Featured ಅಂಕಣ

ಕಲಾಂ ಅಜ್ಜನ ಕ್ಷಿಪಣಿ ಕನಸು

1983,  ದೆಹಲಿಯ ಸೌತ್ ಬ್ಲಾಕ್ನ ರಕ್ಷಣಾ ಸಚಿವಾಲಯದಲ್ಲಿ ಒಂದು ಉನ್ನತ ಮಟ್ಟದ ಸಭೆ. ರಕ್ಷಣಾ ಸಚಿವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಉಪಸ್ಥಿತರಿದ್ದವರು ದೇಶದ ರಕ್ಷಣಾ ಪಡೆಯ ಮುಖ್ಯಸ್ಥರು ಮತ್ತು ಉನ್ನತ ಮಟ್ಟದ ಅಧಿಕಾರಿಗಳೆ ಆದರೂ ಸಭೆಯ ಕೇಂದ್ರ ಬಿಂದು ಮಾತ್ರ ಒಬ್ಬ ವಿಜ್ಞಾನಿ ಮತ್ತು ಈ ವಿಜ್ಞಾನಿ ಪ್ರಸ್ತಾಪಿಸಿದ ಸುಧೀರ್ಘ 12 ವರುಷಗಳ, ಬರೊಬ್ಬರಿ 390 ಕೋಟಿ ವೆಚ್ಚದ ಒಂದು ಯೋಜನೆ, ಅದೂ ದೇಶದ ರಕ್ಷಣಾ ವ್ಯವಸ್ಥೆಗೆ ಸಂಬಂಧಪಟ್ಟದ್ದು!!!! ಸಹಜವಾಗಿಯೇ ಸಭೆಯಲ್ಲಿದ್ದವರಿಗೆ ಈ ವಿಜ್ಞಾನಿಯ ಕನಸಿನ ವಾಸ್ತವಿಕತೆಯ ಬಗ್ಗೆ ಸಂಶಯ ಮೂಡಿತು. ಆದರೆ ಈ ಯೋಜನೆಯು ಭವಿಷ್ಯದಲ್ಲಿ ಭಾರತದ ರಕಣಾ ವ್ಯವಸ್ಥೆಯನ್ನು ಹೇಗೆ ಬದಲಾಯಿಸಬಲ್ಲದು ಎಂಬ ದೂರದೃಷ್ಟಿಯಿಂದ ಮತ್ತು ದೃಢ ಆತ್ಮವಿಶ್ವಾಸದಿಂದ ಎದುರಿಗಿದ್ದ ಸಂಶಯಗಳನ್ನು ನಿವಾರಿಸಿ, ರಕ್ಷಣಾ ಸಚಿವರ ಮನವೊಲಿಸಿ, ಪ್ರಧಾನಮಂತ್ರಿಯಿಂದ ಒಪ್ಪಿಗೆ ಪಡೆದು ಈ ಯೋಜನೆಯ ಮೂಲಕ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಸರಿಸಮಾನವಾಗಿ ನಿಲ್ಲುವಂತೆ ಮಾಡಿದ ಈ ವಿಜ್ಞಾನಿಯೆ ಭಾರತದ Missile man ಅರ್ಥಾತ್ ಕ್ಷಿಪಣಿ ಮಾನವ  ಡಾ.ಎಪಿಜೆ ಅಬ್ದುಲ್ ಕಲಾಂ. ವೈರಿಗಳ ಎದೆ ನಡುಗಿಸುವಂತ ಕ್ಷಿಪಣಿಗಳನ್ನು ತಯಾರಿಸಿ ಭಾರತದ ಸಾಮಥ್ರ್ಯವನ್ನು ಜಗತ್ತಿಗೆ ತೋರಿಸಿಕೊಟ್ಟ ಈ ಯೋಜನೆಯೇ Integrated Guided Missile Development Programme (IGMDP).

