ಪ್ರಚಲಿತ

ಬಡವರ ಅಡುಗೆ ಮನೆಯಲ್ಲಿ ನೀಲಿ ಹೂವು ಅರಳಿಸಿದವನದು ತಿರಪೆ ಸರ್ಕಾರವೇ?

ಅದು 1964 ನೇ ಇಸವಿ ಭಾರತದ ಪ್ರಥಮ ಪ್ರಧಾನಿ ಮರಣ ಹೊಂದಿದ್ದರು. ಪಟೇಲರನ್ನು ಹಿಂದೆ ತಳ್ಳಿ ಭರ್ತಿ ೧೭ ವರ್ಷ ಆಡಳಿತ ನಡೆಸಿ ಹೊರಟಿದ್ದರು. ಅವರ ಕೊಡುಗೆಯನ್ನು ನಾವು ಮರೆಯುವಂತಿಲ್ಲ. ಚೀನಾ ಯುದ್ಧದ ಸಂದರ್ಭದಲ್ಲಿ ಅವರು ಸ್ಪಂದಿಸಿದ್ದು ಉಲ್ಲೇಖನೀಯವೇ ಸರಿ. ಅದಕ್ಕೆ ಸಾಕ್ಷಿಯಾಗಿ ಭಾರತದ ಕೆಲವು ಪ್ರದೇಶಗಳು ಚೀನಾ ಭೂಪಟಕ್ಕೆ ಸೇರಿ ಹೋದವು. ಈಗ ಇರುವ ವಿಷಯ ಅದಲ್ಲ. ಒಮ್ಮೆ ತೆರವಾದ ಪ್ರಧಾನಿ ಹುದ್ದೆಗೆ ಯಾರು ಯೋಗ್ಯರು ಎಂಬ ನಿರ್ಧಾರ ತೆಗೆದುಕೊಳ್ಳಬೇಕಲ್ಲ. ನೆಹರೂ ತಮ್ಮ ಉತ್ತರಾಧಿಕಾರಿ ತಮ್ಮ ಮಗಳೇ ಎಂದು ಪದೇ ಪದೇ ಪರೋಕ್ಷವಾಗಿ ಹೇಳಿದ್ದರು. ಆದರೆ ಇಂದಿರಾ ತನ್ನ ತಂದೆಯಿಂದ ಹದಗೆಟ್ಟು ಹೋದ ದೇಶವನ್ನು ತನ್ನ ಹೆಗಲ ಮೇಲೆ ಹೊತ್ತುಕೊಳ್ಳುವಷ್ಟು ದಡ್ಡಿಯಾಗಿರಲಿಲ್ಲ. ಅಂಥ ಒಂದು ಗುರುತರವಾದ ಜವಾಬ್ದಾರಿಯನ್ನು ಹೊತ್ತು ನಿರ್ವಾತವನ್ನು ತುಂಬಿಕೊಟ್ಟವರೇ ಶಾಸ್ತ್ರಿಯವರು.

