ಅಂಕಣ

ಕಾವೇರಿ ಸಮಸ್ಯೆಗೊಂದು ಗಣಿತ ಮಾದರಿ ಪರಿಹಾರ

ಸಧ್ಯದಲ್ಲಿ ನಮ್ಮನ್ನೆಲ್ಲಾ ಅತಿಯಾಗಿ ಕಾಡಿದ್ದೆಂದರೆ ಕಾವೇರಿ ಸಮಸ್ಯೆ. ಈ ಸಮಸ್ಯೆ ಬಹಳ ವರ್ಷಗಳಷ್ಟು ಹಳೆಯದಾಗಿದ್ದರೂ, ಇನ್ನೂ ಒಂದು ಸರಿಯಾದ ಉತ್ತರ ಕಂಡು ಹಿಡಿದುಕೊಳ್ಳಲಾಗದ್ದು ದುರದೃಷ್ಟಕರ. ಹಾಗೆಂದು ಇದರ ಬಗ್ಗೆ ಯಾರೂ ಏನೂ ಮಾಡುತ್ತಿಲ್ಲವೆಂದೇನಿಲ್ಲ. ಹಲವರು (ಪರಿಹರಿಸಲೆಂದೋ/ ಬಾರದೆಂದೋ) ಹಲವಾರು ರೀತಿಯಲ್ಲಿ ತಮ್ಮ ತಮ್ಮ ಪ್ರಯತ್ನವನ್ನು ಜಾರಿಯಲ್ಲಿಟ್ಟಿದ್ದಾರೆ. ಆದರೆ ಇದಕ್ಕೆಲ್ಲ ಕೊನೆ ಎಂದು?? ಎಷ್ಟು ದಿನ ಅಂತ ಉತ್ತರಕ್ಕಾಗಿ ಕೋರ್ಟಿನ ಮೊರೆ ಹೋಗುವುದು?? ಉತ್ತರ ಹುಡುಕುವುದಾದರೂ ಹೇಗೆ??

ಈ ಎಲ್ಲ ಪ್ರಶ್ನೆಗಳಿಗೆ, ಯಾವದೇ ತಜ್ಞನಲ್ಲದ ನಾನು, ಒಬ್ಬ ಸಾಮಾನ್ಯ ನಾಗರೀಕ ಮತ್ತು ಹೆಮ್ಮೆಯ ಕನ್ನಡಿಗನಾಗಿ ನನ್ನದೇ ದೃಷ್ಟಿಕೋನದಲ್ಲಿ ತಾರ್ಕಿಕವಾಗಿ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದೇನೆ.

“ಕಾವೇರಿ ನೀರನ್ನು ತಮಿಳುನಾಡು ಜೊತೆಗೆ ಹಂಚಿಕೊಳ್ಳುವುದರ ಬಗ್ಗೆ ಇಷ್ಟೆಲ್ಲಾ ಗಲಾಟೆ ಆಗುತ್ತಿರುವುದರಿಂದ ಹಂಚಿಕೊಳ್ಳಲೇ ಬೇಕೇ ಎನ್ನುವುದು ಮೂಲ ಪ್ರಶ್ನೆ??” ಸಹೃದಯ ಕನ್ನಡಿಗರಾದ ನಾವು ಹಂಚಿಕೊಳ್ಳುವುದು ಬೇಡ ಅನ್ನುವಷ್ಟು ಕಟುಕರೇನಲ್ಲ. ನಮ್ಮ ತಕರಾರೂ ಅದಲ್ಲ. ನ್ಯಾಯಾಂಗ ನಿಗದಿ ಪಡಿಸಿದ ಪ್ರಮಾಣದ ಬಗೆಗಷ್ಟೇ ನಮ್ಮ ಅಸಮ್ಮತಿ ಮತ್ತು ಅಸಹನೆ.