ಈ ಯೋಜನೆಯ ಕುರಿತು ಮಾತನಾಡುವ ಮುನ್ನ ಕ್ಷಿಪಣಿಯ ಬಗ್ಗೆ ಸ್ವಲ್ಪ ತಿಳಿಯುವ ಪ್ರಯತ್ನ ಮಾಡೋಣ. ಕ್ಷಿಪಣಿಯ ಮಾದರಿಯನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ದೀಪಾವಳಿಯ ಸಮಯದಲ್ಲಿ ಹಾರಿಸುವ ರಾಕೆಟನ್ನು ಕಲ್ಪಿಸಿಕೊಳ್ಳಿ. ಈಗ ಈ ವಿಶಿಷ್ಟ(ವಿಚಿತ್ರ) ರಾಕೆಟ್ ನ ತುದಿಗೆ ದೊಡ್ಡ ಪಟಾಕಿಗಳಾದಂತಹ ಅಟಾಂ ಬಾಂಬ್ ಮತ್ತು ಲಕ್ಷ್ಮೀ ಪಟಾಕಿಗಳನ್ನು  ಅಳವಡಿಸೋಣ , ಈಗ ಈ ವಿಶಿಷ್ಟ(ವಿಚಿತ್ರ) ರಾಕೆಟನ್ನು ಉಡಾಯಿಸಿದ ಕೂಡಲೆ ಎತ್ತೆತ್ತಲೋ ಹಾರುವ ಬದಲಾಗಿ ನೀವು ನಿಶ್ಚಯಿಸಿದ ದಿಕ್ಕಿನಲ್ಲೆ ಸಾಗಿ ನೀವು ನಿಗದಿಪಡಿಸಿದ ಗುರಿಯನ್ನು ತಲುಪಿ ಅಳವಡಿಸಿದಂತಹ ಇತರ ಪಟಾಕಿಗಳನ್ನು ಸ್ಫೋಟಿಸಿ ಅಲ್ಲಿ ಒಂದಿಷ್ಟು ಹಾನಿ ಉಂಟು ಮಾಡುತ್ತದೆ!. ಕ್ಷಿಪಣಿಯ ಕಾರ್ಯ ಹಾಗು ಕಾರ್ಯವೈಖರಿಯು ಇದೆ. ಇನ್ನು ಸದಾಕಾಲ ತೊಂದರೆ ನಿಡುವ ಪೀಡಿಸುವ ನಿಮ್ಮ ನೆರೆಮನೆಯವರಿಗೆ ಅಥವ ಇತರ ಶತ್ರುಗಳಿಗೆ ನಿಮ್ಮ ಬಳಿ ಇಂತಹ ಅತ್ಯಾಧುನಿಕ ರಾಕಟ್ ಇದೆ ಎಂದು ತಿಳಿದ ಮಾತ್ರಕ್ಕೆ ಅವರು ಎರಗುವ ಮುನ್ನ ಒಮ್ಮೆ ಯೋಚಿಸುವುದಿಲ್ಲವೆ? ಹಾಗೆಯೇ ಕ್ಷಿಪಣಿಯು ದೇಶದ ಬಲವನ್ನು ನಿರ್ಧರಿಸುತ್ತದೆ.

ಆದರೆ ಕ್ಷಿಪಣಿಯ ತಯಾರಿಕೆಯು ಮೇಲೆ ಕೊಟ್ಟ ಉದಾಹರಣೆಯಷ್ಟು ಸುಲಭವಲ್ಲ. ಅದೂ 1980 ರ ಕಾಲದಲ್ಲಿ ಕ್ಷಿಪಣಿಯನ್ನು ತಯಾರಿಸಲು ಬೇಕಾಗುವ ತಂತ್ರಜ್ಞಾನಕ್ಕಾಗಿ ಭಾರತ ಬೇರೆ ದೇಶದ ಹತ್ತಿರ ಭಿಕ್ಷೆ ಬೇಡುವ ಪರಿಸ್ಥಿತಿ ಇತ್ತು. ಅದಾಗಲೆ ದೇಶದ ರಕ್ಷಣಾ ವ್ಯವಸ್ಥೆಗೆ ಸಂಬಂಧಪಟ್ಟ ಸಂಶೋಧನೆಯ ಜವಬ್ದಾರಿ ಹೊತ್ತಿದ್ದ ಡಿ.ಆರ್.ಡಿ.ಒ ಸಂಸ್ಥೆ ಸೋವಿಯತ್ ಯೂನಿಯನ್ ನ ಸಹಾಯ ಪಡೆದು ಡೆವಿಲ್ಎಂಬ ಕ್ಷಿಪಣಿಯನ್ನು ತಯಾರಿಸಲು ಹೋಗಿ ಕೈ ಸುಟ್ಟುಕೊಂಡಿತ್ತು. ಇಂತಹ ಸಮಯದಲ್ಲಿ ಶೇ.100ರಷ್ಟು ಸ್ವದೇಶಿ ತಂತ್ರಜ್ಞಾನದಿಂದ ಕ್ಷಿಪಣಿಯನ್ನು ತಯಾರಿಸುವ ಪಣತೊಟ್ಟವರು ಡಾ.ಎಪಿಜೆ ಅಬ್ದುಲ್ ಕಲಾಂ. ಆಗಷ್ಟೆ ಇಸ್ರೋದ ಎಸ್ ಎಲ್ ವಿ –3 ಯೋಜನೆಯ ನಿರ್ದೇಶಕರಾಗಿ ರೋಹಿಣಿಯನ್ನು ಯಶಸ್ವಿಯಾಗಿ ಕಕ್ಷಗೆ ಸೇರಿಸಿದ್ದ ಕಲಾಂ ಸಾಹೇಬರನ್ನು ಗಮನಿಸಿದ ಸರ್ಕಾರ, ಇಸ್ರೋದಿಂದ ಡಿ.ಆರ್.ಡಿ.ಎಲ್‍ನ ನಿರ್ದೇಶಕರಾಗಿ ಬರುವಂತೆ ಮನವಿ ಸಲ್ಲಿಸಿತು. ಆಗಿನ ಇಸ್ರೋದ ಅಧ್ಯಕ್ಷ ಸತೀಶ್ ಧವನ್‍ಗೆ ಬರೆದ ಪತ್ರದಲ್ಲಿ ಕಲಾಂ ಹೀಗೆ ಉಲ್ಲೇಖಿಸುತ್ತಾರೆ ಸರ್, ನನ್ನ ಹೃದಯ ಕ್ಷಿಪಣಿಯತ್ತ ವಾಲುತ್ತಿದೆ, ಅತ್ತ ಹೋಗ ಬಯಸುತ್ತೇನೆ”.

