ಅಂಕಣ

ಬಂದರೆ ಗುಡ್ಡ ಹೋದರೆ ಹಗ್ಗ..!

ಕೊಟ್ಟೂರು, ನನ್ನೂರು ನೆನಪಾದರೆ ಸಾಕು ನನ್ನ ಮೇಲಿನ ಅಧಿಕಾರಿಗಳಿಗೆ ಹೇಳಿ ಒಂದು ವಾರದ ಮಟ್ಟಿಗೆ ರಜೆ ಹಾಕಿ ಬಂದು ಬಿಡುತ್ತಿದ್ದೆ. ಆದರೆ ನಾನು ಊರಿಗೆ ಬಂದಾಗ ನನ್ನ ಸ್ನೇಹಿತರಾರು ಊರಿನಲ್ಲಿ ಇರುತ್ತಿರಲಿಲ್ಲ ಕಾರಣ ಅವರೆಲ್ಲರೂ ಬೇರೆ ಊರುಗಳಲ್ಲಿ ಉದ್ಯೋಗ ಮಾಡುತ್ತಿದ್ದರು. ನನಗೆ ಯಾವಾಗಲೂ ಸಿಗುತ್ತಿದ್ದುದು ಆತೀಫ್ ಮಾತ್ರ. ಸ್ವಂತ ರೆಸ್ಟೋರಂಟ್ ‘ಖುಶಿ’ ನಡೆಸುತ್ತಿದ್ದ. ಆತ ನನ್ನ ಅಣ್ಣನ ಸಹಪಾಠಿ ಆದರೆ ಹೆಚ್ಚು ಆತ್ಮೀಯವಾಗಿದ್ದು ನನಗೆ. ಅದಕ್ಕೆ ಕಾರಣವೂ ಉಂಟು. ಊರಲ್ಲಿ ಎಲ್ಲೇ ಕೇರಂ ಆಟದ ಟೂರ್ನಮೆಂಟ್ ನಡೆಯಲಿ ಅಲ್ಲಿ ಇಬ್ಬರೂ ಪ್ರತ್ಯಕ್ಷರಾಗುತ್ತಿದ್ದೆವು ಮತ್ತು ಬಹಳಷ್ಟು ಬಾರಿ ಜಯ ಸಾಧಿಸಿದ್ದೇವೆ. ಆ ಜಯದ ಹಾದಿ ನಮ್ಮನ್ನು ಯಾವಾಗಲೂ ಜೊತೆಯಾಗಿ ಇರುವುದಕ್ಕೆ ಕಾರಣವಾಗಿತ್ತು. ಅದಕ್ಕಿಂತಲೂ ಮುಖ್ಯವಾಗಿ ನಾನು ಮತ್ತು ಆತೀಫ್ ಕಾಲೇಜಿನ ವಾರ್ಷಿಕೋತ್ಸವ ಆಚರಣೆಯ ಅಂಗವಾಗಿ ಏರ್ಪಡಿಸಿದ ಕೇರಂ ಆಟದಲ್ಲಿ ಅದರಲ್ಲೂ ಡಬಲ್ಸ್ ವಿಭಾಗದಲ್ಲಿ ಮೊದಲನೇ ಸ್ಥಾನ ಗಳಿಸಿದ್ದೆವು. ಬಹುಮಾನ ವಿತರಣೆಯನ್ನು ಕಾಲೇಜಿನ ವಾರ್ಷಿಕೋತ್ಸವ ದಿನದಂದು ವಿತರಣೆ ಮಾಡಿದರು. ಸಮಾರಂಭದಲ್ಲಿ ವೇದಿಕೆಯ ಮೇಲೆ ಹೋಗಿ ಬಹುಮಾನ ತೆಗೆದುಕೊಳ್ಳುವುದೇ ಒಂದು ಅದ್ಭುತ ಅನುಭವ. ಅನುಭವಿಸಿದವರಿಗೇ ಗೊತ್ತು ಅದರ ಸುಖ. ಎಲ್ಲಾ ಸಹಪಾಠಿಗಳ ಎದುರಿಗೆ ವಿಭಿನ್ನವಾಗಿ ಕಾಣುವ ಬಾಡಿ ಲಾಂಗ್ವೇಜ್.

ಪ್ರತೀ ಬಾರಿಯಂತೆ ಆ ಸಲವೂ ಊರಿಗೆ ಬಂದ್ದಿದ್ದೆ ಆದರೆ ಒಂದು ವರುಷದ ಗ್ಯಾಪ್ ಇತ್ತು. ಹಾಗಾಗಿ ಊರನ್ನೊಮ್ಮೆ ಸುತ್ತಿ ಬರೋಣವೆನ್ನಿಸಿ,ಮೊದಲೆಲ್ಲಾ ನಾ ಚಿಕ್ಕವನಿದ್ದಾಗ ಅಡ್ಡಾಡುತ್ತಿದ್ದ ಓಣಿಗಳನ್ನು ಸುತ್ತು ಹಾಕಿ ಬಂದೆ. ಎಷ್ಟೋ ಗುಡಿಸಲುಗಳು ಮಾಯವಾಗಿ ಅಲ್ಲಿ ಕಾಂಕ್ರೀಟಿನ ಮನೆಗಳು ನಿಂತಿದ್ದವು. ಮನೆಯ ಮುಂದೆಯೇ ಹರಿಯುತ್ತಿದ್ದ ಬಚ್ಚಲಿನ ನೀರು ಪಕ್ಕದಲ್ಲಿಯೇ ಇದ್ದ ಚರಂಡಿಗೆ ಮುಖ ಮಾಡಿತ್ತು. ಮಳೆ ಬಂದರೆ ಮಣ್ಣಿನ ಕೆಸರಾಗುತ್ತಿದ್ದ ದಾರಿಯಲ್ಲೀಗ ಸಿಮೆಂಟಿನ ಹಾಸಿಗೆ ಹಾಸಿದೆ. ಆ ಪುಟ್ಟ ಹುಡುಗ ಆಗ ಚಡ್ಡಿಯನ್ನೂ ಹಾಕುತ್ತಿರಲಿಲ್ಲ ಆದರೆ ಈಗ ಪ್ಯಾಂಟ್ ಧರಿಸಿ ಎಲ್ಲಿಗೋ ಹೋಗುತ್ತಿದ್ದಾನೆ, ನನ್ನನ್ನು ಅವನು ಗೊತ್ತು ಹಿಡಿಯಲಿಲ್ಲ. ಇಷ್ಟೆಲ್ಲಾ ಗುರುತರ ಬದಲಾವಣೆ ನನ್ನ ಊರಿನಲ್ಲಿ ನನಗೆ ಬಹಳ ಖುಶಿ ಕೊಟ್ಟವು, ನಾನು ಮನೆಗೆ ಬಂದಾಗ ರಾತ್ರಿ ಏಳು ಗಂಟೆ ಮತ್ತು ಊಟ ಮುಗಿಸಿದಾಗ ಒಂಬತ್ತು ಗಂಟೆ. ನನ್ನ ಮನೆಯಲ್ಲಿ ಒಂಬತ್ತುವರೆ ಹತ್ತಾದರೆ ಎಲ್ಲರೂ ಮಲಗಿ ಬಿಡುತ್ತಿದ್ದರು ಆದರೆ ಬುದವಾರ ಮಾತ್ರ ಹತ್ತು ಗಂಟೆ ಆದ ಮೇಲೆಯೇ ಎಲ್ಲರೂ ಮಲಗುತ್ತಿದ್ದರು ಏಕೆಂದರೆ ರೇಡಿಯೋದ ಆಕಾಶವಾಣಿ ಧಾರವಾಡ ಕೇಂದ್ರದಲ್ಲಿ ಪ್ರತೀ ಬುದವಾರ ಒಂದು ನಾಟಕ ಬಿತ್ತರಗೊಳ್ಳುತ್ತಿತ್ತು. ಅದನ್ನು ಕೇಳುವುದೇ ಒಂದು ಮಜಾ. ಅದರಲ್ಲಿ ಬಿತ್ತರಗೊಂಡ ‘ಭೂತದ ಬಂಗಲೆ’ಯ ಪಾತ್ರಧಾರಿಗಳ ಏರಿಳಿತದ ಮಾತುಗಳು,ಹಿಂಭಾಗದಲ್ಲಿ ಬರುತ್ತಿದ್ದ ಸಂಗೀತ, ಶಬ್ದ ಇನ್ನೂ ಮನಸ್ಸಿನಿಂದ ಮಾಸಿಲ್ಲ. ಆ ನೆನಪುಗಳೇ ಹಾಗೆ..ಮಾಸದ ನೆನಪುಗಳು.

ಪ್ರತೀ ದಿನದಂತೆ ಆ ರಾತ್ರಿಯೂ ಒಂಬತ್ತಕ್ಕೆ ಊಟ ಮುಗಿದಿತ್ತು. ಮಾಮೂಲಿಯಂತೆ ರಾತ್ರಿ ಹರಟಲು ಆತೀಫ್‍ನ ಮನೆಗೆ ಹೋದೆ. ಊರಲ್ಲಿ ಅಷ್ಟು ದಿನ ನಡೆದಿದ್ದ ಸುದ್ದಿ ಸಮಾಚಾರಗಳನ್ನು ತಿಳಿಯುವ ಕುತೂಹಲ ನನಗೆ. ರಾತ್ರಿ ಎರಡು ಗಂಟೆಯವರೆಗೂ ಕುಳಿತು ಎಲ್ಲಾ ವಿಷಯವನ್ನು ಮಾತನಾಡುತ್ತಿದ್ದೆವು. ಹಾಗಾಗಿ ಅಂದು ರಾತ್ರಿ ಹೋದಾಗ ಆತೀಫ್ ಇನ್ನೂ ಊಟ ಮಾಡಿರಲಿಲ್ಲ. ಆತನ ಊಟ ಆಗುವವರೆಗೂ ಅವರ ತಾಯಿ ಬೇಗಂ ಅವರ ಯೋಗಕ್ಷೇಮ ವಿಚಾರಿಸಿದೆ. ಎಲ್ಲವೂ ಸೌಖ್ಯ ಎಂದು ಹೇಳಿ ನನ್ನ ಬಗ್ಗೆಯೂ ವಿಚಾರಿಸಿದರು. ನಾನು ಊರು ಬಿಟ್ಟು ನೌಕರಿ ಮಾಡಲು ಗುಜರಾತಿಗೆ ಹೋಗಿದ್ದಕ್ಕೆ ಹೆಮ್ಮೆಯೂ ಪಟ್ಟರು ಕಾರಣ ಆಗ ಯಾರೂ ತಮ್ಮ ಊರು ಬಿಟ್ಟು ಹೊರಗಡೆ ನೌಕರಿಗೆ ಹೋಗಲು ಇಷ್ಟ ಪಡುತ್ತಿರಲಿಲ್ಲ. ಈ ವಿಷಯಕ್ಕೆ ಸಂಬಂದಪಟ್ಟಂತೆ ಇನ್ನೊರ್ವ ವ್ಯಕ್ತಿ ಬಹಳ ಹೆಮ್ಮೆ ಪಟ್ಟವರೆಂದರೆ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನವರೇ ಆದ ಕೇಂದ್ರ ಸಾಹಿತ್ಯ ಅಕಾಡಮಿ ಪುರಸ್ಕುತ ಮತ್ತು ನೃಪತುಂಗ ಪ್ರಶಸ್ತಿ ವಿಜೇಯಿತರಾದ ಶ್ರೀ.ಕುಂ.ವೀ.ರವರು. ಏನೇ ಆದರೂ ಊರಲ್ಲಿಯೇ ನೌಕರಿ ಸಿಗಬೇಕು ಮತ್ತು ಕೈತುಂಬಾ ಸಂಬಳ ಬರಬೇಕು. ಅದು ಸಾದ್ಯವೇ..? ಮೊಸರು ತಿನ್ನ ಬೇಕಾದರೆ ಸ್ವಲ್ಪವಾದರೂ ಕೈ ಕೆಸರಾಗಬೇಕು..ಅಲ್ಲವೇ..?

