ಅಂಕಣ

ಹೈದರಾಬಾದ್ ವಿಮೋಚನಾ ಹೋರಾಟ

ಭಾರತ, ಆ ಹೆಸರೇ ಅತ್ಯಂತ ಅದ್ಭುತ, ಮೈನವಿರೇಳಿಸುವ ಆ ಶಬ್ದದ ಝೇಂಕಾರದಲ್ಲಿ ಅನನ್ಯವಾದ ಸಾಂಸ್ಕತಿಕ ಮೌಲ್ಯಗಳು, ಕ್ಷಾತ್ರ ತೇಜಸ್ಸಿನ ರೋಮಾಂಚಕಾರಿ ಘಟನೆಗಳು ಸಾಲು ಸಾಲಾಗಿವೆ. ಭಾರತದ ಸಮಗ್ರ ಇತಿಹಾಸವನ್ನು ಕೂಲಂಕಷವಾಗಿ ಪರಿಶೀಲಿಸಿದರೆ ಇದರ ಕುರುಹುಗಳು ನಮಗೆ ಪ್ರತಿ ಕ್ಷಣಕ್ಕೂ ದೊರೆಯುತ್ತವೆ. ಸಹಸ್ರಾರು ವರ್ಷಗಳ ಈ ಗಾಥೆಯಲ್ಲಿ ಭಾರತ ಭೌಗೋಳಿಕವಾಗಿ ಹಾಗೂ ಸಾಂಸ್ಕøತಿಕವಾಗಿ ತನ್ನ ಅಖಂಡತೆಯನ್ನು ಕಾಪಾಡಿಕೊಂಡು ಬಂದಿದೆ. ಸಾವಿರಾರು ರಾಜವಂಶಗಳು ಈ ರಾಷ್ಟ್ರವನ್ನು ಆಳಿದರೂ ಸಹ ಅವು ಭೌಗೋಳಿಕ ಚೌಕಟ್ಟುಗಳನ್ನು ಮಾತ್ರ ನಿರ್ಮಿಸಿಕೊಂಡಿದ್ದವೇ ಹೊರತು ಧಾರ್ಮಿಕ ಹಾಗೂ ಸಾಂಸ್ಕತಿಕ ಭಿನ್ನತೆಗಳಲ್ಲ. ಈ ಮಣ್ಣಿನ ಮೇಲೆ ನಿರಂತರವಾಗಿ ಪರಕೀಯರ ದಾಳಿಗಳು ನಡೆದರೂ ಸಹ ಇಲ್ಲಿಯ ಜನಕ್ಕೆ ಇದು ಭರತವರ್ಷ, ಭರತಖಂಡ, ಆರ್ಯವರ್ತ, ಭಾರತ ಇದು ನಮ್ಮ ಅಖಂಡವಾದ ರಾಷ್ಟ್ರ ಎಂಬ ಅದಮ್ಯ ವಿಶ್ವಾಸ ಮಾತ್ರ ಮಾಸಲಿಲ್ಲ. ಆದರೆ 1947 ರಲ್ಲಿ ಈ ಅಖಂಡತೆಗೆ ದೊಡ್ಡ ಕೊಡಲಿ ಪೆಟ್ಟು ಬಿದ್ದಿತು, ಅದು ನಮ್ಮ ರಾಷ್ಟ್ರದ ಮಹಾನ್ ಇತಿಹಾಸದಲ್ಲಿ ಒಂದು ಕರಾಳ ಘಟನೆ, ದುರಂತದ ದಿನ. ಆದಾಗ್ಯೂ ದಾಸ್ಯದ ಕಪಿ ಮುಷ್ಠಿಯಿಂದ ತಾಯಿ ಭಾರತಿಯನ್ನು ಬಿಡಿಸಿ ನಿರಮ್ಮಳವಾಗಿ ನಾವೆಲ್ಲರು ಉಸಿರಾಡುವಂತೆ ಮಾಡುವಲ್ಲಿ ಲಕ್ಷ ಲಕ್ಷ ಜನರ ಕೊಡುಗೆಯಿದೆ. ಆದರೆ….?

ಒಮ್ಮೆ ಯೋಚಿಸಿ, ಇಡೀ ದೇಶ ಸ್ವಾತಂತ್ರ್ಯದ ಸಂತೋಷವನ್ನು ಆಚರಿಸುತ್ತಿದೆ. ಎಲ್ಲೆಡೆ ಸಂಭ್ರಮ, ಸಡಗರ, ಹರ್ಷೋಲ್ಲಾಸ, ಆದರೆ ಒಂದೆರಡು ಭೌಗೋಳಿಕ ಪ್ರದೇಶಗಳು ಈ ಸಂತೋಷದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದಾದರೆ ಎಂತಹ ನೋವು!!! ಅಂತಹ ನತದೃಷ್ಟ ಪ್ರದೇಶಗಳು ಕಾಶ್ಮೀರ, ಜುನಾಗಡ ಹಾಗೂ ಹೈದರಾಬಾದ್.   15 ಆಗಸ್ಟ್, 1947 ರಂದು ದೇಶ ಸ್ವತಂತ್ರ್ಯಗೊಂಡಾಗ ಈ ಮೂರು ಸಂಸ್ಥಾನಗಳು ಸ್ವತಂತ್ರ್ಯ ಭಾರತದ ಒಕ್ಕೂಟದಲ್ಲಿ ಸೇರಿರಲಿಲ್ಲ.! ಕಾಶ್ಮೀರದ ಸಮಸ್ಯೆ ಎಲ್ಲರಿಗೂ ತಿಳಿದಿರುವ ವಿಷಯ! ಇನ್ನು ಜುನಾಗಡ 9 ನವೆಂಬರ್ 1947 ರಲ್ಲಿಯೇ ಭಾರತದಲ್ಲಿ ಒಂದಾಯಿತು ಆದರೆ ಹೈದರಾಬಾದ್ ಮಾತ್ರ ಇದಕ್ಕೆ ಅಪವಾದವಾಯಿತು.

