ಅಂಕಣ

ನಮ್ಮನ್ನು ಒಡೆಯುತ್ತಿರುವ ಪೂರ್ವಾಗ್ರಹ

ಪ್ರತಿಯೊಬ್ಬ ವ್ಯಕ್ತಿಯೂ ಇಂದು ಒಂದಲ್ಲ ಒಂದು ಪೂರ್ವಾಗ್ರಹಗಳಿಗೆ ಒಳಗಾಗುತ್ತಿದ್ದಾನೆ. ಆಸ್ತಿಕರನ್ನು ಕಂಡರೇ, ನಾಸ್ತಿಕರಿಗೆ ಅಸಹನೆ. ಹಾಗೆಯೇ ನಾಸ್ತಿಕರನ್ನು ಕಂಡರೆ ಆಸ್ತಿಕರಿಗೆ ಆಗದು. ಒಂದು ಜಾತಿ, ಒಂದು ಸಿದ್ಧಾಂತ, ಒಂದು ಪಕ್ಷ, ಒಂದು ಧರ್ಮ… ಹೀಗೆ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿ ಯಾವುದಾದರೂ ಒಂದಕ್ಕೆ fit ಆಗುತ್ತಿದ್ದಾರೆ. ವೈಯಕ್ತಿಕವಾದದ್ದೇ ನಿಲ್ಲಬೇಕು ಎಂಬ ಮನಃಸ್ಥಿತಿಯನ್ನು ಬೆಳೆಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಆ ವೈಯಕ್ತಿಕತೆಯೇ ಮನುಷ್ಯರನ್ನು ಒಡೆಯುತ್ತಿರುವುದು. ಎರಡು ವಿಭಿನ್ನ ಮನಃಸ್ಥಿತಿಗಳು ಒಂದೆಡೆ ಸೇರುತ್ತಿರುವುದು ಅಪರೂಪ. ಒಂದೆಡೆ ಸೇರಿದರೂ ತಾವು fit ಆದ ಸಿದ್ಧಾಂತವನ್ನು ಸಾರಲು ಸೇರಿರುತ್ತಾರೆಯೇ ಹೊರತು ಮನುಷ್ಯರಾಗಿ ಬೆರೆಯಲು ಅಲ್ಲ. ಭಾರತದಲ್ಲಿ ಇಂದು ಎಡ ಮತ್ತು ಬಲ ಪಂಥೀಯ ಎಂದು ಒಡೆದು ಹೋಗುತ್ತಿರುವ ಜನರನ್ನು ಮುಖ್ಯವಾಗಿಟ್ಟುಕೊಂಡು ಪೂರ್ವಾಗ್ರಹದ ಕುರಿತು ಈ ಲೇಖನದಲ್ಲಿ ಒಂದಿಷ್ಟು ಮಾತನಾಡಲಾಗಿದೆ.

ಹೀಗೆ ಪೂರ್ವಾಗ್ರಹಕ್ಕೆ ಒಳಗಾದ ಸಮಾಜವನ್ನು ನೋಡಿದಾಗ, ಹೇಳಲೇಬೇಕಾದ ಕೆಲವು ಸಂಗತಿಗಳು ನೆನಪಿಗೆ ಬರುತ್ತಿವೆ.

