ಅಂಕಣ

ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ……

“ನೀನು ಯಾವುದೇ ಕೆಲಸವನ್ನು ಮಾಡು. ಅದನ್ನು ಪ್ರೀತಿಯಿಂದ ಮಾಡು. ನೀನೊಬ್ಬ ರಸ್ತೆಯ ಕಸ ಗುಡಿಸುವವನೇ ಆಗಿರಬಹುದು. ಆದರೆ ನೀನು ಮಾಡಿದ ಕೆಲಸ ಹೇಗಿರಬೇಕೆಂದರೆ, ಬೇರೆ ಯಾವ ರಸ್ತೆಯೂ ನೀನು ಗುಡಿಸಿದ ರಸ್ತೆಗಿ೦ತ ಹೆಚ್ಚು ಸ್ವಚ್ಛವೆ೦ದು ನಿನಗೆ ಅನಿಸಬಾರದು.”

      ನಾವು ಮಾಡುವ ಕೆಲಸದ ಬಗ್ಗೆ ನಮಗಿರಬೇಕಾದ ಶ್ರದ್ದೆಯ ಕುರಿತು ಸಣ್ಣ ಕಿವಿಮಾತೊಂದನ್ನು ಅತ್ಯಂತ ಪರಿಣಾಮಕಾರಿಯಾಗಿ ಹೇಳಿದವರು ಕನ್ನಡ ತಾಯಿಯ ಹೆಮ್ಮೆಯ ಭಾರತಾ೦ಬೆಯ ಅತ್ಯಮೂಲ್ಯ ರತ್ನ  ಡಾ. ಸರ್.ಎ೦. ವಿಶ್ವೇಶ್ವರಯ್ಯ.  ನಾಡಿನ ಅಭಿವೃದ್ದಿ ಯಾವುದೇ ಗೊತ್ತು ಗುರಿ ಇಲ್ಲದೇ ಅಡ್ಡಾದಿಡ್ಡಿ ಸಾಗುತ್ತಿದ್ದಾಗ, ನಾಡಿಗೊಂದು ಯೋಜಿತ ರೂಪು ರೇಶೆಗಳನ್ನು ಮಾಡಿ, ನಾಡಿನ ಅಭಿವೃದ್ಧಿಯ  ಯೋಜನೆಯೆಡೆಗೆ ಗಮನಾರ್ಹವಾಗಿ ಚಿಂತಿಸಿ, ಸಾಧನೆಯ ಹಾದಿಯಲ್ಲಿ ಧೃಢ ಚಿ೦ತನೆಯಿ೦ದ ಹಿ೦ದಿರುಗದೆ ಸಾಗಿ ಪೂರ್ಣಗೊಳಿಸಿದ ಹೆಮ್ಮೆಯ ನೇತಾರನ 155ನೆಯ ಜನ್ಮದಿನವಿ೦ದು.  1915ರಲ್ಲಿಯೇ ಕನ್ನಡ ಸಾಹಿತ್ಯ ಪರಿಷತ್ತನ್ನು ಪ್ರಾರ೦ಭಿಸಿ, ಕನ್ನಡ ನುಡಿಗೊಂದು ಗಟ್ಟಿ ಅಡಿಪಾಯವನ್ನು ಹಾಕಿಕೊಟ್ಟ ಈ ಮಹಾ ಚೇತನವನ್ನು ಕಡ್ಡಾಯವಾಗಿ ಕನ್ನಡಿಗರು ನೆನೆಯಲೇಬೇಕಾದ ದಿನ.  ಹೀಗೆ ಒಂದು ನಾಡಿನ ಏಳಿಗೆಗೆ ಏನೆಲ್ಲಾ ಬೇಕೊ ಆ ಎಲ್ಲಾ ದಿಕ್ಕಿನಲ್ಲೂ ಕೆಲಸ ಮಾಡಿ ಒಂದು ನಾಡಿನ ಏಳಿಗೆಗೆ ದಾರಿ ಹಾಕಿಕೊಟ್ಟ ಹರಿಕಾರ, ಮಹಾಮಹಿಮರ ಕುರಿತು ಅರಿಯುವ ಸಣ್ಣ ಪ್ರಯತ್ನವೇ ಈ ಬರಹ…..

    ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು  ಕೋಲಾರ ಜಿಲ್ಲೆಯ ಚಿಕ್ಕಬಳ್ಲಾಪುರ ತಾಲ್ಲೂಕಿನ ಮುದ್ದೇನಹಳ್ಳಿಯಲ್ಲಿ 1861ರ ಸೆಪ್ಟಂಬರ‍್ 15ರ೦ದು ಹುಟ್ಟಿದರು. ಅವರ ತಂದೆ ಶ್ರೀನಿವಾಸ ಶಾಸ್ತ್ರಿಗಳು, ತಾಯಿ ವೆಂಕಟಲಕ್ಷ್ಮಮ್ಮ. ವಿಶ್ವೇಶ್ವರಯ್ಯನವರ ತಂದೆ ಸಂಸ್ಕೃತ ವಿದ್ವಾಂಸರು; ಧರ್ಮ ಶಾಸ್ತ್ರಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದರಲ್ಲದೆ ಆಯುರ್ವೇದ ತಜ್ಞರೂ ಆಗಿದ್ದರು. ತಂದೆ ತಾಯಿ ಇಬ್ಬರದೂ ಬಹು ಒಳ್ಳೆಯ ಪರೋಪಕರಾದ ಸ್ವಭಾವ. ನಮ್ಮ ದೇಶದ ಸಂಸ್ಕೃತಿ, ಆಚಾರಗಳು ಇವುಗಳಲ್ಲಿ ಭಕ್ತಿಯು ವಿಶ್ವೇಶ್ವರಯ್ಯನವರಿಗೆ ತಂದೆ, ತಾಯಿಯವರಿಂದ ಬಂದಿತು. ವಿಶ್ವೇಶ್ವರಯ್ಯನವರು ಪ್ರಾರಂಭಿಕ ಶಿಕ್ಷಣವನ್ನು ಚಿಕ್ಕಬಳ್ಳಾಪುರದಲ್ಲಿ ಮುಗಿಸಿದ ಬಳಿಕ ಬೆಂಗಳೂರಿನ ವೆಸ್ಲಿಯನ್ ಮಿಶನ್ ಪ್ರೌಢಶಾಲೆ ಸೇರಿದರು. ವಿದ್ಯಾರ್ಥಿಯಾಗಿದ್ದ ದಿನಗಳಿಂದ ವಿಶ್ವೇಶ್ವರಯ್ಯನವರದು ಬಹು ಶಿಸ್ತಿನ ಜೀವನ. ಬೆಳಿಗ್ಗೆ ಗೊತ್ತಾದ ಕಾಲಕ್ಕೆ ಬೇಗನೆ ಎದ್ದು ಕೆಲಸ ಪ್ರಾರಂಭಿಸುವರು. ಅವತ್ತಿನ ಕೆಲಸ ಅವತ್ತೇ ಮಾಡಿ ಮುಗಿಸಬೇಕು. ಊಟ, ಉಡಿಗೆ ಎಲ್ಲ ಶುಭ್ರವಾಗಿ, ಶಿಸ್ತಾಗಿ ನಡೆಯಬೇಕು. ಇದೇ ರೀತಿ ನೂರು ವರ್ಷ ತುಂಬುವವರೆಗೆ ಬಾಳಿದರು ಈ ಮಹಾನುಭಾವ.  1881ರಲ್ಲಿ ಮದರಾಸು ವಿಶ್ವವಿದ್ಯಾನಿಲಯದ ಬಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಇವರು ಬಡತನದಿಂದಾಗಿ ಮುಂದೆ ಓದಲು ಕಷ್ಟ ಪಡುತ್ತಿದ್ದಾಗ, ಮೈಸೂರು ದಿವಾನರಾಗಿದ್ದ ಸಿ.ರಂಗಾಚಾರ್ಯ ಅವರು ವಿಶ್ವೇಶ್ವರಯ್ಯನವರಿಗೆ ವಿದ್ಯಾರ್ಥಿ ವೇತನ ಕೊಡಿಸಿ,  ಪುಣೆಯ ಸೈನ್ಸ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಕಲಿಯಲು ನೆರವಾದರು. 1883ರಲ್ಲಿ ಎಲ್.ಸಿ.ಇ.(L.C.E.) ಮತ್ತು ಎಫ್.ಸಿ.ಇ (F.C.E.) ಪರೀಕ್ಷೆಗಳಲ್ಲಿ (ಈಗಿನ ಬಿ.ಇ. ಪರೀಕ್ಷೆಯಂತೆ)ವಿಶ್ವೇಶ್ವರಯ್ಯನವರು ಮೊದಲನೆಯವರಾಗಿ ಉತ್ತೀರ್ಣರಾದರು. ಪರೀಕ್ಷೆಯಲ್ಲಿ ಉತ್ತೀರ್ಣರಾದುದೇ ತಡ, ಬೊಂಬಾಯಿ ಸರ್ಕಾರ ಕರೆದು ಕೆಲಸ ಕೊಟ್ಟಿತು.

