ಅಂಕಣ

ಮತ್ತೆ ಮತ್ತೆ ಗಾಂಧಿ

ಗಾಂಧೀಜಿಯವರನ್ನು ಓದಬೇಕೆಂದು ನನಗೆ ಅನ್ನಿಸತೊಡಗಿದ್ದು ನಾಲ್ಕು ದಶಕಗಳ ಹಿಂದೆ ಅವರ ಆತ್ಮಕಥೆ `ಸತ್ಯದೊಡನೆ ನನ್ನ ಪ್ರಯೋಗಗಳು’ ಪುಸ್ತಕದಿಂದ. ಗಾಂಧೀಜಿ ಅದನ್ನು ಮೊದಲು ಗುಜರಾತಿಯಲ್ಲಿ ಬರೆದರು. ನಂತರ ಇಂಗ್ಲೀಷಿಗೆ ಅನುವಾದಿಸಿದ್ದರಾದರೂ ನನಗೆ ಸಿಕ್ಕಿದ್ದು ಮಹದೇವ ದೇಸಾಯಿಯವರು ಇಂಗ್ಲಿಷ್‍’ಗೆ ಅನುವಾದಿಸಿದ ಆವೃತ್ತಿ. ನಾನು ಅವರ ಆತ್ಮಕತೆಗೆ ಅಕ್ಷರಶಃ ಎಷ್ಟು ಪರವಶನಾಗಿದ್ದೆನೆಂದರೆ ಆ ಕೃತಿ ಇಂಗ್ಲಿಷ್‍’ನಲ್ಲಿದೆ ಎನ್ನುವುದೂ ನನ್ನ ಗಮನದಲ್ಲಿ ಉಳಿದಿರಲಿಲ್ಲ. ಸರಳತೆ ಮತ್ತು ನಿಖರತೆ ಗಾಂಧೀಜಿಯ ಶೈಲಿ. ಓದುಗನ ಹೃದಯಕ್ಕೆ ಕಿವಿಗೊಟ್ಟು ಕಣ್ಣೊಳಗೆ ಕಣ್ಣಿಟ್ಟು ಬರೆಯುವ ಈ ಶೈಲಿಗೆ ಆದ್ಯರೂ ಅವರೇ ಪರಮಾಚಾರ್ಯರೂ ಅವರೇ. ಅನಂತರದ ದಿನಗಳಲ್ಲಿ ಅವಕಾಶ ಕೂಡಿದಾಗಲೆಲ್ಲ ಅವರ ಬರಹಗಳನ್ನು, ಎಲ್ಲೆಲ್ಲೂ ಅವರು ನನಗೆ ಎದುರಾಗುವ ಸಂಭ್ರಮದೊಡನೆ ಓದತೊಡಗಿದೆ. ಅವರ ಕುರಿತು ಅಮೆರಿಕನ್ ಪತ್ರಕರ್ತೆ ಮಾರ್ಗರೆಟ್ ಬರ್ಕ್’ವೈಟ್ ಬರೆದ `ಹಾಫ್ ವೇ ಟು ಫ್ರೀಡಮ್’ ಎನ್ನುವ ಅಪರೂಪದ ಪುಸ್ತಕವನ್ನು ಕಳೆದ ವರ್ಷ ಈ ದಿನಗಳಲ್ಲಿ ಓದುತ್ತಿದ್ದೆ. ಈ ಬಾರಿ ಕೈಯ್ಯಲ್ಲಿರುವುದು `ಮೊಮ್ಮಗಳಿಗೆ ಗಾಂಧೀಜಿಯ ಹಿತವಚನ’. ಹಿಗೆ ಮತ್ತೆ ಮತ್ತೆ ಗಾಂಧಿ ನನಗೆ ಎದುರಾಗುತ್ತಾರೆ. ಅವರನ್ನು ಓದುವುದೆಂದರೆ ಅವರೊಡನೆ ನಡೆಸುವ ಸಂವಾದವೇ ಆಗಿರುತ್ತದೆ. ಸಂವಾದದಲ್ಲಿ ನಾವು ಸೋಲಲೂಬಹುದು, ಸಹಮತ ಮೂಡಲೂ ಬಹುದು. ಅವರೊಡನೆಯ ಸಂವಾದಕ್ಕೆ ಹಿಂಜರಿಕೆಯಾಗಲೀ ಒಮ್ಮತ ಮೂಡದಿದ್ದಾಗ ಅವಮಾನವಾಗಲೀ ಇಲ್ಲ. ಹೀಗೆ ಸಂವಾದದಲ್ಲಿ ಸೋತೂ ಅವಮಾನಿತನಾಗದಿರುವ ಪಾಠವೊಂದಿದ್ದರೆ ಅದು ಗಾಂಧೀಜಿಯ ಸನ್ನಿಧಿಯಲ್ಲಿ ಕಲಿತದ್ದು.

