ಅಂಕಣ

ಈ ಕೃತಘ್ನರಿಗೆ ಕಾವೇರಿಯ ಋಣಕ್ಕಿಂತ ಗಂಜಿಯ ಋಣ ಜಾಸ್ತಿಯಾಯಿತೆ?

    ನನಗೊಬ್ಬರು ಹೈಸ್ಕೂಲಿನಲ್ಲಿ ಕನ್ನಡ ಮೇಷ್ಟ್ರು ಇದ್ದರು. ಹೆಸರು ಎ.ಎಸ್. ಪಾಟೀಲ್ ಅಂತ. ಬಹುಷಃ ಅಲ್ಲಿಯವರೆಗೆ ಕನ್ನಡವನ್ನು ಒಂದು ವಿಷಯವಾಗಿ ಓದುತ್ತಿದ್ದ ನಮಗೆ ಅದರಲ್ಲಿನ ಸಾಹಿತ್ಯದ ರುಚಿ ಹತ್ತಿಸಿದ್ದೇ ಅವರು . ಕನ್ನಡ ಪಾಠಗಳನ್ನು ಅಂಕ ಗಳಿಸುವುದಕ್ಕೆ ಸೀಮಿತಗೊಳಿಸದೇ ಕನ್ನಡದಲ್ಲಿನ ಸಾಹಿತ್ಯದ ಆಳವನ್ನು ಸೂಕ್ಷ್ಮತೆಯನ್ನು ಹೊರಗೆಳೆದು ತಂದವರು ಅವರು. ಕೆಲವೊಂದಿಷ್ಟು ಶಿಕ್ಷಕರು ಕ್ಲಾಸಿನಲ್ಲಿ ಮಾತಾಡಬೇಡಿ ಅಂಥ ಹೇಳುವುದು ವಾಡಿಕೆ. ಆದರೆ ಅವರ ಕ್ಲಾಸಿನಲ್ಲಿ ಮಾತಾಡಿದರೆ ರಸಭಂಗವಾದೀತು ಎಂದು ಇಡೀ ತರಗತಿಯೇ ಸೂಜಿ ಬಿದ್ದರೂ ಶಬ್ದ ಕೇಳುವಷ್ಟು ನಿಶ್ಯಬ್ದ. ಆ ನಿಶ್ಯಬ್ದವನ್ನು ಸೀಳಿ ಬರುತ್ತಿದ್ದ ಪಾಠ, ಅದನ್ನು ಸೋದಾಹರಣವಾಗಿ ಮಂಡಿಸುತ್ತಿದ್ದ ಅವರ ಪರಿ, ಹಳಗನ್ನಡವನ್ನು ತಡವರಿಸದೇ ಓದುತ್ತಿದ್ದ ಅವರ ಭಾಷಾ ಪ್ರಭುತ್ವ ಹೌದು ಅವರಿಗೆ ಅವರೇ ಸಾಟಿ.ನಾನು ಇವತ್ತು ಲೇಖನಗಳನ್ನು ಬರೆಯುತ್ತಿದ್ದೇನೆ ಅಂದರೆ ಈ ಪದಗಳ ಮೂಲ ಅವರ ಪಾಠಗಳೆ. ಈಗ ಅವರನ್ನೇಕೆ ನೆನಪಿಸಿಕೊಂಡೆ ಅಂದರೆ ಅವರೊಂದು ಮಾತು ಹೇಳಿದ್ದರು. “ಸಹ ಹಿತವಿದ್ದರೆ ಸಾಹಿತ್ಯ ಇಲ್ಲದಿದ್ದರೆ ಅದು ಸತ್ತಂತೆ ನಿತ್ಯ. ” ಎಂಥ ಪ್ರಬುದ್ಧ ಮಾತದು. ಓದುಗನಿಗೂ ಬರೆದವನಿಗೂ ಸಾಹಿತ್ಯ ಹಿತವನ್ನು ನೀಡಬೇಕು. ಸಾಹಿತಿಗಳಿಗೆ ಅಂಥದ್ದೊಂದು ಸಾಮಾಜಿಕ ಹೊಣೆಗಾರಿಕೆ ಇರಬೇಕು. ಓದಗನ ಮನಸ್ಸು ಅರಳಬೇಕೆ ಹೊರತು ಕೆರಳಬಾರದು.

