ಅಂಕಣ

ದೇಶದ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಗಳೇನು?

ನೀರು. ಸಕಲ ಜೀವರಾಶಿಗಳಿಗೂ ಅರಿಯುವ ಏಕಮಾತ್ರ ಪದ. ಅದು  ಚಿಗುರುವ ಸಸ್ಯವಾಗಿರಲಿ ಅಥವಾ ಬಲಿತ ಮರವಾಗಿರಲಿ, ಮಾನವನಾಗಿರಲಿ ಅಥವಾ ಪ್ರಾಣಿ ಪಕ್ಷಿಗಳಾಗಿರಲಿ, ಶಾಕಾಹಾರಿ, ಮಾಂಸಾಹಾರಿ ಹೀಗೆ ಭೂಮಿಯ ಪ್ರತಿಯೊಂದು ಜೀವಕ್ಕೂ ಬೇಕಾಗಿರುವ ಜೀವನಧಾರ ಈ ನೀರು. ನೀರಿನ ವಿನಃ ಎಲ್ಲವೂ ಅಸ್ತಿರ. ಜೀವನವೇ  ದುಸ್ತರ!

ನವೀಕರಿಸಬಹುದಾದ ಸಂಪನ್ಮೂಲಗಳಲ್ಲೊಂದಾಗಿದ್ದ ಜಲ ಇತ್ತೀಚಿನ ಜಾಗತಿಕ ತಾಪಮಾನ ಏರಿಕೆ, ಕೈಗಾರೀಕರಣ, ಜಲ ಮಾಲಿನ್ಯಗಳೆಂಬ ವಿವಿಧ ಕಾರಣಗಳಿಂದ ಕ್ಷೀಣಿಸುತ್ತಾ, ನವೀಕರಿಸಲಾಗದ ಸಂಪನ್ಮೂಲಗಳಲ್ಲೊಂದಾಗುತ್ತಿದೆ. ಭಾರತದಲ್ಲಿ ಅದಾಗಲೇ ಸುಮಾರು ಅರ್ಧದಷ್ಟು ರಾಜ್ಯಗಳು ವಿಪರೀತವಾದ ನೀರಿನ ಅಭಾವವನ್ನು ಎದುರಿಸುತ್ತಿವೆ. ಪ್ರಸ್ತುತ ಕಾಲಮಾನಕ್ಕೆ ಇದು ಒಂದು ಸಮಸ್ಯೆಯಷ್ಟೇ. ಆದರೆ ಇದೆ ಮುಂದುವರೆದರೆ  ನಂತರದ ತಲೆಮಾರಿಗೆ ಕಂಟಕಪ್ರಾಯವಾಗುವುದರಲ್ಲಿ ಸಂಶಯವೇ ಇರುವುದಿಲ್ಲ! ಈ ನಿಟ್ಟಿನಲ್ಲಿ ನಮ್ಮ ತಾರ್ಕಿಕ ದೂರದೃಷ್ಟಿತ್ವ ನಮಗೂ ಹಾಗು ನಮ್ಮ ನಂತರದವರಿಗೂ ಮಹತ್ತರವಾದ ಪಾತ್ರ ವಹಿಸುತ್ತದೆ.

ಭಾರತ ಕೃಷಿ ಪ್ರದಾನ ದೇಶ. ಒಟ್ಟು ನೀರಿನಲ್ಲಿ ಶೇಕಡ  70-80 ರಷ್ಟು ನೀರು ಕೃಷಿಗಾಗೇ ಬೇಕಾಗುತ್ತದೆ. ಉಳಿದಂತೆ ಅತಿ ಹೆಚ್ಚಾಗಿ ನೀರನ್ನು ಕುಡಿಯಲು, ಕಾರ್ಖಾನೆಗಳಿಗೆ ,ವಿದ್ಯುತ್  ಉತ್ಪಾದನ ಘಟಕಗಳು  ಹಾಗು ಇತರೆ ಕ್ಷೇತ್ರಗಳಿಗೆ ಬಳಸಲಾಗುತ್ತದೆ. ದೇಶದಲ್ಲಿ 1997 ರಲ್ಲಿ ಸುಮಾರು 600 CBM (ಬಿಲಿಯನ್ ಕ್ಯೂಬಿಕ್ ಮೀಟರ್) ನಷ್ಟಿದ್ದ ನೀರಿನ ಬೇಡಿಕೆ 2050 ರ ವೇಳೆಗೆ 1500 CBM,  ಅಂದರೆ ಕೇವಲ ಐದು ದಶಕಗಳಲ್ಲೇ ಅದು ತ್ರಿಗುಣವಾಗುವ ಸನಿಹದಲ್ಲಿದೆ ಎಂದು ಅಂದಾಜಿಸಲಾಗಿದೆ! (Source :Central water commission)ಇಲ್ಲಿ ನೋಡಬೇಕಾದ ಗಮನಾರ್ಹ ವಿಷಯವೆಂದರೆ, 1997 ರಲ್ಲಿ ಇದ್ದ ಭಾರತದ ಜನಸಂಖ್ಯೆ ಸುಮಾರು 100 ಕೋಟಿ. 2050 ಕ್ಕೆ ಇದು 160 ಕೋಟಿ ತಲುಪಬಹುದೆಂದು ಅಂದಾಜಿಸಲಾಗಿದೆ. ಇಂದಿನ ಬೇಡಿಕೆಯ ದರದಲ್ಲೇ ಒಂದು ಪಕ್ಷ ನೀರನ್ನು ಪೂರೈಸಲಾದರೆ 2050 ಕ್ಕೆಅಗತ್ಯಕ್ಕಿಂತ ಸುಮಾರು 500 CBM ನಷ್ಟು ನೀರಿನ ಕೊರತೆ ಕಾಡುತ್ತದೆ!