ಒಬ್ಬ ನಾಯಕನಿಗೆ ಜನರ ಸ್ಪಂದನೆ ಹೇಗಿರುತ್ತದೆ ಎಂಬುದರ ಬಗ್ಗೆ ಹೇಳಲು ಹೊರಟಿದ್ದೇನೆ. ಜನರ ಸ್ಪಂದನೆಯನ್ನು ಬಯಸುವ ನಾಯಕ ಜನಾನುರಾಗಿಯಾಗಿರಬೇಕು. ಶಾಸ್ತ್ರಿ ಕೂಡಾ ಅಂಥ ಒಬ್ಬ ನಾಯಕ. ಒಮ್ಮೆ ಜನರ ಮೇಲೆ ಲಾಠಿ ಪ್ರಹಾರ ಮಾಡುವುದರ ಬಗ್ಗೆ ಬೇಸರ ವ್ಯಕ್ತಪಡಿಸಿ ನೀರನ್ನು ಚಿಮುಕಿಸಿ ಜನರನ್ನು ಕದಲಿಸಿ ಲಾಠಿ ಪ್ರಯೋಗ ಬೇಡ ಅಂದರು. ರೈಲಿನ ಎಲ್ಲ ಬೋಗಿಗಳಿಗೆ ಸಮಾನ ವ್ಯವಸ್ಥೆ ಕಲ್ಪಿಸಿಕೊಟ್ಟರು.ಜನರು ಅವರ ಭೇಟಿಗೆ ಬಂದಾಗ ಪ್ರತಿಯೊಬ್ಬನ ಅಹವಾಲನ್ನು ಕೇಳುತ್ತಿದ್ದರು. ಇಂತಿಪ್ಪ ನಾಯಕ ಒಮ್ಮೆ ದೇಶದ ಒಳಿತಿಗಾಗಿ ಜನರಲ್ಲಿ ಪ್ರಾರ್ಥನೆಯಿಟ್ಟರೆ ಜನ ತಾನಾಗಿಯೇ ಸ್ಪಂದಿಸುತ್ತಾರೆ. ಒಮ್ಮೆ ದೇಶದಲ್ಲಿ ಬರಗಾಲ ಆವರಿಸಿ ಆಹಾರ ಕೊರತೆಯಾದಾಗ ವಾರಕ್ಕೊಂದು ಊಟ ಬಿಟ್ಟು ಉಪವಾಸ ಮಾಡುವಂತೆ ಕರೆ ನೀಡಿದ್ದರು. ಅವರು ಸುಮ್ಮನೆ ಕರೆ ಕೊಟ್ಟು ತಾವು ಭರ್ತಿ ಮೃಷ್ಟಾನ್ನ ಭೋಜನ ಮಾಡಿ ಪವಡಿಸಲಿಲ್ಲ ಬದಲಾಗಿ ತಮ್ಮ ಕರೆಯ ಪ್ರಥಮ ಪ್ರತಿಪಾಲಕರೂ ಅವರೇ ಆದರು. ತಮ್ಮ ಮನೆ ಮಕ್ಕಳಿಗೆ ಇದನ್ನು ರೂಢಿಸಿಕೊಳ್ಳುವಂತೆ ಹೇಳಿದರು. ಎಷ್ಟೇ ಆಗಲಿ ತಮ್ಮ ಕುಟುಂಬ ನಿರ್ವಹಣೆಗೂ ಹೆಚ್ಚಿನ ಆದಾಯ ಸಿಕ್ಕಾಗ ಕಛೇರಿಗೆ ತಮ್ಮ ಸಂಬಳವನ್ನು ಕಡಿಮೆಗೊಳಿಸುವಂತೆ ಪತ್ರ ಬರೆದ ಆದರ್ಶ ಜೀವಿಯವರು. ಬರ ವೀಕ್ಷಣೆಗೆಂದು ಬಂದು ತಾವು ಹಾದು ಹೋಗುವ ನೆಲದಲ್ಲಿ ಧೂಳೇಳಬಾರದು ಎಂಬ ಕಾರಣಕ್ಕೆ ಟ್ಯಾಂಕರುಗಟ್ಟಲೇ ನೀರು ಸುರಿಸಿಕೊಂಡವರಲ್ಲ. ಶಾಸ್ತ್ರೀ ಅಂಥ ಪಾರದರ್ಶಕ ವ್ಯಕ್ತಿ ಕರೆ ಕೊಟ್ಟಾಗ ಜನ ಸ್ಪಂದಿಸದೇ ಇರುತ್ತಾರಾ? ಜನರ ಸ್ಪಂದನೆಯೂ ಸಿಕ್ಕಿತು ಹಲವು ಜನ ಒಂದು ಹೊತ್ತು ಊಟ ಬಿಟ್ಟರು. ಅದು ಎಷ್ಟೋ ಹಸಿದ ಜನರ ಹೊಟ್ಟೆ ತುಂಬಿಸಿತು. ನಮ್ಮ ದೇಶ ಆಹಾರ ಭದ್ರತೆಯನ್ನು ಖಾತ್ರಿಪಡಿಸಿಕೊಂಡಿತು. ಇದು ಯಥಾ ರಾಜ ತಥಾ ಪ್ರಜಾ ಎಂಬುದಕ್ಕೆ ಉದಾಹರಣೆ.