      ತಮ್ಮ 23ನೇ ವಯಸ್ಸಿನಲ್ಲಿ ಮುಂಬೈ ಸರಕಾರದ ಲೋಕೋಪಯೋಗಿ ವಿಭಾಗದ ಅಸಿಸ್ಟೆಂಟ್ ಎಂಜಿನಿಯರ್ ಆಗಿ ಖಡಕವಾಸ್ಲಾ ಸರೋವರದ ನೀರು ಕೋಡಿ ಹರಿದು ಹೋಗದಂತೆ ತಾನಾಗಿ ಮುಚ್ಚಿ ತೆರೆಯುವ ಕವಾಟ ವ್ಯವಸ್ಥೆ ಮಾಡಿದ ವಿಶ್ವೇಶ್ವರಯ್ಯನವರ ಜಾಣತನ ಎಲ್ಲರನ್ನೂ ಬೆರಗುಗೊಳಿಸಿತು. ನಂತರ ಸಿಂಧ್ ಪ್ರಾಂತ್ಯದ ಸುಕ್ಕೂರಿನ ನೀರು – ಸರಬರಾಜು ಮತ್ತು ಚರಂಡಿ ವ್ಯವಸ್ಥೆಯ ಕಾರ್ಯ ಇವರ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿತು. ಎಂಜಿನಿಯರ್‌ ಆದ ನಂತರ ಇವರ ಸಾಧನೆಗಳನ್ನು ಕಂಡು ನಿಬ್ಬೆರಗಾದ ಲಂಡನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸಿವಿಲ್‌ ಎಂಜಿನಿಯರ್ಸ್‌ ಸಂಸ್ಥೆ ಇವರಿಗೆ ಗೌರವ ಸದಸ್ಯತ್ವ ನೀಡಿ ತಮ್ಮ ಹಿರಿಮೆಯನ್ನು ಹೆಚ್ಚಿಸಿಕೊಂಡಿತು. ಇವರು ಆವಿಷ್ಕರಿಸಿದ ಸ್ವಯಂಚಾಲಿತ ಜಲ ನಿಯಂತ್ರಕ ಬಾಗಿಲು ವಿಶ್ವದ ಗಮನ ಸೆಳೆಯಿತು. ಏಡನ್‌ ನಗರಕ್ಕೆ ನೀರು ಪೂರೈಸುವ ಯೋಜನೆ ಸಿದ್ಧಪಡಿಸಿ ಯಶಸ್ವಿಯಾದ ವಿಶ್ವೇಶ್ವರಯ್ಯನವರು, ಹೈದರಾಬಾದ್‌ ನಗರ ಎದುರಿಸುತ್ತಿದ್ದ ಪ್ರವಾಹದ ಸಮಸ್ಯೆಗೆ ಪರಿಹಾರ ಒದಗಿಸಿದರು.ಅಣೆಕಟ್ಟುಗಳಲ್ಲಿ ಉಪಯೋಗಿಸಲಾಗುವ ‘ಸ್ವಯಂಚಾಲಿತ ಫ್ಲಡ್ ಗೇಟ್ ವಿನ್ಯಾಸ’ವೊಂದನ್ನು ಕಂಡು ಹಿಡಿದು ಅದಕ್ಕಾಗಿ ‘ಪೇಟೆಂಟ್’ ಪಡೆದರು. ಮೊದಲ ಬಾರಿ 1903ರಲ್ಲಿ ಈ ಫ್ಲಡ್ ಗೇಟ್’ಗಳು ಪುಣೆಯ ‘ಖಡಕ್ವಾಸ್ಲಾ’ ಅಣೆಕಟ್ಟಿನಲ್ಲಿ ಸ್ಥಾಪಿತವಾದವು. ವಿಶ್ವೇಶ್ವರಯ್ಯನವರು ದೇಶಾದ್ಯಂತ ಪ್ರಸಿದ್ಧರಾದದ್ದು ಹೈದರಾಬಾದ್ ನಗರವನ್ನು ಪ್ರವಾಹಗಳಿಂದ ರಕ್ಷಿಸಲು ಪ್ರವಾಹ ರಕ್ಷಣಾ ವ್ಯವಸ್ಥೆಯನ್ನು ಅವರು ಏರ್ಪಡಿಸಿದಾಗ. ಹೈದರಾಬಾದ್‌ ಇಂದು ಸುಂದರ ನಗರ ಎನಿಸಿಕೊಳ್ಳಲು ಸರ್‌.ಎಂ.ವಿ. ನೀಡಿದ ಕಾಣಿಕೆ ಅನುಪಮವಾದದ್ದು. ಇಲ್ಲಿ ಅವು ಯಶಸ್ವಿಯಾದ ನಂತರ ‘ಗ್ವಾಲಿಯರ್’ನ ಟಿಗ್ರಾ ಅಣೆಕಟ್ಟು’ ಮತ್ತು ಕರ್ನಾಟಕದ ‘ಕೃಷ್ಣರಾಜಸಾಗರ’ ಅಣೆಕಟ್ಟುಗಳಲ್ಲಿ ಸಹ ಉಪಯೋಗಿತವಾದವು. ಈ ಗೇಟ್‘ಗಳ ಉದ್ದೇಶ ಅಣೆಕಟ್ಟಿಗೆ ಹಾನಿ ಮಾಡದೆ ಗರಿಷ್ಠ ಮಟ್ಟದ ನೀರನ್ನು ಶೇಖರಿಸಿಡುವುದೇ ಆಗಿತ್ತು. ಕೃಷ್ಣರಾಜಸಾಗರವನ್ನು ಕಟ್ಟಿದಾಗ ಅದು ಆ ಕಾಲದಲ್ಲಿ ಭಾರತದ ಅತ್ಯಂತ ದೊಡ್ಡ ಅಣೆಕಟ್ಟಾಗಿತ್ತ೦ತೆ !! ಇಂತಹ ಪ್ರತಿಭಾವಂತ ಕನ್ನಡಿಗನಾಗಿದ್ದೂ ಅನ್ಯರ ನಾಡಿನಲ್ಲಿ ಇರುವುದು ಸೂಕ್ತವಲ್ಲ. ನಮ್ಮ ನಾಡಿನ ಪ್ರತಿಭೆಯ ಸದ್ಬಳಕೆ ನಮ್ಮಲ್ಲೇ ಆಗಬೇಕೆಂದು ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರು ಸರ್‌.ಎಂ.ವಿಗೆ ತಾಯ್ನಾಡಿಗೆ ಮರಳುವಂತೆ ಆಹ್ವಾನಿಸಿದರು. ಮೈಸೂರು ಸಂಸ್ಥಾನದ ಮುಖ್ಯ ಎಂಜಿನಿಯರ್‌ ಆಗಿ ಸೇರಿದ ವಿಶ್ವೇಶ್ವರಯ್ಯನವರು, 1912ರಲ್ಲಿ ಮೈಸೂರಿನ ದಿವಾನರೇ ಆದರು. ತಮ್ಮ ಈ ಆಡಳಿತಾವಧಿಯಲ್ಲಿ ಭದ್ರಾವತಿ ಉಕ್ಕಿನ ಕಾರ್ಖಾನೆ, ಮೈಸೂರು ವಿ.ವಿ.ಯ ಸ್ಥಾಪನೆಗೆ ನೆರವಾದ ಸರ್‌ಎಂವಿ ಅವರು ಆರ್ಥಿಕ ಅಭಿವೃದ್ಧಿಗೂ ಕಾರಣವಾದರು. ಮೈಸೂರು ಬ್ಯಾಂಕ್‌, ಹಿಂದೂಸ್ತಾನ್‌ ಎರೋನಾಟಿಕ್ಸ್‌, ನ್ಯಾಯ ವಿಧಾಯಕ ಸಭೆ, ಪ್ರಜಾಪ್ರತಿನಿಧಿ ಸಭೆಗಳು ಸರ್‌ಎಂವಿ ಅವರ ಕಲ್ಪನೆಯ ಕೈಗೂಸುಗಳು.