ಆದರೂ ಗಾಂಧೀಜಿಯನ್ನು ಯಾರೂ `ಬರಹಗಾರ’ ಎಂದು ಬಣ್ಣಿಸುವುದಿಲ್ಲ. ಸ್ವತಃ ಗಾಂಧೀಜಿ ಕೂಡ ಹಾಗೆ ಅಂದುಕೊಂಡಿರಲಿಲ್ಲ. ಈ ಗುಣ ಅವರಿಗೆ ನಮ್ಮ ಪುರಾತನರಿಂದ ಬಂದದ್ದು. ವ್ಯಾಸರು `ಮಹಾಭಾರತ’ದಲ್ಲೊಂದು ಕಡೆ, ನಾನು ಬರೆಯುತ್ತಿದ್ದೇನೆ ಎನ್ನುವ ಬದಲಿಗೆ ಕೈಯ್ಯೆತ್ತಿ “ಅರ್ಥ-ಕಾಮಗಳು ಧರ್ಮವನ್ನು ಅನುಸರಿಸಿಸುತ್ತವೆ” ಎಂದು ಕೂಗಿ ಕೂಗಿ ಹೇಳುತ್ತಿದ್ದೇನೆ; ಆದರೂ ನನ್ನ ಮಾತನ್ನು ಆಲಿಸುವವರಿಲ್ಲ ಎನ್ನುತ್ತಾರೆ. ನಿಜವಾಗಿಯೂ `ಮಹಾಭಾರತ’ ವ್ಯಾಸೋಕ್ತಿಯೇ ಹೊರತಾಗಿ ಅವರ ಬರವಣಿಗೆಯಲ್ಲ. ಗಾಂಧೀಜಿ ಕೂಡ ವ್ಯಾಸಪರಂಪರೆಯವರು. ಆದರೂ ಅವರು ಬರೆದ ಪುಟಗಳ ಸಂಖ್ಯೆ ಹಲವು ಸಾವಿರ. ಅವರ ಬರಹಗಳನ್ನೋದಿ ಪ್ರಭಾವಿತರಾದವರು ಎಷ್ಟು ಲಕ್ಷವೋ! ಅವರ `ಹಿಂದ್ ಸ್ವರಾಜ್’ ಓದಿದ ಟಾಲ್‍ಸ್ಟಾಯ್ ಇದು ಭಾರತಕ್ಕೊಂದೇ ಅಲ್ಲ, ಎಲ್ಲ ರಾಷ್ಟ್ರಗಳಿಗೂ ಅನ್ವಯವಾಗುವಂತಹುದು ಎನ್ನುತ್ತಾನೆ. ಅಂದು ಅವರ ಓದುಗರಲ್ಲಿ ಚಕ್ರವರ್ತಿಗಳೂ ಇದ್ದರು, ಗ್ರಾಮವಾಸಿ ಸಾಮಾನ್ಯರೂ ಇದ್ದರು. ಜಗತ್ತಿನಲ್ಲಿ ಹಾಗೆ ಓದಿಸಿಕೊಂಡ ಬೇರೆ ಗ್ರಂಥಗಳಿದ್ದರೆ ಅವು ಭಗವದ್ಗೀತೆ, ಬೈಬಲ್ ಹಾಗೂ ಕುರಾನ್ ಮಾತ್ರ.

