ಅಂಕಣ

ಶಿಕ್ಷಣ ವ್ಯವಸ್ಥೆ ಶಿಕ್ಷಕರ ಗೌರವ ಕುಸಿಯಲು ಹಲವು ಕಾರಣಗಳು.

ಅದೊಂದು ಕಾಲವಿತ್ತು. ಕಡು ಬಡವರಿಗೆ ಸರ್ಕಾರಿ ಶಾಲೆ. ಮಧ್ಯಮ ವರ್ಗದವರಿಗೆ ಖಾಸಗೀ ಶಾಲೆ. ಸ್ವಲ್ಪ ಅನುಕೂಲಸ್ಥರಿಗೆ ಕಾನ್ವೆಂಟ್. ಇನ್ನೂ ಶ್ರೀಮಂತರಿದ್ದರೆ ಅವರಿಗೆ ಸಿ.ಬಿ.ಎಸ್.ಸಿ ಇತ್ಯಾದಿ ದೊಡ್ಡ ದೊಡ್ಡ ಹೆಸರಿನ ಶಾಲೆಗಳು. ಆದರೆ ಎಲ್ಲವೂ ನಮ್ಮ ಆರ್ಥಿಕತೆಗೆ ನಿಲುಕುವಷ್ಟೆ ಶುಲ್ಕವಿರುತ್ತಿತ್ತು. ಶಿಕ್ಷಕರೇ ನಮ್ಮ ಪಾಲಿನ ಪಂಡಿತರಾಗಿದ್ದರು. ಕಲಿಸಿದ ಶಿಕ್ಷಕ ಇಡೀ ಜೀವಮಾನದಲ್ಲಿ ದುಡಿಯುವಷ್ಟು ಶಿಷ್ಯ ಒಂದೇ ವರ್ಷದಲ್ಲಿ ದುಡಿಯುವ ಮಟ್ಟಕ್ಕೆ ಬೆಳೆಯುತ್ತಿದ್ದ.

ಆಚಾರ್ಯ ದೇವೋಭವ ಅನ್ನುವ ಕಾಲ ಹೋಗಿಯಾಗಿದೆ. ಅದಕ್ಕೆ ಹಲವು ಕಾರಣಗಳಿವೆ. ಗುರುಕುಲ ಶಿಕ್ಷಣವಿದ್ದ ಕಾಲದಲ್ಲಿ ಗುರುಗಳು ವಿದ್ಯೆಗೆ ಪ್ರತಿಯಾಗಿ ಗುರುದಕ್ಷಿಣೆ ಪಡೆಯುತ್ತಿದ್ದರು. ಆದರೆ ಗುರುದಕ್ಷಿಣೆ ಗೌರವ ಸಂಭಾವನೆಯಾಗಿತ್ತು. ಯಾವತ್ತು ಆ ಸಂಭಾವನೆ ಸಂಬಳವಾಗಿ ಪರಿವರ್ತನೆಯಾಯಿತೊ ಅವತ್ತೇ ಶಿಕ್ಷಣ ಕ್ಷೇತ್ರ ವ್ಯಾಪಾರೀಕರಣಕ್ಕೆ ತಿರುಗಿತು. ಹದಿನೈದಿಪತ್ತು ವರ್ಷಗಳ ಹಿಂದಿನ ಮಾತು ಆಗ ದುಡ್ಡು ಕೊಟ್ಟೆ ಕಲಿಯುತ್ತಿದ್ದರೂ. ಶಿಕ್ಷಣದಲ್ಲಿ ಮೌಲ್ಯಗಳೂ ಇರುತ್ತಿದ್ದವು . ಆದರೆ ಈಗ ನರ್ಸರಿಗಳಲ್ಲಿ ಹದಿನೈದಿಪತ್ತು ಸಾವಿರ ಕೊಟ್ಟು ಸೇರಿಸುವ ದಿನ ಬಂದಿದೆ. ಶಿಕ್ಷಕರ ಬೆಲೆ ಕುಗ್ಗಲು ಇದೂ ಒಂದು ಕಾರಣ. ನಾವು ದುಡ್ಡು ಕೊಟ್ಟು ಸೇರಿದ್ದೇವೆ ಎಂಬ ಶಿಷ್ಯ ಮತ್ತು ಪಾಲಕರ ಅಹಂ ಮತ್ತು ತನಗೆ ಸಂಬಳ ಕೊಡುತ್ತಾರೆ ಎಂಬ ಕಾರಣಕ್ಕೆ ದುಡಿಯುವ ಶಿಕ್ಷಕನ ಅಸಡ್ಡೆಯ ನಡುವೆ ಶಿಕ್ಷಣ ಕ್ಷೇತ್ರ ಹಣ ಗಳಿಸುವ ವ್ಯಾಪಾರಿ ಕ್ಷೇತ್ರವಾಗಿಬಿಟ್ಟಿದೆ. ಶಿಕ್ಷಕರ ಗೌರವ ಕಡಿಮೆಯಾಗಲೂ ಶಿಕ್ಷಕರೂ ಕಾರಣ. ಆಗ ಯಾವ ತಂತ್ರಜ್ಞಾನವಿರಲಿಲ್ಲ. ಇಂಟರ್ನೆಟ್ ಇರಲಿಲ್ಲ. ಶಿಕ್ಷಕ ಹೇಳಿದ್ದೇ ಅಂತಿಮವಾಗುತ್ತಿತ್ತು. ಆದರೆ ಈಗ ಹಾಗಲ್ಲ. ಶಿಕ್ಷಣದ ಮೂಲ ಶಿಕ್ಷಕನೊಬ್ಬನೇಯಾಗದೆ ಹಲವು ಮೂಲಗಳಿಂದ ಜ್ಞಾನ ಸಿಗುತ್ತೆ. ಬರೀ ಇಂಟರ್ನೆಟ್ ಒಂದೇ ಅಲ್ಲ ಖಾಸಗೀ ವಾಹಿನಿಗಳು, ದಿನಪತ್ರಿಕೆಗಳೂ ಎಸ್ಸೆಸ್ಸೆಲ್ಸಿ ಪಿಯುಸಿ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ವಲ್ಪ ಜಾಗ ಸಮಯ ಮೀಸಲಿಡುತ್ತವೆ. ಕೆಲವು ಸಂಸ್ಥೆಗಳಂತೂ ಇಂಥ ಪರೀಕ್ಷೆಗೇ ಮೀಸಲಾದ ಮ್ಯಾಗಝಿನ್ ಹೊರ ತರುತ್ತಿವೆ.ಹೀಗಿರುವಾಗ ಶಿಕ್ಷಕ ತನ್ನ ವರ್ಚಸ್ಸನ್ನು ಉಳಿಸಿಕೊಳ್ಳಬೇಕೆಂದರೆ ಹೊಸತನಕ್ಕೆ ತಕ್ಕಂತೆ ಬದಲಾಗಬೇಕಾಗುತ್ತದೆ. ಒಬ್ಬ ಶಿಕ್ಷಕ ಇಪ್ಪತ್ತು ವರ್ಷ ಅನುಭವವುಳ್ಳವನು ಎಂದರೂ ಮೊದಲ ವರ್ಷದ ಅಪಕ್ವತೆ ಅವನಲ್ಲಿ ಇನ್ನೂ ಹಾಗೇ ಇರುತ್ತೆ. Its just one year experience repeated for twenty times ಅಷ್ಟೆ. ಆ ಶಿಕ್ಷಕನ ಮನೆಯಲ್ಲಿ ಪಠ್ಯಪುಸ್ತಕದ ಹೊರತಾಗಿ ಬೇರೆ ಯಾವ ಪುಸ್ತಕವೂ ಇರದಿದ್ದರೆ ಶಿಕ್ಷಣ ಬರೀ ಪಠ್ಯ ಪುಸ್ತಕಕ್ಕೆ ಸೀಮಿತವಾಗುತ್ತೆ. ಅದಕ್ಕೆ ಈಗಿನ ಮಕ್ಕಳ ಹಿಂಡು ಪಠ್ಯೇತರ ವಿಷಯಗಳಲ್ಲಿ ಸೊನ್ನೆ. ಪಠ್ಯದಲ್ಲಿ ನೂರಕ್ಕೆ ನೂರು. ಇತ್ತೀಚಿನ ಶಿಕ್ಷಕರು ತಂತ್ರಜ್ಞಾನವನ್ನು ಮತ್ತಷ್ಟು ಬಳಸಿಕೊಳ್ಳಬಹುದು. ಮೊದಲ ವರ್ಷ ಮಾಡಿದ ಪಾಠಕ್ಕೆ ಎರಡನೇ ವರ್ಷ ಒಂದು ಹದವಾದ ನೋಟ್ಸ್ ಕೊಡಬಹುದು. ಮೂರನೇ ವರ್ಷ ಅದರ ಮೇಲೆ ಒಂದು ಪವರ್ ಪಾಯಿಂಟ್ ಪ್ರಸೆಂಟೇಶನ್(ppt) ಮಾಡಿಕೊಡಬಹುದು. ನಾಲ್ಕನೇ ವರ್ಷ ಅದಕ್ಕೆ ಸಂಬಂಧಿಸಿದ ಯಾವುದಾದರೂ ವಿಡಿಯೋವನ್ನು ತೋರಿಸಿ ಪಾಠವನ್ನು ಮನದಟ್ಟು ಮಾಡಬಹುದು. ಇದೇ ಅಪ್ಡೇಟ್ ಆಗುವುದು ಎಂದರೆ. ನಿಮಗೊಂದು ವಿಷಯ ಗೊತ್ತಿರ್ಲಿ ಮನೋವಿಜ್ಞಾನದ ಪ್ರಕಾರ ನಮ್ಮ ಮನಸ್ಸು ಅಕ್ಷರಕ್ಕಿಂತ ಚಿತ್ರಗಳನ್ನು ಜಾಸ್ತಿ ಹೊತ್ತು ನೆನಪಿಟ್ಟುಕೊಳ್ಳುತ್ತೆ. ಅದಕ್ಕೆ ಎಂದೋ ನೋಡಿದ ಸಿನಿಮಾ ಇವತ್ತಿಗೂ ನೆನಪಿರುತ್ತೆ. ಆದರೆ ನಿನ್ನೆ ಓದಿದ್ದ ಕೇಳಿದ್ದ ಪಾಠ ಇವತ್ತಿಗೆ ಮರೆತು ಹೋಗುತ್ತೆ. ಅದಕ್ಕೆ ನಾನು ppt ಮತ್ತು ವಿಡಿಯೋ ತೋರಿಸಿ ಅಂತ ಹೇಳ್ತಿರೋದು. ನಿಮಗೆ ತಂತ್ರಜ್ಞಾನದ ಬಗ್ಗೆ ಅರಿವಿಲ್ಲದೆ ಇದ್ದರೆ ಕನಿಷ್ಠ ಪಕ್ಷ ನೀವು ಒಂದು ಪಾಠಕ್ಕೆ ಸಂಬಂಧಿಸಿದ ಸಾಂದರ್ಭಿಕ ಉದಾಹರಣೆಗಳನ್ನಾದರೂ ಕೊಟ್ಟು ಮಕ್ಕಳಿಗೆ ಮನನ ಮಾಡಿಸಬೇಕು.ಆ ಪಾಠಕ್ಕೆ ಸಂಬಂಧಿಸಿದ ಒಂದು ಚಟುವಟಿಕೆ ಮಾಡಿಸಬೇಕು. ಒಂದು ಪಾಠಕ್ಕೆ ಸಂಬಂಧಿಸಿದ ಹಾಗೆ ಕನಿಷ್ಠ ಎರಡು ಮೂರು ಪುಸ್ತಕದಿಂದಾದರೂ ಮಾಹಿತಿ ಕಲೆಹಾಕಿ ಪಾಠ ಮಾಡಬೇಕು. ಅದು ಬಿಟ್ಟು ನೀವು ಬರೀ ಪಠ್ಯಕ್ಕೆ ಜೋತು ಬಿದ್ದು ಒಮ್ಮೆ ತಯಾರಿ ಮಾಡಿದ ನೋಟ್ಸ್ ಪ್ರತಿ ವರ್ಷ ವಿತರಣೆ ಮಾಡುತ್ತಾ ಹೋದರೆ ಅದು ನಿಮ್ಮ ವೃತ್ತಿಗೆ ಮಾಡುತ್ತಿರುವ ದ್ರೋಹವೇ ಸರಿ. ಈಗಿನ ಮಕ್ಕಳು ತುಂಬಾ ಜಾಣರು ನೀವು ಅಸಮರ್ಥರು ಎಂದು ತೀರ್ಮಾನಿಸುವುದು ಅವರಿಗೆ ಕಷ್ಟದ ಕೆಲಸವಲ್ಲ ಒಮ್ಮೆ ಅವರು ತೀರ್ಮಾನಿಸಿದರೆ ನಿಮ್ಮ ‘ಗುರು’ತ್ವಕ್ಷೇತ್ರಕ್ಕೆ ಅವರು ಎಂದಿಗೂ ಬರುವುದಿಲ್ಲ. ನಾವು ಇದೆಲ್ಲಾ ಮಾಡದಿದ್ದರೂ ಮಕ್ಕಳು ನನ್ನ ಪಾಠವನ್ನು ಗಮನವಿಟ್ಟು ಕೇಳುತ್ತಾರೆ ಎಂಬುದು ನಿಮ್ಮ ವಾದವಾದರೆ ಅದು ನಿಮ್ಮ ಮೇಲಿನ ಭಯದಿಂದ ಹೊರತು ಗೌರವದಿಂದಲ್ಲ. ಇರೋ ಒಂದೇ ಪಾಠವನ್ನೇ ಪ್ರತೀ ಸಲ ಅದನ್ನೇ ಹೇಳಬೇಕಲ್ಲ ಅದರಲ್ಲೇನೂ ಹೊಸತನ ತರಲು ಸಾಧ್ಯ ಎನ್ನುವುದಾದರೆ ಅದೇ ನಿಮ್ಮ ಸೃಜನಶೀಲತೆ.

