ಅಂಕಣ

ಶರಣು ಸಿದ್ಧಿವಿನಾಯಕ

ಆನೆಯ ಆನನ ಹೊತ್ತಿರುವ, ಲಂಬೋದರನಾದ, ಉದ್ದನೆಯ ವಕ್ರವಾದ ಸೊಂಡಿಲಿರುವ, ಮೊರದಗಲದ ಕಿವಿಯ, ಕೋರೆ ದಾಡೆಯ, ಚತುರ್ಭುಜಗಳಲ್ಲಿ ಪಾಶಅಂಕುಶಲಡ್ಡು ಧರಿಸಿರುವ, ದೀರ್ಘ ದೇಹ ಹೊ೦ದಿರುವ ಪ್ರಥಮ ವಂದಿತ, ಆದಿ ಪೂಜಿತ, ಬುದ್ಧಿ ಪ್ರದಾಯಕ, ಸಿದ್ಧಿ ದಾಯಕ, ಗಣಗಳ ಅಧೀಶ್ವರ, ಚಿಣ್ಣರ ಪ್ರೀತಿಯ, ಮೋದಕಗರಿಕೆ ಪ್ರಿಯ, ವಿಘ್ನ ಹರ ಎಲ್ಲವೂ ಆದ ಶ್ರೀ ಗಣೇಶನ ಚೌತಿ ಉತ್ಸವದ ಸಡಗರದಲ್ಲಿ ನಾಡಿಗೆ ನಾಡೇ ಮಿಂದೇಳುತ್ತಿದೆ. ಗಣೇಶನು ಮಂಗಳಕಾರಕವೂ ವಿಘ್ನ  ನಿವಾರಕನೂ ಆಗಿದ್ದಾನೆ ಮತ್ತು ವಿದ್ಯಾಬುದ್ಧಿಯ ಅಭೀಷ್ಟ ಪ್ರದಾಯಕನೂ ಆಗಿದ್ದಾನೆ.ಭಾದ್ರಪದ ಮಾಸ ಶುಕ್ಲ ಪಕ್ಷದ ಚತುರ್ಥೀ ತಿಥಿಯಂದು ಭಗವಾನ್ ಗಣೇಶನ ಅವತಾರವಾಯಿತು. ಗಣೇಶ ಪುರಾಣದ ಎರಡನೇ ಅಧ್ಯಾಯದಲ್ಲಿ ಇದರ ಉಲ್ಲೇಖವಿದೆ. ಇವನು ವಿದ್ಯೆ, ಬುದ್ಧಿ,ಸಂಪತ್ತು ಮತ್ತು ಜ್ಞಾನದ ಅಧಿದೇವತೆಯೂ ಹೌದುಗಣೇಶನ ಕೈಯಲ್ಲಿರುವ ಆಯುಧಗಳನ್ನು ಪರಿಗಣಿಸಿದರೆ, ಅಂಕುಶ ಎಂಬುದು ಅಹಂ ನಿಯಂತ್ರಣ ಪ್ರತೀಕ. ಅಷ್ಟು ಬೃಹತ್ತಾದ ಆನೆಯನ್ನು ಈ ಪುಟ್ಟ ಅಂಕುಶವೊಂದರಿಂದ ನಿಯಂತ್ರಿಸಬಹುದಲ್ಲವೇ? ಅದೇ ರೀತಿ ಮನುಷ್ಯನ ಅಹಂ ಎಂಬುದು ಯಾವ ಪ್ರಮಾಣಕ್ಕೂ ಬೆಳೆಯಬಹುದು. ಅದನ್ನು ನಿಯಂತ್ರಿಸಲು ಈ ಅಂಕುಶವೆಂಬ, ಛಲ,ಮನೋಬಲ ಅಥವಾ ಇಚ್ಛಾಶಕ್ತಿ ಸಾಕು. ಇನ್ನು ಪಾಶ ಎಂಬುದು ಹುಚ್ಚೆದ್ದ ಮನಸ್ಸಿಗೆ ಕಡಿವಾಣ ಹಾಕುವ ಸಂಕೇತ. ಹುಚ್ಚುಗುದುರೆಯಂತೆ ಮಾನವನ ಮನಸ್ಸು ಓಡಾಡುತ್ತಿರುತ್ತದೆ,ಓಲಾಡುತ್ತಿರುತ್ತದೆ. ಅದನ್ನು ಹಗ್ಗ ಕಟ್ಟಿ, ಆಧ್ಯಾತ್ಮದತ್ತ ಕೇಂದ್ರೀಕರಿಸುವುದರಿಂದ, ನಿಯಂತ್ರಿಸುವುದರಿಂದ ಮಾನಸಿಕ ನೆಮ್ಮದಿ ಸದಾ ಸಾಧ್ಯ ಎಂದು ಬಿಂಬಿಸುತ್ತದೆ ಈ ಆಯುಧ. ಇನ್ನು ಮೊರದಗಲದ ಕಿವಿ. ಧಾನ್ಯವನ್ನು ಧೂಳಿನ ಕಣಗಳಿಂದ ಬೇರ್ಪಡಿಸಲು ಮೊರವನ್ನು ಬಳಸುವ ಮಾದರಿಯಲ್ಲಿ, ಸತ್ಯವನ್ನು (ಬ್ರಹ್ಮ) ಅಸತ್ಯದಿಂದ (ಮಾಯೆ) ಬೇರ್ಪಡಿಸಲು ವಿವೇಕವನ್ನು ಬಳಸಬೇಕು. ಇದು ಗಣಪತಿಯ ಅಗಲ ಕಿವಿಯ ಸಂದೇಶ. ಅಥವಾ ಬ್ರಹ್ಮಸತ್ಯವನ್ನು ಮಾಯೆಯಿಂದ ಬೇರ್ಪಡಿಸಲು ಪುಣ್ಯಶ್ಲೋಕ ಶ್ರವಣದಿಂದಲೂ ಸಾಧ್ಯ ಎಂಬುದರ ಸಂಕೇತವೂ ಇದಾಗಿರುತ್ತದೆ.

