ನಮಗೆಲ್ಲ ನಿತ್ಯ ಬದುಕಿನಲ್ಲೊಂದು ಹೊಸತನ ಬೇಕು, ಏಕತಾನತೆಗೊ೦ದು ಬದಲಾವಣೆ ಬೇಕೆನ್ನಿಸುವುದು ಸಹಜ. ಅದೇ ರಾಗ ಅದೇ ಹಾಡಿನ ಮಧ್ಯದಲ್ಲೊಂದು ಹೊಸ ಪಲ್ಲವಿ ಈ ಹಬ್ಬಗಳು..!! ಹಬ್ಬದ ಹೆಸರಿನಲ್ಲಿ ಸಡಗರವನ್ನು ಮೈ-ಮನಸ್ಸಿನಲ್ಲಿ ತುಂಬಿಕೊಳ್ಳುತ್ತೇವೆ. ಹೀಗೆ ನಮ್ಮೊಳಗೆ ಖುಷಿಯಾದಾಗ ಮಾತ್ರ ಸುತ್ತೆಲ್ಲ ಸಂತಸ ಹಬ್ಬಿದಂತೆ ತೋರುತ್ತದೆ. ಎಲ್ಲರ ನೆಮ್ಮದಿ, ಖುಷಿಗೆ ಇಂಬು ನೀಡುವ, ಜಡಗಟ್ಟಿದ್ದ ಮನಸ್ಸುಗಳಿಗೆ ನವೋಲ್ಲಾಸವನ್ನೆರೆಯುವ ಹಬ್ಬ ಎ೦ದರೆ ಆಬಾಲವೃದ್ಧರಿಗೆ ಅಚ್ಚುಮೆಚ್ಚು… ಮಳೆಯಲ್ಲಿ ಮಿಂದ ಪ್ರಕೃತಿ ಹಸಿರಾಗಿ ನಳನಳಸುತ್ತದೆ. ಹಬ್ಬದ ಆಚರಣೆಯಲ್ಲಿ ತೊಡಗುವ ಮನಸ್ಸುಗಳೂ ಹೊಸತನದಿಂದ ತುಂಬಿ ತೊನೆಯುತ್ತವೆ.ಆಷಾಢ ಮಾಸ ಕಳೆದು ಬರುವ ಸರ್ವ ಹಬ್ಬಗಳ ಸಮನ್ವಯ ಸಂಯೋಗ ಮಾಸ ಶ್ರಾವಣ ಮಾಸ. ಹೇಳುವುದೇ ಬೇಡ, ಶ್ರಾವಣವೆಂದರೆ ಸಂಭ್ರಮ, ಶ್ರಾವಣವೆಂದರೆ ಹಬ್ಬಗಳ ಸಾಲು, ಶ್ರಾವಣವೆಂದರೆ ಮನೆ-ಮನೆಗಳ ನಡುವಿನ ಓಡಾಟ, ಬಂಧುಮಿತ್ರರ ಜತೆ ಒಡನಾಟ… ಶ್ರಾವಣದ ಇನ್ನೊಂದು ಹೆಸರೇ ಸಂಭ್ರಮವೆನ್ನುವಷ್ಟು ಈ ಮಾಸ ನಮಗೆ ಆಪ್ತ. ಖುಷಿ ಕೊಡುವ, ಸಂಭ್ರಮ ಹೆಚ್ಚಿಸುವ ಕಾರಣಕ್ಕೇ ಈ ಮಾಸ ಸಕಲರಿಗೂ ಪ್ರಿಯ. ಪಂಚಮಿ, ಷಷ್ಟಿ, ಅಮಾವಾಸ್ಯೆ, ಪೌರ್ಣಿಮೆ ಎಂದು ಮನೆಯಲ್ಲಿ ಎರಡು ದಿನಕ್ಕೊಮ್ಮೆ ಹಬ್ಬ. ಭೋಜನ ಪ್ರಿಯರಿಗಂತೂ ನಿತ್ಯವೂ ಔತಣದೂಟ. ಪ್ರಕೃತಿ ಮಾತೆ ನಲಿವಿನ ಸಂಭ್ರಮದ ಸಿರಿಯನ್ನು ಹೊತ್ತು ಬಡವ ಬಲ್ಲಿದನೆಂಬ ಭೇದವಿಲ್ಲದೆ ಮನೆ ಮನೆಗೆ ಬಂದು ಕದ ತಟ್ಟಿ ಸಂತೋಷವನ್ನು ನೀಡುವ ಸುಂದರ ಸಮಯ. ಒಂದೇ ಸಮನೆ ಸುರಿಯುವ ಮಳೆಗೂ ಈಗ ಕೊಂಚ ಬಿಡುವು. ಜಡಗಟ್ಟಿದ್ದ ಮನಸ್ಸುಗಳಿಗೂ ನವೋಲ್ಲಾಸ. ಚಿಗುರಿದ ಪ್ರಕೃತಿ ಹಸಿರು ಹಸಿರಾಗಿ ತಾನೂ ಹಬ್ಬದ ತಯಾರಿಯಲ್ಲಿ ಸ೦ಭ್ರಮಿಸುವ೦ತೆ ಭಾಸವಾಗುತ್ತದೆ. ಶ್ರಾವಣದ ಆಚರಣೆಯಲ್ಲಿ ತೊಡಗುವ ಮನಸ್ಸುಗಳೂ ಹೊಸತನದಿಂದ ತುಂಬಿ ತೊನೆಯುತ್ತವೆ. ಇದನ್ನು ಕವಿ ಅ೦ಬಿಕಾತನಯದತ್ತರು ಶ್ರಾವಣಾ ಬ೦ತು ಕಾಡಿಗೆ ಬ೦ತು ನಾಡಿಗೆ ಬ೦ತು ಬೀಡಿಗೆ ….. ಬ೦ತು ಶ್ರಾವಣಾ……ಎ೦ದು ಬಾಯ್ತು೦ಬ ಹೊಗಳಿ ವರ್ಣಿಸಿದ್ದಾರೆ.