ವಿದ್ಯೆಯಲ್ಲಿ ವಿಶ್ವೇಶ್ವರಯ್ಯನವರಿಗೆ ತುಂಬ ಶ್ರದ್ದೆ. ಜನರ ಬಡತನ ಮತ್ತು ಕಷ್ಟಗಳಿಗೆ ಅವರಿಗೆ ವಿದ್ಯೆ ಇಲ್ಲದಿರುವುದು ಕಾರಣ ಎಂದು ಅವರ ಅಭಿಪ್ರಾಯ. ಆದುದರಿಂದ ಹೊಸದಾದ ಶಾಲೆಗಳನ್ನು ತೆರೆದರು. ಅವರು ದಿವಾನರಾದಾಗ (1912) ಸುಮಾರು 4,500 ಶಾಲೆಗಳಿದ್ದವು. ಆರು ವರ್ಷಗಳಲ್ಲಿ ಇನ್ನೂ 6,500 ಶಾಲೆಗಳನ್ನು ತೆರೆದರು. 1917ರಲ್ಲಿ ಬೆಂಗಳೂರಿನಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸಿದರು. ಇದೇ ಕಾಲೇಜಿಗೆ ನಂತರ ಅವರ ಹೆಸರನ್ನೇ ಇಡಲಾಯಿತು (ವಿಶ್ವೇಶ್ವರಯ್ಯ ಕಾಲೇಜ್ ಅಫ್ ಇಂಜಿನಿಯರಿಂಗ್). ಮೈಸೂರು ವಿಶ್ವವಿದ್ಯಾಲಯದ ಬೆಳವಣಿಗೆಗಾಗಿಯೂ ಶ್ರಮಿಸಿದರು. ಭಾರತ ದೇಶದಲ್ಲಿ ಮೊದಲ ಎಜುಸಾಟ್(EDUSAT) ತರಗತಿಗಳನ್ನು ಆರಂಭಿಸಿದ ಕೀರ್ತಿ ಬೆಳಗಾವಿಯಲ್ಲಿನ ವಿಟಿಯು(Visvesvaraya Technological University)ಗೆ ಸಲ್ಲುತ್ತದೆ. ಇದರ ಮುಖ್ಯ ಉದ್ದೇಶ ವಿಶ್ವವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳಿಗೂ ಉತ್ತಮ ಶಿಕ್ಷಣ ನೀಡುವುದು. ಕರ್ನಾಟಕದಲ್ಲಿನ ಎಲ್ಲಾ ಇಂಜಿನಿಯರಿಂಗ್ ಕಾಲೇಜುಗಳು ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಂಗವಾಗಿವೆ. ಇಂಜಿನಿಯರಿ೦ಗ್  ಕ್ಷೇತ್ರದಲ್ಲಿ ಇವರು ಸಲ್ಲಿಸಿರುವ ಅಪಾರ ಸೇವೆಯ ಸ್ಮರಣೆಗಾಗಿ ಇವರ ಜನ್ಮ ದಿನವನ್ನು(ಸೆಪ್ಟೆಂಬರ್ 15) ಭಾರತದಲ್ಲಿ ಪ್ರತಿವರ್ಷ ಇಂಜಿನಿಯರ್ಸ್ ದಿನವಾಗಿ ಆಚರಿಸಲಾಗುತ್ತದೆ.

