ಪ್ರಚಲಿತ

ಬಂದ್ ಮಾಡಿ ಕಲ್ಲೆಸೆಯುವ ಮುನ್ನ….

“ಈ ಕರ್ನಾಟಕ ಬಂದ್ ಯಾಕೆ ಮಾಡಿದ್ದಾರೋ ಗೊತ್ತಿಲ್ಲ! ಕರ್ನಾಟಕ ಬಂದ್ ಮಾಡಿದರೆ ತಮಿಳುನಾಡಿಗೆ ಹೇಗೆ ನಷ್ಟ ಆಗುತ್ತೆ? ಕನ್ನಡಿಗರಿಗೆ ತಾನೇ ನಷ್ಟ ಆಗೋದು!? ತಮಿಳುನಾಡಿಗೆ ತೊಂದರೆ ಆಗಬೇಕಾದರೆ ನೀರಿನ ಸಮಸ್ಯೆ ಬಗೆಹರಿಯುವರೆಗೆ ಕರ್ನಾಟಕದಲ್ಲಿ ತಮಿಳುನಾಡಿಗೆ ಲಾಭ ಕೊಡುವುದನ್ನ ನಿಷೇಧ ಮಾಡಬೇಕು. ಉದಾಹರಣೆಗೆ ತಮಿಳು ಚಿತ್ರಗಳ ಬಿಡುಗಡೆಗೆ ನಿಷೇಧ, ತಮಿಳು ಚಾನಲ್‍ಗಳ ನಿಷೇಧ,ತಮಿಳುನಾಡಿಗೆ ಸಾರಿಗೆ ಸಂಪರ್ಕ ನಿಷೇಧ,ತಮಿಳುನಾಡಿನಿಂದ ಬರುವ ವಸ್ತುಗಳ ನಿಷೇಧ ಇತ್ಯಾದಿ ಇತ್ಯಾದಿ…ಹೀಗೆ ಮಾಡಿದರೆ ಅಲ್ಲೊಂದಷ್ಟು ಬಿಸಿ ಮುಟ್ಟಬಹುದು. . ಅದು ಬಿಟ್ಟು ತಮಿಳುನಾಡಿನ ಮೇಲಿನ ಸಿಟ್ಟಿಗೆ ಕರ್ನಾಟಕ ಬಂದ್ ಮಾಡಿಕೊಂಡು ಇಲ್ಲಿನ ಬಸ್ ಕಾರ್‍ಗಳನ್ನು ಉರಿಸಿದರೆ ಗಾಜಿನ ಮನೇಲಿ ಕೂತು ಕಲ್ಲು ಬಿಸಾಕಿದ ಹಾಗೇ ಆಗಲ್ವೇ!? ಇಲ್ಲಿ ನಷ್ಟ ಆಗೋದು ನಮಗೇ ತಾನೇ!?” ನನ್ನ ಮಿತ್ರ ಪ್ರದೀಪ್ ಕುಮಾರ್ ಮಾಡಿದ ಒಂದು ಅದ್ಭುತ ವಾಟ್ಸ್ ಅಪ್ ಮೆಸೇಜ್ ಇದು. ಒಬ್ಬ ಜನಸಾಮಾನ್ಯನಿಗೂ ಹೊಳೆಯಬಹುದಾದ ಇಂತಹ ಸೂಕ್ಷ್ಮ ವಿಚಾರಗಳು  ನಮ್ಮ ನಾಡಿನ ಮುಂಚೂಣಿ ಹೋರಾಟಗಾರರಿಗೆ ಹೊಳೆದಿಲ್ಲವಲ್ಲಾ  ಎಂಬುದೇ ಇಲ್ಲಿ ಕಾಡುವ ಮುಖ್ಯ ಪ್ರಶ್ನೆ.