ಪ್ರತಿಯೊಂದು ಮಂಗಳ ಕಾರ್ಯದ ಆರಂಭದಲ್ಲಿ ಶ್ರೀಗಣೇಶನ ಆವಾಹನೆ, ಸಂಸ್ಥಾಪನೆ ಮತ್ತು ಪೂಜೆ ಮಾಡಲಾಗುತ್ತದೆ. ಪರಮತತ್ವ ಓಂಕಾರದ ಸಾಕ್ಷಾತ್ ಸ್ವರೂಪ, ಋದ್ಧಿಸಿದ್ಧಿ ದಾಯಕ ಸಚ್ಚಿದಾನಂದ ಸ್ವರೂಪಿ ಶ್ರೀ ಗಣೇಶನ ಸ್ತುತಿಮಾತ್ರದಿಂದಲೇ ಆತ್ಮವು ಆಧ್ಯಾತ್ಮ ಸುಧಾ ಸಿಂಧುವಿನಲ್ಲಿ ಸ್ನಾನ ಮಾಡಿ ಪಾವನವಾದ ಅನುಭೂತಿಯಾಗುತ್ತದೆ. ಶ್ರೀಗಣೇಶನ ಪುಣ್ಯ ಸ್ಮರಣೆಯು ಜೀವನದಲ್ಲಿ ಆತ್ಮಜ್ಞಾನದ ಮಾರ್ಗವನ್ನು ಸುಗಮವಾಗಿಸುತ್ತದೆ. ಗಣೇಶನ ಮಾನವರೂಪವು ತ್ವಂನ ಪ್ರಾತಿನಿಧಿಕ ರೂಪ ಮತ್ತು ಆನೆಮೊಗವು ತತ್ನ ರೂಪ. ಇವೆರಡನ್ನೂ ಸೇರಿಸಿದರೆ ತತ್ ತ್ವಂ ಎಂದೂ, (ತತ್ ಎಂದರೆ ಬ್ರಹ್ಮ, ಆತ್ಮ ಎಂದೂ ಅರ್ಥೈಸಬಹುದು) ನೀನೇ ಸರ್ವಲೋಕೈಕ ನಾಯಕ ಎಂಬರ್ಥದ ತತ್ತ್ವಮಸಿಎಂಬುದು ಮುದ್ಗಲ ಪುರಾಣದಲ್ಲಿ ಉಲ್ಲೇಖಿತವಾದ ವಿಷಯ. ಅದನ್ನು ಹೀಗೂ ವ್ಯಾಖ್ಯಾನಿಸಬಹುದು. ಗಣಪತಿಯ ತಲೆಯು ಆತ್ಮದ ಪ್ರತೀಕವಾದರೆ, ದೇಹವು ಭೌತಿಕ ಇರುವಿಕೆಯ ತತ್ವವಾಗಿರುವ ಮಾಯೆಯ ಪ್ರತೀಕ. ಶ್ರೀ ಗಣೇಶನಿಗೂ ಹಲವು ನಾಮಗಳಿವೆ. ಗಜಾನನ, ವಿನಾಯಕ, ಗಣೇಶ, ಗಣಪತಿ, ಲಂಬೋದರ, ಗಣೇಶ್ವರ, ಗೌರಿಪುತ್ರ, ಸ್ಕಂದಾಗ್ರಜ, ದಶಾಧ್ಯಕ್ಷ, ಗಣಾಧ್ಯಕ್ಷ, ಇಂದ್ರಶ್ರೀ, ಏಕದಂತ, ಸೂರ್ಯಕರ್ಣ,ಹೇರಂಬ, ಪಾಶಾಂಕುಶಧರ, ನಿರಂಜನ, ವರದ, ಸಿದ್ಧಿದಾಯಕ, ಸುಭಗ, ಕಾಂತ, ವಕ್ರತುಂಡ ಮುಂತಾದ 108 ಹೆಸರುಗಳಿಂದ ಶ್ರೀಗಣೇಶನನ್ನು ಸ್ತುತಿಸಲಾಗುತ್ತದೆ.

