ಅಂಕಣ

ಭಗತ್ ಸಿಂಗ್

ಅಕ್ಟೋಬರ್ 20, 1928……..

ಪಂಜಾಬಿನ ಲಾಹೋರ್…..

ಬ್ರಿಟಿಷ್ ಆಳ್ವಿಕೆಯಲ್ಲಿದ್ದ ಭಾರತದಲ್ಲಿ ಸ್ಥಾಪಿಸಲಾಗುವ ಸಂವಿಧಾನದ ರಚನೆಯ ಕುರಿತು ಚರ್ಚೆ ನಡೆಸಲು ಬ್ರಿಟಿಷರ ಏಳು ಸದಸ್ಯರ ತಂಡದ ಭಾರತದ ಲಾಹೋರಿಗೆ ಅದೇ ತಾನೆ ತಲುಪಿತ್ತು. ತಂಡದ ಅಧ್ಯಕ್ಷರಾಗಿದ್ದ ಸರ್ ಜಾನ್ ಸೈಮನ್‍ರವರ ಹೆಸರಲ್ಲಿ ಆಯೋಗವು ಸ್ಥಾಪಿತವಾಗಿತ್ತು. ಈ ಆಯೋಗ ಭಾರತ ತಲುಪುವ ಮೊದಲೇ ಬ್ರಿಟಿಷರ ಈ ನಡೆಯನ್ನು ಭಾರತೀಯರು ತಿರಸ್ಕರಿಸಿ ಪ್ರತಿಭಟಿಸತೊಡಗಿದ್ದರು. ಪ್ರಾದೇಶಿಕ ಪ್ರತಿನಿಧಿತ್ವ ಮತ್ತು ಹಿಂದೂ-ಮುಸ್ಲಿಮರ ಪ್ರತ್ಯೇಕ ಚುನಾವಣೆ ಪ್ರಕ್ರಿಯೆಗಳನ್ನು ಒಳಗೊಂಡ ಈ ಆಯೋಗ ಭಾರತೀಯರನ್ನು ಒಡೆದು ಆಳುವ ಬ್ರಿಟಿಷರ ನೀತಿಯ ಸಂಕೇತವಾಗಿದ್ದು ಭಾರತದ ಒಬ್ಬ ಪ್ರತಿನಿಧಿಯೂ ಇಲ್ಲದ ಕಾರಣ ಭಾರತೀಯರ ಆಕ್ರೋಷಕ್ಕೆ ಇದು ಗುರಿಯಾಗಿತ್ತು.

ಅಂದು ಲಾಹೋರಿನ ರೈಲು ನಿಲ್ದಾಣದ ಬಳಿ ಬ್ರಿಟಿಷ್ ಸದಸ್ಯರನ್ನು ಹೊತ್ತು ತರುತ್ತಿದ್ದ ರೈಲು ತಲುಪುತ್ತಿದ್ದಂತೆಯೇ “ಗೋ ಬ್ಯಾಕ್ ಸೈಮನ್” (ಸೈಮನ್ ಹಿಂತಿರುಗು) ಎನ್ನುವ ಭಾರೀ ಘೋಷಣೆಗಳೊಂದಿಗೆ ಎದುರಾದದ್ದು ಕಪ್ಪು ಬಾವುಟಗಳೊಂದಿಗೆ ತುಂಬಿದ ಜನಸಾಗರ ಕಾಣಬರುತ್ತಿತ್ತು…”ಹಿಂದೂಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಆರ್ಮಿ” ಎನ್ನುವ ಸೇನೆಯ ಉತ್ಸಾಹೀ ಯುವಕರು ಅಲ್ಲಿ ತುಂಬಿದ್ದರು. ನಿಲ್ದಾಣಕ್ಕೆ ಬಂದಿಳಿದ ಸದಸ್ಯರ ಆಯೋಗ ಇದನ್ನು ಕಂಡು ನಿಬ್ಬೆರಗಾಯಿತು….ಪೋಲೀಸರೂ ಅಪಾರ ಜನಸ್ತೋಮ ಕಂಡು ಹೆದರಿದರು.ಕೂಡಲೇ ಪೋಲೀಸ್ ಸೂಪರಿಟೆಂಡೆಂಟ್ ಮಿಸ್ಟರ್ ಸ್ಕಾಟ್ ಲಾಠೀ ಚಾರ್ಜಿಗೆ ಆದೇಶವಿತ್ತನು.

ಅವನ ಅಜ್ಞೆಯನ್ನು ಕೂಡಲೇ ಬ್ರಿಟಿಷ್ ಪೋಲೀಸ್ ಅಧಿಕಾರಿ ಸ್ಯಾಂಡರ್ಸ್ ಕಾರ್ಯರೂಪಕ್ಕೆ ತಂದನು.ಪೋಲೀಸರು ನೆರೆದಿದ್ದ ಎಲ್ಲರನ್ನೂ ಚದುರಿಸಲು ಲಾಠಿಯಿಂದ ಕಂಡಕಂಡವರನ್ನು ಹೊಡೆಯುತ್ತಾ ಮುಂದುವರೆದರು. ಬ್ರಿಟಿಷರ ವಿರುದ್ಧದ ಸ್ವಾತಂತ್ರ ಸಂಗ್ರಾಮದ ಪ್ರಭಾವೀ ಹಿರಿಯ ನೇತಾರರಾಗಿದ್ದ ಶ್ರೀ ಲಾಲಾ ಲಜಪತ್ ರಾಯ್‍ರವರ ಕ್ರಾಂತಿಕಾರೀ ಭಾಷಣ ಕೇಳಿ ಬರುತ್ತಿತ್ತು. ತಮ್ಮ ನಾಯಕರಾದ ಲಾಲಾರನ್ನು ಕೆಲವು ಧೀರ ಯುವಕರು ಸುತ್ತುವರೆದಿದ್ದರು.ಈ ನಡುವೆ ಅದು ಹೇಗೋ ಅವರನ್ನು ಚದುರಿಸಿದ ಸ್ಯಾಂಡರ್ಸ್ ಲಾಲಾರವರ ಬಳಿ ತಲುಪಿ ಅವರನ್ನು ಲಾಠಿಯಿಂದ ಹೊಡೆಯತೊಡಗಿದ….

