ಇಲ್ಲಿ ಹನಿಹನಿ ನೀರಿಲ್ಲದೆ ಬರದ ಹಾಹಾಕಾರ…
ಅಲ್ಲಿ ಹನಿಹನಿಯಾಗಿ ಹರಿದ ರಕ್ತದ ಹಿಂಸಾಚಾರ !
ಬರಡು ನೆಲದಲ್ಲಿ, ನೀರ ಸೆಲೆ ಕಾಣದೆ ಕಂಗಾಲಾದ ರೈತನಿಲ್ಲಿ…
ಕೊರೆವ ಛಳಿಯಲ್ಲಿ, ಹಿಮದ ನೆರಳಲ್ಲಿ ನಿದ್ರಿಸದ ಸೈನಿಕನಲ್ಲಿ…!
ಬರಿದೆ ಮೋಡವ ಕಂಡು ಬಾರದ ಮಳೆಯ ಶಪಿಸಿ,
ಹಸಿದ ಮಕ್ಕಳ ನೆನೆದು ಬಡತನದ ಬೇಗೆಯಲಿ,
ಬದುಕುವ ಬಗೆ ಕಾಣದೆ ಕೊರಗುವರೆಲ್ಲೋ…
ನಾಡ ಋಣವಿದು ಎಂದು ಕರ್ತವ್ಯಕೆ ಓಗೊಟ್ಟು,
ಗಡಿಯ ರಕ್ಷಿಸ ಹೊರಟ ತನ್ನ ಕಂದನ ನೆನೆದು,
ಬದುಕಿ ಬಂದರೆ ಸಾಕೆಂದು ಕಾಯುವವರಿನ್ನೆಲ್ಲೋ…!
ತಮ್ಮ ಸ್ವಾರ್ಥದಿ ಬದುಕಿ ಲೋಕಹಿತವನೆ ಮೀರಿ,
ಲೋಭಮೋಹದಿ ಮೆರೆದು ನೆಲ-ಜಲದ ನೆಪದಲ್ಲಿ,
ಮಾನವೀಯತೆ ಮರೆತು ತಮ್ಮಲ್ಲೇ ಹೊಡೆದಾಡಿ,
ಘರ್ಜಿಸುತ ಘರ್ಷಿಸುವ ತನ್ನ ಮಕ್ಕಳ ನೆನೆದು,
ಅಳುತಿಹಳು ಕನ್ನಡಾಂಬೆ, ನಲುಗಿಹಳು ಭಾರತಾಂಬೆ….!
ಚಿತ್ರ ಕೃಪೆ: ದಿ ಲಾಜಿಕಲ್ ಇಂಡಿಯನ್