         ನಮ್ಮ ದೇಶದಲ್ಲಿ ಕೆಲವು ಸಾಹಿತಿಗಳಿದ್ದಾರೆ ಸಾಹಿತ್ಯಕ್ಕಿಂತ ರಾಜಕಾರಣ ಮಾಡಿದ್ದೆ ಹೆಚ್ಚು. ಸದಾ ರಾಜಕೀಯ ಲಾಭಕ್ಕೆ ಸಾಹಿತ್ಯವೆಂಬ ಸೃಜನಶೀಲ ಕಲೆಯನ್ನು ಬಲಿಕೊಟ್ಟು ಬಿಟ್ಟಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ ಅವರಿಗೆ ಕನ್ನಡದ ನೆಲವು ಅನ್ನ ನೀಡಿದೆ. ಕನ್ನಡ ಭಾಷೆ ಸಮಾಜದಲ್ಲಿ ಸ್ಥಾನಮಾನ ನೀಡಿದೆ. ಕನ್ನಡದೆಡೆಗೆ ಒಂದು ಸಣ್ಣ ಋಣವೂ ಇಲ್ಲದ ಋಣಗೇಡಿತನ ತಮ್ಮ ಮಾತು ಹೇಳಿಕೆಗಳ ಯಾವ ರೀತಿ ಪರಿಣಾಮ ಬೀರಬಹುದು ಎಂಬುದರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದ ಹೊಣೆಗೇಡಿತನ ಇವರಲ್ಲಿ ಎದ್ದು ಕಾಣುತ್ತದೆ. ಇದರ ಬಗ್ಗೆ ಪ್ರಶ್ನಿಸುವವರನ್ನೆಲ್ಲ ಅರೆಬೆಂದವರು ಎನ್ನುವ ಇವರು ಇವರ ಹೇಳಿಕೆಗಳಿಂದ ಕಿಡಿ ಹೊತ್ತಿ ಎಷ್ಟು ಜನ ಅದರಲ್ಲಿ ಬೆಂದು ಹೋಗುತ್ತಾರೆ ಎಂಬ ಸೂಕ್ಷ್ಮವನ್ನೂ ಅರಿಯದವರು. ಕಾಲಕಾಲಕ್ಕೆ ಬಿಟ್ಟಿ ಪ್ರಚಾರಕ್ಕೆಂದು ಹೇಳಿಕೆಗಳನ್ನು ಕೊಟ್ಟು ಗದ್ದಲ ಎಬ್ಬಿಸುವುದೇ ಇವರ ಸಮಾಜ ಸೇವೆ.

