ಅಂಕಣ

ಜನರ ಕಣ್ಣೀರಿಗಿಂತ ಜಯಲಲಿತಾ ಮೊಸಳೆ ಕಣ್ಣೀರಿಗೇ ಹೆಚ್ಚು ಬೆಲೆಯಾ?

ಮೊನ್ನೆ ಗಣೇಶ ಚತುರ್ಥಿಯ ಕರಿಗಡುಬು ಕನ್ನಡಿಗರ ಪಾಲಿಗಂತೂ ಕಹಿಯಾಗಿದ್ದು ಸುಳ್ಳಲ್ಲ.. ಸಪ್ಟೆಂಬರ್ 5 ರಂದು ತೀರ್ಪಿತ್ತ ಸುಪ್ರಿಂ ಕೋರ್ಟ್ 10 ದಿನಗಳ ಕಾಲ 13.5 ಟಿಎಂಸಿ ನೀರನ್ನು ಕರ್ನಾಟಕ ತಮಿಳುನಾಡಿಗೆ ಬಿಡಬೇಕು ಎಂದು ಆದೇಶ ನೀಡಿದೆ. ಅಂದರೆ ಪ್ರತಿದಿನ 15 ಸಾವಿರ ಕ್ಯೂಸೆಕ್ ನೀರನ್ನು ಕರ್ನಾಟಕ ಹರಿಸಬೇಕಾಗುತ್ತದೆ. ಒಂದು ಟಿಎಂಸಿ ಅಂದರೆ 11 574 ಕ್ಯೂಸೆಕ್ಸ್. ಅದರಂತೆ ಪ್ರತೀ ದಿನ 1.30 ಟಿಎಂಸಿ  ನೀರನ್ನು ಬಿಡಬೇಕು. ಮಹಾದಾಯಿಯ ತೀರ್ಪಿನಿಂದ ಆತಂಕಕ್ಕೆ ಒಳಗಾಗಿದ್ದ ಕರ್ನಾಟಕಕ್ಕೆ ಒಂದು ರೀತಿಯಲ್ಲಿ ಗಾಯದ ಮೇಲೆ ಬರೆ ಎಳೆದ ಸ್ಥಿತಿ. ಇರುವ ನೀರನ್ನೂ ಬಿಟ್ಟು ಎಲ್ಲಿಗೆ ಹೋಗುವದು..?? ಇದರಿಂದ ಕೃಷಿಗೆ ಅಷ್ಟೇ ಅಲ್ಲ ಕುಡಿಯುವ ನೀರಿಗೂ ಕರ್ನಾಟಕಕ್ಕೆ ಸಂಕಷ್ಟ ಎದುರಾಗುವುದು ಖಚಿತ. ಇದರ ಕುರಿತ ವಿಸ್ತಾರ ವರದಿ ಇಲ್ಲಿದೆ.