ಗಾಂಧೀಜಿ ಭೌತಿಕವಾಗಿ ಇಂದು ನಮ್ಮೊಡನಿಲ್ಲದಿದ್ದರೂ ಅವರ ದಿಕ್ಸೂಚಿ ಕೆಲಸಗಳಿವೆ. ಅವರು ತಮ್ಮ ಕೃತಿಗಳಿಂದ ಇನ್ನೂ ಉಸಿರಾಡುತ್ತಿದ್ದಾರೆ. ನನಗನಿಸುವುದು, ಜಗತ್ತಿನಲ್ಲಿ ಯಾವ ಚಾರಿತ್ರಿಕ ವ್ಯಕ್ತಿಯ ಭಾವಚಿತ್ರವೂ ಅವರ ಪಟದಷ್ಟು ಜೀವಂತವಾಗಿಲ್ಲ; ಇವತ್ತು ದೇಶ-ದೇಶಾಂತರಗಳಲ್ಲಿ ಕೂಡ ಪ್ರತಿಯೊಬ್ಬ ಅಕ್ಷರಸ್ಥ ಮನುಷ್ಯ ಗಾಂಧೀಜಿಯನ್ನು ಗುರುತಿಸಬಲ್ಲ. ಅವರ ಸ್ವಾತಂತ್ರ್ಯ ಹೋರಾಟ, ಅಸ್ಪøಶ್ಯತಾನಿವಾರಣೆಯ ಚಳವಳಿ, ಖಾದಿ-ಗ್ರಾಮೋದ್ಯೋಗಗಳ ಕಲ್ಪನೆ, ಪ್ರಕೃತಿಚಿಕಿತ್ಸೆ, ಹರಿಜನೋದ್ಧಾರ, ಅಹಿಂಸೆಯ ಪ್ರತಿಪಾದನೆಗಳಂತೆಯೇ ಅವರ ವಾಙ್ಮಯ ಕೂಡ ಅವರನ್ನು ನಮ್ಮ ಹೃದಯದೊಳಗೆ ಚಿರಕಾಲ ಉಳಿಸುತ್ತದೆ. ಗಾಂಧೀಜಿಗೆ ಬರವಣಿಗೆ ತಮ್ಮ ಉದ್ದೇಶಸಾಧನೆಗೆ ಒದಗಿದ ಒಂದು ಸಶಕ್ತವಾದ ಉಪಕರಣವಾಗಿತ್ತು. ದೂರದ ಜನರನ್ನು ತಲುಪಲು ಅವರಿಗೆ ಅದು ಅನಿವಾರ್ಯವೂ ಆಗಿತ್ತು. ಲಕ್ಷಕ್ಕಿಂತ ಹೆಚ್ಚು ಪತ್ರಗಳನ್ನು ಅವರು ಸಾರ್ವಜನಿಕರಿಗೆ ಬರೆದಿದ್ದಾರೆ; ಪತ್ರಗಳ ಮೂಲಕ ತನ್ನ ಜೀವನದ ಆದರ್ಶಗಳನ್ನು ವಿವರಿಸುವುದು ಅವರಿಗೆ ಅಗತ್ಯವಾಗಿತ್ತು; ಪತ್ರಗಳನ್ನು ಪರಿಣಾಮಕಾರಿಯಾಗಿ ಬರೆಯುವುದಕ್ಕಾಗಿ, ನಮ್ಮ ಪುರಾಣಗಳಿಂದಲೂ, ರಾಮಾಯಣ, ಮಹಾಭಾರತಗಳಿಂದಲೂ ನಿದರ್ಶನಗಳನ್ನು ಕೊಡುತ್ತಿದ್ದರು. ಅವರ ಒಕ್ಕಣಿಕೆ ಓರ್ವ ಪ್ರವಾದಿಯ ಮಾತಿನಂತಿರುತ್ತಿತ್ತು. ಲಾರ್ಡ್ ಕರ್ಜನ್ ಒಮ್ಮೆ `ಸತ್ಯದ ಕಲ್ಪನೆಯು ಮೂಲತಃ ಯುರೋಪಿನಲ್ಲಿ ಕಾಣಿಸಿತು’ ಎಂದು ಹೇಳಿಕೆ ಕೊಟ್ಟಾಗ ಗಾಂಧೀಜಿ ಅದನ್ನು ಖಂಡಿಸಿದರು; ಭಾರತದಲ್ಲಿ ಸತ್ಯವನ್ನು ಹೇಗೆ ಆಚರಿಸಲಾಗುತ್ತಿತ್ತು ಎಂದು ವಿವರಿಸಿ ನಮ್ಮ ಮಹಾಕಾವ್ಯಗಳಿಂದಲೂ ವೇದಗಳಿಂದಲೂ ಸಾಕ್ಷ್ಯಗಳನ್ನು ನೀಡಿ ಬರೆದುದಲ್ಲದೆ, ಲಾರ್ಡ್ ಕರ್ಜನ್ ತನ್ನ ಹೇಳಿಕೆಯನ್ನು ಹಿಂಪಡೆಯಲಿ ಎಂದೂ ಆಗ್ರಹಿಸಿದರು. ಯುರೋಪಿನ ಮೇಲರಿಮೆಯನ್ನು ಪ್ರಶ್ನಿಸುತ್ತ ಗಾಂಧೀಜಿ ಅಲ್ಲಿ ನಡೆಯುತ್ತಿದ್ದ ಯುದ್ಧಗಳನ್ನು ನೆನಪಿಸಿ ಯುರೋಪಿನಲ್ಲಿ ಕ್ರಿಶ್ಚಿಯಾನಿಟಿ ಇದ್ದುದು ನಿಜವೇ ಎಂದೂ ಪ್ರಶ್ನಿಸಿದರು.