ಅತಿ ಉತ್ಸಾಹದಿಂದ ಸೇನೆಯನ್ನು ಹುರಿದುಂಬಿಸುತ್ತಾ ನಿರರ್ಗಳವಾಗಿ ಬ್ರಿಟಿಷರಿಗೆ ಅರ್ಥವಾಗುವಂತೆ ಇಂಗ್ಲಿಷ್‍ನಲ್ಲಿಯೇ ಮಾತನಾಡುತ್ತಾ ಮುಗ್ಧ ಭಾರತೀಯರ ಮೇಲೆ ದಬ್ಬಾಳಿಕೆಯಿಂದ ಸಾಮ್ರಾಜ್ಯವಾದದ ಸರ್ವಾಧಿಕಾರೀ ಧೋರಣೆಯಿಂದ ಚುನಾಯಿತ ಭಾರತೀಯರ ಅಧಿಕಾರ ಕಿತ್ತುಕೊಂಡ ಬ್ರಿಟಿಷ್ ಸರಕಾರ ಬಹು ದಿನ ಭಾರತದಲ್ಲಿ ಉಳಿಯುವುದಿಲ್ಲಾ, ತಮ್ಮ ಮೇಲೆ ನಡೆಯುತ್ತುರುವ ಬ್ರಿಟಿಷರ ಈ ಪ್ರಹಾರದ ಏಟುಗಳು ಬ್ರಿಟಿಷರ ಸಾಮ್ರಾಜ್ಯದ ಸಮಾಧಿಗೆ ಮೊಳೆ ಹೊಡೆದಂತೆ ಎನ್ನುತ್ತಿದ್ದಂತೆಯೇ …ಸತತವಾಗಿ ಭುಜ, ತಲೆ ಮತ್ತು ಎದೆಯ ಮೇಲೆ ಲಾಠೀ ಬೀಸತೊಡಗಿದ. …ಎದುರಾದ ಎಲ್ಲಾ ಯುವಕರನ್ನು ಪೋಲೀಸರು ಲಾಠಿಗಳಿಂದ ಥಳಿಸತೊಡಗಿದರು. ಚೀತ್ಕಾರದೊಡನೆ ರಕ್ತವೂ ಹರಿಯತೊಡಗಿತು. ತಮ್ಮ ಎದೆಯ ಮೇಲಾದ ಪೆಟ್ಟಿನ ಆಘಾತವನ್ನು ಹಿರಿಯ ಜೀವ ಲಾಲಾ ಲಜಪತ್ ರಾಯರಿಂದ ತಡೆಯಲಾಗಲಿಲ್ಲ. ಮುಂದೆ ಕೆಲವು ದಿನಗಳ ನಂತರ ಲಾಲಾರವರನ್ನು ಉಳಿಸಿಕೊಳ್ಳಲಾಗಲಿಲ್ಲ. ಬಲವಾದ ಏಟಿನಿಂದ ದೇಹ ದುರ್ಬಲವಾಗಿತ್ತು, ಅವರು ಕೊನೆಯುಸಿರೆಳೆದರು.

ತಮ್ಮ ನೆಚ್ಚಿನ ಮಾರ್ಗದರ್ಶಕರನ್ನು ಕಳೆದುಕೊಂಡ ಹಿಂದೂಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಆರ್ಮಿಯ ಯುವ ನಾಯಕರು ದಿಗ್ಭ್ರಾಂತರಾದರು.ಲಾಲಾರವರ ಸಾವಿನ ವಿವರ ತಿಳಿದ ಎಲ್ಲರೂ ಕೂಡಲೇ ಲಾಲಾರವರ ಅಂತಿಮ ದರ್ಶನ ಪಡೆಯಲು ಧಾವಿಸತೊಡಗಿದರು.

ನವೆಂಬರ್ 17, 1928…

ರಾವೀ ನದಿಯ ದಡದಲ್ಲಿ ಲಾಲಾರವರ ಅಂತ್ಯಕ್ರಿಯೆಗಾಗಿ ಸಿದ್ಧಪಡಿಸಿದ್ದ ಅಗ್ನಿಯ ಎದುರಲ್ಲಿ ಪೈಶಾಚಿಕ ಕೃತ್ಯವನ್ನೆಸಗಿದ ಬ್ರಿಟಿಷ್ ಸರಕಾರದ ಅಧಿಕಾರವನ್ನು ಅಂತ್ಯಗೊಳಿಸುವ ನಿರ್ಧಾರದಿಂದ ಹಿಂದೂಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಆರ್ಮಿಯ ಯುವಕರು ತಮ್ಮ ಜೀವವನ್ನು ಒತ್ತೆಯಿಟ್ಟಾದರೂ ಸರಿ ಭಾರತವನ್ನು ಬ್ರಿಟಿಷರ ದಬ್ಬಾಳಿಕೆಯಿಂದ ಮುಕ್ತಗೊಳಿಸುವ ಘೋರ ಪ್ರತಿಜ್ಞೆಯನ್ನು ಕೈಗೊಂಡರು. ಅವರಲ್ಲೊಬ್ಬ ಕ್ರಾಂತೀಕಾರಿ ಯುವಕನ ತಲೆಯಲ್ಲದಾಗಲೇ ಬ್ರಿಟಿಷರ ವಿರುದ್ಧ ಸೇಡಿನ ಸಂಚು ಎದುರಲ್ಲಿದ್ದ ಲಾಲಾರವರ ಅಗ್ನಿಜ್ವಾಲೆಗಿಂತಲೂ ಬೃಹತ್ತಾಗಿ ಜ್ವಲಿಸುತ್ತಿತ್ತು.

ಮುಂದೆ ಅದೇ ಜ್ವಾಲೆಯ ಶಕ್ತಿ ಸ್ವರೂಪೀ ಯುವಕ ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನವಾದ…

ಅವನೇ ಸೋಲಿಲ್ಲದ ಸರದಾರ ಭಗತ್ ಸಿಂಗ್…!