ಡಿ.ಆರ್.ಡಿ.ಎಲ್. ನ ನಿರ್ದೇಶಕರಾಗಿ ಐ.ಜಿ.ಎಂ.ಡಿ.ಪಿ ಯೋಜನೆಯನ್ನು ಕೈಗೆತ್ತಿಕೊಂಡ ಅಬ್ದುಲ್ ಕಲಾಂ, ಪ್ರಾರಂಭದಲ್ಲಿ ಹಲವಾರು ಸವಾಲುಗಳನ್ನು ಎದುರಿಸಬೇಕಾಯಿತು. ಮೊದಲಿಗೆ ಡೆವಿಲ್ಯೋಜನೆಯ ವೈಫಲ್ಯದಿಂದ ನಿರಾಶೆಗೊಂಡಿದ್ದ ಡಿ.ಆರ್.ಡಿ.ಒನ ವಿಜ್ಞಾನಿಗಳಿಗೆ ಮತ್ತೆ ಚೈತನ್ಯ ತುಂಬುವ ಕೆಲಸ ಮಾಡಿದರು. ಅತ್ಯಂತ ಮುಖ್ಯವಾಗಿ ಯೋಜನೆಯ ಯಶಸ್ಸಿಗೆ  ರಕ್ಷಣಾ ಪಡೆಯನ್ನು ಮತ್ತು ವಿಜ್ಞಾನಿಗಳನು ಒಟ್ಟುಗೂಡಿಸಿ ಇಬ್ಬರ ಮಧ್ಯೆ ಸಂವಹನ ಮೂಡುವಂತೆ ಮಾಡಿದರು. ದೀರ್ಘವಾದ 12 ವರ್ಷಗಳ ಯೋಜನೆಯನ್ನು ಪ್ರಮುಖವಾಗಿ 5 ಭಾಗಗಳಾಗಿ ವಿಂಗಡಿಸಿದರು ಮತ್ತು ಈ 5 ವಿಭಾಗಗಳಿಗೆ 5 ನಿರ್ದೇಶಕರನ್ನು ಎಷ್ಟು ಜಾಗುರೂಕತೆಯಿಂದ ನೇಮಿಸಿದರೆಂದರೆ ಈ 5 ನಿರ್ದೇಶಕರು ಭವಿಷ್ಯದಲ್ಲಿ ತಲಾ 5ರಂತೆ ಇನ್ನೂ 25 ನಿರ್ದೇಶಕರನ್ನು ರೂಪಿಸಬೇಕೆಂಬುದು ಅವರ ಉದ್ದೇಶವಾಗಿತ್ತು. ಯೋಜನೆಯು ಕ್ಷಿಪ್ರಗತಿಯಲ್ಲಿ ಸಾಗುವಂತೆ ಮಾಡಲು ದೇಶದ 400 ವಿಜ್ಞಾನಿಗಳನ್ನು ಒಂದೇ ಸೂರಿನಡಿ ತರಲಾಯಿತು. ದೇಶದ ಮೂಲೆ ಮೂಲೆಯಲ್ಲಿದ್ದ ಪ್ರತಿಭಾವಂತ ಯುವ ವಿಜ್ಞಾನಿಗಳನ್ನು ಗುರುತಿಸಿ ದೇಶ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿದರು. ಈ ಯೋಜನೆಯಲ್ಲಿ ಅಬ್ದುಲ್ ಕಲಾಂ ಒಬ್ಬ ವಿಜ್ಞಾನಿಗಿಂತ ಮುಖ್ಯವಾಗಿ ಒಬ್ಬ ನಾಯಕನ ಪಾತ್ರ ವಹಿಸಿದ್ದರು. 400 ಪ್ರತಿಭಾವಂತ ವಿಜ್ಞಾನಿಗಳೊಂದಿಗೆ ಬೆರೆತು ಅವರ ಎದುರಿಗಿದ್ದ ಸಮಸ್ಯೆ ಮತ್ತು ಸಂಶಯಗಳನ್ನು ನಿವಾರಿಸಿ ಅವರೊಳಗೆ ಹೊಸ ಹೊಸ ಕನಸುಗಳನ್ನು ಬಿತ್ತಿ, ಬೇರೆ ಬೇರೆ ವಿಭಾಗಗಳಲ್ಲಾದಂತಹ ಕೆಲಸದ ಪ್ರಗತಿಯನ್ನು ಗಮನಿಸುವಂತಹ ಅತ್ಯಂತ ಜವಬ್ದಾರಿಯುತ ಕೆಲಸ ಅವರದ್ದಾಗಿತ್ತು.

