ಅಂಕಣ

ಮಾನವ ಹಕ್ಕುಗಳು ದೇಶವನ್ನು ಒಡೆಯಲು ಅಧಿಕೃತ ಪರವಾನಿಗೆಯೇ?

ಅಮ್ನೆಸ್ಟಿ ಇಂಟರ್-ನ್ಯಾಷನಲ್ ಮಾನವ ಹಕ್ಕುಗಳ ಕುರಿತಾದ ಒಂದು ಕಾರ್ಯಕ್ರಮ ಹಮ್ಮಿಕೊಂಡಿತ್ತು.ಅದು ಜೆ.ಎನ್.ಯು.ನಲ್ಲಿ ಸಾಂಸ್ಕೃತಿಕ ಸಮ್ಮೇಳನದ ಹೆಸರಲ್ಲಿ ನಡೆದ ಉಗ್ರನ ಗುಣಗಾನ ಕಾರ್ಯಕ್ರಮದ ಪರ್ಯಾಯ ರೂಪವಷ್ಟೆ. ಜಮ್ಮು ಕಾಶ್ಮೀರದ ಬುರ್ಹಾನ್ ವನಿಯ ಅಂತ್ಯಗೊಳಿಸಿದ ನಂತರ ನಡೆದ ಪ್ರತ್ಯೇಕತಾವಾದದ ಕೂಗು, ಪ್ರತಿಭಟನೆ, ಕಲ್ಲು ತೂರಾಟದ ವಿರುದ್ಧ ಸೈನಿಕರ ಪ್ರತಿರೋಧ, ಮಾನವ ಹಕ್ಕುಗಳ ಉಲ್ಲಂಘನೆ, ಭಾರತೀಯ ಸೈನಿಕರು ಅಮಾಯಕರ ಅಂತ್ಯಕ್ಕೆ ಕಾರಣವಾದುದರಲ್ಲದೇ, ಕಾಶ್ಮೀರದ ಹೆಣ್ಣು ಮಕ್ಕಳ ಅತ್ಯಾಚಾರವೆಸಗಿದ್ದಾರೆ ಎಂಬುದೇ ಈ ಕಾರ್ಯಕ್ರಮದ ಸಾರಾಂಶ. ತದನಂತರ ನಡೆದ ಚರ್ಚಾಗೋಷ್ಟಿಯಲ್ಲಿ ಕಾಶ್ಮೀರಿ ಪಂಡಿತರಿಗೆ ಮತ್ತು ಇನ್ನಿತರಿಗೆ ವಾಗ್ವಾದಗಳಾಗಿವೆ.ಕಾಶ್ಮೀರಿ ಪಂಡಿತರು ಭಾರತ ಮಾತಾಕಿ ಜೈ,ವಂದೇ ಮಾತರಂ ಎಂಬ ಘೋಷಣೆ ಕೂಗಿದರೆ ಅತ್ತಕಡೆಯಿಂದ ಆಜಾದಿಯ ಕೂಗುಗಳು ಶುರುವಾದವು. ಕೂಡಲೇ ಅ.ಭಾ.ವಿ.ಪ ಸಂಘದವರು,ಕಾಶ್ಮೀರಿ ಪಂಡಿತರು ಸೇರಿ ಕಾರ್ಯಕ್ರಮ ಸ್ಥಗಿತಗೊಳಿಸಿದ್ದಾರೆ.