ಉಳಿಯುವ ಪ್ರಶ್ನೆ: “ಯಾವ ಪ್ರಮಾಣದಲ್ಲಿ ಹಂಚಿಕೊಳ್ಳಬೇಕು?”

ಈ ಪ್ರಶ್ನೆಗೆ ಉತ್ತರ ಹುಡುಕುವ ಮೊದಲು, ಈಗಿರುವ ಪರಿಹಾರ ಮತ್ತು ಅದರ ಹಿಂದಿರುವ ತರ್ಕದ ನ್ಯೂನತೆಯನ್ನು ಅರ್ಥ ಮಾಡಿಕೊಳ್ಳುವುದು ಅವಶ್ಯಕ.

ಹಾಗಾದರೆ ನಾವೆಲ್ಲಾ (ನ್ಯಾಯಾಧೀಕರಣ, ತಜ್ಞರು, ಮತ್ತಿತರರು) ತಪ್ಪುತ್ತಿರುವುದೆಲ್ಲಿ?

ಎಲ್ಲ ಕಾಲಕ್ಕೂ ಸರಿ ಎನಿಸುವ ಒಂದು ಪ್ರಮಾಣವನ್ನು ಹುಡುಕುತ್ತಿರುವುದು.
ಇದು ಹೇಗೆ ಸಾಧ್ಯ? ಪ್ರತಿ ವರ್ಷದ ನೀರಿನ ಅವಶ್ಯಕತೆ, ಅದರ ತೀವ್ರತೆ, ಪೂರೈಕೆ, ಮಳೆ ಎಲ್ಲವೂ ಬದಲಾಗುವುದು ನಿಶ್ಚಿತವಾಗಿದ್ದರೂ ಒಂದು ಪ್ರಮಾಣವನ್ನು ನಿಗದಿ ಪಡಿಸುವುದು ಸರ್ವತಾ ತಪ್ಪು, ಇದು ಪ್ರ್ಯಾಕ್ಟಿಕಲ್ ಪರಿಹಾರವಲ್ಲ. ಈಗ ಬಂದಿರುವ ತಮಿಳುನಾಡಿನ ಕ್ಯಾತೆಯೂ ಈ ಕಾರಣಕ್ಕಾಗೇ. “ನಿಮಗೆಷ್ಟಾದರೂ ಇರಲಿ, ನಮಗೆ ಇಷ್ಟು ಕೊಡುವ ಮಾತಾಗಿದೆ ಕೊಟ್ಟು ಬಿಡಿ” ಎಂಬುದು ಅವರ ವಾದ.

ಕನ್ನಡಿಗರ ಈ ನೋವಿಗೆ ಪರಿಹಾರ? “ಪ್ರತಿ ವರ್ಷವೂ, ಆಗಿನ ವಾಸ್ತವೀಕತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನೀರನ್ನು ಹಂಚುವುದು”
ಕೊಡುಗೆ ಆಧಾರಿತ ಹಂಚಿಕೆ.
ಕಾವೇರಿ ಒಡಲನ್ನು ತುಂಬುವಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ಕೊಡುಗೆಯ ಪ್ರಮಾಣ ಬೇರೆ ಬೇರೆ. ಹಾಗಂತ ಅದನ್ನು ಆಧರಿಸಿ ಹಂಚಿಕೆ ಮಾಡುವುದು ಎಷ್ಟು ಸರಿ? ನದಿ ನೀರು ಹಂಚಿಕೆ ಒಂದು ವ್ಯಾಪಾರ ಅಲ್ಲ. ನಾವೆಲ್ಲರೂ ಭಾರತೀಯರಾಗಿ, ನೈಸರ್ಗಿಕವಾಗಿ ಸಿಗುತ್ತಿರುವ ನೀರನ್ನು ನಾವೇ ಉತ್ಪಾದಿಸುತ್ತಿರುವವರಂತೆ ಬಿಂಬಿಸಿ ನಮ್ಮ ಹಕ್ಕು ಚಲಾಯಿಸುವುದು ಅಸಮಂಜಸ. ಇದು ನ್ಯಾಯಯುತವೂ ಅಲ್ಲ, ತಾರ್ಕಿಕವೂ ಅಲ್ಲ. ಇದೆಲ್ಲಕ್ಕಿಂತ ಹೆಚ್ಚಾಗಿ, ನೀರು ಬೇರೆ ಸಂಪನ್ಮೂಲಗಳಂತಲ್ಲ. ಅದೊಂದು ಮೂಲಭೂತ ಅವಶ್ಯಕತೆ.

