ಪ್ರಚಲಿತ

ರಾಫೆಲ್ ಒಪ್ಪಂದ- ಏಕ್ ಮಾರ್ ಚಾರ್ ತುಕಡಾ!

ಹದಿನಾರು ವರ್ಷಗಳ ಹಿಂದೆ ಭಾರತೀಯ ವಾಯು ಸೇನೆ ತಮ್ಮಲ್ಲಿರುವ ಮಿಗ್ ವಿಮಾನಗಳು ಹಳೆಯದಾಗಿವೆ. ಯುದ್ಧಕ್ಕೆ ಸಜ್ಜಾಗಿರಲು ಹೊಸ ತಂತ್ರಜ್ಞಾನವುಳ್ಳ ಯುದ್ಧ ವಿಮಾನಗಳ ಅವಶ್ಯಕತೆ ಇದೆ ಎಂದಿತ್ತು. ಹದಿನಾರು ವರ್ಷಗಳಿಂದ ಮೂಲೆಯಲ್ಲಿ ಬಿದ್ದಿದ್ದ ಯುದ್ಧ ವಿಮಾನದ ಖರೀದಿ ವಿಚಾರ ಕೊನೆಗೂ ಶುಕ್ರವಾರ ಶುಕ್ರದೆಸೆ ಕಂಡಿದೆ. ರಾಫೆಲ್ ಯುದ್ಧ ವಿಮಾನದ ಒಪ್ಪಂದವು, ಮೋದಿ ಫ್ರಾನ್ಸ್ಗೆ ಯಾಕೆ ಹೋಗಿದ್ದರು? ಇಷ್ಟು ವರ್ಷ ಆಗದ ಯುದ್ಧ ವಿಮಾನದ ಖರೀದಿ ಒಪ್ಪಂದ ಇನ್ನು ಸಾಧ್ಯವಿಲ್ಲಎನ್ನುವವರ ಬಾಯಿಗೆ  ಬೀಗ ಹಾಕಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ಒಪ್ಪಂದ ಫ್ರಾನ್ಸ್ ನಿರ್ಧರಿಸಿದ್ದ ಮೊತ್ತಕ್ಕಿಂತ 5,618 ಕೋಟಿ ಕಡಿಮೆ ದರದಲ್ಲಿ ನಡೆದಿದೆ. ರಕ್ಷಾ ಮಂತ್ರಿ ಮನೋಹರ್ ಪಾರಿಕರ್ ನೇತ್ರತ್ವದಲ್ಲಿ ನಡೆದ ಒಪ್ಪಂದದಲ್ಲಿ ಭಾರತಕ್ಕೆ ಇನ್ನು ಕೇವಲ 36 ತಿಂಗಳಲ್ಲಿ ಫ್ರಾನ್ಸ್ 36ಹೊಸ, ಅತ್ಯಾಧುನಿಕ ಯುದ್ಧ ವಿಮಾನಗಳ ಸರಬರಾಜು ಶುರುಮಾಡಲಿದೆ. ಇದರಿಂದಾಗಿ ದಶಕಗಳಿಂದ ಕಾಯುತ್ತಿರುವ ಭಾರತದ ಏರೋಸ್ಪೇಸ್ ಡಿಪೆನ್ಸ್ ಹಾಗೂ ಟೆಕ್ನಾಲಜಿ ರಂಗದಲ್ಲಿ ಮಹತ್ತರ ಬದಲಾವಣೆ ನಡೆಯಲಿದೆ.

