Featured ಅಂಕಣ

ಇಂದಿನ ಯುವಕರಿಗೆ ಪೇಜಾವರ ಶ್ರೀಗಳು ಪ್ರೇರಣೆ ಯಾಕೆ ಆಗಬಾರದು!

ಆ ದಿನ ನಾನು ಮತ್ತು ನನ್ನ ಗೆಳೆಯ ಇಬ್ಬರೂ ಉಡುಪಿಯಲ್ಲಿ ಭೇಟಿ ಆದೆವು. ಸ್ವಲ್ಪ ದಿನದಲ್ಲಿ ಅವನು ಅಮೇರಿಕಾಕ್ಕೆ ಹೋಗಬೇಕಿತ್ತು, ನಾನು ಜಪಾನಿಗೆ. ಊರಿಗೆ ಬಂದಿದ್ದೇವೆ ಮತ್ತೆ ಯಾವಾಗ ಇನ್ನು ಭೇಟಿ ಆಗುವುದೋ, ಈಗ ಬಂದಾಗಲೇ ಒಮ್ಮೆ ಮುರುಡೇಶ್ವರ, ಉಡುಪಿ, ಧರ್ಮಸ್ಥಳ, ಸುಬ್ರಹ್ಮಣ್ಯ ಎಲ್ಲವನ್ನೂ ಒಮ್ಮೆ ಹೋಗಿ ಬರೋಣ ಅನಿಸಿತು. ಮಧ್ಯಾಹ್ನದ ಹೊತ್ತು ಉಡುಪಿ ತಲುಪಿದಾಗ. ಶ್ರೀ ಕೃಷ್ಣನ ದರ್ಶನ ಪಡೆದುಕೊಂಡು ಊಟ ಮಾಡೋಣ ಅಂತ “ಹೋಟೆಲ್ ಎಲ್ಲಿದೆ, ಇಲ್ಲಿ ಹತ್ತಿರ” ಅಂತ ಕೇಳಿದೆ. ಅವರು ನಾನು ಯಾವ ಜಾತಿ, ಯಾವ ಮತ ಅಂತ ಏನೂ ಕೇಳದೆ.  “ಯಾಕೆ ಹೋಟೆಲಿಗೆ ಹೋಗುತ್ತೀರಾ, ಮಠದ ಪ್ರಸಾದ ಭೋಜನ ಮಾಡಿ ಹೋಗಿ” ಅಂದರು. ಭೋಜನ ಶಾಲೆಗೆ ಹೋಗಿ ನಾವಿಬ್ಬರೂ ಹೊಟ್ಟೆ ತುಂಬಾ ಊಟ ಮಾಡಿ, ಗೋಶಾಲೆಗೆ ಹೋಗಿ ಹೊರಗಡೆಗೆ ಬಂದು ಕುಳಿತೆವು. ನಾನು ಗೆಳೆಯನಿಗೆ ಹೇಳಿದೆ, ” ಇಷ್ಟು ಚೆನ್ನಾಗಿ ಊಟ ಸಿಕ್ಕಿದೆ, ಅದೇ ಹೋಟೆಲಿಗೆ ಹೋಗಿದ್ದರೆ ಐನೂರು ರೂಪಾಯಿ ಆದರೂ ಖರ್ಚಾಗುತ್ತಿತ್ತು, ಸುಮ್ಮನೆ ಪುಕ್ಸಟೆ ಊಟ ಮಾಡಿ ಹೋಗುವುದು ಬೇಡ …ಭೋಜನ ಶಾಲೆಗೆ ಅಂತ ನೂರು ರೂಪಾಯಿ ಆದರೂ ದೇಣಿಗೆ ಕೊಡೋಣ” ಅಂದೆ. ಗೆಳೆಯ ಒಪ್ಪಿದ, ಹಣ ಕೊಟ್ಟು ರಸೀದಿ ತಗೆದುಕೊಂಡೆ. ರಸೀದಿ ಕೊಡುವಾಗ ಅವರು “ದಯವಿಟ್ಟು ಸೇವೆಯ ಪ್ರಸಾದ ತೆಗೆದುಕೊಂಡು ಹೋಗಿ” ಅಂದರು. ನಾವಿಬ್ಬರೂ ಪ್ರಸಾದ ಎಲ್ಲಿ ಸಿಗೊತ್ತೆ ಅಂತ ಹುಡುಕುತ್ತಾ ಹೋದರೆ ನಮಗೆ ಕಂಡಿದ್ದು ಸ್ವತಃ ಪೇಜಾವರ ಶ್ರೀಗಳು ತಮ್ಮ ಕೈಗಳಿಂದ ಸೇವೆ ಮಾಡಿದ ಎಲ್ಲರಿಗೂ ಆಶೀರ್ವಾದ ಹಾಗೂ ಪ್ರಸಾದ ಕೊಡುತ್ತಿದ್ದರು!

ನಮ್ಮಿಬ್ಬರಿಗೆ ಏನೂ ತೋಚಲಿಲ್ಲ. ಅವರ ಮುಂದೆ ಹೋಗಿ ನಿಲ್ಲುವ ಧೈರ್ಯವೂ ಇಲ್ಲ. ಆದರೆ ಅವರ ನಗುಮುಖ ನಮ್ಮನ್ನು ಎಲ್ಲ ಸಂಶಯಗಳಿಂದ ಮುಕ್ತಿಗೊಳಿಸಿತು. ನನ್ನ ಹೆಸರು ಹೇಳಿದೆ, ನಮಸ್ಕರಿಸಿ ಪ್ರಸಾದ ತಗೆದುಕೊಂಡು ಬಂದೆ. ಬಂದ ನಂತರ ತುಸು ಹೊತ್ತು ನಾನು ಮೌನವಾಗಿಯೇ ಇದ್ದೆ. ನನ್ನ ಗೆಳೆಯ ಏನಾಯಿತು ಎಂದು ಕೇಳಿದಾಗಲೇ ನನಗೆ ಮೈಮೇಲೆ ಪರಿವೆ ಮೂಡಿದ್ದು. ಅವರಿಗೆ ಎಂಬತ್ತೈದು ವರ್ಷ, ಈ ವಯಸ್ಸಿನಲ್ಲಿ ಎಷ್ಟು ಚುರುಕು! ಪಾದರಸವೇ ನಮ್ಮ ಮುಂದೆ ಹರಿದಾಡುವಂತೆ ಕಾಣುತ್ತಿತ್ತು. ಎಲ್ಲಿಂದ ಅವರಿಗೆ ಈ ಶಕ್ತಿ ಬರುತ್ತದೆ? ಎಂದು ಯೋಚಿಸತೊಡಗಿದೆ. , “ಜಪಾನಿನಲ್ಲಿ ಹದಿನೆಂಟು ತಾಸು ಕೆಲಸಮಾಡಬೇಕಂತೆ, ಹಾಗೆ ಮಾಡಿದರೆ ಮುಂದೆ ನಮ್ಮ ಅರೋಗ್ಯದ ಗತಿ ಏನು?” ಅಂತ ಸ್ವಲ್ಪ ಹೊತ್ತಿನ ಮುಂಚೆಯಷ್ಟೆ ನಾನು ಮತ್ತು ಗೆಳೆಯ ಮಾತನಾಡಿಕೊಂಡಿದ್ದೆವು. ನಮ್ಮ ಪ್ರಶ್ನೆಗೆ ಪೇಜಾವರ ಶ್ರೀಗಳು ಉತ್ತರ ನೀಡಿದ್ದರು. ಇದೇ ಕೃಷ್ಣನ ಲೀಲೆ ಅನಿಸಿತು. ಇಂದು ಜಾತಿ, ಮತ, ಧರ್ಮ, ಆಚಾರ, ವಿಚಾರ, ಊಟ, ಪಂಕ್ತಿ ಅದು ಇದು ಅನ್ನುವುದಕ್ಕಿಂತ ಪೇಜಾವರ ಶ್ರೀಗಳಿಂದ ನಾವು ಯುವಕರು ಏನನ್ನು ಕಲಿಯಬಹುದು? ಅವರ ಜೀವನದ ಪರಿಯನ್ನು ಹೇಗೆ ಪಾಲಿಸಬಹುದು? ಎಂದು ಚರ್ಚೆ ಮಾಡಬೇಕೆ ಹೊರತು ಪಂಕ್ತಿಯ ವಿಷಯದ ಕುರಿತಲ್ಲ. ಇಂದು ಒಬ್ಬ ಇಂಜಿನಿಯರ್ ಆಗಲಿ, ಡಾಕ್ಟರ್ ಆಗಲಿ ಎಷ್ಟು ಕೆಲಸ ಮಾಡಿದರೂ ಕಡಿಮೆಯೇ. ಇವತ್ತಿನ ಮಿತಿಮೀರಿದ  ಪೈಪೋಟಿಯಲ್ಲಿ ನಲವತ್ತರ ಒಳಗೆ ಆರೋಗ್ಯ ಕೈಕೊಡುತ್ತದೆ, ನಂತರ ನಾವು ನಾವಾಗಿಯೇ ನಮ್ಮ ಕನಸುಗಳನ್ನು ಕೈಬಿಟ್ಟು ಬಿಡುತ್ತೇವೆ. ಗುರುಗಳು ಈ ವಯಸ್ಸಿನಲ್ಲಿ ಅಷ್ಟು ಚುರುಕಾಗಿ ಇಡೀ ಪೇಜಾವರ ಮಠದ ಆಗು ಹೋಗುಗಳನ್ನು ನಿರ್ವಹಿಸುತ್ತಾರೆ ಅಂದರೆ ಏನೋ ಇದೆ ಆ ಶಕ್ತಿ ಅವರ ಹತ್ತಿರ. ಅದು ಇವತ್ತು ನಿನ್ನೆಯಿಂದ ಬಂದಿದ್ದಲ್ಲ ಇದು ದಶಕಗಳ ಸಾಧನೆ. ಅವರನ್ನು ತೆಗಳುವವರಿಗೆ ಏನೂ ಹೇಳುವುದು ಸರಿಯಲ್ಲ ಅವರವರ ಕರ್ಮ ಅದು. ಆದರೆ ಅವರ ಬಗ್ಗೆ ಅರಿತವರು, ಅರಿಯದೇ ಇರುವವರು ಅರಿತು ಯಾಕೆ ಅವರಿಂದ ನಾವು ಪ್ರರಣೆ ಪಡೆದುಕೊಳ್ಳಬಾರದು?

ಪೇಜಾವರದ ಸ್ವಾಮಿಗಳು ಈ ಎಂಬತ್ತೈದನೇ ಇಳಿ ವಯಸ್ಸಿನಲ್ಲೂ ಬೆಳಿಗ್ಗೆ ಮೂರು ಘಂಟೆಗೆ ಎದ್ದು ಸಾಧನೆ ಮಾಡುತ್ತಾರೆ. ತಾವು ಸ್ವತಃ ಬಂದು ಶಿಷ್ಯ ವೃಂದಕ್ಕೆ ಪಾಠ ಹೇಳುತ್ತಾರೆ. ದಿನನಿತ್ಯ ಯೋಗ ಮಾಡುವುದಾಗಲಿ, ಮಿತ ಆಹಾರ ಸೇವನೆಯಾಗಲಿ, ನಾನಾ‌ ವಿಷಯಗಳ ಅಧ್ಯಯನವಾಗಲಿ ಎಷ್ಟು ಸರಳ ಜೀವನ. ಆ್ಯಪಲ್ ಸಿಇಓ ಟಿಮ್ ಕುಕ್ ಬೆಳಿಗ್ಗೆ ನಾಲ್ಕು ಘಂಟೆಗೆ ಎದ್ದು ಎಲ್ಲರಿಗೂ ಇ-ಮೇಲ್ ಕಳಿಸುತ್ತಾರೆ ಎನ್ನುವುದನ್ನು ನಾನು ಒಂದು ಮ್ಯಾನೇಜ್ಮೆಂಟ್  ಕ್ಲಾಸಿನಲ್ಲಿ ಕೇಳಿದ್ದೆ. ಅದು ನಮಗೆಲ್ಲ ಇನ್ಸ್ಪಿರೆಷನ್!  