ಹೈದರಾಬಾದ್ ರಾಜ್ಯದಲ್ಲಿ ನಿಜಾಮ್‍ನ ಆಡಳಿತವಿತ್ತು. ನಿಜಾಮ್ ಮುಲ್ ಮುಲ್ಕ್ ಆಸಿಫ್ ಜಹಾಂ ಎಂಬುವವನು ಹೈದರಾಬಾದ್ ಸಂಸ್ಥಾನದ ಸ್ಥಾಪಕ. ಮೊಗಲ್ ದೊರೆ ಔರಂಗಜೇಬನ ಮರಣಾನಂತರ ಬಂದ ಫರೂಕ್ ಷಯರ್, ನಿಜಾಮ್ ಮುಲ್ ಮುಲ್ಕ್’ನನ್ನು ಮೊಗಲರ ನಿಯಂತ್ರಣದಿಂದ ಸ್ವತಂತ್ರ್ಯವಾಗಿ ತನ್ನನ್ನು ಸ್ವತಂತ್ರ ಅರಸನೆಂದು ಘೋಷಿಸಿಕೊಂಡನು. ನಿಜಾಮ್ ಮುಲ್ ಮುಲ್ಕ್‍ನ ತರುವಾಯ ಬಂದ ನಿಜಾಮರೆಲ್ಲ ಮೊಗಲ್ ದೊರೆಗಳಿಗೆ ನಾಮ ಮಾತ್ರ ಮಾಂಡಲೀಕರಾಗಿದ್ದರು. ನಂತರ ಸಂಪೂರ್ಣವಾಗಿ ಬ್ರಿಟೀಷರ ಆಧೀನದಲ್ಲಿ ಬಂದು ಅವರ ಆದೇಶದಂತೆ ರಾಜ್ಯಭಾರ ಮಾಡಿದರು. 1724 ರಿಂದ 1948 ರ ವರೆಗೆ ಹೈದರಾಬಾದ್ ಸಂಸ್ಥಾನವನ್ನು 7 ಜನ ನಿಜಾಮರು ಆಳಿದರು. ಕೊನೆಯ ನಿಜಾಮನೇ 7ನೇ ನಿಜಾಮ್ ಉಸ್ಮಾನ್ ಅಲೀಖಾನ್. ಇವನು ಹೈದರಾಬಾದ್ ರಾಜ್ಯವು ಸ್ವತಂತ್ರ ಭಾರತದ ಅವಿಭಾಜ್ಯ ಅಂಗವಾಗಲು ಒಪ್ಪಲಿಲ್ಲ.

ಭಾರತದ ಒಕ್ಕೂಟಕ್ಕೆ ಸೇರುವುದು, ಬ್ರಿಟೀಷ್ ಆಧಿಪತ್ಯದಲ್ಲಿರುವುದಕ್ಕಿಂತಲೂ ಕೆಟ್ಟದ್ದು ಎಂದು ನಿಜಾಮ ನಂಬಿದ್ದ. ಭಾರತ ಸ್ವತಂತ್ರ್ಯವಾದ ಕೂಡಲೇ ನಿಜಾಮನು ತನ್ನನ್ನು ಒಬ್ಬ ಸಾರ್ವಭೌಮ ಸುಲ್ತಾನನೆಂದು ಘೋಷಿಸಿಕೊಂಡು, ಒಕ್ಕೂಟದ ಸರ್ಕಾರವು ತನ್ನ ಸ್ವಾತಂತ್ರ್ಯವನ್ನು ಮನ್ನಿಸಬೇಕೆಂದು ತಿಳಿಸಿದ. ಒಂದು ಸ್ವತಂತ್ರ್ಯ ರಾಜ್ಯವು ಇನ್ನೊಂದು ಸ್ವತಂತ್ರ್ಯ ರಾಜ್ಯದೊಂದಿಗೆ ಹೇಗೆ ವ್ಯವಹರಿಸಬೇಕೆಂದು ಅದೇ ರೀತಿಯಾಗಿ ಭಾರತ ಸರ್ಕಾರ ತನ್ನೊಂದಿಗೆ ವರ್ತಿಸಬೇಕೆಂದು ನಿಜಾಮನು ಹೇಳತೊಡಗಿದ ಮೇಲೆ ದೊಡ್ಡ ಗೊಂದಲವುಂಟಾಯಿತು. ಆದರೆ ಅಂದಿನ ಭಾರತದ ಪ್ರಥಮ ಗೃಹ ಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲರು ಜನಾಭಿಪ್ರಾಯ ಪಡೆದು ಹೈದರಾಬಾದ್ ಭಾರತದ ಒಕ್ಕೂಟದಲ್ಲಿಯೇ ಸೇರಬೇಕೆಂದು ಸೂಚಿಸಿದ ವಿಷಯ ನಿಜಾಮನಿಗೆ ಹಿಡಿಸಲಿಲ್ಲ.

sardar-patel

ಹಿನ್ನಲೆ:

1942 ರ ಜನಗಣತಿಯ ಪ್ರಕಾರ ಹೈದ್ರಾಬಾದ್ ರಾಜ್ಯದ ಜನಸಂಖ್ಯೆ ಸುಮಾರು 1 ಕೋಟಿ 63 ಲಕ್ಷದಷ್ಟಿತ್ತು. ಹೈದರಾಬಾದ್ ರಾಜ್ಯದ ವಿಸ್ತೀರ್ಣ 82,313 ಚದರ ಮೈಲುಗಳಷ್ಟಿತ್ತು, ಹೈದರಾಬಾದ್ ರಾಜ್ಯದಲ್ಲಿ ಮೂರು ಭಾಷೆಯ ಪ್ರದೇಶಗಳಿದ್ದವು. ತೆಲುಗು, ಕನ್ನಡ ಹಾಗೂ ಮರಾಠಿ, ಅಂದರೆ ಈಗಿನ ತೆಲಂಗಾಣ, ಕರ್ನಾಟಕ ರಾಜ್ಯದ ಹೈದರಾಬಾದ್ ಕರ್ನಾಟಕ ಪ್ರದೇಶ ಹಾಗೂ ಮಹಾರಾಷ್ಟ್ರದ ಮರಾಠ್‍ವಾಡಾ, ಒಟ್ಟು 16 ಜಿಲ್ಲೆಗಳು. ಈ ಪ್ರದೇಶಗಳಲ್ಲಿ ಅಂದು ಶೇ 86% ರಷ್ಟು ಹಿಂದುಗಳಿದ್ದರು ಎಂಬುದು ದಾಖಲೆಗಳಿಂದ ಕಂಡು ಬರುತ್ತದೆ. ಅಲ್ಲಿನ ಜನ ನಿಜಾಮನ ದಮನಕಾರಿ, ಮತಾಂಧ ಆಡಳಿತದಿಂದ ತತ್ತರಿಸಿದ್ದರು. ರಾಜ್ಯದಲ್ಲಿ ಎಲ್ಲ ಉನ್ನತ ಹುದ್ದೆಗಳು ಮುಸ್ಲಿಮರಿಗಾಗಿ ಮೀಸಲಿದ್ದವು. ಉರ್ದು ಕಲಿಯುವುದು ಕಡ್ಡಾಯವಾಗಿತ್ತು. ಬಹುಸಂಖ್ಯಾತರಾಗಿದ್ದ ತೆಲುಗು, ಕನ್ನಡ, ಮರಾಠಿ ಭಾಷಿಗರು ಕಡೆಗಣಿಸಲ್ಪಟ್ಟಿದ್ದರು. ಸನಾತನ ಧರ್ಮ, ಸಂಸ್ಕತಿ, ಕಲೆ, ಸಾಹಿತ್ಯ ಸಂಪೂರ್ಣವಾಗಿ ನಿರ್ಲಕ್ಷಿಸಲ್ಪಟ್ಟಿದ್ದವು. ಬಲವಂತದ ಮತಾಂತರ, ಸ್ತ್ರೀಯರ ಮೇಲೆ ಅತ್ಯಾಚಾರ, ದೇವಸ್ಥಾನಗಳನ್ನು ನೆಲಸಮ ಮಾಡುವುದು ಹೀಗೆ ಅತ್ಯಂತ ಕ್ರೂರ ಹಾಗೂ ಹೇಯ ಪರಿಸ್ಥಿತಿ ಹೈದರಾಬಾದ್ ರಾಜ್ಯದಲ್ಲಿತ್ತು.

ಮಹಮ್ಮದ್ ನವಾಜ್ ಖಾನ್ ಎಂಬುವನು 1926 ರಲ್ಲಿ ಮಜಲಿಸೆ ಇತ್ತೆಹಾದುಲ್ ಮುಸಲ್ಮೀನ್ ಎಂಬ ಸಂಸ್ಥೆ ಪ್ರಾರಂಭಿಸಿದನು. ಹೈದರಾಬಾದ್ ರಾಜ್ಯದಲ್ಲಿರುವ ಎಲ್ಲ ಮುಸಲ್ಮಾನರನ್ನು ಒಂದು ಗೂಡಿಸಿ, ಸಂಘಟಿಸಿ, ಹಿಂದೂಗಳನ್ನು ಸದೆಬಡೆಯುವದಕ್ಕಾಗಿ ಹುಟ್ಟಿದ ಸಂಸ್ಥೆಯೇ ಇದು. ಈ ಸಂಘಟನೆಯು ನಡೆಸುತ್ತಿದ್ದ ಹಿಂದುಗಳ ಕೊಲೆ, ಅತ್ಯಾಚಾರ, ಬಲವಂತದ ಮತಾಂತರದಂತಹ ಅಸಹನೀಯ ಚಟುವಟಿಕೆಗಳಿಗೆ ನಿಜಾಮನ ಬೆಂಬಲವಿತ್ತು.