ಎಂ.ವಿ. ಯವರ ಸಲಹೆ ಮತ್ತು ಪ್ರೋತ್ಸಾಹಗಳಿಂದ ಮೈಸೂರು ಬ್ಯಾಂಕ್ ಪ್ರಾರಂಭವಾಯಿತು. ಹೊರಗಿನಿಂದ ಬೆಂಗಳೂರಿಗೆ ಬರುವವರ ಅನುಕೂಲಕ್ಕಾಗಿ ಒಳ್ಳೆಯ ಹೋಟೆಲುಗಳು ಸ್ಥಾಪನೆಗೆ ಸಲಹೆ ಕೊಟ್ಟರು. ಮೈಸೂರಿನಲ್ಲಿ ರೈಲುಗಳ ಸೌಕರ್ಯ ತಕ್ಕಷ್ಟಿರಲಿಲ್ಲ. ಇದ್ದ ರೈಲುಗಳ ಆಡಳಿತ ಭಾರತದ ಸರ್ಕಾರದ ಕೈಯಲ್ಲಿತ್ತು. ವಿಶ್ವೇಶ್ವರಯ್ಯನವರು ರೈಲುಗಳ ಆಡಳಿತ ಮೈಸೂರು ಸರ್ಕಾರಕ್ಕೆ ಬರುವಂತೆ ಮಾಡಿದರು. ಹೊಸ ರೈಲು ಮಾರ್ಗಗಳನ್ನು ಹಾಕಿಸಿದರು.

