ಅಂಕಣ

ಭಾರತಾ೦ಬೆಯ ಸ೦ಗೀತರತ್ನ ಎ೦.ಎಸ್.ಸುಬ್ಬುಲಕ್ಷ್ಮಿ

ಭಕ್ತಿ ಎಂಬುದು ನಮ್ಮ ಜೀವನದಲ್ಲಿ ಪುಟ್ಟ ವಯಸ್ಸಿನಿಂದಲೇ ಪರಿಸರಕ್ಕನುಗುಣವಾಗಿ ಬೆಳೆಯುವ ಅನುಭಾವ. ಅದರ ಪ್ರಾರಂಭ ನಮ್ಮ ಮನೆಗಳ ರೇಡಿಯೋಗಳಲ್ಲಿ ಮು೦ಜಾನೆ ತಪ್ಪದೆ ಕೇಳಿಬರುತ್ತಿದ್ದ“ಕೌಸಲ್ಯ ಸುಪ್ರಜಾರಾಮ ಪೂರ್ವಾಸಂಧ್ಯಾ ಪ್ರವರ್ತತೆ” ಎಂಬ ಸುಶ್ರಾವ್ಯ ಸುಪ್ರಭಾತ. ಆ ಸುಂದರ ಇನಿದನಿಯ ಮಂತ್ರಘೋಷ ನಮ್ಮನ್ನು ಎಚ್ಚರಿಸುತ್ತಿತ್ತೋ, ಇಲ್ಲ ಮತ್ತಷ್ಟು ಜೋಗುಳ ಹಾಡುತ್ತಾ ಮತ್ತೆ ನಿದ್ದೆ ಮಾಡುವ೦ತೆ ಮಾಡುತ್ತಿತ್ತೋ, ಇಲ್ಲ ಇಂತಹ ಸುಂದರ ಇನಿದನಿ ಕೇಳದೆ ವ್ಯರ್ಥವಾಗಿ ನಿದ್ದೆಯಲ್ಲಿ ಸಮಯ ವ್ಯಯಮಾಡುತ್ತಿದ್ದೇವೆಲ್ಲ ಎಂಬ ಭಾವ ಹುಟ್ಟಿಸುತ್ತಿತ್ತೋ; ಹೀಗೆಯೇ ಎಂದು ನಿರ್ದಿಷ್ಟವಾಗಿ ಅದರ ಜಾಡು ಗುರುತಿಸಿಕೊಳ್ಳುವುದು ಕಷ್ಟ. ನಮ್ಮೊಳಗಿನ ಅವ್ಯಕ್ತದ ಆ ಪರಮಾತ್ಮನನ್ನು ಮೃದುವಾಗಿ ಸ್ಪರ್ಶಿಸುತ್ತಿದ್ದುದ೦ತೂ ದಿಟ, ಆ ಸುಮಧುರ ಇಂಚರವನ್ನು ಹೇಗೆ ತಾನೇ ಮರೆಯಲು ಸಾಧ್ಯ ಅಲ್ಲವೇ?? ಹಾಡುವ ಕ೦ಠಕ್ಕೆ ಸ್ಪಷ್ಟತೆ, ಮೊನಚು ಮತ್ತು ಶ್ರುತಿಶುದ್ಧತೆಗಳಿರಬೇಕು. ತಾನದ ಪ್ರಸ್ತುತಿ, ಮಂದ್ರಸ್ಥಾಯಿಯಲ್ಲಿ ಸುಲಲಿತವಾಗಿ ಸುಮಧುರವಾಗಿ ಸಂಚರಿಸುವ ಕಂಠ ಮತ್ತು ಶ್ರುತಿಶುದ್ಧಿಗಳಿದ್ದರೆ ಹಾಡುವ ಹಾಡು, ಸಭಾ೦ಗಣ ಮಾತ್ರವಲ್ಲದೆ ಹೊರಗಿನ ಸಾವಿರಾರು ಕೇಳುಗ ರಸಿಕರ ಹೃದಯಗಳನ್ನು