ಅವನೊಂದಿಗೆ ಅವನ ಕ್ರಾಂತೀಕಾರೀ ಸೇನೆಯಲ್ಲಿ ಹತ್ತಾರು ಉತ್ಸಾಹೀ ಯುವಕರಿದ್ದರು.ಚಂದ್ರಶೇಖರ್ ಆಜಾದ್, ಸುಖದೇವ, ರಾಜಗುರು, ಗೋಪೀಚಂದ ಭಾರ್ಗವ, ಯಶಪಾಲ್, ಭಗವತೀಚರಣ ಮುಂತಾದ ಕ್ರಾಂತೀಕಾರೀ ಶಕ್ತಿಯ ಕಿಡಿಗಳು. ಅಪ್ರತಿಮ ದೇಶಭಕ್ತರಷ್ಟೇ ಅಲ್ಲಾ, ದೇಶವನ್ನು ದಾಸ್ಯದಿಂದ ಸ್ವತಂತ್ರಗೊಳಿಸಲು ಕಂಕಣಬದ್ಧರಾಗಿ ತಮ್ಮ ಬದುಕನ್ನೇ ಆಹುತಿ ನೀಡಿ ಪ್ರಜ್ವಲಿಸಿದ ಹೋರಾಟಗಾರರು!

ಪಂಜಾಬಿನ ಲ್ಯಾಲ್‍ಪುರ್ ಜಿಲ್ಲೆಯ ‘ಬಾಂಗಾ’ ಎಂಬ ಹಳ್ಳಿಯಲ್ಲಿ 28 ಸೆಪ್ಟೆಂಬರ್, 1907ರಂದು ಸಿಖ್ ಸಮುದಾಯದ ಪರಿವಾರವೊಂದರಲ್ಲಿ ಜನ್ಮ ತಳೆದವನು.”ಸರ್ದಾರ್” ಭಗತ್ ಸಿಂಗ್.ಅವನು ಜನಿಸಿದ ದಿನದಂದೇ ಅದಾಗ್ಯೇ ಬ್ರಿಟಿಷರ ವಿರುದ್ಧದ ಸ್ವಾತಂತ್ರ ಸಂಗ್ರಾಮದಲ್ಲಿ ಸಕ್ರಿಯರಾಗಿದ್ದು ಜೈಲು ಸೇರಿದ್ದ ಅವನ ತಂದೆ ಸರದಾರ್ ಕಿಶನ್ ಸಿಂಗ್ ಮತ್ತು ಚಿಕ್ಕಪ್ಪ ಅಜಿತ್ ಸಿಂಗ್ ಜೈಲಿನಿಂದ ಬಂಧಮುಕ್ತರಾದರು. ಅವರು ಬ್ರಿಟಿಷರ ವಿರುದ್ಧ ಸ್ವಾತಂತ್ರ ಹೋರಾಟದಲ್ಲಿ “ಗದಾರ್ ಪಕ್ಷ”ದೊಂದಿಗೆ ಗುರುತಿಸಿಕೊಂಡಿದ್ದರು

ಇಂತಹ ದೇಶಭಕ್ತ ಕುಟುಂಬದಲ್ಲಿ ಬೆಳೆದ ಭಗತ್ ಆಂಗ್ಲ ಶಾಲೆ ಸೇರದೆ ದಯಾನಂದ ಸರಸ್ವತಿಯವರ ಆರ್ಯ ಸಮಾಜದ ಸಂಸ್ಕಾರದಲ್ಲಿ ಶಿಕ್ಷಣ ಪಡೆದನು. ತನ್ನ ಬಾಲ್ಯದಿಂದಲೇ ದೇಶಭಕ್ತಿಯ ಕಿಚ್ಚನ್ನು ಹೊತ್ತಿದ್ದ ಭಗತ್ ನಂತರ ಲಾಲಾ ಲಜಪತ್ ರಾಯರ ಕಾಲೇಜು ಸೇರಿ ವಿದ್ಯಾಭ್ಯಾಸ ಮುಂದುವರೆಸಬೇಕಾಯಿತು. ಶಾಲಾ-ಕಾಲೇಜು ಹಂತದಲ್ಲಿಯೇ ಭಗತ್ ಸ್ವಾತಂತ್ರದ ಕನಸನ್ನು ಹೊತ್ತಿದ್ದು, ನಾಟಕ ಪ್ರಾತ್ಯಕ್ಷಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಲ್ಲದೆ, ಅತ್ಯುತ್ತಮ ವಾಗ್ಮಿಯಾಗಿಯೂ ದೇಶಭಕ್ತಿಯನ್ನು ಪ್ರತಿಬಿಂಬಿಸುವ ಗೀತೆಗಳನ್ನೂ ರಚಿಸಿ ಹಾಡುತ್ತಿದ್ದನು. ಅವನ ಬದುಕಿನಲ್ಲಿನ ಮಹತ್ವದ ಪರಿವರ್ತನೆ ಬಂದದ್ದು ಮುಂದೆ ಅವನು 1919ರಲ್ಲಿ ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡ ನಡೆದ ಸ್ಥಳವನ್ನು ಕಣ್ಣಾರೆ ಕಂಡಾಗಲೇ!

ಮುಗ್ಧ ಭಾರತೀಯರ ಮೇಲೆ ಬ್ರಿಟಿಷರು ನಡೆಸಿದ ಧಾಳಿ ಮತ್ತು ನರಮೇಧದ ಘಟನೆಯ ವರದಿ ಅವನಲ್ಲಿನ ಕ್ರಾಂತಿಯ ಕಿಚ್ಚನ್ನು ಇಮ್ಮಡಿಸಿತು.ಮುಂದೆ, 1920ರಲ್ಲಿ ಗಾಂಧೀಜಿಯ ಬ್ರಿಟಿಷರ ವಿರುದ್ಧದ ಅಸಹಕಾರ ಚಳುವಳಿಯಲ್ಲಿ ಪಾಲ್ಗೊಂಡನು.ಆದರೆ ಅವನ ಮೇಲೆ ಇನ್ನೂ ಹೆಚ್ಚು ಪರಿಣಾಮವಾದದ್ದು “ಸೈಮನ್ ಕಮಿಷನ್” ಮೂಲಕ ಬ್ರಿಟಿಷ್ ಪೋಲೀಸ್ ಕಾಯ್ದೆಯಡಿಯಲ್ಲಿ ನೂರಾರು ಭಾರತೀಯರನ್ನು ಬಂಧಿಸಿದ್ದರು ಮುಗ್ಧ ರೈತರ, ಮತ್ತು ತಮ್ಮ ಹಕ್ಕುಗಳಿಗಾಗಿ ಹೋರಾಡಿ ಸ್ವಾತಂತ್ರವನ್ನು ಬಯಸಿದ್ದ ನಾಗರೀಕರ ಮರಣ.