ಆತೀಫ್‍ನ ಊಟ ಮುಗಿಯಿತು. ಉಜ್ಜಿನಿ ಬಸ್‍ಸ್ಟಾಂಡ್‍ಗೆ ಸ್ವೀಟ್‍ಪಾನ್ ತಿನ್ನುಲು ಹೊರೆಟೆವು. ಅದೂ ಎಲ್ಲಾ ಬೀಡಾ ಅಂಗಡಿಗಳಲ್ಲಿ ಅಲ್ಲಾ,ಅದಕ್ಕಾಗಿ ಕೆಲವು ಪಾನ್ ಶಾಪ್‍ಗಳು ಹೆಸರಾಗಿದ್ದವು. ಅದರಲ್ಲಿ ಸಿ.ಎಮ್.ಕೆ. ಮೊದಲನೇ ಸ್ಥಾನದಲ್ಲಿ ನಿಲ್ಲುತ್ತಿತ್ತು. ಸ್ವೀಟ್‍ಪಾನ್ ತಿಂದು ಉಜ್ಜಿನಿ ಬಸ್‍ಸ್ಟಾಂಡ್‍ನಿಂದ ಸೀದಾ ನಮ್ಮನೆಯ ಎದುರಿಗೆ ಇದ್ದ ಶಂಕ್ರಣ್ಣನ ಶೆಡ್ಡ್’ನ ಮುಂಭಾಗದಲ್ಲಿ ಹಾಕಿದ್ದ ಬಂಡೆಕಲ್ಲಿನ ಮೇಲೆ ಕುಳಿತುಕೊಂಡೆವು. ಅಷ್ಟೊತ್ತಿಗೆ ಆಗಲೇ ರಾತ್ರಿ ಹನ್ನೆಂದು ಗಂಟೆಯಾಗಿತ್ತು. ನಾನು ಕೊಟ್ಟೂರಿನವನು..ಹಾಗಾದರೆ ಉಜ್ಜಿನಿಯ‘ಬಸ್‍ಸ್ಟಾಂಡ್’ ಎಲ್ಲಿಂದ ಬಂತು ಎಂದು ನೀವು ಯೋಚಿಸುತ್ತಿರಬಹುದು. ನಿಮ್ಮ ಊಹೆ ನಿಜ. ಆದರೆ ಕೊಟ್ಟೂರಿನಲ್ಲಿಯೇ ಇದ್ದ ಸಣ್ಣ ‘ಬಸ್‍ಸ್ಟಾಂಡ್’ಗೆ ಉಜ್ಜಿನಿ ಬಸ್‍ಸ್ಟಾಂಡ್ ಎಂದು ಕರೆಯುತ್ತಿದ್ದರು ಕಾರಣ ಉಜ್ಜಿನಿಗೆ ಹೋಗುವ ಎಲ್ಲಾ ಬಸ್ಸುಗಳು ಅಲ್ಲಿಂದಲೇ ಹೋಗುತ್ತಿದ್ದವು. ಹಾಗಾಗಿ ಅದಕ್ಕೆ ಆ ಹೆಸರು. ಬಂಡೆಕಲ್ಲಿನ ಮೇಲೆ ಕುಳಿತಾಗ ಒಂದೊಂದೇ ವಿಷಯಗಳು ಹೊರಬಂದವು. ಅದರಲ್ಲಿ ಒಂದು ತಮಾಷೆಯ ಸುದ್ದಿಯನ್ನು ಆತೀಫ್ ವಿವರಿಸಿದ..

‘..ನಾಗ್ರಾಜ್ ನಿನಗೆ ಗೊತ್ತಾ.. ಶ್ರೀಲಕ್ಷ್ಮಿ ಎಂಟರ್‍ಪ್ರೈಸ್‍ನವರೂ ಈ ಊರಿಗೂ ಬಂದಾರೆ..’

‘ಹೌದಾ ..ಅದು ಯಾರದೂ..’

‘ಅಯ್ಯೋ..ನಿನಗೆ ಗೊತ್ತಿಲ್ವಾ..ಇವ್ರು ಹರಿಹರದಾಗ ಇದ್ರು ಈಗ ಈ ಊರಿಗೆ ಬಂದಾರೆ..ಮತ್ತೇ ಇವ್ರ ಸ್ಟೋರಿ ಹೇಳ್ತೀನಿ ಕೇಳ್.. ಮಜಾ ಐತಿ ಕೇಳು..’ಎನ್ನುತಾ ಶುರು ಮಾಡಿದ…

