Uncategorized

ಕಗ್ಗಕೊಂದು ಹಗ್ಗ ಹೊಸೆದು…

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೨೮

ಸೃಷ್ಟಿರುಚಿಗಳ ದ್ವಂದ್ವದಲಿ – ದಿಟವಾವುದು, ಸಟೆಯಾವುದು ಇಲ್ಲಿ ?
____________________________________________________

ಕಾರುಣ್ಯ ಸರಸ ಸೌಂದರ್ಯ ರುಚಿಗಳೆ ಸೃಷ್ಟಿ |
ಕಾರಣಮೆನಿಪ್ಪವೊಲು ತೋರ್ಪುದೊಂದು ಚಣ ||
ಕಾರ್ಪಣ್ಯ ಕಟುಕತೆಗಳೆನಿಪುದಿನ್ನೊಂದು ಚಣ |
ತೋರದಾವುದು ದಿಟವೊ – ಮಂಕುತಿಮ್ಮ || ೨೮ ||

ಇಲ್ಲಿ ಸೃಷ್ಟಿಯನ್ನು ವರ್ಣಿಸಿರುವ ರೀತಿ ನೋಡಿ – ಎಷ್ಟು ಕುತೂಹಲಕರವಾಗಿದೆ. ಸೃಷ್ಟಿಯೆನ್ನುವುದನ್ನು ಆ ಸೃಷ್ಟಿಕರ್ತನೆನ್ನುವ ಬಾಣಸಿಗ ಮಾಡಿ ಬಡಿಸಿದ ಅಡಿಗೆ ಎಂದು ಭಾವಿಸಿದರೆ ಅದಕ್ಕೆ ರುಚಿಯನ್ನೊ ಅಥವಾ ಅರುಚಿಯನ್ನೊ ಆರೋಪಿಸುವ ಕಚ್ಚಾ ಮೂಲ ಸಾಮಾಗ್ರಿಗಳೇ ಹಲವಂತೆ. ಸೊಗಸಾದ ರುಚಿಕಟ್ಟಾದ ‘ಚಪ್ಪರಿಸಿ ಮೆಲ್ಲುವ ಪಾಕ’ ಎನ್ನುವ ಅನಿಸಿಕೆ ಬರಿಸುವ ಸಾಮಾಗ್ರಿಗಳು (ರುಚಿಗಳು) ಕಾರುಣ್ಯ, ಸರಸ ಮತ್ತು ಸೌಂದರ್ಯಗಳಂತೆ. ಜೀವನದಲ್ಲಿ ನಮ್ಮ ಸುತ್ತಮುತ್ತಲಲ್ಲೆ ಜೀವಂತವಾಗಿರುವ ಕರುಣೆಯನ್ನು ಕಂಡಾಗ ‘ ಆಹಾ , ಧನ್ಯ ಈ ಬಾಳು ‘ ಎಂದೆನಿಸಬಹುದು. ಸೀಮಿತತೆಗಳ ನಡುವೆಯೂ ಮುನ್ನುಗ್ಗಲು ಸ್ಫೂರ್ತಿ ಬರಬಹುದು. ಅಂತೆಯೆ ಸರಸ ಸಲ್ಲಾಪದ ಅನುಭವಾ ಅಥವಾ ಪ್ರದರ್ಶನವಾದಾಗ ‘ ವಾಹ್! ಎಂತಹ ಸುಂದರ ಬದುಕಿದು’ ಎನ್ನುವ ಜೀವನೋತ್ಸಾಹ ತುಂಬಿ ಹರ್ಷದ ಬುಗ್ಗೆಯನ್ನೇ ಉಕ್ಕಿಸಿಬಿಡಬಹುದು. ಅಪರೂಪದ, ಅತಿಶಯ ಸೌಂದರ್ಯದ ದರ್ಶನವಾದಾಗ ಹುಟ್ಟುವ ಮಧುರಾನುಭೂತಿ ನಶ್ವರ ಜೀವನದಲ್ಲೂ ಮೋಹ ಹುಟ್ಟಿಸಿ ಪಾರಮಾರ್ಥಿಕ ಜಿಜ್ಞಾಸೆಯನ್ನು ಬದಿಗೊತ್ತಿಸಿ ಲೌಕಿಕ ಲೋಲುಪ್ತತೆಗೆ ಶರಣಾಗಿಸಿಬಿಡಬಹುದು. ಇದೆಲ್ಲ ರುಚಿಗಳ ಸಾರಕ್ಕೆ ಬೆರಗಾಗಿ ಇವುಗಳಿಂದ ಕೂಡಿದ ನಳಪಾಕವೇ ಈ ಸೃಷ್ಟಿ, ಈ ಸುಖದಾಯೀ ಜೀವನ ಎಂದು ತೀರ್ಮಾನಕ್ಕೆ ಬರುವಂತೆ ಪ್ರೇರೇಪಿಸಿಬಿಡುತ್ತವಂತೆ ಈ ರುಚಿಕಾರಕಗಳು.