       ಸಾರ್ವಜನಿಕರೆಲ್ಲರೂ ದೇಶಕ್ಕೆ ಸಮಾಜಕ್ಕೆ ಏನಾದರೊಂದು ಕೊಡಬೇಕೆಂದು ಹಂಬಲಿಸುತ್ತಿರುತ್ತಾರೆ. ಆದರೆ ಅದರ ಮಾರ್ಗಗಳು ತೆರೆದುಕೊಳ್ಳಬೇಕಷ್ಟೆ. ಒಬ್ಬನಿಗೆ ತಿಂದು ಚೆಲ್ಲುವಷ್ಟಿರುವಾಗ ಇಲ್ಲದವನಿಗೆ ಕೊಡುವುದರಲ್ಲಿ ಯಾವುದೂ ತಪ್ಪಿಲ್ಲ. ಕೊಡುವ ಮನಸ್ಸು ಹೃದಯ ಶ್ರೀಮಂತಿಕೆಯಿರುವವರಿಗೆ ದಾರಿಯನ್ನು ಸರ್ಕಾರವೇ ಒದಗಿಸಿದಾಗ ಅದು ಮತ್ತೊಂದು ಪ್ರಶಂಸನೀಯ ಹೆಜ್ಜೆ. ಅಂಥ ಅವಕಾಶಗಳನ್ನು ಮೋದಿ ಸರ್ಕಾರ ಒದಗಿಸಿದೆ. ಹಲವಾರು ಜನರಿಗೆ ಗ್ಯಾಸ್ ಕನೆಕ್ಷನ್ ಇಲ್ಲದಿದ್ದಾಗ ಉಳ್ಳವರು ಸಬ್ಸಿಡಿಯನ್ನು ಬಿಡುವುದು ಸೂಕ್ತ. ಇದ್ದವರಿಗೆ ವರ್ಷಕ್ಕೆ ಹನ್ನೆರಡು ಸಿಲಿಂಡರ್ ಕೊಡುವ ಮೂರ್ಖ ಯೋಜನೆಯ ಬದಲು ಅವರ ಸಬ್ಸಿಡಿಯನ್ನು ಬಳಸಿ ಇಲ್ಲದವರಿಗೆ ಗ್ಯಾಸ್ ವ್ಯವಸ್ಥೆ ಕೊಟ್ಟು ಅವರ ಅಡುಗೆ ಮನೆಯಲ್ಲಿ ನೀಲಿ ಬೆಂಕಿಯ ಹೂವು ಅರಳಿಸಿದ ಕಲೆಗಾರ ಮೋದಿ. ಮತ್ತೊಮ್ಮೆ ನಾವು ತಾರ್ಕಿಕ ನೆಲೆಗಟ್ಟಿನಲ್ಲಿ ಯೋಚಿಸಬೇಕು ನಿಮ್ಮ ಬಳಕೆಗೆ ಎಷ್ಟು ಬೇಕೋ ಅಷ್ಟು ಸಿಗುತ್ತಿದೆ ಸರ್ಕಾರದವರು ನಮಗೆ ಹೆಚ್ಚಿನ “ತಿರಪೆ”ಕೊಡುತ್ತಿದ್ದಾರೆ ಎಂದು ಅರಿತಾಕ್ಷಣ ಹೋಗಿ ಅವರಿಗೆ ಎಲ್ಲಿಯವರೆಗೆ ಓಟು ಗುದ್ದಿ ಬರುತ್ತೀರೋ ಅಲ್ಲಿಯವರೆಗೆ ನೀವು ತಿರಪೆಗಳಾಗೇ ಇರುತ್ತೀರಿ. ಒಂದು ರೂಪಾಯಿಗೆ ಕೆಜಿ ಅಕ್ಕಿಯ ಬದಲು ಕಾವೇರಿಯ ನೀರು ನಮ್ಮ ಹೊಲದಲ್ಲಿ ಚಿಮುಕಿಸಿದರೆ ಅದು ಶ್ರೇಷ್ಟ ಸರ್ಕಾರ. ಒಂದು ರೂಪಾಯಿ ಅಕ್ಕಿಯಂತ ಯೋಜನೆಗಳಿಂದ ಬೊಕ್ಕಸ ಖಾಲಿಯಾಗಿ ನಮ್ಮ ಸರ್ಕಾರಿ ನೌಕರರಿಗೆ ತಿಂಗಳು ಕಳೆದರೂ ಸಂಬಳವಾಗದೇ ಇರುವುದು ಇಂಥ ಯೋಜನೆಯ ಕೆಟ್ಟ ಉಪ-ಉತ್ಪನ್ನಗಳಾಗಿವೆ. ಮೋದಿ ಸರ್ಕಾರ ಬಿಟ್ಟಿಯಾಗಿ ಏನು ಕೊಡೊಲ್ಲ. ಆದರೆ ಮೇಕ್ ಇನ್ ಇಂಡಿಯಾ, ಸ್ಟಾರ್ಟ ಅಪ್ ಇಂಡಿಯಾ ಯೋಜನೆಯಡಿ ಉದ್ಯೋಗ ಮಾತ್ರ ಕೊಡುತ್ತದೆ. ಅರ್ಹತೆ ಇದ್ರೆ ದುಡಿದು ತಿನ್ಕೊಳ್ಳಿ ಎಂಬುದೇ ಅವರ ನಿಲುವು.  ದುಡಿದ ಮೇಲೆ ಅನುಭವಿಸಿದ ಮೇಲೆ ಉಳಿಯಿತಾ, ಅದನ್ನು ವ್ಯಯಮಾಡುವ ಬದಲು ಅದರ ಸದ್ವಿನಿಯೋಗಕ್ಕೆ ಇಲ್ಲೊಂದು ದಾರಿಯಿದೆ ಅಂತ ತೋರಿಸಿಕೊಟ್ಟಿದ್ದಾರೆ. ಅವರು ಶುರು ಮಾಡಿದ “ಗಿವ್ ಇಟ್ ಅಪ್ “ಆಂದೋಲನಕ್ಕೆ ಸಿಕ್ಕ ಸ್ಪಂದನೆ ಅಷ್ಟಿಷ್ಟಲ್ಲ. ಕೆಲವು ಅಂಕಿ ಅಂಶಗಳ ಪ್ರಕಾರ ಸುಮಾರು 1.13 ಕೋಟಿ ಜನ ಸಬ್ಸಿಡಿ ಬಿಟ್ಟರು. ಕೆಲವೊಂದಿಷ್ಟು ರಾಜ್ಯಗಳಲ್ಲಂತೂ ಆ ರಾಜ್ಯದ ಜನರಲ್ಲಿ ಎಷ್ಟು ಜನ ಸಬ್ಸಿಡಿ ಹೊಂದಿದ್ದರೋ ಅದರ ಅರ್ಧದಷ್ಟು ಜನ ಸಬ್ಸಿಡಿಯನ್ನು ಕೊಟ್ಟರು. ದಿನಕ್ಕೆ 20000 ಜನ ಈ ಆಂದೋಲನಕ್ಕೆ ಕೈಜೋಡಿಸುತ್ತಿದ್ದರೆಂದರೆ ತಾವು ಜನರ ಸ್ಪಂದನೆಯ ತೀವ್ರತೆಯನ್ನು ಅರಿತುಕೊಳ್ಳಬಹುದು. ಒಟ್ಟಾಗಿ ಒಂದು ಅಂದಾಜಿನ ಪ್ರಕಾರ 5000 ಕೋಟಿಯಷ್ಟು ದುಡ್ಡು ಸರ್ಕಾರದ ಬೊಕ್ಕಸಕ್ಕೆ ಸೇರಿತು. 5000 ಕೋಟಿ ಎಂದರೆ ಲೆಕ್ಕ ಅರ್ಥವಾಗುತ್ತಿಲ್ಲವೇ ನಿಮ್ಮ ಲೆಕ್ಕದಲ್ಲೇ ಹೇಳುತ್ತೇನೆ ನ್ಯಾಷನಲ್ ಹೆರಾಲ್ಡ್ ಹಗರಣದಲ್ಲಿ ನಿಮ್ಮ ದಾನಶೂರ ಸರ್ಕಾರದ ಅಧಿನಾಯಕಿ ಮತ್ತು ಯುವರಾಜ ದೋಚಿದರು ಎನ್ನಲಾದ ಹಣಕ್ಕೆ ಸಮ.ಈಗ ಅರ್ಥವಾಯಿತು ಅನಿಸುತ್ತೆ. ಜನರ ಹಣವನ್ನು ದೋಚುವವರನ್ನು ಬೆಂಬಲಿಸುವವರಿಗೆ ರಾಷ್ಟ್ರಪರ ಕಾಳಜಿಯ ಒಂದು ಯೋಜನೆಗಳು ತಿರಪೆಯಾಗಿಯೇ ಕಾಣುತ್ತವೆ ಅದಕ್ಕೆ ನಾನು ಲೆಕ್ಕವನ್ನು ನೆಹರೂ ಅವರ ಕಾಲದಿಂದ ಚುಕ್ತಾ ಮಾಡುತ್ತಿದ್ದೇನೆ.