ಯಾರೋ ಹೇಳಿದ್ದು ನಮಗೆ ಪ್ರೇರಣೆ ಆಗುವುದು ಆದರೆ ನಮ್ಮ ಮುಂದೆ ಇರುವ ಉದಾಹರಣೆಗಳು ನಮಗೆ ಕಾಣುವುದೇ ಇಲ್ಲ. ಪೇಜಾವರ ಶ್ರೀಗಳು ಸಮಾಜದ ಎಲ್ಲ ವರ್ಗದ ಜನರನ್ನೂ ಒಟ್ಟುಗೂಡಿಸಿ ಸೌಹಾರ್ದತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಯಾರೋ ಕೆಲವು ಸಮಾಜ ದ್ರೋಹಿಗಳಿಗೆ ತಗ್ಗಿ ಬಗ್ಗಿ ನಡೆದಿಲ್ಲ ಎಂದ ಮಾತ್ರಕ್ಕೆ ಅವರನ್ನು ತೆಗಳುವುದು ಸರಿಯಲ್ಲ. ಗುರು ಅಂದಾಕ್ಷಣ ಅವರ ಪಾದ ಪೂಜೆ ಮಾಡಿ, ಮಂತ್ರಾಕ್ಷತೆ ತಗೆದುಕೊಂಡು ಬಂದರೆ ಆಗಿಲ್ಲ. ಗುರುವಿನಿಂದ ಕಲಿಯಬೇಕು. ಅವರು ಹೇಳಿದ ಮಾತುಗಳನ್ನು ಪಾಲಿಸಬೇಕು. ಯಾವುದೋ ಒಂದು ಮೋಟಿವೆಷನ್ ವಿಡಿಯೋದಲ್ಲಿ ನೋಡಿದ್ದೆ, ಮುಂಜಾನೆ ನಾಲ್ಕರಿಂದ ಆರು ಗಂಟೆಯವರೆಗಿನ ಕಾಲವಧಿ ಅಭ್ಯಾಸ ಅಥವಾ ಸಾಧನೆಗೆ ಅತ್ಯುತ್ತಮವಂತೆ. ಇಂದು ದೇಶ ಮುಂದುವರಿಯಬೇಕು ಅಂದರೆ ನಾವು ಪ್ರತಿಯೊಬ್ಬರೂ ಅಭಿವೃದ್ಧಿ ಹೊಂದಬೇಕು. ನಮ್ಮಲ್ಲಿ ಎಷ್ಟು ಮಂದಿ 85 ವಯಸ್ಸಿನ ಪೇಜಾವರ ಶ್ರೀಗಳಂತೆ ನಾಲ್ಕುವರೆಗೆ ಎದ್ದು ಸಾಧನೆ ಮಾಡಬಲ್ಲಿರಿ! ಗುರುಗಳ ದಿನಚರಿಯನ್ನು ಒಮ್ಮೆ ಪ್ರಯತ್ನಿಸಿ‌ ನೋಡೋಣವೇ?

ಇವತ್ತು ಸ್ಟ್ರೆಸ್ ಮ್ಯಾನೇಜ್ಮೆಂಟ್, ಟೈಮ್ ಮ್ಯಾನೇಜ್ಮೆಂಟ್ ಇವೆಲ್ಲಾ ಟ್ರೆಂಡಿಂಗ್ ವಿಷಯಗಳು. ಯಾರನ್ನೇ ಕೇಳಿ, “ತುಂಬಾ ಕೆಲಸ ಮಾರಾಯ ಟೈಮ್ ಮ್ಯಾನೆಜ್ ಮಾಡಲಿಕ್ಕೆ ಆಗುತ್ತಿಲ್ಲ…ತುಂಬಾ ಸ್ಟ್ರೆಸ್ ಫುಲ್ ಜೀವನ ಆಗಿ ಹೋಗಿದೆ” ಅನ್ನುತ್ತಾರೆ. ಹೇಗೆ ಸ್ಟ್ರೆಸ್ ಮ್ಯಾನೆಜ್ ಮಾಡಬೇಕು, ಟೈಮ್ ಮ್ಯಾನೇಜ್ಮೆಂಟ್ ಅಂದರೆ ಏನು ಇದನ್ನೆಲ್ಲ ಕಲಿಸಲಿಕ್ಕೆ ವಿದೇಶದಿಂದ ತರಬೇತುದಾರರು ಬರುತ್ತಾರೆ. ಕಂಪನಿಯಲ್ಲಿ ಕೆಲಸ‌ ಮಾಡುವ ಯುವಕರಿಗಷ್ಟೇ ಅಲ್ಲ ಸಿನಿಯರ್ ಮ್ಯಾನೇಜ್ಮೆಂಟ್ ನಲ್ಲಿರುವವರಿಗೂ ಕೂಡ ಟೈಮ್ ಮ್ಯಾನೆಜ್ ಮಾಡುವುದೇ ಕಷ್ಟದ ಕೆಲಸ. ಹತ್ತು ಕೆಲಸಕ್ಕೆ ಕೈ ಹಾಕಿ ಒಂದೂ ಕೆಲಸ ಮಾಡಲಾಗದೇ ಸ್ಟ್ರೆಸ್ ತಗೆದುಕೊಂಡು ಆರೋಗ್ಯ ಹಾಳು ಮಾಡಿಕೊಳ್ಳುತ್ತಾರೆ. ಈ ಪರಿಸ್ಥಿತಿಯಲ್ಲಿ ನಮ್ಮೆದುರಿಗಿರುವ ಪೇಜಾವರ ಸ್ವಾಮಿಗಳಿಂದ ನಾವು ಇವನ್ನೆಲ್ಲ ಯಾಕೆ ಕಲಿಯಬಾರದು ? ಅವರು ಈ ವಯಸ್ಸಿನಲ್ಲಿ ಯಾವುದೇ ಸ್ಟ್ರೆಸ್ ಇಲ್ಲದೆ ಎಲ್ಲ ಕೆಲಸವನ್ನೂ  ಸಮಯದೊಳಗೆ ಮಾಡಿ ಮುಗಿಸುತ್ತಾರೆ. ಪರ್ಯಾಯದಲ್ಲಿ ಪೂಜೆಗೂ ಮುನ್ನ ದಿನವೂ ಲಕ್ಷ ಜಪ ಮಾಡಬೇಕು. ನಂತರ ಪೂಜೆ, ಶಿಷ್ಯರಿಗೆ ಬೋಧನೆ, ಪಾದಪೂಜೆ, ಕಾರ್ಯಕ್ರಮ, ಸೇವಾ ಪ್ರಸಾದ ವಿತರಣೆ, ಮಠದ ಆಡಳಿತ ವಿಷಯ, ಸಾಯಂಕಾಲದ ದಿನಚರಿ, ಅಧ್ಯಯನ ಇವನ್ನೆಲ್ಲ ಮುಗಿಸಿ ಹನ್ನೊಂದು ಗಂಟೆಯೊಳಗೆ ಮಲಗುತ್ತಾರಂತೆ. ಬರೀ ಇದೇ ಆಗಿದ್ದರೆ ಅಥವಾ ಅವರಿಗೆ ತೊಂದರೆ ಇರದೇ ಹೋದರೆ ಹೇಗೋ ಮಾಡುತ್ತಿದ್ದರು ಅನ್ನಬಹುದಿತ್ತು. ಆದರೆ ಉಡುಪಿ ಪೇಜಾವರ ಮಠದ ವಿಷವೇ ಬೇರೆ. ಗುರುಗಳು ಏನೇ ಹೇಳಿದರೂ ಅದನ್ನು ಹಿಡಿದುಕೊಂಡು ಕೆಲವು ಬುದ್ಧಿಜೀವಿಗಳು ವಿವಾದ ಸೃಷ್ಟಿ ಮಾಡುತ್ತಾರೆ.

ಇಂತಹ ಮೊಂಡು ರಾಜಕೀಯ,‌ ವಿರೋಧಗಳು, ವಿರೋಧಿಗಳು, ಅಡ್ಡಗಾಲು ಹಾಕುವವರನ್ನು ನಿಭಾಯಿಸಿಕೊಂಡು ಉಳಿದ ಕೆಲಸವನ್ನು ಮಾಡುತ್ತಾರೆ ಅದು ಗಮನಾರ್ಹ! ನಮ್ಮ ಮುಂದೆ ಔಟ್ ಲುಕ್ ಇರುತ್ತದೆ, ಪಿಪಿಟಿ, ಎಂಬಿಎ ಮಾಡಿ ಬಂದ ಪ್ಲಾನಿಂಗ್ ಗ್ರುಪ್ ಇನ್ನೆಷ್ಟೋ ಟೂಲ್ಸ್ ಇರುತ್ತವೆ ಆದರೂ ನಮಗೆ ಮ್ಯಾನೆಜ್ ಮಾಡಲಾಗುವುದಿಲ್ಲ. ಮತ್ತೊಮ್ಮೆ ನೆನಪಿಸೋಣ ಅನಿಸುತ್ತಿದೆ, ಈಗ ಅವರಿಗೆ ವಯಸ್ಸು ಎಂಬತ್ತೈದು. ಈ ವಯಸ್ಸಿನಲ್ಲಿ ಅವರು ಇಷ್ಟು ಅಚ್ಚುಕಟ್ಟಾಗಿ ಎಲ್ಲವನ್ನೂ ಮ್ಯಾನೆಜ್ ಮಾಡುತ್ತಾರೆ ಅಂದರೆ ಅದು ಪರಮ ಆಶ್ಚರ್ಯವಲ್ಲವೆ? ಜಾತಿ, ಮತ, ಪಂಥ ಎಲ್ಲವನ್ನೂ ಬದಿಗಿಟ್ಟು ಯಾಕೆ ನಾವು ಪೇಜಾವರ ಶ್ರೀಗಳಿಂದ ಪ್ರೇರಣೆ ಪಡೆದುಕೊಳ್ಳಬಾರದು?

ಇನ್ನು ಜನರನ್ನು ಕೂಡಿಸುವ ವಿಷಯದಲ್ಲಿ ಗುರುಗಳಿಂದ ಕಲಿಯಬೇಕಾದ ಪಾಠ ಅಷ್ಟಿಷ್ಟಿಲ್ಲ. ಪಾದರಸಕ್ಕಿಂತ ಚುರುಕು ಪೇಜಾವರ ಶ್ರೀಗಳ ಪಾದಗಳು. ಅವರು ಕರೆದಲ್ಲಿ  ಸಾವಿರಾರು ಸಂಖ್ಯೆಯಲ್ಲಿ ಜನರ ದಂಡೇ ಬರುತ್ತದೆ. ಕೆಲವರು ಅಲ್ಲಿ ಚಲೋ ಇಲ್ಲಿ ಚಲೋ ಅಂತ ಚಳುವಳಿ ಮಾಡುತ್ತಾರೆ. ಅಂತಹ ಚಳುವಳಿಗೆ ಕೋಟ್ಯಾಂತರ ಹಣ ಖರ್ಚು ಮಾಡಿಯೂ ನೂರು ಜನರನ್ನು ಕೂಡಿಸುವುದರಲ್ಲಿ ಬೆವರಿಳಿದು ಹೋಗುತ್ತಾರೆ. ಓರ್ಗನೈಸಿಂಗ್ ಸ್ಕಿಲ್ ಇವತ್ತು ಕಂಪನಿಗಳಲ್ಲಿ ಬಹು ಮುಖ್ಯ. ಕಂಪನಿ ಅಂತ ಅಲ್ಲ ಯಾವುದೇ ರಂಗದಲ್ಲಿ ಜನರನ್ನು ಕೂಡಿ ಹಾಕುವ ಕಲೆ ಬಹಳ ಮುಖ್ಯ. ಗುರುಗಳ ‌ನಿಸ್ವಾರ್ಥ ಸೇವೆ, ಎಲ್ಲ ಸಮಾಜದ ಎಲ್ಲ ಜನರಿಗೂ ತಲುಪುತ್ತಿದೆ ಹೀಗಾಗಿ ಎಲ್ಲರೂ ಒಂದಾಗುತ್ತಾರೆ. ಇದನ್ನೆಲ್ಲ ಅವರು ಹೇಗೆ ಮಾಡುತ್ತಾರೋ ಆ ಶ್ರೀ ಕೃಷ್ಣ ಪರಮಾತ್ಮನಿಗೇ ಗೊತ್ತು. ಪಂಕ್ತಿಭೇದದ ಹೆಸರಲ್ಲಿ ಗುರುಗಳ ಮೇಲೆ ಗೂಬೆ ಕೂರಿಸುವ ಬದಲು, ಅವರಿಂದ ನಾಯಕತ್ವದ ಕಲೆ ಕಲಿಯಬಹುದಲ್ವಾ? ಒಬ್ಬ ಕೇಂದ್ರದ ಮಂತ್ರಿಯ ಕೈ ಕೆಳಗೆ ಎರಡಾದರೂ ಐಎಎಸ್ ಅಧಿಕಾರಿಗಳಿರುತ್ತಾರೆ. ಆ ಸೆಕ್ರೆಟರಿ, ಈ ಸೆಕ್ರೆಟರಿ ಅಂತಾ ಕೈ ಕೆಳಗೆ ನೂರಾರು ಮಂದಿ ಆಡಳಿತದ ಮೆಲ್ವಿಚಾರಣೆಗೆ. ಗುರುಗಳ ಕೈ ಕೆಳಗೆ ಎಷ್ಟು ಮಂದಿ  ಐಎಎಸ್ ಆಗಲಿ ಅಥವಾ ಮ್ಯಾನೇಜ್ಮೆಂಟ್ ಕನ್ಸಲ್ಟಂಟ್ ಆಗಲಿ ಇದ್ದಾರೆ? ಕಡೇ ಪಕ್ಷ ಒಬ್ಬ ಸಲಹೆಗಾರನೂ ಕೂಡ ಇಲ್ಲ! ಆದರೆ ಎಲ್ಲವನ್ನೂ ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ನಾವು ಕಲಿಯಬೇಕು. ಅರವತ್ತು ವರ್ಷ ನಿವೃತ್ತಿ ಆಗಲಿಕ್ಕೆ ಸರ್ಕಾರ ಇಟ್ಟ ವಯಸ್ಸು. ಜನರು ಐವತ್ತಕ್ಕೇ ವಿ.ಆರ್.ಎಸ್ ತಗೆದಿಕೊಂಡು ನಿವೃತ್ತಿಯಾಗುತ್ತಾರೆ. ಇವರಿಗೆ ಎಂಬತ್ತೈದು ವರ್ಷ ವಯಸ್ಸು, ಇನ್ನೂ ನಿವೃತ್ತಿ ಆಗಿಲ್ಲ.

ಮಹಾತ್ಮ ಗಾಂಧಿ ಅವರು ಹೇಳಿದ್ದು ಏನು ಅಂದರೆ ‘Strength does not come from physical capacity, it comes from indomitable will’. ಒಮ್ಮೆ ಪೇಜಾವರ ಸ್ವಾಮಿಗಳನ್ನು ನೋಡಿ. ಅವತ್ತಿನಿಂದ ಇವತ್ತಿನವರೆಗೆ ಲೋಕ ಕಲ್ಯಾಣಕ್ಕಾಗಿ ನಡೆಸುತ್ತಿರುವ ಅವರ ಸಾಧನೆಗೆ ಅಡ್ಡ ಬಂದ ದಾನವರನ್ನು ಅವರು ಮನೋಬಲದಿಂದಲೇ ಎದುರಿಸಿ ಗೆದ್ದಿದ್ದಾರೆ. ಮುಂದೂ ಗೆಲ್ಲುತ್ತಾರೆ. ನಾನು ನಮ್ಮ ಸಾಮಾನ್ಯ ಬದುಕಿಗೆ ಬರುತ್ತೇನೆ. ದಿನನಿತ್ಯದ ಬದುಕಿನಿಂದ ಹಿಡಿದು, ಬೋರ್ಡ್ ರೂಮಿನೊಳಗಿನ ಅತ್ಯಂತ ಸೂಕ್ಷ್ಮ ಹೋರಾಟವೇ ಇರಲಿ ಅಲ್ಲಿ ಗೆಲುವು ತರಿಸುವುದು ಸಂಕಲ್ಪ ಹಾಗೂ ಮನೋಬಲ. ಬದುಕಿನಲ್ಲಿ ನಮ್ಮ ಮೇಲೆ ಇತರರು ನಡೆಸುವ ಸಣ್ಣ ಅಥವಾ ದೊಡ್ಡ ಕುತಂತ್ರಗಳನ್ನು ಮೆಟ್ಟಿ ನಿಂತೇ ಮೇಲೆ ಬರಬೇಕು. ಅದು ಸಾಧ್ಯವಾಗುವುದು