ಇತ್ತಕಡೆ ನದಿನೀರಿನ ವಿಚಾರದಲ್ಲೂ ಸಮಸ್ಯೆ ತೀರಾ ಭಿನ್ನವೇನಲ್ಲ. ಒಟ್ಟು ಲಭ್ಯವಿರುವ ನೀರಿನಲ್ಲಿ ಕೇವಲ ಮೂರನೇ ಒಂದು ಭಾಗದಷ್ಟು ಮಾತ್ರ ಉಪಯೋಗಿಸಲಾಗುತ್ತದೆ. ಉಳಿದ  ಅಷ್ಟೂ ನೀರು ಸಹ ಪೋಲಾಗಿ ಸಮುದ್ರವನ್ನು ಸೇರುತ್ತಿದೆ. (Source :Central water commission) ಅಲ್ಲದೆ ಅರಣ್ಯನಾಶ ಹಾಗು ಅತಿ ಹೆಚ್ಚಿನ ಅಂತರ್ಜಲ ಬಳಕೆಯಿಂದ ಮುಂದಿನ ಕೆಲ ವರ್ಷಗಳಲ್ಲೇ ಅದರ ಮಟ್ಟವೂ ಗಣನೀಯವಾಗಿ ಕ್ಷೀಣಿಸಲಿದೆ ಎಂದು ಅಂದಾಜಿಸಲಾಗಿದೆ. ಒಟ್ಟಿನಲ್ಲಿ ನಗರೀಕರಣ, ಹೆಚ್ಚುತ್ತಿರುವ ಕಾರ್ಖಾನೆಗಳು, ಜನಸಂಖ್ಯಾ ಸ್ಫೋಟ ಹೀಗೆ ಇನ್ನೂ ಹತ್ತು ಹಲವು ಕಾರಣಗಳಿಂದ ನೀರಿನ ಅಭಾವದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತಿದೆ.

ಹಾಗಾದರೆ ಲಭ್ಯತೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮುಂದಿನ ದಿನಗಳಲ್ಲಿ ಬರುವ ನೀರಿನ ಅವಶ್ಯಕತೆಯನ್ನು ನೀಗುವುದಾದರೂ ಹೇಗೆ? ಲಭ್ಯವಿರುವ ನೀರಿನಲ್ಲೇ ಪರಿಸ್ಥಿತಿಯನ್ನುನಿಭಾಯಿಸುವ ಬಗೆಯಾದರೂ ಎಂತಹದ್ದು? ನದಿ ತಟದಿಂದ ಸಾವಿರಾರು ಮೈಲುಗಳು ದೂರವಿರುವ ಬರಪೀಡಿತ ಸ್ಥಳಗಳಿಗೆ ನೀರಿನ ಸರಬರಾಜಿಗೆ ಇರುವ ಸೂಕ್ತ ಕ್ರಮಗಳು ಯಾವುವು? ಆಣೆಕಟ್ಟು ನಿರ್ಮಾಣ, ಡಿಸಾಲೆನೇಷನ್ , ನದಿ ಜೋಡಣೆ? ನದಿ ಜೋಡಣೆಗಾಗಿ ನೀರಿನ ದಿಕ್ಕನ್ನು ಬದಲಿಸುವುದರಿಂದ ನಿಸರ್ಗಕ್ಕೆ, ಜೀವ ಸಂಕುಲಕ್ಕೆ ಆಗುವ ಹಾನಿ ಎಂತಹದ್ದು? ಡಿಸಾಲಿನಶನ್ ಅಷ್ಟೊಂದು ಸುಲಭವಾಗಿದ್ದಲ್ಲಿ ಅದನ್ನು ಕಾರ್ಯಗತಗೊಳಿಸಲು ಇರುವ ಅಡೆತಡೆಗಳೇನು? ದೇಶದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಗಳೇನು ಮತ್ತು ಎಂದು? ಹೀಗೆ ಸಾಲು ಸಾಲು ಪ್ರೆಶ್ನೆಗಳು ನಮ್ಮನ್ನು ಕಾಡುತ್ತವೆ.

ದೇಶದಲ್ಲಿ ಶೇಕಡಾವಾರು ಮಳೆಯ ಪ್ರಮಾಣ ವರ್ಷಕ್ಕೆ ಸುಮಾರು ೧೦೦೦ ಮಿಲಿಮೀಟರ್ನಷ್ಟಿದೆ (Source data.gov  by Government Of India ). ಇದು ಕೆಲವೆಡೆ ಹೆಚ್ಚಾಗಿಯೂ ಕೆಲವೆಡೆ ವಿಪರೀತ ಕಡಿಮೆಯೂ ಇರಬಹುದು. ಆದರೆ ನಮ್ಮಲ್ಲಿ ಏನಿಲ್ಲವೆಂದರೂ ಜೂನ್-ಜುಲೈ ನಿಂದಿಡಿದು  ಸೆಪ್ಟೆಂಬರ್-ಅಕ್ಟೋಬರ್’ವರೆಗೂ ಮಳೆ ಬರುವುದು ಖಂಡಿತ. ಆದರೆ ಇಲ್ಲೂ ಕೂಡ ಕೆಲವೆಡೆ ತುಸು ಹೆಚ್ಚು ಅಥವಾ ಕೆಲವೆಡೆ ತುಸು ಕಡಿಮೆ. ಬೇಸಿಗೆಯ ಬಿಸಿಲಲ್ಲಿ ಬೆಂದು ಬೆಂಡಾಗುವ ನಮಗೆ ಜೂನ್ ತಿಂಗಳಲ್ಲಿ ಮಳೆಯ ಆಗಮನ ಅದೇನೋ ಒಂದು ಬಗೆಯ ಪುಳಕವನ್ನುಟ್ಟಿಸುತ್ತದೆ. ಮೊದಲ ಮಳೆಯ ಹನಿಗಳು ಭೂಮಿಯನ್ನು ಸ್ಪರ್ಷಿಸುವುದನ್ನು ಸಡಗರದಿಂದ ನೋಡುತ್ತೇವೆ ವಿನಃ ರಾಶಿ ರಾಶಿ ನೀರು ಹರಿದು ಪೋಲಾಗುವುದನ್ನು ಕಂಡು ಮರುಗುವವರು ತುಂಬ ವಿರಳ. ಮಳೆಗಾಲ ಕಳೆದು ಮುಂದಿನ ಬೇಸಿಗೆಗೆ ಅಣೆಕಟ್ಟುಗಳೆಲ್ಲ ಖಾಲಿಯಾಗಿ ನೀರಿನ ಅಭಾವ ಎದುರಾದಾಗ ಮಾತ್ರ ಚಡಪಡಿಸುತ್ತೇವೆ. ಸರ್ಕಾರಕ್ಕೆ ದೂರುತ್ತೇವೆ. ದೊಡ್ಡ ದೊಡ್ಡ ಪೈಪುಗಳಲ್ಲಿ ಹೆಚ್ಚಿನ ಸಾಮರ್ಥ್ಯವಿರುವ ಪಂಪುಗಳಿಂದ ದೂರದ ಸ್ಥಳಗಳಿಂದ ಕಷ್ಟಪಟ್ಟು ದಬ್ಬುತಾ ಬರುವ ನೀರಿಗೆ ಇಷ್ಟೊಂದು ಹಾತೊರೆಯುವ ನಾವುಗಳು ಮಳೆರಾಯ ಮನೆಯ ಬಾಗಿಲಿಗೆ ಬಂದು ಎಥೇಚ್ಛಾವಾಗಿ  ಸುರಿಸುವ ನೀರನ್ನು ಅಷ್ಟೇ ಕಾಳಜಿಯಿಂದ ಸಂರಕ್ಷಿಸದೇ ವ್ಯರ್ಥ ಮಾಡುತ್ತೇವೆ.

ಮಳೆ ನೀರಿನ ಸಂಗ್ರಹ ಹಾಗು ಅಂತರ್ಜಲ ವೃದ್ಧಿ:

ಒಂದು ಮನೆ, ಅದರ ಛಾವಣಿಯ ವಿಸ್ತೀರ್ಣ 500 ಚದರ ಮೀಟರ್ ಎಂದಿಟ್ಟುಕೊಳ್ಳೋಣ. ಆ ಮನೆಯಿರುವ ಊರಿನಲ್ಲಿ ಮಳೆಗಾಲದಲ್ಲಿ ಆಗುವ ಮಳೆಯ ಪ್ರಮಾಣ 800 mm. ಚಾವಡಿಯ ಮೇಲೆ ಸುರಿಯುವ ಅಷ್ಟೂ ಮಳೆಯ ನೀರನ್ನು ಸಂಗ್ರಹಿಸಿದರೆ (1 mm of rain = 1 liter of water ) ಆಗುವ ನೀರಿನ ಪ್ರಮಾಣ 350000 ಲೀಟರ್! ಛಾವಣಿಯಿಂದ ಬೀಳುವ ನೀರನ್ನು ಇದ್ದಿಲು ಹಾಗು ಮರಳಿನ ಮುಖಾಂತರ ಹಾಲಾಯಿಸಿದಾಗ ಬಾಗಶಃ ನೀರು ಶುದ್ಧಿಯಾಗುತ್ತದೆ. ಪರೀಕ್ಷೆಯ ವಿನಹ: ಕುಡಿಯಲು ಅಷ್ಟೊಂದು ಯೋಗ್ಯವಲ್ಲದಿದ್ದರೂ ಮನೆಯ ಇತರ ಕೆಲಸಗಳಿಗೆ ಹೀಗೆ ಸಂಗ್ರಹಿಸಿಟ್ಟ ನೀರನ್ನು ಉಪಯೋಗಿಸಬಹುದು. ಒಂದು ಕುಟುಂಬದ ದೈನಂದಿಂದ ಬಳಕೆ 1000 ಲೀಟರ್ ಆದರೂ (350000/1000) ಉತ್ತಮ ಮಳೆಯಾಗುವ ಪ್ರದೇಶದಲ್ಲಿ ಮಳೆನೀರಿನಲ್ಲೇ ವರ್ಷಪೂರ್ತಿ ಜೀವನ ಸಾಗಿಸಬಹುದೆಂಬ ಸಾಧ್ಯತೆಯ ಮಾತು ಸುಳ್ಳಲ್ಲ!! ಮನೆ ಮುಂದೆಯೇ ನಿರ್ಮಿಸುವ ನೀರಿನ ಟ್ಯಾಂಕ್ಗೇ ಈ ರೀತಿಯ ವ್ಯವಸ್ಥೆ ಬಾರಿ ಪ್ರಯೋಜನವನ್ನು ನೀಡಬಲ್ಲದು. ಇನ್ನೂ ಒಂದು ಹೆಜ್ಜೆ ಮುಂದೆ ಸಾಗಿ ಇದೆ ವ್ಯವಸ್ಥೆಯನ್ನು ಕೆಲ ಮನೆಗಳು ಒಟ್ಟಾಗಿ ಸೇರಿ ಹತ್ತಿರದ ಜಲಾಶಯಕ್ಕೆ ಅಥವಾ ಅಣೆಕಟ್ಟಿಗೆ ನೀರಿನ ಪೈಪುಗಳನ್ನು ಜೋಡಿಸಿದರೆ ಅದರ ಇದರ ಪ್ರಯೋಜನ ಇನ್ನೂ ಹೆಚ್ಚು! ಈ ಬಗ್ಗೆ ನಮ್ಮಲ್ಲಿ ಸಾಕಷ್ಟು ಮಾಹಿತಿ ಇದ್ದರೂ ಅನುಷ್ಠಾನದ ಮನೋಭಾವನೆ ಪ್ರತಿಯೊಬರಲ್ಲೂ ಬರಬೇಕು. ಮಳೆ ನೀರಿನ ಸಂರಕ್ಷಣೆ ಪ್ರಸ್ತುತ ಕಾಲಮಾನಕೆ ಒಂದು ಉತ್ತಮ ಪರಿಹಾರವಾಗಬಲ್ಲದು.