ರಾಜ್ಯದ ಸರ್ವಾಂಗೀಣ ಪ್ರಗತಿಗೆ ತಕ್ಕ ಮಾರ್ಗದರ್ಶನ ಮಾಡಿದ್ದ ಫಲವಾಗಿ ಕೃಷ್ಣರಾಜಸಾಗರ ಆಣೆಕಟ್ಟು, ಭದ್ರಾವತಿ ಕಬ್ಷಿಣ ಮತ್ತು ಉಕ್ಕಿನ ಕಾರ್ಖಾನೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು ಬೆಂಗಳೂರುಗಳಲ್ಲಿ ಮೊದಲ ಬಾರಿಗೆ ಪುಸ್ತಕ ಭಂಡಾರಗಳು, ಮೈಸೂರು ಬ್ಯಾಂಕ್, ಮೈಸೂರು ವಾಣಿಜ್ಯ ಮಂಡಳಿ, ಸರ್ಕಾರಿ ಸಾಬೂನು ಕಾರ್ಖಾನೆ, ಗಂಧದೆಣ್ಣೆ ಕಾರ್ಖಾನೆ, ಮೈಸೂರು ಪೇಪರ್ ಮಿಲ್ಸ್, ಗ್ರಾಮೀಣ ನ್ಯಾಯಾಲಯಗಳು, ಗ್ರಾಮಪಂಚಾಯಿತಿ, ಮಲೆನಾಡು ಅಭಿವೃದ್ಧಿ ಮಂಡಳಿ, ಬೆಂಗಳೂರು ಎಂಜಿನಿಯರಿಂಗ್ ಕಾಲೇಜ್, ರೇಷ್ಮೆ ಇಲಾಖೆ, ಚರ್ಮ ಹದ ಮಾಡುವ ಕಾರ್ಖಾನೆಗಳು ರೂಪು ತಾಳಿದವು.

ಇತರರು ಅರವತ್ತು ವರ್ಷಗಳಲ್ಲಿ ಮಾಡುವುದು ಸಾಧ್ಯವೇ ಎನ್ನುವಷ್ಟು ಕೆಲಸವನ್ನು ಆರು ವರ್ಷಗಳ ದಿವಾನಗಿರಿಯಲ್ಲಿ ಮಾಡಿದರು. ವಿಶ್ವೇಶ್ವರಯ್ಯನವರು ದಿವಾನರಾಗಿದ್ದಾಗ ಬ್ರಿಟಿಷ್ ಸರ್ಕಾರ ಅವರಿಗೆ “ಸರ್” ಪದವಿಯನ್ನು ನೀಡಿತು. 1918ರಲ್ಲಿ ಸರ‍್ ಎಂ.ವಿ. ತಾವಾಗಿಯೇ ದಿವಾನ್ ಪದವಿಯನ್ನು ಬಿಟ್ಟರು. ದೇಶಸೇವೆಯನ್ನೆ ತಪಸ್ಸನ್ನಾಗಿ ಮಾಡಿಕೊಂಡ ಶ್ರೀಯುತರಿಗೆ ನೂರು ವರ್ಷ ತುಂಬಿದಾಗ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಜವಾಹರಲಾಲ್ ನೆಹರೂ ಭಾಗವಹಿಸಿದ್ದು, ಆಗ ಭಾರತ ಸರ್ಕಾರ ವಿಶ್ವೇಶ್ವರಯ್ಯನವರ ಭಾವಚಿತ್ರವಿರುವ ಅಂಚೆ ಚೀಟಿ ಬಿಡುಗಡೆ ಮಾಡಿತು. 1955ರಲ್ಲಿ ವಿಶ್ವೇಶ್ವರಯ್ಯನವರಿಗೆ ಸರ್ಕಾರ ಅತ್ಯುನ್ನತ ಪ್ರಶಸ್ತಿ ಭಾರತರತ್ನ ನೀಡಿ ಗೌರವಿಸಿದಾಗ, ಇವರು ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗರಾದರು. ನಾಡಿನ ಹಾಗೂ ನಾಡಿನ ಜನತೆಯ ಏಳಿಗೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಭಾರತದ ಕನ್ನಡ ರತ್ನ ವಿಶ್ವೇಶ್ವರಯ್ಯನವರು  1962 ಏಪ್ರಿಲ್ 14ರಂದು ತಮ್ಮ 102ನೇ ವಯಸ್ಸಿನಲ್ಲಿ ನಮ್ಮನ್ನಗಲಿದರು.