       ರೋಹಿತ್ ವೆಮುಲಾ ಎಂಬ ವಿದ್ಯಾರ್ಥಿ ತನ್ನ ಸಾವಿಗೆ ತಾನೇ ಕಾರಣ ಎಂದು ಬರೆದಿಟ್ಟು ಸತ್ತರೂ ತಮಗೆ ಬೇಕಾದ ಕಾರಣವನ್ನು ಇವರೇ ಕೊಟ್ಟುಕೊಂಡು ಟೌನ್ ಹಾಲ್ ಬಳಿ ಜಮಾಯಿಸಿ ಬಿಡುತ್ತಾರೆ. ಸಾವು ಎಂದರೆ ಎಲ್ಲರದೂ ಒಂದೆ ಹೈದ್ರಾಬಾದಿನಲ್ಲಿ ಓದುತ್ತಿದ್ದ ಹುಡುಗ ವೈಯುಕ್ತಿಕ ಕಾರಣಕ್ಕೆ ಸತ್ತರೆ ದೊಡ್ಡ ಸುದ್ದಿ ಮಾಡುವ ನೀವು ನಮ್ಮದೇ ರಾಜ್ಯದಲ್ಲಿ ಹೊಲಗಳಿಗೆ ನೀರಿಲ್ಲದೇ ಸಾಲ ಮಾಡಿಕೊಂಡ ಸಾಯುವ ರೈತರ ಪರವಾಗಿ ಕಾಳಜಿ ತೋರುವುದಿಲ್ಲ. ಒಬ್ಬ ಯುವಕನ ಸಾವನ್ನು ಸ್ವಹಿತಾಸಕ್ತಿಗೆ ಬಳಿಸಿಕೊಳ್ಳುವವರು ಅದೆಂತಹ ಸಾಹಿತಿಗಳು? ರೋಹಿತನ ಪೋಟೊವನ್ನು ಫೆಸ್ಬುಕ್ಕಿನ ಪ್ರೊಪೈಲ್ ಫೋಟೊ ಮಾಡಿಕೊಂಡು ದೇಶವನ್ನು ತುಂಡರಿಸುವ ಮಾತಾಡಿದ ಕನ್ಹಯ್ಯಾ ಕುಮಾರನನ್ನು ಮಗ ಎಂದು ಕರೆಯುವವರಿಗೆ ನಮಗೆ ಅನ್ನ ನೀಡುವ ಮಣ್ಣಿನ ಮಗನ ರೋಧನೆಗಳು ಕೇಳಲಿಲ್ಲವೇ? ಒಬ್ಬ ಕನ್ಹಯ್ಯಾ ಜೈಲಿಗೆ ಹೋದರೆ ಟೌನ್ ಹಾಲ್ ಮುಂದೆ ಜಮಾಯಿಸಿ ಬಿಡ್ತೀರಿ. ಅದೇ ತರಹ ಮಹದಾಯಿ ಪ್ರತಿಭಟನೆಯ ವೇಳೆ ಜೈಲು ಪಾಲಾದವರ ಬಗ್ಗೆ ಯಾಕೆ ಧ್ವನಿ ಎತ್ತುವುದಿಲ್ಲ. ನೀರು ಕೇಳಿದ್ದು ದೇಶ ತುಂಡರಿಸುವುದಕ್ಕಿಂತ ದೊಡ್ಡ ಅಪರಾಧವೇ? ನಿಮಗೇನು ಗೊತ್ತು ಸ್ವಾಮಿ ನೀರಿನ ಬೆಲೆ ಸದಾ ಎ.ಸಿ ರೂಮಿನಲ್ಲಿ ಕೂತು ಮಿನರಲ್ ವಾಟರ್ ಕುಡಿಯುವವರಿಗೆ ಬಿತ್ತಿದ ರೈತನಿಗೆ ಬೆಳೆ ತೆಗೆಯಲು ಎಂಥ ಕಷ್ಟವಿದೆ ಅಂಥ ಅರ್ಥವಾಗುವುದಾದರೂ ಹೇಗೆ?