ಕಾವೇರಿ ನದಿ ನೀರು ವಿವಾದಕ್ಕೆ ಶತಮಾನಗಳ ಇತಿಹಾಸವಿದೆ

ಕಾವೇರಿ ನದಿ ನೀರು ವಿವಾದಕ್ಕೆ ಶತಮಾನಗಳ ಇತಿಹಾಸವಿದೆ. ನಮಗೇ ಗೊತ್ತಿಲ್ಲದೆ ಬ್ರಿಟೀಷರ ತಂತ್ರಕ್ಕೆ ನಾವಿಂದು ಹೊಡೆದಾಡುವ ಸ್ಥಿತಿ ತಲುಪಿದ್ದೇವೆ..ಬ್ರಿಟೀಷ್ ಆಳ್ವಿಕೆಯ ಕಾಲದಲ್ಲಿ ಅಂದರೆ 1892 ರಂದು. ಮೊದಲು ಬ್ರಿಟೀಷರ ಆಳ್ವಿಕೆಯಲ್ಲಿ ಇದ್ದ ಮದ್ರಾಸ್ ಮತ್ತು ಮೈಸೂರು ಸಂಸ್ಥಾನಗಳಲ್ಲಿ, ಮೈಸೂರು ಸಂಸ್ಥಾನ ಬ್ರಿಟೀಷ್ ಆಳ್ವಿಕೆಯಿಂದ ಬೇರ್ಪಟ್ಟು ಮೈಸೂರು ಒಡೆಯರ ಆಳ್ವಿಕೆಗೆ ಒಳಪಟ್ಟಿತು. ಆಗ ಮೈಸೂರು ಸಂಸ್ಥಾನ ಕಾವೇರಿ ನೀರಿನ ಬಳಕೆಯ ಬಗ್ಗೆ ಯೋಜನೆಗಳನ್ನು ರೂಪಿಸಲು ಮುಂದಾದಾಗ ಮದ್ರಾಸ್ ಸಂಸ್ಥಾನ ವಿರೋಧ ವ್ಯಕ್ತಪಡಿಸಿತು. ಇದರಿಂದಾದ ಬಿಕ್ಕಟ್ಟಿನ ಶಮನಕ್ಕಾಗಿ 1890ರಲ್ಲಿ ಮೈಸೂರು ಮತ್ತು ಮದ್ರಾಸ್ ಸಂಸ್ಥಾನಗಳ ನಡುವೆ ಮಾತುಕತೆ ಏರ್ಪಟ್ಟಿತು. ಇದಾದ 2 ವರ್ಷಗಳ ನಂತರ ಅಂದರೆ 1892ರಲ್ಲಿ ಉಭಯ ಸಂಸ್ಥಾನಗಳು ಒಪ್ಪಂದವೊಂದಕ್ಕೆ ಸಹಿ ಹಾಕಿದರು. ಈ ಒಪ್ಪಂದಕ್ಕೆ ಮೈಸೂರು ಸಂಸ್ಥಾನ ವಿರೋಧದ ನಡುವೆಯೂ ಸಹಿ ಮಾಡಿತ್ತು. ಈ ಒಪ್ಪಂದದಲ್ಲಿ ಮೈಸೂರಿನ ಸಂಸ್ಥಾನಕ್ಕೆ ಕಾವೇರಿ ನೀರಿನ ಹರಿವಿಕೆಯಲ್ಲಿ ಕಡಿಮೆ ಸ್ವಾತಂತ್ರ್ಯ ಹಾಗೂ ಮದ್ರಾಸ್ ಸಂಸ್ಥಾನಕ್ಕೆ ನದಿ ನೀರಿನ ವಿಚಾರದಲ್ಲಿ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲಾಗಿತ್ತು.. ಮೈಸೂರು ಸಂಸ್ಥಾನ ಕೈ ತಪ್ಪಿದ್ದರಿಂದ ಬ್ರಿಟೀಷ್ ಸರ್ಕಾರ ಮಾಡಿದ ಕುತಂತ್ರದ ಫಲ ಈ ಒಪ್ಪಂದ ಎಂಬುದು ಜಗತ್ತಿಗೇ ಗೊತ್ತಿರುವ ಸತ್ಯ.

ಸ್ವಾತಂತ್ರ್ಯಾ ನಂತರವೂ ಮೈಸೂರು ಸಂಸ್ಥಾನ ಈ ಒಪ್ಪಂದಕ್ಕೆ ವಿರೋಧ ವ್ಯಕ್ತಪಡಿಸುತ್ತಲೆ ಇತ್ತು. 1910ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅಣೆಕಟ್ಟೆ ನಿರ್ಮಿಸುವ ಯೋಚನೆ ಮಾಡಿದರು. ಈ ಅಣೆಕಟ್ಟೆ 2 ಹಂತಗಳಲ್ಲಿ ನಿರ್ಮಿಸುವ ಯೋಜನೆ ಹೊಂದಲಾಗಿದ್ದು, ಈ ಮೂಲಕ 41.5 ಟಿಎಂಸಿ ನೀರು ಸಂಗ್ರಹಿಸುವ ಯೋಜನೆ ಹೊಂದಲಾಗಿತ್ತು. ಆದರೆ ಈ ಯೋಜನೆಗೆ ಮದ್ರಾಸ್ ಸಂಸ್ಥಾನ ತೀವ್ರ ವಿರೋಧ ವ್ಯಕ್ತಪಡಿಸಿತಲ್ಲದೆ, ನೀರಿನ ಹರಿವು ಕಡಿಮೆಯಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿತು. ಇದರ ಪರಿಣಾಮವಾಗಿ ಮೆಟ್ಟೂರು ಬಳಿ ತಾನೂ ಒಂದು ಅಣೆಕಟ್ಟೆ ನಿರ್ಮಿಸಲು ನಿರ್ಧರಿಸಿತು ಮದ್ರಾಸ್ ಸಂಸ್ಥಾನ. ಅದರಲ್ಲಿ 80 ಟಿಎಂಸಿ ನೀರು ಸಂಗ್ರಹದ ಉದ್ದೇಶ ಹೊಂದಿತ್ತು. ಆಗ ಮಧ್ಯ ಪ್ರವೇಶಿಸಿದ ಬ್ರಿಟೀಷ್ ಸರ್ಕಾರ ಕೇವಲ 11 ಟಿಎಂಸಿ ನೀರು ಶೇಖರಿಸುವುದಾದರೆ ಆಣೆಕಟ್ಟಿಗೆ ಅನುಮತಿ ನೀಡುವುದಾಗಿ ಹೇಳಿತು.. ಇದು ಒಡೆಯರ್ ಸಂಸ್ಥಾನಕ್ಕೆ ಹಿನ್ನಡೆಯ ನಿರ್ಣಯವಾದರೂ ಕನ್ನಂಬಾಡಿ ಆಣೆಕಟ್ಟಿಗೆ ನಾಂದಿಯಾಯಿತು..