‘ಇವ್ರ ಎಂಟರ್‍ಪ್ರೈಸ್‍ನಗ ಮೆಂಬರ್ ಆಗ್ಬೇಕಂದ್ರ… ಎರಡು ಸಾವಿರ ಕೊಟ್ಟು ಹೆಸರು ನೊಂದಣಿ ಮಾಡ್ಸ್‍ಬೇಕು, ಆಮೇಲೆ ಪ್ರತೀದಿನ ಐವತ್ತು ರೂಪಾಯಿ ಹಂಗಾ ಎರೆಡು ತಿಂಗ್ಳು ಕಟ್ಟ್ ಬೇಕು..ವಾರಕ್ಕ ಒಂದು ಸರ್ತಿ ಡ್ರಾ ತಗಿತರ.. ಯಾರ್ದು ನಂಬರ್ ಬರುತ್ತೇ ಅವ್ರಿಗೇ ಫ್ರಿಡ್ಜೋ,ವಾಷಿಂಗ್‍ ಮಷಿನ್ನೋ, ಟೀವಿನೋ ಕೊಡ್ತಾರಾ… ಆಮೇಲೆ ದುಡ್ಡು ಕಟ್ಟಂಗಿಲ್ಲ..ಅವು ಏನಿಲ್ಲಾ ಅಂದ್ರೂ ಒಂದೊಂದು ಹತ್ತು ಸಾವಿರದ ಮೇಲೇಯೆ ಇರೋದು, ಬಂದ್ರೆ ಲಕ್, ಡ್ರಾದಗ ಬರ್ಲಿಲ್ಲ ಅಂದ್ರ ಕೊನೆಗೇ ಎಲ್ರಿಗೂ ಒಂದು ಅಲಮಾರ..ವರ್ಥ ಆಪ್ಫ್ ಟೆನ್ ಥೌಸಂಡ್..!’ ಎಂದು ಒಂದೇ ಉಸಿರಿಗೆ ಹೇಳಿ ಮುಗಿಸಿದ. ನನಗೆ ಕಥೆ ಕೇಳಿದ ಹಾಗೆ ಅನಿಸಿತು.

‘..ಮತ್ತೇ ಬೆಸ್ಟ್ ಆಯ್ತಲ್ಲೋ..ಕಟ್ಟೋದು ಐದು ಸಾವಿರ..ಬಂದ್ರೆ ಹತ್ತು ಸಾವಿರದ ಮಾಲು..’ ಎಂದಾಗ ಆತೀಫ್ ನಕ್ಕ

‘ಇನ್ನೂ ಇವ್ರ ಸ್ಟೋರಿ ಮುಗುದಿಲ್ಲ..ಹೇಳ್ತೀನಿ ಕೇಳು..’ಎನ್ನುತಾ

‘..ಇವ್ರ ರೂಲ್ಸ್ ಪ್ರಕಾರ ಎರಡು ತಿಂಗ್ಳು ಇಲ್ಲೇ ಇರ್ಬೇಕು..ಅದ್ರೆ..ಯಾವಾಗ ಇವರ ಹತ್ರ ಒಳ್ಳೆ ದುಡ್ಡು ಕಲೆಕ್ಷನ್ ಆಗುತ್ತೋ..ಅವತ್ತು ರಾತ್ರಿ ಎತ್ತಂಗ್ಡಿ ಆಗ್ತಾರಾ..!..’ ಎಂದು ಹೇಳಿದಾಗ ನನಗೆ ಶಾಕ್ ಆಯಿತು.

‘..ಅದು ಗೊತ್ತಿದ್ದೂ ಜನ ಇವರ ಹತ್ರ ದುಡ್ಡು ಯಾಕ್ ಹಾಕ್ತಾರಾ..? ನನ್ನ ಡೌಟ್ ಕೇಳಿದೆ.

‘ಈ ಶ್ರೀಲಕ್ಷ್ಮಿ ಎಂಟರ್‍ಪ್ರೈಸ್‍ನವ್ರೂ ಏನ್ ಹೇಳ್ತಾರಾ ಅಂದ್ರ.. ಆ ಶ್ರೀಲಕ್ಷ್ಮಿ ಎಂಟರ್‍ಪ್ರೈಸ್‍ನವ್ರೂ ಬೇರೆ ನಾವ್ ಬೇರೆ..ಹೆಸರು ಮಾತ್ರ ಸೇಮ್..  ಅವ್ರು ಮೋಸ ಮಾಡ್ಯಾರಂತ ನಾವು ಮೋಸಾ ಮಾಡಂಗಿಲ್ಲಾ..ನಮ್ಮದೇನ್‍ ಇದ್ರೂ..ಸ್ಟ್ರೇಟ್ ಅಂಡ್ ಫಾರ್ವರ್ಡ್, ದುಡ್ಡು ಕಟ್ರಿ..ಡ್ರಾ ಗೆಲ್ರಿ..ಸಾಮಾನ್ ತಗೊಳ್ರೀ..ಅಂತಾರಾ..’

‘ಸರಿ ಬಿಡು..ಹಾಗಾದ್ರಾ ಇವ್ರು ಸರಿ ಇರಬಹುದು’

‘ನೋಡ್ತಾ ಇರು..ಇವ್ರೂ ಎರಡು ತಿಂಗ್ಳ್ ಒಳಗಾ ಓಡಿ ಹೋಗ್ತಾರಾ..’ ಎನ್ನುತಾ ಡಿಷಿಷನ್ ಕೊಟ್ಟ.

ಸ್ವಲ್ಪ ಹೊತ್ತಿನ ನಂತರ ‘..ಅದು ಸರೀ ನನಗೆ ಯಾಕೀ ಕಥೆ ಹೇಳ್ದೇ..’

‘..ಏನಿಲ್ಲಾ ಅದ್ರಲ್ಲಿ ನಮ್ಮಮ್ಮ ಮತ್ತು ನಿಮ್ಮಮ್ಮ ಇಬ್ರೂ  ದುಡ್ಡು ಹಾಕಿದಾರ..’ಎಂದ

‘ಅಯ್ಯೋ..ಅದು ಬಗ್ಗೆ ಗೊತ್ತಿದ್ದೂ.. ಇವ್ರ್ಯಾಕೆ ದುಡ್ಡು ಹಾಕ್ತಿದಾರೆ..?’ ಎಂದು ಆತೀಫ್’ನ್ನು ಕೇಳಿದೆ

‘ನಮ್ಮಮ್ಮ ಅಂತೂ ಒಪ್ತಿಲ್ಲಾ..ನಿಮ್ಮಮ್ಮನಿಗಾದರೂ ಒಂದು ಸಾರಿ ಹೇಳು ..’ಎಂದ

‘ಸರಿ ಬಿಡು..ನಾಳೆ ನೋಡುವಾ..’ ಎಂದೇಳಿ ಟೈಮ್ ನೋಡಿದೆ ಮಧ್ಯರಾತ್ರಿ ಎರೆಡುವರೆ..! ಆ ಹೊತ್ತಿನಲ್ಲಿ ಯಾರೋ ಕೆಮ್ಮಿದ ಶಬ್ದ ನನ್ನ ಕಿವಿಗೆ ಬಿತ್ತು.

