ಅಂಕಣ

ಹಸಿವು, ಬಾಯಾರಿಕೆ ಮತ್ತು ನೆಲ, ಜಲ

‘ನೀವು ಹೇಳೋದೆಲ್ಲ ಸರಿ, ನಮ್ಮ ಗಡಿ ಯಾವುದು?’ ಯಾರಲ್ಲಾದರೂ ಈ ಪ್ರಶ್ನೆ ಥಟ್ ಅಂತ ಕೇಳಿ. ಫಟ್ ಅಂತ ಉತ್ತರ ರೆಡಿ. ‘ಇದೆಂಥ ಪ್ರಶ್ನೆ ಮಾರಾಯರೇ, ಚಿಕ್ಕ ಮಕ್ಕಳಿಗೆ ಕೇಳುವಂಥಾದ್ದು, ನಿಮಗೆ ಬೇರೆ ಕೆಲಸ ಇಲ್ಲವಾ. ಸಣ್ಣ ಮಕ್ಕಳೂ ಉತ್ತರಿಸಿಯಾರು’ ಎಂಬರ್ಥದ ಮೂದಲಿಕೆಯ ಉತ್ತರವೂ ದೊರಕಬಹುದು. ಅದು ಹೌದು. ಎಲ್ಲರಿಗೂ ಭೌಗೋಳಿಕ ಗಡಿ ಗೊತ್ತಿರುತ್ತದೆ. ನಾವು ಭಾರತ ದೇಶದ ಕರ್ನಾಟಕ ರಾಜ್ಯದ ಪ್ರಜೆಗಳು. ನಮ್ಮ ರಾಜ್ಯದ ಪಕ್ಕ ಆಂಧ್ರ, ಕೇರಳ, ತಮಿಳುನಾಡು, ಗೋವಾ ರಾಜ್ಯಗಳೂ ಒಂದು ಬದಿಯಲ್ಲಿ ವಿಶಾಲವಾದ ಅರಬ್ಬೀ ಸಮುದ್ರವೂ ಇದೆ. ಯಾವ ಪ್ರದೇಶದಲ್ಲಿ ಮಲೆಯಾಳ, ತಮಿಳು, ತೆಲುಗು, ಮರಾಠೀ ಆಚರಣೆಗಳು ಕಂಡು ಬರಲು ಆರಂಭವಾಗುತ್ತದೆಯೋ ಅದೇ ನಮ್ಮ ಗಡಿ ಎಂದುಕೊಳ್ಳಬಹುದು. ಇದು ಭೌಗೋಳಿಕವಾಗಿ ರಾಜಕಿಯ ನಕ್ಷೆಗಳ ಪ್ರಕಾರ ಗುರುತಿಸಿಕೊಂಡಿರುವ ಗಡಿ ಪ್ರದೇಶ. ಹೀಗಾಗಿ ಈ ಉತ್ತರ ಮೇಲಿನ ಪ್ರಶ್ನೆಗೆ ದೊರೆಯುವುದು ಸಹಜ. ನಮಗೆ ನಮ್ಮ ಗಡಿ ಗೊತ್ತಿರಬೇಕು ಎಂಬುದೂ ನಿಜ.

ಹಾಗಾದರೆ ಪಕ್ಕದ ರಾಜ್ಯಗಳಲ್ಲಿದ್ದವರು ಮಾತ್ರ ಮಲೆಯಾಳ, ತೆಲುಗು, ಮರಾಠಿ, ಹಿಂದಿ ಮಾತಾಡುವವರಾ, ನಾವು ಮಾತಾಡೋದಿಲ್ವಾ? ನಾವು ಅಲ್ಲಿಗೆ ಹೋಗೋದಿಲ್ವಾ? ಅವರು ನಮ್ಮ ಭಾಷೆ ಮಾತನಾಡುವುದಿಲ್ಲವಾ ಎಂಬ ಪ್ರಶ್ನೆಗಳು ಹುಟ್ಟುತ್ತವೆ. ಇಂಥ ಪ್ರಶ್ನೆಗಳು, ಮರುಪ್ರಶ್ನೆಗಳು, ಉತ್ತರಗಳ ಶೋಧನೆಯಲ್ಲೇ ನಾವು ಕಾಲ ಕಳೆಯುತ್ತೇವೆ.

