ಉಜಿರೆ, ಆ.30: ಬರೆಯಬೇಕೆಂಬ ಹಂಬಲವಿರುವ ಯುವಬರಹಗಾರರು ಅಂತರ್ಜಾಲ ತಾಣಗಳನ್ನು ಬಳಸಿಕೊಂಡು ವಿವಿಧ ಬಗೆಯ ಓದುಗರನ್ನು ತಲುಪುವುದರ ಕಡೆಗೆ ಆದ್ಯತೆ ನೀಡಬೇಕು ಎಂದು ರೀಡೂ ಕನ್ನಡ, ಇಂಗ್ಲಿಷ್ ಅಂತರ್ಜಾಲ ತಾಣದ ಸಂಪಾದಕ ಶಿವಪ್ರಸಾದ್ ಭಟ್ ಹೇಳಿದರು.
ಉಜಿರೆಯ ಎಸ್‍ಡಿಎಂ ಸ್ನಾತಕೋತ್ತರ ಕೇಂದ್ರದ ಸಮೂಹ ಮಾಧ್ಯಮ ಮತ್ತು ಪತ್ರಿಕೋದ್ಯಮ ವಿಭಾಗವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ರೀಡೂ ಅಂತರ್ಜಾಲ ಹೊಸ ಬರಹಗರಾರರಿಗೆ ಅಭಿವ್ಯಕ್ತಿಯ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿರುವ ಕುರಿತಾದ ಸಮಗ್ರ ವಿವರಗಳನ್ನು ನೀಡಿದರು.
ಅಂತರ್ಜಾಲ ಮಾಧ್ಯಮದ ಮೂಲಕ ಯುವಬರಹಗಾರರು ಹೆಚ್ಚು ಓದುಗರನ್ನು ತಲುಪಿಕೊಳ್ಳಬಹುದು. ಬರೆಯುವ ಯುವಮನಸ್ಸುಗಳಿಗೆ ಮುಖ್ಯವಾಹಿನಿ ಪತ್ರಿಕೆಗಳಲ್ಲಿ ವೇದಿಕೆ ಸಿಗದೇ ಇದ್ದಾಗ ನಿರಾಶರಾಗಬೇಕಿಲ್ಲ. ಅಂತರ್ಜಾಲ ತಾಣಗಳಿಗಾಗಿ ಬರೆಯುವ ಮೂಲಕ ಅಭಿವ್ಯಕ್ತಿಗೆ ವೇದಿಕೆ ಕಂಡುಕೊಳ್ಳಬಹುದು ಎಂದರು.
ಬರೆಯಲು ವೇದಿಕೆ ಸಿಗದಿದ್ದ ಮನಸ್ಸುಗಳಿಗೆ ಒಂದು ಸದಾವಕಾಶ ಒದಗಿಸಬೇಕು ಎಂಬ ಆಶಯದಿಂದ ರೀಡೂ ಕನ್ನಡ, ಇಂಗ್ಲಿಷ್ ಅಂತರ್ಜಾಲ ತಾಣವನ್ನು ಆರಂಭಿಸಲಾಯಿತು. ಅಂತರ್ಜಾಲ ತಾಣವನ್ನು ಆರಂಭಿಸಿದಾಗ ಹಣಕಾಸಿನ ಎಚ್ಚರದ ವಿನಿಯೋಗದ ಕಡೆಗೆ ಹೆಚ್ಚಿನ ಗಮನವಿರಬೇಕಾಗುತ್ತದೆ. ನೋಡುಗರು, ಓದುಗರ ವ್ಯಾಪ್ತಿ ಹೆಚ್ಚುತ್ತಿದ್ದಂತೆ ಸರ್ವರ್ ಹಕ್ಕುಗಳಿಗೆ ಸಂಬಂಧಿಸಿದಂತೆ ಶುಲ್ಕದಲ್ಲಿಯೂ ಹೆಚ್ಚಳವಾಗುತ್ತದೆ. ಅಂತಹ ಸಂದರ್ಭದಲ್ಲಿ ಹಣಕಾಸು ವೆಚ್ಚಗಳಿಗೆ ಸಂಬಂಧಿಸಿದಂತೆ ಎಚ್ಚರದ ಹೆಜ್ಜೆಯಿರಿಸಬೇಕಾಗುತ್ತದೆ ಎಂದು ಹೇಳಿದರು.
ರೀಡೂ ವೆಬ್‍ಸೈಟ್‍ಗಾಗಿ ಪ್ರಚಲಿತ ಸುದ್ದಿ, ಸಾಹಿತ್ಯ,ಕ್ರೀಡೆ, ಆರೋಗ್ಯ, ತಂತ್ರಜ್ಜಾನ ಸೇರಿದಂತೆ ವಿವಿಧ ವಿಷಯಗಳ ಕುರಿತು ಬರಹಗಳನ್ನು ಬರೆಯಬಹುದು. ಯುವ ಬರಹಗಾರರಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ ಎಂದು ರೀಡೂವಿನ ಮತ್ತೋರ್ವ ಸಂಪಾದಕ ಶರತ್ ಶ್ರೀನಿವಾಸ್ ಹೇಳಿದರು.
ವಿಭಾಗದ ವಿದ್ಯಾರ್ಥಿಗಳು ನಂತರ ಸಂವಾದದಲ್ಲಿ ಪಾಲ್ಗೊಂಡರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ.ಭಾಸ್ಕರ್ ಹೆಗಡೆ ಉಪಸ್ಥಿತರಿದ್ದರು. ಶ್ರುತಿ ಸ್ವಾಗತಿಸಿದರು. ಭರತ್ ಭಾರದ್ವಾಜ್ ವಂದಿಸಿದರು.