ನಂತರದ ಲಾಲಾ ಲಜಪತ್ ರಾಯ್‍ರವರ ಅಮಾನುಷ ಹತ್ಯೆ. ಈಸ್ಟ್ ಇಂಡಿಯಾ ಕಂಪನಿಯು ಭಾರತೀಯ ನಾಗರೀಕರು ಎಚ್ಚೆತ್ತು ತಮ್ಮ ವಿರುದ್ಧ ಹೋರಾಡಿ ತಮ್ಮ ದೇಶದ ರಕ್ಷಣೆಗಾಗಿ ನಿಂತಲ್ಲಿ, ತಮ್ಮ ಅಸ್ತಿತ್ವ ಮತ್ತು ಸರ್ಕಾರದಡಿಯಲ್ಲಿ ಭಾರತೀಯರು ಬದುಕಲಾರರು ಎಂದು ಅರಿವಾಗಿ ಭಾರತೀಯರ ಮೇಲೆ ತಂದೊಡ್ಡಿದ ಕಾನೂನುಗಳಿಂದ. ಬ್ರಿಟಿಷ್ ಸೇನೆಯೊಂದಿಗೆ ಈಗ ಕಾನೂನು ಸಹ ಭಾರತೀಯ ಪ್ರಜೆಗಳ ವಿರುದ್ಧ ತನ್ನ ಕಾರ್ಯಾಚರಣೆ ನಡೆಸಲಾರಂಭಿಸಿತ್ತು.. ಇನ್ನು ಶಾಂತಿ-ಸಮಾಧಾನಗಳಿಂದ ಬ್ರಿಟಿಷರ ದಾಸ್ಯದಿಂದ ಈ ದೇಶವನ್ನು ಬಂಧಮುಕ್ತವನ್ನಾಗಿ ಮಾಡವುದು ಅಸಾಧ್ಯ ಎಂದು ನಿರ್ಧರಿಸಿದ ಭಗತ್‍ನ ಕ್ರಾಂತಿಕಾರಿ ಆಲೋಚನೆಗಳು ಯೋಜನೆಗಳಾಗಿ ನಂತರ ಕಾರ್ಯರೂಪಕ್ಕೆ ಬರಲಾರಂಭಿಸಿದವು.

ಭಾರತದ ಹಿಂದಿನ ಇತಿಹಾಸ, ಅಂದಿನ ಪರಿಸ್ಥಿತಿ, ಬ್ರಿಟಿಷರಿಂದ ಭಾರತೀಯರ ಮೇಲೆ ಬಲವಂತವಾಗಿ ಹೇರಲ್ಪಟ್ಟಿದ್ದ ಕಾನೂನು ವ್ಯವಸ್ಥೆ…. ಎಲ್ಲವನ್ನೂ ಅತಿ ಸೂಕ್ಷ್ಮವಾಗಿ ಅಧ್ಯಯನ ಮಾಡಿದ ಭಗತ್ ಮುಂದೆ ಹಿಂದೂಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಆರ್ಮಿಯನ್ನು ಸಧೃಢಗೊಳಿಸಿದ.ನಂತರದ ದಿನಗಳಲ್ಲಿ ತನ್ನ ಸ್ವಗೃಹವನ್ನೂ ತೊರೆದನು. ತನ್ನ ಮನೆಯಲ್ಲಿದ್ದರೆ ಮದುವೆಯಾಗಿ ಕೊನೆಗೆ ಸ್ವಾರ್ಥದಿಂದ ತನಗಾಗಿ ಬದುಕಿ ದೇಶಕ್ಕೇನೂ ಮಾಡಲಾರೆನೆಂದು ಅರಿತ ಅವನದು ಕಠಿಣ ನಿರ್ಧಾರವಾಗಿತ್ತು…. ತನ್ನ ಮುಂದಿನ ಬದುಕು ಈ ದೇಶಕ್ಕಾಗಿಯೇ ……ಇನ್ಯಾವ ಸಂಸಾರ ಮೋಹದಂತಹ ಆಸೆಗಳು ತನ್ನನ್ನು ಬದಲಿಸಲಾರದೆಂದು ಪತ್ರ ಬರೆದಿಟ್ಟು ತೆರಳಿದ.

ಅವನ ಮುಂದಿನ ದಾರಿ ಕಾನ್ಪುರ.

ತನ್ನ ದೇಶಕ್ಕಾಗಿ ಮನೆ, ತನ್ನವರು ಮತ್ತು ತನ್ನದಾಗಿದ್ದ ಎಲ್ಲವನ್ನೂ ತ್ಯಾಗ ಮಾಡಿದ್ದ ಭಗತ್‍ನಲ್ಲಿ ಬ್ರಿಟಿಷ್-ಬಂಧಮುಕ್ತ ಭಾರತದ ನಿರ್ಮಾಣದ ಕನಸೊಂದೇ ನಿರಂತರವಾಗಿ ಕಾಡಿದ್ದು! ಅಂದಿನ ಭಾರತದ ಮೇಲಿದ್ದ ಬ್ರಿಟಿಷ್ ಕಾನೂನು ವ್ಯವಸ್ಥೆ “ಇಂಡಿಯನ್ ಪೋಲೀಸ್ ಆ್ಯಕ್ಟ್”ನ ರೂಪದಲ್ಲಿ ಭಾರತೀಯರನ್ನು ಮನಬಂದಂತೆ ಬಂಧಿಸುವುದು, ಲಾಠೀ ಪ್ರಹಾರ ನಡೆಸುವುದು ಮತ್ತು ಕಾನೂನಿನ ಹೆಸರಲ್ಲಿ ಅಸಹಾಯಕ ಭಾರತೀಯರ ಮೇಲೆ ದೌರ್ಜನ್ಯವೆಸಗುವುದು ಅವಿರತವಾಗಿ ನಡೆದಿತ್ತು.