ಆವರಿಸಿಬಿಡುತ್ತದೆ. ಎಲ್ಲಾ ವಯಸ್ಸಿನಲ್ಲೂ ತ್ರಿಸ್ಥಾಯಿಯಲ್ಲಿ ನಿರಾಯಾಸವಾಗಿ ಸಂಚರಿಸುವ ಅತ್ಯದ್ಭುತ ಕ೦ಠ ಹೊ೦ದಿದ ಭಾರತಾ೦ಬೆಯ ಸ೦ಗೀತರತ್ನ, ಅಪರೂಪದ ಗಾಯಕಿಯಾಗಿ ಇ೦ದಿಗೂ ಶೋತೃಗಳ ಹೃದಯದಲ್ಲಿ ಹಸಿರಾಗಿರುವವರೆ೦ದರೆ ಎ೦.ಎಸ್. ಸುಬ್ಬುಲಕ್ಷ್ಮಿಯವರೇ ಸೈ…

       ಅತ್ಯುನ್ನತ ಗೌರವ ಭಾರತರತ್ನವನ್ನು ಸಂಗೀತಕ್ಷೇತ್ರದ ಸಾಧನೆಗಾಗಿ ಪಡೆದ ಮೊದಲ ಮಹಾನ್ ಚೇತನ ಖ್ಯಾತ ಗಾಯಕಿ ಶ್ರೀಮತಿ ಎಂ.ಎಸ್. ಸುಬ್ಬುಲಕ್ಷ್ಮಿಯವರು. ಏಷ್ಯಾದ ನೊಬೆಲ್ ಎಂದೆ ಪರಿಗಣಿಸಲ್ಪಟ್ಟ ರೇಮನ್ ಮ್ಯಾಗ್ಸೆ ಸೆ ಪ್ರಶಸ್ತಿ ಪಡೆದ ಮೊದಲ ಭಾರತೀಯರಾಗಿ ವಿಶ್ವಮಾನ್ಯರಾಗಿದ್ದಾರೆ. ಕರ್ಣಾಟಕ ಸಂಗೀತದ ಪ್ರಸಿದ್ಧ ಗಾಯಕಿಯಾಗಿ ಮೆರೆದ ಇವರ ಪೂರ್ತಿ ಹೆಸರು ಮಧುರೈ ಷಣ್ಮುಖವಡಿವು ಸುಬ್ಬುಲಕ್ಷ್ಮಿ. 1916ರ ಸೆಪ್ಟೆಂಬರ್ 16ರಂದು ನಮ್ಮ ನೆರೆಯ ತಮಿಳುನಾಡಿನ ದೇವಾಲಯಗಳ ನಗರ ಮಧುರೆಯಲ್ಲಿ ದೇವದಾಸಿ ಸಂಪ್ರದಾಯದ ವೀಣಾವಾದಕಿ ಷಣ್ಮುಖವಡಿವು ಅವರ ಹಿರಿಯಮಗಳಾಗಿ ಸುಬ್ಬುಲಕ್ಷ್ಮಿ ಜನಿಸಿದರು. ಮುಂದೆ ವೀಣಾವಾದಕಿಯಾದ ವಡಿವಾಂಬಾಳ್ ಅವರ ತಂಗಿಯಾದರೆ ಮೃದಂಗವಾದಕನಾದ ಶಕ್ತಿವೇಲು ಸಹೋದರ. ತಂದೆ ಸುಬ್ರಹ್ಮಣ್ಯ ಅಯ್ಯರ್ ಕೂಡ ಸಂಗೀತಾಸಕ್ತರಾಗಿದ್ದರು. ಅಜ್ಜಿ ಅಕ್ಕಮ್ಮಾಳ್ ಹಾಗೂ ತಾಯಿಯವರ ಸಂಗೀತ ಆಲಾಪನೆಗಳನ್ನು ಕೇಳಿಕೊಂಡು ಬೆಳೆದಿದ್ದ ಸುಬ್ಬುಲಕ್ಷ್ಮಿಯವರನ್ನು ಎಲ್ಲರೂ ಪ್ರೀತಿಯಿಂದ ಕುಂಜ್ಜಮ್ಮ ಎಂದು ಕರೆಯುತ್ತಿದ್ದರು. ಹತ್ತು ವರ್ಷವಿದ್ದಾಗ ಝಂಝೋಟಿರಾಗದ ಒಂದು ತಮಿಳು ಹಾಡನ್ನು ಆಕೆ ಹಾಡುವ ಮೂಲಕ ಸಂಗೀತಜಗತ್ತಿಗೆ ತಮ್ಮನ್ನು ತೆರೆದುಕೊ೦ಡರು. ತಾಯಿಯೇ ಮೊದಲ ಗುರು. ವೇದಿಕೆಯಲ್ಲಿ ತಾಯಿಯ ವೀಣಾವಾದನದ ಜೊತೆ ಈಕೆ ಹಾಡುವುದಿತ್ತು. ತಟ್ಟೆಯ ಆ ಹಾಡಿನಲ್ಲೇ ಸೌಂದರ್ಯಾತ್ಮಕ ಸೂಚನೆಗಳಿದ್ದವು. ಹರಿತವಾದ ಮತ್ತು ಧೈರ್ಯದ ಸಂಗೀತಾಭಿವ್ಯಕ್ತಿ ಇತ್ತು. ಹಾಡಿಕೆಯಲ್ಲಿ ವೇಗವಿದ್ದು ವೇಗದ ಸಂಗತಿಗಳನ್ನು ಸಲೀಸಾಗಿ ಹಾಡಿದ್ದ ಬಾಲಕಿ,10 ವರ್ಷದವಳಾಗಿದ್ದಾಗಲೆ ಮೊದಲ ಧ್ವನಿ-ಮುದ್ರಣ 1927ರಲ್ಲಿ ಬಿಡುಗಡೆಗೊ೦ಡಿತು!! ಶಾಲೆಯಲ್ಲಿ ಎಂ.ಎಸ್. ಐದನೇ ತರಗತಿವರೆಗೆ ಕಲಿತರು. ಒಬ್ಬ ಶಿಕ್ಷಕ ವಿನಾಕಾರಣ ತುಂಬ ಹೊಡೆದರಂತೆ. ಅದರಿಂದ ಹೆದರಿ ಶಾಲೆಯನ್ನೇ ಬಿಟ್ಟರು; ಮತ್ತೆ ಅಮ್ಮನೇ ಗುರು. ನಂತರ ಸೆಮ್ಮಂಗುಡಿ ಶ್ರೀನಿವಾಸ ಐಯರ್ ಅವರಿಂದ ಕರ್ನಾಟಕ ಸಂಗೀತ ಹಾಗೂ ಪಂಡಿತ್ ನಾರಾಯಣ್’ರಾವ್ ವ್ಯಾಸ್ ಅವರಿಂದ ಹಿಂದುಸ್ಥಾನಿ ಸಂಗೀತ ಕಲಿತುಕೊಂಡರು. 13ನೇ ವಯಸ್ಸಿನಲ್ಲಿ ಭಜನೆಗಳನ್ನು ಸುಶ್ರಾವ್ಯವಾಗಿ ಹಾಡುವುದರ ಮೂಲಕ ಮದರಾಸು ಸಂಗೀತ ಅಕಾಡೆಮಿಯಲ್ಲಿ ಪ್ರಥಮ ಸಂಗೀತ ಕಛೇರಿಯನ್ನು ನೀಡಿದ ಸುಬ್ಬುಲಕ್ಷ್ಮಿ, ತಮ್ಮ 17ನೇ ವಯಸ್ಸಿಗೇ ಸ್ವತಂತ್ರರಾಗಿ ಗಂಟೆಗಟ್ಟಲೆ ಸಂಗೀತ ಕಛೇರಿಗಳನ್ನು ನಡೆಸಿ ಅಭಿಮಾನಿಗಳ ಹೃದಯಗಳಲ್ಲಿ ನೆಲೆವೂರಿದ್ದರು.