ಶ್ರಾವಣ ಹುಣ್ಣಿಮೆಯ೦ದು ಶ್ರವಣ ನಕ್ಷತ್ರ ಬರುವುದರಿ೦ದ ಇಡೀ ಮಾಸಕ್ಕೆ ಪಾವಿತ್ರ್ಯ ಬ೦ತು ಎನ್ನುತ್ತಾರೆ. ಕೇರಳದಲ್ಲಿ ಅದರಲ್ಲಿನ “ಶ್ರ’ ಕಳೆದು ವಣ೦ ಮಾತ್ರ ಉಳಿಯಿತು. ಅದು ಅನ೦ತಶಯನನಾದ ವಿಷ್ಣುವಿನ ನಕ್ಷತ್ರವಾಗಿ ತಿರು(ಶ್ರೀ) ವೋಣ೦ ಆಯ್ತು. ಚಾಂದ್ರಮಾನದ ಐದನೇ ತಿಂಗಳಲ್ಲಿ ಮೊದಲಾಗಿ ಬರುವ ಮಾಸವೇ ಶ್ರಾವಣ. ಆಷಾಢ ಮಾಸದ ಕೊನೆಯಲ್ಲಿ ಭೀಮನ ಅಮಾವಾಸ್ಯೆ ಮುಗಿಯುತ್ತಿದ್ದಂತೆ ಆಗಮಿಸುತ್ತದೆ ಶ್ರಾವಣ ಮಾಸ. ನಾಗರಪಂಚಮಿಯಿಂದ ತೊಡಗಿದರೆ ಒಂದಾದ ಮೇಲೊಂದರಂತೆ ಹಬ್ಬಗಳ ಸಡಗರ. ಶುಕ್ಲ ಪಂಚಮಿಯಂದು ನಾಗ ಪಂಚಮಿ ಬಂದರೆ ಹುಣ್ಣಿಮೆಗೆ ರಕ್ಷಾಬಂಧನ. ಈ ಮಧ್ಯ ವರಮಹಾಲಕ್ಷ್ಮೀ ವ್ರತ, ರಾಘವೇಂದ್ರ ಆರಾಧನೆ, ಗೋಕುಲಾಷ್ಟಮಿ, ಋಗುಪಾಕರ್ಮ, ಋಜುಪಾಕರ್ಮಗಳೂ ಸಾಲಿನಲ್ಲಿವೆ. ದಿನಕ್ಕೊಂದು ಮಹತ್ವವಿರುವ ಶ್ರಾವಣದಲ್ಲಿ ಸೋಮವಾರ, ಶುಕ್ರವಾರ, ಶನಿವಾರ ಹೀಗೆ ಎಲ್ಲ ವಾರಗಳೂ ಪವಿತ್ರವೇ.
ಶ್ರಾವಣ ಮಾಸದ ಹಬ್ಬಗಳ ಪಟ್ಟಿ ಇ೦ತಿದೆ.
1)ಮಂಗಳಗೌರಿ ವ್ರತ (ಪ್ರತಿ ಮ೦ಗಳವಾರ)
2)ನಾಗಚತುರ್ಥಿ/ಪಂಚಮಿ (ಶುಕ್ಲ ಚೌತಿ/ ಪಂಚಮಿ)
3)ಬಸವ ಪಂಚಮಿ
4)ಶುಕ್ರಗೌರಿ ಪೂಜೆ
5)ವೈಷ್ಣವ ಶ್ರಾವಣ ಶನಿವಾರದ ಪೂಜೆ
6)ಅಂಗಾರಕ ಜಯಂತಿ
7)ಶ್ರೀ ವರಮಹಾಲಕ್ಷ್ಮೀ ವ್ರತ
8)ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ(ಕೃಷ್ಣ ಬಿದಿಗೆ)
9)ಗಾಯತ್ರಿ ಆರಾಧನೆ
10)ಪ್ರತಿ ಸೋಮವಾರ ವಿಶೇಷ ಶ್ರಾವಣ ಸೋಮವಾರ ಆಚರಣೆ
11)ಉಪಾಕರ್ಮ
12)ಶ್ರೀ ಕೃಷ್ಣ ಜನ್ಮಾಷ್ಟಮಿ (ಕೃಷ್ಣಪಕ್ಷ ಅಷ್ಟಮಿ)
13) ರಕ್ಷಾಬಂಧನ (ಹುಣ್ಣಿಮೆ)
14)ಸಿರಿಯಾಳ ಷಷ್ಠಿ
15) ಅಜ ಏಕಾದಶಿ (ಕೃಷ್ಣ ಏಕಾದಶಿ)
16) ಕಲ್ಕಿ ಜಯಂತಿ
ಮಂಗಳ ಗೌರಿ ವ್ರತ:
ಶ್ರಾವಣ ಮಸದ ಮೊದಲ ಮಂಗಳವಾರದ ಪುಣ್ಯ ದಿನದಿಂದ ನಾಲ್ಕು ಮಂಗಳವಾರ ಮಂಗಳಗೌರಿ ವ್ರತನ್ನು ಮಾಡುತ್ತಾರೆ ಹೊಸದಾಗಿ ಮದುವೆ ಆಗಿರುವ ಹೆಣ್ಣು ಮಕ್ಕಳು ತವರು ಮನೆಗೆ ಬಂದು ಶ್ರದ್ದೆ ಮತ್ತು ಭಕ್ತಿಯಿಂದ ಮಂಗಳಗೌರಿ ವ್ರತವನ್ನು ಮಾಡುವ ಮೂಲಕ ಮಾಂಗಲ್ಯಭಾಗ್ಯ,ಸಂಸಾರದ ಕ್ಷೇಮ,ಪತಿಯ ಆಯುಸ್ಸು,ಆರೋಗ್ಯ,ಐಶ್ವರ್ಯ,ಕೀರ್ತಿಯು ವೃದ್ದಿಸಲೆಂದು ಸಂಕಲ್ಪದಿಂದ ಈ ವ್ರತ ಮಾಡಿ ಪ್ರತಿ ವಾರವೂ ಸಹ ಮುತ್ತೈದೆಯರಿಗೆ ಬಾಗಿನ ಕೊಡುತ್ತಾರೆ.ಕೊನೆಯ ಮಂಗಳವಾರ ವ್ರತ ಮುಗಿದ ಮೇಲೆ ಮುತ್ತೈದೆಯರಿಗೆ ಭೋಜನದ ವ್ಯವಸ್ಥೆ ಮಾಡಿ ಪುನಃ ಬಾಗಿನ ಮತ್ತು ದಕ್ಷಿಣೆ ಕೊಡುವ ಮೂಲಕ ಆಚರಿಸುತ್ತಾರೆ.
ನಾಗರ ಪ೦ಚಮಿ:
ನಾಗರ ಪಂಚಮಿ ಅಥವಾ ಗರುಡ ಪಂಚಮಿ ಶ್ರಾವಣ ಮಾಸದಲ್ಲಿ ಬರುವ ದೊಡ್ಡ ಹಬ್ಬ. ಇದು ತನಿ ಎರೆಯುವ ಹಬ್ಬ. ಪಂಚಮಿಯ ದಿನ ನಾಗರಕಲ್ಲಿಗೆ, ಹಾವಿನ ಹುತ್ತಕ್ಕೆ ಅಥವಾ ಮನೆಗೇ ತಂದ ಹುತ್ತದ ಮಣ್ಣಿಗೆ ಇಲ್ಲವೆ ರಂಗೋಲಿಯಿಂದ ಬರೆದ, ಅಕ್ಕಿ ಹಿಟ್ಟಿನಿಂದ ಮಾಡಿದ ನಾಗರ ಹಾವಿನ ಚಿತ್ರಕ್ಕೆ ಶ್ರದ್ಧಾಭಕ್ತಿಗಳಿಂದ ಹಾಗೂ ಮಡಿಯಿಂದ ಹಾಲೆರೆಯುವುದು ಹಿಂದಿನಿಂದ ನಡೆದುಬಂದ ಸಂಪ್ರದಾಯ. ನಾಗರ ಪಂಚಮಿ ಅಣ್ಣ – ತಂಗಿಯರ ಹಬ್ಬ. ಅಂದು ಸೋದರ – ಸೋದರಿಯರು ಹೊಟ್ಟೆ ತಣ್ಣಗಿರಲಿ, ಬೆನ್ನು ತಣ್ಣಗಿರಲಿ ಎಂದು ಹೇಳಿ ಹುತ್ತಕ್ಕೆ ಎರೆದ ಹಾಲನ್ನು ಸಹೋದರರ ಹೊಕ್ಕಳಿಗೂ, ಬೆನ್ನಿಗೂ ಹಚ್ಚಿ ಒಳ್ಳೆಯದಾಗಲಿ ಎಂದು ಹಾರೈಸುತ್ತಾರೆ.ಬಿತ್ತನೆ ಕಾರ್ಯ ಮುಗಿಸಿ, ವರ್ಷದ ಮೊದಲ ಫಸಲಿನ ನೀರಿಕ್ಷೆಯಲ್ಲಿರುವ ಸೋದರರು, ಸಹೋದರಿಯರನ್ನು ಕರೆಸಿ, ಉಡಿತುಂಬಿ ಕಳುಹಿಸಲಿ ಎಂಬುದೂ ಈ ಹಬ್ಬದ ಆಶಯವಾಗಿದೆ.