ಡಿಸೆಂಬರ್ 17, 1928…

ತನ್ನ ಸ್ನೇಹಿತರಾದ ಆಜಾದ್, ರಾಜಗುರು, ಸುಖದೇವ್ ಮತ್ತು ಜಯಗೋಪಾಲ್‍ರವರೊಂದಿಗೆ ಸ್ಯಾಂಡರ್ಸ್‍ನನ್ನು ಅಂತ್ಯಗೊಳಿಸುವ ಯೋಜನೆ ಹಾಕಿದ ಭಗತ್ ಸಿಂಗ್ ವ್ಯವಸ್ಥಿತ ರೀತಿಯಲ್ಲಿಯೇ ನಡೆಸಿದ. ಲಾಹೋರಿನ ಡಿ.ಏ.ವಿ ಕಾಲೇಜಿನ ಆವರಣದಲ್ಲಿ ತನ್ನ ಮೋಟಾರ್ ಬೈಕಿನಲ್ಲಿ ಬಂದಿಳಿದ ಸ್ಯಾಂಡರ್ಸ್‍ನ ಮೇಲೆ ಮೊದಲು ರಾಜಗುರು ತನ್ನ ರಿವಾಲ್ವರಿನಿಂದ ಗುಂಡು ಹಾರಿಸಿದ. ತಡಮಾಡದೆ ತನ್ನ ಬಳಿಯಿದ್ದ ಪಿಸ್ತೂಲಿನಿಂದ ಅವನ ತಲೆ ಚೂರಾಗುವವರೆಗೂ ಸತತವಾಗಿ ಗುಂಡು ಹಾರಿಸಿದ. ರಕ್ತದ ಮಡುವಿನಲ್ಲಿ ಸ್ಯಾಂಡರ್ಸ್ ಬಿದ್ದಿದ್ದ. ಇದು ಭಗತ್ ಮತ್ತವನ ಸೇನೆಯ ಮೊದಲ ಗೆಲುವಾಗಿತ್ತು.

ಯೋಜಿತ ರೀತಿಯಲ್ಲಿ ಸ್ಥಳದಿಂದ ಎಲ್ಲರೂ ತಪ್ಪಿಸಿಕೊಂಡು ತಮ್ಮ ರಹಸ್ಯ ಕಾರ್ಯಾಚರಣೆಯ ಸ್ಥಳ ತಲುಪಿದರು. ಈ ಕೃತ್ಯ ನಡೆದ ನಾಲ್ಕು ದಿನಗಳಲ್ಲಿ ಲಾಹೋರಿನ ಎಲ್ಲೆಡೆ ತಮ್ಮ ಕೃತ್ಯ ಲಾಲಾರವರ ಕೊಲೆಯ ವಿರುದ್ಧದ ಸೇಡಿನ ರೂಪವಷ್ಟೇ ಅಲ್ಲದೇ ವಿದೇಶೀ ಬ್ರಿಟಿಷರು ಭಾರತೀಯರನ್ನು ಗುಲಾಮರನ್ನಾಗಿಸಿ ನಡೆಸುತ್ತಿರುವ ಅಮಾನುಷ ಕೃತ್ಯಗಳ ವಿರುದ್ಧದ ತಮ್ಮ ಹಕ್ಕುಗಳ ಹೋರಾಟದ ಪ್ರತಿರೂಪ ಎನ್ನುವ ಸಂದೇಶಗಳನ್ನು ಹೊತ್ತ ತಮ್ಮ ಸೇನೆಯ ಭಿತ್ತಿ ಪತ್ರಗಳನ್ನು ಅಂಟಿಸಿದರು. ಬ್ರ್ರಿಟಿಷ್ ಸರಕಾರದ ಚಟುವಟಿಕೆಗಳನ್ನು ಗಮನಿಸುತ್ತಾ ಭಗತ್ ಮತ್ತು ಅವನ ಸೇನೆ ಲಾಹೋರಿನಿಂದ ಹೊರಬರಲು ಪ್ರಯತ್ನಿಸಿ ಪೋಲೀಸರ ಕಣ್ಣುಗಾವಲಿನಿಂದ ತಪ್ಪಿಸಿಕೊಂಡು ವೇಷ ಬದಲಿಸಿಕೊಂಡು ಲಾಹೋರಿನಿಂದ ಹೊರಬಂದರು. ಮುಂದಿನ ಯೋಜನೆ ಸಿದ್ಧವಾಗಿತ್ತು…ಬಾಂಬ್ ತಯಾರಿಸುವ ಕಲೆಯನ್ನು ಕಲಿಯಬೇಕಿತ್ತು.

ಸಂಪ್ರದಾಯಸ್ಥ ಸಿಖ್ ಪರಿವಾರದ ಭಗತ್ ತನ್ನ ದೇಶಕ್ಕಾಗಿ ಏನನ್ನೂ ಮಾಡಲು ಹಿಂಜರಿಯದ ಸ್ವಭಾವದವನು. ತನ್ನ ಸಿಖ್ ಪೇಟವನ್ನು ತ್ಯಜಿಸಿ, ಗಡ್ಡವನ್ನೂ ತೆಗೆದು ಬ್ರಿಟಿಷ್ “ಜ್ಯಂಟಲ್‍ಮ್ಯಾನ್”ನಂತೆ ಭಗತ್ ತನ್ನ ಸ್ನೇಹಿತ ಭಗವತಿ ಚರಣರ ಪತ್ನಿ ಮತ್ತು ಪುತ್ರರ ವೇಷವನ್ನೂ ತನ್ನ ಪರಿವಾರದವರಂತೆ ಮಾರ್ಪಾಡು ಮಾಡಿ ಪೋಲೀಸರ ಕಣ್ತಪ್ಪಿಸಿ ಕಲ್ಕತ್ತಾ ತಲುಪಿದನು. ಅಲ್ಲಿ ಬಾಂಬ್ ಉತ್ಪಾದನೆಯನ್ನು ಅವನು ಸ್ನೇಹಿತರೊಡನೆ ಕಲಿತನು. ಆದರೆ ಅವಶ್ಕಕ ವಸ್ತುಗಳ ಕೊರತೆಯಿಂದಾಗಿ ಆಗ್ರಾ ತಲುಪಿ ಅಲ್ಲಿ ರಹಸ್ಯ ಕಾರ್ಖಾನೆ ಸ್ಥಾಪಿಸಿ ಬಾಂಬ್ ತಯಾರಿಸತೊಡಗಿದರು.