ರಾಷ್ಟ್ರದ ಬಹುತೇಕ ನದಿಗಳು ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಹರಿದು ಸಮುದ್ರ ಸೇರುತ್ತಿವೆ. ತಮ್ಮ ವ್ಯಾಪ್ತಿಯಲ್ಲಿ ಹರಿಯುವ ನದಿಯ ನೀರಿನ ಸಂರಕ್ಷಣೆ ಮತ್ತು ಉಪಯೋಗವನ್ನು ಆಯಾ ರಾಜ್ಯಗಳು ಮಾಡುತ್ತಿರುತ್ತವೆ. ಭಾರತ ಸರ್ಕಾರವು 1956ರಲ್ಲಿ ಅಂತರ ರಾಜ್ಯ ಜಲ ವಿವಾದ ಅಧಿನಿಯಮವನ್ನು ರೂಪಿಸಿ ಜಾರಿಗೊಳಿಸಿತು. ಇದೇ ಸಮಯದಲ್ಲಾದ ಭಾರತದ ರಾಜ್ಯಗಳ ಏಕೀಕರಣ ತಂದಿಟ್ಟಿದ್ದು ಹೊಸತೊಂದು ಸಮಸ್ಯೆಯನ್ನು.. ಏಕೀಕರಣದಿಂದ ಕಾವೇರಿ ನದಿ ಸಮಸ್ಯೆ  ಕೇರಳ, ತಮಿಳುನಾಡು, ಪುದುಚೇರಿ ಮತ್ತು ಕರ್ನಾಟಕ ರಾಜ್ಯಗಳ ಸಮಸ್ಯೆಯಾಗಿ ಬಿಟ್ಟಿತು. ಯಾಕೆಂದರೆ 1956ರಲ್ಲಿ ಏಕೀಕರಣದ ಸಂದರ್ಭದಲ್ಲಿ ಕೊಡಗು ಹಾಗೂ ಆಂಧ್ರಪ್ರದೇಶದ ಹಲವು ಭಾಗಗಳು ಕರ್ನಾಟಕಕ್ಕೆ ಸೇರ್ಪಡೆಗೊಂಡವು. ಮದ್ರಾಸ್ ಪ್ರಾಂತ್ಯದ ಭಾಗವಾಗಿದ್ದ ಮಲಬಾರ್ ಕೇರಳ ರಾಜ್ಯವಾಗಿ ಹೊರಹೊಮ್ಮಿತು. ಇದರ ಜೊತೆಗೆ ಪುದುಚೇರಿ ಹುಟ್ಟಿಕೊಂಡಿತು. ಹೀಗೆ ಕಾವೇರಿ ನದಿ ನೀರಿನ ವಿವಾದ 4 ರಾಜ್ಯಗಳದ್ದಾಯಿತು..

