“ನಾನು ಹೋಗೋ ಎಲ್ಲ ಚಾರಣಗಳಲ್ಲೂ, ನನ್ನೊಂದಿಗಿನ ಉಳಿದ ಚಾರಣಿಗರ ಸರಾಸರಿ ವಯಸ್ಸು ನನ್ನ ವಯಸ್ಸಿನ ಅರ್ಧಕ್ಕಿಂತ ಕಡಿಮೆ!” – ಹೆಮ್ಮೆಯಿಂದ ಹೀಗಂತಾರೆ ಮುಂಬೈಯ ಶ್ರೀಯುತ ದೀಪಕ್ ಪೈ ಅವರು. ಮಣಿಪಾಲದಲ್ಲಿ ಇಂಜಿನಿಯರಿಂಗ್ ಕಲಿತು ಮುಂಬೈಯಲ್ಲಿ ಜೀವನ ಸಾಗಿಸುತ್ತಿರುವ ಪೈ-ಮಾಮು ಅವರ ವಯಸ್ಸು 56. ಕಳೆದ ಏಳೆಂಟು ವರ್ಷಗಳಲ್ಲಿ ಅದಾಗಲೇ 5ಕ್ಕಿಂತ ಹೆಚ್ಚು ಬಾರಿ ಹಿಮಾಲಯಕ್ಕೆ ಚಾರಣ ಹೋಗಿರುವ ಇವರ ಉತ್ಸಾಹ ಈಗಿನ ಯುವಕರಲ್ಲಿ ಭೂತಕನ್ನಡಿ ಹಿಡಿದು ಹುಡುಕಿದರೂ ಸಿಗದು.
ಮೂಲತಃ ಉಡುಪಿಯವರಾದರೂ ಮುಂಬೈಯಲ್ಲಿಯೇ ಹುಟ್ಟಿ ಬೆಳೆದು ಇಂಜಿನಿಯರಿಂಗ್ ಕಲಿಯಲು 1977ರಲ್ಲಿ ಆಗ ಮೈಸೂರು ವಿಶ್ವವಿದ್ಯಾನಿಲಯದ ಮಣಿಪಾಲ್ ಇಂಜಿನಿಯರಿಂಗ್ ಕಾಲೇಜು (ಈಗ ಮಣಿಪಾಲ್ ವಿಶ್ವವಿದ್ಯಾನಿಲಯ) ಸೇರಿದರು. ಆಗ ಮಹಾರಾಷ್ಟ್ರದಲ್ಲಿ ಕೆಲವೇ ತಾಂತ್ರಿಕ ಕಾಲೇಜುಗಳಿದ್ದು 12ನೆಯ ತರಗತಿಯಲ್ಲಿನ ಸಾಧಾರಣ ಫಲಿತಾಂಶವು ತನ್ನ ತವರೂರಾದ ದಕ್ಷಿಣ ಕನ್ನಡದೆಡೆಗೆ ಪೈ ಅವರನ್ನು ಎಳೆದು ತಂದಿತ್ತು. ವಾರ್ಷಿಕ 15000 ರೂಪಾಯಿ ತೆತ್ತು ಡೊನೇಶನ್ ಸೀಟು ಪಡೆದ ಪೈ ತರಗತಿಯಲ್ಲಿ ಸರಾಸರಿ ವಿದ್ಯಾರ್ಥಿಯೇ ಆಗಿದ್ದರು. ಅವರೇ ಹೇಳುವಂತೆ – “ಆಗ ಮಣಿಪಾಲದಲ್ಲಿ ಎಲ್ಲ ಅಧ್ಯಾಪಕರೂ ಕಾಲೇಜು ಕ್ಯಾಂಪಸ್ಸಿನಲ್ಲಿಯೇ ಇರಬೇಕೆಂಬ ನಿಯಮವಿತ್ತು. ಯಾವ ವಿದ್ಯಾರ್ಥಿಯಾದರೂ ಯಾವುದೇ ಹೊತ್ತಿಗಾದರೂ ಯಾವುದೇ ಅಧ್ಯಾಪಕರ ಮನೆಯ ಬಾಗಿಲು ಬಡಿದು ತನ್ನ ಸಂಶಯ ನಿವಾರಣೆ ಮಾಡಿಕೊಳ್ಳಬಹುದಾಗಿತ್ತು. ಈ ಒಂದು ನಿಯಮ ಎಲ್ಲ ವಿದ್ಯಾರ್ಥಿಗಳನ್ನೂ ಚೆನ್ನಾಗಿ ಕಲಿಯುವಂತೆ ಮಾಡಿತು ಹಾಗೂ ಇಂದು ನಾವು ಏನಾಗಿದ್ದೇವೆ ಎನ್ನುವುದಕ್ಕೂ ಇದೇ ಕಾರಣ” ಎನ್ನುತ್ತಾರೆ.
