ಅಂಕಣ

ಸ್ಪೂರ್ತಿಯ ಚಿಲುಮೆ-ಏಕಸ್ತ ವೀರ ಕ್ಯಾರೋಲಿ

ನಾವ್ ಅನ್ಕೋಂಡ ಹಂಗೆ ಎಲ್ಲಾ ಅಗೊದಾಗಿದ್ರೇ, ಯಾರ್ ಜೀವನದಲ್ಲಿಯೂ ಯಾವ್ದೇ ಕಷ್ಟ-ಕಾರ್ಪಣ್ಯಗಳೇ ಇರ್ತಿರ್ಲಿಲ್ಲ, ಆ ದ್ಯಾವ್ರು ನಾವ್ಗಳು ಬೆಡ್ಕೊಂಡಿದ್ದೆಲ್ಲವನ್ನು ಕೊಟ್ಕೊಂಡೇ ಹೋಗಿದ್ರೆ, ಅವನ್ ಯಾರೂ ಇಷ್ಟೋಂದು ನೆನಿಸ್ತಾ ಇರ್ಲಿಲ್ಲ, ಹೌದದು ಜೀವನ ಅಂದ್ರೆ ಹಂಗೆ ಕಂಡ್ರಿ, ಬಡ್ಡಿ ಮಗಂದು ನಾವ್ ಅನ್ಕೋಂಡಿದ್ದೆಲ್ಲ ಆಗೋಕೆ ಇಲ್ಲಾ ಅಂತಿನಿ. ಸತ್ಯ ಹರಿಶ್ಚಂದ್ರ, ವಿವೇಕಾನಂದರು, ಗಾಂಧೀಜಿ, ಬಸವಣ್ಣ, ವೀರ ಸಾವರ್ಕರ, ಅಂಬೇಡ್ಕರ್ ಹೀಗೆ ಬರುವ ಸಾಲು-ಸಾಲು ಸಾಧಕರು ಯಾರಿಗ್ ಗೊತ್ತಿಲ್ಲಾ ಹೇಳಿ? ಅವರೆಲ್ಲರೂ ತಂತಮ್ಮ ಜೀವನದಲ್ಲಿ ಕಷ್ಟಗಳನ್ನ ಎದುರಿಸಿದವರೆ, ಆದರೆ ಆದರ್ಶವಾಗಿರೋದು ಮಾತ್ರ ಅವರೆಲ್ಲರೂ ಆ ಕಷ್ಟಗಳನ್ನ ಎದುರಿಸಿದ ರೀತಿ.

ಇಲ್ಲೊಬ್ನು ಸಾಧಕ, ಕ್ರೀಡಾ ಸಾಧನೆಯ ಸ್ಪೂರ್ತಿಯ ಚಿಲುಮೆ ಇದ್ದಾನೆ, ಹಂಗೇರಿ ದೇಶದ ಬುಡಾಪೆಸ್ಟ್ ನಗರದ ಸಾಮಾನ್ಯ ಕುಟುಂಬದಲ್ಲಿ 21, ಜನೇವರಿ 1910 ರಂದು ಜನಸಿದ “ಕ್ಯಾರೋಲಿ ಟೆಕಾಕ್ಸ” ಅಂತಾ. ಬಡತನಕ್ಕೂ, ದೇಶಾಭೀಮಾನಕ್ಕೂ ಬಿಡದ ನಂಟು ಅನ್ನೋದು ಲೋಕಾಭಿರೂಡಿ ಮಾತು, ಹಾಗೇನೇ ಬಡತನದಲ್ಲೇ ಬೆಳೆದ ಕ್ಯಾರೋಲಿ ಕೂಡ ಆಯ್ಕೆ ಮಾಡಿಕೊಂಡಿದ್ದು ದೇಶ ರಕ್ಷಣೆಯ ಹೊಣೆಯೋತ್ತ ಸೈನಿಕನ ಕೆಲಸವನ್ನು. ಚಿಕ್ಕಂದಿನಿಂದಲೂ ಕೈಗುರಿ ಯಲ್ಲಿ ಚತುರನಾಗಿದ್ದ ಪೋರ, ಸೈನ್ಯ ಸೇರಿದ್ದೇ ತಡ ವೈಯಕ್ತಿಕ ಆಸಕ್ತಿ ಹಾಗೂ ಕಠೀಣ ತರಬೇತಿಯ ಫಲವಾಗಿ 25 ನೇ ವಯಸ್ಸಿಗೆ ತನ್ನ ಕೈಚಳಕದಿಂದಾಗಿ, ಇಡೀ ಹಂಗೇರಿ ಸೈನ್ಯದಲ್ಲಿಯೇ ಅತ್ಯಂತ ನಿಖರವಾಗಿ ಗುರಿಯಿಡುವ ಶೂಟರ್ ಅಂತ ಪ್ರಖ್ಯಾತಿ ಗಳಿಸಿ ಬಿಟ್ಟಿದ್ದ. ಈಗಿನಂತೆ ಪ್ರಬಲ ಪ್ರಚಾರದ ಮಾಧ್ಯಮಗಳಿಲ್ಲದ ಆ ಕಾಲಕ್ಕೂ ಯಾವ ಮಟ್ಟಕ್ಕೆ ಪ್ರಸಿದ್ದಿಯನ್ನು ಪಡೆದುಕೊಂಡಿದ್ದನೆಂದರೆ, ಮುಂಬರುವ ಒಲಂಪಿಕ್ಸನಲ್ಲಿ ಇವನಿಂದ ಹಂಗೇರಿಗೊಂದು ಬಂಗಾರದ ಪದಕ ಬಂದೆ ಬರುತ್ತದೆ ಎಂದು ಹಂಗೇರಿಯ ಜನರೆಲ್ಲ ಇವನ ಕೈಚಳಕದ ಬಗ್ಗೆನೇ ಮಾತಾಡಿ ಕೊಳ್ಳುವಂತೆ ಮಾಡಿ ಬಿಟ್ಟಿದ್ದ, ಹೀಗಾಗಿ ಸಹಜವಾಗಿಯೇ ಅವನ ಮನದಾಳದಲ್ಲಿ 1936 ರಲ್ಲಿ ನಡೆಯುವ ಒಲಂಪಿಕ್ಸನಲ್ಲಿ ಸ್ಪರ್ಧಿಸಬೇಕೆಂಬ ಆಸೆಯ ಮೊಳಕೆಯೊಂದು ಚಿಗುರೋಡೆದಿತ್ತು. ಆದರೇ ಹಂಗೇರಿ ಸೈನ್ಯದ ನಿಯಮಾವಳಿ ಪ್ರಕಾರ, ಕೇವಲ “ಕಮಿಸ್ಸೆನಡ್ ಆಫಿಸರ್ಸ” ಮತ್ತು ಅದಕ್ಕಿಂತ ಹೆಚ್ಚಿನ ಹುದ್ದೆಯಲ್ಲಿ ಇರುವಂತಹವರು ಮಾತ್ರ ಒಲಂಪಿಕ್ಸನಲ್ಲಿ ಸ್ಪರ್ಧಿಸಬಹುದಾಗಿತ್ತು, ಕ್ಯಾರೋಲಿ ಸೈನ್ಯದಲ್ಲಿ ಸೆರ್ಪೇಂಟ್(ಸಬ್ ಇನಸ್ಪೇಕ್ಟರ್) ಎಂಬ ಚಿಕ್ಕ ಹುದ್ದೆಯಲ್ಲಿ ಇದ್ದಿದ್ದರಿಂದಾಗಿ, ಮೇಲಾಧೀಕಾರಿಗಳು ಇವನ ಆಶೆಗೆ ತಣ್ಣಿರೆರಚಿ ಸ್ಪರ್ಧೆಗೆ ಸಾರಸಗಟಾಗಿ ನಿರಾಕರಿಸಿದರು.