ಬಂದ ಸಕ್ರಮ ಹಣವನ್ನು ಅಕ್ರಮ ಮಾಡುವುದು ಎಷ್ಟೇ ಆಗಲಿ ಮೋದಿಗೆ ಗೊತ್ತಿಲ್ಲದ ವಿಷಯ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ಸಾರ್ವಜನಿಕರ ಹಣ ಸ್ವಿಸ್ ಬ್ಯಾಂಕಿನ ಲಾಕರ್ ಸೇರದೆ ಅನುಕೂಲಸ್ಥರಲ್ಲದ ಭಾರತೀಯ ನಾಗರಿಕನ ಅಡುಗೆ ಮನೆ ಸೇರಿಸುವ ಕೈಂಕರ್ಯ ನಡೆಯುತ್ತಿದೆ. 8000ಕೋಟಿ ವೆಚ್ಚದ “ಪ್ರಧಾನಮಂತ್ರಿ ಉಜ್ವಲ ಯೋಜನಾ” ಅಡಿಯಲ್ಲಿ 5 ಕೋಟಿ ಜನಕ್ಕೆ ಗ್ಯಾಸ್ ಸೇವೆ ಕಲ್ಪಿಸಲು ಸರ್ಕಾರ ಮುಂದಾಯಿತು. ಉರಿದುಕೊಳ್ಳುವವರು ಉರಿದುಕೊಳ್ಳುತ್ತಿರುವಾಗಲೆ ಭಾರತದ 60 ಲಕ್ಷ ಬಡವರ ಕುಟುಂಬಗಳ ಮನೆಯಲ್ಲಿ ಗ್ಯಾಸಿನ ಉರಿಯಲ್ಲಿ ಬೆಂದ ಅನ್ನವನ್ನು ಚಪ್ಪರಿಸುತ್ತಿದ್ದಾರೆ. ಒಂದು ವರ್ಷದಲ್ಲಿ 60 ಲಕ್ಷ ಜನಕ್ಕೆ ಗ್ಯಾಸ್ ಕೊಟ್ಟಿದ್ದು ಒಂದು ಯೋಜನೆಯು ದಾಖಲೆಯ ವೇಗದಲ್ಲಿ ಅನುಷ್ಠಾನಕ್ಕೆ ಬಂದಂತೆ.