1967ರಲ್ಲಿ ಜಸ್ಟೀಸ್ ಸರ್ಕಾರ್ ನೇತೃತ್ವದಲ್ಲಿ ಗೋಹತ್ಯೆ ನಿಷೇಧದ ಕುರಿತು ಚರ್ಚಿಸಲು ಕಾಂಗ್ರೆಸ್ ಸರ್ಕಾರ ಒಂದು ಕಮಿಟಿಯನ್ನು ರಚಿಸುತ್ತದೆ. ಆ ಕಮಿಟಿಯಲ್ಲಿ ಗೋಳ್ವಲ್ಕರ್  ಮತ್ತು ಕುರಿಯನ್ ಕೂಡ ಇರುತ್ತಾರೆ. 12 ವರ್ಷಗಳ ಕಾಲ ಕಮಿಟಿ ಈ ಕುರಿತು ಅಧ್ಯಯನ ಮಾಡುತ್ತದೆ. ಈ ಕಮಿಟಿಯನ್ನು ಮುಂದೆ ವಿಸರ್ಜಿಸಲಾಗುತ್ತದೆ. ಅದು ಬೇರೆ ವಿಚಾರ. ಆದರೇ ನಮಗಿಲ್ಲಿ ಬೇಕಾಗಿರುವುದು ಗೋಳ್ವಲ್ಕರ್ ಮತ್ತು ಕುರಿಯನ್ ಅವರ ಸ್ನೇಹ. ಕುರಿಯನ್ ತಮ್ಮ ಆತ್ಮಕಥನವಾದ `I too had a dream”ಕೃತಿಯಲ್ಲಿ ಹೇಳುವಂತೆ, ಕಮಿಟಿಯ ಚರ್ಚೆಯಲ್ಲಿ ಇಬ್ಬರೂ ಭಿನ್ನ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದರು. ಗೋಳ್ವಲ್ಕರ್ ಅವರು ಗೋಹತ್ಯೆ ನಿಷೇಧವನ್ನು ಸಮರ್ಥಿಸುತ್ತಿದ್ದರೇ, ಕುರಿಯನ್ ವಿರೋಧಿಸುತ್ತಿದ್ದರು. ಈ ಕಮಿಟಿಯಿಂದಾಗಿ ಇವರಿಬ್ಬರ ನಡುವೆ ಅಪಾರ ಸ್ನೇಹ ಬೆಳೆಯಿತು. ತಮ್ಮ ಭಿನ್ನ ಮನಃಸ್ಥಿತಿಯಿಂದ ಎಂದಿಗೂ ಇವರ ಸ್ನೇಹಕ್ಕೆ ಚ್ಯುತಿ ಬರಲಿಲ್ಲ. ಕುರಿಯನ್ ಹೇಳುತ್ತಾರೆ:`ಗೋಳ್ವಲ್ಕರ್ ಅವರಲ್ಲಿ ಅಪಾರ ಮನುಷ್ಯತ್ವವಿತ್ತು’.

ಇನ್ನು ಎ.ಎನ್.ಮೂರ್ತಿರಾವ್ ದಂಪತಿಗಳು. ಮೂರ್ತಿರಾವ್ ಅಪ್ಪಟ ನಾಸ್ತಿಕ. ಅವರು ಬರೆದ`ದೇವರು’ ಕೃತಿಯೂ ನಾಸ್ತಿಕವಾದದ ಮೈಲುಗಲ್ಲು. ಅವರ ಹೆಂಡತಿ ಅಪ್ಪಟ ದೈವಭಕ್ತೆ. ಆದರೇ,ಮೂರ್ತಿರಾವ್ ಅವರು ತಮ್ಮ ನಂಬಿಕೆಯನ್ನು ಎಂದಿಗೂ ತನ್ನ ಹೆಂಡತಿಯ ಮೇಲೆ ಹೇರಲಿಲ್ಲ. ತನ್ನ ಹೆಂಡತಿಯ ನಂಬಿಕೆಗೆ ಏಕೆ ನೋವು ಮಾಡಬೇಕು ಎಂದು ಅವರೊಂದಿಗೆ ದೇವಾಲಯಕ್ಕೆ ಹೋಗುತ್ತಿದ್ದರು. ದೇವರಿಗೆ ಕೈ ಮುಗಿಯುತ್ತಿದ್ದರು. ಹಾಗೆಂದು ಅವರೆಂದೂ ತಮ್ಮ ಸಿದ್ಧಾಂತದಲ್ಲಿ ರಾಜಿ ಮಾಡಿಕೊಳ್ಳಲಿಲ್ಲ. ತಾವು ಹೇಳಬೇಕಾದನ್ನು ತಮ್ಮ ಕೃತಿಗಳಲ್ಲಿ ಹೇಳಿದರು.