ಲಕ್ಷ್ಮಣ್ ಸಿಂಗ್, ರಾಜಸ್ಥಾನದ ಬರಡು ಭೂಮಿಯಲ್ಲೂ ಯಥೇಚ್ಚವಾಗಿ ಹಸಿರನ್ನು ಹೊತ್ತಿಸಿದ ಈತ ಕೆಲ ವರ್ಷದ ಹಿಂದೆ ಮಾದ್ಯಮ ಗಳಲ್ಲಿ ಬಹಳ ಸುದ್ದಿ ಮಾಡಿದ್ದ ವ್ಯಕ್ತಿ. ಅಲ್ಲಿನ ಬರಡು ನೆಲದ ಅಂತರ್ಜಲದ ಮಟ್ಟವನ್ನು ಹೆಚ್ಚಿಸಲು ಆತ ಕೈಗೊಂಡ ‘ಚೌಕ’ ಪದ್ದತಿ ದೇಶದಲ್ಲೆಲ್ಲ ಹೆಸರು ಮಾಡಿತು. ಹಳ್ಳಿಯ ಸುತ್ತ-ಮುತ್ತ ಚೌಕಾಕಾರದ ಗುಂಡಿಗಳನ್ನು ತೆಗೆದು  ಮಳೆಯ ನೀರು ಅದರಲ್ಲಿ ಹಿಂಗುವಂತೆ ಮಾಡಿ ಊರಿನ ಅಂತರ್ಜಲದ ಮಟ್ಟವನ್ನು ಸಾಕಷ್ಟು ಹೆಚ್ಚಿಸಿ ಹೊಲಗದ್ದೆಗಳ್ಳಲ್ಲಿ ಹಸಿರನ್ನು ಬೆಳೆಸಿದ ಈತನ ಶ್ರಮವನ್ನು ದೇಶವೇ ಕೊಂಡಾಡಿತು. ಅಂತರ್ಜಲವನ್ನು ಹೆಚ್ಚಿಸುವ ಇಂತಹ ಸುಲಭ ಸರಳ ಮಾರ್ಗವನ್ನು ಅನುಸರಿಸಿ, ಪೋಲಾಗುವ ನೀರಿನಿಂದ ಕ್ಷೀಣಿಸುತ್ತಿರುವ ಅಂತರ್ಜಲದ ಮಟ್ಟವನ್ನು ಹೆಚ್ಚಿಸುವ ಅರಿವು ನಮ್ಮಲ್ಲಿ ಹಾಗು ನಮ್ಮ ರೈತರಲ್ಲಿ ಮೂಡಬೇಕು. ಹಳ್ಳಿ ಹಳ್ಳಿಯಲ್ಲೂ ಒಬ್ಬ ಲಕ್ಷ್ಮಣ್ ಸಿಂಗ್ ನಂತವರು ಹುಟ್ಟಬೇಕು.