ಹೌದು, ಮೊನ್ನೆಯ ಕರ್ನಾಟಕ ಬಂದ್‍ನ ಹಿನ್ನೆಲೆ ಏನು? ಕರ್ನಾಟಕದ ಜೀವ ನದಿ ಕಾವೇರಿಯನ್ನು ತಮಿಳುನಾಡಿಗೆ ಹರಿಸುವ ವಿಚಾರದ ಬಗ್ಗೆ ಸುಪ್ರೀಮ್ ಕೋರ್ಟ್ ನೀಡಿದ ತೀರ್ಪಿನ ವಿರುದ್ಧ  ನಡೆದ ಬಂದ್ ಅದು.  ಕರ್ನಾಟಕದಲ್ಲೇ ಸಾಕಷ್ಟು ಮಳೆಯಾಗದೆ ಮುಂಬರುವ ದಿನಗಳಲ್ಲಿ ನೀರಿನ ಬರ ಎದುರಿಸುವ ಭಯದಲ್ಲಿರುವ ಸಂದರ್ಭದಲ್ಲೇ ಇದ್ದ ಬದ್ದ ಅಲ್ಪ ನೀರನ್ನೇ ತಮಿಳುನಾಡಿಗೆ ಹರಿಸಬೇಕೆಂಬುದು ನಿಜವಾಗಿಯೂ ನ್ಯಾಯಸಮ್ಮತವಾಗದು. ಇಲ್ಲಿಯ ರೈತರನ್ನು,ಜನರನ್ನು ಸಂಕಷ್ಟಕ್ಕೆ ನೂಕಿ ತಮಿಳು ನಾಡಿನ ಜನರ ಆಶೋತ್ತರವ ಈಡೇರಿಸುವುದು ಎಂದರೆ ಏನರ್ಥ!?ಅಷ್ಟಕ್ಕೂ ತಮಿಳುನಾಡಿನಲ್ಲಿ ಹಿಂಗಾರು ಮಳೆ ಅಂದರೆ ಮುಂಬರುವ ಅಕ್ಟೋಬರ್, ನವೆಂಬರ್,ಡಿಸೆಂಬರ್, ತಿಂಗಳುಗಳಲ್ಲಿ ಮಳೆ ಸುರಿಯಲಿದೆ. ಹೀಗಿರುವಾಗ ಜಯಲಲಿತರ ಬೇಡಿಕೆಗೆ ಸ್ಪಂದಿಸಿ ಸುಪ್ರೀಮ್ ಕೋರ್ಟ್ ಆ ರಾಜ್ಯದ ಪರ ತೀರ್ಪು ಇತ್ತಿದೆ ಎಂದರೆ ನಮ್ಮ ರಾಜ್ಯದ ಪರವಾದ  ವಾದ ಅದೆಷ್ಟು ದುರ್ಬಲವಾಗಿತ್ತು ಎಂಬುದು ಮನದಟ್ಟಾಗುತ್ತದೆ. ಈ ಮಾತು ಹಾಗೇ ಇರಲಿ. ತಪ್ಪು ಸುಪ್ರೀಮ್ ಕೋರ್ಟ್‍ದೇ ಇರಬಹುದು ಅಥವಾ ನಮ್ಮ ರಾಜ್ಯದ ದುರ್ಬಲವಾದ ವಾದವೇ ಇರಬಹುದು ಆದರೆ ನಮ್ಮ ರಾಜ್ಯದ ಹಿತಚಿಂತನೆಗಳಿಗೆ ಜಯಾಲಲಿತಾರವವರು ಅಥವಾ ತಮಿಳುನಾಡು ಸರಕಾರ ಪ್ರತೀ ಬಾರಿಯೂ ಕಂಟಕವಾಗುತ್ತಿದೆ ಎಂಬುದು ಮಾತ್ರ ಸ್ಪಷ್ಟ. ಆದ್ದರಿಂದ ನಮ್ಮ ಆಕ್ರೋಶ ತಮಿಳುನಾಡಿನ ಪರ ಇರಬೇಕಾದುದ್ದು ಸಹಜವೇ. ಪ್ರತಿಭಟನೆ, ಹೋರಾಟ ಮಾಡಬೇಕಾದುದೂ ಕೂಡ ಅನಿವಾರ್ಯವೇ. ಆದರೆ ಆ ಪ್ರತಿಭಟನೆ ಅದ್ಯಾವ ರೀತಿ ಇರಬೇಕು?ಮಾಡಿದ ಪ್ರತಿಭಟನೆ, ಆಕ್ರೋಶ ಒಂದಷ್ಟದ್ದಾರು  ಪರಿಣಾಮ ಬೀರಬೇಕು ಅಲ್ಲವೇ? ಒಂದೇ ಮಾತಿನಲ್ಲಿ ಹೇಳುವುದಾದರೆ ಪ್ರತಿಭಟನೆ ಹೇಗಿರಬೇಕು ಅಂದರೆ ‘ಅಯ್ಯೋ ಕರ್ನಾಟಕದ ತಂಟಗೆ ಹೋದರೆ ನಮಗೂ ತೊಂದರೆ ತಪ್ಪಿದಲ್ಲ’ಎಂಬ ಸಂದೇಶವೊಂದು ಅಲ್ಲಿ ಸ್ಪಷ್ಟವಾಗಿ ಸಾರುವಂತಿರಬೇಕು. ಹಾಗಿದ್ದರೆ ಆ ಪ್ರತಿಭಟನೆಗೂ ಒಂದಷ್ಟು ಬೆಲೆ.  ಆದರೆ ಕಾವೇರಿ ವಿಚಾರದಲ್ಲಿ ಮೊನ್ನೆ ನಡೆದ ನಮ್ಮ ಪ್ರತಿಭಟನೆ ಈ ರೀತಿಯದ್ದೇ ಎಂಬುದನ್ನು ಈವಾಗ ಯೋಚಿಸಿ!