ನೀರನ್ನು ಯಾವ ಆಧಾರದ ಮೇಲೆ ಕರ್ನಾಟಕ ಮತ್ತು ತಮಿಳುನಾಡಿಗೆ ಹಂಚುವುದು?
(ಸರಳತೆಗಾಗಿ ಈ ಸಮಸ್ಯೆಯಿಂದ ಕೇರಳ ಮತ್ತು ಪಾಂಡಿಚೇರಿಯನ್ನು ದೂರವಿಡೋಣ)

ಇದಕ್ಕುತ್ತರವನ್ನು ನಾವು ಸರಬರಾಜು ಮತ್ತು ಬೇಡಿಕೆ ಆಧಾರದಲ್ಲಿ ಕಂಡುಕೊಳ್ಳಬಹುದು. ಅದಕ್ಕಿಂತ ಮೊದಲು ಕೆಲವು ಶಬ್ದಗಳನ್ನು ವ್ಯಾಖ್ಯಾನಿಸಿಕೊಳ್ಳೋಣ.

ಸರಬರಾಜು (Supply) / ಪೂರೈಕೆ: ಕಾವೇರಿ ಜಲಾನಯನ ಪ್ರದೇಶದಲ್ಲಿ ಲಭ್ಯವಿರುವ ಒಟ್ಟೂ ನೀರಿನ ಪ್ರಮಾಣ. ಇದು ಕೇವಲ ಕಾವೇರಿ ಕೊಳ್ಳದ ನೀರಿನ ಲೆಕ್ಕವಲ್ಲ. ಹಲವು ಮೂಲಗಳಿಂದ ಕೂಡಿದ ಆ ಪ್ರದೇಶದ ಜನರು ಉಪಯೋಗಿಸಲು ಲಭ್ಯವಿರುವ ಒಟ್ಟೂ ನೀರು.

ಒಟ್ಟೂ ಪೂರೈಕೆ (Total Supply (S)) = ಕಾವೇರಿ ನೀರು + ಮಳೆ ಪ್ರಮಾಣ + ಉಳಿದ ಮೂಲಗಳು (ಅಂತರ್ಜಲ + ಕೆರೆ + ಹಳ್ಳ + ಡ್ಯಾಮ್ ಮುಂತಾದವು)
S(ka) = ಕರ್ನಾಟಕದಲ್ಲಿರುವ ಕಾವೇರಿ ಜಲಾನಯನ ಪ್ರದೇಶದಲ್ಲಿ ಲಭ್ಯವಿರುವ ಒಟ್ಟೂ ನೀರಿನ ಪ್ರಮಾಣ
S(tn) = ಅಂತೆಯೇ ತಮಿಳುನಾಡಿನ ಲಭ್ಯ ನೀರಿನ ಪ್ರಮಾಣ

ಬೇಡಿಕೆ (Demand)/ ಅವಶ್ಯಕತೆ (ನೀರಿನ ಬೇಡಿಕೆ ಅನ್ನುವುದಕ್ಕಿಂತ “ಅವಶ್ಯಕತೆ” ಅನ್ನುವುದೇ ಹೆಚ್ಚು ಸೂಕ್ತ): ಕಾವೇರಿ ಜಲಾನಯನ ಪ್ರದೇಶದ ಒಟ್ಟೂ ಅವಶ್ಯಕತೆ. ಇದನ್ನೂ ಇನ್ನೂ ಸೂಕ್ಷ್ಮವಾಗಿ ವಿಂಗಡಿಸಿದರೆ