       ಕಲ್ಕಿ ತಮಿಳು ಪತ್ರಿಕೆಯ ಸದಾಶಿವಂ ಅಯ್ಯರ್ ಎಂಬ ಸ್ವಾತಂತ್ಯ್ರ ಹೋರಾಟಗಾರರನ್ನು 1940ರಲ್ಲಿ ಮದುವೆಯಾದ ಸುಬ್ಬುಲಕ್ಷ್ಮಿಯವರಿಗೆ ಪತಿಯ ಪ್ರೋತ್ಸಾಹವೂ ದೊರಕಿ ಐದು ದಶಕಗಳ ಕಾಲ ಭಾರತದಾದ್ಯಂತ ಕಛೇರಿಗಳನ್ನು ನಡೆಸಿದರು.1938-47ರ ನಡುವೆ ಸುಬ್ಬುಲಕ್ಷ್ಮಿ ಐದು ಸಿನೆಮಾಗಳಲ್ಲಿ ನಟಿಸಿದರು. ಪಾತ್ರಗಳು ಸಂಗೀತಪ್ರಧಾನವಾಗಿದ್ದುದೇ ಅದಕ್ಕೆ ಮುಖ್ಯ ಕಾರಣ. ಸದಾಶಿವಂ ಅವರ ‘ಕಲ್ಕಿ’ ಪತ್ರಿಕೆಯ ಸ್ಥಾಪನೆಗೆ ಹಣ ಸಂಗ್ರಹಿಸಲು ಅವರು ‘ಸಾವಿತ್ರಿ’ ಚಿತ್ರದಲ್ಲಿ ನಾರದನ ಪಾತ್ರ ಮಾಡಿ ಸಂಗೀತದ ಸುಧೆಯನ್ನು ಹರಿಸಿದರು. ಮುಂದಿನ ಮೀರಾ ಪಾತ್ರ ಅವರ ಮೇಲೆ ವೈಯಕ್ತಿಕವಾಗಿಯೂ ವೃತ್ತಿಪರವಾಗಿಯೂ ಪ್ರಭಾವ ಬೀರಿತು. ಆಕೆ ತನ್ನನ್ನು ದಾಸಿ ಮೀರಾ ಎಂದುಕೊಂಡರು.  ‘ಮೀರಾ’ಚಿತ್ರ ಹಿಂದಿಯಲ್ಲಿ ಯಶಸ್ವಿಯಾಗಿ ಉತ್ತರ ಭಾರತದಲ್ಲಿ ಅವರಿಗೆ ಅಧಿಕೃತ ಮನ್ನಣೆ ಸಿಗತೊಡಗಿತು. ಗಾಂಧಿ, ನೆಹರು ಅವರೆಲ್ಲ ಎಂ.ಎಸ್. ಅಭಿಮಾನಿಗಳಾದರು. ಉತ್ತರದಲ್ಲಿ ಅವರ ಸಂಗೀತ ಕಚೇರಿಗಳಿಗೆ ಬೇಡಿಕೆ ಹೆಚ್ಚಿತು. ಭಾರತದ ಸಾಂಸ್ಕೃತಿಕ ರಾಯಭಾರಿಗಳಾಗಿ ಅನೇಕ ಬಾರಿ ವಿದೇಶಗಳಲ್ಲಿ ಸಂಗೀತೋತ್ಸವಗಳ ಮೂಲಕ ಭಾರತವನ್ನು ಪ್ರತಿನಿಧಿಸಿದ್ದಾರೆ.