1938 ರಲ್ಲಿ ಮಿಲಿಟರಿ ಕ್ಯಾಂಪನಲ್ಲಿ ನಡೆದ ಯುದ್ದದ ತರಬೇತಿ ಶಿಬಿರದಲ್ಲಿ “ಡಿಫ಼ೇಕ್ಟಿವ್ ಗ್ರಾನೈಡ್” ನ್ನು ಬಲಗೈಯಲ್ಲಿಡಿದು ಇನ್ನೇನು ಎಸೆಯಬೇಕೆನ್ನುವಷ್ಟರಲ್ಲಿ ಗ್ರಾನೈಡ್ ಸ್ಪೋಟಗೊಂಡು, ಬಲಗೈ ಸಂಪೂರ್ಣವಾಗಿ ಚಿದ್ರ-ಚಿದ್ರವಾಗಿತ್ತು, ಹಲವು ವರ್ಷಗಳ ಕಠೀಣ ಪರಿಶ್ರಮ ಮಣ್ಣು ಪಾಲಾದಂತಿತ್ತು, ಮೊಳಕೆ ಮರವಾಗುವ ಮೊದಲೇ ಬಾಡಿ ಹೊದಂತಾಗಿತ್ತು, ಆಕಾಶದೆತ್ತರದ ಕನಸಿನ ಗೋಪುರ ತಳಪಾಯದಲ್ಲಿಯೇ ಕುಸಿದಂತಾಗಿತ್ತು, ಯಾಕಂದ್ರೆ ಯಾವ ಕೈಚಳಕದಿಂದಾಗಿ ಇಡಿಯ ಹಂಗೇರಿಯಲ್ಲಿಯೇ ಮನೆ ಮಾತಾಗಿದ್ದನೋ ಈಗ ಆ ಕೈ ಇಲ್ಲದಾಗಿತ್ತು, ಒಂದು ತಿಂಗಳ ಚಿಕಿತ್ಸೆಯೂ ಫಲಕಾರಿಯಾಗದೇ ಕೊನೆಗೆ ತನ್ನ ಬಲಗೈಯನ್ನೇ ಕಳೆದುಕೊಂಡು, ಕಟ್ಟಿಕೊಂಡಿದ್ದ ದೊಡ್ಡ-ದೊಡ್ಡ ಕನಸುಗಳೆಲ್ಲ ನುಚ್ಚು ನೂರಾಗಿದ್ದವು.

ಸ್ವಾಮೀ ವಿವೇಕಾನಂದರು ಹೇಳಿರುವ ” ಏಳಿ, ಏದ್ದೇಳಿ ಯುವಕರೇ ಗುರಿ ಮುಟ್ಟುವ ತನಕ ನಿಲ್ಲದಿರಿ ” ಅನ್ನೋ ಮಾತುಗಳನ್ನು ಇವನು ಬಹುಷಃ  ಕೆಳಿಸಿಕೊಂಡಿದ್ದನೊ, ಏನೋ…! ತಾನು ಕಳೆದುಕೊಂಡಿರುವದರ (ಬಲಗೈ) ಬಗೆಗೆ ಯೋಚಿಸದೆ, ಈಗ ತನ್ನಲ್ಲಿ ಉಳಿದಿರುವದನ್ನು (ಎಡಗೈ) ಬಳಸಿ, ಹೇಗೆ ಗುರಿ ಸಾಧಿಸಬಹುದು ಎಂದು ಮನದಲ್ಲಿಯೇ ಯೋಚಿಸಿ, ತಕ್ಷಣ ಕಾರ್ಯೋನ್ಮುಖನಾಗಿ ಯಾರಿಗೂ ತಿಳಿಯದಂತೆ ಗುಪ್ತವಾಗಿ ಮತ್ತೆ ಒಂದು ವರ್ಷದ ಕಠೀಣ ತರಬೇತಿಯಲ್ಲಿ ನಿರತನಾಗುತ್ತಾನೆ, ಈ ಕಠೀಣ ತಾಲಿಮೂ ಅಷ್ಟು ಸುಲಭದ್ದಾಗಿರಲಿಲ್ಲ, ಯಾಕಂದ್ರೆ ಶೂಟಿಂಗ ಬಿಡಿ ಅದೂವರೆಗೂ ಅವನಿಗೆ ಎಡಗೈನಿಂದ ಬರೆಯೋದಕ್ಕೆ ಪೇನ್ ಹಿಡಿಯೋದಕ್ಕೂ ಬರ್ತಿರ್ಲಿಲ್ಲ ಅಂದ್ರೆ ಅವನ ಪರಿಸ್ಥಿತಿಯನ್ನೊಮ್ಮೆ ನೀವೇ ಊಹಿಸಿಕೊಳ್ಳಿ. ಮುಂದೆ 1939 ರಲ್ಲಿ ಒಂದಿನ ಹಂಗೇರಿ ರಾಷ್ಟೀಯ ಶೂಟಿಂಗ ತಂಡದ ಆಯ್ಕೆಗೆ ಎಲ್ಲಾ ಸ್ಪರ್ಧಿಗಳು ಸೇರಿರ್ತಾರೆ, ಇವನಲ್ಲಿ ಪ್ರತ್ಯಕ್ಷನಾಗಿರೋದು ಕಂಡು, ಒಂದೊಮ್ಮೆ ದೇಶದ ಜನರ ನಾಲಿಗೆಯ ಮೇಲೆ ನಲಿದಾಡಿದ್ದ ಕ್ಯಾರೋಲಿಯ ಇಂದಿನ ಪರಿಸ್ಥಿತಿಯನ್ನು ನೋಡಿ ಎಲ್ಲರೂ ಮಮ್ಮಲ ಮರಗಿ, ಇದು ಕ್ರೀಡಾ ಸ್ಪೂರ್ತಿ ಅಂದ್ರೆ, ತನ್ನ ಕೈ ಕಳ್ಕೊಂಡ್ರು ಉಳಿದ ಸ್ಪರ್ಧಿಗಳಿಗೆಲ್ಲ ಶುಭ ಹಾರೈಸಲು ಬಂದಿದ್ದಾನೆ ಅಂತಾ ಹೊಗಳಿದ್ದೆ ಹೊಗಳಿದ್ದು, ಆದರೆ ಸ್ಪರ್ಧೆ ಮುಗಿದಾದ ಮೇಲೆ ಉಳಿದೆಲ್ಲ ಸ್ಪರ್ಧಿಗಳೂ ಕ್ಯಾರೋಲಿಗೆ ಹಿಡಿಶಾಪ ಹಾಕಿದವರೇ, ಯಾಕಂದ್ರೆ ಕ್ಯಾರೋಲಿಯು ಬರೀ ಶುಭ ಹಾರೈಸುವ ಪ್ರೇಕ್ಷಕನಾಗಿರದೇ, ಅಲ್ಲಿರುವ ಸ್ಪರ್ಧಿಗಳಿಗೆ ಪ್ರತಿಸ್ಪರ್ಧಿಯಾಗಿ ತನ್ನ ಎಕೈಕ ಎಡಗೈನಿಂದಲೆ  ಸ್ಪರ್ಧಿಸಿ ಕೊನೆಗೆ ಎಲ್ಲರಿಗಿಂತಲೂ ಅತಿ ಹೆಚ್ಚಿನ ಅಂಕ ಪಡೆದು ದಾಖಲೆಯೊಂದಿಗೆ ಮೊದಲಿಗನಾಗಿ ಹಂಗೇರಿ ತಂಡದಲ್ಲಿ ಸ್ಥಾನ ಪಡೆಯುತ್ತಾನೆ, ಛಲ ಬಿಡದ ಪರಿಶ್ರಮ ಮತ್ತೆ ಕ್ಯಾರೋಲಿಯ ಕೈಹಿಡಿದಿತ್ತು, ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದೂ ಅಲ್ಲದೆನೇ, ಅದೇ ವರ್ಷ ಹಂಗೇರಿ ತಂಡ ವಿಶ್ವ ಶೂಟಿಂಗ ಸ್ಪರ್ಧೆನಲ್ಲಿ (UIT World  Shooting Championship) ಚಾಂಪಿಯನ್ ಸ್ಥಾನವನ್ನೂ ಸಹ ಅಲಂಕರಿಸುತ್ತೆ.