ಅದಾಗಲೇ ಹಿಂದೂಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಆರ್ಮಿಯ ನೆರವಿಗೆ ಅನೇಕ ಸಹೃದಯರು ತಮ್ಮ ಕೈಲಾದಷ್ಟು ಆರ್ಥಿಕ ಸಹಾಯ ನೀಡತೊಡಗಿದರು. ಬಾಂಬ್‍ಗಳು ತಯಾರಾದವು. ಭಾರತದಲ್ಲಿದ್ದ ಸರಕಾರ ಪ್ರಾಯೋಜಿಸಿದ್ದ ಸಾರ್ವಜನಿಕ ಸುರಕ್ಷತೆಯ ಮತ್ತು ವ್ಯಾಪಾರ-ವಹಿವಾಟಿನ ನಿರ್ಬಂಧಗಳ ಕುರಿತ ಬಿಲ್ಲನ್ನು ಸಂಸತ್ತು ಅನುಮೋದಿಸಲು ಸಿದ್ಧವಾಗುತ್ತಿತ್ತು. ಭಗತ್‍ನ ಮುಂದಿನ ಗುರಿ ದೆಹಲಿಯ ಸಂಸತ್ತಿನಲ್ಲಿ ನಡೆಯಲಿರುವ ಅಧಿವೇಶನದ ಸಂದರ್ಭದಲ್ಲಿ ಹೇಗಾದರೂ ಮಾಡಿ ತಲುಪುವುದು. ತನ್ನ ಸ್ನೇಹಿತನೊಬ್ಬನ ಸಹಾಯದಿಂದ ವೀಕ್ಷಕರ ಪಾಸ್ ಪಡೆದ ಭಗತ್ ಸಂಸತ್ತಿನ ರೂಪುರೇಷೆಗಳನ್ನು ಅವಲೋಕಿಸಿದ್ದ.

ಏಪ್ರಿಲ್ 8, 1929…

ಮತ್ತೊಂದು ಐತಿಹಾಸಿಕ ದಿನ… ಭಗತ್ ಮತ್ತವನ ಸ್ನೇಹಿತ ಬ್ರತುಕೇಶ್ವರ ದತ್ತರು ಸಂಸತ್ತು ತಲುಪಿ ವೀಕ್ಷಕ ಆಸನಗಳಲ್ಲಿ ಕುಳಿತಿದ್ದರು. ಅಧಿವೇಶನದಲ್ಲಿ ಮುಂದಿನ ನಿರ್ಧಾರದ ಕುರುತು ಭಾಷಣ ನಡೆಯುತ್ತಿದ್ದಂತೆಯೇ ಎದ್ದು ನಿಂತ ಅವರಿಬ್ಬರೂ ಸ್ಪೀಕರ್ ಕುಳಿತಿದ್ದ ಸ್ಥಾನದ ಹಿಂದಿನ ಗೋಡೆಯ ಮೇಲೆ ಸರಿಯಾಗಿ ಗುರಿಯಿಟ್ಟು ಬಾಂಬ್ ಎಸೆದರು. ಬೃಹತ್ತಾದ ಸ್ಫೋಟದೊಂದಿಗೆ ಸಿಡಿದ ಬಾಂಬ್ ವಾತಾವರಣವನ್ನೇ ಬದಲಿಸಿತು. ಎಲ್ಲರೂ ಗಾಬರಿಯಿಂದ ಹೊರಗೆ ಧಾವಿಸತೊಡಗಿದರು.  ತಮ್ಮ ಧಾಳಿಯಿಂದ ಯಾವ ಸಾವು-ನೋವೂ ಆಗಲಿಲ್ಲ. ಬ್ರಿಟಿಷರ ಗಮನ ಸೆಳೆದು ಸತ್ಯವನ್ನು ಅರುಹುವುದಷ್ಟೇ ಅವರ ಗುರಿಯಾಗಿತ್ತು. ಕ್ಷಣಾರ್ಧದಲ್ಲಿ ತಮ್ಮ ಬಳಿಯಿದ್ದ ಪಿಸ್ತೂಲುಗಳ ನೆರವಿನಿಂದ ಅವರು ತಪ್ಪಿಸಿಕೊಳ್ಳಬಹುದಿತ್ತು. ಆದರೆ ಇಷ್ಟು ದಿನ ಕಾದ್ದಿದ್ದ ಭಗತನ ಗುರಿ ಅವನು ತಲುಪಿಯಾಗಿತ್ತು. ತಾವಾಗಿಯೇ ರಿವಾಲ್ವರ್ ಎಸೆದು ತಪ್ಪಿಸಿಕೊಳ್ಳುವ ಪ್ರಯತ್ನವನ್ನೂ ಮಾಡದೆ ಸೆರೆಯಾದರು. “ಇನ್‍ಕ್ವಿಲಾಬ್ ಜಿಂದಾಬಾದ್” ಎಂಬ ನಿರಂತರ ಹೋರಾಟದ ಘೋಷಣೆ ಅವರಿಂದ ಕೇಳಿಬಂತು…..ಅವರನ್ನು ಬಂಧಿಸಿ ಸೆಂಟ್ರಲ್ ಜೈಲಿನಲ್ಲಿರಿಸಲಾಯಿತು.

ಸೆರೆಯಲ್ಲಿದ್ದರೂ ಅವನದು ಎಡೆಬಿಡದ ಕ್ರಾಂತಿ, ಅವನ ವಿಚಾರ ವೈಖರಿ, ಅಪಾರ ಜ್ಞಾನವೆಲ್ಲವೂ ಅಭಿವ್ಯಕ್ತವಾದವು…. ಜೈಲಿನಲ್ಲಿ ಆಹಾರ ಸೇವಿಸಲು ನಿರಾಕರಿಸಿದಾಗ ಬಲವಂತವಾಗಿ ಪೈಪುಗಳ ಮೂಲಕ ಆಹಾರವನ್ನು ತುರುಕುವ ಪ್ರಯತ್ನ ನಡೆಯಿತು, ಕುಡಿಯಲು ನೀರನ್ನೂ ಕೊಡದೆ ನಾನ ಹಿಂಸೆಗಳನ್ನು ನೀಡಲಾಯ್ತು! ಆದರೆ ಭಗತ್ ಸಿಂಗ್ ಅಸಾಮಾನ್ಯ ಮನೋಬಲವನ್ನು ಹೊಂದಿದ್ದ ಧೀರ! ಸೆರೆಯಲ್ಲಿದ್ದ ಭಾರತೀಯ ಕೈದಿಗಳನ್ನು ಅಮಾನುಷವಾಗಿ ಬ್ರಿಟಿಷರು ನಡೆಸಿಕೊಳ್ಳುತ್ತಿದ್ದ ರೀತಿಯನ್ನೂ ಕಂಡು ಕ್ರೋಧಗೊಂಡ ಅವನು ಅಲ್ಲಿಯೂ ಅದನ್ನು ತಪ್ಪೆಂದು ಸಮರ್ಥಿಸಿದ. ಅಲ್ಲಿನ ಅವನ ದಿನಚರಿಯಲ್ಲಿ ಸತತವಾಗಿ ಚಿಂತನೆ ಮತ್ತು ಬರಹಗಳು ಪ್ರಮುಖವಾದವು. ಭಾರತದಲ್ಲದೆ ವಿದೇಶದಲ್ಲೂ ಭಗತ್ ಸಂಗ್ ಕುರಿತು ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು! ಅನೇಕ ಪ್ರಸಿದ್ಧ ವ್ಯಕ್ತಿಗಳು ಅವನನ್ನು ಭೇಟಿಯಿತ್ತರು, ಸೆರೆಮನೆಯಲ್ಲಿಯೇ ಅವನನ್ನು ಪತ್ರಕರ್ತರು ಸಂಪರ್ಕಿಸಿ ಸಮಾಲೋಚನೆಯನ್ನೂ ನಡೆಸುತ್ತಿದ್ದರು.