ಮಂಗಳೂರಿನ ಪಕ್ಕ ಕಾಸರಗೋಡಿಗೆ ತೆರಳುವಾಗ ಸಿಗೋ ತಲಪಾಡಿ ನಮ್ಮನ್ನು ಕೇರಳಕ್ಕೆ ಸ್ವಾಗತಿಸುತ್ತದೆ. ಚೆಕ್ ಪೋಸ್ಟ್ ದಾಟಿದೊಡನೆ ಥೇಟ್ ಸುರೇಶ್ ಗೋಪಿ, ಮೋಹನಲಾಲ್, ಮಮ್ಮುಟ್ಟಿ ಸ್ಟೈಲಿನ ಪೊಲೀಸರು ರಸ್ತೆ ಬದಿ ನಿಂತಿರುತ್ತಾರೆ. ಚಂದ್ರಗಿರಿ ನದಿ ತೀರದವರೆಗೆ ಕನ್ನಡ ಬೋರ್ಡುಗಳು ಕಾಣ ಸಿಗುತ್ತವೆ. ನಂತರ ಪೂರ್ತಿ ಮಲೆಯಾಳ. ಇಂಥದ್ದೇ ಸನ್ನಿವೇಶ ಕೋಲಾರ, ಬಳ್ಳಾರಿ, ಬೆಳಗಾವಿ, ಕಾರವಾರದಲ್ಲಿ ಕಾಣಿಸುತ್ತದೆ.

ಇವೆಲ್ಲಾ ನಮ್ಮ ಗಡಿಪ್ರದೇಶಗಳು ಅಂದುಕೊಂಡರೆ……..,

ದೂರದ ಮುಂಬಯಿ ಮಹಾನಗರದಲ್ಲಿ ಸಹಸ್ರ ಸಂಖ್ಯೆಯ ಕನ್ನಡ, ತುಳು ಭಾಷಿಗರು ಬದುಕು ಕಂಡುಕೊಂಡಿದ್ದಾರೆ. ಪೂನಾದಲ್ಲೂ ಎಂಚಿನ ಮಾರೆ ವಿಶೇಷ ಎಂದು ಪ್ರಶ್ನಿಸಿದರೆ ದಾಲ ಇಜ್ಜಿ ಮಾರ್ರೆ ಎಂಬ ಉತ್ತರ ಕೆಲವರಲ್ಲಾದರೂ ಸಿಗುತ್ತದೆ. ಚೆನ್ನೈನಲ್ಲಿ ನಮ್ಮವರ ಹೋಟೆಲುಗಳು ದಶಕಗಳಿಂದ ಇವೆ. ಹಾಗಾದರೆ…

ನಾವೀಗ ಇರೋದೆಲ್ಲಿ? ನಮ್ಮ ಗಡಿ ಯಾವುದು?

ಪುಟ್ಟ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಮಂಗಳೂರು ಮತ್ತು ಬೆಂಗಳೂರು. ಇವೆರಡು ರಾಜ್ಯದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಊರುಗಳು. ಒಂದು ನಗರವಾದರೆ ಮತ್ತೊಂದು ಮಹಾನಗರ. ಇಲ್ಲಿ ಯಾರಿಗೆ ಯಾರು ಹತ್ತಿರ?

