ಅಂಕಣ

ಕನಸೆಂಬ ಟೂರಿಂಗ್ ಟಾಕೀಸ್

2013 ರಲ್ಲಿ ಕನ್ನಡದಲ್ಲಿ ಒಂದು ಚಲನಚಿತ್ರ ಬಂದಿತ್ತು. ಅದರ ಹೆಸರು ಲೂಸಿಯಾ. ಪವನ್ ಕುಮಾರ್ ನಿರ್ದೇಶನದ ಈ ಚಿತ್ರ ಹಲವು ಪ್ರಶಸ್ತಿಗಳನ್ನು ಬಾಚಿತ್ತು ಮತ್ತು ವಿದೇಶಗಳಲ್ಲಿ, ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಎಲ್ಲರ ಮೆಚ್ಚುಗೆ ಪಡೆದಿತ್ತು. ಈ ಚಿತ್ರದ ಮೂಲ ಆಧಾರ ಲ್ಯೂಸಿಡ್ ಡ್ರೀಮ್ಸ್ ಅನ್ನೋ ಕನಸಿನ ಒಂದು ವಿಧ. ಒಬ್ಬ ಪ್ರಸಿದ್ಧ ಸಿನಿಮಾ ತಾರೆ ಒಬ್ಬ ಸಾಮಾನ್ಯ ವ್ಯಕ್ತಿಯ ರೀತಿ ಬದುಕುವ ಕನಸನ್ನು ಯಾವ ರೀತಿ ಸಾಕಾರಗೊಳಿಕೊಳ್ಳುತ್ತಾನೆ ಎಂಬುದೇ ಚಿತ್ರದ ಕಥೆ. ಅದಕ್ಕಾಗಿ ಲೂಸಿಯಾ ಅನ್ನೋ ಗುಳಿಗೆ ನುಂಗಿ ನಿದ್ದೆ ಹೋಗುತ್ತಾನೆ. ನಿದ್ದೆಯಲ್ಲಿ ಆತ ತನ್ನ ಕನಸಿನ ಜೀವನವನ್ನು ಕಟ್ಟಿಕೊಳ್ಳುತ್ತಾನೆ. ಅದರ ಪರಿಣಾಮ ಏನಾಗುತ್ತೆ ಮತ್ತು ಅದರಿಂದ ಹೇಗೆ ಆತ ಹೊರ ಬರುತ್ತಾನೆ ಎಂಬುದೇ ಚಿತ್ರದ ಕಥಾವಸ್ತು. ಸಾಮಾನ್ಯವಾಗಿ ಇಂತಹ ಚಿತ್ರಗಳು ಸೈನ್ಸ್ ಫಿಕ್ಷನ್ ವಿಭಾಗಕ್ಕೆ ಸೇರುತ್ತವೆ. ಇದೇ ವಿಭಾಗಕ್ಕೆ ಸೇರಿದ ಇನ್ನೆರಡು ಚಿತ್ರಗಳ ಪರಿಚಯ ಮಾಡಿಕೊಡುತ್ತೇನೆ. ಒಂದು ಹಾಲಿವುಡ್’ನ ಪ್ರಸಿದ್ಧ ಚಲನಚಿತ್ರ ಇನ್ಸೆಪ್ಷನ್ ಮತ್ತೊಂದು ಕೊರಿಯನ್ ಭಾಷೆಯಲ್ಲಿ ಬಂದ ಕಿಮ್ ಕಿ ಡುಕ್ ಚಿತ್ರ ಡ್ರೀಮ್ಸ್. ಎಲ್ಲವೂ ಕನಸಿಗೆ ಸಂಬಂಧಿಸಿದ್ದೇ.  ಇಲ್ಲಿ ಹುಟ್ಟುವ ಪ್ರಶ್ನೆ ಇಂತಹ ಚಿತ್ರಗಳು ನೈಜ ಜೀವನಕ್ಕೆ ಎಷ್ಟು ಹತ್ತಿರವಾದುದು..? ಅಥವಾ ಕೇವಲ ಫಿಕ್ಷನ್ ಮಾತ್ರವಾ..?? ಆದರೆ ಎರಡೂ ನಿಜವಲ್ಲ ಎಂಬುದು ನಿಜವಾದ ಸತ್ಯ. ಇಂತಹ ಫಿಕ್ಷನ್ ಚಿತ್ರಗಳು ವಿಜ್ಞಾನದ ಅರ್ಧ ಸತ್ಯದ ಮೇಲೆ ನಿಂತವುಗಳು. ಅಂದರೆ ಅರ್ಧ ವಿಷಯಗಳು ನಿಜವಾಗಿರುತ್ತವೆ ಅಥವಾ ಇಂಥ ಚಿತ್ರಗಳು ವಿಜ್ಞಾನದ ಯಾವುದೋ ಒಂದು ಸಂಗತಿಗಳನ್ನು ಆಧರಿಸಿ ಕಲ್ಪನೆಯ ಲೇಪನಗೊಂಡಿರುತ್ತವೆ. ಅಂಥ ಲೇಪನಗೊಂಡಿರುವ ಚಿತ್ರಗಳು ಇವು.