         ತಾವು ಮಾತಾಡುವ ಒಂದೊಂದು ಮಾತು ಎಂಥ ಅಲ್ಲೋಲ ಕಲ್ಲೋಲ ಮಾಡಿಬಿಡಬಹುದು ಎಂಬುದರ ಬಗ್ಗೆ ಸ್ವಲ್ಪ ವಿಚಾರ ಮಾಡುವ ಅಗತ್ಯವಿದೆ. ಟಿಪ್ಪು ಜಯಂತಿಯಲ್ಲಿ ಕಾರ್ನಾಡರ ಒಂದೇ ಮಾತು ದೊಡ್ಡ ಕೋಮು ದಳ್ಳುರಿಗೆ ಕಾರಣವಾಯಿತು. ಕೊಡಗು ಜಿಲ್ಲೆ ಹೊತ್ತಿ ಉರಿಯಿತು. ಸಾವಿಗೀಡಾದ ವ್ಯಕ್ತಿಯನ್ನು ಇವರು ಮರಳಿ ತರಲು ಸಾಧ್ಯವೇ? ಅದೇ ಕೊಡಗಿನಲ್ಲಿ ಹುಟ್ಟುವ ಕಾವೇರಿಯ ಬಗ್ಗೆ ಒಂದೇ ಒಂದು ಮಾತೂ ಹೇಳಲಿಲ್ಲ. ಟಿಪ್ಪು, ಕೆಂಪೇಗೌಡ ಇಬ್ಬರೂ ಗತಿಸಿ ಹೋಗಿದ್ದಾರೆ. ಅವರಿಬ್ಬರನ್ನು ಈಗ ತುಲನೆ ಮಾಡಿ ಶಾಂತಿಯನ್ನು ಕದಡುವ ಅವಶ್ಯಕತೆ ಏನಿತ್ತು?ಅವರವರ ಅಭಿಮಾನಿಗಳಿಗೆ ಅವರವರೇ ಶ್ರೇಷ್ಟರು.

             ಗುಜರಾತಿನಲ್ಲಿ ದಲಿತನೊಬ್ಬನ ಮೇಲೆ ಹಲ್ಲೆಯಾಗುತ್ತೆ. ಹಲ್ಲೆ ಮಾಡಿದ್ದು ಅಕ್ಷಮ್ಯ ಅಪರಾಧ. ದಲಿತನಷ್ಟೇ ಅಲ್ಲ ಯಾರೊಬ್ಬರ ಮೇಲೂ ಮತ್ತೊಬ್ಬನಿಗೆ ಕೈ ಮಾಡುವ ಹಕ್ಕಿಲ್ಲ. ಕಾರಣ ಏನೇ ಇರಬಹುದು. ಅದು ಕಾನೂನನ್ನು ಕೈಗೆ ತೆಗೆದುಕೊಂಡಂತೆಯೇ. ಕೆಲವೊಬ್ಬರು ಕಾಶ್ಮೀರಿ ಪಂಡಿತರ ಮೇಲಿನ ಹಲ್ಲೆಯನ್ನು ಇದಕ್ಕೆ ಸಮೀಕರಿಸಿ ಎರಡು ಸರಿ ಹೋಯಿತು ಎನ್ನುವವರೂ ಇದ್ದಾರೆ. ಅದು ತಪ್ಪು. ಅಲ್ಲಿ ನಾವು ಹೊಡೆತ ತಿಂದೆವು. ಇಲ್ಲಿ ಮತ್ತೊಬ್ಬರು ಎಂದರೆ ಅದೆಂಥ ಅರ್ಥಹೀನ ಸಮರ್ಥನೆ. ಹಲ್ಲೆ ಮಾಡಿದವರಿಗೆ ಕಾನೂನಿನ ಪ್ರಕಾರ ಏನು ಶಿಕ್ಷೆಯಾಗಬೇಕೋ ಆಗುತ್ತದೆ. ಅದು ಅಲ್ಲಿಗೆಯೇ ಮುಗಿದು ಹೋಯಿತು. ಪಟಾಕಿಯ ಸರಕ್ಕೆ ಕಿಡಿ ತಾಗಿಸಿದಂತೆ ಅದನ್ನೇ ಬೆಳೆಸಿ ಇನ್ನಷ್ಟು ದೊಡ್ಡ ಗಲಾಟೆಗಳು ಘಟಿಸಲು ನಾವು ಕಾರಣರಾಗಬಾರದು. “ದಲಿತರ ಕೈಗೆ ಬಂದೂಕು ಕೊಡಿ. ” ಎಂದರೆ ಏನು