ಬೆಂಗಳೂರಿನಲ್ಲಿ ಮಲ್ಲೇಶ್ವರಂ, ಶೇಶಾದ್ರಿಪುರಂದಂಥ ಪುರಂಗಳು, ಪೊಂಗಲ್, ಹೋಳಿ ಆಚರಣೆಗಳು ಅಪ್ಪಟ ಕನ್ನಡ ಬಳುವಳಿಗಳೇನಲ್ಲ. ಆದರೂ ನಾವು ಅದನ್ನು ಸ್ವೀಕರಿಸಿದ್ದೇವೆ. ನಮ್ಮ ಜೀವನದ ಭಾಗವೇ ಆದಂತಿದೆ. ಕೋರಮಂಗಲ, ಬ್ರಿಗೇಡ್ ರೋಡ್, ಎಂ.ಜಿ.ರೋಡ್’ನಂಥ ಜಾಗಕ್ಕೆ ಹೋದರೆ ಯಾವುದೋ ದೇಶಕ್ಕೆ ಬಂದಂತೆ ಭಾಸವಾಗುತ್ತದೆ. ತರಕಾರಿ ಖರೀದಿಯಿಂದ ಹಿಡಿದು ರೆಫ್ರಿಜರೇಟರ್ ಖರೀದಿವರೆಗೆ ನಮ್ಮ ವ್ಯವಹಾರವನ್ನೆಲ್ಲ ಆಂಗ್ಲ ಭಾಷೆಯಲ್ಲೇ ಮಾಡುತ್ತೇವೆ. ನಮ್ಮ ನಡುವೆ ಅನ್ಯಭಾಷಿಗರು ಹೇಗೆ ಇದ್ದಾರೆಯೋ ಹಾಗೆಯೇ ಅನ್ಯಭಾಷೆ ನಮ್ಮ ದೇಹದೊಳಗೇ ನಮಗರಿವಿಲ್ಲದಂತೆ ಹುದುಗಿ ಹೋಗಿದೆ. ಅದು ನಮ್ಮ ಉದಾರ ಮನೋಭಾವದ ಸಂಕೇತವೂ ಹೌದು.

ಇಲ್ಲವಾದರೆ ತೆಲುಗು, ತಮಿಳು ಸೂಪರ್ ಸ್ಟಾರುಗಳಿಗೆ ನಮ್ಮ ರಾಜ್ಯದಲ್ಲಿ ಅಸಂಖ್ಯ ಅಭಿಮಾನಿಗಳು ಇರಲು ಸಾಧ್ಯವೇ? ವಿಜಯ್, ರಜನೀಕಾಂತ್ ಸಿನಿಮಾಗಳು,  ತೆಲುಗು ಸ್ಟಾರುಗಳ ಡೈಲಾಗುಗಳು ನಮ್ಮವರ ಬಾಯಲ್ಲಿ ಪಟಪಟ ಬರಲು ಸಾಧ್ಯವೇ ಇರಲಿಲ್ಲ.

ಮಂಗಳೂರನ್ನು ನೋಡಿ. ಇಲ್ಲಿ ಅದೆಷ್ಟೋ ಜನರು ಪ್ರತಿದಿನ ಕೇರಳದಿಂದ ಮಂಗಳೂರಿಗೆ ಬರುತ್ತಾರೆ. ಮಂಗಳೂರಿನಲ್ಲಿರುವ ಆಸ್ಪತ್ರೆ, ಹೋಟೆಲ್, ಕಾಲೇಜುಗಳಲ್ಲಿ ಮಲಯಾಳಿಗಳೇ ತುಂಬಿರುತ್ತಾರೆ ಎಂಬ ಮಾತುಗಳು ಸುಳ್ಳೇನೂ ಅಲ್ಲ. ಕಾಸರಗೋಡು ಬಂದ್ ಇದ್ದ ದಿನ ಮಂಗಳೂರಿನ ಆಸ್ಪತ್ರೆಗಳಲ್ಲಿ ಜನಸಂದಣಿಯೂ ಕಮ್ಮಿ ಇರುತ್ತದೆ. ಅಲ್ಲಿಂದ ದಿನಾ ಸಣ್ಣಪುಟ್ಟ ಕೆಲಸಗಳಿಗೆ ಬರುವವರು ಗೈರು ಹಾಜರಾಗಿ ಭಾನುವಾರ ಬಂದಂತೆ ಭಾಸವಾಗುತ್ತದೆ. ಒಂದರ್ಥದಲ್ಲಿ ಭಾವನಾತ್ಮಕವಾಗಿಯೂ ಮಂಗಳೂರಿಗೂ ಉತ್ತರ ಕೇರಳಕ್ಕೂ ನಂಟಿದೆ.

ಹಾಗಾದರೆ ನಮ್ಮ ಗಡಿ ಯಾವುದು?