ಒಂದು ಉದಾಹರಣೆ ಕೊಡುತ್ತೇನೆ. ಪುಣ್ಯಕೋಟಿ ಕಥೆ ನಿಮಗೆ ಗೊತ್ತಿದೆ. ಅದರ ಪಾಠ ಬಂತು ಎಂದುಕೊಳ್ಳೋಣ. ನೀವು ಸಂಬಳಕ್ಕಾಗಿ ದುಡಿಯುತ್ತಿದ್ದರೆ “ಧರಣಿ ಮಂಡಲ ಮಧ್ಯದೊಳಗೆ..” ಅಂಥ ಶುರು ಮಾಡಿ ಪದ್ಯವನ್ನು ಓದಿ. ಪ್ರಶ್ನೋತ್ತರ ಬರೆಸಿ. ಅದನ್ನು ಕಂಠಪಾಠ ಮಾಡಿಸಿ. ಕೈತೊಳೆದು ಕೊಳ್ತೀರಿ. ಆದರೆ ಒಂಚೂರು ಮನಸ್ಸು ಮಾಡಿದರೆ ಮಕ್ಕಳಿಗೆ ಅದನ್ನು ರಾಗವಾಗಿ ಹಾಡಲು ಕಲಿಸಬಹುದು. ಇನ್ನೊಂದು ಹೆಜ್ಜೆ ಮುಂದೆ ಹೋದರೆ. ಹಸುವಿನ ಪ್ರಾಮಾಣಿಕತೆಯನ್ನು ವರ್ಣಿಸಬಹುದು. ನೀವು ಪಠ್ಯಕ್ಕೆ ಜೋತು ಬೀಳದಿದ್ದರೆ ಪ್ರಾಮಾಣಿಕತೆಯ ಪುಷ್ಟೀಕರಣಕ್ಕಾಗಿ ಮತ್ತೊಂದು ಕಥೆ(ಉದಾಹರಣೆಗೆ ಸತ್ಯ ಹರಿಶ್ಚಂದ್ರನ ಕಥೆ) ಹೇಳಬಹುದು. ಬರೀ ಹಸುವಿನ ಪ್ರಾಮಾಣಿಕತೆ ಹೇಳುವುದನ್ನು ಬಿಟ್ಟು ವಿಭಿನ್ನ ವೈಚಾರಿಕ ಚಕ್ಷುವುಳ್ಳವರಾದರೆ ಹಸು ಕರುವಿನ ಮಧ್ಯದ ಮಾತೃವಾತ್ಸಲ್ಯವನ್ನು ವಿವರಿಸಬಹುದು. ಬರೀ ಹಸುವಿನ ಪಾತ್ರಕ್ಕೆ ಸೀಮಿತರಾಗದೇ ಹುಲಿಯ ಪಾತ್ರಕ್ಕೂ ಬೆಲೆ ಕೊಡುವವರಾದರೆ ವ್ಯಾಘ್ರನಲ್ಲೂ ಪಾಪಪ್ರಜ್ಞೆ ಎಂಬುದಿದೆ ಕೆಟ್ಟವರಲ್ಲೂ ಒಳ್ಳೆಯತನವಿದೆ ಎಂಬುದನ್ನು ಹೇಳಬಹುದು. ಆ ಪದ್ಯದಲ್ಲಿ ಕಾಡಿನ ವರ್ಣನೆ ಇದೆ. ಬರೀ ಶಾಲೆ ಮನೆ ಎರಡೇ ಪ್ರಪಂಚವಾಗಿರೋ ಮಕ್ಕಳಿಗೆ ಹೊಸ ಹಸುರಿನ ಪ್ರಪಂಚವನ್ನು ಕಣ್ಣ ಮುಂದೆ ತರಬಹುದು. ನೋಡಿ ಇರುವುದು ಒಂದೇ ಪಾಠವನ್ನು ಎಷ್ಟು ತರಹ ವಿವರಿಸಬಹುದು. ಇದರಲ್ಲಿ ಬಹಳ ದಿನ ಮಕ್ಕಳಿಗೆ ನೆನಪುಳಿಯುವ ಪಾಠ ಮತ್ತು ಶಿಕ್ಷಕ ಇವೆಲ್ಲವನ್ನೂ ಅಳವಡಿಸಿಕೊಂಡವನು. ಮತ್ತೊಂದು ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯ ನೀವು ಯಾವ ತರಗತಿಗೆ ಪಾಠ ಮಾಡುತ್ತಿದ್ದೀರಿ ಅವರ ಬುದ್ಧಿಮಟ್ಟವೇನು? ಎಂದು ಅರಿತು ಈ ಮೇಲಿನ ಹಂತದಲ್ಲಿ ಅವರಿಗೆ ಸರಿ ಹೊಂದುವ ಹಂತವನ್ನು ಆಯ್ದುಕೊಳ್ಳಬೇಕು. ಅಥವಾ ನೀವು ಅವರ ಮಟ್ಟಕ್ಕೆ ಇಳಿದು ಪಾಠ ಮಾಡಬೇಕು. ಇಲ್ಲವಾದರೆ ಎಷ್ಟೆಲ್ಲ ನಿಮ್ಮಲ್ಲಿ ಜ್ಞಾನ,ಸೃಜನಶೀಲತೆಯಿದ್ದರೂ ನಿಮ್ಮ ಪಾಠ ಬೋರು ಕಲ್ಲಿನ ಮೇಲೆ ನೀರು ಸುರಿದಂತೆ.