‘ಯಾರದು..ಈಗ ಕೆಮ್ಮುತಾ ಇರೋದು..!’ ಎಂದು ಸುತ್ತಲೂ ನೋಡಿದೆ.

ಆತೀಫ್ ಹೇಳಿದ ‘ರಾತ್ರೆ.. ಶಂಕ್ರಣ್ಣರ ಅಪ್ಪ ಇಲ್ಲೇ..ಇದೇ ಶೆಡ್ ನಲ್ಲೇ ಮಲುಗೋದು..’ಎನ್ನುತ್ತಿದ್ದಂತೆ

‘..ಸಾಕ್ ಎಲ್ಲಿಗಾದ್ರೂ ಹೋಗಿ ಮಾತಾಡ್ರಪಾ..ನಿದ್ದಿ ಬರುವಲ್ದು..ನಿಮ್ ಸೌಂಡಿಗೆ..’ ತಾತ ಸ್ವಲ್ಪ ಜೋರಾಗಿಯೇ ಹೇಳಿದ. ಇನ್ನೂ ಇಲ್ಲಿಯೇ ಕುಳಿತಿದ್ದರೆ ನಮಗೆ ತಾತ ಎದ್ದು ಬಂದು ಒದೆಯುವದು ಗ್ಯಾರೆಂಟಿ ಮತ್ತು ಮರ್ಯಾದೆನೂ ಇರೊಲ್ಲಾ ಎಂದು ನಮ್ಮ ನಮ್ಮ ಮನೆಗೆ ಹಿಂತಿರುಗಿದೆವು.

ನನಗೋ ರಾತ್ರಿಯ ಸುದ್ದಿ ಕುತೂಹಲ ಮೂಡಿಸಿತ್ತು. ಬೆಳ್ಳಿಗ್ಗೆ ಎದ್ದವನೇ ತಾಯಿಯನ್ನು ಕೇಳಿದೆ,

‘..ಅವ್ವಾ ಅದ್ಯಾವುದೋ ಲಾಟ್ರಿ ಹಾಕಿರಂತಲ್ಲಾ..ಅವ್ರೇನಾದ್ರು..ದುಡ್ಡು ಎತ್ತಿಕ್ಕೊಂಡ್ ಹೋದ್ರೆ..ಏನ್ ಮಾಡ್ತೀ.?’

‘ಅವ್ನೂ ಹೋಗೊದ್ ಪಕ್ಕಾ ಐತಿ..ರಾಜ..ಅಸ್ಟ್ರವೊಳಗ ನಮಿಗೇ ಲಾಟ್ರಿ ಬಂದ್ರ..! ಫ್ರಿಡ್ಜೋ, ಗ್ರಿಡ್ಜೋ ಬಂದ್ಬಿಡ್ತೈತಿ..’ ಎಂದು ತಾಯಿ ನನಗೇ ಕನ್‍ವೆನ್ಸ್ ಮಾಡಿದರು.

‘ಇವ್ರು ಹೇಳೋದು ಸರಿ ಐತಿ..ಬಂದ್ರೆ ಲಕ್ಕು..ಇಲ್ಲಾ ಅಂದ್ರೆ ಹಣೆಬರಹ ಚೆನ್ನಾಗಿಲ್ಲಾ ಅಂತ ಅನ್ಕೋಣದು..’  ಎನ್ನುತ್ತಲೇ ಚಹಾ ಹೀರುತ್ತಿದ್ದೆ.

ನಾನು ಊರಿಗೆ ಬಂದು ಒಂದು ವಾರ ಆಗುತ್ತಾ ಬಂದಿತ್ತು. ಹೊಸದೊಂದು ವಿಷಯ ತಿಳಿದು ಮರಳಿ ಗುಜರಾತ್‍ಗೆ ಹೊರಟು ನಿಂತೆ.

***

ನಾನು ಮೊದಲಿನಿಂದಲೂ ಹೇಳುವ ಹಾಗೆ ಕಾಲ ಉರುಳಲು ಸಮಯ ಬೇಕಿಲ್ಲ. ತನ್ನಷ್ಟಿಗೆ ತಾನೇ ಉರುಳುತ್ತದೆ ಎಂದು. ಎಣಿಸಿದ ಹಾಗೇ ಆರು ತಿಂಗಳು ಹೇಗೆ ಕಳೆದವೋ ಗೊತ್ತಿಲ್ಲಾ, ಮತ್ತೇ ಊರಿಗೆ ಬರುವ ಅವಕಾಶ ಸಿಕ್ಕಿತು ಮತ್ತು ಇದಕ್ಕೆ ನನ್ನ ಮೇಲಿನ ಅಧಿಕಾರಿ ಎಸ್.ಎನ್ ಸಿಂಗ್ ಸಾಹೇಬರ ಸಹಮತವೂ ಕಾರಣವಾಗಿತ್ತು. ಊರಿಗೆ ಬಂದವನೇ..ಊರು ಸುತ್ತುವುದ ಪ್ರಾರಂಭಿಸಿದೆ. ಮತ್ತೇ ಅದೇ ರಾತ್ರಿ ಆತೀಫ್‍ನ ಪಾನ್‍ಶಾಪ್ ಅಂಗಡಿ..ಕಲ್ಲುಬಂಡೆಯಯ ಮೇಲೆ ಮಾತು..ಊರಲ್ಲಿಯ ಎಲ್ಲಾ ವಿಷಯ ಅಲ್ಲಿಗೆ ಬಂದವು.