ಕಾವೇರಿ ನೀರು ಹಂಚಿಕೆಯ ವಿವಾದ ತೀವ್ರಸ್ವರೂಪ ಪಡೆದುಕೊಂಡದ್ದು ಮಾತ್ರ 1984ರಲ್ಲಿ ಎಂದು ಹೇಳಬಹುದು.. 1984ರಲ್ಲಿ ತಮಿಳುನಾಡಿನ ರೈತ ಸಂಘಟನೆ ಕಾವೇರಿ ನದಿ ನೀರಿನ ಹಂಚಿಕೆಗಾಗಿ ನ್ಯಾಯಾಧಿಕರಣ ರಚನೆ ಆಗಬೇಕು ಎಂದು ಸುಪ್ರೀಂ ಕೋರ್ಟ್’ಗೆ ಅರ್ಜಿ ಸಲ್ಲಿಸಿತು. ಅದರ ವಿಚಾರಣೆಯ ನಂತರ 1990ರಲ್ಲಿ ಸುಪ್ರೀಂ ಕೋರ್ಟ್ ಉಭಯ ರಾಜ್ಯಗಳು ಒಪ್ಪಂದ ಮಾಡಿಕೊಳ್ಳಬೇಕು ಇಲ್ಲವೇ. ನ್ಯಾಯಾಧಿಕರಣ ರಚನೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತು ಮತ್ತು ಕೇಂದ್ರ ಸರ್ಕಾರ ಅದೇ ವರ್ಷದಲ್ಲಿ ನ್ಯಾಯಾಧಿಕರಣವನ್ನು ರಚನೆ ಮಾಡಿತು.

ನೆನಪಾಗೋ ಬಂಗಾರಪ್ಪ

1991ರಲ್ಲಿ ತೀರ್ಪು ನೀಡಿದ ನ್ಯಾಯಾಧಿಕರಣ ವಾರ್ಷಿಕ 205 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡುವಂತೆ ಕರ್ನಾಟಕಕ್ಕೆ ಸೂಚಿಸುತ್ತೆ.. ಈ ತೀರ್ಪನ್ನು ವಿರೋಧಿಸಿದ ಅಂದಿನ ಮುಖ್ಯಮಂತ್ರಿ ಬಂಗಾರಪ್ಪ ನೇತೃತ್ವದ ಕರ್ನಾಟಕ ಸರ್ಕಾರ ತೆಗೆದುಕೊಂಡ ನಿರ್ಧಾರ ಅತ್ಯಂತ ದಿಟ್ಟವಾದದ್ದು ಎಂದು ಹೇಳಲು ಸಾಧ್ಯವಿಲ್ಲದಿದ್ದರೂ, ದೇಶವೇ ಒಮ್ಮೆ ಕರ್ನಾಟಕದತ್ತ ತಿರುಗಿ ನೋಡಿತ್ತು, ಅಂತಹ ತೀರ್ಮಾನವನ್ನು ಅವರು ತೆಗೆದುಕೊಂಡಿದ್ದರು. ಸರ್ವಪಕ್ಷ ಸಭೆ ಕರೆದು, ವಿರೋಧ ಪಕ್ಷಗಳ ಒಪ್ಪಿಗೆಯನ್ನೂ ಪಡೆದು ನ್ಯಾಯಾಧೀಕರಣದ ತೀರ್ಪಿಗೆ ವಿರುದ್ಧವಾಗಿ ಸುಗ್ರೀವಾಜ್ಞೆ ಹೊರಡಿಸಿ ಕಾವೇರಿ ರಕ್ಷಿಸಿ, ರಾಜ್ಯದ ಜನರಿಗೆ ನೀಡುತ್ತೇನೆ ಎಂಬ ಹಠತೊಟ್ಟರು. ಆಗ ಮತ್ತೆ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ ಇದೇ ಜಯಲಲಿತಾ ನೇತೃತ್ವದ ಸರ್ಕಾರ ನೀರು ಬೇಕೇ ಬೇಕು ಎಂಬ ಹಠ ತೊಟ್ಟಂತೆ ತೀರ್ಪನ್ನು ಧಿಕ್ಕರಿಸಿ ನಿಂತ ಬಂಗಾರಪ್ಪನ ಸುಗ್ರೀವಾಜ್ಞೆಯನ್ನು ಪ್ರಶ್ನಿಸುವಂತೆ ಮಾಡಿತು. ಸುಗ್ರೀವಾಜ್ಞೆಯನ್ನು ಅಸಿಂಧುಗೊಳಿಸಿದ ಸುಪ್ರೀಂ ಕೋರ್ಟ್, ನ್ಯಾಯಾಧಿಕರಣದ ಆದೇಶವನ್ನು ಪಾಲಿಸುವಂತೆ ಆದೇಶ ನೀಡಿತು. ಅಂದು ನಡೆದ ಬಂದ್’ಗೆ ಕರ್ನಾಟಕ ಸರ್ಕಾರ ಬೆಂಬಲ ಸೂಚಿಸಿ ತಾವು ರೈತರ ಪರ ಎಂಬುದನ್ನು ತೋರಿಸಿತ್ತು. ಕೇಸು ಸೋತರೂ ಹೋರಾಡಿದ ಬಂಗಾರಪ್ಪ ಇಂದು ನೆನಪಾಗುತ್ತಾರೆ. ಅಂದು ಬರಗಾಲದ ಪರಿಸ್ಥಿತಿ ಇರಲಿಲ್ಲ, ಹೆಚ್ಚಿನ ನೀರು ಇತ್ತು ಆದರೂ ಬಂಗಾರಪ್ಪ ಯಾಕೆ ಆ ನಿರ್ಧಾರ ಕೈಗೊಂಡರು? ಎಂದು ಹಲವರು ಇನ್ನೂ ಪ್ರಶ್ನಿಸುತ್ತಾರೆ.. ಇನ್ನು ಕೆಲವರು ಇದೊಂದು ಅವಿವೇಕಿ ನಿರ್ಧಾರವಾಗಿತ್ತು, ಇದರಿಂದಾಗಿ ಮುಂದೆ ಬಂಗಾರಪ್ಪ ನ್ಯಾಯಾಂಗ ನಿಂದನೆಯ ಆರೋಪ ಎದುರಿಸಿ ಕೊನೆಗೆ ನ್ಯಾಯಾಲಯದಲ್ಲಿ ಕ್ಷಮೆ ಕೇಳಬೇಕಾದ ಪರಿಸ್ಥಿತಿ ಎದುರಾಯಿತು ಎಂಬುದಂತೂ ಸತ್ಯ. ಆದರೆ ಕರ್ನಾಟಕ ಕಾವೇರಿ ನೀರಿಗಾಗಿ ಹೋರಾಟವನ್ನು ಎಂದಿಗೂ ಹಿಂಜರಿಯದೇ ಮಾಡುತ್ತೆ ಎಂಬ ಸಂದೇಶವನ್ನು ನೀಡಿತ್ತು.