ಒಟ್ಟೂ ಅವಶ್ಯಕತೆ (Total Demand (D)) = ಕುಡಿಯುವ ನೀರು + ಕೃಷಿ + ಉದ್ಯಮಗಳ ಅವಶ್ಯಕತೆ
ಕರ್ನಾಟಕದ ಒಟ್ಟೂ ಅವಶ್ಯಕತೆ = D(ka-drinking) + D(ka-agri) + D(ka-industrial)
ತಮಿಳುನಾಡಿನ ಒಟ್ಟೂ ಅವಶ್ಯಕತೆ = D(tn-drinking) + D(tn-agri) + D(tn-industrial)

ಇಷ್ಟೇ ಲೆಕ್ಕಾಚಾರವಾಗಿದ್ದರೆ ಎಲ್ಲವೂ ಸರಳವಾಗುತ್ತಿತ್ತು. ಇದಕ್ಕೊಂದು ಹೊಸ ಆಯಾಮ (ಟ್ವಿಸ್ಟ್) ಕೊಡುವುದೇ ಈ ಅವಶ್ಯಕತೆಗಳ ತೀವ್ರತೆ (Criticality of Demand). ಈಗಾಗಲೇ ಹಲವರು (ನ್ಯಾಯಾಧೀಕರಣ ಮತ್ತು ಇತರರು) ಸೂಚಿಸಿರುವ ಉತ್ತರಗಳು ಈ ತೀವ್ರತೆಯ ಅಂಶವನ್ನು ಪರಿಗಣಿಸದೇ ಇರುವುದರಿಂದ, ಎಲ್ಲರೂ ಒಪ್ಪುವಂತ ಪರಿಹಾರ ಹುಡುಕಲು ಸಾಧ್ಯವಾಗಿಲ್ಲ.

ಅವಶ್ಯಕತೆಗಳ ತೀವ್ರತೆ ಅಂದರೇನು?

ಮೇಲೆ ಹೆಸರಿಸಿದ ಕುಡಿಯುವ, ಕೃಷಿ, ಮತ್ತು ಉದ್ಯಮಗಳ ಅವಶ್ಯಕತೆಗಳನ್ನು ಒಂದೇ ತಕ್ಕಡಿಯಲ್ಲಿ ತೂಗುವುದು ಸಾಧ್ಯವಿಲ್ಲ.

ಮನುಷ್ಯನಿಗೆ ಬೇರೆಯ ಅವಶ್ಯಕತೆಗೆ ಹೋಲಿಸಿದರೆ ಕುಡಿಯುವ ನೀರಿನ ಪ್ರಾಮುಖ್ಯತೆ (Importance of having water for drinking over industries) ಅತಿ ಹೆಚ್ಚು.

ಆಮೇಲೆ ಬರುವುದು ಕೃಷಿ ನಂತರ ಉಳಿದರೆ ಉದ್ಯಮ. ಹಾಗಾಗಿ ನಾವು ನಿಜವಾದ ಅವಶ್ಯಕತೆ (Actual demand) ಲೆಕ್ಕ ಹಾಕುವಾಗ ಅದರ ತೀವ್ರತೆ ಪರಿಗಣಿಸಲೇಬೇಕು. ತೀವ್ರತೆಯನ್ನು ಪ್ರತಿ ವರ್ಷದ ಪರಿಸ್ಥಿತಿಗೆ ಅನುಗುಣವಾಗಿ ಸರಾಸರಿ ಮಾದರಿಯಲ್ಲಿ (Weighted average) ಕಂಡು ಹಿಡಿದುಕೊಳ್ಳಬೇಕಾಗುತ್ತದೆ.

