ಅಂಕಣ

ಸ್ವಾತಂತ್ರ್ಯ ಹೋರಾಟದಲ್ಲಿ ಸಿದ್ದಾಪುರ ತಾಲೂಕು

ಸ್ವಾತಂತ್ರ್ಯ ಪೂರ್ವದಲ್ಲಿ ಸಿದ್ದಾಪುರ ಸಂಪರ್ಕ ಸಾಧನಗಳಿಂದ,ಶೈಕ್ಷಣಿಕ,ವೈದ್ಯಕೀಯ ಸೌಲಭ್ಯಗಳಿಂದ ವಂಚಿತವಾದ ಪ್ರದೇಶವಾಗಿತ್ತು. ಆದರೂ ಕರ್ನಾಟಕದ ಸತ್ಯಾಗ್ರಹ ಮಂಡಳಿಯವರು ಸ್ವಾತಂತ್ರ್ಯ ಹೋರಾಟಕ್ಕಾಗಿ ಸಿದ್ದಾಪುರವನ್ನು ರಣಕ್ಷೇತ್ರವನ್ನಾಗಿ ಆಯ್ದುಕೊಳ್ಳುವುದಕ್ಕೆ ಪ್ರಮುಖ ಕಾರಣಗಳಿದ್ದವು

ಹಿಂದೊಮ್ಮೆ ಥಾಮಸ್ ಮನ್ರೋ ಎನ್ನುವವನು ಜಿಲ್ಲಾಧಿಕಾರಿಯಾಗಿದ್ದಾಗ ಕನ್ನಡ ಜಿಲ್ಲೆಯ ಸೆಟ್ಲಮೆಂಟ್ ಮಾಡಲು ಬಂದಾಗ ಅವರಿಗೆ ಜಮೀನುದಾರರೆಲ್ಲಾ ತೀವ್ರತರವಾದ ಅಸಹಕಾರದಿಂದ ಅನ್ನ, ನೀರು ಸಿಗದಂತೆ ಮಾಡಿದ್ದರು. ಇಲ್ಲಿಯ ಜನರ ಒಗ್ಗಟ್ಟನ್ನು ನೋಡಿ1862ನೆಯ ಇಸವಿಯಲ್ಲಿ ಉತ್ತರ ಕನ್ನಡವನ್ನು ಮುಂಬೈ ರಾಜ್ಯಕ್ಕೆ ಸೇರಿಸಲಾಯಿತು. ರೈತರಿಗಿರುವ ಅಡವಿಯ ಸವಲತ್ತುಗಳನ್ನು ಸರಕಾರ ನಾಶ ಪಡಿಸಿತು. ಇದನ್ನು ಪ್ರತಿಭಟಿಸಿ 1890 ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಜನರು ಕರನಿರಾಕರಣಿ ಮಾಡಿ ತೋರಿಸಿ ಕೆಲವೊಂದು ಜಂಗಲ್ ಸವಲತ್ತುಗಳನ್ನು ಪುನಃ ಪಡೆದರು ಇಲ್ಲಿಯವರು ಹೋರಾಟಗಾರರೆಂಬುದನ್ನು ಸಾಧಿಸಿ ತೋರಿಸಿದರು.

1916 ರ ನಂತರ ತಿಳಕರ ‘ಕೇಸರಿ’ ಪತ್ರಿಕೆಯಿಂದ ಪ್ರಭಾವಿತರಾಗಿ ದೊಡ್ಮನೆ ನಾರಾಯಣ ಹೆಗಡೆಯವರು ಸಿದ್ದಾಪುರದಲ್ಲಿ ಹೋಂರೂಲ್ ಸಂಘಟನೆ ಮಾಡಿದರು. ವಿದೇಶೀ ವಸ್ತುಗಳನ್ನು ನಾಶ ಮಾಡತೊಡಗಿದರು ಸರಕಾರದ ಪರವಾಗಿದ್ದ ಪೋಲಿಸ್ ಪಾಟೀಲರುಗಳನ್ನು ತಮ್ಮ ಪಾಟೀಲಿಕೆಗೆ ರಾಜಿನಾಮೆ ಕೊಡುವಂತೆ ಮಾಡಿದರು. ಇವರ ಸಂಗಡ ಕೈ ಜೋಡಿಸಿದವರು ದೊಡ್ಮನೆ ನಾಗೇಶ ಹೆಗಡೆಯವರು. ನಂತರದ ಮುಖಂಡತ್ವವನ್ನು ವಹಿಸಿಕೊಂಡವರು ಶಿರಳಗಿ ಸುಬ್ರಾಯ ಭಟ್ಟರು.