ಕುವೆಂಪು ಮತ್ತು ಮಾಸ್ತಿ ವೆಂಕಟೇಶ ಅಯ್ಯಂಗಾರ್ ನಡುವೆ ನಡೆದ ವೈಚಾರಿಕ ಸಮರ ನಮಗೆಲ್ಲ ತಿಳಿದದ್ದೆ ಆಗಿದೆ. ಕುವೆಂಪು ಶೂದ್ರ ತಪಸ್ವಿ ಬರೆದಾಗ,ಪುರಾಣದ ಮೂಲವನ್ನು ಬದಲಾಯಿಸಿದ್ದು ಸರಿಯಲ್ಲ ಎಂದು ಮಾಸ್ತಿ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಅದಕ್ಕೆ ಕುವೆಂಪು ಅವರು ಮಾಸ್ತಿಯವರಿಗೆ ಪ್ರತಿಕ್ರಿಯೆ ನೀಡಿದ್ದು ಚಾರಿತ್ರಿಕ ದಾಖಲೆ. ಮುಖ್ಯವಾಗಿ ನಾವು ಗಮನಿಸಬೇಕಾದ ಅಂಶವೆಂದರೆ, ಇವರಿಬ್ಬರೂ ತಮ್ಮ ವೈಚಾರಿಕ ಭಿನ್ನತೆಯ ನಡುವೆಯೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಎರಡು ದಿಗ್ಗಜಗಳ ನಡುವೆ ವೈಯಕ್ತಿ ದ್ವೇಶ, ಅಸೂಯೆ ನೆಲೆಸಲಿಲ್ಲ. ಭಾರತದ ಸಂವಾದ ಸಂಸ್ಕತಿಯನ್ನು ಸಾರಿದರು. ಇಂತಹ ಹಲವಾರು ದೃಷ್ಟಾಂತಗಳು ನಮ್ಮ ಎದುರಿಗಿವೆ.

  • ಆದರೇ, ಇಂದು ಏನಾಗಿದೆ?

ಇಂದು ಎದುರಿನ ವ್ಯಕ್ತಿಯಲ್ಲಿ ಮಾನವೀಯತೆಯನ್ನೇ ಕಾಣದವರಾಗುತ್ತಿದ್ದೇವೆ. ಗೋಳ್ವಲ್ಕರ್ ಅನುಯಾಯಿಯಾದವರು ಎದುರಿಗಿನ ವ್ಯಕ್ತಿ ತಮಗಾಗದ ಹೇಳಿಕೆಯನ್ನು ನೀಡಿದರೇ,ಸಮತೂಕದ ಪ್ರತಿಕ್ರಿಯೆ ನೀಡುವುದಿಲ್ಲ. ಬಹುತೇಕ ನಾಸ್ತಿಕರು ತಮ್ಮ ಅಭಿಪ್ರಾಯವನ್ನು ಬೇರೆಯವರ ಮೇಲೆ ಹೇರುವ, ಸರಾಸಗಟಾಗಿ ದೈವಭಕ್ತರನ್ನೆಲ್ಲ ವಿರೋಧಿಸುವ ಛಾತಿ ಬೆಳೆಸಿಕೊಂಡಿರುತ್ತಾರೆ. ರಾಜಕೀಯ ಮೇಲಾಟ ಅತಿಯಾಗಿದೆ.

  • ಪೂರ್ವಾಗ್ರಹ ಹೇಗೆ ಕೆಲಸ ಮಾಡುತ್ತದೆ?