ಅರ್ಥ. ಸದಾ ನಾವು ಜಗಳಾಡುತ್ತಲೇ ಇರಬೇಕೇ? ನಿಮ್ಮ ಈ ಮಾತನ್ನು ಕೇಳಿದ ಒಬ್ಬ ಬಡ ದಲಿತರ ಮನೆಯ ಬಿಸಿರಕ್ತದ ಹುಡುಗ ಉದ್ರೇಕಗೊಂಡು ಸಿಕ್ಕ ಸಿಕ್ಕವರನ್ನು ಕೊಚ್ಚುತ್ತಾ ಹೋಗಿ ಜೈಲು ಪಾಲಾದರೆ ಅದರ ಹೊಣೆಯನ್ನು ಹೇಳಿಕೆ ಕೊಟ್ಟವರು ಹೊತ್ತು ಕೊಳ್ಳುತ್ತಾರೇನು? “ದಲಿತನ ಮೇಲೆ ಹಲ್ಲೆ ಮಾಡಿದವರಿಗೆ ಶಿಕ್ಷೆ ಆಗಬೇಕು” ಎಂದಿದ್ದರೆ ನಿಮ್ಮ ಸಾಮಾಜಿಕ ಕಾಳಜಿಗೆ ನಾನು ಒಪ್ಪಿಕೊಳ್ಳುತ್ತಿದ್ದೆ. ಬಂದೂಕು ಕೊಡಿ ಎಂದರೆ ಅದು ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡುವುದಿಲ್ಲವೇ? ಯಾಕೇ ಸ್ವಾಮಿ ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವ ಬುದ್ಧಿ ನಿಮಗೆ?

     ಚಂಪಾ ಅವರು “ದ.ರಾ.ಬೇಂದ್ರೆ ತಮ್ಮ ಸಮಕಾಲೀನ ಸಾಹಿತಿಗಳನ್ನು ಬೆಳೆಯೋಕೆ ಬಿಡಲಿಲ್ಲ.”ಎಂಬ ಮಾತನ್ನು ಹೇಳಿದರಲ್ಲ, ಆದರೆ ಬೇಂದ್ರೆಯವರು ಯಾವತ್ತೂ ಸೌಹಾರ್ದತೆ ಕದಡುವ ಮಾತಾಡಲಿಲ್ಲ. ಹಲಸಂಗಿ ಗೆಳೆಯರ ಬಳಗ ಕಟ್ಟಿಕೊಂಡು ಕನ್ನಡ ಭಾಷೆಗೆ ಎಷ್ಟೋ ಸಾಹಿತಿಗಳನ್ನು ಕೊಡುಗೆ ಕೊಟ್ಟಿದ್ದಾರೆ. ನಿಮ್ಮ ಹಾಗೇ ಯಾವುದೋ ಸಿದ್ಧಾಂತದ ಗೂಟಕ್ಕೆ ತಮ್ಮನ್ನು ತಾವು ಕಟ್ಟಿಕೊಳ್ಳಲಿಲ್ಲ. ಪ್ರಶಸ್ತಿ ಸನ್ಮಾನಗಳ ಆಸೆಗಾಗಿ ಯಾವುದೇ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಳ್ಳಲಿಲ್ಲ. ಅವರು ಆಗಲೇ ದಿವಂಗತರಾಗಿ ಹೋಗಿದ್ದಾರೆ ಇಷ್ಟು ದಿನದ ಮೇಲೆ ಅವರನ್ನು ನೆನಪಿಸಿಕೊಂಡು ಒಂದು ವಿವಾದಾತ್ಮಕ ಹೇಳಿಕೆ ಕೊಟ್ಟು ಬಿಟ್ಟಿ ಪ್ರಚಾರ ಪಡೆಯುವ ಹಂಬಲವಾ ? ಕಾವೇರಿಯ ವಿವಾದದ ಬಗ್ಗೆ ಯಾಕೆ ನೀವು ಮಾತಾಡುವುದಿಲ್ಲ? ಇದು ನಿಮಗೆ ಬೇಡದ ವಿಷಯವೇ?