1928 ರ ವರೆಗೂ ಬ್ರಿಟೀಷ್ ರ ಕಟ್ಟಾ ಬೆಂಬಲಿಗರಾಗಿದ್ದ ಕನ್ನಳ್ಳಿಯ ಶಿವರಾಮ ಹೆಗಡೆಯವರು ಸುಬ್ರಾಯ ಭಟ್ಟರಿಂದ ಪ್ರಭಾವಿತರಾಗಿ ಪಾಟೀಲಿಕೆಗೆ ರಾಜಿನಾಮೆ ನೀಡಿ ಹೋರಾಟದ ಮುಖ್ಯ ಸ್ರೋತದಲ್ಲಿ ಪಾಲ್ಗೊಂಡರು. ಅಂಕೋಲಾದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಬೆಡ್ಕಣಿ ಚೌಡ ನಾಯ್ಕರೂ ಅಂದಿನ ಕಾಲದಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ಪಾಸಾದವರಲ್ಲಿ ಆ ಸಮಾಜದ ಮೊದಲಿಗರು. ವಲ್ಲಭಭಾಯಿ ಪಟೇಲರ ನೇತೃತ್ವದಲ್ಲಿ ಗುಜರಾತ್ ರಾಜ್ಯದ ಬಾರ್ಡೋಲಿಯ ಜಮೀನುದಾರರು ಸರಕಾರಕ್ಕೆ ಕರ ಕೊಡದೇ ಕರ ನಿರಾಕರಣಿ ಮಾಡಿ ಯಶಸ್ವಿಯಾಗಿದ್ದರು. ಇಂತಹುದೇ ಚಳುವಳಿ ನಡೆಸಲು ನಮ್ಮ ರಾಜ್ಯದ ಸಿದ್ದಾಪುರದಂತಹ ಮತ್ತೊಂದು ತಾಲೂಕು ಸಿಗಲಾರದೆಂದು ಅಂದಿನ ಮುಖಂಡರು ಭಾವಿಸಿದ್ದರು. ಆದುದರಿಂದಲೇ ಸಿದ್ದಾಪುರವನ್ನು ಕರ್ನಾಟಕದ ಬಾರ್ಡೋಲಿ ಎನ್ನುತ್ತಾರೆ. ಹೋರಾಟದಲ್ಲಿ ಭಾರತದ ಎರಡನೇ ಬಾರ್ಡೋಲಿ ಎನ್ನುತ್ತಾರೆ.

ಸಿದ್ದಾಪುರದಲ್ಲಿಯ ಹೋರಾಟವನ್ನು ಯಶಸ್ವಿಯಾಗಿಸಲು ಸರದಾರ ವೆಂಕಟರಾಮಯ್ಯನವರು ಇಲ್ಲಿಗೆ ಬಂದು ಕರನಿರಾಕರಣಿಯ ಕಾರ್ಯಕ್ರಮವನ್ನು ಸಂಘಟಿಸಿದರು ಧಾರವಾಡದ ರಂಗನಾಥ ದಿವಾಕರರು, ಅಂಕೋಲಾದ ಶಂಕರ ಗುಲ್ವಾಡಿಯವರು ಅವರಿಗೆ ಸಹಕರಿಸಿದರು. ಸಂಘಟನಾ ರೀತಿಯಲ್ಲಿ ಹೋರಾಟ ಮುಂದುವರೆಯುವುದಕ್ಕಾಗಿ ತಾಲೂಕಿನ ಕೇಂದ್ರ ಸ್ಥಳಗಳಾದ ಲಂಬಾಪುರ, ಕ್ಯಾದಗಿ, ಬಿಳಗಿ,ದೊಡ್ಮನೆ ಮುಂತಾದ 18 ಕೇಂದ್ರಗಳಲ್ಲಿ ಹೋರಾಟಗಾರ ಗುಪ್ತ ಸಭೆಗಳು ನಡೆಯುತ್ತಿದ್ದವು.ಈ ತಾಲೂಕಿನ ಕರನಿರಾಕರಣಿ ಎಷ್ಟು ತೀವ್ರವಾಗಿತ್ತೆಂದರೆ ಸುಮಾರು400 ಕುಟುಂಬಗಳು ಸರಕಾರಕ್ಕೆ ಕರವನ್ನು ಕೊಡದೇ ಹೋದುದರಿಂದ ತಮ್ಮ ಜಮೀನು, ಮನೆ ಮುಂತಾದವುಗಳನ್ನೆಲ್ಲ ಕಳೆದುಕೊಂಡು ನಿರ್ಗತಿಕರಾಗಬೇಕಾಯಿತು. ಅನೇಕ ಹೋರಾಟಗಾರರು ಜೈಲು ಪಾಲಾದರು. ಅಹಿಂಸಾತ್ಮಕವಾಗಿ ನಡೆದ ಈ ಹೋರಾಟ ಜಗತ್ತಿನ ಇತಿಹಾಸದಲ್ಲಿಯೇ ಒಂದು ಮೈಲಿಗಲ್ಲು.