ಇನ್ನೂ ಶಿಕ್ಷಕ ಶಿಕ್ಷಣದ ಮಟ್ಟ ಕುಸಿಯಲು ಪಠ್ಯವೂ ಕಾರಣ. ಯಾಕೆಂದರೆ ಮಕ್ಕಳ ಬುದ್ಧಿಮಟ್ಟಕ್ಕೆ ತಕ್ಕ ಪಾಠವಿಲ್ಲದಿರುವುದು. ನೀವು ಗಮನಿಸದೇ ಇರಬಹುದು.ನಾನು ನೋಡಿದ ಪ್ರಕಾರ ಒಂದು ಸಿ.ಬಿ.ಎಸ್.ಸಿ ಪಠ್ಯಪುಸ್ತಕದಲ್ಲಿ ವಿಜ್ಞಾನದ ಪಾಠವಿದೆ. ಅದು ದ್ರವ್ಯದ ಮೂರು ರೂಪಗಳು ಮತ್ತು ಗುಣಗಳನ್ನು ಹೇಳುವ ಪಾಠ. ದ್ರವ್ಯವೆಂದರೆ ತೂಕವಿರುವ ಮತ್ತು ಸ್ಥಳವನ್ನು ಆಕ್ರಮಿಸಿಕೊಳ್ಳುವ ಗುಣ ಹೊಂದಿರುತ್ತದೆ. ಘನ ವಸ್ತುವಿನ ತೂಕ ಸ್ಥಳವನ್ನು ಆಕ್ರಮಿಸಿಕೊಳ್ಳುವುದನ್ನು ವಿವರಿಸಬಹುದು. ಇನ್ನು ದ್ರವ ವಸ್ತುವಿಗೆ ಕೂಡಾ ಒಂದು ಪಾತ್ರೆಯಲ್ಲಿ ನೀರು ಹಾಕಿಯೋ ಅದನ್ನು ಎತ್ತಲು ಹೇಳಿಯೋ ಅದರ ತೂಕ ಸ್ಥಳವನ್ನು ಆಕ್ರಮಿಸುವ ಗುಣವನ್ನು ನಿರೂಪಿಸಬಹುದು. ಆದರೆ ಅನಿಲವಸ್ತು ಬಂದರೆ ಪಾಠ ಮಾಡುವುದು ಕಷ್ಟ. ಅದ್ಯಾಕೆ ಕಷ್ಟ ?ಎನ್ನುತ್ತೀರಾ. ಪಾಠವಿರೋದು 1ನೇ ತರಗತಿ ಮಗುವಿಗೆ! ನೀವು ನಂಬದೆ ಹೋದರೆ ಒಮ್ಮೆ ಅಂಥ ಪಠ್ಯಪುಸ್ತಕವನ್ನು ನಿಮಗೆ ತೋರಿಸುತ್ತೇನೆ. ಆಗ ಶಿಕ್ಷಕ ಸುಮ್ಮನೆ ಪಾಠ ಹೇಳಿ ಪ್ರಶ್ನೋತ್ತರ ಬರೆಸಿ ಕೈತೊಳೆದುಕೊಳ್ಳುವ ಅನಿವಾರ್ಯತೆಗೆ ಮೊರೆ ಹೋಗುತ್ತಾನೆ. ಯಾಕೆಂದರೆ ಪಾಲಕರಿಗೆ ಪಾಠದ ಮನದಟ್ಟಿಗಿಂತ ಅಂಕಗಳು ಬೇಕು. ಆಡಳಿತ ಮಂಡಳಿಯವರಿಗೆ ಹೊಸ ಎಡ್ಮೀಷನ್ನುಗಳು ಬೇಕು. ಇವೆರಡೂ ಆಗದೇ ಆ ಶಿಕ್ಷಕ ಪಾಠವನ್ನು ಅರ್ಥೈಸಲು ಮುಂದುವರೆದರೇ ಕೆಲಸದಿಂದ ಎತ್ತಂಗಡಿಯಾಗುತ್ತಾನೆ.