ಮಣಿಪಾಲದ ಓದಿನ ಸಮಯ ಪೈ ಅವರ ಜೀವನದಲ್ಲಿ ಹೊಸ ತಿರುವನ್ನು ನೀಡಿತ್ತು. 1977ರಲ್ಲಿಯೇ ಪೈ ಅವರು ತನ್ನ ಸೈಕಲ್’ನೊಂದಿಗೆ ತಿರುಗಾಟ ಆರಂಭಿಸಿದರು, ಅದೂ ಒಬ್ಬಂಟಿಯಾಗಿ! “ಒಬ್ಬನೇ ಹೋದ ಒಂದು ತಿರುಗಾಟದ ಯಾನದಲ್ಲಿ ಒಮ್ಮೆ ಪೋಲಿಸ್ ಒಬ್ಬ ನನ್ನನ್ನು ಹಿಡಿದು ಸೈಕಲ್ ಕಳ್ಳನೆಂದು ತಿಳಿದು ಜೋರಾಗಿಯೇ ವಿಚಾರಿಸಿದ. ಅದೇ ಕ್ಷಣದಲ್ಲಿ, ಆ ಸೈಕಲ್ ಅನ್ನು ಬಸ್ಸಿನಲ್ಲಿ ತೆಗೆದುಕೊಂಡು ಮಣಿಪಾಲಕ್ಕೆ ಹಿಂದಿರುಗಿದೆ. ಆದರೆ, ಅಂತಹ ಸನ್ನಿವೇಶ ಮರುಕಳಿಸದಂತೆ ನನ್ನ ಮುಂದಿನ ಮಣಿಪಾಲ-ಕನ್ಯಾಕುಮಾರಿ-ಬೆಂಗಳೂರು ತಿರುಗಾಟದಲ್ಲಿ ನಾನು ಹೋದ ಪ್ರತಿಯೊಂದು ಊರಿನಲ್ಲಿರುವ ಪೋಲಿಸ್ ಠಾಣಿಗೆ ಹೋಗಿ ಅಲ್ಲಿನ ಪ್ರಭಾರಿಯಿಂದ ‘ದೀಪಕ್ ಪೈ ಎಂಬ ಈತ ಈ ದಿನಾಂಕದಂದು ಸೈಕಲ್ ಮೂಲಕ ಈ ಊರಿನ ಮೂಲಕ ಪ್ರಯಾಣಿಸಿದ್ದಾನೆ’ ಎಂದು ಸಹಿ ಪಡೆದೆ. ಆದರೆ ಈ ಹೊತ್ತಿಗಾಗಲೇ ಸಾಕಷ್ಟು ಮಾಧ್ಯಮ ಮಿತ್ರರು ತಂತಮ್ಮ ಪತ್ರಿಕೆಗಳ ಮೂಲಕ ಎಲ್ಲೆಡೆ ನನ್ನ ಪ್ರಯಾಣದ ವಿಷಯವನ್ನು ತಲುಪಿಸಿದ್ದರಿಂದ ಕೆಲವೆಡೆ ಜನರಿಂದ ಭರ್ಜರಿ ಸ್ವಾಗತವೇ ಸಿಕ್ಕಿತ್ತು. ಇಂತಹ ಅದೆಷ್ಟೋ ಸೈಕಲ್ ಪ್ರಯಾಣ ಮಾಡಿದ್ದೇನೋ ಲೆಕ್ಕವೇ ಇಲ್ಲ” ಎನ್ನುತ್ತಾ ತನ್ನ ನೆನಪಿಗೋಸ್ಕರ ಪತ್ರಿಕಾ ಲೇಖನಗಳ ಸಂಗ್ರಹ ತೋರಿಸುತ್ತಾರೆ ದೀಪಕ್.
