ಅಂಕಣ

ಹಾಹಾಕಾರದ ನೀರೇ ಬೇಕೆ… ?? ಸಬಲರಾಗಬಾರದೇಕೆ..??

ಇದೊಂದು ಸಾಮಾನ್ಯ ವಿಷಯಗಳ ಪಂಕ್ತಿಯಲ್ಲಿ ನಿಂತು ಯೋಚಿಸಲಸಾಧ್ಯವಾದ ವಿಷಯೋಕ್ತಿ ಅಲ್ಲ ಎಂದು ವಾದ. ಆದರೆ ಯಾಕಾಗಬಾರದು ಎನ್ನುವುದು ವಿಚಾರಧಾರೆ. ಎರಡು ಮನಸ್ಸುಗಳು ಒಂದಾಗಿ ಯೋಚಿಸಿ ಬೆರೆತು ಸಮಾನ ಮನಸ್ಕರಾಗಿ ವಾಸಿಸಲು ಕೆಲವೊಂದು ಅಡ್ಡಿ ಆತಂಕಗಳು ಬರುವುದು ಸರ್ವೇ ಸಾಮಾನ್ಯ. ಅದೇ ರೀತಿ  ಎರಡು ರಾಜ್ಯಗಳು ಮತ್ತು ಎರಡು ಗಡಿಗಳ ಸಾಮರಸ್ಯ ಕೂಡ. ಆದರೆ ಅದನ್ನು ಕಾಪಾಡಿಕೊಳ್ಳಲು  ಬದ್ಧತೆ ಬೇಕು, ಆದರೆ ಈ ವಿಷಯ ಹಾಗಿಲ್ಲ, ಪ್ರಬುದ್ಧತೆಯ ಕೊರತೆಯನ್ನು ಅನುಭವಿಸಿದ ವಿಷಯೋಕ್ತಿಗಳ ಅನಾವರಣ ಮತ್ತು ಪರಿಹಾರಕ್ಕೆ ಒಂದು ಪ್ರಯತ್ನ. ಈಗ ಇದು ಯಾವ ವಿಷಯೋಕ್ತಿ ಅನ್ನುವುದು ನಿಮ್ಮ ಮಸ್ತಕಕ್ಕೆ ಹೆಚ್ಚು ಸಮಯ ಬೇಕಿಲ್ಲ.  ಹೌದು ಇದು ಒಂದು ವಿಚಾರ ಶತಮಾನಗಳ ಇತಿಹಾಸವಿರುವ ಅದೇ ವಿಷಯ. ಪ್ರತಿ ಭಾರಿ ಈ ವಿಷಯ ತಾರಕಕ್ಕೆ ಏರಿದಾಗ  ಬೆಂಕಿಯ ಕೆನ್ನಾಲಿಗೆಗಳು ಮುಗಿಲೆತ್ತರಕ್ಕೆ ಏರುತ್ತದೆ ಎರಡು ರಾಜ್ಯಗಳು ಬರ ಪರಿಸ್ಥಿತಿಯಲ್ಲಿ ಬಂದಾಗ ಎರಡು ರಾಜ್ಯಗಳ ಕೆಲ ಆಕ್ರೋಶಭರಿತ ಮನಸ್ಸುಗಳಲ್ಲಿಯೂ ಮಾನವೀಯತೆಗೂ ಬರ ಬಂದಿದೆಯೋ ಎಂಬಂತೆ ಭಾಸವಾಗುವುದು. ಹೌದು ರಾಜ್ಯಗಳ ವಿಷಯದಲ್ಲಿ ಅದೇ ಕಾವೇರಿ ಇನ್ನೊಂದು ಮಹದಾಯಿ