ಕಾಸೀಂ ರಜ್ವಿಯ ಮತಾಂಧತೆ:

ಕಾಸೀಂ ರಜ್ವಿ ಮೂಲತಃ ಲಾತೂರಿನವನು ವೃತ್ತಿಯಲ್ಲಿ ವಕೀಲ. ನಿಜಾಮನ ಸ್ನೇಹ ಸಂಪಾದಿಸಿ ಅವನಿಗೆ ಹತ್ತಿರವಾಗಿ ಇತ್ತೆಹಾದ್ ಮುಸಲ್ಮೀನ್ ಸಂಸ್ಥೆಯನ್ನು ತನ್ನ ವಶಕ್ಕೆ ತೆಗೆದುಕೊಂಡನು. ಕಾಸಿಂ ರಜ್ವಯು ತನ್ನ ಮತಾಂಧತೆಯ ಅಮಲಿನಲ್ಲಿ ಉದ್ವೇಗಪೂರಿತ ಪ್ರಚೋದನಕಾರಿ ಭಾಷಣಗಳನ್ನು ಮಾಡುತ್ತಿದ್ದ. “ಹಿಂದುಗಳು ಅನಾಗರಿಕರು, ಅವರು ಕಲ್ಲು ಮಂಗಗಳನ್ನು ಪೂಜಿಸುತ್ತಾರೆ, ಅವರನ್ನು ನಾಶ ಮಾಡುವುದೇ ನಮ್ಮ ಗುರಿ” ಇದು ಅವನ ಭಾಷಣಗಳ ಸಾರವಾಗಿರುತಿತ್ತು. “ಕಾಫಿರರಾದ ಹಿಂದೂಗಳನ್ನು ಗುಲಾಮರನ್ನಾಗಿ ಮಾಡುವುದು ಮುಸಲ್ಮಾನರ ದೈವೀ ಹಕ್ಕು ಇದೆ. ಹಿಂದೂ ಅನಾಗರಿಕ; ಆದ್ದರಿಂದಲೇ ಆತ ಕಲ್ಲುಗಳನ್ನು ಹಾಗೂ ಮಂಗಗಳನ್ನು ಪೂಜಿಸುತ್ತಾನೆ. ಓರ್ವ ವ್ಯಕ್ತಿ ಮುಸಲ್ಮಾನನಾಗಿ ಬಾಳಬೇಕಾದರೆ ಅಪಾಯವನ್ನು ಬರಮಾಡಿಕೊಳ್ಳಲೇಬೇಕು. ಪ್ರಾಪಂಚಿಕ ಆಸೆ-ಆಕಾಂಕ್ಷೆಗಳನ್ನು ತುಚ್ಛೀಕರಿಸಿದ ಮುಸಲ್ಮಾನ ಇಡೀ ಜಗತ್ತೇ ವೈರಿಯಾದರೂ ಅದನ್ನು ಸಮರ್ಥವಾಗಿ ಎದುರಿಸಬಲ್ಲ”- ಇದು ಕಾಸಿಂ ರಜ್ವಿಯ ವಾಗ್ದಾಳಿಯ ನಮೂನೆಯಾಗಿತ್ತು, ಇಡೀ ದೇಶವೇ ನಿಜಾಮನ ರಾಜ್ಯದ ಅಡಿಯಲ್ಲಿ ಬರಬೇಕು, ದೆಹಲಿಯಲ್ಲಿ ನಿಜಾಮನ ರಾಜ್ಯದ ಧ್ವಜ ಹಾರಾಡಬೇಕೆಂಬುದು ಅವನ ಬಯಕೆಯಾಗಿತ್ತು.

ರಜಾಕರ ಹಾವಳಿಯ ತೀವ್ರತೆ:

ಕಾಸಿಂ ರಜ್ವಿ “ರಜಾಕರ” ಎಂಬ ಮತಾಂಧ ಸೈನಿಕರ ಪಡೆಯನ್ನು ಕಟ್ಟಿದನು. ಇವರು ಮುಸ್ಲಿಂ ರಾಜ್ಯ ಸ್ಥಾಪನೆಗಾಗಿ ಹೋರಾಟ ಮಾಡುವ ಸೈನಿಕರು ಎಂದು ಬಿಂಬಿತರಾಗಿದ್ದರು. ರಜಾಕರು ಹಿಂದೂಗಳ ಮೇಲೆ ದಾಳಿ ಪ್ರಾರಂಭಿಸಿದರು. ಹಳ್ಳಿಗಳನ್ನು ನಾಶಪಡಿಸಿ ಸುಟ್ಟರು, ಹಿಂದೂಗಳ ಕೊಲೆ, ಸುಲಿಗೆ, ಮಾನಹಾನಿ, ದೇವಾಲಯಗಳನ್ನು ನೆಲಸಮ ಮಾಡಿದರು, ಬಲವಂತವಾಗಿ ಮತಾಂತರಗೊಳಿಸಿದರು. ಈ ನೀಚ ಕೃತ್ಯಗಳು ಅವ್ಯಾಹತವಾಗಿ ಸಾಗಿದವು. ಭಾರತಕ್ಕೆ ಸೇರಿದ ಗಡಿಪ್ರದೇಶದ ಅನೇಕ ಗ್ರಾಮಗಳಲ್ಲಿ ರಜಾಕರು ಕಳ್ಳತನದಿಂದ ಪ್ರವೇಶಿಸಿ ಅಲ್ಲಿ ಗೂಢಾಚಾರ ಜಾಲವನ್ನು ನಿರ್ಮಿಸಿಕೊಂಡಿದ್ದರು. ಬೇರೆ ಪ್ರಾಂತಗಳಲ್ಲಿದ್ದ ಮುಸ್ಲಿಂ ಯುವಕರನ್ನು ತಮ್ಮ ಪಡೆಯಲ್ಲಿ ಸೇರಿಸಿಕೊಳ್ಳುವ ಮತ್ತು ಶಸ್ತ್ರಾಸ್ತ್ರಗಳ ಕಳ್ಳ ಸಾಗಾಣಿಕೆಯಲ್ಲಿ ತೊಡಗಿಸುವ ವ್ಯವಸ್ಥಿತ ಸಂಘಟನೆಗಳನ್ನು ರಜಾಕರರು ಅಲ್ಲಿ ಸ್ಥಾಪಿಸಿಕೊಂಡಿದ್ದರು.