ಶಿಕ್ಷಣದ ಮಟ್ಟ ಕುಸಿಯೋಕೆ ಇನ್ನೂ ಒಂದು ಕಾರಣವೆಂದರೆ ಮನೆಪಾಠ (ಟ್ಯೂಷನ್). ಮೊದಲಿಗೆ ಹೆಚ್ಚಿನ ಜ್ಞಾನಕ್ಕಾಗಿ ಶುರುವಾದ ಈ ಕ್ಲಾಸುಗಳು ಈಗ ಹಣ ಮಾಡುವ ದಂಧೆಯಾಗಿವೆ. ಇನ್ನೂ ಕೆಲವು ಟ್ಯೂಷನ್ ಕ್ಲಾಸುಗಳಲ್ಲಿ ಪ್ರಶ್ನೆಪತ್ರಿಕೆ ಬಹಿರಂಗಗೊಳಿಸುವ ಮಟ್ಟಕ್ಕೆ ಇಳಿದಿರುವುದು ಅಸಹ್ಯಗೇಡಿತನ. ಇತ್ತೀಚೆಗೆ ನಡೆದ ಪಿಯುಸಿ ಪ್ರಶ್ನೆಪತ್ರಿಕೆ ಬಹಿರಂಗ ಪ್ರಕರಣದಲ್ಲಿ ಕರ್ನಾಟಕದ ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳ ಹೆಸರು ಕೇಳಿ ಬಂತು. ಅಲ್ಲಿಗೆ ನಿಮ್ಮ ಮಗ ಅಥವಾ ಮಗಳು
ಸ್ವಪ್ರಯತ್ನದಿಂದ ಒಳ್ಳೆಯ ಅಂಕಗಳನ್ನು ಪಡೆದಿದ್ದರೂ ಅವರ ಮಾರ್ಗ ಯಾವುದು ಎಂಬುದರ ಬಗ್ಗೆ ಸಂಶಯ ಮೂಡುವುದು ಸಹಜ. ದೊಡ್ಡ ದೊಡ್ಡ ಬ್ಯಾನರ್ ಹಾಕಿ ಪ್ರತೀ ದಿನಪತ್ರಿಕೆಗಳ ನಡುವೆ ಕರಪತ್ರಗಳನ್ನಿಟ್ಟು ತಮ್ಮ ಕಾಲೇಜಿನ ಬಗ್ಗೆ ಬೆನ್ನು ತಟ್ಟಿಕೊಳ್ಳುವ ಶಿಕ್ಷಣ ಸಂಸ್ಥೆಗಳು ಎಂಥ ಪೀಳಿಗೆಯನ್ನು ಹುಟ್ಟು ಹಾಕುತ್ತಿವೆ ಎಂಬುದರ ಬಗ್ಗೆ ಚರ್ಚೆ ಮಾಡಬೇಕಾಗಿದೆ. ದುಡ್ಡಿನ ಕಾರಣಕ್ಕೆ ತಲೆಹಿಡುಕತನಕ್ಕೆ ಮೊರೆ ಹೋಗಿರುವ ಸಂಸ್ಥೆಗಳು ನೈತಿಕತೆಯನ್ನು ಗಂಟುಕಟ್ಟಿ ಮೂಲೆಗೆ ಎಸೆಯುತ್ತಿವೆ. ಮೊದಮೊದಲು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವಾರಕ್ಕೊಮ್ಮೆ ನೈತಿಕ ಶಿಕ್ಷಣದ ಕ್ಲಾಸು ಇರುತ್ತಿತ್ತು. ಆದರೇ ಈಗ ಸಂಸ್ಥೆಗಳೆ ನೈತಿಕ ಚೌಕಟ್ಟಿನಿಂದ ಹೊರಬಂದ ಮೇಲೆ ಅದರ ಅವಶ್ಯಕತೆ ಇರೋದು ಸಂಸ್ಥೆಯ ಆಡಳಿತ ವರ್ಗಕ್ಕೋ ಅಥವಾ ಮಕ್ಕಳಿಗೋ ಎಂಬುದರ ಪ್ರಶ್ನೆ ಹುಟ್ಟುತ್ತೆ.