2007 ರಂದು  ಹೊರಬಿದ್ದ ತೀರ್ಪಿನ ಅನ್ವಯ ಕಾವೇರಿ ನದಿ ಪಾತ್ರದಲ್ಲಿ ದೊರೆಯುವ ನೀರಿನ ಪ್ರಮಾಣ 740ಟಿಎಂಸಿ, ಇದರಲ್ಲಿ ತಮಿಳುನಾಡಿಗೆ 419 ಟಿಎಂಸಿ, ಕರ್ನಾಟಕಕ್ಕೆ 270 ಟಿಎಂಸಿ, ಕೇರಳಕ್ಕೆ 30 ಟಿಎಂಸಿ ಹಾಗೂ ಪುದುಚೇರಿಗೆ 7 ಟಿಎಂಸಿ ನೈಸರ್ಗಿಕ ಸಮತೋಲನ ಕಾಯ್ದುಕೊಳ್ಳಲು 10ಟಿಎಂಸಿ ಮತ್ತು ಸಮುದ್ರಕ್ಕೆ ಹರಿಯಲು 4 ಟಿಎಂಸಿ ನೀರು  ಎಂದು ಅಂತಿಮ ತೀರ್ಪು ನೀಡಿತು. ಆದರೆ 516 ಟಿಎಂಸಿ ನೀರನ್ನು ತಮಿಳುನಾಡು ಬಯಸಿತ್ತು. ಅದರ ಬಗೆಗಿನ ತೀರ್ಪು 2013ರಲ್ಲಿ ಅಂತಿಮವಾಗಿ ಹೊರಬಿತ್ತು ಮತ್ತು ಅದರಲ್ಲೂ ಕರ್ನಾಟಕಕ್ಕೆ ಅನ್ಯಾಯವಾಗಿರುವುದನ್ನು ಅಲ್ಲಗಳೆಯುವಂತಿಲ್ಲ.. ಇಂದಿಗೂ ರೈತರ ಹೋರಾಟ ಮುಂದುವರೆಯುತ್ತಲೇ ಇದೆ..

ತೀರ್ಪಿನಲ್ಲಿ ಏನಿದೆ..?

ಮೊನ್ನೆ ಹೊರಬಿದ್ದ ತೀರ್ಪಿನ ನಂತರ ಸರ್ಕಾರ ನಡೆಸಿದ ಸರ್ವಪಕ್ಷ ಸಭೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪಿಗೆ ತಲೆಬಾಗುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದೆ.. ನ್ಯಾಯಾಂಗಕ್ಕೆ ಎಲ್ಲರೂ ತಲೆಬಾಗಲೇಬೇಕು..ಆದರೆ ಜನರ ಪರಿಸ್ಥಿತಿ ಏನು..?? ಇದೆಲ್ಲದಕ್ಕಿಂತ ಹೆಚ್ಚಾಗಿ ಈ ತೀರ್ಪಿನಿಂದ ತಮಿಳುನಾಡಿಗೆ ನೀರು ಸಿಕ್ಕರೂ ಕೂಡ ಅವರ ಆತಂಕ ದೂರವಾಗಿಲ್ಲ. ಕಾವೇರಿ ನದಿಗೆ ತಮಿಳುನಾಡು ಮೆಟ್ಟೂರು ಎಂಬಲ್ಲಿ ಡ್ಯಾಂ ಕಟ್ಟಿದೆ, ಅದೂ ಸಹ ಹಳೆಯದೇ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ ಮೆಟ್ಟೂರು ಡ್ಯಾಂನಲ್ಲಿ ಸದ್ಯ 75 ಅಡಿ ನೀರಿದೆ. ಅಲ್ಲಿ ನೀರು ಹರಿಸಬೇಕಾದರೆ ಕನಿಷ್ಠ 90 ಅಡಿ ತಲುಪಬೇಕು. ಆದರೆ ಕರ್ನಾಟಕ ಹತ್ತು ದಿನಗಳ ಕಾಲ ಹರಿಸುವ 15 ಸಾವಿರ ಕ್ಯೂಸೆಕ್ಸ್ ನೀರಿನಿಂದ ಮೆಟ್ಟೂರು ತುಂಬುವುದು ಅನುಮಾನವೇ.. ಇದರ ಜೊತೆಗೆ ಕೆ.ಆರ್.ಎಸ್.ನಲ್ಲಿ ಸಧ್ಯ ಇರುವ ನೀರಿನ ಪ್ರಮಾಣ 93.72 ಅಡಿ. ಅದರಲ್ಲಿ ಹತ್ತು ಅಡಿ ಡೆಡ್ ಸ್ಟೋರೇಜ್ ಆಗಿರುವುದರಿಂದ ಆ ನೀರನ್ನು ಬಳಸಲು ಸಾಧ್ಯವಿಲ್ಲ. ಕಳೆದ ವರ್ಷ ನೀರಿನ ಪ್ರಮಾಣ 103.50 ಅಡಿಗಳಷ್ಟಿತ್ತು. ಈ ವರ್ಷ ಇರುವ ನೀರಿನ ಪ್ರಮಾಣವೂ ಕೂಡ 18.28ಟಿಎಂಸಿ ಮಾತ್ರ ಅದರಲ್ಲಿ 13.5ಟಿಎಂಸಿ ನೀರು ಬಿಟ್ಟರೆ ಉಳಿಯುವ ನೀರು ಜನರ ಒಣಗಿದ ಗಂಟಲು ತಣಿಸಲೂ ಸಾಲದು. ನೀರು ಶೇಖರಣೆ ಆಗುತ್ತೆ ಎಂದು ಹೇಳಲು ಮಳೆಯ ಪ್ರಮಾಣವೂ ಈ ವರ್ಷ ಇಳಿಕೆಯಾಗಿದೆ. ಹೀಗಿರುವಾಗ ನೀರನ್ನು ಬಿಡಲು ಹೇಗೆ ಸಾಧ್ಯ..??