ಶ್ರೀಲಕ್ಷ್ಮಿ ಎಂಟರ್‍ಪ್ರೈಸ್‍ನ ಬಗ್ಗೆ ತಾಯಿಯ ಹತ್ತಿರ ಕೇಳಿದ್ದೆ ಆದರೆ ಪೂರ್ಣವಾಗಿ ಮಾಹಿತಿ ಸಿಕ್ಕಿರಲಿಲ್ಲ. ಅದಕ್ಕೆ ಆತೀಫೇ ಬೆಸ್ಟ್ ಎಂದು ಸುಮ್ಮನಾಗಿದ್ದೆ.

‘..ಮತ್ತೇನು ಆತೀಫ್.. ಶ್ರೀಲಕ್ಷ್ಮಿ ಎಂಟರ್‍ಪ್ರೈಸ್‍ನ ವಿಷಯ..?’

‘ನಾನ್ ಹೇಳಿದ್ನೆಲ್ಲಾ ಹಂಗಾ ಆಯ್ತು..ಮೂರು ವಾರ ಎಲ್ಲರಿಗೂ ಡ್ರಾ ಸಾಮಾನು ಕೊಟ್ಟ..ಆಮೇಲೆ ಪರಾರಿ ಆದ..’ಎಂದು ಮುಂದುವರೆಸುತ್ತಾ

‘..ಅವ್ನೂ ಓಡಿ ಹೋಗ್ತಾನ ಅಂತ ಎಲ್ರೀಗೂ ಗೊತ್ತಿತ್ತು..ಅದಕ್ಕಾ ದಿನಕ್ಕ ಒಬ್ಬರಂಗ ಆ ಅಂಗಡಿ ಮುಂದೆ ರಾತ್ರಿ ಕಾಯ್ತಾಕುತ್ಗೋತಾ ಇದ್ರು..ಆದ್ರೆ ಯಾವಾಗ ಓಡಿ ಹೋದ್ನೋ ಯಾರಿಗೂ ಗೊತ್ತಾಗಲಿಲ್ಲ…ನೋಡ್…ಸುಮಾರು ಮೂವತ್ತು ಲಕ್ಷ ಕಲೆಕ್ಷನ್ ಆಗಿತ್ತಂತೆ..’ ಎಂದು ನಿಟ್ಟುಸಿರು ಬಿಟ್ಟ.

ನನಗೆ ಇಂಗ್ಲೀಷ್ ಚಿತ್ರದ ಕತೆ ಕೇಳಿದ ಹಾಗೆ ಆಯಿತು.

‘ಗೊತ್ತಿದ್ದೂ ಗೊತ್ತಿದ್ದೂ ಹಗಲೇ ಬಾವಿಗೆ ಬೀಳ್ತಾರಂದ್ರ ನಾವೇನ್ ಮಾಡಕ ಆಗತೈತಿ.. ಓದ್ರ ಹೋಗ್ಲಿ..ಬಿಡು’ಎಂದು ಮತ್ತೇ ಬೇರೆಯದೇ ವಿಷಯ ಮಾತಾನಾಡುತ್ತಾ ಕುಳಿತೆವು. ಆರು ತಿಂಗಳ ಹಿಂದೆ ಆ ತಾತ ಹೇಳಿದ ಮಾತು ಮತ್ತೇ ನೆನಪು ಬಂತು ಮತ್ತು ಜೊತೆಗೆ ನಗೆಯೂ ಬಂತು.

‘ಸರಿ ಮತ್ತೇ ನಾಳೆ ಮಾತಾಡನಾ..’ ಎಂದು ನಮ್ಮ ಮನೆಗಳಿಗೆ ಹಿಂತಿರುಗಿದೆವು.

ಜನಸಾಮಾನ್ಯರ ಯೋಚನೆಯೇ ಹಾಗೆ…! ಗುಡ್ಡಕ್ಕೆ ಹಗ್ಗ ಹಾಕುವರು, ಬಂದರೆ ಗುಡ್ಡ ಹೋದರೆ ಹಗ್ಗ. ಅದನ್ನು ಎನ್‍ಕ್ಯಾಶ್ ಮಾಡುವುದಕ್ಕೋಸ್ಕರ ಶ್ರೀಲಕ್ಷ್ಮಿ ಎಂಟರ್‍ಪ್ರೈಸ್‍ನಂತಹ ಹಲವಾರು ಕಂಪನಿಗಳು ಹುಟ್ಟಿಕೊಳ್ಳುತ್ತವೆ ಮತ್ತು ಅವರು ಹಣ ದೋಚುವ ರೀತಿಯಲ್ಲಿ ಸಕ್ಸಸ್ ಕೂಡ ಆಗುತ್ತಾರೆ. ಇದಂತೂ ಓದು ಬರಹ ಕಲಿಯದೇ ಇದ್ದ ನನ್ನ ತಾಯಿ ಅಥವಾ ಆತೀಪಫ್’ನ ತಾಯಿಯ ವಿಷಯವಾಗಿರಬಹುದು

ಆದರೆ ಪ್ರತೀ ವಿದ್ಯಾಬ್ಯಾಸದ ಘಟ್ಟದಲ್ಲಿಯೂ ಮೊದಲನೇ ಶ್ರೇಣಿಯಲ್ಲಿ ಉತ್ತೀರ್ಣನಾಗಿ ಬರುತ್ತಿದ್ದ ನನ್ನದೇ ಒಂದು ಉದಾಹರಣೆಯನ್ನು ನೀಡುತ್ತೇನೆ ಕೇಳಿ..