ಕಾವೇರಿ ಕನ್ನಡಿಗರ ಜೀವನದಿ. ತಲಕಾವೇರಿಯಲ್ಲಿ ಹುಟ್ಟಿ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಪುದುಚೇರಿ ಭೂಭಾಗಗಳಲ್ಲಿ ಹರಿದು ಬಂಗಾಳಕೊಲ್ಲಿ ಸೇರುವ ನದಿ ಕರ್ನಾಟಕದಲ್ಲಿ 380 ಕಿಲೋಮೀಟರ್ ಹರಿಯುತ್ತದೆ. ತಮಿಳುನಾಡಿನಲ್ಲಿ 375 ಕಿ.ಮೀ. ಹರಿಯುತ್ತದೆ.ನದಿನೀರಿನ ಬಳಕೆಯಲ್ಲಿ ವಿವಾದ ಚೋಳ- ಪಾಂಡ್ಯರ ಕಾಲದಿಂದಲೇ ಇತ್ತು. ಮೈಸೂರು ಸಂಸ್ಥಾನ ಕೃಷ್ಣರಾಜಸಾಗರ ಅಣೆಕಟ್ಟು ಆರಂಭಿಸಿದರೆ,ಮದ್ರಾಸು ಪ್ರಾಂತ್ಯ ಮೆಟ್ಟೂರು ಅಣೆಕಟ್ಟು ನಿರ್ಮಾಣಕ್ಕೆ ತೊಡಗಿತು. ಇದರಿಂದ ವಿವಾದ ಉಲ್ಬಣವಾಯಿತು. ಬ್ರಿಟಿಷ್ ಸರ್ಕಾರ ಮತ್ತೆ ಸಂಧಾನ ಮಾಡಿತು. ಮೈಸೂರಿನ ಮುಖ್ಯ ಎಂಜಿನಿಯರ್ ಸರ್ ಎಂ.ವಿಶ್ವೇಶ್ವರಯ್ಯ ನೇತೃತ್ವದಲ್ಲಿ 124 ಅಡಿ ಎತ್ತರದ ಕನ್ನಂಬಾಡಿ ಅಣೆಕಟ್ಟು ಸ್ಥಾಪಿಸಿತು. 40 ಟಿಎಂಸಿ ನೀರು ಸಂಗ್ರಹಿಸುವ ಸಾಮಥ್ರ್ಯದ ಈ ಅಣೆಕಟ್ಟು 1.5 ಲಕ್ಷ ಎಕರೆಗೆ ನೀರಾವರಿ ಕಲ್ಪಿಸುತ್ತದೆ. ವಿವಾದಕ್ಕೆ ಸರ್ವಸಮ್ಮತ ಪರಿಹಾರ ಕಾಣದ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಸೂಚನೆಯಂತೆ 1990ರಲ್ಲಿ ಕಾವೇರಿ ಜಲನ್ಯಾಯಮಂಡಳಿ ರಚನೆಯಾಯಿತು. 1980ರಿಂದ 90ರವರೆಗೆ ಮೆಟ್ಟೂರು ಜಲಾಶಯಕ್ಕೆ ಹರಿದ ನೀರಿನ ಪ್ರಮಾಣದ ಆಧಾರದಿಂದ ಕರ್ನಾಟಕ 205 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಆದೇಶ ನೀಡಲಾಯಿತು. ಜತೆಗೆ ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಾವರಿ ಜಮೀನನ್ನು 11.2 ಲಕ್ಷ ಎಕರೆಗಿಂತ ಹೆಚ್ಚಿಸಬಾರದು ಎಂದು ನಿರ್ಬಂಧ ವಿಧಿಸಿತು. ಆದರೆ ಈಗ ತಮಿಳುನಾಡು ತನ್ನ ನೀರಾವರಿ ಪ್ರದೇಶವನ್ನು 14.4 ಲಕ್ಷ ಎಕರೆಯಿಂದ 25.8 ಲಕ್ಷಕ್ಕೆ ಹೆಚ್ಚಿಸಿಕೊಂಡಿದೆ.ಆದರೆ ಕರ್ನಾಟಕದಲ್ಲಿ ಈ ಪ್ರಮಾಣ ಕೇವಲ 8.8 ಲಕ್ಷ ಎಕರೆ.ಸ್ವಾತಂತ್ರ್ಯಾನಂತರ ಇದುವರೆಗೂ ಕಾವೇರಿ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳದ್ದು, ನೀರಾವರಿ ಪ್ರದೇಶವನ್ನು ವಿಸ್ತರಿಸಿಕೊಳ್ಳದಿದ್ದುದು ಕರ್ನಾಟಕದ ದೌರ್ಬಲ್ಯ ಹಾಗೂ ಉದಾಸೀನತೆಯೆ೦ದೇ ಹೇಳಬಹುದು.ಗಡ್ಡಕ್ಕೆ ಬೆ೦ಕಿ ಬಿದ್ದಾಗ ಬಾವಿ ತೋಡಿದ೦ತೆ, ನೀರಿನ ಅನಿವಾರ್ಯತೆಯ ಮು೦ದಾಲೋಚನೆಯಿಲ್ಲದೆ ಪರಿಸ್ಥಿತಿ ಕೈಮೀರಿದ ಮೇಲೆ ಹೋರಾಡಿದರೆ ವಿಕೋಪ ಹೆಚ್ಚು ಅಲ್ಲವೇ? ಕಾವೇರಿ ವಿವಾದಕ್ಕೆ ಕರ್ನಾಟಕದ ಇ೦ದಿನ ದುಸ್ಥಿತಿ ನೋಡಿ ಆ ಮೇರು ವ್ಯಕ್ತಿತ್ವ ವಿಶ್ವೇಶ್ವರಯ್ಯರ ಆತ್ಮ ಅದೆಷ್ಟು ಮರುಗುತ್ತಿದೆಯೊ ಏನೊ ??