ನಂತರ ಆರಂಭವಾದ ನ್ಯಾಯಾಲಯದ ಪ್ರಕ್ರಿಯೆಗಳಲ್ಲಿ ಭಗತ್‍ನ ಕಾರ್ಯವನ್ನು ಜೀವಹಾನಿಗಾಗಿ ಮಾಡಿದ ಕೃತ್ಯವೆಂದು ಬಿಂಬಿಸಲಾಯಿತು. ಬಂಧನದಲ್ಲಿದ್ದ ಭಗತ್ ಮತ್ತವನ ಸಂಗಡಿಗ ಬತುಕೇಶ್ವರ ದತ್ತರ ವಿಚಾರಣೆ 7 ಮೇ, 1929ರಂದು ಆರಂಭವಾಯ್ತು. ತನ್ನ ಪರವಾಗಿ ತಾನೇ ವಾದಿಸಲು ನಿರ್ಧರಿಸಿದ. ಅವನ ವಾದ, ವಿಚಾರಗಳ ಸರಣಿ ಎಲ್ಲರನ್ನೂ ನಿಬ್ಬೆರಗಾಗಿಸಿತು! ದೇಶದೆಲ್ಲೆಡೆ ಅವನ ಬಂಧನಕ್ಕೆ ಭಾರತೀಯರಿಂದ ವಿರೋಧ ವ್ಯಕ್ತವಾಗತೊಡಗಿತು ಭಗತ್ ತನ್ನ ಕಾರ್ಯವನ್ನು ದೇಶದ ಸ್ವಾತಂತ್ರದ ಸಂಗ್ರಾಮದ ಸಂಕೇತವೆಂದೂ ಅದು ಬ್ರಿಟಿಷ್ ಸಾಮ್ರಾಜ್ಯವಾದವನ್ನು ಪ್ರತಿರೋಧಿಸಿ ಚುನಾಯಿತರಾಗಿದ್ದ ಭಾರತೀಯ ಪ್ರತಿನಿಧಿಗಳ ವಿರುದ್ಧ ಬ್ರಿಟಿಷರು ನಡೆಸಿದ ದಬ್ಬಾಳಿಕೆಯ ವಿರುದ್ಧದ ಆಗ್ರಹವೆಂದು ವಾದಿಸಿದ. ಸತತವಾಗಿ ವಾದ-ಪ್ರತಿವಾದಗಳ ಪ್ರಕ್ರಿಯೆ ಮೇ 7ರಿಂದ ಆರಂಭವಾಗಿ ಅಕ್ಟೋಬರ್ 7ರವರೆಗೂ ಮುಂದುವರೆಯಿತು.

ಸ್ವಾತಂತ್ರ ಹೋರಾಟದ ಕಿಡಿಯು ತನ್ನ ವ್ಯಾಪ್ತಿಯನ್ನು ದೇಶದೆಲ್ಲೆಡೆ ಹರಡಿತು. ಎಲ್ಲೆಡೆಯಲ್ಲೂ ಭಗತ್ ಸಿಂಗ್‍ನ ಗುಣಗಾನ, ಅವನ ಧೈರ್ಯವನ್ನು ಮೆಚ್ಚಿದವರು ಎಲ್ಲಾ ಹೋರಾಟಗಾರರು…. ಅವನೀಗ ದೇಶದ ನೆಚ್ಚಿನ ಯುವಶಕ್ತಿಯ ಪ್ರತಿರೂಪ ಪಡೆದ. ಭಗತ್ ಮತ್ತವನ ಸಹಚರರು ಈಗ ಸ್ವಾತಂತ್ರ್ಯ ಸಂಗ್ರಾಮದ ಹೊಸ ಸಂಕೇತ…..ಎಲ್ಲರ ಸ್ಫೂರ್ತಿ!

ಅವನ ಧೈರ್ಯ, ಸಮಯಪ್ರಜ್ಞೆ ಶತಮಾನದ ಗುಲಾಮಗಿರಿಯಿಂದ ಬೇಸತ್ತಿದ್ದ ಭಾರತೀಯರಿಗೆ ಹೋರಾಟದ ಹೊಸ ಹಾದಿಯಾಯಿತು. ಅದೇ ಸಮಯದಲ್ಲಿ ತನ್ನ ಸಂಘಟನೆಯ ಸಹಚರರನ್ನೂ ಲಾಹೋರಿನಲ್ಲಿ ಬಂಧಿಸಲಾಗಿತ್ತು! ಅವನ ಸಹಚರರ ಮೇಲೆ ಸ್ಯಾಂಡರ್ಸ್ ಕೊಲೆ ಮತ್ತು ಲಾಹೋರ್ ಕಾನೂನು ವಿರೋಧಿ ಕಾರ್ಯಾಚರಣೆಯ ಆಪಾದನೆ ಹೇರಲಾಗಿತ್ತು!