ಇದೆಲ್ಲದರ ಫಲವೆಂಬಂತೆ ಸೋತು ಬಿದ್ದಿದ್ದ ಡೆವಿಲ್ಕ್ಞಿಪಣಿಯನ್ನು  ಜೂನ್ 29, 1984 ರಂದು ಪರೀಕ್ಷಾರ್ಥವಾಗಿ ಯಶಸ್ವಿಯಾಗಿ ಉಡಾಯಿಸಲಾಯಿತು. ಇದು ವಿಜ್ಞಾನಿಗಳ ಉತ್ಸಾಹವನ್ನು ನೂರ್ಮಡಿಗೊಳಿಸಿತು. ತಂತ್ರಜ್ಞಾನದ ಪರಿಕ್ಷಾರ್ಥವಾಗಿ ಯೋಜನೆಯ ಮೊದಲ ಕುಡಿ ತ್ರಿಶೂಲ್ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಾರ್ಥವಾಗಿ ಉಡಾಯಿಸಲಾಯಿತು. ಇದರ ಬೆನ್ನಲ್ಲೆ 1988ರಲ್ಲಿ ಯೋಜನೆಯ ಎರಡನೆಯ ಕುಡಿ ಪೃಥ್ವಿ-1’ರ ಯಶಸ್ಸು. 100 ಕೆ.ಜಿ.ಗಳಷ್ಟು ಸ್ಫೋಟಕಗಳನ್ನು ಹೊತ್ತು ಸುಮಾರು 150 ಕಿ.ಮೀ. ಕ್ರಮಿಸಬಲ್ಲ ಸಾಮಥ್ರ್ಯ ಇದರದ್ದು. ಪ್ರಸ್ತುತ ಸುಧಾರಿತ ಪೃಥ್ವಿ-3’ ನಿರ್ಮಿಸಲಾಗಿದ್ದು 500-1000 ಕೆ.ಜಿ.ಗಳಷ್ಟು ಸ್ಫೋಟಕಗಳನ್ನು ಹೊತ್ತು ಸುಮಾರು 350-600 ಕಿ.ಮೀ ದೂರದಲ್ಲಿರುವ ಗುರಿಯನ್ನು ನಾಶ ಮಾಡಬಲ್ಲದ್ದಾಗಿದೆ.

