ಅಂಕಣ

ಹೀಗೊಂದು ದಿನ..

ಛೆ! ಎದ್ದಿದ್ದೇ ತಡವಾಯ್ತು. ಇನ್ನೇನು ೩೦ ನಿಮಿಷಗಳಲ್ಲಿ ತಯಾರಾಗಬೇಕು, ಇಲ್ಲವೆಂದರೆ ಕಛೇರಿಯ ಬಸ್ಸು ತಪ್ಪಿ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ, ಮೊನ್ನೆ ಹೀಗೇ ಆಗಿತ್ತು, ಅದೂ ಇದೂ ಅಂತ ಮನಸ್ಸಿನಲ್ಲೇ ಅಂದುಕೊಳ್ಳುತ್ತಾ ಏಳುವಷ್ಟರಲ್ಲಿ ಸಾಕಾಗಿ ಹೋಗಿತ್ತು. ಹೆಂಗೋ ಗಡಿಬಿಡಿಯಲ್ಲಿ ನಿತ್ಯಕರ್ಮ, ಮಜ್ಜನಾದಿಗಳನ್ನು ಮುಗಿಸಿ ಬೀದಿಗೆ ಬಿದ್ದಾಗ ಬಸ್ಸು ಬರಲು ಇನ್ನೂ ಹತ್ತು ನಿಮಿಷಗಳಿವೆ ಎಂದು ಕೈಗಡಿಯಾರ ತೋರಿಸುತ್ತಿತ್ತು, ಮನಸ್ಸಿಗೂ ನಿರಾಳವೆನಿಸಿತು. ಹಾಗೆಯೇ ಅದನ್ನು ಅಲೆದಾಡಲು ಬಿಟ್ಟು ದಿನವೂ ಬಸ್ಸಿಗೆ ಕಾಯುತ್ತಿದ್ದ ಜಾಗಕ್ಕೆ ಬಂದು ನಿಂತಾಗ ಆಶ್ಚರ್ಯವೊಂದು ನನಗಾಗಿ ಕಾದಿತ್ತು. ರಸ್ತೆಯ ಎಡಬದಿಗೆ ಇದ್ದ ಪಾದಚಾರಿ ಮಾರ್ಗವನ್ನು ಸ್ವಲ್ಪ ಹಿಂದೆ ಸರಿಸಿ, ಸುಗಮ ಸಂಚಾರಕ್ಕೆ ಯಾವುದೇ ಧಕ್ಕೆಯಾಗದಂತೆ ನಗರ ಸಾರಿಗೆ ನಿಲ್ದಾಣವನ್ನು ಸ್ವಲ್ಪ ಹಿಂದಕ್ಕೆ ಕಳುಹಿಸಿದ್ದರು. ಅಲ್ಲಿಯೇ ಡಿಜಿಟಲ್ ಪಲಕವೊಂದರಲ್ಲಿ ಮುಂದೆ ಬರಲಿರುವ ಬಸ್ಸಿನ ಸಮಯ ಕೆಂಪನೆಯ LED ಅಕ್ಷರಗಳಲ್ಲಿ ತೋರಿಸುತ್ತಿದ್ದರಿಂದ ಜನರೂ ಸಮಾಧಾನದಿಂದ ತಾವು ಹಿಡಿಯಬೇಕಾದ ಬಸ್ಸಿಗೆ ಎದುರು ನೋಡುತ್ತಾ ತಂಗುದಾಣದ ಒಳಗೇ ಆರಾಮವಾಗಿ ನಿಂತಿದ್ದರು. ನನ್ನ ಸಂತಸ ಇಮ್ಮಡಿಯಾಗುವಂತೆ ಮಾಡಿದ ಮತ್ತೊಂದು ವಿಷ್ಯ ಏನೂ ಅಂದ್ರೆ, ಸಾರ್ವಜನಿಕ ಸಾರಿಗೆ ಹಾಗೂ ಖಾಸಗೀ ಸಾರಿಗೆ (ನಮ್ಮ ಕಚೇರಿಯ ವಾಹನ/ಕ್ಯಾಬುಗಳು) ವಾಹನಗಳ ಕಿರು ನಿಲ್ದಾಣಕ್ಕೆ ಸಾಕಷ್ಟು ಅಂತರ ಕಲ್ಪಿಸಿದ್ದರಿಂದ ಒಬ್ಬರ ಮೇಲೊಬ್ಬರು ಜಿದ್ದಿಗೆ ಬಿದ್ದು ಬಸ್ಸು ಹಿಡಿಯುವುದರಿಂದ ಮುಕ್ತಿ ಸಿಕ್ಕಿತ್ತು. ಎಂದಿನಂತೆ ಸಮಯಕ್ಕೆ ಸರಿಯಾಗಿ ಬಂದ ನನ್ನ ಸಂಸ್ಥೆಯ ವಾಹನವನ್ನೇರಿ ಹೊರಟಾಗ ಮೊದಲಿಗೆ ದೊರಕಿದ್ದು ಯಾವಾಗಲೂ ಅವ್ಯವಸ್ಥೆಯ ಆಗರವಾಗಿರುತ್ತಿದ್ದ ಸಂಚಾರಿ ಸಂಕೇತ (traffic signal) ಸಹಿತ ವೃತ್ತ. ಆದರೆ ಇವತ್ತು ಎಂದಿನಂತೆ ಇರದೇ ಬೇರೆಯದೇ ಲೋಕಕ್ಕೆ ಬಂದ ಹಾಗಿತ್ತು. ಡಾಳಾಗಿ ಕಾಣುತ್ತಿದ್ದ ಹಳದಿ ಬಿಳಿ ಉದ್ದ ಪಟ್ಟಿಗಳ ಪಾದಾಚಾರಿ ರಸ್ತೆ ದಾಟುವಿನ ಹಿಂದೆ ಇದ್ದ ಬಿಳಿಯದೊಂದು ಅಡ್ಡಪಟ್ಟಿಯ ಹಿಂದೆಯೇ ತಮ್ಮ ತಮ್ಮ ವಾಹನಗಳನ್ನು ನಿಲ್ಲಿಸಿಕೊಂಡು ತಾಳ್ಮೆಯಿಂದ ತಮ್ಮ ಸರದಿಗಾಗಿ ಕಾಣುತ್ತಿದ್ದ ವಾಹನಗಳ ಸಾಲು, ಅಡ್ಡಾದಿಡ್ಡಿಯಾಗಿ ರಸ್ತೆ ದಾಟದೇ ನಿಗದಿತ ಜಾಗದಲ್ಲೇ ರಸ್ತೆ ದಾಟುತ್ತಿದ್ದ ಪಾದಾಚಾರಿಗಳು, ಹಾರನ್ ಬಜಾಯಿಸದೇ ಇದ್ದ ಬಸ್ಸು-ಟ್ರಕ್ಕುಗಳನ್ನೂ ನೋಡಿ ಖುಷಿಯಾಯ್ತು. ಹಸಿರು ಸಂಕೇತ ದೊರೆಯುತ್ತಿದ್ದಂತೆಯೇ ಮುಂದೆ ಸಾಗಿದ ನಮ್ಮ ಬಸ್ಸಿಗೆ ವೃತ್ತ ದಾಟಿದ ನಂತರ ಯಾರೂ ಅಡ್ಡಾದಿಡ್ಡಿಯಾಗಿ ಆಟೋಗಳನ್ನೂ, ದ್ವಿಚಕ್ರ ವಾಹನಗಳನ್ನೂ ನಿಲ್ಲಿಸಿಕೊಳ್ಳದೇ ಇದ್ದಿದ್ದರಿಂದ ಅಲ್ಲಿಯೇ ಹೆಚ್ಚು ಸಮಯ ವ್ಯಯಮಾಡದೇ ಗಮ್ಯದೆಡೆಗೆ ನಮ್ಮ ವಾಹನ ಸಾಗಿ ಹಲವಾರು ಪಥಗಳಿದ್ದ ಮುಖ್ಯರಸ್ತೆಗೆ ಬಂದು ಸೇರಿದಾಗ ಸಮಯ ಎಂಟೂ ಮುಕ್ಕಾಲಾಗಿತ್ತು. ಇಲ್ಲಿಯೂ ಜನರು ಹಾಗೂ ವಾಹನಗಳು ಅತೀ ಶಿಸ್ತಿನಿಂದ ಚಲಿಸುತ್ತಿದ್ದುದನ್ನು ನೋಡಿದೆ. ಮಂದಗತಿಯ ವಾಹನಗಳು ಎಡಬದಿಗೆ ಇದ್ದ ಪಥಗಳಲ್ಲಿಯೇ ಚಲಿಸುತ್ತಿದ್ದುದನ್ನು ನೋಡಿ ರಸ್ತೆಯ ಹಲವಾರು ಕಡೆ ಹಾಕಿದ್ದ ಕತ್ತಲಲ್ಲೂ ಹೊಳೆಯುವ ದಪ್ಪಕ್ಷರದ ಸೂಚನಾ ಪಲಕಕ್ಕೆ ಇವತ್ತಾದರೂ ಜನ ಬೆಲೆ ಕೊಡುತ್ತಿದ್ದಾರಲ್ಲ ಎಂದೆನಿಸಿತು. ರಸ್ತೆಯ ಎರಡೂ ಬದಿಗೆ ಇದ್ದ ತಗ್ಗು-ದಿಣ್ಣೆಗಳು ಇಲ್ಲದ, ದಿವ್ಯಾಂಗರೂ ಸಲೀಸಾಗಿ ಬಳಸಬಹುದಾಗಿದ್ದ ಪಾದಾಚಾರಿ ಮಾರ್ಗಗಳನ್ನು ನೋಡಿದ ಮೇಲೆಯಂತೂ ಸ್ವರ್ಗಕ್ಕೆ ಇನ್ನು ಮೂರೇ ಗೇಣು ಅನಿಸಿದ್ದು ಮಾತ್ರ ನಿಜ. ಕಛೇರಿಗೆ ದೀರ್ಘ ರಜೆಯಿತ್ತಾದ್ದರಿಂದ ಒಂದು ಐದಾರು ದಿನಗಳಿಂದ ನಮ್ಮ ಸಂಸ್ಥೆಯ ವಸತಿ ಸಮುಚ್ಚಯ ಪರಿಸರವನ್ನು ಬಿಟ್ಟು ಹೊರಗೇ ಬರದಿದ್ದ ನಂಗೆ ಇಷ್ಟೆಲ್ಲಾ ಬದಲಾಗಿರುವುದು ಕಂಡು ನಮ್ಮ ಜನರ ಬಗ್ಗೆ, ನಮ್ಮ ಸರಕಾರದ ಬಗೆ ಹೆಮ್ಮೆಯೆನಿಸಿತು. ಮಾನವನಿಗೆ ಅಸಾಧ್ಯವೆಂಬುದು ಏನೂ ಇಲ್ಲ ಎಂಬ ದಾರ್ಶನಿಕರ ಮಾತೂ ನೆನಪಾಯಿತು. ಇದೆಲ್ಲವನ್ನೂ ಯೋಚಿಸುತ್ತಾ ಮನಸ್ಸಿಗೆ ಹಾಯೆನಿಸಿ ಕಣ್ಣು ಹಿಡಿದಿದ್ದೇ ಗೊತ್ತಾಗಲಿಲ್ಲ! ಯಾರೋ ಅಲುಗಾಡಿಸುತ್ತಿದ್ದಾರಲ್ಲಾ!? ಕಛೇರಿ ತಲುಪಿರಬೇಕು ಎಂದೆನಿಸಿ ಕಣ್ಣು ತೆರೆದರೆ ನನ್ನ ತಾಯಿ! ಅಯ್ಯೋ ಅವರು ಯಾಕೆ ಇಲ್ಲಿ ಬಂದರು ಎಂದು ಯೋಚಿಸುತ್ತಿದ್ದಂತೆಯೇ ನಾನು ಹಾಸಿಗೆಯಲ್ಲೇ ಇರುವುದು ಅರಿವಿಗೆ ಬಂತು. ಹಳದಿ-ಬಿಳಿ ಪಟ್ಟಿ,ಪಾದಾಚಾರಿ ಮಾರ್ಗ, ಪಥ-ಶಿಸ್ತು ಅಂತ ಏನೇನೋ ಬಡಬಡಾಯಿಸಲು ಶುರು ಮಾಡಿದ ನಂಗೆ  “ಅಪ್ಪಾ ತಂದೇ ನೀನು ಹಿಂಗೇ ಕನಸು ಕಾಣುತ್ತಾ ಇದ್ದರೆ ಇವತ್ತೂ ಬಸ್ಸು ತಪ್ಪಿಸಿಕೊಳ್ಳುವುದು ಖಂಡಿತ” ಅಂತ ನನ್ನಮ್ಮ ಉಗಿದ ಮೇಲೆಯೇ ಗೊತ್ತಾಗಿದ್ದು ನಾನು ಇಷ್ಟು ಹೊತ್ತು ನೋಡಿದ್ದೆಲ್ಲ ಕನಸು ಅಂತ. ಛೆ ಅಂತ ಭಾರವಾದ ನಿಟ್ಟುಸಿರು ಬಿಟ್ಟು ಹಾಸಿಗೆಯಿಂದ ಎದ್ದೆ. ಪಕ್ಕದಲ್ಲೇ ಇದ್ದ ಪುಸ್ತಕದ ಮುಖಪುಟವಾಗಿದ್ದ ಒಬ್ಬರ ಚಿತ್ರ ನೋಡಿ, ಇದೆಲ್ಲ ಯಾಕಾಗಬಾರದು ಎಂದೆನಿಸಿ ಭರವಸೆ ತಂದುಕೊಳ್ಳುತ್ತಾ ನಿತ್ಯಕರ್ಮಗಳನ್ನು ಮುಗಿಸುವತ್ತ ಗಮನಹರಿಸಿದೆ.                         

-ನಾಗರಾಜ್ ಕೋಡಿಹಳ್ಳಿ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!