ಡಿಸಾಲೆನೇಷನ್ :

ಇತ್ತೇಚೆಗೆ ಎಲ್ಲೆಲ್ಲೂ ಚರ್ಚೆಯಲ್ಲಿರುವ ವಿಷಯ ಸಮುದ್ರದ ನೀರಿನ ಡಿಸಾಲೆನೇಷನ್. ಅಂದರೆ ಸಮುದ್ರದ ನೀರಿನ ಉಪ್ಪಿನ ಅಂಶವನ್ನು ತೆಗೆದು ಅದನ್ನು ಉಪಯೋಗಿಸಲು ಯೋಗ್ಯವಾದ ನೀರನ್ನಾಗಿ ಮಾಡುವ ಪ್ರಕ್ರಿಯೆ. ‘ಹೌದಲ್ಲ, ಸಮುದ್ರದ ಅಷ್ಟೂ ನೀರನ್ನು ಡಿಸಾಲೆನೇಷನ್ ಮಾಡಿದರೆ ಸಮಸ್ಯೆ ಬಗೆಹರಿದೆ ಹೋಯಿತಲ್ಲ, ಇದರ ಅನುಷ್ಠಾನಕ್ಕೆ ಇನ್ನೂಏಕೆ ಮೀನಾ-ಮೇಷ?’ ಎಂದು ಮೂಗಿನ ಮೇಲೆ ಬೆರೆಳಿಟ್ಟುಕೊಂಡರೆ ಅದು ತಪ್ಪೇನಿಲ್ಲ. ನಿಜ, ಡಿಸಾಲಿನೇಶನ್ ಎಂಬುದು ಪ್ರಸ್ತುತ ನೀರಿನ ಸಮಸ್ಯೆಗೆ ಒಂದು ಪರಿಣಾಮಕಾರಿ ಹಾಗು ಸರಳ ಪರಿಹಾರ. ಆದರೆ ಅದು ಎಷ್ಟೇ ಸರಳವಾದರೂ ಇಂತಹ ಒಂದು ಘಟಕದ ನಿರ್ಮಾಣಕ್ಕೆ ತಗುಲುವ ವೆಚ್ಚ ಬಲು ಹೆಚ್ಚು. ಕೇವಲ ಹಣದ ವಿಚಾರವಾಗಿದ್ದರೆ ಆಗಬುಹುದಿತ್ತೇನೋ  ಆದರೆ ಇದಕ್ಕೆ ಅಷ್ಟೇ ಪ್ರಮಾಣದಲ್ಲಿ ಇಂಧನ ಅಥವಾ ವಿದ್ಯುತ್ ಅವಶ್ಯಕತೆಯೂ ಇದೆ. ಇಷ್ಟೆಲ್ಲಾ ಹೂಡಿಕೆ ಮಾಡಿ ನೀರನ್ನು ಉತ್ಪಾದಿಸಿದರೂ ಕೊನೆಗೆ ಅದಕ್ಕೆ ತಗುಲುವ ವೆಚ್ಚ ಬೇರೆ ವಿಧಾನದಲ್ಲಿ ತಗುಲುವ ವೆಚ್ಚಕ್ಕಿಂತ ಎಷ್ಟೋ ಪಟ್ಟು ಹೆಚ್ಚಿರುತ್ತದೆ. ಹಾಗಾಗಿ ಎಥೇಚ್ಚವಾಗಿ ಹಣ ಹಾಗು ಇಂಧನ ಲಭ್ಯವಿರುವ ದೇಶಗಳಲ್ಲೇ ಈ ಪದ್ದತಿ ಹೆಚ್ಚಾಗಿ ಚಾಲ್ತಿಯಲ್ಲಿರುವುದನ್ನು ಕಾಣಬಹುದು. ಆದ ಕಾರಣ ಡಿಸಾಲೆನೇಷನ್ ಘಟಕಗಳು ನಮ್ಮ ದೇಶದಲ್ಲಿ ತೀರಾ ವಿರಳ. ಅಂದ ಮಾತ್ರಕ್ಕೆ ಈ ಪ್ರಕ್ರಿಯೆ ನಮ್ಮಲ್ಲಿ ಸಾಧ್ಯವೇ ಇಲ್ಲವೆನೆಂದಲ್ಲ. ಸೌರ ಶಕ್ತಿ ಹಾಗು ನಮ್ಮ ವಿಜ್ಞಾನಿಗಳ ಯುಕ್ತಿ ಮುಂದಿನ ದಿನಗಳಲ್ಲಿ ಇದಕೊಂಡು ಸರಳ ಪರಿಹಾರವನ್ನು ಕಂಡುಹಿಡಿಯುವ ಸನಿಹದಲ್ಲಿದೆ. ಒಂದು ಪಕ್ಷ  ಪರಿಹಾರ ಲಭಿಸಿದ್ದೇ ಆದಲ್ಲಿ ದೇಶದ ಭಾಗಶಃ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ.

ಅರಣ್ಯಕರಣ :