ನಿಜವಾದ ಅವಶ್ಯಕತೆ (AD) = ತೀವ್ರತೆ (CD) X ಒಟ್ಟೂ ಅವಶ್ಯಕತೆ (D)

ಈ ಬಾರಿ ಕನ್ನಡಿಗರ ಆಕ್ರೋಶಕ್ಕೆ ಮೂಲ ಕಾರಣ, ಕುಡಿಯುವ ಅವಶ್ಯಕತೆಗೇ ಸಾಕಾಗದಷ್ಟು ನೀರಿರುವಾಗ ತಮಿಳುನಾಡಿಗೆ ಬಿಡಲು ಆದೇಶಿಸಿರುವುದು. ಪರಿಹಾರ ಕಂಡು ಹಿಡಿಯುವವರು ಮೇಲ್ಕಂಡಂತೆ ಕುಡಿಯುವ ನೀರಿಗೆ ಪ್ರಾಮುಖ್ಯತೆ ಕೊಟ್ಟಿದ್ದರೆ ಅಷ್ಟೊಂದು ನೀರು ಬಿಡುವ ಪ್ರಶ್ನೆಯೇ ಬರುತ್ತಿರಲಿಲ್ಲ ಅಲ್ಲವೇ?

ಇಲ್ಲಿಯವರೆಗಿನ ಸಾರಾಂಶ: ನೀರನ್ನು ಹಂಚಲು ನಾವು – ಒಟ್ಟೂ ಪೂರೈಕೆ, ಒಟ್ಟೂ ಅವಶ್ಯಕತೆ ಮತ್ತು ಅವಶ್ಯಕತೆಯ ತೀವ್ರತೆಯನ್ನು ಸೇರಿಸಿ ಒಂದು ಪರಿಹಾರ ಕಂಡು ಕೊಳ್ಳಬೇಕು, ಕೊಡುಗೆಯ ಆಧಾರದ ಮೇಲೆ ಲೆಕ್ಕ ಹಾಕುವುದಲ್ಲ.

ಉತ್ತರವೇನು..??

೧. ನಾವೆಲ್ಲಾ ಒಪ್ಪ ಬೇಕಾದ್ದೆಂದರೆ, ಕುಡಿಯುವ ನೀರು ಪ್ರತಿಯೊಬ್ಬರ ಮೂಲಭೂತ ಅವಶ್ಯಕತೆ. ಕರ್ನಾಟಕಕ್ಕಿರಲಿ ಅಥವಾ ತಮಿಳುನಾಡಿಗಿರಲಿ ಕುಡಿಯಲು ಬೇಕಾಷ್ಟು ನೀರು ಕೊಟ್ಟು ಬಿಡಬೇಕು. ಅದಕ್ಕಾಗಿ ಜಗಳವಾಡುವುದು ಸರಿಯಲ್ಲ. ಹಾಗಾಗಿ ಇದ್ದಷ್ಟು ಪೂರೈಕೆಯಲ್ಲಿ ಕುಡಿಯುವ ನೀರಿನ ಅವಶ್ಯಕತೆಯಷ್ಟು ನೀರನ್ನು ಲೆಕ್ಕದಿಂದ ಹೊರಗಿಡೋಣ. ಅಷ್ಟನ್ನು ಹಂಚಿ/ ಉಪಯೋಗಿಸಿ ಉಳಿದ ನೀರನ್ನು ಹಂಚುವುದು ಮಾತ್ರ ಇನ್ನುಳಿದ ಸಮಸ್ಯೆ

ಉಳಿದ ಪೂರೈಕೆ = ಒಟ್ಟೂ ಪೂರೈಕೆ – ಕರ್ನಾಟಕ ಕುಡಿಯುವ ನೀರಿನ ಅವಶ್ಯಕತೆ – ತಮಿಳುನಾಡಿನ ಕುಡಿಯುವ ನೀರಿನ ಅವಶ್ಯಕತೆ
ಇದೊಂದು ಸ್ಟೆಪ್ ಅನುಸರಿಸಿದ್ದರೂ, ಕರ್ನಾಟಕಕ್ಕೆ ಈ ಬಾರಿಯ ಸ್ಥಿತಿ ಬರುತ್ತಿರಲಿಲ್ಲ.