          ಕರ್ನಾಟಕಕ್ಕೇ ಬರ ಅಪ್ಪಳಿಸಿತು. ಕುಡಿಯುವ ನೀರಿಗೆ, ಕೃಷಿಗೆ, ದನ ಜಾನುವಾರುಗಳಿಗೆ ನೀರು ಸಿಗದ ಅತೀ ಅಸಹನೀಯ ಬರವನ್ನು ಅನುಭವಿಸಿದೆವು. ಉತ್ತರ ಕರ್ನಾಟಕದ ಮಾತು ಬಿಡಿ ಎಂದೆಂದೂ ನೀರಿನ ಕೊರತೆಯನ್ನೇ ಅನುಭವಿಸದ ಮಂಗಳೂರಿನಂತ ಊರಲ್ಲೇ ನೀರಿಲ್ಲದೇ ಪರದಾಡಿದ್ದು ಬರದ ತೀವ್ರತೆಯನ್ನು ಹೇಳುತ್ತೆ. ಒಂದೆಡೆ ಮಹದಾಯಿ, ಮತ್ತೊಂದೆಡೆ ಕಾವೇರಿ, ಮೂರನೇ ಕಡೆ ಎತ್ತಿನಹೊಳೆ ಹೀಗೆ ಪ್ರತಿ ನದಿಯ ಜೊತೆಗೆ ಒಂದೊಂದು ವಿವಾದವಿದೆ. ನೀವೆಲ್ಲಾ ಬುದ್ಧಿಜೀವಿಗಳು ಇದರ ಬಗ್ಗೆ ಬಾಯಿ ಬಿಡಬೇಕು. ಕನ್ನಡ ಚಿತ್ರರಂಗದವರೇ ಪ್ರತಿಭಟನೆಗೆ ಸಾಥ್ ಕೊಟ್ಟಿದ್ದಾರೆ. ಅದು ಕನ್ನಡದ ಋಣ ಸಂದಾಯದ ಮಾರ್ಗವೂ ಹೌದು.  ಒಳ್ಳೆಯದೋ ಕೆಟ್ಟದ್ದೋ ನೀವು ಬರೆದಿದ್ದು ಇದೇ ಕನ್ನಡದಲ್ಲಿ. ನಿಮಗೆ ಪ್ರಶಸ್ತಿ ಪುರಸ್ಕಾರ ಬಂದಿದ್ದೂ ಇದೇ ಕರ್ನಾಟಕದಿಂದ . ನಿನ್ನೆ ಮೊನ್ನೆ ಬಂದ ನಟ ಯಶ್ ,ಉತ್ಸಾಹಿ ಯುವಕ ಕೀರ್ತಿ ( ಕಿರಿಕ್ ಕೀರ್ತಿ)  ದೂರದ ಉತ್ತರ ಕರ್ನಾಟಕಕ್ಕೆ ನೀರು ಒದಗಿಸಿ ಬಂದರು ಬರ ಪರಿಹಾರಕ್ಕಾಗಿ ಹಣವನ್ನು ಕೊಟ್ಟರು. ನಿಮ್ಮ ಕಿಲುಬು ಸಂಪತ್ತಿನಲ್ಲಿ ನೂರನೆಯ ಒಂದು ಭಾಗದಷ್ಟು ಇಂಥ ಕೆಲಸಕ್ಕೆ ಕೊಡಲಾಗದೇ? ದುಡ್ಡಿನ ವಿಷಯ ಬಿಡಿ ಕನಿಷ್ಠ ಪಕ್ಷ ಶಾಂತ ರೀತಿಯಾಗಿ ಒಂದೆಡೆ ಕೂತು ಪ್ರತಿಭಟನೆ ನಡೆಸುವಲ್ಲಿಗೆ ಬಂದು ಸಣ್ಣ ಬೆಂಬಲ ಕೊಡುವಷ್ಟು ಸೌಜನ್ಯ ಇಲ್ಲವೇ? ಪ್ರಶಸ್ತಿ ಪುರಸ್ಕಾರಗಳನ್ನು ಕೊಟ್ಟ ಸರ್ಕಾರದ ಋಣಕ್ಕಾಗಿ ಗೋಮಾಂಸವನ್ನು ಬಹಿರಂಗವಾಗಿ ತಿಂದಿರಿ, ಅದನ್ನು ತಿಂದು ತೇಗಿದ ಮೇಲೆ ನೀವುಗಳು ಕುಡಿದಿದ್ದು ಇದೇ ಕಾವೇರಿಯ ನೀರನ್ನೇ ಅಲ್ಲವೇ? ದಲಿತರ ರಕ್ಷಣೆಗೆ ಅವರ ಕೈಗೆ ಬಂದೂಕು ಕೊಡಿ ಎಂದು ಅದನ್ನೇ ದೊಡ್ಡ ಪರಿಹಾರ ಎಂಬಂತೆ ಬೆನ್ನು ತಟ್ಟಿಕೊಳ್ಳುವ ನೀವು. ನೀರಿನ ಕೊರತೆಯನ್ನು ನೀಗಿಸಲು ಒಂದು ಸಣ್ಣ ಮಾರ್ಗೋಪಾಯ ಹೇಳಲು ಆಗದೆ?ಅದೆಲ್ಲವೂ ಬಿಡಿ ಪರಿಸ್ಥಿತಿ ಕೈ ಮೀರಿ ಹೋಗಿ ಬೆಂಗಳೂರು ಬೆಂದು ಹೋಗುತ್ತಿರುವಾಗ ಕನ್ನಡದ ನಟರೆಲ್ಲಾ ವಿಡಿಯೋ ಕ್ಲಿಪ್’ಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಶಾಂತಿಗಾಗಿ ಮನವಿ ಮಾಡಿಕೊಂಡರು. ” ಕಾಶ್ಮೀರದಲ್ಲಿ ಬರ್ಹಾನ್ ವನಿ ಸತ್ತಾಗ ಅವನ

ಅಂತ್ಯಸಂಸ್ಕಾರಕ್ಕೆ ಜನ ಜಾಸ್ತಿ ಸೇರಿರುವುದು ಕಾಶ್ಮೀರ ಯಾವ ದೇಶಕ್ಕೆ ಸೇರಬೇಕೆಂದು ತೋರಿಸುತ್ತೆ ” ಎಂದು ಫೆಸ್ಬುಕ್ಕ ಸ್ಟೇಟಸ್ ಹಾಕಿಕೊಂಡು ಪೊಳ್ಳು ವಾದಕ್ಕೆ ಸಾಮಾಜಿಕ ಜಾಲತಾಣವನ್ನು ಬಳಸಿಕೊಳ್ಳುವ ನೀವು ಇಂಥದ್ದಕ್ಕೆ (ಕರ್ನಾಟಕದ ಶಾಂತಿ ಸಂದೇಶಕ್ಕೆ) ಬಳಸಿಕೊಳ್ಳಲು ಮನಸ್ಸು ಬರಲಿಲ್ಲವೇ?  ನನಗೆ ಗೊತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಅದರ ವಿರುದ್ಧವೇ ಧ್ವನಿ ಎತ್ತೋಕೆ ನಿಮಗೆ ಗಂಜಿಯ ಋಣ ಬಿಡುವುದಿಲ್ಲ. ಅವರ ವಿರುದ್ಧವಾಗಿ ಅಲ್ಲದಿದ್ದರೂ ಅನ್ನದಾತನ ಪರವಾಗಿಯಾದರೂ ಇಂಥದರಲ್ಲಿ ತಾವು ಭಾಗವಹಿಸಬೇಕಿತ್ತು. ಮೋದಿಯವರು ಮಧ್ಯ ಪ್ರವೇಶಿಸಬೇಕೆಂಬ ವಾದವಿದೆ. ಕಾನೂನಾತ್ಮಕವಾಗಿ ಅದು ಸಾಧ್ಯವಾಗದೇ ಇರಬಹುದು. ಯಾವುದ್ಯಾವುದಕ್ಕೊ ಮೋದಿಯನ್ನು ಪ್ರಶ್ನಿಸುವ ನೀವು ಈ ಕಾರಣಕ್ಕಾಗಿ ಪ್ರಶ್ನಿಸಿದ್ದರೇ ಕಟ್ಟಾ ಬಿಜೆಪಿಯವರು ಬಲಪಂಥೀಯರು ನಿಮ್ಮನ್ನು ಒಪ್ಪಿಕೊಳ್ಳದಿದ್ದರೂ ಕನ್ನಡದ ಮನಸ್ಸುಗಳಾದರೂ ನಿಮ್ಮ ಜೊತೆಗಿರುತ್ತಿದ್ದವು. ಎಷ್ಟೋ ಅರ್ಥಹೀನ ಪ್ರತಿಭಟನೆಗಳ ಮಧ್ಯೆ ಇದು ಅರ್ಥಪೂರ್ಣ ಎನ್ನಿಸದಿದ್ದರೂ ಕನ್ನಡಿಗರ ಕರೆಯು ನಿಮಗೆ ಕೇಳಿಸುತ್ತೆ ಎಂಬುದನ್ನಾದರೂ ನೀವು ನಿರೂಪಿಸಿದಂತಾಗುತ್ತಿತ್ತು. ಕನ್ನಡ ಕರ್ನಾಟಕದ ಅಳಲಿಗೆ ಕನಿಷ್ಠ ಸ್ಪಂದನೆಯನ್ನೂ ಕೊಡದ ನೀವುಗಳು ದೂರದ ವೆಮುಲಾ, ಕನ್ಹಯ್ಯನ ಪರವಾಗಿ ಬೀದಿಗಿಳಿಯುತ್ತೀರಲ್ಲಾ ನಿಮಗೆ ಸ್ವಲ್ಪವಾದರೂ ಋಣವಿದೆಯೇ? ನನಗೆ ಗೊತ್ತು ನೀವೆಲ್ಲಾ ದೊಡ್ಡ ಜ್ಞಾನಿಗಳು. ನಿಮ್ಮ ಮುಂದೆ ನಾನು ಅಲ್ಪಜ್ಞಾನಿ. ಆದರೆ ನನ್ನಂಥ ಅರೆಬೆಂದವನಿಗೆ ಇರುವ ಸಾಮಾಜಿಕ ಕಳಕಳಿ ಕನ್ನಡ, ಕರ್ನಾಟಕ ಪರ ಕಾಳಜಿ ನಿಮ್ಮಂಥ ಪರಿಪಕ್ವ ಮನಸ್ಸುಗಳಿಗಿಲ್ಲದಿರುವುದು ವಿಚಿತ್ರ ವಿಪರ್ಯಾಸ ….

Facebook ಕಾಮೆಂಟ್ಸ್

ಲೇಖಕರ ಕುರಿತು

Rahul Hajare

ಬಾಹುಬಲಿ ತಾಂತ್ರಿಕ ವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯನಿಕೇಶನ್ ಇಂಜನೀಯರಿಂಗ್ ಪದವಿ
ಸದ್ಯಕ್ಕೆ ಮಂಗಳೂರಿನ ಬ್ಯಾಂಕ್'ನಲ್ಲಿ ಉದ್ಯೋಗ ಕತೆ,ಲೇಖನ, ಕವಿತೆ ಬರೆಯುವುದು ಪ್ರವೃತ್ತಿ. ಚೆಸ್,ಕ್ರಿಕೆಟ್ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!