         ಪ್ರಪಂಚದಾದ್ಯಂತ ಕೇಳುಗರನ್ನು ಆಕರ್ಷಿಸಿದ ಇವರಿಗೆ ಬಂದಿರುವ ಪ್ರಶಂಸೆಗಳು ಅಪಾರ. ಅವರ “ಹರಿ ತುಮ್ ಹರೋ ಜನ್ ಕೀ ಭೀರ್” ಎಂಬ ಮೀರಾ-ಭಜನೆಯನ್ನು ಕೇಳಿದ ಮಹಾತ್ಮ ಗಾಂಧಿ ಆ ಭಜನೆ ಕೇವಲ ಅವರಿಗಾಗಿಯೇ ಮಾಡಿಸಿದ್ದು, ಇನ್ನಾರಿಗೂ ಅಲ್ಲವೆಂದು ಹೇಳಿದ್ದರು! ಮದ್ರಾಸಿನಲ್ಲಿ ನಡೆದ ಒಂದು ಸಂಗೀತೋತ್ಸವಕ್ಕೆ ಪಂಡಿತ ನೆಹರೂ ಅವರು ಮುಖ್ಯ ಅತಿಥಿಗಳಾಗಿ ಆಹ್ವಾನಿತರಾಗಿದ್ದರು.  ಎಂ. ಎಸ್. ಸುಬ್ಬುಲಕ್ಷ್ಮಿಯವರ ಕಚೇರಿ ಏರ್ಪಾಡಾಗಿತ್ತು.  ನೆಹರೂರವರು ಆ ಸಂದರ್ಭದಲ್ಲಿ ಸುಬ್ಬುಲಕ್ಷ್ಮಿಯವರನ್ನು ಕುರಿತು ನಾಲ್ಕು ಮಾತನ್ನು ಆಡಬೇಕಾಗಿದ್ದರಿಂದ ಎದ್ದು ನಿಂತು “After all I am a Prime Minister.  What can I speak on the Queen of Music” ಎಂದು ತಮ್ಮ ಸಹಜ ಸುಂದರ ಸುಮಧುರ ಧ್ವನಿಯಲ್ಲಿ ರಾಜಗಾಂಭೀರ್ಯದಿಂದ ನುಡಿದರಂತೆ.  ಅದು ಕೇವಲ ಮಾತಿನ ವೈಖರಿಯಾಗಿಲ್ಲದೆ ಇಡೀ ದೇಶ ಎಂ. ಎಸ್. ಅವರನ್ನು ಕಾಣುತ್ತಿದ್ದ ವೈಶಿಷ್ಟ್ಯತೆಯ ದ್ಯೋತಕವೂ ಆಗಿದೆ. ಇವರು ಹಾಡಿದ ‘ಭಜಗೋವಿಂದಂ’, ‘ವೆಂಕಟೇಶ್ವರ ಸುಪ್ರಭಾತ’ ಹಾಗೂ ‘ವಿಷ್ಣುಸಹಸ್ರನಾಮ’ಗಳು ಎಷ್ಟು ಹೆಸರುವಾಸಿಯೆಂದರೆ ಅವುಗಳನ್ನು ಕೇಳದ ಅನುಭವಿಸದ ಆಸ್ತಿಕರು ಇಲ್ಲವೇ ಇಲ್ಲ ಎನ್ನಬಹುದು !! ಕೃತಿಗಳ ವಿಪುಲ ಸಂಗ್ರಹದೊಂದಿಗೆ ಆಕೆ ವೈವಿಧ್ಯಮಯ ಹಾಡುಗಳನ್ನು ಹಾಡುತ್ತಿದ್ದರೂ ಕೂಡ ಒಂದರ ಕಲಾತ್ಮಕ ಆಯಾಮದಿಂದ ಇನ್ನೊಂದರ ಕಲಾತ್ಮಕ ಆಯಾಮಕ್ಕೆ ಹಾನಿಯಾಗದಂತೆ ತಡೆಯುವ ಸಾಮರ್ಥ್ಯ ಆಕೆಗಿತ್ತು.