೨. ಉಳಿಯುವ ನೀರಿನಲ್ಲಿ ಕರ್ನಾಟಕದ ಪಾಲೆಷ್ಟು? (ಕೆಳಗಿನ ಮಾದರಿಯಲ್ಲಿ ಎಲ್ಲ ಸಂಖ್ಯೆಯಲ್ಲೂ ಕುಡಿಯುವ ನೀರಿನ್ನು ಹೊರತುಪಡಿಸಬೇಕು)

ಎರಡೂ ರಾಜ್ಯಗಳ ಅವಶ್ಯಕತೆಯ (ತೀವ್ರತೆಯನ್ನು ಸೇರಿಸಿ) ಅನುಪಾತದಲ್ಲಿ ನೀರನ್ನು ಹಂಚುವ ಫಾರ್ಮುಲಾ.

ಕರ್ನಾಟಕದ ಪಾಲು = (ಕರ್ನಾಟಕದ ಉಳಿದ ಅವಶ್ಯಕತೆ / (ಕರ್ನಾಟಕದ ಉಳಿದ ಅವಶ್ಯಕತೆ + ತಮಿಳುನಾಡಿನ ಉಳಿದ ಅವಶ್ಯಕತೆ) ) X ಉಳಿದ ಪೂರೈಕೆ
ತಮಿಳುನಾಡಿನ ಪಾಲು = (ತಮಿಳುನಾಡಿನ ಉಳಿದ ಅವಶ್ಯಕತೆ / (ಕರ್ನಾಟಕದ ಉಳಿದ ಅವಶ್ಯಕತೆ + ತಮಿಳುನಾಡಿನ ಉಳಿದ ಅವಶ್ಯಕತೆ) ) X ಉಳಿದ ಪೂರೈಕೆ

ಇಲ್ಲಿ,

ಕರ್ನಾಟಕದ ಉಳಿದ ಅವಶ್ಯಕತೆ = ತೀವ್ರತೆ X (ಕರ್ನಾಟಕದ ಅವಶ್ಯಕತೆ – ಕುಡಿಯುವ ನೀರಿನ ಅವಶ್ಯಕತೆ)

ಮೇಲಿನ ಫಾರ್ಮುಲವನ್ನು ಅರ್ಥೈಸುವ ಸಲುವಾಗಿ ಸರಳೀಕರಿಸಿ ಬರೆದರೆ,

ಕರ್ನಾಟಕದ ಪಾಲು = ((KAತೀವ್ರತೆ X KAಅವಶ್ಯಕತೆ) / ( ಒಟ್ಟೂ ಅವಶ್ಯಕತೆ)) X ಒಟ್ಟೂ ಪೂರೈಕೆ

ತಮಿಳುನಾಡಿನ ಪಾಲು = ((TNತೀವ್ರತೆ X TNಅವಶ್ಯಕತೆ) / ( ಒಟ್ಟೂ ಅವಶ್ಯಕತೆ)) X ಒಟ್ಟೂ ಪೂರೈಕೆ

ಬೇರೆ ಬೇರೆ ಸ್ಥಿತಿಗಳಲ್ಲಿ ಈ ಮಾದರಿ ಸರಿಯಾದ ಉತ್ತರ ಕೊಡುವುದೇ?