ಗಾಂಧೀಜಿ `ಇಂಡಿಯನ್ ಒಪಿನಿಯನ್’ ಪತ್ರಿಕೆಯನ್ನು ಶುರುಮಾಡಿದ್ದು ದಕ್ಷಿಣ ಆಫ್ರಿಕೆಯಲ್ಲಿ. ಭಾರತಕ್ಕೆ ಮರಳಿದ ಮೇಲೆ `ಯಂಗ್ ಇಂಡಿಯಾ’ ಹಾಗೂ `ನವಜೀವನ್’ ಪತ್ರಿಕೆಗಳನ್ನು ಆರಂಭಿಸಿದರು. 1933ರಲ್ಲಿ ಅವರ ಪ್ರಸಿದ್ಧವಾದ `ಹರಿಜನ’ ಪತ್ರಿಕೆ ಆರಂಭವಾಯಿತು. `ಹರಿಜನಬಂಧು’ ಮತ್ತು `ಹರಿಜನ ಸೇವಕ’ ಪತ್ರಿಕೆಗಳನ್ನೂ ಅದೇ ಹೊತ್ತಿಗೆ ಆರಂಭಿಸಿದರು. 2-7-1925ರ `ಯಂಗ್ ಇಂಡಿಯಾ’ದಲ್ಲಿ ಬರೆಯುತ್ತ ತನಗೆ ಪತ್ರಿಕೋದ್ಯಮದಿಂದ ಹಾಗೂ ಬರವಣಿಗೆಯಿಂದ ಉದ್ದೇಶಿತ ಕಾರ್ಯಸಾಧನೆಗೆ ದೊಡ್ಡ ಬೆಂಬಲ ಸಿಗುತ್ತಿದೆ ಎಂದರು. ಗಾಂಧೀಜಿ ಪ್ರಕೃತಿಚಿಕಿತ್ಸೆ, ಪಥ್ಯಾಹಾರ, ಅಹಿಂಸೆ, ಖಾದಿ ಮತ್ತು ಗ್ರಾಮೋದ್ಯೋಗಗಳ ಕುರಿತು ಅನೇಕ ಕೃತಿಗಳನ್ನು ಬರೆದಿದ್ದಾರೆಯಾದರೂ ನೆನಪಿಸಿಕೊಳ್ಳಲೇ ಬೇಕಾದುದೆಂದರೆ ಅವರ `ಹಿಂದ್‍ಸ್ವರಾಜ್’. ಇದನ್ನು ಅವರು ಲಂಡನ್ನಿನಿಂದ ದಕ್ಷಿಣ ಆಫ್ರಿಕೆಗೆ ಹಡಗಿನಲ್ಲಿ ಮರಳುತ್ತಿದ್ದಾಗ 1909ರಲ್ಲಿ ಒಟ್ಟೂ ಹತ್ತು ದಿನಗಳಲ್ಲಿ ಬರೆದರು. ಇದರ ಮುಖ್ಯ ಕಾಳಜಿ ಭಾರತೀಯ ಪರಂಪರೆಯ ಜೀವನಕ್ರಮದ ವಿಶ್ಲೇಷಣೆ ಹಾಗೂ ಆಧುನಿಕ ಯಂತ್ರ ನಾಗರಿಕತೆಯ ದೌರ್ಬಲ್ಯಗಳನ್ನು ತೋರಿಸಿಕೊಡುವುದಾಗಿದೆ. ಅಹಿಂಸಾತ್ಮಕ ಹೋರಾಟದ ಕುರಿತು ಗಾಂಧೀಜಿಯವರ ಸಮಗ್ರ ದೃಷ್ಟಿ ಇದರಲ್ಲಿ ಪ್ರಕಟಗೊಂಡಿದೆ. ಲಂಡನ್‍ನಲ್ಲಿ ಕೆಲವು ಭಾರತೀಯ ಯುವಕರೊಡನೆ ನಡೆಸಿದ ಸಂವಾದ ಅವರನ್ನು ಎಷ್ಟು ಉತ್ತೇಜಿಸಿತ್ತೆಂದರೆ ಅಲ್ಲಿಂದ ಮರಳುತ್ತಿರುವಾಗಲೇ ಕಾಲ್ಪನಿಕ ಸಂವಾದದದ ರೂಪದಲ್ಲಿ ಇದನ್ನು ಬರೆದರು. ನಿರಂತರವಾಗಿ ಎರಡೂ ಕೈಗಳಲ್ಲಿ ಒಂದಾದ ನಂತರ ಒಂದರಂತೆ ಬಳಸಿ ಅವರು `ಹಿಂದ್ ಸ್ವರಾಜ್’ ಬರೆದುದು ಇಲ್ಲಿ ವಿಶೇಷವಾಗಿದೆ.