          ಸಂಗೀತ ವಿಮರ್ಶಕಿ ಗೌರಿ ರಾಂನಾರಾಯಣ್ ಅವರು ತಮ್ಮ ಒಂದು ಲೇಖನದಲ್ಲಿ, ಸಾಹಿತ್ಯಶುದ್ಧಿಗೆ ಎಂ.ಎಸ್. ಪೂರ್ಣಗಮನ ಕೊಡುತ್ತಿದ್ದರು. ಹಾಡಿನ ಸಾಹಿತ್ಯ ಯಾವುದೇ ಭಾಷೆಯಲ್ಲಿರಲಿ, ಅದಕ್ಕೆ ಅವರು ಪೂರ್ಣ ನ್ಯಾಯ ಒದಗಿಸುತ್ತಿದ್ದರು. ಅರ್ಥ ಮತ್ತು ಉಚ್ಚಾರದ ದೃಷ್ಟಿಯಿಂದ ಎಲ್ಲೆಲ್ಲಿ ನಿಲ್ಲಿಸಬೇಕೆಂಬುದನ್ನು ಪಂಡಿತರೊಡನೆ ಚರ್ಚಿಸಿ ತಿಳಿದುಕೊಳ್ಳುತ್ತಿದ್ದರು. ಎಲ್ಲಿ ಒತ್ತುಕೊಟ್ಟರೆ ಸಾಹಿತ್ಯ ಧ್ವನಿಪೂರ್ಣವಾಗುತ್ತದೆ ಮತ್ತು ಎಲ್ಲಿ ಧ್ವನಿಯ ಏರಿಳಿತ ಬೇಕೆಂದು ಕಲಿತುಕೊಳ್ಳುತ್ತಿದ್ದರು. ಹಾಗಾಗಿ ಸಂಗೀತದಂತೆಯೇ ಸಾಹಿತ್ಯದ ದೃಷ್ಟಿಯಿಂದಲೂ ಎಂ.ಎಸ್. ಸಂಗೀತ ಪರಿಶುದ್ಧ ಎಂದಿದ್ದಾರೆ. ಅಂತಃಕರಣ ತುಂಬಿದ ಅವರ ಸಂತತನ ಮತ್ತು ಭಾರತೀಯ ಜೀವನಕ್ರಮದ ಅತ್ಯುನ್ನತ ಮೌಲ್ಯಗಳು ಅವರ ಸಂಗೀತಕ್ಕೆ ಭವ್ಯತೆಯನ್ನು ತಂದುಕೊಟ್ಟವು. ಆಧ್ಯಾತ್ಮಿಕ ಹುಡುಕಾಟದಿಂದ ಬರುವ ವಿನಯ ಮತ್ತು ಪಟ್ಟುಹಿಡಿದು ಸಾಧಿಸುವ ಛಲಗಳು ಆಕೆಗೆ ಘನತೆಯನ್ನು ತಂದುಕೊಟ್ಟವು ಎಂದು ಈ ವಿಮರ್ಶಕಿ ಗುರುತಿಸಿದ್ದಾರೆ.

               ಎಂ. ಎಸ್. ಸುಬ್ಬುಲಕ್ಷ್ಮಿ ಅವರ ‘ಭಾವಯಾಮಿ ರಘುರಾಮಂ’ ಎಂಬ ಸ್ವಾತಿ ತಿರುನಾಳರ ಕೃತಿ ಮತ್ತು  ‘ಶ್ರೀರಂಗಮಂಗಳ ನಿಧಿಂ ಕರುಣಾ ನಿವಾಸಂ’ ಎಂಬ ಶ್ಲೋಕದೊಂದಿಗೆ ಮೂಡುವ  ಮುತ್ತುಸ್ವಾಮಿ ದೀಕ್ಷಿತರ  ‘ಶ್ರೀರಂಗಪುರವಿಹಾರ’ ಗೀತೆಗಳು    ಯಾವುದೇ ಸಾಹಿತ್ಯ ಜ್ಞಾನವಿಲ್ಲದವರಿಗೂ ರಾಮಾಯಣದ ಆಳವಾದ ಅನುಭಾವವನ್ನು ನೀಡುತ್ತವೆ.  