ಕನಸಲ್ಲೆಂಥ ವಿಜ್ಞಾನ ಎಂದು ನಿಮಗೆ ಆಶ್ಚರ್ಯವಾಗಬಹುದು. ಆದರೆ ಒಂದು ಸತ್ಯ ಎಂದರೆ ಕನಸುಗಳೂ ಕೂಡ ಬದುಕಿನ ಒಂದು ಭಾಗ. ಅದು ನಮ್ಮ ನೆನಪಿನ ಚಿತ್ರವಾಗಿರಬಹುದು, ಕಲ್ಪನೆಯ ಕಥೆಯಾಗಿರಬಹುದು, ನಡೆದ ಘಟನೆಯ ಮುಂದುವರಿದ ಭಾಗವಾಗಿರಬಹುದು ಅಥವಾ ಕೆಲವೊಮ್ಮೆ ಸಮಸ್ಯೆಯ ಸುಳಿಯ ಸಿನೆಮಾ ಕೂಡ ಆಗಿರಬಹುದು. ಉದಾಹರಣೆಗೆ ನೀವು ಹೊಟೆಲಿಗೆ ಹೋದಾಗ ಮೆನುವಿನಲ್ಲಿ ಯಾವುದೋ ವಿಶೇಷ ತಿಂಡಿಯೊಂದನ್ನು ನೋಡಿದಿರಿ ಮತ್ತು ಅದನ್ನು ತಿನ್ನಲಾಗದೇ ಅದು ಹೇಗಿರಬಹುದು ಅನ್ನೋ ಯೋಚನೆಯಲ್ಲಿ ಮನೆಗೆ ಮರಳಿದಿರಿ ಎಂದಾದರೆ ಆ ತಿಂಡಿ ಮನಸ್ಸಿನಲ್ಲಿ ಅಚ್ಚೊತ್ತಿರುತ್ತೆ ಮತ್ತು ಆ ತಿಂಡಿಗೆ ನಿಮ್ಮ ಮನಸ್ಸು ನಿಮ್ಮದೇ ಕಲ್ಪನೆಯ ಒಂದು ರೂಪ ಕೊಡುತ್ತೆ, ಕೊನೆಗೆ ಅದೇ ತಿಂಡಿ ಚಿತ್ರವಾಗಿ ನಿಮ್ಮ ಕನಸಿನಲ್ಲಿ ಬಂದು ಆ ಅದನ್ನು ತಿಂದು ಆನಂದಿಸಿದಂತೆ ಭಾಸವಾಗುತ್ತೆ. ಇಲ್ಲಿ ಯಾವುದೂ ನಿಜವಲ್ಲ, ಆದರೆ ನೈಜತೆಗೆ ಹತ್ತಿರವಾದ ಕಲ್ಪನೆಯ ಚಿತ್ರಣ. ಅದೇ ಕನಸು. ನಿದ್ದೆಯಲ್ಲಿ ಮೂಡಿದ ನೈಜ ಭ್ರಮೆ.

ಈ ಕನಸುಗಳು ನಿಮ್ಮ ಯೋಚನೆಯ ಮಿತಿಯಲ್ಲಿ ಇರಬೇಕು ಅಂತೇನೂ ಇಲ್ಲ. ಹೆಚ್ಚಿನ ಕನಸುಗಳು ನಮ್ಮ ಮಿತಿಯನ್ನು ದಾಟಿ ಹೋಗುತ್ತೆ. ಆದರೆ ತುಂಬಾ ವಿಚಾರ ಮಾಡಿದಾಗ ಅವು ನಮ್ಮ ಬದುಕಿನಲ್ಲಿ ಆದ ಘಟನೆಗಳಿಗೊ ಅಥವಾ ಆಗುವ ಘಟನೆಗಳಿಗೋ ತಾಳೆಯಾಗುತ್ತೆ. ಕೆಲವೊಮ್ಮೆ ನೀವು ಯಾವುದೋ ಕೆಲಸ ಮಾಡುತ್ತಿರುವಾಗ ನಿಮ್ಮ ದೇಹದ ಚಲನವಲನಗಳು ಮೊದಲು ಎಂದೋ ಇದೇ ರೀತಿ ಆಗಿದೆ ಅನ್ನುವಂತೆ ಭಾಸವಾಗುತ್ತೆ. ಉದಾಹರಣೆಗೆ ನೀವು ತಿರುಗಿದಾಗ ಎದುರು ಒಬ್ಬ ಅಪರಿಚಿತ ವ್ಯಕ್ತಿ ಬರುತ್ತಾನೆ ಎಂದಿಟ್ಟುಕೊಳ್ಳಿ. ಅದೇ ರೀತಿ ಮೊದಲು ಎಂದೋ ಆಗಿದೆ ಅನ್ನುವಂತೆ ನಿಮಗೆ ಅನ್ನಿಸುತ್ತೆ. ಅದು ನಿಮ್ಮ ಕನಸಿನಲ್ಲಿ ಬಂದದ್ದಿರಬಹುದು ಆದರೆ ನಿಮಗೆ ಸರಿಯಾಗಿ ನೆನಪಿನಲ್ಲಿರಲಾರದು. ಹೀಗೆ ಹತ್ತು ಹಲವು ರೀತಿಯಲ್ಲಿ ನಿಮ್ಮ ಬದುಕಿಗೆ ಅವು ತಾಳೆ ಹೊಂದುತ್ತದೆ. ಕನಸು ಎಂಬುದು ಕೇವಲ ಕನಸಲ್ಲ, ಅದರ ಹಿಂದೆ ವಿಜ್ಞಾನದ ವಿಶಾಲ ಬಯಲಿದೆ.