1942 ನೆಯ ಇಸ್ವಿಯಲ್ಲಿ ನಡೆದ ಚಲೆಜಾವ್ ಚಳುವಳಿಯಲ್ಲಿಯೂ ಸಿದ್ದಾಪುರ ತಾಲೂಕಿನ ಜನ ಭಾಗವಹಿಸಿದ್ದರು. ತಮ್ಮ ಮನೆಯನ್ನು ತೊರೆದು ಜೈಲು ಸೇರಿದ್ದರು. ಮಹಿಳೆಯರು ಹುಡುಗರೆನ್ನದೇ ದೇಶಕ್ಕೆ ತಮ್ಮ ಸೇವೆ ಸಲ್ಲುಸಿದ್ದಾರೆ. ಗಾಂಧಿಯವರು ಸ್ವಾತಂತ್ರ್ಯ ಸಂಗ್ರಾಮದ ಜೋತೆ ಜೋತೆಯಲ್ಲಿಯೇ ಸಾಮಾಜಿಕ ಜಾಗೃತಿ ಮೂಡಿಸುತ್ತ ಬಂದವರಾಗಿದ್ದರು. ಕುಡಿತದಂತಹ ಸಾಮಜಿಕ ಪಿಡುಗಿನ ವಿರುದ್ಧ ಶ್ರಮಿಸುತ್ತ ಬಂದವರು. ಅವರ ಹಾದಿಯನ್ನೇ ಅನುಸರಿಸಿದ ಸಿದ್ದಾಪುರದ ಕವಿ ತಿಪ್ಪಯ್ಯ ಮಾಸ್ತರರು ಅನೇಕ ಕವಿತೆಗಳ ಸಂಗಡ ಕುಡಿತದ ಕೆಡುಕಿನ‌ಬಗ್ಗೆ ಬರೆದ “ಹೆಂಡವನ್ನು ಕುಡಿಯಬೇಡಣ್ಣ …………” ಎಂಬ ಹಾಡು ತುಂಬಾ ಜನಪ್ರಿಯವಾಗಿದೆ.

ಹಬಿಬುಲ್ಲಾ ಖಾನ್ ಜಯರಮಾಚಾರ್ಯರ ಪರ ಊರಿನಿಂದ ಇಲ್ಲಿಗೆ ಬಂದು ಹೋರಾಟ ನಡೆಸಿದವರೂ ಇದ್ದಾರೆ. ನೌಕರಿಗೆ ರಾಜಿನಾಮೆ ನೀಡಿದಂತಹ ಅಡವಿತೋಟದ ಗಣೇಶ್ ಭಟ್ ರಂತಹವರು ಇಲ್ಲಿದ್ದಾರೆ. ಜೀವನ ಶಿಕ್ಷಣ ಪಡೆಯುವುದಕ್ಕಾಗಿ ಅಂದಿನ ಬ್ರಿಟೀಷ್ ಸರಕಾರಿ ಶಾಲೆಗಳನ್ನೂ ಬಿಟ್ಟವರೂ ಇದ್ದಾರೆ.

“ಸಿದ್ದಾಪುರ ತಾಲೂಕಿನ ಹೋರಾಟಗಾರರು ಪ್ರಾತಃಸ್ಮರಣೀಯರು ಅವರ ದರ್ಶನ ಪಡೆಯುವ ಸಲುವಾಗಿ ಪ್ರಾತಃಕಾಲದ ವೆಳೆಯಲ್ಲಿಯೇ ಸಿದ್ದಾಪುರಕ್ಕೆ ಹೋಗ ಬಯಸುತ್ತೇನೆ” 1934 ನೆಯ ಇಸ್ವಿಯಲ್ಲಿ ಸಿದ್ದಾಪುರಕ್ಕೆ ಭೇಟಿ ಕೊಡುವ ಸಂದರ್ಭದಲ್ಲಿ ಮಹಾತ್ಮಾ ಗಾಂಧಿಯವರು ಹೇಳಿದ ಮಾತಿದು. ಇಲ್ಲಿಯ ಹೋರಾಟಗಾರರ ದಿಟ್ಟತನ,ದೃಢವಿಶ್ವಾಸ, ಒಗ್ಗಟ್ಟು, ಧೈರ್ಯ, ಕಷ್ಟ ಸಹಿಷ್ಣುತೆ ಗಳಿಗೆ ಗಾಂಧಿಜಿಯವರು ಮಾಡಿದ ಪ್ರಶಂಸೆಯ ಮಾತಿದು. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಮ್ಮ ಸಿದ್ದಾಪುರ ತಾಲೂಕು ಮಾಡಿದ ತ್ಯಾಗಕ್ಕೆ ಹಿಡಿದ ಕೈಗನ್ನಡಿ ಇದು.

Chandan shastri

chandansshastri@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!