ವಲ್ಲಭಾಚಾರ್ಯರ ‘ಅಧರಂ ಮಧುರಂ, ವದನಂ ಮಧುರಂ…. ಮಧುರಾಧಿಪತೆ ಅಖಿಲಂ ಮಧುರಂ’ ಗೀತೆಯಲ್ಲಿನ ಶ್ರೀಕೃಷ್ಣನ ಪ್ರೇಮ-ಸೌಂದರ್ಯ-ಆನಂದ ಲಹರಿಗಳ ಶ್ರೇಷ್ಠತೆಯನ್ನು ಎಂ. ಎಸ್. ಅವರ ಧ್ವನಿಯಂತೆ ಅನುಭವ ಕಟ್ಟಿಕೊಡುವ ಮಾದರಿ ಮತ್ತೊಂದು ಸಿಗಲಾರದು. ‘ಭಜಗೋವಿಂದಂ ಭಜಗೋವಿಂದಂ, ಗೋವಿಂದಂ ಭಜ ಮೂಢಮತೆ’ ಎಂದು ನಮ್ಮ ಮೂಢಮತಿಯನ್ನು ಪ್ರಶ್ನಿಸುವ ಶಂಕರರ ಅಧ್ಯಾತ್ಮ ಸೌಂದರ್ಯ ಎಂ.ಎಸ್ ಅವರ ಇನಿಧ್ವನಿಯಲ್ಲಿ ನಮ್ಮ ಮೈಮನ ಮರೆಸದಿರುವ ಸಾಧ್ಯತೆಗಳೇ ಇಲ್ಲ.  ಸುಬ್ಬುಲಕ್ಷ್ಮಿ ಅವರಿಗೆ ಜೀವನದಲ್ಲಿ ಸಂಗೀತದ ಹೊರತು ಬೇರೆ ಯಾವುದರಲ್ಲೂ ಹೆಚ್ಚು ಆಸಕ್ತಿ ಇರಲಿಲ್ಲ. ಹಾಡುಗಾರಿಕೆ ಸುಬ್ಬುಲಕ್ಷ್ಮಿಯವರಿಗೆ ಕೇವಲ ಒಂದು ಧನಾರ್ಜನೆಯ ಸಾಧನವಾಗಲಿಲ್ಲ, ಅದೊಂದು ತಪಸ್ಸು ಎಂದೇ ಅವರು ಭಾವಿಸಿದ್ದರು. ಧರ್ಮ ಕಾರ್ಯಗಳಿಗೆಂದು ನೆರವು ಬೇಡಿ ಬಂದವರಿಗೆ ಸುಬ್ಬುಲಕ್ಷ್ಮಿ ಅವರು ನೀಡಿದ ಸಹಾಯಾರ್ಥ ಕಾರ್ಯಕ್ರಮಗಳು ಎಣಿಕೆಗೂ ನಿಲುಕದಷ್ಟು.

1997ರಲ್ಲಿ ಅವರ ಪತಿಯ ಮರಣದ ನಂತರ ಸುಬ್ಬುಲಕ್ಷ್ಮಿಯವರು ಸಾರ್ವಜನಿಕ ಕಛೇರಿಗಳನ್ನು ನೀಡುವುದನ್ನು ನಿಲ್ಲಿಸಿದರು. ಪ್ರಶಸ್ತಿ ಸಮ್ಮಾನಗಳ ಸುರಿಮಳೆಯಾದರೂ ಎಲ್ಲವನ್ನೂ ದೇಣಿಗೆಯೆಂದು ದಾನಗೈದು ಸರಳ ಜೀವನ ನಡೆಸುತ್ತಿದ್ದ ಭಾರತದ ಅತ್ಯದ್ಭುತ ಗಾನಕೋಗಿಲೆ 2004ರ ಡಿಸೆಂಬರ್ 11ರಂದು ಪರಮಾತ್ಮನಲ್ಲಿ ಐಕ್ಯವಾದರು.

ಸೆಪ್ಟೆ೦ಬರ ತಿ೦ಗಳ 16ರ೦ದು ಜನಿಸಿದ ಅದ್ಭುತ ಕ೦ಠಸಿರಿಯ ಗಾಯಕಿಗೊ೦ದು ಶತಮಾನದ ಜನ್ಮದಿನದಂದು  ಇದು ನನ್ನ  ನುಡಿನಮನ.

-Shylaja kekanaje

shylasbhaqt@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!