ಗಾಂಧೀಜಿ ಮಾಡಿದ ಅನುವಾದಗಳಲ್ಲಿ ಇಂದಿಗೂ ಓದಿಸಿಕೊಳ್ಳುತ್ತಿರುವುದು ಗುಜರಾತಿಗೆ ಅನುವಾದಿಸಿದ `ಸರ್ವೋದಯ’. ಇದು ಗಾಂಧೀಜಿಯನ್ನು ಗಾಢವಾಗಿ ಪ್ರಭಾವಿಸಿದ್ದ ಜಾನ್ ರಸ್ಕಿನ್‍ನ `ಅನ್‍’ಟು ದಿಸ್ ಲಾಸ್ಟ್’ ದ ಅನುವಾದ. ಕಾರ್ಲೈಲ್ ಮತ್ತು ಕಮಲ್ ಪಾಶಾರ ಸಾಹಿತ್ಯದ ಆಯ್ದ ಭಾಗಗಳನ್ನು ಕೂಡ ಅವರು ಅನುವಾದಿಸಿದ್ದಾರೆ. ಪ್ಲೆಟೊ ಬರೆದ `ಡಿಫೆನ್ಸ್ & ಡೆತ್ ಆಫ್ ಸಾಕ್ರೆಟಿಸ್’ ಕೃತಿಯಿಂದ ಪ್ರಭಾವಿತರಾಗಿದ್ದ ಅವರು ಅದನ್ನು `ಸ್ಟೋರಿ ಆಫ್ ಸತ್ಯಾಗ್ರಹ’ ಹೆಸರಿನಲ್ಲಿ ಭಾವಾನುವಾದ ಮಾಡಿದ್ದಾರೆ. ಗಾಂಧೀಜಿ ಅನುವಾದವನ್ನು ಯಾಂತ್ರಿಕವಾಗಿ ಮಾಡುತ್ತಿರಲಿಲ್ಲ. ಉದಾಹರಣೆಗೆ, `ಡೆತ್ ಡಾನ್ಸ್’ ಪದವನ್ನು ಅವರು `ಪತಂಗನೃತ್ಯ’ ಎಂದು ಅನುವಾದಿಸುತ್ತಾರೆ. ಭಾಷೆಯ ಸರಳತೆ ಅವರಿಗೆ ಬೈಬಲ್ಲಿನ ಓದಿನಿಂದ ಪ್ರಾಪ್ತವಾದ್ದು ಎನ್ನುತ್ತಾರೆ ಅವರ ಅಧ್ಯಯನಕಾರರು. ಬರಹಗಾರರಾಗಿ ಗಾಂಧೀಜಿ ಹೇಗಿದ್ದರು ಎಂದು ತಿಳಿಯಲು ಈ ಲೇಖನ ಈ ಬಾರಿಯ ಗಾಂಧೀಜಯಂತಿಯ ದಿನದಂದು ನನ್ನ ಒಂದು ಚಿಕ್ಕ ಪ್ರಯತ್ನವಾಗಿದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

R D Hegade Aalmane

ರಘುಪತಿ ದೇವರು ಹೆಗಡೆ ( ಆರ್ ಡಿ ಹೆಗಡೆ ) ಹಿರಿಯ ಲೇಖಕರು ಹಾಗೂ ವಿಮರ್ಶಕರು. ವಯಸ್ಸು 68. ಸದ್ಯ ಶಿರಸಿ ತಾಲೂಕಿನ ಆಲ್ಮನೆಯಲ್ಲಿ ವಾಸ. ಸಂಸ್ಕೃತ ಹಾಗೂ ಆಂಗ್ಲ ಭಾಷಾ ಸಾಹಿತ್ಯ ದಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ಶಾಸನ ಶಾಸ್ತ್ರದಲ್ಲಿ ಡಿಪ್ಲೊಮಾವನ್ನೂ ಪಡೆದಿದ್ದಾರೆ. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿರುವ ಇವರು ಈಗ ಕೃಷಿಯಲ್ಲಿ ನಿರತರಾಗಿದ್ದಾರೆ. ಇವರ ಸಾಹಿತ್ಯ ಕೃಷಿಯ ವ್ಯಾಪ್ತಿ ದೊಡ್ಡದು.ಭಾರತೀಯ ತತ್ವಶಾಸ್ತ್ರದ ಮೇಲೆ ಹಲವು ಕೃತಿಗಳನ್ನು ಹೊರತಂದಿದ್ದಾರೆ. ವೈಚಾರಿಕ ಲೇಖನಗಳ ಸಂಕಲನ, ಕಥಾಸಂಕಲನಗಳು, ಕಿರುಕಾದಂಬರಿ ಕೂಡ ಪ್ರಕಟವಾಗಿದೆ. ಉಪನಿಷತ್ತುಗಳ ಅರ್ಥಲೋಕ, ವ್ಯಕ್ತಿ ಚಿತ್ರಣ ಕುರಿತಾದ ಎರಡು ಕೃತಿಗಳು,ಅಂಕಣ ಬರಹಗಳ ಎರಡು ಕೃತಿಗಳು,ವಿಮರ್ಶೆಯ ಕುರಿತಾದ ಒಂದು ಕೃತಿ, ಭಗವದ್ಗೀತೆ ಇವರ ಕೆಲವು ಕೃತಿಗಳು. ಆಂಗ್ಲಭಾಷೆಯಲ್ಲಿಯೂ ಕೂಡ ಭಾರತೀಯ ತತ್ವಶಾಸ್ತ್ರದ ಕುರಿತಾದ ಕೃತಿಯನ್ನು ರಚಿಸಿದ್ದಾರೆ. ಇವರ ಲೇಖನಗಳು ನಾಡಿನ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಸ್ತೂರಿ ಮಾಸಪತ್ರಿಕೆಯು ತನ್ನಲ್ಲಿ ಪ್ರಕಟಿಸಿದ ಸಾರ್ವಕಾಲಿಕ 20 ಶ್ರೇಷ್ಠ ಲೇಖನಗಳನ್ನು ಮರುಪ್ರಕಟಿಸಿದಾಗ ಇವರ ಲೇಖನವೂ ಇದ್ದದ್ದು ಇವರ ಹೆಗ್ಗಳಿಕೆ. ನೂರಾರು ಲೇಖಕರ ಪುಸ್ತಕಗಳಿಗೆ ಮುನ್ನುಡಿಯನ್ನೂ, ವಿಮರ್ಶೆಯನ್ನೂ ಬರೆದಿರುತ್ತಾರೆ. ಸದ್ಯ ಶಿರಸಿಯ ದಿನಪತ್ರಿಕೆ “ಲೋಕಧ್ವನಿ” ಯಲ್ಲಿ ಪ್ರತಿವಾರ “ಈ ಹೊತ್ತಿಗೆ” ಅಂಕಣವನ್ನು ಬರೆಯುತ್ತಿದ್ದು ಸಾಕಷ್ಟು ಜನಪ್ರಿಯವಾಗಿದೆ. ಇವರ ಇತ್ತೀಚಿನ ಕೃತಿ “ಜೆನ್ ಮಹಾಯಾನ” ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾಗಿದ್ದು ಈಗಾಗಲೇ 2 ಮರುಮುದ್ರಣಗಳನ್ನು ಕಂಡಿದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!