ರಜಾಕರ ದಾಳಿಯ ಒಂದು ಬರ್ಬರ ನಿದರ್ಶನವೆಂದರೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗೋರ್ಟಾ(ಬಿ) ಗ್ರಾಮದ ಮಾರಣಹೋಮ. ಬಸವಕಲ್ಯಾಣದಿಂದ ಸುಮಾರು 20 ಕಿ.ಮಿ ದೂರದಲ್ಲಿರುವ ಈ ಗ್ರಾಮದ ಮೇಲೆ ದಿ. 9-5-1948 ರಂದು ಒಂದು ಸಾವಿರ ಜನ ರಜಾಕರು ದಾಳಿ ಮಾಡಿದರು. ಸಿಕ್ಕ ಸಿಕ್ಕವರನ್ನು ಕೊಚ್ಚುತ್ತಾ ಸಾಗಿದರು. ಸ್ತ್ರೀ, ಪುರುಷ, ವೃದ್ಧ, ಬಾಲಕರೆನ್ನದೆ ಎಲ್ಲರನ್ನು ಮನೆಗಳಿಂದ ಎಳೆತಂದು ಗ್ರಾಮದಲ್ಲಿರುವ ಲಕ್ಷ್ಮೀ ಗುಡಿಯ ಮುಭಾಗದಲ್ಲಿ ಕೊಂದು ಹಾಕಿದರು. ಶಿರಚ್ಛೇದನ ಮಾಡಿದರು, ಸ್ತ್ರೀಯರ ಮೇಲೆ ಅತ್ಯಾಚಾರ ಮಾಡಿ, ಕತ್ತಿಯಿಂದ ತಿವಿದು ಅವರನ್ನು ಕೊಂದು ಹಾಕಿದರು. ಅಟ್ಟಹಾಸದಿಂದ ಕೂಗಾಡಿ, ರಕ್ತವನ್ನು ಲಕ್ಷ್ಮೀ ಮೂರ್ತಿಯ ಮೇಲೆ ಚೆಲ್ಲಾಡಿದರು. ಅನೇಕ ಮನೆಗಳನ್ನು ಸುಟ್ಟುಹಾಕಿದರು.  ಗ್ರಾಮದ ಗಣ್ಯರಾದ ಶ್ರೀ ಮಹಾದೇವಪ್ಪ ಡುಮಣಿ ಅವರ ಮನೆಯಲ್ಲಿ ಸುಮಾರ 800 ಜನ ಗ್ರಾಮಸ್ಥರು ರಕ್ಷಣೆ ಪಡೆದರು. ನಂತರ ಬೇರೆ ಊರುಗಳಿಗೆ ವಲಸೆ ಹೋದರು. ಈ ಘಟನೆಯ ಪ್ರತ್ಯಕ್ಷದರ್ಶಿಗಳು ಈಗಲೂ ಬದುಕಿದ್ದು ಈ ದುರಂತವೆನ್ನು ಬಲು ದುಖಃದಿಂದ ಮನಕಲುಕುವಂತೆ ಹೇಳುತ್ತಾರೆ.

ರಜಾಕರ ಈ ಅಮಾನುಷ ಕೃತ್ಯದಲ್ಲಿ ಸುಮಾರು 200 ಜನ ಕೊಲ್ಲಲ್ಪಟ್ಟರು. ಇಡೀ ಗ್ರಾಮದ ವಾತಾವರಣ ಸ್ಮಶಾನದಂತೆ ಕಾಣುತ್ತಿತ್ತು. ಎಲ್ಲೆಡೆ ಚೆಲ್ಲಿದ ರಕ್ತ, ಶವಗಳು, ಚೆಲ್ಲಾಪಿಲ್ಲಿಯಾದ ದೇಹದ ಭಾಗಗಳು. ರುಂಡ, ಕೈಬೆರಳುಗಳು, ಕರಳು ಅಬ್ಬ,…..! ಆ ಘಟನೆಯನ್ನು ನೆನಪಿಸಿಕೊಳ್ಳುವುದೇ ಬೇಡವೆಂದು ಅನೇಕ ಗ್ರಾಮಸ್ಥರು ಹೇಳುತ್ತಾರೆ. ಇತಿಹಾಸದಲ್ಲಿ ಈ ಘಟನೆ ಹೂತು ಹೋಗಿದ್ದು ಮಾತ್ರ ದುರಂತ.