ಯಶಸ್ಸಿನ ಜೊತೆಗೆ ಸಾಗುತ್ತಿದ್ದ ಐ.ಜಿ.ಎಂ.ಡಿ.ಪಿ. ತಂಡಕ್ಕೆ ಸವಾಲು ಎದುರಾಗಿದ್ದು ಅಗ್ನಿ-1’ರ ಪರೀಕ್ಷಾರ್ಥ ಉಡಾವಣೆಯ ಸಂದರ್ಭದಲ್ಲಿ. ಎಪ್ರಿಲ್ 20, 1989 ರಂದು ಇದರ ಮೊದಲ ಪರೀಕ್ಷಾರ್ಥ ಉಡಾವಣೆ ಮಾಡುವಾಗ ಕೆಲವೊಂದು ಉಪಕರಣಗಳು ಕೈ ಕೊಟ್ಟ ಕಾರಣ ಉಡ್ಡಯನವನ್ನು ಮುಂದೂಡಲಾಯಿತು. ದುರಾದೃಷ್ಟವಶಾತ್ ಮೇ 1ರಂದು ನಡೆದ ಎರಡನೆಯ ಪ್ರಯತ್ನದಲ್ಲೂ ಇದೇ ತೊಂದರೆ ಸಂಭಿವಿಸಿದ ಕಾರಣ ಮತ್ತೆ ಉಡ್ಡಯನವನ್ನು ಮುಂದೂಡುವ ನಿರ್ಧಾರ ತೆಗೆದುಕೊಳ್ಳಲಾಯಿತು. ಈ ರೀತಿಯ ಸರಣಿ ವೈಫಲ್ಯವನ್ನು ನಮ್ಮ ದೇಶದ ಮಾಧ್ಯಮಗಳೇ ಅನೇಕ ರೀತಿಯಲ್ಲಿ ಹೀಯಾಳಿಸಿದವು. ದೇಶದ ಪ್ರತಿಷ್ಠಿತ ಪತ್ರಿಕೆಗಳು ಈ ಸರಣಿ ಸೋಲನ್ನು ಕಾರ್ಟೂನ್‍ಗಳ ಅಪಹಾಸ್ಯ ಮಾಡಿದ್ದು ವಿಪರ್ಯಾಸವೇ ಸರಿ. ಎಲ್ಲಾ ಟೀಕೆಗಳನ್ನು ಶಾಂತ ರೀತಿಯಿಂದಲೇ ಸ್ವಾಗತಿಸಿದ ಕಲಾಂ, ಮೇ 22, 1989 ರಂದು ಅಗ್ನಿ-1’ನ್ನು ಯಶಸ್ವಿಯಾಗಿ ಉಡಾಯಿಸುವುದರ ಮೂಲಕ ತಕ್ಕ ಉತ್ತರ ನೀಡಿದರು. ಅಗ್ನಿ-1’ಸಾಮರ್ಥ್ಯ ಎಷ್ಟು ಗೊತ್ತೇನು? 1000 ಕೆ.ಜಿ.ಗಳಷ್ಟು ಅಣು ಸ್ಫೋಟಕಗಳನ್ನು ಹೊತ್ತುಕೊಂಡು ಸುಮಾರು 1500 ಕಿ.ಮೀ. ವ್ಯಾಪ್ತಿಯಲ್ಲಿರುವ ಅಂದರೆ ಪಾಕಿಸ್ತಾನದ ಎಲ್ಲಾ ಪ್ರದೇಶಗಳನ್ನು ಒಳಗೊಂಡು, ನೈರುತ್ಯ ಚೀನಾದ ಪ್ರದೇಶದಲ್ಲಿರುವ ಶತ್ರುಗಳ ನೆಲೆಯನ್ನು ಹೊಡೆದುರುಳಿಸಬಲ್ಲದ್ದಾಗಿದೆ. ಇಷ್ಟು ಮಾತ್ರವಲ್ಲ ಪ್ರಸ್ತುತ ದೇಶದ ರಕ್ಷಣಾ ಪಡೆ, ಸುಧಾರಿತ ಅಗ್ನಿ-5’ ಕ್ಷಿಪಣಿ ಹೊಂದಿದ್ದು ಇದು ಸುಮಾರು 1500 ಕೆ.ಜಿ.ಗಳಷ್ಟು ಅಣು ಸ್ಫೋಟಕವನ್ನು ಹೊತ್ತೊಯ್ಯಬಲ್ಲದ್ದಾಗಿದ್ದು ಸರಿ ಸುಮಾರು 5000-6000 ಕಿ.ಮೀ ವ್ಯಾಪ್ತಿ ಅಂದರೆ ಪಾಕಿಸ್ತಾನ ಮತ್ತು ಚೀನಾ ಮಾತ್ರವಲ್ಲದೆ ನಮ್ಮ ಖಂಡವನ್ನು ದಾಟಿ ಇಡೀ ಯೂರೋಪ್‍ನ ಯಾವುದೇ ಭಾಗದಲ್ಲಿರುವ ವೈರಿ ನೆಲೆಯನ್ನು ಹುಡುಕಿ ನಾಶ ಮಾಡಬಲ್ಲದ್ದಾಗಿದೆ. ಇಂತಹ ಖಂಡಾಂತರ ಕ್ಷಿಪಣಿಗಳನ್ನು ಹೊಂದಿರುವ ಅಮೇರಿಕ,ರಷ್ಯ,ಚೀನಾ ಹಾಗೂ ಫ್ರಾನ್ಸ್ ರಾಷ್ಟಗಳಿಗೆ ಸರಿಸಮಾನವಾಗಿ ಭಾರತವು ಇದೆ ಎಂದು ಎದೆ ತಟ್ಟಿ ಹೇಳುವ ಮುನ್ನ ಇದೆಲ್ಲದರ ರೂವಾರಿ ಡಾ.ಅಬ್ದುಲ್ ಕಲಾಂರಿಗೆ ಸಲಾಂ ಹೊಡೆಯಲೇ ಬೇಕು.