ಕರ್ನಾಟಕದ ಮಟ್ಟಿಗೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ನೆಲ ಜಲದ ವಿಷಯದಲ್ಲಿ ರಾಜಕೀಯ ಬದ್ಧತೆಯ ಕೊರತೆ ಸ್ಪಷ್ಟವಾಗಿ ಎದ್ದು ಕಾಣುತ್ತದೆ. ತಮಿಳುನಾಡು ಪ್ರಾದೇಶಿಕ ಪಕ್ಷಗಳ ಕ್ಯಾತೆಯನ್ನು ಗಮನಿಸಿದರೆ ನಮ್ಮಲ್ಲೂ ಪ್ರಾದೇಶಿಕ ಪಕ್ಷದ ಅಗತ್ಯತೆ ಅಥವಾ  ರಾಷ್ಟ್ರೀಯ ಪಕ್ಷಗಳಲ್ಲಿ ಪ್ರಾದೇಶಿಕತೆಗಳ ನಿರ್ಲಕ್ಷ್ಯದ ಸ್ಪಷ್ಟ ಅನುಭವ  ಬಿಸಿ ಬಿಸಿಯಾಗಿ ಆಗಾಗ ತಟ್ಟುತ್ತಿದೆ. ರಾಷ್ಟೀಯ ಪಕ್ಷಗಳ  ವಿಷಯಕ್ಕೆ ಬಂದರೆ ಇವರದು ಹೈಕಮಾಂಡ್ ನಿರ್ದೇಶನಕ್ಕೆ ಕಾಯುವಿಕೆ. ಸ್ಥಳಿಯ ವಿಚಾರವನ್ನು ಹೈಕಮಾಂಡ್ ಗೆ ಪ್ರಭುದ್ದವಾಗಿ ಮನವರಿಕೆ ಮಾಡುವುದರಲ್ಲಿ ಪ್ರಾದೇಶಿಕ ಸಮಸ್ಯೆಗಳಿಗೆ ದಿಟ್ಟವಾಗಿ ನಿಲುವುಗಳನ್ನು ತೆಗೆದುಕೊಳ್ಳುವುದರಲ್ಲಿ ಸಂಪೂರ್ಣ ವಿಫಲತೆ (ಅಂದರೆ ಸ್ಥಳೀಯ ಭಾಷೆಯಲ್ಲಿ ಹೇಳಬೇಕೆಂದರೆ Bucket  ಹಿಡಿಯುದು). ಹೈಕಮಾಂಡ್’ಗಳಿಗೆ ಪ್ರಾದೇಶಿಕ ಸಮಸ್ಯೆಗಳಿಗಿಂತ ಅವರ ಪಕ್ಷಗಳ ಒಳಿತು ಮುಖ್ಯವಾಗಿ ಬಿಡುತ್ತದೆ. ಇದನ್ನು ರಾಜ್ಯ ನಾಯಕರು ತನ್ನ ಕುರ್ಚಿಯ ಉಳಿಯುವಿಗಾಗಿ ಕಾಯ ವಾಚ ಮನಸಾ ಪಾಲಿಸುತ್ತಿರುವುದು ನಮ್ಮ ದುರಂತ. ಮತ್ತೊಂದೆಡೆ ನಮ್ಮಲ್ಲಿ ಯಾವುದೇ ಪ್ರಾದೇಶಿಕ ಪಕ್ಷಗಳು ಸುಸೂತ್ರವಾಗಿ ದಿಟ್ಟವಾಗಿ ರಾಜ್ಯವನ್ನು ಆಳುವ ಭರವಸೆಯು ಜನರಿಗೆ ಉಳಿದಿಲ್ಲ.

ಪ್ರಸ್ತುತ ಪರಿಸ್ಥಿತಿ ರಾಜಕೀಯವಾಗಿ ನೆಲ ಜಲದ ಬದ್ಧತೆ, ಇಚ್ಚಾಶಕ್ತಿಯ ಕೊರತೆಯು ಸ್ಪಷ್ಟವಾಗಿ ಮತ್ತೆ ಮತ್ತೆ ರಾಜಾಕೀಯ ನಾಯಕರು ತೋರ್ಪಡಿಸುತ್ತಿದ್ದಾರೆ. ಕರ್ನಾಟಕದ ಮಟ್ಟಿಗೆ ಕಳೆದ ೧೦-೧೫ ವರ್ಷದಲ್ಲಿ ಯಾವ ಸರ್ಕಾರಗಳು ಅಭಿವೃದ್ಧಿ ಮಾಡಿ ಅಸ್ತಿತ್ವಕ್ಕೆ ಬಂದಿಲ್ಲ. ಬದಲಾಗಿ ಒಂದು ಸರಕಾರ ಮಾಡಿದ ತಪ್ಪುಗಳಿಂದ ರೋಸಿ ಹೋಗಿ ಇನ್ನೊಂದು ಸರಕಾರಕ್ಕೆ ಕರ್ನಾಟಕ ಜನತೆ ಅವಕಾಶ ಕೊಡುತ್ತಾ ಬಂದಿದ್ದಾರೆ ಆದರೇ ದುರಾದೃಷ್ಟ ಅವಕಾಶ ಕೊಟ್ಟ ಇನ್ನೊಂದು ಸರಕಾರದ ಪರಿಸ್ಥಿತಿಯು ಕೂಡ ಅದೇ ರಾಗ ಅದೇ ಹಾಡು. ಕರ್ನಾಟಕ ಜನತೆಗೆ ಮಾತ್ರ ಬಿಸಿ ತುಪ್ಪ ಬಾಯಲ್ಲಿಟ್ಟ ಅನುಭವ.