ನನಗೆ ಕಾಂಗ್ರೆಸ್ ಆಡಳಿತವೆಂದರೆ ಇಷ್ಟ. ಕಾಂಗ್ರೆಸ್ ತಪ್ಪು ಮಾಡಿದರೂ ಅದಕ್ಕೆ ನನ್ನ ಮತ. ಕಾಂಗ್ರೆಸ್ ಜಾರಿಗೆ ತಂದಿರುವ ಜಾಗತೀಕರಣವು ಎಷ್ಟೇ ದ್ವಂದ್ವಗಳಿಂದ ಕೂಡಿದ್ದರೂ, ಅದರಿಂದ ಭಾರತದಲ್ಲಿ ವರ್ಗ ತಾರತಮ್ಯ ಹೆಚ್ಚುತ್ತಿದ್ದರೂ, ಒಂದು ರೀತಿಯಲ್ಲಿ ಮನಮೋಹನ್ ಸಿಂಗ್ ಕಂಡರೆ ಎಲ್ಲಿಲ್ಲದ ಪ್ರೀತಿ. ಜಾಗತೀಕರಣವನ್ನು ಕಾಂಗ್ರೆಸ್ ತರುವುದು ಅನಿವಾರ್ಯವಾಗಿತ್ತು. ಈಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಅದೇ ಜಾಗತೀಕರಣವನ್ನು ಮೋದಿ ವಿಸ್ತರಿಸುತ್ತಿದ್ದಾರೆ. ದೇಶ ದೇಶಗಳನ್ನು ಸುತ್ತುತ್ತಿದ್ದಾರೆ. ಈಗ ಬಿಜೆಪಿ ವಿರೋಧಿಯಾದ ನನಗೆ ಕಾಂಗ್ರೆಸ್ಸಿನಲ್ಲಿ ಕಾಣದ ಪ್ರಮಾದ ಮೋದಿಯಲ್ಲಿ ಕಾಣುತ್ತದೆ. ಹಾಗೆಂದು ನಾನು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಜಾಗತೀಕರಣವನ್ನು ವಿರೋಧಿಸುತ್ತಿರಲಿಲ್ಲವೆಂದಲ್ಲ,ವಿರೋಧಿಸುವ ಧ್ವನಿ ಇಂದಿಗಿಂತ ಮೆದುವಾಗಿತ್ತು. -ಹೀಗೆ ಪೂರ್ವಾಗ್ರಹ ಕೆಲಸ ಮಾಡುತ್ತದೆ.

  • ಪೂರ್ವಾಗ್ರಹದಿಂದ ಹೊರ ಬರುವುದು ಹೇಗೆ?

ನಾವು ಯಾವುದಾದರೊಂದು ಪಂಥಕ್ಕೆ ಬದ್ಧರಾದರೇ,ಕಾಮಾಲೆ ಕಣ್ಣಿಗೆ ಕಾಣುವುದೆಲ್ಲ ಹಳದಿ ಬಣ್ಣವೆಂಬತೆ ಆಗುತ್ತದೆ. ಬಲ ಪಂಥಿಯರು ಕಣ್ಣಿಗೆ ನೀಲಿ ಕನ್ನಡವನ್ನು ಹಾಕಿಕೊಂಡಿದ್ದಾರೆ. ಎಡಪಂಥೀಯರು ಕಣ್ಣಿಗೆ ಕೇಸರಿ ಕನ್ನಡವನ್ನು ಹಾಕಿಕೊಂಡಿದ್ದಾರೆ. ಹೀಗಾಗಿ ಸಹಜವಾಗಿಯೇ ಬಲ ಪಂಥೀಯರು ಮಾಡುವ ಕೆಲಸವೆಲ್ಲಾ ಎಡದವರಿಗೆ ಕೇಸರಿಯಾಗಿಯೇ ಕಾಣುತ್ತದೆ. ಎಡಪಂಥೀಯರು ಮಾಡುವ ಕೆಲಸವೆಲ್ಲಾ ಬಲದವರಿಗೆ ಧರ್ಮ,ಸಂಸ್ಕತಿಯನ್ನು ಬುಡಮೇಲು ಮಾಡುವ ಕೃತ್ಯವೆಂಬಂತೆ ಕಾಣುತ್ತದೆ. ಆದರೇ ನಮಗೆ ಕೇಸರಿ ಕೇಸರಿಯಾಗಿಯೇ ಕಾಣುವ, ನೀಲಿ ನೀಲಿಯಾಗಿಯೇ ಕಾಣುವ ಸಹಜ ಕಣ್ಣುಗಳು ಬೇಕು. ಈ ಸಹಜ ಕಣ್ಣು ಯಾವುದು? ಉತ್ತರ ಸರಳ;ಅಳವಡಿಸಿಕೊಂಡರೆ ಎಲ್ಲರೂ ಮಾನವರಾಗುವ ಪಥ- ಅದುವೆ ನಮ್ಮ `ಸಂವಿಧಾನ.’

-ಯತಿರಾಜ್ ಬ್ಯಾಲಹಳ್ಳಿ

ದ್ವಿತೀಯ ಎಂ.ಸಿ.ಜೆ.,

ಎಸ್‍ಡಿಎಂ ಕಾಲೇಜು, ಉಜಿರೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!