ಅಧಿಕೃತ ಮೂಲಗಳ ಪ್ರಕಾರ ಮೂವತ್ತಾರು ಅತ್ಯಾಧುನಿಕ ವಿಮಾನಗಳ ಬೆಲೆ ಬರೀ 25 ಸಾವಿರ ಕೋಟಿ. ಶಸ್ತ್ರಾಸ್ತ್ರಗಳ ಬೆಲೆ ಐದು ಸಾವಿರ ಕೋಟಿ, ನಂತರ ಭಾರತಕ್ಕೆ ತಕ್ಕಂತೆ ಬದಲಾವಣೆ ಮಾಡಲು ಮತ್ತು ಇಸ್ರೇಲಿ ಮೌಂಟಿಂಗ್ ಡಿಸ್ಪ್ಲೆ ಇವೆಲ್ಲ ಸೇರಿ ಇನ್ನು ಹನ್ನೆರಡು ಸಾವಿರ ಕೋಟಿ. ಉಳಿದ ಹಣ ಸ್ಪೇರ್ ಪಾರ್ಟ್ಸ್ ಹಾಗೂ ಮೆಂಟೆನೆನ್ಸ್ ನೋಡಿಕೊಳ್ಳಲು ಎಂದು ನಿರ್ಧಾರವಾಗಿದೆ. ಒಪ್ಪಂದದ ನಿಜವಾದ ಗೆಲವು ಅಂದರೆ 50% Offset Claus.ಅಂದರೆ  30% ಭದ್ರತಾ, ರಕ್ಷಣಾ ಕಾರ್ಯಕ್ರಮಗಳಿಗೆ ನೆರವು ನೀಡುವುದು ಹಾಗೂ 20% ಏರೋಸ್ಪೇಸ್ ಬಿಡಿ ಭಾಗಗಳ ತಯಾರಿಕೆಗೆ ಸಹಾಯ ಮಾಡುವುದು. ಇದಲ್ಲದೆ ಒಪ್ಪಂದದ ಪ್ರಕಾರ ಒಂದು ವಿಮಾನದ ಶೇಕಡಾ 74% ಭಾಗ ಭಾರತದಿಂದ ಫ್ರಾನ್ಸ್ ಗೆ  ರಫ್ತಾಗಬೇಕು. ಇದರಿಂದ ಭಾರತದ ದೊಡ್ಡ ಹಾಗೂ ಸಣ್ಣ ಕಂಪನಿಗಳಿಗೆ ಸುಮಾರು 25,000  ಕೋಟಿಗಳ ಬ್ಯುಸಿನೆಸ್ ಸಿಗುತ್ತದೆ. ಇದಲ್ಲದೆ ಮೇಕ್‌ ಇನ್ ಇಂಡಿಯಾ ಆಗಿದ್ದರಿಂದ ಭಾರತದಲ್ಲಿ ಸಾಕಷ್ಟು ಉದ್ಯೋಗ ಸೃಷ್ಟಿ ಆಗುವ ನಿರೀಕ್ಷೆ ಇದೆ. ಈ ಶ್ರೇಯ ಮೋದಿ ಹಾಗೂ ಪಾರಿಕರ್ಗೆ ಸಲ್ಲಬೇಕು. ಇದಲ್ಲದೇ ಒಪ್ಪಂದದ ಪ್ರಕಾರ ಭಾರತದ ಯಶಸ್ವಿಯಾಗಿರದ  ಕಾವೇರಿ ಇಂಜಿನನ್ನು ಪ್ರಾನ್ಸ್ ಹೊಸತಾಗಿ ಡಿಸೈನ್ ಮಾಡಲು ಸಹಕಾರ ನೀಡಲು ಒಪ್ಪಿದೆ. ಅಂದರೆ ಈಗ ಹಾಲಿ ಬದಿಗೊತ್ತಿರುವ 72 kNಕಾವೇರಿ ಇಂಜಿನ್ನ್ನು 90 kN ಒತ್ತಡಕ್ಕೆ ವಿನ್ಯಾಸಗೊಳಿಸಲಾಗುವುದು. ಹಾಗಾದರೆ ಈಗ ಹಾಗೂ ಮುಂದೆ ಭಾರತದ ತೇಜಸ್ ಯುದ್ಧ ವಿಮಾನದಲ್ಲಿ ಬಳಸುತ್ತಿರುವ ಅಮೇರಿಕಾದ ಇಂಜಿನ್ ಬದಲು ಸ್ವದೇಶಿ ಕಾವೇರಿ ಇಂಜಿನ್ ಬಳಸಬಹುದು! ಯುಪಿಎ ಸರ್ಕಾರ 120 ರೆಫಾಲ್ ಯುದ್ಧ ವಿಮಾನಗಳು ಬೇಕು ಎಂಬ ಪಟ್ಟಿ ತಯಾರಿ ಮಾಡಿತ್ತು. ಬರೀ ವಿಮಾನಗಳ ಮೊತ್ತ ತೊಂಬತ್ತು ಸಾವಿರ ಕೋಟಿ ರೂಪಾಯಿಗಳು. ಈ ಮೊತ್ತ ನೋಡಿ ಯಾರೂ ಅದರ ಬಗ್ಗೆ ಲಕ್ಷ್ಯ ವಹಿಸಿರಲಿಲ್ಲ, ಹೀಗಾಗಿ ರಾಫೆಲ್ ವಿಷಯ ಎಲ್ಲಿತ್ತೋ ಅಲ್ಲೇ ಇತ್ತು, ವಾಯು ಸೇನೆಯ ಯೋಧರು ಪ್ರತಿ ವರ್ಷ ಮಿಗ್ ವಿಮಾನದ ತಾಂತ್ರಿಕ ದೋಷದಿಂದ ಅಪಘಾತಕ್ಕೊಳಗಾಗಿ ಸಾವನ್ನಪ್ಪಿದರು.