ಮಾನವನಿಗೆ ಇಲ್ಲಿಯವರೆಗೂ ಪೂರ್ಣ ಅರಿಯಲಾಗದ ಎರಡು ವಿಷಯಗಳಿವೆ. ಅದರಲ್ಲೊಂದು ಭೂಮಿ ಮತ್ತೊಂದು ಮನುಷ್ಯ. ನಿಜ ಮನುಷ್ಯ ಇನ್ನೂ ಸಹ ತನ್ನನ್ನು ತಾನು ಅರಿತಿಲ್ಲ. ತನ್ನೊಳಗೇ ಅದೆಷ್ಟೋ ಕೌತುಕ, ಅಚ್ಚರಿಗಳನ್ನು ಕೂಡಿಟ್ಟುಕೊಂಡು ಬದುಕುತ್ತಿದ್ದಾನೆ. ಅದರಲ್ಲೊಂದು ಅಚ್ಚರಿ ಮೆದುಳು. ಅದೆಷ್ಟೋ ವಿಷಯಗಳನ್ನು ಶೇಖರಿಸಿಟ್ಟುಕೊಂಡು ಮಾನವನನ್ನೇ ನಿಯಂತ್ರಣದಲ್ಲಿ ಇಟ್ಟುಕೊಂಡಿರೊ ಮೆದುಳು ಒಂದಷ್ಟು ಕೌತುಕಗಳನ್ನೂ ಬಚ್ಚಿಟ್ಟುಕೊಂಡಿದೆ. ಇದರ ಬಗ್ಗೆ ಮಾನವನೇ ಪೂರ್ತಿ ತಿಳಿದಿಲ್ಲ. ಮೆದುಳಿನಿಂದ ಪ್ರಭಾವಿತನಾಗಿರುವ ಮಾನವ ಅದೇ ರೀತಿಯ ತಂತ್ರಜ್ಞಾನವನ್ನು ಹುಟ್ಟು ಹಾಕಲು ಹೊರಟ, ಆ ತಂತ್ರಜ್ಞಾನದ ಹೆಸರು ಆರ್ಟಿಫಿಶಿಯಲ್ ಇಂಟಲಿಜೆನ್ಸ್. ಆದರೆ ಅದನ್ನು ಇಲ್ಲಿಯ ತನಕ ತನ್ನ ಮೆದುಳಿಗಿಂತ ಸಮರ್ಥವಾಗಿ ಬೆಳೆಸಲು ಸಾಧ್ಯವಾಗಿಲ್ಲ. ಅದು ಸ್ವಲ್ಪ ಕಷ್ಟವೇ ಎಂದು ಹೇಳಬಹುದು. ಕನಸುಗಳೂ ಸಹ ಮೆದುಳಿಗೆ ಸಂಬಂಧಿಸಿದ್ದೇ. ಜ್ಯೋತಿಷಿಗಳನ್ನು ಕೇಳಿದರೆ, ಆತ್ಮ ಎಂದಿಗೂ ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ. ಮನುಷ್ಯ ಮಲಗಿದ್ದಾಗಲೂ ಅದು ಎಚ್ಚರದ ಸ್ಥಿತಿಯಲ್ಲೇ ಇರುತ್ತದೆ. ದೇಹ ವಿಶ್ರಾಂತಿಯ ಸ್ಥಿಯಲ್ಲಿದ್ದಾಗ ಪಂಚೇಂದ್ರಿಯಗಳೂ ಶಾಂತ ಸ್ಥಿತಿಯಲ್ಲಿರುತ್ತದೆ. ಆಗ ಅನುಭವವಾಗುವ ಜೀವನಕ್ಕೆ ಸಂಬಂಧಿಸಿದ ಸಂಗತಿಗಳೇ ಕನಸುಗಳು. ಆದರೆ ವಿಜ್ಞಾನ ಅದನ್ನು ಆತ್ಮ ಎಂದು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಆದರೆ ಅದೇ ರೀತಿಯ ಅರ್ಥ ಬರುವಂತೆ ಹೇಳುತ್ತದೆ. ಸುಲಭವಾಗಿ ವೈಜ್ಞಾನಿಕವಾಗಿ ಹೇಳಬೇಕೆಂದರೆ ನಮ್ಮ ಮನಸ್ಸಿನಲ್ಲಿ ಎರಡು ವಿಧ. ಒಂದು ಜಾಗೃತ ಮನಸ್ಸು ಮತ್ತೊಂದು ಸುಪ್ತ ಮನಸ್ಸು. ಮನುಷ್ಯ ಎಚ್ಚರಿಕೆಯಲ್ಲಿದ್ದಾಗ ಜಾಗೃತ ಮನಸ್ಸು ಕೆಲಸ ಮಾಡಿದರೆ ಮಲಗಿದ್ದಾಗ ಸುಪ್ತ ಮನಸ್ಸು ದುಡಿಯುತ್ತೆ. ಜಾಗೃತ ಮನಸ್ಸು ಮಲಗಿದೆ ಅಂದರೆ ಮನುಷ್ಯ ನಿದ್ದೆ ಹೋಗಿದ್ದಾನೆ ಎಂದರ್ಥ. ನೀವು ಯಾರಾದರೂ ಗಾಢ ನಿದ್ದೆಯಲ್ಲಿರುವವನನ್ನು ಎಬ್ಬಿಸಿ, ಆತ ತಕ್ಷಣ ಎಚ್ಚರಗೊಂಡರೆ ಒಂದೆರಡು ನಿಮಿಷ ತಾನೆಲ್ಲಿದ್ದೇನೆ, ಏನು ಮಾಡುತ್ತಿದ್ದೇನೆ ಎಂಬುದನ್ನೇ ತಿಳಿಯದವನಂತೆ ಆಡುತ್ತಾನೆ. ಆತನ ಜಾಗೃತ ಮನಸ್ಸು ಸಂಪೂರ್ಣ ಎಚ್ಚರಗೊಂಡಿಲ್ಲ ಎಂಬುದು ಅದರ ಅರ್ಥ. ಹೀಗೆ ನಿದ್ದೆಯಲ್ಲಿರುವಾಗಲೂ ಕೆಲಸ ಮಾಡುವ ಸುಪ್ತ ಮನಸ್ಸಿನಲ್ಲಿ ಮೂಡುವ ಜೀವನ ಚಿತ್ರ ಈ ಕನಸು.