ಕಾವೇರಿ ವಿಚಾರದಲ್ಲಿ ನಮ್ಮನ್ನಾಳುವ ದೊರೆಗಳು ತೋರಿದ ಬದ್ಧತೆಯ ಬಗ್ಗೆ  ಈಗಾಗಲೇ ನಾವೆಲ್ಲಾ ತಿಳಿದುಕೊಂಡಿದ್ದೇವೆ. ಅರ್ಥಾತ್ ರಾಜ್ಯದ ಜನ ನರಕ ಯಾತನೆಯನ್ನು ಅನುಭವಿಸಿದ್ದಾರೆ. ಪ್ರಕ್ಷುಬ್ಧ ಪರಿಸ್ಥಿತಿಯನ್ನು ಕೂಡ ಕೆರಳಿದ ಸಾಮಾನ್ಯ ಜನರಾದ ನಮಗೆ ನಾವೇ ತಂದು ಕೂಂಡಿದ್ದೇವೆ. ಬಂದ್’ನಿಂದಾಗಿ ಮನೆಯ ಒಳಗೆ ಕುಳಿತು ಟಿವಿ,ಸಾಮಾಜಿಕ ಜಾಲತಾಣಗಳ ವೀಕ್ಷಕರಾಗಿ  ಶತಮಾನಗಳ ಇತಿಹಾಸವನ್ನು ಈ ಸಮಯದಲ್ಲಿ ನಮಗೆ ಮತ್ತೆ ಮತ್ತೆ ನೆನಪಿಸಿದೆ , ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯನವರು ಕನ್ನಂಬಾಡಿ ಕಟ್ಟೆ ಸ್ಥಾಪನೆ ಮಾಡಿ ಕನ್ನಡಿಗರಿಗೆ ಹೆಮ್ಮೆ ತಂದು ಕೊಟ್ಟದ್ದು ಬಿಟ್ಟರೆ ನಂತರದಲ್ಲಿ ನೀರಿನ ಬಳಕೆಯ ವಿಚಾರದಲ್ಲಿ ಕನ್ನಡಿಗರು ಪದೇ ಪದೇ ಅನ್ಯಾಯಕ್ಕೆ ಒಳಾಗಾದರು.  ಮುಂದೆ ತಮಿಳುನಾಡಿನ ಪ್ರಾದೇಶಿಕ ಪಕ್ಷಗಳು ಚಾಣಾಕ್ಷತನ ಮೆರೆದು ಕೋರ್ಟ್ ಮೂಲಕವು ಅವರು ಸಾರ್ವಭೌಮತ್ವ ಹೇಗಿದೆಯೆಂದರೆ  ನಮಗೆ ಕುಡಿಯಲು ನೀರಿಲ್ಲದಿದ್ದರೂ  ಮಂಡಿ ಊರಿ ಕುಳಿತು ಅವರ ಬೆಳೆಗಳಿಗೆ ನೀರು ಕೊಡುತ್ತಿದ್ದೇವೆ.  ಇದನ್ನು ನೆಲ ಜಲದ ವಿಷಯದಲ್ಲಿ ನಮ್ಮ ರಾಜಕೀಯ ಇಚ್ಛಾಶಕ್ತಿಯ, ಬದ್ದತೆಯ ಕೊರತೆ ಎನ್ನಬೇಕೋ,..  ಕನ್ನಡಿಗರ ಸಹನೆ ಎನ್ನಬೇಕೋ… ಅಥವಾ ಕರ್ನಾಟಕದ  ದೌರ್ಭಾಗ್ಯ  ಎನ್ನಬೇಕೋ..  ಏನೇ ಆಗಲಿ ಎಲ್ಲಾ ಭಾಗ್ಯಗಳ ಜೊತೆಗೆ ದೌರ್ಭಾಗ್ಯದ ಭಾಗ್ಯವು ದಕ್ಕಿತು.