kaveri-water-level

ಕರ್ನಾಟಕದ ಪರ ವಕೀಲರು ವಾದ ಮಂಡಿಸುವ ಸಮಯದಲ್ಲಿ ತಪ್ಪಿದ್ದಾರೆಯೇ..?? ಈ ವರ್ಷ ಆದ ಮಳೆಯ ಪ್ರಮಾಣ, ಆಣೆಕಟ್ಟಿನಲ್ಲಿ ಶೇಖರಣೆಯಾದ ನೀರಿನ ಪ್ರಮಾಣ, ಅದರಲ್ಲಿ ಬಳಕೆಯಾಗಲು ಅನುಕೂಲವಾಗಿರುವ ನೀರಿನ ಪ್ರಮಾಣ, ನೀರು ಹರಿಸಿದ ನಂತರ ಉಳಿಯುವ ನೀರು ಮತ್ತು ನೀರು ಬಿಟ್ಟ ನಂತರ ಮುಂದಿನ ಸ್ಥಿತಿ ಗತಿಗಳು ಇದರ ಸವಿಸ್ತಾರ ವರದಿಯನ್ನು ನ್ಯಾಯಾಲಯಕ್ಕೆ ನೀಡಿದ್ದಾರೆಯೇ..?? ಕೋರ್ಟ್ ವರದಿಯಲ್ಲಿ ಕರ್ನಾಟಕ ಸರ್ಕಾರ 10000 ಕ್ಯೂಸೆಕ್ಸ್ ನೀರನ್ನು ಪ್ರತಿ ದಿನ ಬಿಡಲು ಸಿದ್ಧವಿದೆ ಎಂದು ಹೇಳಿದೆ ಎಂಬ ಅಂಶವಿದೆ. ಪರಿಸ್ಥಿತಿಯ ಅರಿವಿದ್ದರೂ ಸಹ ಯಾಕೆ ಇಂತಹ ವಾದ ಮಂಡಿಸಲು ಕರ್ನಾಟಕ ಸರ್ಕಾರ ಮುಂದಾಯಿತು..?? ಹೀಗೆ ಹತ್ತು ಹಲವು ಪ್ರಶ್ನೆಗಳು ಮೂಡುವುದು ಸಹಜ. ಆದರೆ ಇದೆಲ್ಲದರ ಪರಿಣಾಮದಿಂದ ಬಂದ ತೀರ್ಪು ಪರಿಣಾಮ ಬೀರುವುದು ಕರ್ನಾಟಕದ ಸಾಮಾನ್ಯ ಜನತೆಯೇ ಅಲ್ಲವೇ..??

ಕರ್ನಾಟಕ ಬಂದ್

ತೀರ್ಪನ್ನು ವಿರೋಧಿಸಿ ಇಂದು ಕರ್ನಾಟಕ ಬಂದ್ ಮಾಡಬೇಕು ಎಂದು ಹಲವು ಸಂಘಟನೆಗಳು ನಿರ್ಧಾರ ಮಾಡಿವೆ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಯನ್ನೂ ಸೇರಿಸಿ ಹಲವಾರು ಸಂಘಟನೆಗಳು ಕೈ ಜೋಡಿಸಿವೆ.. ನಿಜ ರೈತರ ಪರ ನಿಲ್ಲಲೇಬೇಕು, ಈ ಸಮಯದಲ್ಲೂ ನಿಲ್ಲದಿದ್ದರೆ ಹೇಗೆ..?? ನೀರಿದ್ದಾಗ ತಮಿಳುನಾಡಿಗೆ ಬೇಕಾದಷ್ಟು ನೀರು ಕೊಟ್ಟಾಗಿದೆ.. ಅದರ ಅಂಕಿ ಅಂಶಗಳು ಇಲ್ಲಿವೆ.