 ಗಣಪತಿ ದೇವರ ಸೊ೦ಡಿಲು ಎಡಕ್ಕೆ ತಿರುಗಿರಬಹುದು. ಇಲ್ಲವೇ ಬಲಕ್ಕೆ ತಿರುಗಿರಬಹುದು ಅಥವಾ ಮಧ್ಯದಲ್ಲಿಯೇ ಇದ್ದು ಊಧ್ರ್ವಮುಖವಾಗಿರಬಹುದು. ಗಣಪನ ಸೊಂಡಿಲು ಎಡಕ್ಕೆ ತಿರುಗಿದ್ದರೆ ಎಡಮುರಿ ಗಣಪತಿಯೆಂದೂ, ಬಲಕ್ಕೆ ತಿರುಗಿದ್ದರೆ ಬಲಮುರಿ ಗಣಪತಿಯೆಂದೂ, ಮಧ್ಯದಲ್ಲಿದ್ದರೆ ಊಧ್ರ್ವ ಮೂಲ ಗಣಪತಿಯೆನ್ನುತ್ತಾರೆಆನೆಗೆ ಸೊಂಡಿಲೆಂದರೆ, ಉಸಿರಾಡುವ ಮೂಗು ಹಾಗೂ ನೀರನ್ನು ಹೀರಿ ಕುಡಿಯುವ ಹಾಗೂ ಹೀರಿದ ನೀರನ್ನು ಹೊರ ಬಿಡುವ ಸಾಧನವೂ ಆಗಿರುವುದು ಪ್ರಾಣಾಯಾಮದ ಜಲನೇತಿಯನ್ನು ಸಂಕೇತಿಸುತ್ತದೆ. ಹೀಗೆ ಅತ್ಯಂತ ಗಹನತತ್ವಗಳನ್ನು ತನ್ನ ಆಕೃತಿಯ ಒಂದೊಂದು ಭಾಗದಲ್ಲಿಯೂ ಹೊಂದಿರುವ ಗಣಪತಿ ಆಕಾರ, ಅನೇಕ ಅರ್ಥಗರ್ಭಿತ ಆಯಾಮಗಳಿಗೆ ಆಸ್ಪದ ನೀಡುತ್ತದೆ.