ಹೋರಾಟ:

ಈ ಭಾಗದಲ್ಲಿ ರಜಾಕರ ವಿರುದ್ಧ ಹೋರಾಟವು ನಿರಂತರವಾಗಿ ಸಾಗಿತ್ತು. ಹೈದರಾಬಾದ್ ಸ್ವತಂತ್ರ್ಯ ಸಂಗ್ರಾಮದಲ್ಲಿ ಆರ್ಯ ಸಮಾಜದ ಪಾತ್ರ ಅತ್ಯಂತ ಪ್ರಮುಖವಾದದ್ದು. ನಂತರದ ಸ್ಥಾನ ಹಿಂದೂ ಮಹಾಸಭಾಕ್ಕೆ ಸೇರಿದ್ದು. ಸ್ವಾಮಿ ರಮಾನಂದ ತೀರ್ಥರು ಈ ಹೋರಾಟದ ಮುಂಚೂಣಿಯಲ್ಲಿದ್ದರು. ಪಂಡಿತ ವಂದೇ ಮಾತರಂ ರಾಮಚಂದ್ರ ರಾವ್, ಪಂಡಿತ ನರೇಂದ್ರಜಿ, ಪಂಡಿತ ವಿನಾಯಕರಾವ್‍ಜೀ ವಿದ್ಯಾಲಂಕಾರ, ಶ್ರೀ ನಾರಾಯಣಸ್ವಾಮಿ ವಾನಪ್ರಸಸ್ಥಿ, ಶ್ರೀ ಕೇಶವರಾವ ಕೊರಟಕರ್  ಮೊದಲಾದ ಆರ್ಯ ಸಮಾಜದ ಪ್ರಮುಖರು ಹೈದ್ರಾಬಾದ್ ವಿಮೋಚನಾ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದ ನಾಯಕರು. ಶ್ರೀ ಧರ್ಮಪ್ರಕಾಶ, ಮಹಾದೇವ ಪಂಡಿತ ಶಿವಶ್ಚಂದ್ರಜಿ, ಲಕ್ಷ್ಮಣಜಿ, ನರಸಿಂಹರಾವ್‍ಜಿ, ಬಾಬೂರಾವ ಕ್ಷೀರಸಾಗರ ಇತರರು ಸಹ ಕ್ರಾಂತಿಕಾರಿ ಹೋರಾಟ ಮಾಡಿದರು. ನಾರಾಯಣ ಪವಾರ್ ಎಂಬ ಆರ್ಯ ಸಮಾಜದ ವೀರ ನಿಜಾಮನ ಮೇಲೆ ಬಾಂಬ್ ಎಸೆದ. ಹೈದರಾಬಾದ್ ಕರ್ನಾಟಕದ ಮಟ್ಟಿಗೆ ಹೇಳಬೇಕಾದರೆ ಸರ್ದಾರ್ ಶರಣಗೌಡ ಇನಾಂದಾರ್, ವಿದ್ಯಾಧರ ಗುರೂಜಿ, ಚನ್ನಬಸ್ಸಪ್ಪ ಕುಳಗೇರಿ, ಕುಸುಮಾಕರ ದೇಸಾಯಿ, ದಿಗಂಬರರಾವ್ ಕಲ್ಮಣಕರ್, ಶ್ರೀಪಾದರಾವ್ ಎಸ್. ಕುಲಕರ್ಣಿ, ಪ್ರೊ. ಭಾವುಸಾಹೇಬ್ ದೇವುಳಗಾಂವಕರ್, ಪಂಡಿತ್ ತಾರಾನಾಥ ಮೊದಲಾದವರು ಪ್ರಮುಖರು.

ಆರ್ಯಸಮಾಜದ ಹೋರಾಟಗಾರು ನಿರ್ಭೀತರಾಗಿದ್ದು ರಜಾಕರ ವಿರುದ್ಧ ನಿರಂತರ ಹೋರಾಟ ನಡೆಸಿದರು. ದೇಶಪ್ರೇಮದ ಭಾಷಣಗಳನ್ನು ಮಾಡುತ್ತಿದ್ದರು. ಅನೇಕರು ಪ್ರವಾಸ ಮಾಡಿ ಜನರನ್ನು ಜಾಗೃತಗೊಳಿಸುವ ಪ್ರಯತ್ನವನ್ನು ಮಾಡುತ್ತಿದ್ದರು. ಅನೇಕ ಕ್ಯಾಂಪ್‍ಗಳನ್ನು ಸ್ಥಾಪಿಸಿ ಹೋರಾಟ ನಡೆಸುತ್ತಿದ್ದರು. ಗುಪ್ತಚರದಳದ ಸಹಾಯದಿಂದ ಸಂದೇಶಗಳನ್ನು ರವಾನಿಸುತ್ತಿದ್ದರು. ರಜಾಕರ ಕಣ್ಣುತಪ್ಪಿಸಿ ರಾಷ್ಟ್ರೀಯ ಶಾಲೆಗಳನ್ನು ನಡೆಸುತ್ತಿದ್ದರು. ರಾಷ್ಟ್ರಪ್ರೇಮದ ಕುರಿತ ಲೇಖನಗಳನ್ನು ಬರೆಯುತ್ತಿದ್ದರು. ಹೀಗೆ ನಿಜಾಮನ, ರಜಾಕರ ವಿರುದ್ಧ ಹೋರಾಟ ಸಾಗಿತ್ತು.