ಇಲ್ಲಿ ವಿಚಾರಧಾರೆ ಆಗಬೇಕಾದದ್ದು ಕಳೆದು ಹೋದ  ಗತ ಕಾಲಗಳ ಬಗ್ಗೆ ಅಲ್ಲ, ಮುಂದಿನ ಹಾದಿಯ ಬಗ್ಗೆ ನಾನು ಮೇಲೆ ಹೇಳಿದ ಹಾಗೆ ಎರಡು ಮನಸ್ಸುಗಳು ಒಂದಾಗಿ ಯೋಚಿಸಿ ಬೆರೆತು ಸಮಾನ ಮನಸ್ಕರಾಗಿ ವಾಸಿಸಲು ಕೆಲವೊಂದು ಅಡ್ಡಿ ಆತಂಕಗಳು ಬರುವುದು ಸರ್ವೇ ಸಾಮಾನ್ಯ. ಅದೇ ರೀತಿ ಎರಡು ರಾಜ್ಯಗಳು ಮತ್ತು ಎರಡು ಗಡಿಗಳ ಸಾಮರಸ್ಯ ಕೂಡ ಆದರೆ ಅದನ್ನು ಕಾಪಾಡಿಕೊಳ್ಳಲು  ಬದ್ದತೆ ಬೇಕು, ಇಲ್ಲಿ ರಾಜ್ಯಗಳ ಬಗ್ಗೆ ಕರ್ನಾಟಕ – ತಮಿಳುನಾಡು ಕಾವೇರಿ ವಿಚಾರ, ಕರ್ನಾಟಕ – ಗೋವಾ ಮಹದಾಯೀ ವಿಚಾರದ ಬಗ್ಗೆ ಆದರೆ,  ಗಡಿಗಳ ಬಗ್ಗೆ ಹೇಳಲು ಹೊರಟಿರುವುದು. ನಮ್ಮ ರಾಜ್ಯದ ಒಳಗೆ ಆಗ ಹೊರಟಿರುವ ಗಡಿ ಅದು,  ಭಾಷಾವಾರು ಗಡಿ , ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಕಂದಕವನ್ನೆ ಸೃಷ್ಟಿಸುತ್ತಿರುವ ವಿಚಾರದ ಬಗ್ಗೆ, ಇಲ್ಲೂ ಕೂಡ ಸೌಹಾರ್ದಯುತವಾಗಿ ತೆಗೆದುಕೊಂಡು ಹೋಗುವ ರಾಜಕೀಯ ಇಚ್ಛಾಶಕ್ತಿ ಸತ್ತು ಹೋಗಿದೆ. ಇದು ಬೇರೇ ಯಾವುದು ಅಲ್ಲ ಅದುವೆ ಕರಾವಳಿ ಕರ್ನಾಟಕದ ಜೀವ ನಾಡಿ ನೇತ್ರಾವತಿ. ಇದೇನು ಅಂತರ ರಾಜ್ಯಾಗಳ ವಿಚಾರದಿಂದ ನೇತ್ರಾವತಿ ಬಗ್ಗೆ ಹೋಯಿತಲ್ಲ ಅಂದುಕೊಳ್ಳಬೇಡಿ. ಒಂದಕ್ಕೊಂದು ಸಂಬಂಧ ಇದೆ.