ಕಾಡು. ಸಕಲ ಜೀವರಾಶಿಗಳಿಗೂ ಆಶ್ರಯತಾಣವಾಗಿರುವ ಈ ಕಾಡು, ಮಳೆಯ  ಆಗಮನಕ್ಕೂ ಹಾಗು ಮಳೆನೀರ ಸಂರಕ್ಷಣೆಗೂ ಇರುವ ಏಕ ಮಾತ್ರ ಆಧಾರ. ದ್ಯುತಿಸಂಶ್ಲೇಷಣೆಯ (Photosynthesis) ಪ್ರಕ್ರಿಯೆಯಿಂದ ಗಿಡಮರಗಳ ಎಲೆಗಳಿಂದ ಆವಿಯಾಗುವ ನೀರು ಘನೀಕರಣಗೊಂಡು ಮೋಡವಾಗಿ ಪುನ್ಹ ಧರೆಗೆ ಬೀಳುತ್ತದೆ. ಅಲ್ಲದೆ ಹೆಚ್ಚು ಮರಗಳಿದ್ದ ಕಡೆ ಬಿದ್ದ ನೀರು, ನೆಲದೊಳಗೆ ಬಸಿದು ಅಂತರ್ಜಲದ ಮಟ್ಟ ಕೂಡ ಹೆಚ್ಚುತ್ತದೆ. ಪುನಹ ಇದೆ ನೀರು ಎಲೆಗಳವರೆಗೂ ತಲುಪಿ ಪುನಃ ಆವಿಯಾಗಿ ಮೋಡವಾಗಿ ಮಳೆಯಾಗುತ್ತದೆ. ಇದೆ ಮಳೆಯ ಚಕ್ರ.

ಹೆಚ್ಚುತಿರುವ  ಅರಣ್ಯನಾಶ  ಈ ಪ್ರಕಿಯೆಗೆ ವ್ಯತಿರಿಕ್ತವಾಗಿ ಪರಿಣಮಿಸಿದೆ. ಒಂದೆಡೆ ಮಳೆಯ ಪ್ರಮಾಣ ಕಡಿಮೆಯಾದರೆ ಇನ್ನೊಂದೆಡೆ ಮರಗಿಡಗಳ ಅಭಾವವದಿಂದ ಧರೆಗೆ ಬೀಳುವ ಮಳೆನೀರು ಒಂದೆಡೆ ನಿಲ್ಲದೆ,ಹರಿದು ಸಮುದ್ರವನ್ನುಸೇರುತ್ತದೆ. ಹೀಗೆ ಅಂತರ್ಜಲದ ಮಟ್ಟವೂ ಕ್ಷೀಣಿಸತೊಡಗುತ್ತದೆ. ಧರೆಗೆ ಉರುಳುವ ಪ್ರತಿಯೊಂದು ಮರವೂ ಮುಂಬರುವ ನೀರಿನ ಅಭಾವಕ್ಕೆ ಸಾಕ್ಷಿಯಾಗುತ್ತದೆ.   ‘ಕಾಡು ಬೆಳೆಸಿ ನಾಡು ಉಳಿಸಿ’ ಎಂಬ ಶಾಲೆಯಲ್ಲಿ ಹೇಳಿಕೊಟ್ಟ ನಾಣ್ಣುಡಿಯನ್ನು ಮರೆತು ಕಾಡು ಕಡಿದು ನಾಡು ಮಾಡುತ್ತೇವೆ ಆದರೆ ನಾಡ ಮಾಡಿ ನೀರು ಅರಸುತ್ತೇವೆ! ಕುಟುಂಬಕೊಂಡು ಮನೆಯಂತೆ, ಮನೆಗೊಂದು ಮರವಿರಬೇಕು. ಅರಣ್ಯಕರಣ ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು. ದೇಶದ ನೀರಿನ ಸಮಸ್ಯೆಗೆ ಇದು ಉತ್ತಮ ಪರಿಹಾರವಾಗಬೇಕು.

ನದಿ ಜೋಡಣೆ ಹಾಗು ಅಣೆಕಟ್ಟು ನಿರ್ಮಾಣ :

ನದಿ ಜೋಡಣೆ ಹಾಗು ಅಣೆಕಟ್ಟು ನಿರ್ಮಾಣ. ನಮ್ಮ ಉತ್ತರ ಭಾರತದಲ್ಲಿ ಪ್ರತಿವರ್ಷ ಅತಿವೃಷ್ಟಿಯಿಂದ ಸಂಭವಿಸುವ ಸಾವು-ನೋವು, ಬೆಳೆ ಹಾನಿ ತುಂಬ ಸಾಮನ್ಯ. ಅಲ್ಲದೆ ಅದಷ್ಟೂ ನೀರು ಉಪಯೋಗಿಸಲಾಗದೆ ಪೋಲಾಗುತ್ತಾ ಸಮುದ್ರವನ್ನು ಸೇರುತ್ತದೆ. ಉತ್ತರದಲ್ಲಿ ಅತಿವೃಷ್ಟಿಯಾದರೆ ದಕ್ಷಿಣದಲ್ಲಿ ಅನಾವೃಷ್ಟಿ! ಇದೆ ಅಂಶಗಳನಿಟ್ಟುಕೊಂಡು ಕೆಲವರ್ಷಗಳ ಹಿಂದೆ ಗಂಗಾ ಕಾವೇರಿ ನದಿ ಜೋಡಣೆ ಎಂಬ ಮಹತ್ತರವಾದ ಯೋಜನೆಯೊಂದನ್ನು ಕೈಗೆತ್ತಿಕೊಳ್ಳಗಾಗಿತ್ತು. ಉತ್ತರ ಭಾರತದ ನದಿಗಳನ್ನು ದಕ್ಷಿಣ ಭಾರತದ ನದಿಗಳೊಟ್ಟಿಗೆ ಸೇರಿಸಿ ದಕ್ಷಿಣದ ನೀರಿನ ಅಭಾವಕ್ಕೆ ಒಂದು ಸೂಕ್ತ ಪರಿಹಾರವನ್ನು ಕೊಡುವುದಲ್ಲದೆ ಜೋಡಣೆಯ ಹಾದಿಯ ಸೂಕ್ತ ಸ್ಥಳಗಳಲ್ಲಿ ಅಣೆಕಟ್ಟು ನಿರ್ಮಿಸುವ ಉದ್ದೇಶವೂ ಈ ಯೋಜನೆಯದಾಗಿತ್ತು. ಹೀಗೆ ಆಣೆಕಟ್ಟು ನಿರ್ಮಿಸಿ ನೀರನ್ನು ಶೇಖರಿಸಿ ವ್ಯವಸಾಯ  ಹಾಗು ಕುಡಿಯುವ ನೀರಿಗೆ ಒಂದು ಶಾಶ್ವತ ಪರಿಹಾರವನ್ನು ಒದಗಿಸುವುದಲ್ಲದೇ ಸಾಕಷ್ಟು ವಿದ್ಯುತ್ ಉತ್ಪಾದನೆಯೂ ಸಹ ಇದರಿಂದ ಸಾಧ್ಯವಿತ್ತು.  ಇಂದು ನಾವು ಕಾಣುವ ಕಾವೇರಿ, ಮಹದಾಯಿ, ಕೃಷ್ಣಾ ಹಾಗು ಇನ್ನು ಹಲವು ಜಲವಿವಾದಗಳಿಗೆ ಈ ಯೋಜನೆ ಪರಿಹಾರವಾಗುತ್ತಿತ್ತು. ಆದರೆ ಅರ್ಥವಿಲ್ಲದ ಪೊಳ್ಳುವಾದ ಹಾಗು ಇದರ ನಿಜವಾದ ಸದುದ್ದೇಶವನ್ನು ರಾಜ್ಯಸರ್ಕಾರಗಳಿಗೆ ಮನವರಿಕೆ ಮಾಡಿಕೊಡದ ಕೇಂದ್ರಸರ್ಕಾರಗಳು ಆರ್ಥಿಕಬಿಕ್ಕಟ್ಟು, ಪರಿಸರ ನಾಶವೆಂಬ ಸಬೂಬುಗಳನ್ನು ಕೊಟ್ಟು ಈ ಯೋಜನೆಯ ಅನುಷ್ಠಾನವನ್ನು ಮರೀಚಿಕೆಯಾಗಿಸಿದವು. ಇಂದು ಇದೆ ಬಗೆಯ ಹಲವು ನದಿ ಜೋಡಣೆ ಯೋಜನೆಗಳು ಯಶಸ್ವೀಯಾಗಿ ನಿರ್ಮಾಣಗೊಂಡು ಸಾಕಷ್ಟು ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಿವೆ. ಹಾಗಾಗಿ ನಮ್ಮ ಸರ್ಕಾರಗಳು ಇಂಥಹ ಬಹುಪಯೋಗಿ  ಯೋಜನೆಗಳ ಬಗ್ಗೆ ತಾರ್ಕಿಕವಾದ ಗಮನ ಹರಿಸುವುದು ಹೆಚ್ಚು ಸೂಕ್ತ.

ಹನಿ ನೀರಾವರಿ ಪದ್ದತಿ:

ಮೊದಲೇ ಹೇಳಿದಂತೆ ಭಾರತದ ಒಟ್ಟು ಲಭ್ಯವಿರುವ ನೀರಿನಲ್ಲಿ ಸುಮಾರು 70 ರಿಂದ 80 ರಷ್ಟು ನೀರನ್ನು ಕೃಷಿಗಾಗೇ ಉಪಯೋಗಿಸಲಾಗುತ್ತದೆ. ಇಷ್ಟೊಂದು ಪ್ರಮಾಣದ ನೀರನ್ನು ಉಪಯೋಗಿಸಿಯೂ ಕೃಷಿಯಲ್ಲಿ ನೀರಿನ ಕೊರತೆ ಕಾಡುತಿರುವುದು ವಿಷಾದನೀಯ. ಹಾಗಾದರೆ ಬಳಸುವ ಅಷ್ಟೂ ನೀರು ಕೃಷಿಗೆ ಸಾಕಾಗದೆ ಹೋಗುತ್ತದೆಯೋ ಅಥವಾ ಇಲ್ಲೂ ಸಹ ಹೆಚ್ಚಿನ ಪ್ರಮಾಣದ ನೀರು ಪೋಲಾಗಿ ಹೋಗುತ್ತದೆಯೋ ಅನ್ನುವುದೇ ಪ್ರೆಶ್ನೆ. ನಮಗೆ ತಿಳಿದಿರುವಂತೆ ಹನಿ ನೀರಾವರಿ ಪದ್ದತಿ ಕೃಷಿಯಲ್ಲಿ ಕಂಡ ಅದ್ಬುತ ಸುಧಾರಣೆಗಲ್ಲೊಂದು. ಈ ಪದ್ದತಿಯಿಂದ ಮಣ್ಣಿನ ಸವಕಳಿಯನ್ನೂ ತಡೆಗಟ್ಟಬಹುದಲ್ಲದೆ ಸಾಮಾನ್ಯ ನೀರಾವರಿ ಪದ್ಧತಿಗಿಂತ ಹೆಚ್ಚಿನ ಇಳುವರಿ ಸಾದ್ಯವಿದೆ. ಸಾಂಪ್ರದಾಯಿಕ ಪದ್ದತಿಯ ನೀರಾವರಿಗಿಂತ ಕೇವಲ ‘ಅರ್ಧದಷ್ಟು’ ನೀರಿನಲ್ಲೇ ಉತ್ತಮ ಫಸಲನ್ನು ಬೆಳೆಯಬಹುದಾದ ವಿಧಾನ. ಒಂದು ಪಕ್ಷ ದೇಶದ ಪ್ರತಿಯೊಬ್ಬ ಕೃಷಿಕನೂ  ಹನಿ ನೀರಾವರಿ ಪದ್ದತಿಯನ್ನು ಅಳವಡಿಸಿಕೊಂಡನೆಂದರೆ ಅದೆಷ್ಟು ನೂರು ಬಿಲಿಯನ್ ಕ್ಯೂಬಿಕ್ ಮೀಟರ್ನಷ್ಟು ನೀರನ್ನು ಉಳಿಸಬಹುದು ಎಂಬುದನ್ನು ಯೋಚಿಸಿ ನೋಡಿ.ಇಂತಹ ಸರಳ ಬಹುಪಯೋಗಿ ನೀರಾವರಿ ವಿಧಾನವನ್ನೂ ಅಳವಡಿಸ್ಕೊಳ್ಳಲು ಹಿಂದೇಟೇಕೆ?? ಈ ನಿಟ್ಟಿನಲ್ಲಿ ನಮ್ಮ ರೈತರು ಜಾಗೃತರಾಗಿ ಇಂತಹ ಪರಿಣಾಮಕಾರಿ ಪದ್ದತಿಯನ್ನು ಅಳವಡಿಕೊಳ್ಳುವುದು ಅವಶ್ಯಕವಾಗಿದೆ.