ಬೆಂಗಳೂರು ಎಂಬ ಬೃಹತ್ ನಗರದಲ್ಲಿ ಕನ್ನಡ ಭಾಷೆ ಅವಸಾನವಾಗಿ ದಶಕಗಳೇ ಸಂದವು. ಬೇಕೋ, ಬೇಡವೋ ಎಂಬುದು ಸೆಕೆಂಡರಿ. ಜಾಗತೀಕರಣ ದಟ್ಟವಾಗಿ ನಮ್ಮನ್ನು ಆವರಿಸಿ ಆಗಿದೆ. ಹೀಗಾಗಿ ಬೆಂಗಳೂರು ತನ್ನ ಗಡಿ ಗುರುತು ಕಳೆದುಕೊಂಡಿದೆ. ಕರ್ನಾಟಕದ ಉಳಿದ ಭೂಭಾಗಗಳೂ ಇಂಥ ಸನ್ನಿವೇಶ ಎದುರಿಸುವ ಅಪಾಯದಲ್ಲೇ ಇವೆ.

ಭಾಷಾ ಪ್ರಾಂತವಾರು ವಿಂಗಡಣೆ ಆದಾಗಲೇ ಈ ಗಡಿ ಸಮಸ್ಯೆ ಆರಂಭವಾಗಿತ್ತು. ಅದಿನ್ನೂ ಜೀವಂತವಿದೆ. ವಾಸ್ತವವಾಗಿ ಕನ್ನಡಿಗರಿಗೆ ಗಡಿ ಎಂಬುದೇ ಇಲ್ಲ. ಆದರೂ ನಾವಿಂದು ನಮ್ಮ ನಡುವೆಯೇ ಗಡಿರೇಖೆಗಳನ್ನು ಗುರುತಿಸಿಕೊಂಡಿದ್ದೇವೆ. ಭಿನ್ನ ಆಚರಣೆಗಳನ್ನು ಅನುಸರಿಸಿಕೊಂಡಿದ್ದರೂ ನಾವು ಭಾರತೀಯರು ಎಂಬ ಮಾತಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವಂತೆ ಸಂದರ್ಭಗಳು ಉದ್ಭವಿಸುತ್ತವೆ.  ಗಡಿ ಗುರುತು ಹಾಕುವವರು, ಒಬ್ಬರನ್ನು ಇನ್ನೊಬ್ಬರ ವಿರುದ್ಧ ಎತ್ತಿಕಟ್ಟುವ ವರ್ಗಗಳು ಬೇರೆಯೇ ಇವೆ. ವಿವಿಧ ಸಮಸ್ಯೆಗಳಿಗೂ ಇವು ಕಾರಣವಾಗುತ್ತದೆ. ಇದು ನಿರಂತರ ಪ್ರಕ್ರಿಯೆ.

ಬಹುತೇಕ ಜನರು ದೈನಂದಿನ ಹೊಟ್ಟೆ ಪಾಡಿಗಾಗಿ ಜೀವಿಸುವವರು. ಅವರಿಗೆ ಹೊತ್ತುಹೊತ್ತಿನ ಹಸಿವು, ಬಾಯಾರಿಕೆ ನೀಗಿಸಲು ಕೆಲಸ ಕಾರ್ಯಗಳು ಬೇಕು. ಜೀವನೋಪಾಯಕ್ಕಾಗಿ ನಾವು ಯಾವ ಊರನ್ನಾದರೂ ಸೇರುತ್ತೇವೆ. ಹಾಗೆಯೇ ಕರ್ನಾಟಕ ರಾಜ್ಯದಲ್ಲಿ ಕನ್ನಡೇತರರ ಪ್ರವೇಶ, ಹೊರರಾಜ್ಯಗಳಲ್ಲಿ ಕನ್ನಡಿಗರ ದುಡಿಮೆ ನಡೆಯುತ್ತಿದೆ. ದುಡಿವ ಜಾಗವೇ ಕರ್ಮಭೂಮಿ ಎಂಬವರು ನಾವು. ಇನ್ನೊಬ್ಬರಿಗೆ ಆಶ್ರಯ ನೀಡಿ ಅವರನ್ನೂ ಪೊರೆವ ಉದಾರ ಹೃದಯಿಗಳು.

ನಮಗೆಲ್ಲಿದೆ ಗಡಿ?

