಲೋಕಧ್ವನಿ” ಯಲ್ಲಿ ಪ್ರತಿವಾರ “ಈ ಹೊತ್ತಿಗೆ” ಅಂಕಣವನ್ನು ಬರೆಯುತ್ತಿದ್ದು ಸಾಕಷ್ಟು ಜನಪ್ರಿಯವಾಗಿದೆ. ಇವರ ಇತ್ತೀಚಿನ ಕೃತಿ “ಜೆನ್ ಮಹಾಯಾನ” ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾಗಿದ್ದು ಈಗಾಗಲೇ 2 ಮರುಮುದ್ರಣಗಳನ್ನು ಕಂಡಿದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!