ಪ್ರತಿಭಟನೆ ಎಂದಾಗ ಅದ್ಯಾರೋ ಹೇಳಿದ ಕತೆಯೊಂದು ನೆನಪಾಗುತ್ತೆ. ಒಮ್ಮೆ ಜಪಾನ್‍ನಲ್ಲಿ ‘ಶೂ’ ಕಂಪೆನಿಯ ನೌಕರರು ಮಾಲೀಕನ ವಿರುದ್ಧ ಸಿಟ್ಟಾದರಂತೆ. ತಮ್ಮ ಬೇಡಿಕೆಗಳಿಗೆ ಕಿವಿಗೊಡದ ಮಾಲೀಕನ ವಿರುದ್ಧ ಪ್ರತಿಭಟನೆ ನಡೆಸಿ ಮಾಲೀಕನಿಗೆ ಬುದ್ಧಿ ಕಲಿಸಬೇಕೆಂದು ನೌಕರರು ಯೋಚಿಸಿದರು. ಆದರೆ ನೌಕರರು ಪ್ರತಿಭಟನೆ ಮಾಡಿದ್ದು ಹೇಗೆ  ಗೊತ್ತೆ? ನಿಗದಿ ಪಡಿಸಿದ ದಿನದಿಂದ ಪ್ರತಿಭಟನಾರ್ತವಾಗಿ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕೆಲಸಕ್ಕೆ ಹಾಜಾರಾದದ್ದು! ಅದೂ ಕೂಡ  ಬೆಳಗ್ಗೆ ಒಂದು ಗಂಟೆ ಬೇಗನೇ ಕೆಲಸ ಪ್ರಾರಂಭಿಸಿ ಸಂಜೆ ಒಂದು ಗಂಟೆ ಅಧಿಕ ಕೆಲಸ ಮಾಡಿದ್ದು! ಅರೇ ಪ್ರತಿಭಟನೆ ಎಂದರೆ ಬಾಗಿಲು ಹಾಕಬೇಕು ಅಲ್ಲವೇ ಎಂದು ಕೊಂಡರೆ ಇಲ್ಲಿನ ನೌಕರದ್ದು ವಿಭಿನ್ನ ಪ್ರತಿಭಟನೆ. ಮಾಲೀನಕನಿಗೂ ಖುಷಿಯಾಗೋಯಿತಂತೆ! ಆದರೆ ಆಮೇಲೆ ಗಮನಿಸಿದಾಗ ಗೊತ್ತಾಯಿತು ನೌಕರರು ಪ್ರತಿಭಟನೆಯ ಹೆಸರಲ್ಲಿ ದಿನವಿಡೀ ತಯಾರಿಸುತ್ತಿದ್ದದ್ದು ಒಂದೇ ಕಾಲಿನ ಶೂಗಳನ್ನು ಎಂದು! ಅತ್ತ ಕೆಲಸವೂ ನಡೆಯುತ್ತಿದೆ ಇತ್ತ ಮಾಲೀಕನಿಗೂ ನಷ್ಟವಾಗುತ್ತಿದೆ! ಕೊನೆಗೆ ಮಾಲೀಕ ಎಲ್ಲಾ ಬೇಡಿಕೆಗಳನ್ನು ಈಡೇರಿಸಿದ ಮೇಲೆಯೇ ನೌಕರರು ಪ್ರತಿಭಟನೆಯನ್ನು ಹಿಂದಕ್ಕೆ ತೆಗೆದುಕೊಂಡು ಇನ್ನೊಂದು ಕಾಲೀನ ಶೂಗಳನ್ನು ತಯಾರಿಸಿದ್ದು! ಈವಾಗ ನಮ್ಮ ಪ್ರತಿಭಟನೆಯನ್ನು ಗಮನಿಸಿ. ಕಾವೇರಿ ವಿಚಾರದಲ್ಲಿ ಕಾವೇರಿಸಿಕೊಂಡು ನಮ್ಮ ಸಂಘಟನೆಗಳೇನೋ ಕರ್ನಾಟಕ ಬಂದ್‍ಗೆ  ಕರೆ ನೀಡಿದೆ. ಶಾಲಾ ಕಾಲೇಜುಗಳಿಗೂ ರಜೆ ಸಾರಿ ಒಂದು ದಿನದ ಮಟ್ಟಿಗೆ ಸಂಭ್ರಮಿಸಲು ಅವಕಾಶ ಕಲ್ಪಿಸಿದೆ! ಕೆಲವೆಡೆಗಳಲ್ಲಿ ಜನ ಸಾಮಾನ್ಯ ಕೂಡ ತನ್ನ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಕೊಂಡು ಬಂದ್‍ಗೆ ತಮ್ಮ ಬೆಂಬಲವನ್ನೂ ಸೂಚಿಸಿಯಾಗಿದೆ.  ಆದರೆ ನಮ್ಮ ಈ ಪ್ರತಿಭಟನೆಯಿಂದ, ರಸ್ತೆ ಮೇಲೆ ಹುರಿಸಿದ ಟಯರುಗಳಿಂದ ಅದ್ಯಾವ ರೀತಿಯಲ್ಲಿ ತಮಿಳುನಾಡಿಗೆ ಬಿಸಿ ಮುಟ್ಟಿದೆ ಹೇಳಿ!? ನಮ್ಮ ಕರ್ನಾಟಕ ಬಂದ್ ನೋಡಿ ಹೆಚ್ಚೆಂದರೆ ತಮಿಳುನಾಡಿನ ಜನರು ಮುಸಿ ಮುಸಿ ನಕ್ಕಿರಬಹುದು ಅಷ್ಟೇ! ಯಾಕೆಂದರೆ ಸುಪ್ರೀಮ್ ಕೋರ್ಟ್‍ನ ಆದೇಶದಂತೆ ತಮಿಳುನಾಡಿಗೆ ಸಿಗಬೇಕಾದ ನೀರಿನ ಪಾಲು ನಮ್ಮಿಂದ ಸರಾಗವಾಗೇ ಹರಿದಿದೆ. ಹರಿಯುತ್ತಿದೆ. ನಮ್ಮ ಬಂದ್ ಹಾರಾಟಗಳನ್ನು ನೋಡಿ ಇನ್ನಷ್ಟು ಹೊಟ್ಟೆ ಹುರಿಸಲು ಇನ್ನೊಂದಷ್ಟು ಹೆಚ್ಚು ನೀರು ರಾಜ್ಯಕ್ಕೆ ಬೇಕು ಎಂಬ ಬೇಡಿಕೆ ಇಟ್ಟು ಹೋರಾಟಕ್ಕೆ ಇಳಿದಿದ್ದಾರೆ ತಮಿಳುನಾಡಿಗರು! ಅದಿರಲಿ, ಇವತ್ತು ನಾವೇನೋ ಆಕ್ರೋಶಿತರಾಗಿ ಬಂದ್ ಮಾಡಿದ್ದೇವೆ. ಆದರೆ ನಮ್ಮ ಈ ಆಕ್ರೋಶ ಅದೆಷ್ಟು ದಿನದ್ದು? ಜಯಾಲಲಿತರ ಪ್ರತಿಕೃತಿ ದಹಿಸಿ ತಮಿಳುನಾಡಿಗೊಂದಷ್ಟು ಧಿಕ್ಕಾರ ಕೂಗಿದ ನಾವುಗಳು ಅದೆಂದಾದರೂ ತಮಿಳು ಸಿನಿಮಾಗಳನ್ನು ಮಾರುಕಟ್ಟೆಯಿಂದ ದೂರವಿಟ್ಟಿದ್ದೇವೆಯಾ!? ರಜನಿಕಾಂತ್ ಫಿಲಂ ರಿಲೀಸ್ ಆದರೆ ಸಾಕು ಇವತ್ತಿಗೂ ನಾವು ಎಲ್ಲಾ ಆಕ್ರೋಶ ಮರೆತು ಮುಗಿಬಿದ್ದು ನೋಡುತ್ತೇವೆ! ಹಾಗೇನೆ, ನಮ್ಮ ಸಿನಿಮಾಗಳನ್ನೆಲ್ಲಾ ಬೇಕಾದರೆ ತಡೆಹಿಡಿದು ತಮಿಳು ಸಿನಿಮಾಗಳು ಯಶಸ್ವಿಯಾಗುವಂತೆ ನಮ್ಮ ಥಿಯೇಟರ್‍ಗಳೂ ಕೂಡ ಸಹಕರಿಸುತ್ತವೆ! ಇನ್ನು ನಿರ್ಮಾಪಕರುಗಳು ಕೂಡ ಅಷ್ಟೇ. ತಮಿಳು ಸಿನಿಮಾಗಳನ್ನು ಡಬ್ಬಿಂಗ್ ನಡೆಸಿ ಕನ್ನಡಿಗರಿಗೆ ಬೇಕು ಬೇಕಾದಂತೆ ಉಣಬಡಿಸುತ್ತಿವೆ. ಇವೆಲ್ಲಾ ನಮ್ಮ ದುಡ್ಡನ್ನು ಅತ್ತ ಹರಿಸುವ ವಿಚಾರಗಳೇ ಅಲ್ಲವೇ? ಇವೆಲ್ಲವುಗಳನ್ನು ಕಠಿಣವಾಗಿ ನಿಷೇಧಿಸದೇ ಕೇವಲ ಧಿಕ್ಕಾರದ ಘೋಷಣೆ ಕೂಗುತ್ತಾ ನಮ್ಮ ಸಾರ್ವಜನಿಕ ಸೊತ್ತುಗಳನ್ನು ನಾವೇ ನಾಶ ಮಾಡಿದರೆ ತಮಿಳುನಾಡಿಗೆ ಏನಾದರೂ ನಷ್ಟವಾಗಬಲ್ಲುದೇ!?ಇನ್ನು  ಟಿ.ವಿ ಮಾಧ್ಯಮದಲ್ಲಂತೂ ಅವರದ್ದೇ ಪಾರಮ್ಯತೆ ಇದೆ. ಪ್ರತಿಭಟನೆಯ ಹೆಸರಲ್ಲಿ ಒಂದಷ್ಟು ದಿನಗಳ ಕಾಲ ತಮಿಳರು ನಡೆಸುವ ಸಂಸ್ಥೆಗಳನ್ನು,ಅವರು ನಡೆಸುವ ಕಂಪೆನಿಗಳನ್ನು, ಮಾರುಕಟ್ಟೆ ಪದಾರ್ಥಗಳನ್ನೆಲ್ಲಾ ಇಲ್ಲಿ ನಿಷೇಧಿಸಿದ್ದೇ ಆದರೆ  ಆವಾಗ ಖಂಡಿತಾ ಒಂದಷ್ಟು ಬುದ್ದಿ ತಮಿಳುನಾಡು ಕಲಿಯಬಲ್ಲದು ಅಲ್ಲವೇ? ಆದರೆ ನಾವೆಂದೂ ಈ ಬಗ್ಗೆ ಯೋಚಿಸಿಯೇ ಇಲ್ಲ ಬಿಡಿ.

ಇನ್ನೊಂದು ಮುಖ್ಯ ವಿಚಾರವೆಂದರೆ, ಸಮಯ ಸಂದರ್ಭ ಸಿಕ್ಕಾಗೆಲ್ಲಾ ನಾವು ರೈತರ ಪರ, ರೈತರೇ ನಮ್ಮ ಉಸಿರು ಎಂದೆಲ್ಲಾ ಹೇಳುತ್ತಾ ಚಪ್ಪಾಳೆ ಗಿಟ್ಟಿಸುವ ಸರಕಾರ ಅಥವಾ ಮುಖ್ಯಮಂತ್ರಿ ಮೊನ್ನೆ ಸುಪ್ರೀಂ ಕೋರ್ಟ್ ಆದೇಶ ನೀಡಿತು ಎಂದಾಕ್ಷಣ ಕಾವೇರಿ ನೀರು ಬಿಟ್ಟು ತನ್ನ ನಿಷ್ಠೆ ತೋರಿಸಿದೆ! ಮುಖ್ಯಮಂತ್ರಿಯಾಗಿದ್ದರೆ ಸುಪ್ರೀಂ ಆದೇಶ ಪಾಲಿಸಲೇಬೇಕು ನಿಜ. ಆದರೆ ಸಮಸ್ತ ಕನ್ನಡಿಗರಿಗಾಗಿ ಕಾವೇರಿ ನದಿಯ ನೀರನ್ನು ಬಿಡುವ ಆಜ್ಞೆ ನಾನು ಹೊರಡಿಸುವುದೇ ಇಲ್ಲ ಎಂದ್ಹೇಳುತ್ತಾ ಮುಖ್ಯಮಂತ್ರಿ ಸ್ಥಾನವನ್ನೇ ತ್ಯಜಿಸಿರುತ್ತಿದ್ದರೆ ಏನಾಗುತ್ತಿತ್ತು!? ಹೌದು, ಒಂದು ವೇಳೇ ಮುಖ್ಯಮಂತ್ರಿ ಸ್ಥಾನವನ್ನೇ ಬಿಟ್ಟು