ಹಾಗೆಂದು ಸೃಷ್ಟಿಯೆಲ್ಲ ಸುಂದರ ಎಂದು ‘ಷರಾ’ ಬರೆಯಲು ಹೊರಟಿರೋ – ಸ್ವಲ್ಪ ತಾಳಿ. ಮಂಕುತಿಮ್ಮ ತಟ್ಟನೆ ಅದರ ಮತ್ತೊಂದು ಆಯಾಮವನ್ನು ಬಯಲಿಗಿಟ್ಟು ತನ್ನ ಜತೆಗೆ ನಮ್ಮನ್ನು ದ್ವಂದ್ವಕ್ಕೆ ನೂಕಿಬಿಡುತ್ತಾನೆ. ಹಾಂ.. ಈ ಮೇಲ್ಕಂಡಂತೆ ತೋಚಿದ್ದೇನೊ ನಿಜವೆ
– ಯಾವುದೋ ಒಂದು ಗಳಿಗೆಯ ಅನುಭವ, ಅನುಭೂತಿಯಲ್ಲಿ. ಆದರೆ ಮತ್ತೊಂದಾವುದೊ ಗಳಿಗೆಯ ಅನುಭವದಲ್ಲಿ ಈ ಸುರುಚಿಗಳೆಲ್ಲ ಪಾಳಿ ಬದಲಿಸಿಕೊಂಡಂತೆ ಬದಲಾಗಿ, ತಟ್ಟನೆ ಅದರ ವಿರೋಧಾಭಾಸದ ಕಷ್ಟ ಕಾರ್ಪಣ್ಯ ಕಟುಕತೆಗಳ ದರ್ಶನವಾಗಿಬಿಡುವುದಲ್ಲ? ಆ ಗಳಿಗೆಯ ಘೋರ ಯಾತನೆ, ವೇದನೆ, ಸಂಕಟಗಳು ಬೇಡದೆಲ್ಲ  ‘ಕುರುಚಿಗಳ’ ಸಮಗ್ರ ಪಾಕ ಬಡಿಸಿ ತಲ್ಲಣಿಸಿಬಿಡುವಂತೆ ಮಾಡಿಬಿಡುವುದಲ್ಲ ? ಆಗ ತಟ್ಟನೆ ಜ್ಞಾನೋದಯವಾದಂತೆ ‘ಛೆ ಛೆ ! ಬದುಕೆಂಬುದು ಬರಿ ಮುಳ್ಳಿನ ಹಾಸಿಗೆಯೆ ಹೊರತು ಸುಖದ ಸುಪ್ಪತ್ತಿಗೆಯಲ್ಲ’ ಎಂದು ತೀರ್ಪೀಯುವಂತೆ ಮಾಡಿಬಿಡುತ್ತದೆ. ಹೀಗೆ ಸೃಷ್ಟಿಯೆನ್ನುವುದು ಯಾವ ತರದ ರುಚಿಯೆಂಬ ಗೊಂದಲದಿಂದ ಹೊರಬರದಂತೆ ಮನುಜನನ್ನು ಅದರೊಳಗೆ ಸಿಲುಕಿಸಿ, ನರಳಿಸಿ ತಮಾಷೆ ನೋಡುವುದೆ ವಿಧಿಯಾಟವಿರುವಂತೆ ಕಾಣುತ್ತದೆ. ಒಟ್ಟಾರೆ ಇವೆರಡು ಪಾಕಾಪಾಕಗಳ ನಡುವೆ ಯಾವುದು ಸೃಷ್ಟಿಯ ನಿಜವಾದ ಸ್ವರೂಪ, ಯಾವುದು ದಿಟ, ಯಾವುದು ಸುಳ್ಳು ಎಂಬ ಬಗೆಹರಿಯದ ಒಗಟಲ್ಲಿ ಸಿಲುಕಿಸಿಬಿಡುವುದಲ್ಲ ಎಂದು ವ್ಯಥಿಸುತ್ತಾನಿಲ್ಲಿ ಮಂಕುತಿಮ್ಮ.