ಮಣಿಪಾಲದಲ್ಲಿ ಓದುತ್ತಿದ್ದಾಗಲೇ ತನ್ನ ಮಣಿಪಾಲದ ನೆರೆಮನೆಯವರನ್ನು ಪ್ರೀತಿಸಿ ಮದುವೆಯಾದ ಪೈ-ಮಾಮು 1983ರ ತನಕ ತನ್ನ ಸಾಹಸಗಳನ್ನು ನಿಲ್ಲಿಸಿದ್ದೇ ಇಲ್ಲ. ಎಸ್ಕಾರ್ಟ್ಸ್-ರಾಜದೂತ್ ಎಂಬ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದರೂ ತನ್ನ ಅಜ್ಜನ ಸಣ್ಣ ವ್ಯಾಪಾರವನ್ನು ಮುಂದುವರೆಸಿದರು. ಈಗಲೂ ಕೂಡ ತನ್ನದೇ ಸಣ್ಣ ಕಾರ್ಯಾಗಾರ(workshop)ದಲ್ಲಿ ಏಕೈಕ ಇಂಜಿನಿಯರ್ ಆಗಿ ದಿನಪೂರ್ತಿ ದುಡಿಯುತ್ತಾರೆ. ಕೆಲವು ವರ್ಷಗಳಿಂದ ಮಗನೂ ವ್ಯಾಪಾರದಲ್ಲಿ ಕೈಜೋಡಿಸಿರುವುದರಿಂದ ಅಷ್ಟೇನೂ ಕಷ್ಟವಾಗುತ್ತಿಲ್ಲ ಎನ್ನುತ್ತಾರೆ ಪೈ. ಸುಮಾರು 20 ವರ್ಷಗಳ ನಂತರ 2003ರಲ್ಲಿ ಸಾಹಸಯಾತ್ರೆಗಳನ್ನು ಪುನರಾರಂಭಿಸಿದ ಪೈ ನಂತರ ಹಿಂತಿರುಗಿ ನೋಡಿದ್ದೇ ಇಲ್ಲ. 2003ರಲ್ಲಿ ಅಮರನಾಥ ಯಾತ್ರೆಗೆ ಹೋದ ಅವರು 2006ರಲ್ಲಿ ಎಲ್ಲ ಹನ್ನೆರಡು ಜ್ಯೋತಿರ್ಲಿಂಗಗಳ ದರ್ಶನ ಮಾಡಿದರು. ನಂತರ ತೀರ್ಥ ಕ್ಷೇತ್ರಗಳ ದರ್ಶನ ತೀವ್ರಗೊಳಿಸಿದ ಅವರು ಚಾರಣಪ್ರಿಯರೂ ಆದರು. ಹಿಮಾಲಯದ ಓಂ ಪರ್ವತ-ಆದಿ ಕೈಲಾಸ, ಮಾನಸ ಸರೋವರ, ಕೈಲಾಸ ಇತ್ಯಾದಿ ಚಾರಣಗಳನ್ನು ಈಗಾಗಲೇ ಪೂರ್ತಿಗೊಳಿಸಿದ್ದಾರೆ.
ಪ್ರತಿ ವರ್ಷ ಮುಂಬೈಯ ಸಮೀಪವಿರುವ ಭೀಮಾ ಶಂಕರಕ್ಕೆ ಚಾರಣ ಹೋಗುವ ಪೈ ಮುಂದಾಳತ್ವದ ತಂಡವು ಈಗ ಪ್ರತಿ ವರ್ಷ ಅಮರನಾಥ ಯಾತ್ರೆಗೂ ಹೋಗುತ್ತಿದೆ. “ನಾನು ಶಿವಭಕ್ತ. ಕಲಿಯುಗದಲ್ಲಿ ಅವನು ನಮ್ಮನ್ನು ಬಹು ಬೇಗ ತಲುಪುತ್ತಾನೆ” ಎನ್ನುತ್ತಾರೆ ಪೈಗಳು. ಪ್ರತಿ ವರ್ಷ ಶಿವರಾತ್ರಿಯಂದು ಸುಮಾರು 500 ಲೀಟರಿನಷ್ಟು ಹಾಲು ಖರೀದಿಸಿ ಮುಂಬೈಯ ಹೃದಯ ಭಾಗದಲ್ಲಿರುವ ಬಾಬುಲನಾಥ ದೇವಾಲಯದ ಭಕ್ತರಿಗೆ ಬೆಳಗ್ಗಿನಿಂದ ಸಂಜೆಯವರೆಗೂ ಚಹಾ ವಿತರಿಸುತ್ತದೆ ಪೈ ಮುಂದಾಳತ್ವದ ತಂಡ.