 ಬಲಮುರಿ ಗಣಪತಿ

ಎಡಮುರಿ ಗಣಪತಿಗಿಂತ ಬಲಮುರಿ ಗಣಪತಿಯೇ ವಿಶೇಷವೆಂದು ಹೇಳುವುದುಂಟು. ಇದಕ್ಕೆ ಕಾರಣ. ಬಲಮುರಿ ಗಣಪತಿ ನಮ್ಮ ಜ್ಞಾನ ಸಾಧನೆಯ ವಿಘ್ನಗಳನ್ನು ನಿವಾರಿಸಿ ಬದುಕಿನ ಹಾದಿಯನ್ನು ಸುಗಮವಾಗಿಸುತ್ತಾನೆಂಬ ನಂಬಿಕೆಯಿದೆ. ಸೊಂಡಿಲು ಬಲಗಡೆಗೆ ತಿರುಗಿದ್ದರೆ ದಕ್ಷಿಣಮೂರ್ತಿ ಎಂದು ಹೇಳಲಾಗುತ್ತದೆ. ದಕ್ಷಿಣ ದಿಕ್ಕು ಅಥವಾ ಬಲಬದಿಯು ಸೂರ್ಯನಾಡಿಗೆ ಸಂಬಂಧಪಟ್ಟಿದ್ದು, ಈ ದಿಕ್ಕು ಯಮಲೋಕದ ಕಡೆಗೆ ಕರೆದೊಯ್ಯುವುದಾಗಿದೆ. ಯಾರು ಯಮಲೋಕದ ದಿಕ್ಕನ್ನು ಎದುರಿಸಬಲ್ಲರೋ ಅವರು ಬಹಳ ಶಕ್ತಿಶಾಲಿಯಾಗಿರುತ್ತಾರೆ. ಸೂರ್ಯನಾಡಿಯ ಚಲನೆಯಲ್ಲಿರುವವನು ತೇಜಸ್ವಿಯಾಗಿರುತ್ತಾರೆ. ಸಾತ್ವಿಕತೆ ಹೆಚ್ಚುತ್ತದೆ. ದಕ್ಷಿಣ ದಿಕ್ಕಿನಿಂದ ಬರುವ ಯಾವುದೇ ಕೆಲಸಗಳಿಗೂ ತೊಂದರೆಯಾಗುವುದಿಲ್ಲ ಎಂದು ಹೇಳುತ್ತಾರೆಇವೆರಡೂ ಅರ್ಥಗಳಲ್ಲಿ ಬಲಗಡೆಗೆ ಸೊಂಡಿಲಿರುವ ಗಣಪತಿಯನ್ನು ಜಾಗೃತಗಣಪತಿ ಎಂದು ಹೇಳುತ್ತಾರೆ. ಕೆಲವು ಶಾಸ್ತ್ರಗಳು ಬಲಮುರಿ ಗಣಪತಿಯನ್ನು ಪ್ರತಿನಿತ್ಯ ಪೂಜಿಸಲು ಯೋಗ್ಯವಲ್ಲ ಎಂದು ಹೇಳುತ್ತದೆಹೀಗಾಗಿ ಹಬ್ಬ,ಉತ್ಸವದ ಸ೦ದರ್ಭಗಳಲ್ಲಿ, ದೇವಾಲಯಗಳಲ್ಲಿ  ಮಾತ್ರ ಇ೦ತಹ ವಿಗ್ರಹಗಳನ್ನು  ಸಾಮಾನ್ಯವಾಗಿ ಪೂಜಿಸುತ್ತಾರೆ.