ಇಷ್ಟೆಲ್ಲದರ ನಡುವೆ ಒಳ್ಳೆಯ ಶಿಕ್ಷಕರಿದ್ದಾರೆ. ಮಕ್ಕಳಿಗೆ ಗುಣಮಟ್ಟದ ಮೌಲ್ಯಾಧಾರಿತ ಶಿಕ್ಷಣ ಕೊಟ್ಟು ಒಂದು ಇಡೀ ಪೀಳಿಗೆಯ ಸರ್ವತೋಮುಖ ಬೆಳವಣಿಗೆಗಾಗಿ ತವಕಿಸೋರು ಇದ್ದಾರೆ.ಆದರೆ ಅದಕ್ಕೆ ಅಡ್ಡಿ ಬರುತ್ತಿರೋದು ಸರ್ಕಾರ. ಕಾರಣವಿಷ್ಟೆ ಸರ್ಕಾರಿ ಶಿಕ್ಷಕರ ಮೇಲೆ ಹೇರುವ ಕೆಲಸಗಳು ಒಂದೇ ಎರಡೇ?? ಅವರು ಒಂದು ವರ್ಷಕ್ಕೆ ಮಾಡುವ ಪೇಪರ್ ವರ್ಕ್ ಇದೆಯಲ್ಲಾ ಅದು ಸುಮಾರು ಹತ್ತು ತರಗತಿಗೆ ತಯಾರು ಮಾಡುವ ನೋಟ್ಸಿಗೆ ಸಮವಾಗಿರುತ್ತದೆ. ಎಲ್ಲೇ ಚುನಾವಣೆಯಾದರೆ, ಯಾವುದೋ ಪರೀಕ್ಷೆ ನಡೆದರೆ, ಸರ್ಕಾರ ಯಾವುದೋ ಪಂಗಡವನ್ನು ಮೆಚ್ಚಿಸುವ ಸಲುವಾಗಿ ಮಾಡುವ ಜಾತಿಗಣತಿ, ಜನಗಣತಿ, ದನ ಜಾನುವಾರು ಗಣತಿಗೆ ಮತ್ತೊಮ್ಮೆ ಬಳಸಿಕೊಳ್ಳುವುದು ಇದೇ ಶಿಕ್ಷಕರನ್ನು. ಇದೆಲ್ಲದರ ಮಧ್ಯೆ ಶಿಕ್ಷಕರ ಮೂಲವೃತ್ತಿಗೆ ಗಮನ ಮತ್ತು ಸಮಯ ವಿನಿಯೋಗಿಸಲು ಆಗುತ್ತಿಲ್ಲ ಎಂಬುದು ಕೂಡಾ ತಥ್ಯ. ಇದಕ್ಕೆಲ್ಲೆಕ್ಕೂ ಶಿಕ್ಷಕರು ಸಂಭಾವನೆ ಪಡೆಯುತ್ತಾರೆ ಎಂಬುದು ಸರ್ಕಾರದ ಸಮರ್ಥನೆಯಾದರೆ ಅದರಲ್ಲೂ ಒಂದು ಹುಳುಕಿದೆ. ಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ ಶಿಕ್ಷಕರಿಗೆ ಕಡಿಮೆ ಸಂಬಳವಿದೆ. ಅದಲ್ಲದೆ ಸಂಬಳ ಆಗುವುದು ಇಪ್ಪತ್ತು ಅಥವಾ ಇಪ್ಪತೈದನೇ ತಾರೀಖು. ಹತ್ತು ದಿನ ಮುಂಚೆ ಸಂಬಳ ಸಿಗುತ್ತಲ್ಲ ಎಂದು ಕೊಳ್ಳಬೇಡಿ. ಇಪ್ಪತ್ತು ದಿನ ತಡವಾಗಿ ಸಿಗುತ್ತೆ. ಅಂದರೆ ಆಗಷ್ಟ ತಿಂಗಳ ಸಂಬಳ ಸಪ್ಟಂಬರ ಒಂದರ ಬದಲು ಸಪ್ಟಂಬರ್ ಇಪ್ಪತ್ತು ಇಪ್ಪತೈದಕ್ಕೆ ಸಿಕ್ಕರೆ ಸಿಕ್ಕಿತು ಇಲ್ಲದಿದ್ದರೆ ಇನ್ನೂ ವಿಳಂಬವಾದರೂ ಆದೀತು. ಒಂದನೇ ತಾರೀಖೇ ಸಂಬಳವಾದ ಉದಾಹರಣೆಯೇ ಇಲ್ಲ. ವ್ಯಾಪಾರೀಕರಣವಾಗಬಾರದು ಎಂದು ಹೇಳಿ ಈಗ ನಾನೇ ದುಡ್ಡಿನ ವಿಷಯ ಮಾತಾಡಿದೆ ಅನ್ನುತ್ತೀರಾ.

ದುಡ್ಡೆ ಎಲ್ಲಾ ಅಲ್ಲ ನಿಜ ದುಡ್ಡಿಲ್ಲದೇ ಏನು ನಡೆಯೊಲ್ಲ. ಮಧ್ಯಮ ವರ್ಗದವರ ಪಾಡಂತು ದೇವರೇ ಬಲ್ಲ. ಈ ಕಾರಣಕ್ಕೂ ಪಾಠದ ವಿಷಯದಲ್ಲಿ ಕೆಲವು ಶಿಕ್ಷಕರು ಅಸಡ್ಡೆ ತೋರುತ್ತಿರಬಹುದು.