ಇತ್ತೀಚೆಗೆ ಇಂತದೆ ಮತ್ತೊಂದು ಯೋಜನೆ ಬಂತು. ಆರ್ಮಿ ವೆಲ್-ಪೆರ್ ಫಂಡ್ ಕ್ಯಾಸುವ್ಯಾಲಿಟಿಸ್ ಎಂಬ ಖಾತೆಗೆ ದಿನಕ್ಕೆ ಒಂದು ರೂಪಾಯಿ ಲೆಕ್ಕದ ಹಾಗೆ 365 ರುಪಾಯಿ ಕೊಡಬೇಕು ಎಂಬ ಕರೆ. ಹಿಂದೆ ನಾವು ಚೀನಾದ ವಿರುದ್ಧ ಸೋತಾಗ ಮತ್ತು ನಮ್ಮ ಭೂಮಿಯನ್ನು ಬಿಟ್ಟುಕೊಟ್ಟಾಗ ಅದು ಸೈನಿಕರ ತಪ್ಪಲ್ಲ. ಅವರಿಗೆ ಸರಿಯಾದ ಶಸ್ತ್ರಾಸ್ತ್ರಗಳನ್ನು ಒದಗಿಸದ ಸರ್ಕಾರದ ತಪ್ಪು. ಅದರ ಉಲ್ಲೇಖ ಬೇಕೆಂದರೆ ರವಿ ಬೆಳಗೆರೆಯವರು ತರ್ಜುಮೆ ಮಾಡಿದ ಜಾನ್ ಪಿ ದಳವಿಯವರ”ಹಿಮಾಲಯನ್ ಬ್ಲಂಡರ್” ಪುಸ್ತಕದಲ್ಲಿದೆ.