ಸಂತೋಷ..ಕಾಲೇಜಿನಲ್ಲಿ ಉಪನ್ಯಾಸಕರು. ನನ್ನೂರಾದ ಕೊಟ್ಟುರಿನಿಂದಲೇ ಲ್ಯಾಂಡ್‍ಲೈನ್‍ಗೆ ಫೋನ್ ಮಾಡಿದರು ‘.ನಾಗ್ರಾಜ್.. ನಾನು ಸಂತೋಷ….ಒಂದು ಒಳ್ಳೆ ಸ್ಕೀಮ್ ಇದೆ. ನಾನೂ ದುಡ್ಡು ಹಾಕತಾ ಇದೀನೀ..ನೀನೂ ಹಾಕಂಗಿದ್ರೆ ನೋಡು..’ ಎಂದರು. ಅವರು ಏನೇ ಹೇಳಲಿ ನಾನು ಸಿದ್ಧನಾಗಿದ್ದೆ ಕಾರಣ ನನ್ನ ಬಾಲ್ಯದಿಂದಲೂ ಅವರ ಬಳಿ ಹಲವಾರು ಸಲಹೆಗಳನ್ನು ತೆಗೆದುಕೊಂಡಿದ್ದೆ ಮತ್ತು ಅದರ ಪಾಲನೆಯನ್ನೂ ಮಾಡಿದ್ದೆ. ಹಾಗಾಗಿ ಅವರ ನಿರ್ಧಾರದಲ್ಲಿ ನನಗೆ ಪೂರ್ಣ ನಂಬಿಕೆ ಇತ್ತು.‘ಆಯ್ತು ಅಣ್ಣ..ಹೇಳಿ..’ ಎಂದು ರಿಸೀವರನ್ನು ಕಿವಿಗಚ್ಚಿ ಕೊಂಡೆ…

‘ಇದು ಹಾಲಿನ ಡೈರಿ ಸ್ಕೀಮ್.. ಲಮ್‍ಸಮ್ ಆಗಿ ಒಂದಿಷ್ಟು ದುಡ್ಡು ಕೊಡುಬೇಕು ( ಐವತ್ತು ಸಾವಿರ,ಒಂದು ಲಕ್ಷ..ಎರಡು..) ಆ ದುಡ್ಡನ್ನ ಅವ್ರು ಫಾರಿನ್ ಹಸೂ ಮೇಲೆ ಇನ್ವೆಷ್ಟ್ ಮಾಡ್ತಾರ ಮತ್ತು ಹಾಲು ಮಾರಾಟ ಮಾಡ್ತಾರ. ಬರೋ ಲಾಭದಲ್ಲಿ ಎಲ್ಲರಿಗೂ ಸಮವಾಗಿ ಹಂಚ್ತಾರ. ಅಂದ್ರ ನಾವಾಕಿದ್ದು ಒಂದು ವರ್ಷದಲ್ಲಿ ವಾಪಾಸ್ಬರ್ತೈತಿ..ನೆಕ್ಸ್ಟ್ ಬರೋದೆಲ್ಲಾ ಪ್ರಾಫಿಟ್ಟೇ..’

‘ಒಂದು ವರ್ಷ ಆದಮೇಲೆ ಪ್ರಾಫಿಟ್ಟೆಂಗೆ..? ಎಂದು ಕೇಳಿದೆ.

‘.. ನಾವು ಇನ್ವೆಷ್ಟ್ ಮಾಡಿದ ದುಡ್ಡುನ್ನೆಲ್ಲಾ ಒಂದೇ ವರ್ಷದಲ್ಲಿ ಅಂದ್ರೆ ಅದಕ್ಕೆ ಪ್ರತೀ ತಿಂಗಳು 24%ಬಡ್ಡೀ ಕೊಟ್ಟು ಮುಗಿಸ್ತಾರೆ. ಅದುನ್ನೂ ಚೆಕ್ ಕಳಿಸ್ತಾರೆ..ಅದು ಆದ್ಮೇಲೆ ಅದೇ 24% ತಿಂಗ್ಳಾ ಕೊಡ್ತಾ ಇರ್ತಾರೆ.. ನನ್ನತ್ರ ಆಗಲೇ ಆರು ಚೆಕ್ ಇದಾವೆ..ಬೇಕಾದ್ರೆ ನಿಮ್ ತಂದೆಯವರನ್ನ ಕೇಳು..ಅವರಿಗೆಲ್ಲಾ ಹೇಳಿದಿನಿ..’ ಎಂದು ಪೂರ್ಣ ವಿವರ ಕೊಟ್ಟರು.