ಶಿಕ್ಷಣದ ಗುಣಮಟ್ಟ ಕುಸಿಯಲು ಬರೀ ಶಿಕ್ಷಕ, ಸಂಸ್ಥೆ, ಸರ್ಕಾರ ಕಾರಣವಲ್ಲ. ಪಾಲಕರೂ ಅದಕ್ಕೆ ಕಾರಣ ಹೆಚ್ಚು ಅಂಕಗಳನ್ನು ಪಡೆಯಬೇಕು ಎಂಬ ಹಪಹಪಿಯಲ್ಲಿ ಮಕ್ಕಳ ಮೇಲೆ ಹೇರುತ್ತಿರುವ ಒತ್ತಡ ಅಷ್ಟಿಷ್ಟಲ್ಲ. ಅವರಿಗೆ ಒಣಪ್ರತಿಷ್ಟೆಯೇ ಮುಖ್ಯ. ಒಂದು ಜಾಣ್ನುಡಿಯ ಪ್ರಕಾರ ತಂದೆತಾಯಿಗಳು ಮಕ್ಕಳಿಗೆ ಅಮೂಲ್ಯವಾದ ವಸ್ತುಗಳ ಬದಲು ಮೌಲ್ಯಗಳನ್ನು ಕೊಟ್ಟು ಹೋಗಬೇಕು. there is lot of difference between values and valuable. 99 ಅಂಕ ಪಡೆದ ಮಗನು ಅನುಭವಿಸಿದ ಒತ್ತಡ ಪರಿಶ್ರಮ 1 ಅಂಕ ಪಡೆಯದೇ ಹೋದಾ ಎಂಬ ಪಾಲಕರ ಹತಾಶೆ ನಿರಾಶೆಗಳಲ್ಲಿ ಮುಚ್ಚಿ ಹೋದರೆ ದುರಂತವೇ ಸರಿ.ಒಂದು ಸ್ಪಂಜಿನ ವಸ್ತುವನ್ನು ಅರ್ಧ ಗಂಟೆ ನೀರಲ್ಲಿಟ್ಟರೂ ಒಂದೇ ಕ್ಷಣ ಅದ್ದಿ ಹೊರತೆಗೆದರೂ ಅದು ಹಿಡಿದುಕೊಳ್ಳುವ ನೀರಿನಲ್ಲಿ ವ್ಯತ್ಯಾಸವಿರೊಲ್ಲಾ. ಅದೇ ರೀತಿ ಮಕ್ಕಳ ಬುದ್ಧಿಮಟ್ಟವನ್ನು ನೀವು ಶಿಕ್ಷಣ ಸಂಸ್ಥೆಗೆ ಸುರಿಯುವ ಹಣದಿಂದ ಹೆಚ್ಚಿಸೋಕೆ ಸಾಧ್ಯವಿಲ್ಲ. ತ್ರೀ ಇಡಿಯಟ್ಸ್ ಚಿತ್ರದ ಒಂದು ಸಂಭಾಷಣೆ ಇದೆ “ಚಾಬೂಕ್ ಕೇ ಢರ್ ಸೆ ಸರ್ಕಸ್ ಕೆ ಶೇರ್ ಭೀ ಉಚಡ್ ಕೆ ಕುರ್ಸಿ ಪರ್ ಬೈಟ್ ಜಾಯೇಗಾ ಉಸಕೋ ವೆಲ್ ಟ್ರೇನ್ಡ್ ಕೆಹೆತೆ ಹೈ ವೆಲ್ ಎಜುಕೆಟೆಡ್ ನಹಿ (ಚಾವಟಿ ಏಟಿನ ಭಯಕ್ಕೆ ಸರ್ಕಸ್ಸಿನ ಸಿಂಹವೂ ಜಿಗಿದು ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತೆ. ಅದು ವೆಲ್ ಟ್ರೆನ್ಡ್ ವೆಲ್ ಎಜುಕೇಟೆಡ್ ಅಲ್ಲ.)” ಮಕ್ಕಳು ಕಲಿತಿದ್ದನ್ನು ಒರೆಗೆ ಹಚ್ಚಿ ಅದರಿಂದ ಹೊಸ ಸಂಶೋಧನೆಗಳು ನಡೆಯದೇ ಹೋದರೆ ನಾವೊಂದು ವೆಲ್ ಟ್ರೆನ್ಡ್ ಕುರಿಹಿಂಡನ್ನು ತಯಾರು ಮಾಡುತ್ತಿದ್ದೇವೆ.ಇದರಲ್ಲಿ ಶಿಕ್ಷಕ, ಸಂಸ್ಥೆ, ಪಾಲಕರು,ಸರ್ಕಾರ ಎಲ್ಲರೂ ಹೊಣೆಗಾರರು.

ಸಂಬಳವನ್ನು ಪಡೆದರೂ ಸಂಬಳಕ್ಕಾಗಿ ದುಡಿಯದ ಎಲ್ಲಾ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಶುಭಾಷಯಗಳು. ಅಕ್ಷರ ತಿದ್ದಲೂ ಆಗದ ನನಗೆ ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಪ್ರಶ್ನಿಸುವ ಮಟ್ಟಕ್ಕೆ ಬೆಳೆಸಿದ ನನ್ನ ಜೀವನದಲ್ಲಿ ಬಂದುಹೋದ ಎಲ್ಲಾ ಶಿಕ್ಷಕರಿಗೂ ನಾನು ಋಣಿಯಾಗಿದ್ದೇನೆ.
-ರಾಹುಲ್ ಹಜಾರೆ

Facebook ಕಾಮೆಂಟ್ಸ್

ಲೇಖಕರ ಕುರಿತು

Rahul Hajare

ಬಾಹುಬಲಿ ತಾಂತ್ರಿಕ ವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯನಿಕೇಶನ್ ಇಂಜನೀಯರಿಂಗ್ ಪದವಿ
ಸದ್ಯಕ್ಕೆ ಮಂಗಳೂರಿನ ಬ್ಯಾಂಕ್'ನಲ್ಲಿ ಉದ್ಯೋಗ ಕತೆ,ಲೇಖನ, ಕವಿತೆ ಬರೆಯುವುದು ಪ್ರವೃತ್ತಿ. ಚೆಸ್,ಕ್ರಿಕೆಟ್ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!