 ಎಡಮುರಿ ಗಣಪತಿ

ಸೊಂಡಿಲಿನ ಪ್ರಾರಂಭದ ತಿರುವು ಎಡಗಡೆಗೆ ಇರುವ ಮೂರ್ತಿ ಎಂದರೆ ವಾಮಮುಖಿ ಮೂರ್ತಿಯನ್ನು ಎಡಮುರಿ ಗಣಪತಿಯೆಂದು ಕರೆಯಲಾಗುತ್ತದೆ. ವಾಮ ಎಂದರೆ ಎಡಬದಿ ಅಥವಾ ಉತ್ತರ ದಿಕ್ಕು. ಎಡಬದಿಯಲ್ಲಿ ಚಂದ್ರನಾಡಿಯಿರುತ್ತದೆ ಇದು ಶೀತಲತೆಯನ್ನು ಕೊಡುತ್ತದೆ. ಹಾಗೆಯೇ ಉತ್ತರ ದಿಕ್ಕು ಆಧ್ಯಾತ್ಮಕ್ಕೆ ಪೂರಕವಾಗುತ್ತದೆ ಎಂದು ಹೇಳಲಾಗುತ್ತದೆ. ಎಡಮುರಿ ಗಣಪತಿಯು ಶಾಂತ ಹಾಗೂ ಆನಂದತೆಯನ್ನು ಸೂಚಿಸುವುದರಿಂದ ಎಡಮುರಿ ಗಣಪತಿಯು ದಿನನಿತ್ಯ ಪೂಜೆಗೆ ಯೋಗ್ಯವಾಗಿದೆ ಎಂದು ಹೇಳಲಾಗುತ್ತದೆ.

ಬಾದ್ರಪದ ಮಾಸದಲ್ಲಿ ಚೌತಿಯಿ೦ದ ತೊಡಗಿ ಗಣಪತಿಯನ್ನು ಒಂದು ದಿನದಿಂದ ಎರಡು, ನಾಲ್ಕು, ಐದುದಿನ, ಅಂತನ ಚತುರ್ದಶಿವರೆಗೆ ಅಥವಾ ತಿಂಗಳ ಪರ್ಯಂತ ಆರಾಧಿಸಲಾಗುತ್ತದೆ.ಈ ಸಮಯದಲ್ಲಿ 21 ರೀತಿಯ ಭಕ್ಷ್ಯ ಅಥವಾ 21 ಮೋದಕ ನೈವೇದ್ಯ ಮಾಡಲಾಗುತ್ತದೆ. ಗಣಪತಿ ಓಂಕಾರದ ಪ್ರತೀಕ. ಗಣಪ ಗರಿಕೆ ಪ್ರಿಯ. ತುಳಸಿ ಅವನಿಗೆ ನಿಷಿದ್ಧ.  ಗಣಪ ಯೋಗಿಗಳಿಗೆ ಪರಬ್ರಹ್ಮ, ನರ್ತಕರಿಗೆ ನಾಟ್ಯಾಚಾರ್ಯ, ವಿದ್ಯಾರ್ಥಿಗಳಿಗೆ ವಿದ್ಯಾಗಣಪತಿ, ಮಕ್ಕಳಿಗೆ ಬಾಲಗಣಪತಿ, ಸರ್ವರಿಗೂ ವಿಘ್ನನಿವಾರಕನಾಗಿ ಸರ್ವಸಿದ್ಧಿ ಪ್ರದಾಯಕನಾಗಿದ್ದಾನೆ. ಗಣೇಶ ಚತುರ್ಥಿಯ೦ದು ಎಲ್ಲಾ ದೇವಸ್ಥಾನಗಳಲ್ಲೂ ಸ೦ಭ್ರಮಾಚರಣೆಯಿರುತ್ತದೆ. ದೇಶದ ಪ್ರಸಿದ್ಧ ಹನ್ನೆರಡು ಪುರಾತನ ಗಣಪತಿ ದೇವಾಲಯಗಳು ಇ೦ತಿವೆ.