ಕರ್ನಾಟಕ ತಮಿಳುನಾಡು ಕಾವೇರಿಯ ಸದ್ಯದ ಪ್ರಕ್ಷುಬ್ಧ ಪರಿಸ್ಥಿತಿಯನ್ನು ಅವಲೋಕಿಸಿದರೆ ಇದೇನು ಭಾರತ –ಪಾಕಿಸ್ಥಾನದ ಸ್ಥಿತಿಯಂತೆ ಭಾಸವಾಗುತ್ತಿದೆ. ಅದೇ ರೀತಿ ಸ್ವಲ್ಪ ದಿನಗಳ ಹಿಂದೆ ನೇತ್ರಾವತಿ ತಿರುವು ಯೋಜನೆಯ ವಿರುದ್ದ ಕರಾವಳಿಯಾದ್ಯಾಂತ ನಡೆದ ಪ್ರತಿಭಟನೆಯು ಇದೇ ರೀತಿ ತೀವ್ರ ಸ್ವರೂಪವನ್ನು ಪಡೆದುಕೊಂಡಿತು. ಅದು ಎಷ್ಟರ ಮಟ್ಟಿಗೆ ಎಂದರೆ ಕರಾವಳಿ ಜನರ ಜೀವ ನಾಡಿ ನೇತ್ರಾವತಿ ಎತ್ತಿನಹೊಳೆಯಲ್ಲಿ ತಿರುವು ಪಡೆದು ಮುಂದೆಂದೂ ನೇತ್ರಾವತಿ ನಮಗಿಲ್ಲ ಎನ್ನುವುದನ್ನು ಕರಾವಳಿ ಜನರಿಗೆ ಅರಗಿಸಿಕೋಳ್ಳಲಾಗದೆ ಕರ್ನಾಟಕದ ರಾಜ್ಯ ಸರ್ಕಾರ ನಮಗೆ ಅನ್ಯಾಯ ಮಾಡುತ್ತಿದೆ ಎಂದು ತುಳುನಾಡಾಗಿ ಹೊಸ ರಾಜ್ಯಕ್ಕೆ ಕೂಗು ಗಟ್ಟಿಯಾಗಿ ಕೇಳಿ ಬಂದಿತ್ತು. ಅಷ್ಟೇ ಅಲ್ಲ ಕಾವೇರಿ ಕಾವು ಕರಾವಳಿಯಲ್ಲಿ ಕಡಿಮೆ ಆಗುವುದಕ್ಕೊ ಕಾರಣ… ಕರಾವಳಿ ಜಿಲ್ಲೆಗಳಿಗೆ ನೀರಿನ ಅನ್ಯಾಯದ ಬಗ್ಗೆ ತಲೆ ಕೆಡಿಸದೆ ಇರುವವರ ಬಗ್ಗೆ ನಾವೇಕೆ ತಲೆ ಕೆಡಿಸಿಕೊಳ್ಳಬೇಕು ಎನ್ನುವುದು ಕೆಲವರ ವಾದವೂ ಆಯಿತು. ಇದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದಾಗ ಕನ್ನಡಪರ ಸಂಘಟನೆಗಳು, ಹೊರ ಕರಾವಳಿದಾದ್ಯಾಂತ ವಿರೋಧದಗಳು ವ್ಯಕ್ತವಾದವು. ಹೊಸ ರಾಜ್ಯದ  ಕೂಗಿಗೆ ವಿರೋಧ ಒಪ್ಪಿಕೊಳ್ಳಬಹುದು,ಒಂದೇ ರಾಜ್ಯ ಇಬ್ಭಾಗವಾಗುವುದನ್ನು ರಾಜ್ಯ ಪ್ರೇಮಿಗಳು ಸಹಿಸಲಸಾದ್ಯ ಆದೇ ಕನ್ನಡಿಗರ ಜೀವ ನಾಡಿ ಕಾವೇರಿ ನೀರನ್ನು ಕರ್ಣಾಟಕದಿಂದ ತಮಿಳುನಾಡಿಗೆ ಹೆಚ್ಚುವರಿ ನೀರನ್ನು ಬಿಟ್ಟಾಗ ನಮ್ಮ ಮನಸ್ಸು ಎಷ್ಟು ಪ್ರಕ್ಷುಬ್ಧ ವಾಯಿತು ಹಾಗೆ ಕರಾವಳಿ ಜನರ ಜೀವ ನಾಡಿ ನೇತ್ರಾವತಿ ಎತ್ತಿನ ಹೊಳೆಯಲ್ಲಿ ತಿರುವು ಪಡೆದು ಮುಂದೆಂದೂ ನೇತ್ರಾವತಿ ನಮಗಿಲ್ಲ ಎನ್ನುವುದನ್ನು ಕರಾವಳಿ ಜನ ಅರಗಿಸಿಕೊಳ್ಳುವುದಾದರು ಹೇಗೆ..??