ನಿದ್ದೆ ಎಂದರೆ ಕೇವಲ ನಿದ್ದೆಯಲ್ಲ. ಅದರ ಹಿಂದೆಯೂ ವಿಜ್ಞಾನ ತನ್ನ ಹಲವು ಸಿದ್ಧಾಂತಗಳನ್ನು ಪ್ರತಿಪಾದಿಸುತ್ತೆ. ನಿದ್ದೆಯಲ್ಲಿ ಹಲವು ಹಂತಗಳಿದೆ. ಅದರಲ್ಲಿ ಮುಖ್ಯವಾದವುಗಳು ನಾನ್ ರ್ಯಾಪಿಡ್ ಐ ಮೂವ್’ಮೆಂಟ್ (ಎನ್.ಆರ್.ಐ.ಎಂ.) ಮತ್ತು ರ್ಯಾಪಿಡ್ ಐ ಮೂವ್’ಮೆಂಟ್ (ಆರ್.ಐ.ಎಂ.) ಈ ಎನ್.ಆರ್.ಐ.ಎಂ. ಎಂಬುದು ನಿದ್ದೆಯ ಪ್ರಾರಂಭಿಕ ಹಂತ. ಕಣ್ಣು ಮುಚ್ಚಿದ್ದರೂ ಕೂಡ ಸುತ್ತಮುತ್ತಲಿನ ಕೆಲ ವಿಷಯಗಳು ನಿಮಗೆ ಅರಿವಾಗುತ್ತೆ. ಉದಾಹರಣೆಗೆ ಎನ್.ಆರ್.ಐ.ಎಂ. ಹಂತದ ನಿದ್ದೆಯಲ್ಲಿದ್ದಾಗ ಉರಿಯುತ್ತಿರುವ ಬಲ್ಬನ್ನು ಆರಿಸಿದರೆ ಮೂಡುವ ಕತ್ತಲು ನಿಮಗೆ ಅನುಭವವಾಗುತ್ತೆ, ಅಕ್ಕಪಕ್ಕ ಯಾರಾದರೂ ಓಡಾಡುತ್ತಿದ್ದರೆ ಅದರ ಅನುಭವವೂ ಆಗುತ್ತೆ. ಎನ್.ಆರ್.ಐ.ಎಂ. ಹಂತದಲ್ಲಿ ಕಣ್ಣು ಯಾವುದೇ ಚಲನೆಯ ಹಂತದಲ್ಲಿ ಇರುವುದಿಲ್ಲ ಮತ್ತು ಇದು ಕನಸುಗಳಿಂದ ದೂರ ಇರುತ್ತೆ. ಆದರೆ ಆರ್.ಐ.ಎಂ. ಹಂತವಿದೆಯಲ್ಲ ಇದು ನಿಜವಾದ ಕನಸಿನರಮನೆ. ಕಣ್ಣುಗಳು ಚಲನೆಯಲ್ಲಿರುತ್ತೆ ಮತ್ತು ವಿಜ್ಞಾನಿಗಳು ಹೇಳುವಂತೆ ಈ ಹಂತದ ನಿದ್ದೆಯಲ್ಲಿ ಕನಸುಗಳು ಬೀಳುವ ಸಾಧ್ಯತೆಗಳು ಹೆಚ್ಚು. ಎಲ್ಲ ಕನಸುಗಳು ನೆನಪಿರಲಾರದು ಅದರಲ್ಲೂ ಆರ್.ಐ.ಎಂ. ಹಂತ ಎಂಬುದು ಗಾಢ ನಿದ್ದೆಯಾಗಿದ್ದು ಕನಸುಗಳು ನೆನಪಿನಲ್ಲಿ ಉಳಿಯೋದು ಅಸಾಧ್ಯ ಎಂಬುದು ಕ್ರಿಸ್ಟೀನಾ ಮರ್ಝಾನೊ  ಮತ್ತು ಸಂಗಡಿಗರು ತಮ್ಮ ಸಂಶೋಧನಾ ಬರಹದಲ್ಲಿ (Recalling and Forgetting Dreams: Theta and Alpha Oscillations during Sleep Predict Subsequent Dream Recall) ಹೇಳುತ್ತಾರೆ. ಆದರೆ ನೆನಪಿನಲ್ಲಿರುವ ಕನಸುಗಳು ಯಾವತ್ತಿದ್ದರೂ ಆರ್.ಐ.ಎಂ. ಹಂತ ಮುಗಿದು ಎನ್.ಆರ್.ಐ.ಎಂ. ನಿದ್ದೆ ಪ್ರಾರಂಭವಾಗುವಾಗ ಬೀಳುತ್ತವೆ.

ಕನಸುಗಳು ನಮ್ಮ ಬದುಕಿಗೆ ಹೊಂದಿಕೊಂಡಿರುವುದಷ್ಟೇ ಅಲ್ಲ, ಹಲವರಿಗೆ ಇದು ಒಂದು ನಂಬಿಕೆ. ಕನಸಿನ ಮೇಲೆ ನಂಬಿಕೆ ಇಡುವವರು ನಮ್ಮ, ನಿಮ್ಮ ಸುತ್ತಮುತ್ತ ತುಂಬಾ ಜನರಿದ್ದಾರೆ. ಇದು ಇಂದು ನೆನ್ನೆಯದಲ್ಲ. ಸಾವಿರಾರು ವರ್ಷಗಳ ಹಿಂದಿನಿಂದಲೂ ಇತ್ತು. ಗ್ರೀಕರು ಮತ್ತು ರೊಮನ್ನರು ಕನಸುಗಳಿಗೆ ಅತೀಂದ್ರೀಯ ಶಕ್ತಿಗಳಿದೆ ಎಂದು ನಂಬಿದ್ದರು. ಕನಸುಗಳು ಬಿದ್ದರೆ ಅದೇ ರೀತಿ ನಮ್ಮ ಬದುಕಲ್ಲೂ ನಡೆಯುತ್ತೆ ಎಂಬುದು ಅವರ ಭಾವನೆಯಾಗಿತ್ತು. ನಮಗೂ ಆ ನಂಬಿಕೆ ಇದೆಯಲ್ಲವೇ..?? ಮುಂಜಾನೆ ಬೀಳುವ ಕನಸುಗಳು ನಿಜವಾಗುತ್ತೆ ಅಂತ ನಾವೂ ನಂಬುತ್ತೇವಲ್ಲವೇ..?? ಕೆಟ್ಟ ಕನಸುಗಳು ಬಿದ್ದಾಗ ಚಿಂತೆಗೀಡಾಗುತ್ತೇವಲ್ಲವೇ..?? ಅವು ನಿಜವಾಗುತ್ತವೆ ಅನ್ನೋ ಭಯ ನಮ್ಮ ಮನದ ಮೂಲೆಯಲ್ಲೆಲ್ಲೋ ಜೀವಂತವಾಗಿರುತ್ತೆ. ಕನಸುಗಳು ಶಕುನ ಹೇಳುತ್ತವೆ ಅನ್ನೋ ನಂಬಿಕೆ ಮಾತ್ರ ಮೊದಲಿನಿಂದಲೂ ಇದ್ದದ್ದು ಎಷ್ಟು ನಿಜವೊ ಹಲವು ಸಂದರ್ಭಗಳಲ್ಲಿ ಅದು ನಿಜವಾದದ್ದೂ ಅಷ್ಟೇ ಸತ್ಯ. ಇದು ಹಲವು ವರ್ಷಗಳ ಹಿಂದೆ ನಡೆದ ಘಟನೆ. ವ್ರೆಕ್ಸ್ ಅನ್ನೋ ವ್ಯಕ್ತಿಗೆ ಬಿದ್ದ ಕನಸು ಅದು. ಗೂಗಲ್ ನ್ಯೂಸ್’ನಲ್ಲಿ ಹುಡುಕಿದರೆ ನಿಮಗೆ ಸಿಗುತ್ತೆ. ಆತನಿಗೆ ತಾನೊಂದು ಪರ್ವತದ ಮೇಲೆ ಇದ್ದಂತೆ ಮತ್ತು ಆ ಪರ್ವತದ ಸುತ್ತ ನೀರಿದ್ದು ಅದು ಪರ್ವತವನ್ನು ಮುಳುಗಿಸುತ್ತಿರುವಂತೆ ಒಂದು ರಾತ್ರಿ ಕನಸು ಬಿತ್ತು. ಅದಾಗಿ ಎರಡು ದಿನಗಳಲ್ಲಿ ಆತ ನಾರ್ವೆಯಲ್ಲಿರುವ ತನ್ನ ಸ್ನೇಹಿತನಲ್ಲಿಗೆ ಹೊರಡುವವನಿದ್ದ. ಆದರೆ ಕನಸಿನಿಂದಾಗಿಯೋ ಏನೊ ತನ್ನ ಕಾರ್ಯಕ್ರಮವನ್ನು ಮುಂದೂಡಿದ. ಮೊದಲಿನ ಕಾರ್ಯಕ್ರಮದಂತೆ ನಿಗದಿಯಾಗಿದ್ದ ದಿನದಂದು ಆತ ಹೊರಡಬೇಕು ಎಂದುಕೊಂಡಿದ್ದ ಹಡಗು ಸಮುದ್ರದಲ್ಲಿ ಮುಳುಗಿತ್ತು. ಆತ ತನ್ನ ಜೀವ ಉಳಿದಿದ್ದು ತನಗೆ ಬಿದ್ದ ಆ ಕನಸಿನಿಂದ ಎನ್ನುತ್ತಾನೆ. ಇಂತಹ ನೂರಾರು ಉದಾಹರಣೆಗಳು ಸಿಗುತ್ತವೆ. ನಮ್ಮಲ್ಲಿಯೂ ಸಹ ಬಿದ್ದ ಕನಸುಗಳಿಗೆ ಅರ್ಥ ನೀಡುವುದುಂಟು. ಕನಸುಗಳಲ್ಲಿ ಶುಭ-ಅಶುಭ ಎಂದು ವಿಭಾಗಿಸುವುದುಂಟು.