ಮತ್ತೊಮ್ಮೆ ನಮ್ಮ ಸೈನಿಕರನ್ನು ಆ ಅಸಹಾಯಕತೆಗೆ ದೂಡುವುದು ಬೇಡ. ಹಿಂದೊಮ್ಮೆ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ದೇಶದುದ್ದಕ್ಕೂ ಯುದ್ಧನಿಧಿಯನ್ನು ಸಂಗ್ರಹಿಸಿ ಸೈನ್ಯಕ್ಕೆ ಕಳುಹಿಸಿದ ಇತಿಹಾಸ ನಮ್ಮ ದೇಶಕ್ಕಿದೆ. ಅದೇ ಸಂದರ್ಭದ ಚಕ್ರವರ್ತಿ ಸೂಲಿಬೆಲೆಯವರು ತಮ್ಮ ಭಾಷಣದಲ್ಲಿ ಹೇಳಿದ ಒಂದು ಘಟನೆಯನ್ನು ಹೇಳಬೇಕು. ಒಂದು ಕಾಲೇಜಿಗೆ ನಿಧಿ ಸಂಗ್ರಹಕ್ಕೆ ತೆರಳಿದ ಸಂದರ್ಭದಲ್ಲಿ ಎಲ್ಲ ಸಂಗ್ರಹವಾದ ಮೇಲೆ ಎಣಿಸಬೇಕಾದರೆ ಒಂದು ಬಂಡಲ್ನಲ್ಲಿ ಒಂದು ,ಹತ್ತು,ಐದು ಹೀಗೆ ಎಲ್ಲ ನೋಟುಗಳನ್ನು ಹೊಂದಿದ ಸಾವಿರ ರೂಪಾಯಿ ಇತ್ತಂತೆ ಇದನ್ನು ಕೊಟ್ಟವರ್ಯಾರು ಎಂಬುದನ್ನು ತಿಳಿಯಲು ಒಂದು ಸಾವಿರ ಕೊಟ್ಟವರಾರು ಎಂದು ಕೇಳಿದಾಗ ಒಬ್ಬ ಹಿಂಜರಿಯುತ್ತಲೇ ಎದುರಿಗೆ ಬಂದಾಗ ಆ ಕಾಲೇಜಿನ ಪ್ರಾಧ್ಯಾಪಕರು ‘ನೀನಾ! ‘ಎಂದು ಉದ್ಗಾರ ತೆಗೆದರಂತೆ.. ಅವನ ಹಿನ್ನೆಲೆಯನ್ನು ಕೇಳಿದಾಗ ಅವನು ಕಡುಬಡವನಂತೆ ಕಾಲೇಜಿಗೆ ಶುಲ್ಕ ಕಟ್ಟಲೂ ಹಣವಿಲ್ಲದೆ ಸಿಬ್ಬಂದಿಗಳೇ ಕೆಲವೊಮ್ಮೆ ಕಟ್ಟುತ್ತಾರಂತೆ. VRL ಸಂಸ್ಥೆಯಲ್ಲಿ ಪಾರ್ಟ ಟೈಮ್ ಜಾಬ್ ಮಾಡಿಕೊಂಡಿದ್ದಾನೆಂದು ತಿಳಿದು ನೀನ್ಯಾಕೆ ಕೊಟ್ಯಪ್ಪಾ ಅಂದರೆ “ನನ್ನ ಕಷ್ಟ ಇದದ್ದೆ ಇನ್ನೊಂದು ಘಂಟೆ ಜಾಸ್ತಿ ದುಡಿದು ಈ ಹಣವನ್ನು ಸರಿದೂಗಿಸಿಕೊಳ್ತೇನೆ. ಆದರೆ ಸೈನಿಕರಿಗೆ ಕೊಡುವ ಅವಕಾಶ ಮತ್ತೆ ಸಿಗೊಲ್ಲ ಎಂದನಂತೆ”ನೀವೇ ಯೋಚನೆ ಮಾಡಿ ಅವನು ಕೊಟ್ಟ 1000ರೂಪಾಯಿಯ ಮುಂದೆ ನಮ್ಮ 365 ರೂಪಾಯಿ ಎಷ್ಟು ಚಿಕ್ಕದು ಅಂತ. ಅದೇ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ದೆಹಲಿಯ ರೆಡ್ ಲೈಟ್ ಏರಿಯಾದಿಂದ ಒಂದು ದಿನದ ದುಡಿಮೆಯನ್ನು ಸೈನ್ಯಕ್ಕೆ ಕೊಟ್ಟದ್ದು ಇದೇ. ದೇಹ ಮೈಲಿಗೆಯಾದರೂ ದೇಶಕ್ಕಾಗಿ ಕೊಡಬೇಕು ಎಂಬ ಮನಸ್ಸಿರುವ ಅವರನ್ನು ವೇಶ್ಯೆ ಎಂದು ಕರೆದರೆ ತಪ್ಪಾದೀತು.