kaveri

ಆದರೆ ಇಷ್ಟು ವರ್ಷಗಳ ರೀತಿಯಲ್ಲಿ ಈ ವರ್ಷದ ಪರಿಸ್ಥಿತಿ ಇಲ್ಲ. ನೀರಿಗೆ ತೀವ್ರ ಸಂಕಷ್ಟ ಎದುರಾಗಿದೆ.. ಕೇವಲ ರೈತ ಮಾತ್ರವಲ್ಲ ಸಾಮಾನ್ಯ ಜನರೂ ಕಷ್ಟವನ್ನು ಎದುರಿಸಬೇಕಾಗುತ್ತೆ. ಆದರೆ ಬಂದ್ ಮಾಡಿದರೆ ಸಮಸ್ಯೆ ಪರಿಹಾರವಾಗುತ್ತಾ..?? ಸರ್ವಪಕ್ಷ ಸಭೆಯಲ್ಲಿ ಸುಪ್ರೀಂ ಕೋರ್ಟ್ ಆದೇಶಕ್ಕೆ ಬದ್ಧವಾಗಿ ನೀರು ಬಿಡಬೇಕು ಎಂಬ ನಿರ್ಧಾರವಾಗಿದೆ. ಅದರಂತೆ ನೀರು ಬಿಡುತ್ತೆ ಕೂಡ. ಇಂದಿನ ಬಂದ್ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಯದಂತೆ ತಡೆದು ಇಲ್ಲಿಯೇ ಉಳಿಸುತ್ತಾ..?? ತರಕಾರಿಗಳಂಥ ಬೆಳೆಗಳು ಅಂದು ಕೊಯ್ಲು ಮಾಡಿದರೆ ಅಂದೇ ಮಾರುಕಟ್ಟೆಗೆ ತರಬೇಕು ಮತ್ತು ಅದನ್ನು ಮಾರಿ ಜೀವನ ಮಾಡಬೇಕು ಅನ್ನೊ ರೈತರ ಪರಿಸ್ಥಿತಿ ಇಂತಹ ಬಂದ್’ಗಳಿಂದ ಸಂಕಷ್ಟಕ್ಕೆ ಸಿಲುಕುವುದಿಲ್ಲವೇ..? ತರಕಾರಿಗಳ ಬೆಲೆ ದಿನದಿಂದ ದಿನಕ್ಕೆ ಕುಸಿಯುತ್ತಿರುವ ಸಂದರ್ಭದಲ್ಲಿ ಈ ರೀತಿ ಬಂದ್’ಗಳು ತೊಂದರೆಯಾಗುವುದಿಲ್ಲವೇ..?? ಕಾನೂನಿನ ಮೂಲಕವೇ ಪ್ರತಿಭಟನೆಗೆ ಮುಂದುವರೆಯುವ ಮಾರ್ಗ ಇತ್ತಲ್ಲವೇ..?? ಇದೆಲ್ಲ ಪ್ರಶ್ನೆಗಳು ಮೂಡುವುದು ಸಹಜ.. ಅದೇನೆ ಇರಲಿ ರೈತ, ನೀರು, ನೆಲದ ಪರ ನಾವು ನಿಲ್ಲಲೇಬೇಕು.. ಇಂದಿನ ಬಂದ್ ಶಾಂತಿಯಿಂದ ಕೂಡಿರಲಿ, ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿಯಾಗದಿರಲಿ ಎಲ್ಲಕ್ಕಿಂತ ಹೆಚ್ಚಾಗಿ ಕಾವೇರಿ ಕರ್ನಾಟಕದ ಜನರ ಬಾಯಾರಿಕೆ ತಣಿಸಲಿ..

Facebook ಕಾಮೆಂಟ್ಸ್

ಲೇಖಕರ ಕುರಿತು

Manjunath Hegde

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಮೀಪದ ಹಳ್ಳಿ ಇವರ ಮೂಲ.. ಉಡುಪಿಯಲ್ಲಿ MSc ಮಾಡಿ ಒಂದು ವರ್ಷ ಲೆಕ್ಚರರ್ ಆಗಿ ಕೆಲಸ ಮಾಡಿ ಈಗ NITK ಸುರತ್ಕಲ್’ನಲ್ಲಿ PhD ಮಾಡುತ್ತಿದ್ದಾರೆ... ಓದಿದ್ದು ಕಂಪ್ಯೂಟರ್ ಆದರೂ ಸಾಹಿತ್ಯದಲ್ಲಿ ಆಸಕ್ತಿ.. ಬರೆಯುವುದು ಹವ್ಯಾಸ.. ವಿಜ್ಞಾನದ ಬರಹಗಳು, ಕಥೆ ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ಬರೆಯುವ ಆಸಕ್ತಿ ಹೆಚ್ಚು..

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!