ಇನ್ನು ಕನಸುಗಳು ನಮ್ಮ ದೇಹದ ಮೇಲೆ ಹಿಡಿತ ಸಾಧಿಸುತ್ತವಾ..? ಅನ್ನೋ ಪ್ರಶ್ನೆಗೆ ಕೆಲವೊಮ್ಮೆ ಹೌದು ಎಂದು ಹೇಳಬಹುದು, ಕೆಲವೊಮ್ಮೆ ಇಲ್ಲ ಎಂದೇ ವಾದಿಸಬೇಕಾಗುತ್ತೆ.. ಆದರೆ ದೇಹ ಕನಸಿನ ಕಾರಣದಿಂದ ಹಲವು ಕೆಲಸಗಳನ್ನು ಮಾಡುವುದುಂಟು.. ನಿದ್ದೆಗಣ್ಣಲ್ಲಿ ಮಾತನಾಡೋದಿರಬಹುದು, ಜೋರಾಗಿ ಕೂಗಿಕೊಳ್ಳುವುದಿರಬಹುದು, ಹೆದರಿ ಮೈ ನಡುಗುವಿಕೆಯಿಂದ ಬೆವರುವುದಿರಬಹುದು. ಇವೆಲ್ಲವೂ ಕನಸಿನ ಪರಿಣಾಮದಿಂದ ಆಗುವಂಥವುಗಳು. ಇದೆಲ್ಲದಕ್ಕಿಂತ ಹೆಚ್ಚಿನದು ನಿದ್ದೆಗಣ್ಣಲ್ಲಿ ನಡೆಯುವಂಥದ್ದು. ಕೆಲವೊಮ್ಮೆ ಕನಸುಗಳೇ ರೋಗಗಳಾಗಿ ಬದಲಾಗುವುದುಂಟು ಮತ್ತು ಅದರಿಂದ ವ್ಯಕ್ತಿ ನಿದ್ದೆಗಣ್ಣಲ್ಲಿಯೇ  ಕನಸಿನಲ್ಲಿ ಆಗುತ್ತಿರುವಂತೆ ಕೆಲಸವನ್ನು ಮಾಡಲು ಪ್ರಾರಂಭಿಸುತ್ತಾನೆ. ಆ ರೋಗವನ್ನು ಸೋಮ್ನ್ಯಾಂಬುಲಿಸ್ಮ್ (somnambulism) ಅಂತ ಕರೆಯುತ್ತೇವೆ. ಲೀ ಹ್ಯಾಡ್ವಿನ್ ಅನ್ನೋ ವ್ಯಕ್ತಿ ನಿದ್ದೆಯಲ್ಲಿಯೇ ಚಿತ್ರಗಳನ್ನು ರಚಿಸುತ್ತಿದ್ದ. ಆತನನ್ನು ಕನಸಿನ ಕಲಾವಿದ ಎಂದೂ ಹೇಳುವುದುಂಟು. ತನಗೆ ಕನಸಿನಲ್ಲಿ ಕಂಡ ಚಿತ್ರಗಳನ್ನು ಖಾಲಿ ಗೋಡೆಯ ಮೇಲೊ, ದಿನಪತ್ರಿಗಳ ಮೇಲೊ ಗೀಚುತ್ತಿದ್ದ. ಇದಕ್ಕಿಂತಲೂ ಭಯಾನಕ ಕೆನ್ನೆತ್ ಪಾರ್ಕ್ಸ್’ನದ್ದು. ಟೊರೊಂಟೊದ ವ್ಯಕ್ತಿಯ ಈ ಕಥೆ ಪ್ರಸಿದ್ಧವಾಗಿರುವುದೂ ಹೌದು. ತನ್ನ ಇಪ್ಪತ್ಮೂರನೇ ವಯಸ್ಸಿನಲ್ಲಿರುವಾಗ ಒಂದು ರಾತ್ರಿ ಸುಮಾರು ಹದಿನಾಲ್ಕು ಮೈಲಿಗಳಷ್ಟು ದೂರ ಕಾರನ್ನು ಡ್ರೈವ್ ಮಾಡಿಕೊಂಡು ಹೋಗಿ ತನ್ನ ಅತ್ತೆಯನ್ನು ಕೊಂದು, ಮಾವನ ಮೇಲೆ ಹಲ್ಲೆ ಮಾಡಿದ ಈ ವ್ಯಕ್ತಿ ಸ್ಲೀಪ್ ವಾಕಿಂಗ್ ಕಿಲ್ಲರ್ ಎಂದೇ ಪ್ರಸಿದ್ಧಿಯನ್ನು ಪಡೆದ. ಇಂತಹ ಹಲವು ನಿದರ್ಶನಗಳು ನಮಗೆ ಸಿಗುತ್ತವೆ ಮತ್ತು ಇವೆಲ್ಲವೂ ಕನಸಿನ ಹಿಂದಿರುವ ವಿಜ್ಞಾನಕ್ಕೆ ತಳುಕು ಹಾಕಿಕೊಳ್ಳುತ್ತವೆ.

ವಿಜ್ಞಾನಿಗಳೂ ಸಹ ಹೇಳುವುದು ಏನೆಂದರೆ ಇವೆಲ್ಲವೂ ನಡೆಯುವುದು ಆರ್.ಐ.ಎಂ. ಹಂತದ ನಿದ್ದೆಯಲ್ಲಿ. ಇದು ಗಾಢನಿದ್ದೆಯ ಸ್ಥಿತಿಯಾಗಿರುವುದರಿಂದ ಆ ಸಮಯದಲ್ಲಿ ಮಾಡಿರುವ ಅಥವಾ ನಿದ್ರಿಸಿದ ವ್ಯಕ್ತಿಯಿಂದ ನಡೆದಿರುವ ಯಾವೊಂದೂ ಘಟನೆಗಳು ಆ ವ್ಯಕ್ತಿಗೆ ತಿಳಿಯಲಾರದು ಮತ್ತು ಆತ ಅದನ್ನು ಮರೆತಿರುತ್ತಾನೆ. ಕೆನ್ನೆತ್ ಪಾರ್ಕ್ಸ್ ಸಹ ತಾನು ಮಾಡಿದ ಕೊಲೆಯನ್ನು ಮರೆತಿದ್ದ. ಆತ ತನ್ನ ಅತ್ತೆಯ ಮೇಲೆ ದ್ವೇಷ ಇಟ್ಟುಕೊಂಡಿದ್ದ ಎಂಬ ವಿಷಯ ವಿಚಾರಣೆಯಲ್ಲಿ ತಿಳಿದು ಬಂತು. ಮನಸ್ಸಿನಲ್ಲಿದ್ದ ಆ ದ್ವೇಷ ಮತ್ತು ಆತನಿಗಿದ್ದ ಆ ಖಾಯಿಲೆಯಿಂದಾಗಿ ಕೊಲೆಯಂತಹ ಕೃತ್ಯವೊಂದನ್ನು ತನಗೇ ತಿಳಿಯದಂತೆ ಎಸಗಿದ್ದ. ಇದು ಎಲ್ಲರಿಗೂ ಆಗುತ್ತೆ ಎಂದಲ್ಲ. ಆದರೆ ಕನಸುಗಳು ಕೆಲವೊಮ್ಮೆ ಮನುಷ್ಯನನ್ನು ಹಿಡಿತದಲ್ಲಿ ಇಟ್ಟುಕೊಳ್ಳಬಲ್ಲದು ಎಂಬುದಕ್ಕೆ ಉದಾಹರಣೆಯಷ್ಟೇ. ನಾವೂ ಸಹ ಕೆಲವೊಮ್ಮೆ ನಿದ್ದೆಯಲ್ಲಿ ಮಾತನಾಡುವುದುಂಟು. ಮುಂಜಾನೆ ಎದ್ದ ತಕ್ಷಣ ಜೊತೆಗಾರರು ಅದನ್ನು ಅಣಕಿಸಿ ನಗುವುದುಂಟು. ಆದರೆ ಅದು ರೋಗವಲ್ಲ, ಬದಲಾಗಿ ನಮಗೆ ಬಿದ್ದ ಕನಸಿನ ಒಂದು ಭಾಗವಾಗಿರುತ್ತೆ ಅಷ್ಟೇ. ಅದಕ್ಕೇನೂ ತಲೆಬಿಸಿ ಮಾಡುವ ಅಗತ್ಯವಿಲ್ಲ.