ನೇತ್ರಾವತಿ ನದಿ ತಿರುವು ಪಡೆದುಕೊಂಡರೆ ನಮ್ಮದೆ ರಾಜ್ಯದ ಪಶ್ಚಿಮ ಘಟ್ಟಕ್ಕೆ ( ಚಿಕ್ಕಬಳ್ಳಾಪುರ/ ಕೊಲಾರ ಸುತ್ತಮುತ್ತಲಿನ ಪ್ರದೇಶ)  ನೀರು ಸಿಗುತ್ತದೆ ಎಂಬುದು ಸರಕಾರದ ವಾದ, ಆದರೆ ಕರವಳಿಗರ ಪ್ರಶ್ನೆ ನಮ್ಮ ಕೈ ತುತ್ತನ್ನು ಕಸಿದುಕೊಂಡು ಇನ್ನೊಬ್ಬರಿಗೆ ಕೊಟ್ಟು ನಮ್ಮನೇಕೆ ಹಸಿವಲ್ಲಿ ಇಡುತ್ತೀರಿ ಎಂಬುದು. ಅಷ್ಟೇ ಅಲ್ಲ  ಈಗ ಕಾರ್ಯಾರಂಭವಾಗಿರುವ ನೇತ್ರಾವತಿ ಎತ್ತಿನಹೊಳೆ ತಿರುವು ಸಂಪೂರ್ಣ ಅವೈಜ್ಞಾನಿಕ ಎನ್ನುವುದು ವಾದ (ನೇತ್ರಾವತಿ ನದಿ ತಿರುವು ಯೋಜನೆ ಪಶ್ಚಿಮ ಘಟ್ಟದ ಜನರ ಸಮಸ್ಯೆಯನ್ನು ತಾತ್ಕಲಿಕವಾಗಿ ಮುಂದೂಡುವ ಹುನ್ನಾರ). ಇಲ್ಲೂ ಕೂಡ ರಾಜಕೀಯ ಬದ್ಧತೆಯ ಕೊರತೆ,ಮೊಂಡುತನ, ಮತ್ತೆ  ಅದೇ ದೊಡ್ಡ ಮಟ್ಟದ ಭ್ರಷ್ಟಾಚಾರದ ಹುನ್ನಾರ,

ಏನೇ ಆದರೂ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳ ಬೇಕಾದ ಅನಿವಾರ್ಯತೆ ಕರ್ನಾಟಕದ ಮುಂದಿದೆ. ಇದರ ಇಚ್ಚಾಶಕ್ತಿ ರಾಜಕೀಯ ನಾಯಕರಿಗೆ ಇದ್ದಂತ್ತಿಲ್ಲ, ಆದರೆ ಸಾಮಾನ್ಯ ನಾಗರಿಕನಿಗೆ ಬೇಕಾಗಿದೆ. ಪರಿಹಾರ ಮಾಡದೆ ಇದ್ದರೆ ಅನಾಹುತಗಳೇನು..??ಮಹದಾಯಿ ಯೋಜನೆ ಕಾವೇರಿ ವಿವಾದದ ಹಾಗೇ ಇನ್ನೂ ನೂರಾರು ವರ್ಷ ಹೋರಾಟ ಗಳೊಂದಿಗೆ ಮುಂದುವರಿಯುತ್ತಲೇ ಇರಬಹುದು.

ನೀರಿಗಾಗಿ ಸಾಲು ಸಾಲು ಸಮಸ್ಯೆಗಳು. ಒಂದು ಕಡೆ ಕಾವೇರಿ, ಇನ್ನೊಂದು ಕಡೆ ಮಹದಾಯಿ ಮತ್ತೋಂದು ಕಡೆ ನೇತ್ರಾವತಿ,  ಇದಕ್ಕೆಲ್ಲಾ ಪರಿಹಾರವೇನು …? ನಾವು ಭವಿಷ್ಯತ್ ಕಾಲಕ್ಕೆ ಉತ್ತರ ಹುಡುಕುತ್ತಾ ಹೋದರೆ ಎಲ್ಲಾ ಗೊಂದಲಮಯ. ಆದರೂ ಪರಿಹಾರ ಮಾಡಲೇಬೇಕಾದ ಅನಿವಾರ್ಯ,