ಒಟ್ಟಿನಲ್ಲಿ ನಮ್ಮಲ್ಲಿ ಅತಿಯಾದ ನೀರಿನ ಸಮಸ್ಯೆ ಇರುವುದಂತು ನಿಜ. ಆದ ಮಾತ್ರಕ್ಕೆ ಕೊಂಚ ಹೆಚ್ಚಿರುವ ಅಥವಾ ಬೇರ್ಯಾರೊ ಸಂಗ್ರಹಿಸಿಟ್ಟ ನೀರಿನ ಮೇಲೆ ಕಣ್ಣಾಕುವುದು ಶೋಭೆ ತರುವ ವಿಚಾರವಲ್ಲ. ಇಪ್ಪತ್ತೊಂದನೇ ಶತಮಾನದಲ್ಲಿರಿವ ನಾವುಗಳು ನಮ್ಮ ಬೊಗಸೆಯ ನೀರನ್ನು ಕಾಪಾಡಿಕೊಳ್ಳುವಷ್ಟಾದರೂ ವೈಜ್ಞಾನಿಕರಾಗಬೇಕು. ಪ್ರಸ್ತುತ ಜಾಗತಿಕ ಮಟ್ಟದ ಹವಾಮಾನವನ್ನು ಅರಿತು ನೀರನ್ನು ಮಿತಿಯಾಗಿ ವ್ಯಹಿಸಬೇಕು. ಆ ಮನೋಭಾವನೆ ನಮ್ಮಲ್ಲಿ ಮೂಡಬೇಕು ಹಾಗು ಮೂಡಿಸಬೇಕು. ಅತಿವೃಷ್ಟಿಯ ಜಾಗಗಳಲ್ಲಿನ ನೀರನ್ನು ಬರಪೀಡಿತ ಪ್ರದೇಶಗಳಿಗೆ ಸಾಗಿಸುವ ‘ವೈಜ್ಞಾನಿಕ’ ಯೋಜನೆಗಳನ್ನು ಅಳವಡಿಸಿಕೊಳ್ಳಬೇಕು. ಅರಣ್ಯಕರಣ ಪ್ರತಿಕುಟುಂಬದ ಮನೆಮಾತಾಗಬೇಕು. ತುಂಬ ಸರಳ ಹಾಗು ಅಷ್ಟೇ ಪರಿಣಾಮಕಾರಿಯಾದ ನೀರಾವರಿ ಪದ್ಧತಿಗಳನ್ನು ರೈತರು ಅರಿತು ಅಳವಡಿ ಸಿಕೊಳ್ಳಬೇಕು .ಈ ನಿಟ್ಟಿನಲ್ಲಿ ಪಾರದರ್ಶಕ ಚರ್ಚೆಯಾಗಬೇಕು .ಇಲ್ಲವೆಂದರೆ ಮುಂದೊಂದು ದಿನ ಅದೆಷ್ಟೇ ಹಣ ಸುರಿದರೂ, ಬಡಿದಾಡಿಕೊಂಡರೂ ಸಹ ಒಂದು ತೊಟ್ಟು ನೀರು ಉತ್ಪತಿಯಾಗದಿರಬಹುದು. ಈ ನಿಟ್ಟಿನಲ್ಲಿ ನಮ್ಮ ನಾಯಕರ, ರೈತರ, ಹೆಚ್ಚಾಗಿ ನಮ್ಮ ನಿಮ್ಮೆಲ್ಲರ ಚಿಂತನೆ ತುಂಬಾ ಮಹತ್ವವಾದುದು.

– Sujith Kumar

sujith9491@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!