ಆದರೆ ವಿಧಿಯಾಟ ಅಂದ್ರೆ ಹೇಗಿರುತ್ತೆ ನೋಡಿ, ಎಲ್ಲಾ ಸಿದ್ದತೆಗಳೊಂದಿಗೆ ಕನಸನ್ನು ನನಸಾಗಿಸುವ ಅವಕಾಶಕ್ಕಾಗಿ ಕಾಯುತ್ತಿರುವಾಗಲೇ ಆಘಾತಕಾರಿ ಸುದ್ದಿಯೊಂದು ಬರ ಸಿಡಿಲಿನಂತಹ ಬಂದೆರಗಿತ್ತು, ಅದೇನೆಂದರೇ 1940 ರಲ್ಲಿ ಜಪಾನಿನ ಟೋಕಿಯೋದಲ್ಲಿ ನಡೆಯಬೇಕಿದ್ದ ಒಲಂಪಿಕ್ ಪಂದ್ಯಾಟಗಳು 2 ನೇಯ ಮಹಾಯುದ್ದದಿಂದಾಗಿ ರದ್ದುಗೊಂಡಿದ್ದವು, ಬಾಯಿಗೆ ಬರಬೇಕಾಗಿದ್ದ ತುತ್ತೊಂದು ಕೈಚೆಲ್ಲಿ ಹೋಗಿತ್ತು, ಆದರೆ ಗುರಿ ಸಾಧನೇಯ ಛಲ ಕಡಿಮೆಯಾಗಿರಲಿಲ್ಲ, ಸೈನ್ಯದ ಕೆಲಸ ಕಾರ್ಯಗಳ ಅತೀವ ಒತ್ತಡದಲ್ಲೂ, “Try until you get succeed” ಅನ್ನೋ ತರ, ಆತ್ಮ ವಿಶ್ವಾಸದೊಂದಿಗೆ ಸತತ ಪ್ರಯತ್ನಿಯಾಗಿ ಮುಂಬರುವ ಅವಕಾಶಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಾ, ಕಠಿಣ ಅಭ್ಯಾಸ ಮುಂದೆವರೆಸಿರುವಾಗಲೇ ಮತ್ತೋಂದು ಮರ್ಮಾಘಾತದ ಸುದ್ದಿಯೊಂದು ಎದೆಗಪ್ಪಳಿಸಿತ್ತು, ಅದೆನೆಂದರೇ 1944 ರಲ್ಲಿ ಲಂಡನ್ ದಲ್ಲಿ ನಡೆಯಬೇಕಿದ್ದ ಒಲಂಪಿಕ್ ಪಂದ್ಯಾಟಗಳು ಕೂಡಾ ೨ನೇಯ ಮಹಾಯುದ್ದದ ಪರಿಣಾಮವಾಗಿ ರದ್ದುಗೊಂಡಿದ್ದವು. ಈ ಸಂಧರ್ಭದಲ್ಲಿ ಕ್ಯಾರೋಲಿ ಪರಿಸ್ಥಿತಿ ಹೇಗಿತ್ತೆಂದರೆ, ಗಾಯದ ಮೇಲೆ ಬರೆ ಎಳದಂತ್ತಾಗಿತ್ತು, ಉರಿಯೋ ಬೆಂಕಿಗೆ ತುಪ್ಪ ಸುರಿದಂತಾಗಿತ್ತು, ಅವಕಾಶಗಳಿಗೆ ಕೊಡಲಿ ಪೆಟ್ಟು ಬಿದ್ದು ಜೀವನವೇ ಬೇಡವೆಂದೆನಿಸಿತ್ತು. ಮನಸ್ಸು ಮಾತ್ರ ಚಿರಯುವಕನಂತಿದ್ದರೂ, ದೇಹದ ವಯಸ್ಸು ವೃದ್ಧಿಸಿ ವಯೋ ಸಹಜ ಸಮಸ್ಯೆಗಳು ಹೆಗಲೇರಿದ್ದವು, ಇಷ್ಟೆಲ್ಲ ಆದ್ರೂ ಛಲ ಮಾತ್ರ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ, ಮುಂದಿನ ಒಲಂಪಿಕ್ಸಗಾಗಿ ಹಂಗೇರಿ ತಂಡದಲ್ಲಿನ ಸ್ಥಾನಕ್ಕಾಗಿ 38 ವರ್ಷದ ಕ್ಯಾರೋಲಿ ನವಯುವಕರೋಂದಿಗೆ ಸ್ಪರ್ಧೆಗಿಳಿದು ಸ್ಥಾನ ಗಿಟ್ಟಿಸಿಕೊಂಡನು, ಮುಂದೆ 1948 ರಲ್ಲಿ ಲಂಡನ್ ಒಲಂಪಿಕ್ಸನಲ್ಲಿ “25 ಮೀಟರ್ ರಾಪಿಡ್ ಫೈರ್ ಪಿಸ್ತೂಲ್” ಸ್ಪರ್ದೆಯಲ್ಲಿ ಜಗತ್ತಿನ ಹೆಸರಾಂತ ಖ್ಯಾತನಾಮ ಶೂಟರಗಳೋಂದಿಗೆ ಸ್ಪರ್ಧಿಸಿ “ವಿಶ್ವ ದಾಖಲೆ”ಯೊಂದಿಗೆ ವಿಜೇತರಾಗಿ ಸ್ವರ್ಣ ಪದಕವನ್ನು ಮುಡಿಗೇರಿಸಿಕೊಂಡೆ ಬಿಟ್ಟ…..! ಸುಮಾರು ವರ್ಷಗಳ ಕನಸು ಅವತ್ತು ನನಸಾಗಿತ್ತು, ಕಠಿಣ ಪರಿಶ್ರಮ, ಬೆಂಬಿಡದೆ ಬೆನ್ನತ್ತಿದ ಛಲ, ಆತ್ಮ ವಿಶ್ವಾಸಗಳು ಫಲ ನೀಡಿದ್ದವು, ಕ್ಯಾರೋಲಿಯ ಕಣ್ಣಂಚಿನ ಆನಂದ ಬಾಷ್ಪ ವಿಶ್ವಕ್ಕೊಂದು ಸ್ಪೂರ್ತಿಯ ಸಂದೇಶ ರವಾನಿಸಿದಂತಿತ್ತು. ಇಷ್ಟಕ್ಕೂ ತೃಪ್ತನಾಗದ ಕ್ಯಾರೋಲಿ ಮುಂದೆ 1952 ರ ಫಿನ್’ಲ್ಯಾಂಡಿನ ಹೆಲ್ಸಿಂಕಿ ಒಲಂಪಿಕ್ಸನಲ್ಲಿಯೂ ಮತ್ತೊಮ್ಮೆ ಬಂಗಾರದ ಪದಕಕ್ಕೆ ಕೊರಳೊಡ್ದಿದ್ದ, ಹೀಗೆ ಆ ಕಾಲಕ್ಕೆ ಒಲಂಪಿಕ್ಸನಲ್ಲಿ ಶೂಟಿಂಗನ ಒಂದೇ ಸ್ಪರ್ಧೆಯಲ್ಲಿ ಸತತವಾಗಿ 2 ಸ್ವರ್ಣ ಪದಕ ಪಡೆದ ವಿಶ್ವದ ಎಕೈಕ ಮತ್ತು ಮೊದಲ ಕ್ರೀಡಾಳು ಅಂತ ಇತಿಹಾಸದ ಪುಟಗಳಲ್ಲಿ ದಾಖಲಾಗಿಬಿಟ್ಟ ಕ್ಯಾರೋಲಿ.

ಛಲ, ಸಾಧಿಸುವ ಹಠ, ದೈರ್ಯ, ಪರಿಶ್ರಮ, ಆತ್ಮ ವಿಶ್ವಾಸಗಳ ಜೋತೆಗೆ ಮನಸ್ಸೊಂದಿದ್ದರೆ, ಸಾಧನೆಗೆ ವಯಸ್ಸು, ಅಂಗವೈಪಲ್ಯಗಳು ಮಾನದಂಡಗಳೆನಿಸುವದೆ ಇಲ್ಲ, ಇಂತಹ ವೀರನ ಛಲವೊಂದು ನಮ್ಮ ಭಾರತೀಯ ಕ್ರೀಡಾಳುಗಳಿಗೆ ಸ್ಪೂರ್ತಿಯ ದಾರಿ ದೀಪವಾಗಿ ಈಗಾಗಲೇ ಆರಂಭಗೊಂಡಿರುವ “ರೀಯೋ ಒಲಂಪಿಕ್ಸ” ನಲ್ಲಿ ಹೆಚ್ಚೆಚ್ಚು ಸಾಧನೆ ಮಾಡಿ ಭಾರತಾಂಬೆಯ ಕೀರ್ತಿ ಪತಾಕೆ ಹಾರಿಸಲಿ.

All the best Team India.

-ಪರಪ್ಪ ಶಾನವಾಡ,

shapashri@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!