 

1. ಶ್ರೀ ಸಿದ್ಧಿವಿನಾಯಕ ದೇಗುಲ ಮು೦ಬೈ, ಮಹಾರಾಷ್ಟ್ರ

2. ತ್ರಿನೇತ್ರ ಗಣೇಶ ದೇವಾಲಯ, ರಾಜಸ್ಥಾನ

3. ಶ್ರೀ ಮಧೂರು ಮಹಾಗಣಪತಿ ದೇವಸ್ಥಾನ, ಕಾಸರಗೋಡು, ಕೇರಳ.

4.ಶ್ರೀ ಗಣೇಶ ಟೊಕ್ , ಸಿಕ್ಕೀ೦

5. ದೊಡ್ಡ ಗಣಪತಿ ದೇಗುಲ ಬೆ೦ಗಳೂರು, ಕರ್ನಾಟಕ.

6.ಗಣಪತ್ಯಾರ್ ದೇವಾಲಯ, ಕಾಶ್ಮೀರ

7.ಖಾಡೆ ಗಣೇಶ್ ಜಿ ದೇಗುಲ , ರಾಜಸ್ಥಾನ

8. ಮೋತಿ ದೂ೦ಗ್ರಿ ಗಣಪತಿ ದೇವಾಲಯ, ಜೈಪುರ

9. ಸಾಸಿವೆ ಕಾಳು ಮತ್ತು ಕಡಲೆಕಾಳು ಗಣೇಶ ದೇಗುಲ ಹ೦ಪಿ, ಕರ್ನಾಟಕ.

10. ಶ್ರೀಮ೦ತ ದಗ್ದುಸೇತು ಹಲವಾಯಿ ಗಣಪತಿ ದೇವಳ ಪುಣೆ, ಮಹಾರಾಷ್ಟ್ರ.

11. ಕನಿಪಾಕ೦ ವಿನಾಯಕ ದೇವಾಲಯ ಚಿತ್ತೂರು, ಆ೦ಧ್ರಪ್ರದೇಶ.

12. ಮನಕುಲ  ವಿನಾಯಕ ದೇಗುಲ ಪೊ೦ಡಿಚ್ಚೇರಿ, ತಮಿಳುನಾಡು.