ಒಳಗೆ ಏನು ನಡೆಯುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಬಯಸದೆ, ಕಣ್ಣಿಗೆ ಪಟ್ಟಿ ಕಟ್ಟಿಕೊಂಡು 52,000 ಕೋಟಿ ವೆಚ್ಚದ ಈ ಒಪ್ಪಂದಕ್ಕೆ ಸರ್ಕಾರ ಬರುವುದು ಅಸಾಧ್ಯವೆಂದು ಬಹಳಮಂದಿ ಬುದ್ಧಿವಂತ ವಿಶ್ಲೇಷಕರು ಭವಿಷ್ಯ ನುಡಿದಿದ್ದರು. ಒಪ್ಪಂದ ಆದ ಮೇಲೂ ಕೆಲವು ಅಸಹಿಷ್ಣುಗಳ ಪ್ರಶ್ನೆ, “ನೂರಾ ಇಪ್ಪತ್ತು ವಿಮಾನ ಖರೀದಿ ಮಾಡುವ ಯೋಜನೆ ಬರೀ ಮೂವತ್ತಾರಕ್ಕೆ ಯಾಕೆ ಕೊನೆಯಾಯಿತು?” ಅದಕ್ಕೆ ರಕ್ಷಾ ಮಂತ್ರಿ ಪಾರಿಕರ್ ಹೇಳುತ್ತಾರೆ, “ನನಗೂ BMW, ಮರ್ಸಿಡಿಸ್ ಬೆಂಜ್ ಕಾರುಗಳೇ ಬೇಕು…ಆದರೆ ಅಷ್ಟು ದುಬಾರಿ ಕಾರು ಖರೀದಿ ಮಾಡುವ ಸಾಮರ್ಥ್ಯ ಇಲ್ಲ ಹಾಗೂ ಅದರ ಅವಶ್ಯಕತೆ ಕೂಡಾ ಇಲ್ಲ..ನಮಗೆ ಈಗ ಅವಶ್ಯಕತೆ ಇರುವುದು ಸುಸಜ್ಜಿತ, ಆಧುನಿಕ36 ಯುದ್ಧ ವಿಮಾನಗಳು!”. ಈ ಮೂವತ್ತಾರು ಆಧುನಿಕ ಯುದ್ಧ ವಿಮಾನಗಳಲ್ಲಿ ಲಾಂಗ್ ರೇಂಜ್ ಮಿಸೈಲ್ ಉದಾಹರಣೆಗೆ ಮೆಟಿಯೊರ್‘ ‘ಸ್ಕಾಲ್ಪ್ಗಳಂತ ತಂತ್ರಜ್ಞಾನ ಇದೆ. ನಿನ್ನೆಯಷ್ಟೆ ಭಾರತೀಯ ವಾಯು ಸೇನೆ ಎರ್-ಟು-ಏರ್ ಮಿಸೈಲ್ ಪರೀಕ್ಷೆ ನಡೆಸಿ ಯಶಸ್ವಿಯಾಗಿದೆ. ಇದರ ಜೊತೆ ಈ ಯಶಸ್ವಿ ರೇಫಾಲ್ ಖರೀದಿ ಒಪ್ಪಂದ ಶತ್ರು ರಾಷ್ಟಗಳ ನಿದ್ದೆಗೆಡಸಿದೆ. ಇದನ್ನು ಒತ್ತಿ ಹೇಳಲು ಕಾರಣ ಅಂದರೆ ಈಗಿರುವ ಏರ್-ಟು-ಏರ್ ನೂರಾ ಐವತ್ತು ಕಿಮೀ ದೂರದ BVR(Beyond Visual Range) ಮೆಟಿಯೊರ್ ತಂತ್ರಜ್ಞಾನದ ಮಿಸೈಲ್  ಜೊತೆ ರೆಫಾಲ್ ಯುದ್ಧ ವಿಮಾನ ಬಳಸಿದರೆ ಭಾರತದ ಗಡಿಯೊಳಗಿದ್ದುಕೊಂಡೇ ( ಪರಿಸ್ಥಿತಿ ಎದುರಾದಾಗ) ಪಾಕಿಸ್ತಾನದಂತಹ ವೈರಿ ರಾಷ್ಟ್ರಗಳ ಮೇಲೆ ದಾಳಿ ನೆಡೆಸಬಹುದು. ಪಾಕಿಸ್ತಾನದ ಹತ್ತಿರ ಬರೀ 80 ಕಿಲೋಮೀಟರ್BYR ತಂತ್ರಜ್ಞಾನವಿದೆ ಅಷ್ಟೇ. ಇವತ್ತು ಅಫ್ಘಾನಿಸ್ತಾನ, ಲಿಬಿಯಾ,ಮಾಲಿ, ಇರಾಕ್, ಹಾಗೂ ಸಿರಿಯಾಗಳಲ್ಲಿ ಭಯೋತ್ಪಾದಕರು ಹಾಗೂ ಐಸಿಸ್ಗಳನ್ನು ಸದೆ ಬಡಿಯಲು ಇದೇ ಯುದ್ಧ ವಿಮಾನ ಬಳಸಲಾಗುತ್ತಿದೆ. ಇದಲ್ಲದೆ ಒಪ್ಪಂದದ ಪ್ರಕಾರ ಶೇಕಡಾ 75% ರಷ್ಟು ವಿಮಾನಗಳು ಯಾವಾಗಲೂ ಯುದ್ಧಕ್ಕೆ ಹೋಗಲು ರೆಡಿ ಆಗಿರಬೇಕು, ಇದಕ್ಕೆ ಪ್ರಾನ್ಸ್ ಕಂಪನಿಗಳ ಸಹಮತವಿದೆ. ಒಟ್ಟಿನಲ್ಲಿ ಹೇಳಬೇಕು ಅಂದರೆ ರಾಫೆಲ್ ಒಪ್ಪಂದದಿಂದ ಭಾರತದ ವಾಯು ಸೇನೆ ಪ್ರಬಲವಾಗುವುದರ ಜೊತೆ ಜೊತೆಗೆ ತಂತ್ರಜ್ಞಾನ, ಉದ್ಯೋಗ, ವ್ಯಾಪಾರ ಕೂಡ ಹೆಚ್ಚಲಿದೆ. ಏಕ್ ಮಾರ್ ಚಾರ್ ತುಕಡಾ !

Facebook ಕಾಮೆಂಟ್ಸ್

ಲೇಖಕರ ಕುರಿತು

Vikram Joshi

ಬೆಳೆದಿದ್ದು ಕರ್ನಾಟಕದ ಕರಾವಳಿಯಲ್ಲಿ, ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್. ಆಟೋಮೊಬೈಲ್ ಕಂಪನಿಯಲ್ಲಿ ಕೆಲಸ. ಮಿಷಿಗನ್ ಯುನಿವರ್ಸಿಟಿಯಿಂದ ಆಟೊಮೊಬೈಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ. ಉದ್ಯೋಗ ಹಾಗೂ ಸಂಸಾರದಿಂದ ಬಿಡುವು ಸಿಕ್ಕಾಗ ಬರೆವಣಿಗೆ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!