ಸಿದ್ಧರಾಮಯ್ಯನವರು ಹೊರ ಬರುತ್ತಿದ್ದರೆ ಆವಾಗ ಇಲ್ಲಿ ಕಾವೇರಿ ನದಿ ನೀರಿನ ಬಗ್ಗೆ ಸುಪ್ರೀಂ ಆದೇಶವನ್ನು ಜಾರಿಗೊಳಿಸುವಲ್ಲಿ ಒಂದಷ್ಟು ದಿನ ವಿಳಂಬವಾಗಿ ಇನ್ನೊಂದಷ್ಟು ದಿನವಾದರೂ ಕಾವೇರಿ ಉಳಿಯುತ್ತಿದ್ದಳು. ಹಾಗೇನೆ ಸರಕಾರವನ್ನು ಪ್ರತಿನಿಧಿಸುವ ಮಂತ್ರಿ ಮಹೋದಯರುಗಳು ಕೂಡ ಮುಖ್ಯಮಂತ್ರಿ ಜೊತೆ ಸೇರಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದರೆ ಇಲ್ಲಿನ ನೈತಿಕ ಒಗ್ಗಟ್ಟು, ಕಾವೇರಿ ನೀರಿನ ರಾಜ್ಯದ ಜನತೆಗೆ ಇರುವ ಅಗತ್ಯತೆ, ಜನರ ಧ್ವನಿ ಎಲ್ಲವೂ ಸುಪ್ರೀಂಕೋರ್ಟ್‍ಗೆ ಚೆನ್ನಾಗಿ ಮನದಟ್ಟಾಗುತ್ತಿತ್ತು. ಆದರೆ ನಮ್ಮ ರಾಜಕಾರಣಿಗಳ ನಡೆ ಅದೆಂತಹುದು!? ತಾನು ಜನರ ಪರ, ಬಡವರ ಪರ ಎಂದೆನ್ನುತ್ತಲೇ ಒಂದು ಕೈಯಿಂದ ಕಾವೇರಿಯನ್ನು ತಮಿಳುನಾಡಿಗೆ ಕೊಟ್ಟು ಇನ್ನೊಂದು ಕೈಯಿಂದ ಕರ್ನಾಟಕ ಬಂದ್ ಎಂದೆನ್ನುತ್ತಾ ಇಲ್ಲಿನ ಜನರಿಗೆ ನಾಮ ಎಳೆಯುತ್ತಿದೆ! ಕಾವೇರಿಗಾಗಿ ಪ್ರಾಣವೀಯಲು ಸಿದ್ಧ ಎನ್ನುತ್ತಿರುವ ರೈತರ ಜೊತೆಗೆ ಕಾವೇರಿಗಾಗಿ ಅಧಿಕಾರ ತ್ಯಜಿಸಲು ಸಿದ್ಧ ಎಂದೆನ್ನುವ ರಾಜಕಾರಣಿಗಳೇನಾದರು ಇಲ್ಲಿ ಹುಟ್ಟಿರುತ್ತಿದ್ದರೆ ಆವಾಗ ಖಂಡಿತವಾಗಿಯೂ ನಮ್ಮ ಕಾವೇರಿ ಇಲ್ಲೇ ಉಳಿಯುತ್ತಿದ್ದಳು. ಈ ಪ್ರಾಮಾಣೀಕ ನಿಷ್ಟೆ, ನಿಯತ್ತು ನಮ್ಮ ಆಡಳಿತಗಾರರಿಗೆ, ರಾಜಕಾರಣಿಗಳಿಗೆ  ಬರುವವರೆಗೂ ಕಾವೇರಿಯ ಮೇಲೆ ತಮಿಳರ ಅಧಿಪತ್ಯ ಸದಾ ಮೆರೆಯಬಲ್ಲುದು!

Facebook ಕಾಮೆಂಟ್ಸ್

ಲೇಖಕರ ಕುರಿತು

Prasad Kumar Marnabail

Banker

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!