ಅಶ್ವತ್ಥಕಟ್ಟೆಗಳ ಕೆಳಗೆ ಪ್ರತಿಷ್ಠಾಪಿಸಿದ ನಾಗರಕಲ್ಲುಗಳಿಗೆ ಪಂಚಮಿಯ ದಿನ ಮುತ್ತೈದೆಯರು ಮಡಿಯಲ್ಲಿ ಹಾಲೆರೆದು ಪೂಜಿಸುತ್ತಾರೆ. ಸುಬ್ರಹ್ಮಣ್ಯೇಶ್ವರನ ದೇವಾಲಯಗಳಲ್ಲೂ ನಾಗರ ಪಂಚಮಿಯ ದಿನ ವಿಶೇಷ ಪೂಜೆಗಳು ನಡೆಯುತ್ತವೆ. ಶ್ರಾವಣ ಶುದ್ಧ ಪಂಚಮಿಯಂದು ನಾಗರಕಲ್ಲಿಗೆ ಹಾಲೆರೆಯುವ ಮೂಲಕ ತಾಯಿಯ ಹಾಲ ಋಣ ತೀರಿಸಬಹುದು ಎಂಬ ನಂಬಿಕೆಯೂ ಇದೆ. ಕೆಲವು ಕಡೆ ದಿಟ ನಾಗರನಿಗೇ ಹಾಲೆರೆವ ರೂಢಿಯೂ ಇದೆ.
ವರಮಹಾಲಕ್ಷ್ಮೀ ವ್ರತ/ ಪೂಜೆ:
ಹೆಸರೇ ಸೂಚಿಸುವಂತೆ ವರಗಳನ್ನು ಕೊಡುವ ಲಕ್ಷ್ಮಿ ದೇವಿಯ ವ್ರತ ಇದು. ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಹೆಚ್ಚಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ವಿಷ್ಣುವಿನ ಪತ್ನಿ ಲಕ್ಷ್ಮೀ ದೇವಿಗೆ ಪೂಜೆ ಸಲ್ಲಿಸಿ ಆರೋಗ್ಯ, ಸಂಪತ್ತು, ಸಂತಾನ ಕರುಣಿಸಿ ದೀರ್ಘ ಸುಮಂಗಲಿಯಾಗಿ ಬಾಳುವಂತೆ ಹರಸು ಎಂದು ಲಕ್ಷ್ಮೀಯಲ್ಲಿ ಬೇಡುತ್ತಾರೆ.ಮದುವೆಯಾದ ಹೆಣ್ಣುಮಕ್ಕಳು ವಿಶೇಷವಾಗಿ ಈ ಪೂಜೆಯನ್ನು ಕೈಗೊಳ್ಳುತ್ತಾರೆ. ಈ ವ್ರತವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಎರಡನೆಯ ಶುಕ್ರವಾರ ಮಾಡುತ್ತಾರೆ.ವರಮಹಾಲಕ್ಷ್ಮೀವ್ರತವೆ೦ದರೆ ಅದು ಸಿರಿ ಸ೦ಪತ್ತಿನ ಅಧಿದೇವತೆ ಶ್ರೀಲಕ್ಷ್ಮೀಯ ಪೂಜಾ ದಿನ. ನ೦ಬಿದ ಭಕ್ತರು ಶ್ರದ್ಧಾಭಕ್ತಿಯಿ೦ದ ಶ್ರೀಲಕ್ಷ್ಮೀಯನ್ನು ಅರ್ಚಿಸಿ ಪೂಜಿಸಿ ಇಷ್ಟಾರ್ಥಗಳನ್ನು ಬಿನ್ನವಿಸಿಕೊ೦ಡಲ್ಲಿ ದೇವಿ ಅಭಯ ನೀಡಿ ಕಾಮಿತಾರ್ಥ ಪ್ರಾದಾಯಿನಿಯಾಗಿ ಹರಸುತ್ತಾಳೆ೦ಬುವುದು ಅನಾದಿಯಿ೦ದ ಬ೦ದ ನ೦ಬಿಕೆ.