ಮುಂಚೂಣಿ ನಾಯಕರ ಹೋರಾಟದ ಜೊತೆ ಸಂಘಟನೆ, ದೂರದೃಷ್ಟಿ ಮತ್ತು ಚತುರ ಯೋಜನೆಗಳು ನಮ್ಮ ಸಂಘಟಿತ ಶಕ್ತಿಯನ್ನು ಸರ್ದಾರ್ ಪಟೇಲರಿಗೆ ತಲುಪಿಸುವಲ್ಲಿ ಯಶಸ್ವಿಯಾದವು. ನಾವು ನೆನಪಿಡಲೇಬೇಕಾದ, ಅಭಿನಂದನೀಯ ವೀರರೆಂದರೆ ಕುಟುಂಬದ ನಾರಿಯರು! ಮನೆಯಿಂದ ಮನೆಗೆ, ಹಳ್ಳಿಯಿಂದ ಹಳ್ಳಿಗೆ ವಿಶಿಷ್ಟ ರೀತಿಯ ಗೌಪ್ಯ ಸಂಕೇತದ ರೂಪದಲ್ಲಿ ಸಮ್ಮತಿಯ ಕುರುಹಗಳಂತೆ ಚಪಾತಿಗಳ ಮತ್ತು ಕಮಲದ ಹೂವುಗಳ ವರ್ಗಾವಣೆ ಮತ್ತು ರವಾನೆ ಮರೆಯುವಂತಿಲ್ಲ. ಹೀಗಾಗಿ ಹೈದ್ರಾಬಾದ್ ವಿಮೋಚನೆಯ ಕೀರ್ತಿ ಪುರುಷರಷ್ಟೇ ನಮ್ಮ ಭಾಗದ ಗೃಹಿಣಿಯರಿಗೂ ಸಲ್ಲುತ್ತದೆ.

ಬೀದರ್ ಜಿಲ್ಲೆಯ ಶರಣರು ಹಾಗೂ ರಾಯಚೂರು ಜಿಲ್ಲೆಯ ಹರಿದಾಸರು ವಿಶೇಷವಾಗಿ ನಿಜಾಮನ ಕೊನೆಯ ಅವಧಿಯಲ್ಲಿ ತಮ್ಮ ತಮ್ಮ ಪೂಜಾಕೇಂದ್ರಗಲಲ್ಲಿ ನಡೆಯುತ್ತಿದ್ದ ಅನೈತಿಕ ಚಟುವಟಿಕೆಗಳನ್ನು ತಡೆಯುವಲ್ಲಿ ಭಜನೆ ಮತ್ತು ಹರಿಕಥೆಗಳನ್ನು ಸಂಯೋಜಿಸಿದರು. ಈ ಮೂಲಕ ಧರ್ಮ ಜಾಗೃತಿಯ ಮುಖಾಂತರ ಹೈದ್ರಾಬಾದ್ ಕರ್ನಾಟಕ ವಿಮೋಚನೆಗೆ ಸಾಂಸ್ಕತಿಕ ಬೆಂಬಲ ನೀಡಿದರು.

ವಿಲೀನಿಕರಣ:

ನಮ್ಮ ಭಾಗದ ನಾಯಕರ ಹೋರಾಟದ ಜೊತೆಗೆ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲರ ದೂರದೃಷ್ಟಿ ಹಾಗೂ ದಿಟ್ಟ ಹೆಜ್ಜೆಯಿಂದ ಸೆಪ್ಟೆಂಬರ್ 13, 1948 ರಂದು ಭಾರತೀಯ ಸೇನೆಯು ಹೈದರಾಬಾದಿನ ಮೇಲೆ ದಾಳಿ ಮಾಡಿತು. ಭಾರತದ ಸೈನ್ಯ ಹೈದರಾಬಾದನ್ನು ಪ್ರವೇಶಿಸಿದ ಕೂಡಲೇ ರಜಾಕಾರರು ದಿಕ್ಕು ಪಾಲಾಗಿ ಓಡಿಹೋದರು. ಭಾರತದ ಸೈನ್ಯ ನಿಜಾಮನ ಎಲ್ಲ ಸೈನ್ಯಾಧಿಕಾರಿಗಳನ್ನು ಬಂಧಿಸಿತು. ಒಟ್ಟು 108 ಗಂಟೆಗಳಲ್ಲಿ “Operation Polo”   ಎಂಬ ಸೈನಿಕ ಕಾರ್ಯಾಚರಣೆಯು ಮುಗಿದು ಹೋಗಿತ್ತು. ಕೊನೆಗೂ ಮತಾಂಧ ನಿಜಾಮನ ಹೈದರಾಬಾದ್ ಸಂಸ್ಥಾನ 17, ಸೆಪ್ಟೆಂಬರ್ 1948ರಂದು ಭಾರತದ ಒಕ್ಕೂಟದಲ್ಲಿ ವಿಲೀನವಾಯಿತು. ನಿಜಾಮನು ಕೇಂದ್ರ ಒಕ್ಕೂಟಕ್ಕೆ ಸೇರುವುದಾಗಿ ಸೆಪ್ಟೆಂಬರ್ 17ರಂದು ಆಕಾಶವಾಣಿಯಲ್ಲಿ ಘೋಷಿಸಿದ. ಭಾರತ ಸರಕಾರದ ಅಧಿಕೃತ ಅಧಿಕಾರಿಯಾಗಿ ನಿಯುಕ್ತಗೊಂಡು ಈ ವಿಲೀನ ಕಾರ್ಯದಲ್ಲಿ ಶ್ರಮಿಸಿದ ಡಾ. ಕೆ.ಎಮ್. ಮುನ್ಷಿಯವರ ಪಾತ್ರವೂ ಹಿರಿದು. 225 ವರ್ಷಗಳ ಕಾಲ ಅಂಧಕೂಪದಲ್ಲಿದ್ದ ಹೈದರಾಬಾದಿನ ಜನ ಅಂದು ಹೊಸ ಬೆಳಕಿನ ಹೊಸ ಪರ್ವದಲ್ಲಿ ಪ್ರವೇಶ ಮಾಡಿದುದು ಇತಿಹಾಸದ ಒಂದು ಮಹತ್ವಪೂರ್ಣ ಘಟನೆ.