ಕನಸುಗಳು ಸಾಮಾನ್ಯ. ಮನುಷ್ಯ ತನ್ನ ಸುಪ್ತ ಮನಸ್ಸಿನಲ್ಲಿ ಅಡಗಿರುವ ಅದೆಷ್ಟೊ ಘಟನೆಯನ್ನು ಕನಸಿನ ಮೂಲಕ ಕಾಣುತ್ತಾನಷ್ಟೇ. ಕನಸು ಕಲ್ಪನೆಯ ಚಿತ್ರಮಂದಿರದಂತೆ. ನಮ್ಮದೇ ಬದುಕು, ನಮ್ಮದೇ ನೆನಪು, ಪುಟ್ಟ ಪುಟ್ಟ ಕಲ್ಪನೆಯ ಕಿರುಚಿತ್ರಗಳಾಗಿ ನಮಗೆ ಕಾಣಿಸಿಕೊಳ್ಳುತ್ತವೆ. ಒಂದು ಅಂದಾಜಿನ ಪ್ರಕಾರ ಪ್ರತಿನಿತ್ಯ ಸುಮಾರು 50ನಿಮಿಷಗಳ ಕಾಲ ಮನುಷ್ಯ ಕನಸನ್ನು ಕಾಣುತ್ತಾನೆ. ತನ್ನ ವಿಚಾರ, ಸಿದ್ಧಾಂತ ಮತ್ತು ನಿಯಮದ ಗಡಿ ಮೀರಿ ಕಲ್ಪನೆಯ ಕಡಲಿಗೆ ಧುಮುಕಿ ಕನಸನ್ನು ಕಾಣುತ್ತಾನೆ. ಅಲ್ಲಿ ಮಲೆನಾಡ ಹೆಣ್ಣಿರಬಹುದು, ಬಾವಿಯೊಳಗಿನ ಹೊನ್ನಿರಬಹುದು. ನಮ್ಮ ನಿಯತಕಾಲದ ನಿಯಮಿತ ಬದುಕಿನ ಬೇಲಿಯನ್ನು ಮುರಿದು ಅದರಾಚೆ ಬದುಕುವ ಚಲನಚಿತ್ರವೊಂದನ್ನು ತೋರಿಸುವ ಕನಸುಗಳು, ದಿನರಾತ್ರಿ ಸತ್ತು ಜಂಜಾಟಗಳನ್ನು ಎದುರಿಸಲು ಮುಂಜಾನೆ ಹುಟ್ಟುವ ಬದುಕಿನ ನಡುವಿನ ಪುಟ್ಟ ರಿಫ್ರೆಶ್’ಮೆಂಟ್ ಅಷ್ಟೇ…

Facebook ಕಾಮೆಂಟ್ಸ್

ಲೇಖಕರ ಕುರಿತು

Manjunath Hegde

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಮೀಪದ ಹಳ್ಳಿ ಇವರ ಮೂಲ.. ಉಡುಪಿಯಲ್ಲಿ MSc ಮಾಡಿ ಒಂದು ವರ್ಷ ಲೆಕ್ಚರರ್ ಆಗಿ ಕೆಲಸ ಮಾಡಿ ಈಗ NITK ಸುರತ್ಕಲ್’ನಲ್ಲಿ PhD ಮಾಡುತ್ತಿದ್ದಾರೆ... ಓದಿದ್ದು ಕಂಪ್ಯೂಟರ್ ಆದರೂ ಸಾಹಿತ್ಯದಲ್ಲಿ ಆಸಕ್ತಿ.. ಬರೆಯುವುದು ಹವ್ಯಾಸ.. ವಿಜ್ಞಾನದ ಬರಹಗಳು, ಕಥೆ ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ಬರೆಯುವ ಆಸಕ್ತಿ ಹೆಚ್ಚು..

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!