-
ಪೌರಾಣಿಕ ಹಿನ್ನಲೆ
ಕೈಲಾಸ ಪರ್ವತದಲ್ಲಿ ಶಿವ ಪಾರ್ವತಿಯರು ಸರಸವಾಗಿದ್ದ ಸ೦ದರ್ಭದ ಭೂಲೋಕದಿ೦ದ ಭಕ್ತರ ಸ೦ಕಟ, ನೋವಿನ ಗೋಳಾಟ ಪಾರ್ವತಿದೇವಿಗೆ ಕೇಳಿಸಿತು.ತನ್ನ ಭಕ್ತರ ನೋವು, ಸ೦ಕಟ ಕ೦ಡು ಆಕೆ ಅದನ್ನೆಲ್ಲ ಹೋಗಲಾಡಿಸಿ ಸ೦ಪತ್ತು, ಸಮ್ರದ್ಧಿ ಕರುಣಿಸುವ ಶ್ರೇಷ್ಠ ವ್ರತವೊ೦ದನ್ನು ತಿಳಿಸಿಕೊಡಬೇಕೆ೦ದು ಕೋರಿಕೊ೦ಡಳು.ಕು೦ಡಿನಪುರವೆ೦ಬ ಪಟ್ಟಣದಲ್ಲಿ ಚಾರುಮತಿ ಎ೦ಬ ಬಡ ಮುತ್ತೈದೆ ಇದ್ದಳು. ಗ್ರಹಕ್ರತ್ಯ, ಹಿರಿಯರ ಸೇವೆ, ಪತಿಯ ಸೇವೆಯಲ್ಲಿ ತಲ್ಲೀನಳಾಗಿದ್ದಳು ಆಕೆ ಒ೦ದು ರಾತ್ರಿ ನಿದ್ರಿಸುತ್ತಿದ್ದ ಆಕೆಗೊ೦ದು ಕನಸು ಬಿತ್ತು. ಶ್ರೀಲಕ್ಷ್ಮೀದೇವಿ ಪ್ರತ್ಯಕ್ಷಳಾಗಿ, ”ಶ್ರಾವಣಮಾಸ ಬ೦ದಿದೆ. ಹುಣ್ಣಿಮೆಗೆ ಸಮೀಪದ ಶುಕ್ರವಾರ ವರಮಹಾಲಕ್ಷ್ಮಿಯಾಗಿ ನಾನು ಭಕ್ತರ ಬಳಿಗೆ ಬರುತ್ತಿದ್ದೇನೆ. ಆ ದಿನ ಶಾಸ್ತ್ರೋಕ್ತ ವಿಧಿ ವಿಧಾನಗಳಿ೦ದನನ್ನು ಅರ್ಚಿಸಿ, ಪೂಜಿಸಿದಲ್ಲಿ ಕೋರಿದ ವರಗಳನ್ನು ತಾನು ಈಡೇರಿಸಿ ಅನುಗ್ರಹಿಸುತ್ತೇನೆ.”ಚಾರುಮತಿ ಮನೆಯವರಿಗೆಲ್ಲ ಕನಸಿನ ವೃತ್ತಾ೦ತವನ್ನು ಅರುಹಿಸಿದಳು. ಆ ದಿನ ಶುಚಿರ್ಭೂತರಾಗಿ ಮನೆಯವರೆಲ್ಲರು ಲಕ್ಷ್ಮೀ ಪೂಜೆ ಮಾಡಿದರು. ಪೂಜಾ ಪ್ರಸಾದ ಸ್ವೀಕರಿಸಿ ಇಚ್ಚಿತ ವರಗಳನ್ನು ಕೋರಿಕೊ೦ಡರು. ಲಕ್ಷ್ಮೀದೇವಿ ಚಾರುಮತಿಗೆ ಸಕಲ ಸ೦ಪತ್ತು, ಸಮೃದ್ಧಿಯನ್ನು ಕರುಣಿಸಿ ಹರಸಿದಳು.
ಅನ೦ತರ ಪ್ರತಿವರ್ಷವೂ ಭಗವದ್ಧಕ್ತೆ ಚಾರುಮತಿ ವರಮಹಾಲಕ್ಷ್ಮೀ ವ್ರತಾಚರಣೆ ಮಾಡಿದ್ದಳು. ಬ೦ದ ಸ೦ಪತ್ತು ತಾನೂ ಅನುಭವಿಸಿ ಸಮಾಜದ ಹತ್ತು ಮ೦ದಿಗೂ ವಿನಿಯೋಗಿಸಿದಳು. ಆಕೆಯಿ೦ದ ವ್ರತದ ಮಹಿಮೆಯನ್ನು ತಿಳಿದು ಇತರರೂ ವರಮಹಾಲಕ್ಷ್ಮೀ ವ್ರತ ಆಚರಿಸಲು ತೊಡಗಿದರು.
ರಕ್ಷಾಬಂಧನ:
ಶ್ರಾವಣ ಮಾಸದ ಹುಣ್ಣಿಮೆಗೆ ನೂಲು ಹುಣ್ಣಿಮೆ ಎಂದು ಹೆಸರು. ಉತ್ತರಭಾರತ, ಮಹಾರಾಷ್ಟ್ರ, ಗುಜರಾತಿನಲ್ಲಿ ಹುಣ್ಣಿಮೆಯಂದು ರಕ್ಷಾಬಂಧನವೆ೦ದು ಆಚರಿಸುತ್ತಾರೆ.ರಾಖೀ ರಕ್ಷಣೆಯ ಸಂಕೇತ. ಈ ಬಂಧನ ಸೋದರ ಸೋದರಿಯರ ಭಾವನಾತ್ಮಕ ಸ್ಪಂದನ. ತಂಗಿ ಸೋದರನ ಕೈಗೆ ದಾರವನ್ನು ಕಟ್ಟಿ ಆರತಿ ಬೆಳಗಿ, ಸಿಹಿ ತಿನ್ನಿಸಿ ಎಂದೆಂದೂ ಪ್ರೀತಿಯ ರಕ್ಷೆಯ ಆಶಿಸುವ ರಕ್ಷಾಬಂಧನ ಒಂದು ಮಹತ್ವದ ಹಬ್ಬ. ದಾರ ಕಟ್ಟಿಸಿಕೊಂಡ ಸೋದರ ಉಡುಗೊರೆ ನೀಡುತ್ತಾನೆ. ಋಗ್, ಯಜುರ್ವೇದಿ ಬ್ರಾಹ್ಮಣರಿಗೆ ಹಳೆ ಜನಿವಾರವನ್ನು ಬಿಚ್ಚಿ ಹೊಸ ಜನಿವಾರವನ್ನು ಧಾರಣೆ ಮಾಡುವ ದಿನ. ನವ ವರನಿಗೆ, ನವ ವಟುವಿಗೆ ಮೊದಲ ಉಪಾಕರ್ಮ ಹಬ್ಬ ಬಹಳ ಜೋರು.
ಮೂರು ತಿಂಗಳ ಮಳೆಗಾಲದಲ್ಲಿ ಉಗ್ರಗೊಂಡು ಭೋರ್ಗರೆವ ಶರಧಿ ಶ್ರಾವಣ ಹುಣ್ಣಿಮೆಯ ದಿನ ಶಾಂತವಾಗುತ್ತದೆ. ಕರಾವಳಿಯಲ್ಲಿ ಜಾತಿ ಭೇದವಿಲ್ಲದೆ ಅರಿಶಿನ ಕುಂಕುಮ,ಹೂವು ಹಣ್ಣುಗಳನ್ನು ಕಡಲಿಗೆ ಸಮರ್ಪಿಸಿ, ಕಡಲಿಗೆ ಹಾಲೆರದು ಸಮುದ್ರ ದೇವತೆಯನ್ನು ಪೂಜೆ ಮಾಡುತ್ತಾರೆ. ಮಹಾರಾಷ್ಟ್ರದಲ್ಲಿ ಅಂದು ನಾರಲ್ (ತೆಂಗಿನಕಾಯಿ-ಮೂರು ಕಣ್ಣುಗಳುಳ್ಳ) ಗಂಗೆಯನ್ನೇ ಶಿರದಲ್ಲಿ ಧರಿಸಿದ ಮುಕ್ಕಣ್ಣನನ್ನು ಪೂಜಿಸಿ, ಸಮುದ್ರ ದೇವತೆಗೆ ಕಾಯಿ ಒಡೆದು ಅರಿಶಿನ ಕುಂಕುಮ ಫಲ-ಪುಷ್ಪಗಳನ್ನು ಸಮುದ್ರ ದೇವತೆಗೆ ಅರ್ಪಿಸಿ ಪ್ರಾರ್ಥನೆಗೈಯುತ್ತಾರೆ. ನಾರಿಯಲ್ ಅಂದು ತೆಂಗಿನಕಾಯಿಯನ್ನು ಕಡಲಿಗೆ ಒಪ್ಪಿಸುವುದರಿಂದ ನಾರಳ್ ಪೂರ್ಣಿಮಾ ಎನ್ನುತ್ತಾರೆ. ಮುಖ್ಯವಾಗಿ ಇದು ಕಡಲ ಪೂಜೆ ಆದರೂ ಕಡಲ ತೀರದಲ್ಲಿ ನೆಲೆಸದವರು ಕೆರೆ, ಬಾವಿ, ನದಿ, ಹಳ್ಳಗಳಿಗೂ ಪೂಜೆ ಮಾಡುತ್ತಾರೆ. ಪೂಜೆಯ ನಂತರ ಮೀನುಗಾರರು ಮೀನು ಹಿಡಿಯಲು ಕಡಲಿಗೆ ಇಳಿಯುತ್ತಾರೆ.
ಕೃಷ್ಣಾಷ್ಟಮಿ:
ಶ್ರಾವಣದ ಕೃಷ್ಣಪಕ್ಷದ 8ನೇ ದಿನವನ್ನು ಕೃಷ್ಣ ಜನ್ಮಾಷ್ಟಮಿಯಾಗಿ ಆಚರಿಸಲಾಗುತ್ತದೆ. ದ್ವಾಪರಯುಗದಲ್ಲಿ ವಿಷ್ಣುವಿನ ಅವತಾರವಾದ ಭಗವಾನ್ ಕೃಷ್ಣನ ಜನನದ ಸ್ಮರಣೆಯಿದು. ಮಾನವಕುಲದ ಪಾಪಗಳನ್ನು ತೊಳೆಯಲು ಕೃಷ್ಣ ಜನ್ಮವೆತ್ತಿದ. ಕೃಷ್ಣ ಜನ್ಮಾಷ್ಟಮಿಯನ್ನು ಮಥುರಾ ಮತ್ತು ಬೃಂದಾವನದಲ್ಲಿ ಅತ್ಯಂತ ನಲಿವು ಮತ್ತು ಹರ್ಷದಿಂದ ಆಚರಿಸಲಾಗುತ್ತದೆ. ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ. ಪುರೋಹಿತರು ಭಗವದ್ಗೀತೆ ಮತ್ತಿತರ ಪವಿತ್ರ ಗ್ರಂಥಗಳನ್ನು ಪಠಿಸುತ್ತಾರೆ. ಮಧ್ಯರಾತ್ರಿ ಚಂದ್ರ ಮೂಡಿದ ಕೂಡಲೇ ಚಕ್ಕುಲಿ, ಮತ್ತು ಉಂಡೆಗಳನ್ನು ಮೂರ್ತಿಗೆ ಅರ್ಪಿಸಲಾಗುತ್ತದೆ. ಭಕ್ತರು ಶಂಖದಿಂದ ಜಲ,ಕ್ಷೀರಾಭಿಷೇಕ ಮಾಡುತ್ತಾರೆ. ಸಮೀಪದ ಗ್ರಾಮಗಳ ದನಗಾಹಿಗಳು ಕೃಷ್ಣನ ಮೂರ್ತಿಗೆ ಜಲ ಮತ್ತು ಕ್ಷೀರದ ಅರ್ಘ್ಯವನ್ನು ಅರ್ಪಿಸುತ್ತಾರೆ. ಮರುದಿನ ನಸುಕಿನ ಜಾವದ ತನಕ ಆಚರಣೆ ನಡೆಯುತ್ತದೆ. ಮರುದಿನ ಶ್ರೀಕೃಷ್ಣ ಲೀಲೋತ್ಸವ. ಅಂದರೆ ಮೊಸರು ಕುಡಿಕೆ ಹಬ್ಬ. ಗೊಲ್ಲರು ಸೇರಿ ಮೊಸರು ಕುಡಿಕೆ ಒಡೆಯುವ ದೃಶ್ಯಾವಳಿಗಳನ್ನು ಎಲ್ಲೆಲ್ಲೂ ಕಾಣಬಬಹುದಾಗಿದೆ.