ಸ್ಥಿತಿ ೧: ಕರ್ನಾಟಕದಲ್ಲಿ ನೀರಿನ ಬರ ಇದ್ದು ತಮಿಳುನಾಡಿನಲ್ಲಿ ಕಡಿಮೆ ಬರ ಇದ್ದಾಗ: ಮೇಲಿನ ಫಾರ್ಮುಲಾ ದಲ್ಲಿ ಕರ್ನಾಟಕದ ತೀವ್ರತೆ ಸಂಖ್ಯೆ ಜಾಸ್ತಿ ಆಗುವುದರಿಂದ ಕರ್ನಾಟಕಕ್ಕೆ ಸಿಕ್ಕುವ ನೀರಿನ ಪ್ರಮಾಣ ಜಾಸ್ತಿ ಆಗುತ್ತದೆ. ಅಂತೆಯೇ ತಮಿಳುನಾಡಿನ ತೀವ್ರತೆ ಕಡಿಮೆ ಆಗುವುದರಿಂದ ಅವರಿಗೆ ಸಿಗುವ ನೀರೂ ಕಡಿಮೆ.

ಸ್ತಿತಿ ೨: ಯಥೇಚ್ಛ ನೀರಿದ್ದಾಗ: ಒಟ್ಟೂ ಪೂರೈಕೆಯೇ ಜಾಸ್ತಿ ಆಗುವುದರಿಂದ ಎರಡೂ ರಾಜ್ಯಗಳಿಗೂ ತೊಂದರೆ ಇಲ್ಲ.

ಸ್ತಿತಿ ೩: ತಮಿಳುನಾಡಿನಲ್ಲಿ ಬೇರೆ ಮೂಲಗಳ ನೀರು ಹೆಚ್ಚಾದರೆ: ತಮಿಳುನಾಡಿನ ಒಟ್ಟೂ ಅವಶ್ಯಕತೆ ಸಂಖ್ಯೆ ಕಡಿಮೆ ಆಗಿ ಅವರಿಗೆ ಸಿಗುವ ನೀರು ಕಡಿಮೆ

ಸ್ತಿತಿ ೪: ಕರ್ನಾಟಕದಲ್ಲಿ ಬರ ಇರದೆ ತಮಿಳುನಾಡಿನಲ್ಲಿ ಬರ ಇದ್ದರೆ: ಮೇಲಿನ ಫಾರ್ಮುಲಾ ದಲ್ಲಿ ತಮಿಳುನಾಡಿನ ತೀವ್ರತೆ ಸಂಖ್ಯೆ ಜಾಸ್ತಿ ಆಗುವುದರಿಂದ ಅವರಿಗೆ ಸಿಕ್ಕುವ ನೀರಿನ ಪ್ರಮಾಣ ಜಾಸ್ತಿ ಆಗುತ್ತದೆ. ಅಂತೆಯೇ ಕರ್ನಾಟಕದ ತೀವ್ರತೆ ಕಡಿಮೆ ಆಗುವುದರಿಂದ ನಮಗೆ ಸಿಗುವ ನೀರು ಕಡಿಮೆ.

ಒಟ್ಟಿನಲ್ಲಿ ಎಲ್ಲಾ ಸ್ಥಿತಿಗಳಲ್ಲೂ ಒಂದು ಹಂಚಿಕೆಯ ಒಪ್ಪಂದಕ್ಕೆ ಬರಬಹುದಾದ ಫಾರ್ಮುಲಾ ಇದು.

ಇಲ್ಲಿಯವರೆಗಿನ ಸಾರಾಂಶ:

– ನೀರನ್ನು ಹಂಚಲು ನಾವು ಒಟ್ಟೂ ಪೂರೈಕೆ, ಒಟ್ಟೂ ಅವಶ್ಯಕತೆ ಮತ್ತು ಅವಶ್ಯಕತೆಯ ತೀವ್ರತೆಯನ್ನು ಸೇರಿಸಿ ಒಂದು ಪರಿಹಾರ ಕಂಡು ಕೊಳ್ಳಬೇಕು, ಕೊಡುಗೆಯ ಆಧಾರದ ಮೇಲೆ ಲೆಕ್ಕ ಹಾಕುವುದಲ್ಲ.