ಸ್ವತಃ ನಾನು ಕೂಡ ಕರಾವಳಿಗಾನಾದುದರಿಂದ ನೇತ್ರಾವತಿ ನದಿಯನ್ನು ತಿರುವು ಮಾಡದೆ ಎರಡು ಪ್ರದೇಶಗಳ ಜನರಿಗೆ ನ್ಯಾಯ ಕಂಡುಕೊಳ್ಳುವುದು ಹೇಗೆ ಎಂಬುದನ್ನು ಹಲವಾರು ಸುದೀರ್ಘವಾದ ಯೋಚನೆಯಲ್ಲಿ ಮುಳುಗಿದ್ದೇನೆ.  ಆಗ ನನ್ನಲ್ಲಿ ಬಂದಂತಹ ತುಡಿತ ಯೋಚನೆಗಳು TVಯಲ್ಲಿ ಮಾತನಾಡುತ್ತಿದ್ದ ಕನ್ನಡದ ಪ್ರಖ್ಯಾತ ನಟ ನಿರ್ದೇಶಕನ ಕೆಲ ಮಾತಿಗೆ ಮತ್ತು ತುಡಿತಕ್ಕೆ ಸಾಮ್ಯತೆ ಇತ್ತು.  ಏನಾದಾರಾಗಲಿ ಸುಮ್ಮನೆ ಕೂರುವ ಬದಲು ಏನಾದರೊಂದು ದಾರಿ ಹುಡುಕಬೇಕು. ಅದು ಹೇಗಿರಬೇಕೆಂದರೆ ಮುಂದೆಂದೂ ನಾವು ನೀರಿಗಾಗಿ ಪರದಾಡಬಾರದು. ನಮಗೆ ನೀರಿಗಾಗಿ ಯಾರು ತೊಂದರೆ ಕೊಡಬಾರದು. ಅಷ್ಟರ ಮಟ್ಟಿಗೆ ನಾವು ಸಬಲರಾಗಬೇಕು. ಅಷ್ಟೇ ಅಲ್ಲ ನಾವು ಎಲ್ಲಾರಿಗೂ ಮಾದರಿಯಾಗಿ ನಿಲ್ಲಬೇಕು. ನನ್ನ ಮನಸ್ಸಲ್ಲಿ ಮೂಡಿದ ೨ ಆಲೋಚನೆಗಳನ್ನು ನಿಮ್ಮ ಮುಂದಿಡುತ್ತಿದೇನೆ. ಇದಕ್ಕೆ ಪೂರಕವಾಗಿ ಮುಂದಿನ ಹೆಜ್ಜೆಗಳ ವಿಚಾರಧಾರೆಗೆ ಸ್ವಾಗತ.

೧. ಮಳೆ ನೀರನ್ನು ವೈಜ್ಞಾನಿಕವಾಗಿ ಬೃಹತ್ ಮಟ್ಟದಲ್ಲಿ ಸಂಗ್ರಹಿಸಿಡುವುದನ್ನು ಕಂಡುಕೊಳ್ಳುವುದಕ್ಕೆ ಮಾರ್ಗಸೂಚಿಗಳನ್ನು ಮಾಡಬೇಕು.

೨. ಸಮುದ್ರದಿಂದ ಉಪ್ಪು ನೀರನ್ನು ಶುದ್ಧೀಕರಿಸಿ ಕೃಷಿಗೆ ಉಪಯೋಗಿಸುವಂತೆ ಬೃಹತ್ ಮಟ್ಟದಲ್ಲಿ ವೈಜ್ಞಾನಿಕವಾಗಿ ಕಾರ್ಯಾರಂಭ ಮಾಡಬಹುದು.

ಮೇಲಿನ ಅಂಶಗಳನ್ನು ಅನುಷ್ಟಾನಗೋಳಿಸಲು ಸರಕಾರಕ್ಕೆ ಮತ್ತೆ ಅದೇ ಬದ್ದತೆ ಬೇಕು.  ಅಥವ ಸಾಮಾನ್ಯ ನಾಗರಿಕರು ಇದಕ್ಕೆ ಏನು ಮಾಡಬೇಕು. ಇದಲ್ಲದೆ ಇನ್ನೇನಾದರು ಮಾರ್ಗೋಪಾಯಗಳಿವೆಯ ನಮ್ಮ ಚಿಂತನೆಗಳನ್ನು ಒರೆಗೆ ಹಚ್ಚುವ ಸಮಯಕ್ಕೆ ಇನ್ನೂ ಕಾಯುವುದಕ್ಕೆ ಅರ್ಥ ಇಲ್ಲ ಅನ್ನುವುದು ನನ್ನ ನಂಬಿಕೆ.

ನಾಗೇಶ್ ಕೆ ಪುತ್ತೂರು.

solutionforwater@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!