ಕೆಲವೊಮ್ಮೆ ನಾವು ಇನ್ನೊಬ್ಬರನ್ನು ಎಷ್ಟು ಹಚ್ಚಿಕೊಳ್ಳುತ್ತೇವೆ ಎಂದರೆ ಒಡ ಹುಟ್ಟಿದವರೂ ನಮ್ಮ ವಿರುದ್ಧ ಹೊಟ್ಟೆಕಿಚ್ಚು ಪಡಬೇಕು ಎಂಬಂತೆ. ನಾವು ವಾಸಿಸುವ ಜಾಗ, ಕೆಲಸ ಮಾಡುವ ಪ್ರದೇಶ, ಊರು ಇವೆಲ್ಲ ಇಂಥ ಭ್ರಾತೃತ್ವದ ಬೆಸುಗೆಗೆ ಸಂದರ್ಭ, ಸನ್ನಿವೇಶಗಳನ್ನು ಸೃಷ್ಟಿಸುತ್ತದೆ.ಅದು ಹಾಗೆಯೇ ಮುಂದುವರಿಯುತ್ತದೆ. ಹಸಿದ ಮತ್ತು ಬಾಯಾರಿದ ಮನುಷ್ಯನಿಗೆ ಜಾತಿ, ಧರ್ಮ, ಭಾಷೆ, ಲಿಂಗ, ರಾಜಕೀಯ, ಮೇಲು, ಕೀಳು, ಅಸಮಾನತೆ ಇತ್ಯಾದಿ ಶಬ್ದಗಳು ಕೇಳಿಸುವುದಿಲ್ಲ. ಆತನಿಗೆ ಯಾವ ಗಡಿಯ ಕಟ್ಟುಪಾಡುಗಳೂ ಇರುವುದಿಲ್ಲ.

ಹೀಗಂದಾಕ್ಷಣ ನಾವು ನಮ್ಮ ಇರವನ್ನೇ ಮರೆತಿದ್ದೇವೆ ಎಂದೇನಲ್ಲ. ನಮ್ಮ ನೆಲ, ಜಲದ ವಿಚಾರಗಳು ಬಂದಾಗ ದಿಢೀರನೆ ಒಟ್ಟಾಗುತ್ತೇವೆ. ಅದೆಲ್ಲಿಂದಲೋ ಭೀಮಬಲ ನಮ್ಮ ಮೈಯಲ್ಲಿ ಪ್ರವೇಶವಾಗುತ್ತದೆ. ಎಲ್ಲೇ ಇದ್ದರೂ ನಾವೆಲ್ಲ ಒಟ್ಟಾಗುತ್ತೇವೆ. ರೋಷಾವೇಶಗಳೆಲ್ಲವೂ ಒಂದು ಹಂತದವರೆಗೆ ಮಾತ್ರ. ಮತ್ತೇನಿದ್ದರೂ ಒಂದಾಗಿ ಬಾಳೋ ಮಂತ್ರ.

ಹೀಗಾಗಿ ನಮಗೆ ಗಡಿ ಎಂಬುದೇ ಇಲ್ಲ!

Facebook ಕಾಮೆಂಟ್ಸ್

ಲೇಖಕರ ಕುರಿತು

Harish mambady

ಕಳೆದ ಹದಿನಾರು ವರ್ಷಗಳಿಂದ ಹೊಸ ದಿಗಂತ, ಉದಯವಾಣಿ, ತರಂಗ, ಕನ್ನಡಪ್ರಭ ಹಾಗೂ ವಿಜಯವಾಣಿಯಲ್ಲಿ ಉಪಸಂಪಾದಕ, ವರದಿಗಾರ ಹಾಗೂ ಮುಖ್ಯ ಉಪಸಂಪಾದಕನ ಜವಾಬ್ದಾರಿ ನಿಭಾಯಿಸಿರುವ ಹರೀಶ ಮಾಂಬಾಡಿ ಸದ್ಯ ಫ್ರೀಲ್ಯಾನ್ಸ್ ಪತ್ರಕರ್ತರಾಗಿ ದುಡಿಯುತ್ತಿದ್ದಾರೆ. ಸಮಕಾಲೀನ ವಿದ್ಯಮಾನ,  ಸಿನಿಮಾ ಕುರಿತ ಲೇಖನಗಳು, ಬರೆಹಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.  ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡ್ ನಿವಾಸಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!