ನಾನೂ ಸಹಾ ‘ಆಯ್ತು ಅಣ್ಣ ಯೋಚನೆ ಮಾಡ್ತೇನೆ..’ಎಂದು ಫೋನಿಟ್ಟೆ. ನನ್ನ ತಲೆಯಲ್ಲಿ ಹಲವಾರು ಯೋಚನೆಗಳು ಬಂದವು. ನಾವು ಹಾಕಿದ ದುಡ್ಡು ಒಂದೇ ವರ್ಷದಲ್ಲಿ ರಿಟರ್ನ್ ಬರುತ್ತೇ. ಅಂದ್ರೆ ರಿಸ್ಕ್ ಒಂದೇ ವರ್ಷ..ಆಮೇಲೆ ಎಲ್ಲಾ ಪ್ರಾಫಿಟ್ಟೇ..ಸರಿ ಇನ್ವೆಷ್ಟ್ ಮಾಡೇ ಬಿಡೋದು ಎಂದು ತಂದೆಯವರ ಬ್ಯಾಂಕ್ ಖಾತೆಗೆ ಐವತ್ತು ಸಾವಿರ ವರ್ಗಾಯಿಸಿದೆ. ಮತ್ತು ಅವರೂ ಆ ಹಾಲಿನ ಡೈರಿಯ ಸ್ಕೀಮ್‍ನಲ್ಲಿ ಹಾಕಿದರು. ಒಂದು ತಿಂಗಳು ಮುಗಿಯುತ್ತಿದ್ದಂತೆ ನನ್ನ ಅಡ್ರೆಸ್ಸಿಗೆ ಒಂದು ಚೆಕ್ ಬಂದಿತು ಮತ್ತು ಅವರು ಮೊದಲೇ ಹೇಳಿದ ಹಾಗೆ 24% ಬಡ್ಡಿ ಅದರಲ್ಲಿತ್ತು. ನನ್ನ ಖುಷಿಗೆ ಪಾರೇ ಇಲ್ಲದೆ ಹಾಗಾಯಿತು. ವರ್ಷಕ್ಕೆ8 ಅಥವಾ 9% ಬಡ್ಡಿ ಕೊಡುವ ಬ್ಯಾಂಕ್‍ಗಳೆಲ್ಲಿ,ತಿಂಗಳಿಗೆ 24% ಬಡ್ಡಿ ಕೊಡುವ ಹಾಲಿನ ಡೈರಿ ಸ್ಕೀಮ್ ಎಲ್ಲಿ. ನನಗಂತೂ ನನ್ನ ಡಿಷಿಷನ್ ಸರಿ ಎನಿಸಿತು. ಹೀಗೆಯೇ ಎರಡು ತಿಂಗಳು ಚೆಕ್ ಬಂದವು ಮೂರನೇ ತಿಂಗಳು ಬರಲೇ ಇಲ್ಲ. ಮೋಸ್ಟ್ಲಿ ತಡವಾಗಿಬರಬಹುದೆಂದು ಚ್ಕೆಕ್‍ಗಾಗಿ ಕಾಯುತ್ತಾ ಕುಳಿತೆ, ಹೂ..ಹುಂ..ಯಾವುದೇ ಸುದ್ದಿ ಇರಲಿಲ್ಲ. ಮನೆಗೆ ಮತ್ತು ಸಂತೋಷ ಇಬ್ಬರಿಗೂ ಫೋನ್‍ ಮಾಡಿ ವಿಚಾರಿಸಿದೆ ಅವರಲ್ಲೂ ಯಾವುದೇ ಮಾಹಿತಿ ಸಿಗಲಿಲ್ಲ. ನಾನೂ ಸಹ ಸುಮ್ಮನಾದೆ.

ಸ್ವಲ್ಪ ತಿಂಗಳುಗಳಾದ ಮೇಲೆ ಒಂದು ಸ್ಪೆಷಲ್ ನ್ಯೂಸ್ ಟೀವಿಯಲ್ಲಿ ಪ್ರಸಾರವಾಗುತ್ತಿತ್ತು. ಹಾಲಿನ ಡೈರಿ ಸ್ಕೀಮ್‍ನ ಮುಖ್ಯಸ್ಥನನ್ನು ಪೋಲೀಸರು ಬಂದಿಖಾನೆಗೆ ಕರೆದ್ಯೊಯ್ದರೆಂದು ಮತ್ತು ಅವರ ಕಚೇರಿಯಲ್ಲಿದ್ದ ಎಲ್ಲಾ ಸಾಮಾನುಗಳನ್ನು ಜಪ್ತಿ ಮಾಡಿದ್ದಾರೆಂದು. ತಾನು ಮಾಡುತ್ತಿರುವ ದಂಧೆ ಭೋಗಸ್ ಎಂದು, ಅಮಾಯಕ ಜನರನ್ನು ಮೋಸಗೊಳಿಸುತ್ತಿರವ ದೊಡ್ಡ ಜಾಲವೆಂದು ಪರಿಗಣಿಸಿ ಈ ಹೆಜ್ಜೆಯನ್ನು ಪೋಲೀಸರು ತೆಗೆದುಕೊಂಡಿದ್ದರು. ನನಗಂತೂ ಸಿಟ್ಟು ಸಂಕಟ ಎರಡೂ ಬಂದಿತ್ತು ಕಾರಣ ನಾನು ಈ ಸ್ಕೀಮ್‍ನಲ್ಲಿ ತೊಡಗಿಸಿದ್ದ ಹಣವು ನನ್ನ ಭವಿಷ್ಯ ನಿಧಿಗಾಗಿ ತೊಡಗಿಸಿಟ್ಟಿದ್ದ ಹಣವಾಗಿತ್ತು ಆದರೆ ಆಸೆ ಯಾರನ್ನು ತಾನೇ ಬಿಟ್ಟೀತು. ಕೇವಲ ಒಂದು ವರುಷ ರಿಸ್ಕ್ ತೆಗೆದುಕೊಂಡರೆ ನಾನು ಹಾಕಿದ ಹಣ ವಾಪಾಸು ಬರುತ್ತದೆ ನಂತರ ಬಂದುದ್ದೆಲ್ಲಾ ಲಾಭ ಎನ್ನುವ ರೀತಿಯಲ್ಲಿ ಯೋಚಿಸಿದ್ದೆ, ಆದರೆ ಆದದ್ದು ಬೇರೆಯದೇ, ಹಾಗಾಗಿ ಇದರಿಂದ ಕಲಿತ ಪಾಠ ಮಾತ್ರ ಮುಂದೆ ಇಲ್ಲಾ ಕಾರ್ಯಗಳಲ್ಲಿಯೂ ಉಪಯೋಗವಾಯಿತು. ನನ್ನ ಸ್ನೇಹಿತ ಡಿ.ಡಿ. ಸಾಹು ಯಾವಾಗಲೂ ಹೇಳುತ್ತಾನೆ ‘ನತಿಂಗ್ ಕಮ್ಸ್ ಫ್ರೀ ಇನ್ ದಿಸ್ ವರ್ಲ್ಡ್..’ಎಂದು, ಶ್ರಮ ಪಟ್ಟು ದುಡಿದಾಗ ಬರುವಂಥಹ ದುಡ್ಡಿಗೆ ಬಹಳ ಮಹತ್ವವಿರುತ್ತದೆ.. ಅಲ್ಲವೇ..?

ನಾಗರಾಜ್ ಮುಕಾರಿ (ಚಿರಾಭಿ)

ಕೈಗಾ,ಕಾರವಾರ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!