ಹೈದರಾಬಾದ್ ವಿಮೋಚನೆಯ ಈ ರೋಚಕ ಇತಿಹಾಸವನ್ನು ಪರಿಚಯಿಸಿದ ಕೀರ್ತಿ ಡಾ. ಕೆ. ಎಮ್ ಮುನ್ಷಿಯವರಿಗೆ ಸಲ್ಲುತ್ತದೆ. ಅವರ “The end of an Era” ಪುಸ್ತಕ ಈ ಹೋರಾಟದ ಸಮಗ್ರ ಮಾಹಿತಿ ನೀಡುತ್ತದೆ. ಗುಲಬರ್ಗಾದ ಸ್ವರ್ಗೀಯ ದಿ. ಗೋಪಾಲರಾವ್ ಹೇಜೀಬ್ ಅವರ “ಹೈದರಾಬಾದ್ ಮುಕ್ತಿ ಸಂಘರ್ಷ”  ಕನ್ನಡದ ಅಧಿಕೃತ ಕೃತಿ.

ತಿಳಿದಿರಲಿ:

ಹೈದ್ರಾಬಾದ್ ರಾಜ್ಯದ ಮುಕ್ತಿಯ ಸಂಘರ್ಷ ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲಿ ಒಂದು ಮೈಲುಗಲ್ಲು. ಸುಮಾರು 13 ತಿಂಗಳು ಕಾಲ ಜರುಗಿದ ಸಂಧಾನ, ಮಾತುಕತೆ ವಿಫಲವಾದಾಗ ಕೊನೆಗೆ ಸೈನ್ಯದ ಸಹಾಯದಿಂದ ದಾಳಿ ಮಾಡಿ ನಿಜಾಮ್‍ನನ್ನು ಮಣಿಸಿ ಹೈದ್ರಾಬಾದ್ ಸಂಸ್ಥಾನವನ್ನು ಭಾರತದ ಸಂಯುಕ್ತ ಗಣರಾಜ್ಯದಲ್ಲಿ ಸೇರಿಸಲಾಯಿತು. ಈ ಪ್ರಕ್ರಿಯೆಯಲ್ಲಿ ಪ್ರಾಣ ತೆತ್ತವರು ಅದೆಷ್ಟೋ! ರಾಷ್ಟ್ರಮಟ್ಟದಲ್ಲಿ ಸರ್ದಾರ್ ಪಟೇಲ್ ಹಾಗೂ ಡಾ. ಕೆ.ಎಂ. ಮುನ್ಷಿಯವರ ಪಾತ್ರ ಹಿರಿದು. ಮೂರೂ ರಾಜ್ಯಗಳಿಗೆ ಸಂಬಂಧಿಸಿದ ಅನೇಕ ಸಂಘಟನೆಗಳು, ಹೋರಾಟಗಾರರ ಸಂಘಟಿತ ಪ್ರಯತ್ನವೂ ಇದೆ.

ಭಾರತಕ್ಕೆ ಸ್ವಾತಂತ್ರ್ಯ ಸುಮ್ಮನೇ ಕಟ್ಟೆಯ ಮೇಲೆ ಕೂತು ಹರಟೆ ಹೊಡೆಯುವುದರಿಂದ ಬಂದಿಲ್ಲ!!! ಈ ದೇಶದ ಲಕ್ಷ ಲಕ್ಷ ಜನ ಪ್ರಾಣತ್ಯಾಗ ಮಾಡಿ ಈ ಭೂಮಿಯನ್ನು ಪರಕೀಯರಿಂದ ರಕ್ಷಿಸಿದ್ದಾರೆ. ಈ ಸಂಗತಿಗಳು ಅಪ್ರಸ್ತುತವೂ ಅಲ್ಲ ಕೆಲಸಕ್ಕೆ ಬಾರದವುಗಳೂ ಅಲ್ಲ. ಇದು ಸದಾ ಅವಿಚ್ಛಿನ್ನವಾಗಿ ಹರಿದು ಬರುತ್ತಿರುವ ನಮ್ಮ ಕ್ಷಾತ್ರತೇಜಸ್ಸಿನ ರೋಚಕ ಕಥೆ. ಈ ಐತಿಹಾಸಿಕ ವಾಸ್ತವತೆಯ ವಾರಸುದಾರರಾದ ನಾವು ಇದನ್ನು ತಿಳಿದು ನಮ್ಮ ಮುಂದಿನ ಪೀಳಿಗೆಗೆ ರವಾನಿಸಲೇಬೇಕಾದುದು ನಮ್ಮ ಅತ್ಯಂತ ಮಹತ್ವಪೂರ್ಣ ಜವಾಬ್ದಾರಿ. ಕೋಮು ಸೌಹಾರ್ದತೆ, ಧರ್ಮ ಸಹಿಷ್ಣುತೆ ಎಂಬ ಹುಚ್ಚು ಆವೇಶದಲ್ಲಿ ಸತ್ಯ ಸಂಗತಿಗಳನ್ನು ಹೂತು ಹಾಕಿ ಅದರ ಮೇಲೆ ಕಲ್ಲು ಚಪ್ಪಡಿಗಳನ್ನು ಹಾಸುವುದು ಅತ್ಯಂತ ದ್ರೋಹದ ಕೆಲಸ.

ಸಂಜೀವ ಸಿರನೂರಕರ್

ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ

ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ

ಸೇಡಮ್: ಜಿಲ್ಲೆ: ಕಲಬುರಗಿ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!