ಈ ಸೃಷ್ಟಿಯು ಆವಿರ್ಭವಿಸಿದ ರೀತಿ, ಅದರ ಪ್ರಕಟ ಸ್ಥಿತಿ ಮತ್ತದರ ಕೌತುಕಗಳು ಕವಿಯನ್ನು ಎಡಬಿಡದೆ ಕಾಡುತ್ತ ವಿಸ್ಮಯ, ಸೋಜಿಗಕ್ಕೊಳಪಡಿಸಿರುವುದನ್ನು ಅನೇಕ ಕಡೆಗಳಲ್ಲಿ, ಅನೇಕ ಕಗ್ಗದ ಪದ್ಯಗಳಲ್ಲಿ ಕಾಣಬಹುದು. ಇದು ಅಂತಹುದೆ ಮತ್ತೊಂದು ಪದ್ಯ – ಈ ಬಾರಿ ಸೃಷ್ಟಿಯುದ್ಭವದ ಮೂಲಸರಕು, ಸಾಮಾಗ್ರಿಗಳೇನಿರಬಹುದು ಎನ್ನುವ ಜಿಜ್ಞಾಸೆಯನ್ನು ಬೆನ್ನಟ್ಟುತ್ತ. ವಿಪರ್ಯಾಸವೆಂದರೆ ಇಲ್ಲಿಯೂ ಅದೆ ದ್ವಂದ್ವದ ಗೊಂದಲ, ಅನುಮಾನ ಇಣುಕುತ್ತಾ ಪ್ರಶ್ನೆಯ ಸಾಲಾಗಿಬಿಡುತ್ತದೆ. ಜೀವನದಲ್ಲಿ ಸುಖದ ರಸಾನುಭೂತಿಯನ್ನು ಅನುಭವಿಸುವಾಗ, ಒಳಿತಿನ ಅನೇಕ ಗುಣಗಳು ಸುತ್ತೆಲ್ಲ ಹರಡಿಕೊಂಡ ಸೌಂದರ್ಯವಾಗಿಯೊ, ಮಾತುಕತೆಯ ಸರಸ ಸ್ವಾರಸ್ಯವಾಗಿಯೊ, ದಯೆ-ಕರುಣೆಗಳನ್ನು ಸೂಸುವ ಮತ್ತು ಧಾರೆಯೆರೆಯುವ ಉದಾತ್ತತೆಯಾಗಿಯೊ ಕಾಣಿಸಿಕೊಳ್ಳುತ್ತವೆ. ಅದಕ್ಕೆ ಪೂರಕವಾಗಿರುವ ರಾಗಾಲಾಪನೆ – ಗಾನಗೋಷ್ಟಿ ನಡೆಸುತ್ತ, ಬಾಳನ್ನೆಲ್ಲ ಈ ರುಚಿಗಳ ಮೂಲಸಾಮಾಗ್ರಿಯನ್ನು ಬಳಸಿಯೆ ಮಾಡಿರಬೇಕೆಂಬ ವಾದಕ್ಕೆ ಪುಷ್ಠಿ ಕೊಡುವಂತೆ ಪ್ರಭಾವಕ್ಕೀಡುಮಾಡುತ್ತವೆ. ಆದರೆ ಆ ಅನಿಸಿಕೆ ಅಂತಿಮ ನಿಜವಿರಬೇಕೆಂದು ತೀರ್ಮಾನಿಸಲು ಬಿಡದಂತೆ ಮತ್ತೊಂದು ಕಡೆ ದುಃಖದ ಎರಕದಲ್ಲಿ ಅದ್ದಿ ತೆಗೆದ ಕಷ್ಟ-ಕಾರ್ಪಣ್ಯತೆಗಳು ಧುತ್ತೆಂದು ಪ್ರತ್ಯಕ್ಷವಾಗಿಬಿಡುತ್ತದೆ; ಜೀವನ ಮತ್ತು ಜೀವಿಗಳು ತೋರುವ ಕನಿಕರವಿರದ, ಕಟುಕ ಸ್ವಭಾವದಂತಹ ನೇತಾತ್ಮಕ ಗುಣಗಳು ಕಾಣಿಸಿಕೊಂಡು ಮೊದಲು ಕಂಡದ್ದೆಲ್ಲವನ್ನು ಸತ್ಯವಲ್ಲದ ಭ್ರಮೆಯನ್ನಾಗಿಸಿಬಿಡುತ್ತದೆ. ಹೀಗೆ ತಾಕಲಾಟದ ಬದುಕಿನಲ್ಲಿ, ಒಮ್ಮೆ ಅದು ಸತ್ಯವೆಂದೆನಿಸಿದರೆ ಮತ್ತೊಮ್ಮೆ ಇದು ಸತ್ಯವೆನಿಸುತ್ತದೆ.

ಸಾರದಲ್ಲಿ ಹೇಳುವುದಾದರೆ – ಎರಡರಲ್ಲಿ ಯಾವುದು ದಿಟ, ಯಾವುದು ತಟವಟ ಎನ್ನುವುದು ಗೊತ್ತಾಗುವುದೆ ಇಲ್ಲವಲ್ಲಾ ? ಎಂಬುದು ಮಂಕುತಿಮ್ಮನ ಅಳಲಿನ ರೂಪದಲ್ಲಿಲ್ಲಿ ವ್ಯಕ್ತವಾಗಿದೆ. ಒಟ್ಟಾರೆ ಗೊಂದಲ, ದ್ವಂದ್ವಗಳೆ ಬದುಕನ್ನು ನೇಯ್ದ ಮೂಲಾದಿಮೂಲ ಸರಕು ಎನ್ನುವುದನ್ನು ಇಲ್ಲಿ ಮತ್ತೆ ಮತ್ತೆ ಕಾಣುತ್ತದೆ ಕವಿಯ ಮನಸು.

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!