ಕೊನೆಮಾತು:       ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ….. “ಬ೦ಗಾರದ ಮನುಷ್ಯ” ನ  ಹಾಡಿನಲ್ಲಿ ವಿಶ್ವೇಶ್ವರಯ್ಯನವರ ಉಲ್ಲೇಖವಿರುವುದರಿ೦ದ ಈ ಶೀರ್ಷಿಕೆ..  ಆ ಸಾಲುಗಳು ಹೀಗಿವೆ….

ಕಾವೇರಿಯನು ಹರಿಯಲು ಬಿಟ್ಟು  /ವಿಶ್ವೇಶ್ವರಯ್ಯ ಶ್ರಮ ಪಡದಿದ್ದರೆ

ಕನ್ನಂಬಾಡಿಯ ಕಟ್ಟದಿದ್ದರೆ/ ಬಂಗಾರ ಬೆಳೆವ ಹೊನ್ನಾಡು,

ಆಹಾ, ಬಂಗಾರ ಬೆಳೆವ ಹೊನ್ನಾಡು,/ಆಗುತಿತ್ತೆ ಈ ನಾಡು

ಕನ್ನಡ ಸಿರಿನಾಡು, ನಮ್ಮ ಕನ್ನಡ ಸಿರಿನಾಡು )

-Shylaja kekanaje

shylasbhaqt@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!