ಶ್ರೀ ರಾಘವೇಂದ್ರರ ಆರಾಧನೆ:
ಶ್ರಾವಣ ಮಾಸದ ಕೃಷ್ಣಪಕ್ಷದ ಬಹುಳ ಬಿದಿಗೆಯ ಪುಣ್ಯದಿನದಂದು ಗುರು ಸಾರ್ವಭೌಮ ರಾಘವೇಂದ್ರರ ಆರಾಧನೆ ನಡೆಯುತ್ತದೆ.ಇದು ರಾಯರ ಮಠದಲ್ಲಿ ಮೂರು ದಿನಗಳ ಕಾಲ ಭಕ್ತಿ,ಶ್ರದ್ದೆ ಮತ್ತು ವೈಭವದಿಂದ ನಡೆಯುತ್ತದೆ.ರಾಯರು ಬೃಂದಾವನವನ್ನು ಸೇರಿದ ಪುಣ್ಯ ದಿನವನ್ನು ಮಧ್ಯಮ ಆರಾಧನೆ ಎಂದು ಕರೆಯುತ್ತಾರೆ.ಸಾಮಾನ್ಯವಾಗಿ ರಾಯರ ಎಲ್ಲಾ ಮಠಗಳಲ್ಲಿಯೂ ಭಕ್ತರಿಗೆ ಪ್ರಸಾದ ರೂಪವಾಗಿ ಅನ್ನ ಸಂತರ್ಪಣೆ ನಡೆಯುವುದು.
ದೇಶದಾದ್ಯಂತ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಶ್ರಾವಣ ಮಾಸದದಲ್ಲಿ ಆಚರಿಸುವ ಹಬ್ಬಗಳಲ್ಲಿ ದೇವರ ಪ್ರಾರ್ಥನೆ ಮುಖ್ಯ ಪಾತ್ರವಾದರೂ ಪತಿ, ಒಡಹುಟ್ಟಿದವರು, ಗೋವು,ನಾಗ, ಗರುಡ, ಋಷಿಗಳು, ಗ್ರಹಗಳು, ಶಕ್ತಿ ದೇವತೆ, ಮಹಾಲಕ್ಷ್ಮೀ, ನವವಿವಾಹಿತರಿಗೆ, ನವ ವಟುವಿಗೆ ಹೀಗೆ ಎಲ್ಲರಿಗೂ ಶುಭದಾಯಕ ಆಗಿರಲಿ ಎಂದು ವಿವಿಧ ರೀತಿಯಲ್ಲಿ ಆಚರಿಸುವ ಹಬ್ಬಗಳುಂಟು; ಆದ್ದರಿಂದಲೇ ಹೇಳುವುದು ಶ್ರಾವಣವೆ೦ಬುದು ಮಾಸಗಳ ರಾಜ!! ಹೆಂಗಸರಿಗಂತೂ ಬಿಡುವಿಲ್ಲದ ಕೆಲಸ. ಆಷಾಡದ ಮಳೆಗೆ ಹೆದರಿ ಬೀರುವಿನಲ್ಲಿ ಭದ್ರವಾಗಿ ಇಟ್ಟಿದ್ದ ಸೀರೆಗಳು, ಒಡವೆಗಳು ಶ್ರಾವಣ ಶುರುವಾದ ಕೂಡಲೇ ಒಂದೊಂದಾಗಿ ಹೊರ ಬಂದು ಹಬ್ಬ-ಹರಿದಿನ, ಶುಭಕಾರ್ಯ, ಸಮಾರಂಭಗಳಲ್ಲಿ ತಮ್ಮ ಅಸ್ತಿತ್ವವನ್ನು ಮೆರೆಸುತ್ತವೆ. ಇನ್ನು ದೇಗುಲಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು. ಮಾರುಕಟ್ಟೆಗಳಲ್ಲಿ ತಾಜಾ-ತಾಜಾ ಹಣ್ಣು ಹಂಪಲುಗಳು, ತರಕಾರಿಗಳು, ವಿಧ ವಿಧ ಹೂಗಳ ರಾಶಿ. ಎಲ್ಲೆಲ್ಲೂ ಹಬ್ಬದ ಉತ್ಸಾಹ. ಖರೀದಿ ಭರಾಟೆ. ಶ್ರಾವಣದಲ್ಲಿ ಬರುವ ಚತುರ್ಥಿಯಂದು ಗೋ ಪೂಜೆ, ಪಂಚಮಿ ನಾಗರಾಜನಿಗೆ, ಗರುಡನಿಗೆ ಷಷ್ಟಿ,ಸಿತಾಳ(ಶೀತಲ್)ದೇವಿಗೆ ಸಪ್ತಮಿ, ಬಾಲಕೃಷ್ಣನ ಅಷ್ಟಮಿ. ರಕ್ಷಾಬಂಧನ ಸೋದರನಿಗಾದರೆ, ಮಂಗಳಗೌರಿ, ವರಮಹಾಲಕ್ಷ್ಮೀ ಹಾಗೂ ಚೂಡಿ, ಹೆಂಗೆಳೆಯರಿಗಾಗಿ,ಅಮಾವಾಸ್ಯೆಯಂದು ಪತಿಗಾಗಿ, ಏಕಾದಶಿ ಸಂತಾನ ಪ್ರಾಪ್ತಿಗಾಗಿ, ಋಷಿಪಂಚಮಿ ಸಪ್ತರ್ಷಿಗಳಿಗೆ, ಸಂಪತ್-ಶನಿವಾರ ಧನವೃದ್ಧಿಗಾಗಿ, ವರುಣ-ಸಮುದ್ರ ಪೂಜೆ ಪ್ರಕೃತಿಗೆ.ಸಕಲರಿಗೂ ಸುಖ ತರುವ ಶ್ರಾವಣದಲ್ಲಿ ಹಬ್ಬಗಳ ಸುಗ್ಗಿ ಎಂದು ಹಿಗ್ಗಿದರೂ ಜೇಬಿಗಂತೂ ಸದಾ ಖರ್ಚು. ಹಾಗಾಗಿ ಹಬ್ಬಗಳ ಸುಗ್ಗಿಯ ಹೊತ್ತು ಖರ್ಚಿನ ಮಗ್ಗಿಯನ್ನು ಮರೆಯುವುದೇ ಒಳ್ಳೆಯದು..:)
ಸುಮ್ಮಸುಮ್ಮನೇ ಹೊಸ ಬಟ್ಟೆ ತೊಟ್ಟು, ಹಬ್ಬದಡುಗೆ ಮಾಡಿ ಉಂಡು ಖುಷಿ ಪಡಲು ಮನಸ್ಸು ಬಾರದು. ಅದಕ್ಕೇ ಈ ಮಾಸ ನೆಪ ನೀಡುತ್ತಾ ಹೋಗುತ್ತದೆ. ಎಲ್ಲರೂ ಸಾಂಪ್ರದಾಯಿಕವಾಗಿ ಹಬ್ಬಗಳನ್ನು ಆಚರಿಸುತ್ತೇವೆಯೋ ಇಲ್ಲವೋ, ಹಬ್ಬದ ಹೆಸರಿನಲ್ಲಿ ಸಡಗರವನ್ನು ಮೈ-ಮನಸ್ಸಿನಲ್ಲಿ ತುಂಬಿಕೊಳ್ಳುತ್ತೇವೆ. ಹೀಗೆ ನಮ್ಮೊಳಗು ಖುಷಿಯಾದಾಗ ಮಾತ್ರ ಸುತ್ತೆಲ್ಲ ಸಂತಸ ಹಬ್ಬಿದಂತೆ ತೋರುತ್ತದೆ.. ನಮ್ಮ ಪರ೦ಪರೆ, ಸ೦ಪ್ರದಾಯಗಳು ಚರಾಚರ ಜಗತ್ತಿನ ಸೂತ್ರದ ಕೊಂಡಿಯ ಪರಸ್ಪರ ಹೊ೦ದಾಣಿಕೆಗೆ ಸುಂದರ ಹೆಣೆಯುವಿಕೆಯ ಬ೦ಧಜಾಲ. ವ್ರತಗಳು ಮತ್ತು ಉತ್ಸವಗಳು ಹಬ್ಬಗಳ ಪವಿತ್ರ ದಿನಗಳ ಆಚರಣೆಯಲ್ಲಿರುವುದು ಸ೦ಪ್ರದಾಯದ ಹೆಸರಿನಲ್ಲಿ ಮಾನವ ಚೇತನ ಅನಿತ್ಯವಾದ ಲೌಕಿಕ ಸ್ತರದಿಂದ ಮುಕ್ತವಾಗಿ ನಿತ್ಯವಾದ ಪಾರಮಾರ್ಥಿಕ ಸ್ತರಕ್ಕೆ ಏರುವುದಕ್ಕಿರುವ ಹ೦ತಗಳು…. ಏನ೦ತೀರಾ..?