ಅಂದ ಹಾಗೆ ದೀಪಕ್ ಪೈ ನನಗೆ ಸಿಕ್ಕಿದ್ದು ಮಹಾರಾಷ್ಟ್ರದ ಅತ್ಯುನ್ನತ ಶಿಖರವಾದ ಕಳಸೂಬಾಯಿ ಚಾರಣಕ್ಕೆ ಹೋಗಿದ್ದಾಗ. “ನನ್ನ ವಯಸ್ಸಿನ ಮಿತ್ರರು ಯಾರೂ ಚಾರಣದಲ್ಲಿ ಆಸಕ್ತರಿಲ್ಲ. ಆದರೆ, ನಾನಂತೂ ಪ್ರತಿ ವಾರ ಹೋಗಿಯೇ ಹೋಗುತ್ತೇನೆ” ಎನ್ನುವ ಪೈಗಳ ವಯಸ್ಸು 56! ಈಗಿನ ಯುವ ಜನತೆ ಒಂದೆರಡು ಕಿಲೋಮೀಟರ್ ನಡೆಯಲೂ ಸೋಮಾರಿಯಾಗಿರುವಾಗ ಪೈಗಳು ಮಾದರಿಯಾಗಿ ಕಾಣುತ್ತಾರೆ. ಹಾಗೆಂದು ಅವರಿಗೆ ದಣಿವಾಗುವುದಿಲ್ಲವೇ? ಹಾಗೆಂದು ಕೇಳಿದಾಗ ಅವರೆನ್ನುತ್ತಾರೆ-”ಶಕ್ತಿ ದೃಢ ನಿಲುವಿನಿಂದ ಬರುತ್ತದೆ. ದೇಹ ಕೆಲವು ಬಾರಿ ಮನಸ್ಸಿಗೆ ಜೊತೆಯಾಗದಿರಬಹುದು. ನನ್ನ ಕಾಲೂ ಕೂಡ ಉಳುಕಿತು ಮೆಟ್ಟಿಲು ಹತ್ತುವಾಗ. ಹಾಗೆಂದು ನಾನು ಅಲ್ಲೇ ಕೂತರಾಯಿತೇ? ಸಣ್ಣ ವಿರಾಮವನ್ನು ತೆಗೆದುಕೊಂಡು ಮುಂದುವರೆಸಿದೆ. ನಾನು ಮುಂದುವರೆಸಿದರೆ ಸಹ-ಚಾರಣಿಗರಿಗೆ ನನ್ನನ್ನು ನೋಡಿ ಒಂದು ರೀತಿಯ ಉತ್ಸಾಹ ಬರುತ್ತದೆ. ನಾನ್ಯಾವುದೇ ಕಾರಣಕ್ಕೂ ನನ್ನ ನೋವನ್ನು ತೋರಿಸಿಕೊಳ್ಳುವುದಿಲ್ಲ”.
“ನಿಮ್ಮ ಜೀವನದಲ್ಲಿ ನೀವು ನೋಡಬೇಕಾದದ್ದು ಬಹಳಷ್ಟಿದೆ. ಆನಂದಿಸಿ”- ಎಂದು ಕಿರುನಗೆ ಬೀರುತ್ತಾರೆ!
ಅಂದ ಹಾಗೆ ದೀಪಕ್ ಪೈ ಈಗ ಮೂರು ವಾರದ ಕಿನ್ನರ್-ಶ್ರೀಖಂಡ್ ಕೈಲಾಸ ಚಾರಣ ಕೈಗೊಂಡಿದ್ದಾರೆ. ಅವರ ಉತ್ಸಾಕ್ಕೊಂದು ನಮನ!