ಅನೇಕ ದಿನಗಳ ವಿಚಾರಣೆಗಳ ನಂತರ ಭಗತ್‍ನ ವಾದಗಳೆಲ್ಲವೂ ತಿರಸ್ಕತಗೊಂಡವು. ಭಗತ್ ಸಿಂಗ್, ರಾಜ್‍ಗುರು ಮತ್ತು ಸುಖದೇವ್ ಅವರನ್ನು 23 ಮಾರ್ಚ್ 1931ರಂದು ನೇಣುಕಂಬಕ್ಕೇರಿಸಬೇಕೆಂದು ನ್ಯಾಯಾಲಯ ತೀರ್ಪು ನೀಡಿತು. ಗಾಂಧೀಜಿಯವರು ಭಗತ್‍ನಿಂದಾದ ಸ್ಯಾಂಡರ್ಸ್ ಕೊಲೆಯನ್ನು ಅನ್ಯಾಯವೆಂದು ವಿರೋಧಿಸಿದರು……ಪಂಡಿತ್ ನೆಹರೂ ಸಹ ಇದೇ ಅಭಿಪ್ರಾಯವನ್ನು ಅನುಮೋದಿಸಿದರು. ಇವರಿಬ್ಬರೂ ಭಗತ್ ಮತ್ತವನ ಸ್ನೇಹಿತನ ಮರಣದಂಡನೆಯನ್ನು ರದ್ದುಗೊಳಿಸಲು ನಡೆಸಿದ ಅಲ್ಪ ಪ್ರಯತ್ನ ಕಾನೂನಿನ ತೀರ್ಪನ್ನು ಬದಲಿಸಲು ಅಸಮರ್ಥವಾಯಿತು.

ತನ್ನ ಸ್ನೇಹಿತರಾದ ಸುಖದೇವ ಮತ್ತು ರಾಜಗುರುವಿನೊಡನೆ ಭಗತ್ ಸಿಂಗ್ ಮಾರ್ಚ್ 23, 1931ರಂದು “ಇನ್‍ಕ್ವಿಲಾಬ್ ಜಿಂದಾಬಾದ್” ಎನ್ನುತ್ತಾ ನಗುನಗುತ್ತಾ ನೇಣುಗಂಬವೇರುತ್ತಾ ನುಡಿದ ಸಾಲುಗಳು:

ಮೇರಾ ರಂಗ್ ದೇ ಬಸಂತೀ ಚೋಲಾ… ಮೇರಾ ರಂಗ್ ದೇ……..

ಇಸೀ ರಂಗ್ ಮೇ ರಂಗ್ ಶಿವಾ ನೇ, ಮಾ ಕಾ ಬಂಧನ್ ಖೋಲಾ…!

(ನನ್ನ ಬಣ್ಣವನ್ನು ವೀರ ಶಿವಾಜಿಯ ರಕ್ತದ ಬಣ್ಣವಾಗಿ ಬದಲಿಸು..

ನನ್ನ ತಾಯಿಯನ್ನು ಬಂಧನದ ಸಂಕೋಲೆಗಳಿಂದ ಮುಕ್ತಗೊಳಿಸು..!)

*******************************************************************************************************************************************

ಭಗತ್ ಸಿಂಗ್ ದೇಶಕ್ಕೆ ನೀಡಿರುವ ಸಂದೇಶ:

“ಎಲ್ಲವೂ ಸುಟ್ಟು ಭಸ್ಮವಾದರೂ, ಭಸ್ಮದ ಕಣಕಣಗಳು ನನ್ನ ಜ್ವಾಲೆಯಿಂದ ಜಾಗೃತವಾಗುವವು.. ಸೆರೆಯಲ್ಲಿದ್ದರೂ ನನ್ನ ಧ್ಯೇಯಕ್ಕಾಗಿ ಎಂದಿಗೂ ನಾನು ಬಂಧಮುಕ್ತ…”

ಕ್ರಾಂತಿಯ ಕೋರಿಕೆಯು ಅಂತರಾತ್ಮದ ನಿಲುವಾಗಬೇಕು! ಮಾನವೀಯತೆಯ ದ್ಯೋತಕವೂ ಆಗಬೇಕು ಇದು ಅವಿನಾಶೀ ಭಾವವಾಗಬೇಕು!

ಭಗತ್ ಬ್ರಿಟಿಷರ ವಿರುದ್ಧ ನಡೆಸಿರುವ ಯಾವ ಕೃತ್ಯವನ್ನೂ ಕುರಿತು ನಾನು ಪಶ್ಚಾತ್ತಾಪ ಪಡುವುದಿಲ್ಲ, ಮುಂದಿನ 15 ವರ್ಷಗಳಲ್ಲಿ ಭಾರತ ಬ್ರಿಟಿಷರ ದಾಸ್ಯದಿಂದ ಮುಕ್ತವಾಗುತ್ತದೆ. ಆದರೆ ದೇಶದ ಅಭಿವೃದ್ಧಿಗಾಗಿ ಆಗಬೇಕಾದ ಮುಖ್ಯ ಕೃತ್ಯವೇನೆಂದರೆ ಬ್ರಿಟಿಷರು ಸ್ವಾರ್ಥದಿಂದ ಹಿಂದೂಸ್ಥಾನದ ಮೇಲೆ ಹೇರಿರುವ ಕಾನೂನು ವ್ಯವಸ್ಥೆ, ಕಾಯಿದೆಗಳನ್ನು ಸ್ವಾತಂತ್ರ ಬರುವ ಮೊದಲು ಸಂಪೂರ್ಣವಾಗಿ ತಿರಸ್ಕರಿಸಿ!

ಹಿಂದೂಸ್ಥಾನದ ಪ್ರಜೆಗಳ ಹಿತಕ್ಕಾಗಿಯೇ ಕಾನೂನು ರೂಪುಗೊಳ್ಳಬೇಕು ಎಂಬುದು. ಈ ದೇಶದ ಯುವಶಕ್ತಿಯಲ್ಲಿ ಕ್ರಾಂತಿಯ ಸಂಕಲ್ಪ ನೀಡುವಂತಿದ್ದ ಅವನ ಸಂದೇಶವು ಭಾರತವು ಎಲ್ಲಾ ರೀತಿಯಲ್ಲೂ ದಾಸ್ಯದಿಂದ ಮುಕ್ತಹೊಂದಬೇಕೆಂಬುದು. ತನ್ನ ಮಣ್ಣು, ಭೂಮಿ, ಗಂಧ-ಗಾಳಿಯನ್ನು ಪ್ರೀತಿಸುತಿದ್ದ ಭಗತ್ ಭಾರತದ ಧ್ವಜವು ಉತ್ತುಂಗಕ್ಕೇರುವುದು!

—  ಮಯೂರಲಕ್ಷ್ಮಿ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!