ಸ್ಟ್ರಾಂಗ್ ವಿಲ್ ಪವರ್ ನಿಂದ ಮಾತ್ರ! ಅದು ಈ ಜಾತಿ, ಮತ, ಧರ್ಮ ಹೀಗೆ ಒಬ್ಬರ ಹೆಸರಲ್ಲಿ ಇನ್ನೊಬ್ಬರು ಗಂಜಿ ಕೇಂದ್ರದಲ್ಲಿ ಕೂತು ಕಾಸು ಲೆಕ್ಕ ಮಾಡುವುದರಲ್ಲಿ ಆಗುವುದಿಲ್ಲ. ಅದಕ್ಕೆ ಛಲ ಬೇಕು, ಹತ್ತು ಸಲ ಸೋತರೂ ಗೆಲ್ಲುವ ಹುಮ್ಮಸ್ಸು ಇರಬೇಕು, ಇನ್ನೊಬ್ಬರಿಗೆ ಸಹಾಯ ಹಸ್ತವನ್ನು ಚಾಚುವ ಹೃದಯವಿರಬೇಕು, ಕಲಿಯಬೇಕು ಎಂಬ ವಿನಶೀಲತೆಯೂ ಇರಬೇಕು, ಎಲ್ಲದಕ್ಕೂ ಮಿಗಿಲಾಗಿ ಹಿಡಿದ ಕೆಲಸವನ್ನು ಅಡಚಣೆಗಳ ನಡುವೆಯೂ ಮಾಡಿ ಮುಗಿಸುವ ಏಕಾಗ್ರತೆ ಬೇಕು. ಇವೆಲ್ಲವೂ ಪೇಜಾವರ ಸ್ವಾಮಿಗಳಲ್ಲಿದೆ. ನಾವು ಒಂದೊಂದಾಗಿ ಅದನ್ನು ನಮ್ಮ ಜೀವನದಲ್ಲಿ ಯಾಕೆ ಅಳವಡಿಸಿಕೊಳ್ಳಬಾರದು? ಬಡತನ, ಜಾತಿ, ಮತ ಎನ್ನುವುದು ಸಾಧನೆ ಮಾಡದೇ ಇರುವುದಕ್ಕೆ ಸೋಗು ಆಗಿರಬಾರದು.  ಪೇಜಾವರದ ಸ್ವಾಮಿಗಳಂತ ಆದರ್ಶಗಳನ್ನು ಅನುಕರಿಸಿದರೆ ಸಾಧಕರಾಗುತ್ತೇವೆ. ಇಲ್ಲ, ನಾವು ಜಾತಿ ಮತ ಧರ್ಮದ ಕಟ್ಟುಪಾಡಿನಲ್ಲೇ ಸಾಯುತ್ತೇವೆ ಅಂದರೆ ಗಂಜಿಹುಳವಾಗುತ್ತೇವೆ‌. ಪೇಜಾವರ ಶ್ರೀಗಳನ್ನು ಪ್ರೇರಣೆಯಾಗಿ ಸ್ವಿಕರಿಸುತ್ತೀರೋ, ವಿನಾಕಾರಣ ದ್ವೇಷಿಸುತ್ತಿರೋ ಆಯ್ಕೆ ನಿಮಗೆ ಬಿಟ್ಟಿದ್ದು!

Facebook ಕಾಮೆಂಟ್ಸ್

ಲೇಖಕರ ಕುರಿತು

Vikram Joshi

ಬೆಳೆದಿದ್ದು ಕರ್ನಾಟಕದ ಕರಾವಳಿಯಲ್ಲಿ, ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್. ಆಟೋಮೊಬೈಲ್ ಕಂಪನಿಯಲ್ಲಿ ಕೆಲಸ. ಮಿಷಿಗನ್ ಯುನಿವರ್ಸಿಟಿಯಿಂದ ಆಟೊಮೊಬೈಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ. ಉದ್ಯೋಗ ಹಾಗೂ ಸಂಸಾರದಿಂದ ಬಿಡುವು ಸಿಕ್ಕಾಗ ಬರೆವಣಿಗೆ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!