ಭಾರತದ ಕ್ಷಿಪಣಿಗಳ ಸಾಮಥ್ರ್ಯದ ಬಗ್ಗೆ ಬರೆಯುತ್ತಾ ಹೋದರೆ ಪುಟಗಳೇ ಮೀರಬಹುದು. ಒಬ್ಬ ತಾಕತ್ತಿರುವ(ಬಲವಿರುವ) ವ್ಯಕ್ತಿ ಶಾಂತಿಯ ಬಗ್ಗೆ ಮಾತನಾಡಿದರೆ ಆ ಮಾತಿಗೆ ಬೆಲೆಯೆ ಹೊರತು ದುರ್ಬಲ ವ್ಯಕ್ತಿಯಲ್ಲ ಅಂತೆಯೇ ಭಾರತ ದೇಶಕ್ಕೆ ತಾಕತ್ತನ್ನು ತುಂಬಿ ಅದರ ಶಾಂತಿಯ ಸಂದೇಶಕ್ಕೆ ಅರ್ಥ ತಂದು ಕೊಟ್ಟವರು ಡಾ.ಎಪಿಜೆ ಅಬ್ದುಲ್ ಕಲಾಂ.

ಇನ್ನೊಂದು ಕುತೂಹಲದ ಸಂಗತಿಯೆಂದರೆ, ‘ಅಗ್ನಿ-1’ರ ಯಶಸ್ಸನ್ನು ಹೇಗೆ ಆಚರಿಸುತ್ತೀರಿ ಎಂದು ಅಂದಿನ ರಕ್ಷಣಾ ಸಚಿವ ಕೆ.ಸಿ.ಪಂತ್ ಅಬ್ದುಲ್ ಕಲಾಂರನ್ನು ಕೇಳಿದರೆ ಈ ಪುಣ್ಯಾತ್ಮ ಒಂದು ಲಕ್ಷ ಸಸಿಗಳನ್ನು ನೆಡುವುದರ ಮೂಲಕಎಂದರಂತೆ. ಮಾತಿನಂತೆ ಇಮ್ರಾತ್ನ ಸಂಶೋಧನಾ ಕೇಂದ್ರದ ಸುತ್ತಾ ಒಂದು ಲಕ್ಷ ಸಸಿಗಳನ್ನು ನೆಟ್ಟು ಭಾರತಮಾತೆ ಹಸಿರಿನಿಂದ ಕಂಗೊಳಿಸುವಂತೆ ಮಾಡಿದರು.

ಅಂದ ಹಾಗೆ ಕಲಾಂ ಬದುಕಿದ್ದರೆ ಇವತ್ತಿಗೆ ಬಭರ್ತಿ ಎಂಬತ್ತೈದು ವರ್ಷವಾಗುತ್ತಿತ್ತು..!

ಚೈತನ್ಯ ಕುಡಿನಲ್ಲಿ

ದ್ವಿತೀಯ ಎಂ.ಸಿ.ಜೆ

ಎಸ್.ಡಿ.ಎಂ ಕಾಲೇಜ್

ಉಜಿರೆ   

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!