 ಭಾರತದಲ್ಲಿ ಗಣಪನಿಲ್ಲದ ಊರಿಲ್ಲ. ಮಾತ್ರವಲ್ಲದೆ ಆದ ವಿಶ್ವವಂದ್ಯನೂ ಹೌದು. ಚೀನಾ, ಜಪಾನ್,ಕಾಂಬೋಡಿಯಾ, ನೇಪಾಳ, ಶ್ರೀಲಂಕಾ ಮುಂತಾದ ಹಲವು ದೇಶಗಳಲ್ಲೂ ಆರಾಧನೆಗೊಳ್ಳುತ್ತಿದ್ದಾನೆ. ಇಂದು ಗಣೇಶ ಯಾವುದೇ ಒಂದು ವಿಶಿಷ್ಟ ವರ್ಗ ಅಥವಾ ಪ್ರದೇಶದ ದೇವತೆಯಾಗಿರದೆ ಸಕಲ ಮತ, ಸಕಲ ದೇಶದವರೂ ಪೂಜಿಸಲ್ಪಡುವ ದೇವನಾಗಿದ್ದಾನೆಶ್ರೀಲಂಕಾದ ಕಟರ್ ಎಂಬಲ್ಲಿ ಗಣಪತಿಯನ್ನು ಹಿಂದು, ಮುಸ್ಲಿಂ, ಕ್ರೈಸ್ತರೆಲ್ಲರೂ ಪೂಜಿಸುತ್ತಾರೆ. ಗುಜರಾತಿನ ಜೈನ ದೇವಾಯದಲ್ಲಿ ಗಣಪತಿಯ ವಿಗ್ರಹಗಳನ್ನು ಕಾಣಬಹುದು. ಮಹಾರಾಷ್ಟ್ರ, ಆಂಧ್ರ,ತಮಿಳುನಾಡು, ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಲಕ್ಷಾಂತರ ದೇಗುಲಗಳಿವೆ. ಸಾಮ್ರಾಟ್ ಅಶೋಕನ ಮಗಳು ಚಾರುಮತಿ ನೇಪಾಳದಲ್ಲಿ ಗಣಪತಿ ದೇವಾಲಯ ಕಟ್ಟಿಸಿದ್ದಾಳೆ.ಬದರಿ ಹತ್ತಿರ ಮಾನಾ ಎಂಬಲ್ಲಿ ವ್ಯಾಸ ಗುಹೆಯ ಹತ್ತಿರ ಗಣಪತಿ ಮಂದಿರವೂ ಇದೆ. ಗಣಪತಿಯನ್ನು ಏಕದಂತ, ಚತುರ್ಭುಜ, ಸಂಕಷ್ಟಹರ, ವಿಚ್ಚಿಷ್ಠ, ವಿತ್ತಿಷ್ಟ, ಬಲಮುರಿ, ಎಡಮುರಿ ಹೀಗೆ ವಿವಿಧ ರೂಪದಲ್ಲಿ ಆರಾಧಿಸಲಾಗುತ್ತದೆ. ಬಲಮರಿ ಗಣಪ ಜಾಗೃತ ಗಣಪ, ಎಡಮುರಿ ಗಣಪ ಅಧ್ಯಾತ್ಮಕ್ಕೆ ಪೂರಕ ಮತ್ತು ಆನಂದದಾಯಕ, ವಿಚ್ಛಿಷ್ಠ ಗಣಪ ಶುಭದಾಯಕ, ವಿತ್ತಿಷ್ಠ ಗಣಪ ಕಾರ್ಯ ಸಿದ್ಧಿಯನ್ನುಂಟುಮಾಡುತ್ತಾನೆ. ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಇಂತಹ ಗಣಪತಿ ನಮ್ಮ ಸಕಲ ಸಾಧನೆಯ ವಿಘ್ನಗಳನ್ನು ನಿವಾರಿಸಿ ಬದುಕಿನ ಹಾದಿಯನ್ನು ಸುಗಮವಾಗುವಂತೆ ಮಾಡಲೆಂದು ಪ್ರಾರ್ಥಿಸೋಣ.

ಚಿತ್ರ: ವಸಂತ್ ಬಂಟಕಲ್

Facebook ಕಾಮೆಂಟ್ಸ್

ಲೇಖಕರ ಕುರಿತು

Shylaja Kekanaje

ಶೈಲಜಾ ಕೇಕಣಾಜೆ ಮೂಲತಃ ದಕ್ಷಿಣ ಕನ್ನಡದ ವಿಟ್ಲದವರು. ಬಿ .ಇ. ಪದವೀಧರೆಯಾಗಿದ್ದು ಸದ್ಯ ಬೆಂಗಳೂರು ವಾಸಿ. ಲೇಖನ, ಕವನಗಳ ರಚನೆಯಲ್ಲಿ ಹವ್ಯಾಸಿ. ಅದರಲ್ಲೂ ಛಂದೋಬದ್ದ ಕವನಗಳನ್ನು ರಚಿಸುವ ತುಡಿತ. ಮಕ್ಕಳ ಪಾಕ್ಷಿಕ ಬಾಲಮಂಗಳದಲ್ಲೊಂದು ಸರಣಿ ಲೇಖನ ಯಶಸ್ವಿಯಾಗಿ ಮೂಡಿ ಬರುತ್ತಾ ಇದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!