– ಎರಡೂ ರಾಜ್ಯಕ್ಕೂ ಮೊದಲು ಕುಡಿಯುವ ನೀರನ್ನು ಹಂಚಿ, ನಂತರ ಉಳಿಯುವ ನೀರಿನ್ನಷ್ಟೆ ಲೆಕ್ಕಾಚಾರಕ್ಕೆ ಪರಿಗಣಿಸಬೇಕು

– ಹಂಚಲು ತಾರ್ಕಿಕವಾದ ಮೇಲ್ಕಂಡ ಫಾರ್ಮುಲಾವನ್ನು ಉಪಯೋಗಿಸಬಹುದು

ಎಲ್ಲಾ ಸರಿ, ಇದರ ಅನುಷ್ಟಾನ ಹೇಗೆ? ತೀವ್ರತೆ, ಪೂರೈಕೆ, ಅವಶ್ಯಕತೆಯನ್ನೆಲ್ಲಾ ಹೇಗೆ ಕಂಡು ಹಿಡಿಯುವುದು??

ಪ್ರತಿ ವರ್ಷವೂ ಈ ಮೂರೂ ಸಂಖ್ಯೆಗಳನ್ನು (ತೀವ್ರತೆ, ಪೂರೈಕೆ, ಅವಶ್ಯಕತೆ) ಲೆಕ್ಕ ಹಾಕಬೇಕು
ಸ್ವತಂತ್ರ ತಜ್ಞರ (ಇಂಜಿನೀಯರ್ಸ್, ಎಕ್ಸ್‌ಪರ್ಟ್ಸ್, ನ್ಯಾಯಾಧೀಕರಣ) ಕಮೀಟಿ (Independent committee) ವರ್ಷಕ್ಕೆ ಎರಡು ಬಾರಿ (ನೀರು ಬಿಡುವ ಮುನ್ನ) ಈ ಸಂಖ್ಯೆಗಳನ್ನು ಲೆಕ್ಕಹಾಕಿ ಹಂಚುವ ಪ್ರಮಾಣ ನಿಗದಿ ಮಾಡಬೇಕು
ಇದನ್ನು ಒಪ್ಪಿಸಿ ನಡೆಸುವ ಜವಾಬ್ದಾರಿ ನ್ಯಾಯಾಧೀಕರಣದ್ದು
ಇದು ತಾತ್ಕಾಲಿಕ ಪರಿಹಾರ ಮಾತ್ರ. ಎರಡೂ ರಾಜ್ಯಗಳೂ ಶಾಶ್ವತ ಪರಿಹಾರ ಹುಡುಕುವ ಇಚ್ಛಾಶಕ್ತಿ ತೋರಿಸಿ ಕಾವೇರಿ ಮೇಲಿನ ಅವಲಂಬನೆಯನ್ನು ಕಡಿಮೆ ಗೊಳಿಸುವ ಪ್ರಯತ್ನ ಮಾಡಲೇ ಬೇಕು. ಅಲ್ಲಿಯವರೆಗೆ ಸಂಬಂಧಪಟ್ಟ ರಾಜಕಾರಣಿಗಳ ಕಿವಿ ಹಿಂಡುವ ಕೆಲಸ ನಮ್ಮೆಲ್ಲರಿಂದ ನಡಿಯುತ್ತಿರಲಿ.

ಪರಿಪೂರ್ಣ ಪರಿಹಾರವಾಗದಿದ್ದರೂ, ನಿಮ್ಮೊಳಗಿನ ಚಿಂತಕನಿಗೊಂದು ಆಹಾರವಾಗಿ ಬೇರೆಯೇ ಆದ ದೃಷ್ಟಿಕೋನದಲ್ಲಿ ಯೋಚಿಸಲು ಪ್ರಚೋದಿಸಿದರೆ ನನ್ನ ಈ ಚಿಕ್ಕ ಬರಹಕ್ಕೊಂದು ಸಾರ್ಥಕತೆ ಸಿಕ್ಕಂತೆ.

– ಎಂ.ಬಿ

 

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!