ಈಗಾಗಲೇ ಜನ ಆ ಖಾತೆಗೆ ದುಡ್ಡು ಹಾಕಲು ಶುರುಮಾಡಿದ್ದಾರೆ. ಇದರಲ್ಲಿ ಯಾವುದೇ ಒತ್ತಾಯವಿಲ್ಲ. ಅಷ್ಟಕ್ಕೂ ಅವರು ಕೇಳಿದ್ದ ಒಂದು ರೂಪಾಯಿಗೆ ತಿರಪೆ ಸರ್ಕಾರ ಎಂದು ಹೇಳುವವರೂ ಇದ್ದಾರೆ ಅವರ ಹೆಸರು ನಾನು ಇಲ್ಲಿ ಉಲ್ಲೇಖಿಸಿದರೇ ಲೇಖನದ ಮೂಲಕ ಅವರು ಬಯಸುತ್ತಿರುವ ಪ್ರಚಾರವನ್ನು ತಿರಪೆಯಾಗಿ ನೀಡಿದಂತೆ.   ಈ ಲೇಖನ ಬರೆಯುತ್ತಿರುವುದು ಅವರನ್ನು ಹಿಯಾಳಿಸುವುದಕ್ಕಲ್ಲ ಹಲವಾರು ಜನರಿಗೆ ಈ ಯೋಜನೆಯ ಬಗ್ಗೆ ಗೊತ್ತಿರೊಲ್ಲ. ಅವರಿಗೆ ಈ ಬಗ್ಗೆ ತಿಳುವಳಿಕೆ ಕೊಡಲು. ನಮ್ಮದೇ ಆಫೀಸಿನ ಹಲವು ಸಾವಿರ ದುಡಿಯುವವರಿಗೆ ಕೊಡುವ ಮನಸ್ಸಿದ್ದರೂ ಹಾದಿ ಗೊತ್ತಿರಲಿಲ್ಲ. ನಾನು ದುಡ್ಡು ಕಳಿಸಿ. ಅವರಿಗೂ ಕಳಿಸುವಂತೆ ಹೇಳಿದೆ ಅದಕ್ಕೆ ಮೂರು ಜನ ಸಿಬ್ಬಂದಿಗಳು ಕಳಿಸಿಯಾಯಿತು. ನಿಮ್ಮಲ್ಲೂ ಅಂಥ ಕೊಡುವ ಜನರಿದ್ದೀರಿ.ರೀಡೂ ಬಳಗದ ಪರವಾಗಿ ನಿಮಗೆ ಆ ಕೋರಿಕೆ. ಅದರ ಮಾಹಿತಿ ಕೆಳಗಿದೆ. ಈ ಅಕೌಂಟಿಗೆ ನೀವು ಹಣ ಕಳಿಸಿದರೆ ಈ ಲೇಖನ ಬರೆದಿದ್ದೂ ಸ್ವಾರ್ಥಕ.

SYNDICATE BANK

A/C NAME: ARMY WELFARE FUND BATTLE CASUALTIES

A/C NO: 90552010165915

IFSC CODE: SYNB0009055

SOUTH EXTENSION BRANCH,

NEW DELHI.

Facebook ಕಾಮೆಂಟ್ಸ್

ಲೇಖಕರ ಕುರಿತು

Rahul Hajare

ಬಾಹುಬಲಿ ತಾಂತ್ರಿಕ ವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯನಿಕೇಶನ್ ಇಂಜನೀಯರಿಂಗ್ ಪದವಿ
ಸದ್ಯಕ್ಕೆ ಮಂಗಳೂರಿನ ಬ್ಯಾಂಕ್'ನಲ್ಲಿ ಉದ್ಯೋಗ ಕತೆ,ಲೇಖನ, ಕವಿತೆ ಬರೆಯುವುದು ಪ್ರವೃತ್ತಿ. ಚೆಸ್,ಕ್ರಿಕೆಟ್ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!