ಉಗ್ರ ಬುರ್ಹಾನ್ ಇವರ ಪಾಲಿಗೆ ದೇವರು.ಅವನೊಬ್ಬ ಅಮಾಯಕ.ಮಾನವ ಹಕ್ಕುಗಳ ಬಗ್ಗೆ ನೀವು ಮಾತಾಡುತ್ತೀರಲ್ಲ. ಹಾಗೆಂದರೆ ಏನು ? ಆ ಹಕ್ಕುಗಳು ದೇಶವನ್ನು ಒಡೆಯಲು ಬಳಸುವುದು ಸರಿಯೇ? ಕಾಶ್ಮೀರವನ್ನು ಬಿಟ್ಟು ಕೊಡಿ ಎನ್ನಲು ಅದೇನು ಅವರ ಪಿತ್ರಾರ್ಜಿತ ಆಸ್ತಿಯೇ? ಇದೇ ತರಹದ ಘಟನೆಗಳು ದೇಶದೆಲ್ಲೆಡೆ ಕಂಡು ಬರುತ್ತಾ ಹೋದರೆ ಈಗ ಲಾಠಿ ಬೀಸುತ್ತಿರುವ ಪೋಲಿಸರೇ ಕೈ ಕಟ್ಟಿ ಕೂರಬೇಕಾಗಿತ್ತದೆ.ಕಾನೂನು ಸುವ್ಯವಸ್ಥೆ ಇರುವುದು ದೇಶ ಸಮಾಜದ ರಕ್ಷಣೆಗೇ ಅಲ್ಲವೇ?

ಇಂಥ ಒಂದು ಕಾರ್ಯಕ್ರಮಕ್ಕೆ ಪೋಲೀಸರ ರಕ್ಷಣೆಯೂ ಇತ್ತು!  ಅವತ್ತಿನಿಂದಲೇ ಅ.ಭಾ.ವಿ.ಪ ಕಾರ್ಯಕರ್ತರ ಪ್ರತಿಭಟನೆ ಶುರುವಾಯಿತು. ಪ್ರತಿಭಟನೆಗೆ ನಿಂತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರನ್ನು ಬಂಧಿಸಿದರು. ಪ್ರಕರಣ ನಡೆದು ಎರಡು ಮೂರು ದಿನವಾದರೂ ಆ ಕಾರ್ಯಕ್ರಮ ಆಯೋಜಿತರ ಮೇಲೆ ಕ್ರಮ ಕೈಗೊಂಡಿಲ್ಲ. ನೆಪ ಮಾತ್ರಕ್ಕೆ FIR ದಾಖಲಿಸಿಕೊಂಡು ಸುಮ್ಮನಾಗಿದೆ. ಕಾರ್ಯಕ್ರಮದ ವಿಡಿಯೋ ತರಿಸಿಕೊಂಡು ತನಿಖೆ ಮಾಡುತ್ತೇವೆ ಅಂದಿದೆ. ಅದರ ವಿಡಿಯೋವನ್ನು ಮೂರು ದಿನಗಳಗಟ್ಟಲೇ ನೋಡೋಕೆ ಅದೇನು ಯಾವುದಾದರೂ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನದ ಸಿ.ಡಿ.ಯೇ ಅಥವಾ ಯಾರದಾದರೂ ಆರತಕ್ಷತೆ ಸಿ.ಡಿಯೇ? ಒಂದು ಕಾರ್ಯಕ್ರಮದ ಬಗ್ಗೆ ಇಷ್ಟೊಂದು ಪ್ರತಿರೋಧ ಕಂಡು ಬರುತ್ತಿದ್ದ ಹಾಗೇ ಅದರಲ್ಲಿ ಭಾಗಿಯಾದವರನ್ನು ಬಂಧಿಸದಷ್ಟು ಪೋಲಿಸ್ ವ್ಯವಸ್ಥೆ ಶಕ್ತಿಹೀನವಾಯಿತೆ? ನೀವು ಪರಿಷತ್ತಿನ ಸದಸ್ಯರನ್ನು ಬಂಧಿಸುವ ಮುನ್ನ ಕಾರ್ಯಕ್ರಮ ಆಯೋಜಕರನ್ನು ಬಂಧಿಸಬೇಕು ಎಂದು ತಿಳಿಯಲಿಲ್ಲವೆ? ಅಷ್ಟಕ್ಕೂ ಪ್ರಕರಣವನ್ನು ಈ ರೀತಿ ಅಸಡ್ಡೆಯಿಂದ ನೋಡೋಕೆ ಅದೇನು ಯಾರೋ ಒಬ್ಬ ಲೈಸನ್ಸ್ ಇಲ್ಲದೇ ಬೈಕ್ ಓಡಿಸಿದಷ್ಟು ಸಣ್ಣ ವಿಷಯವೇ ?

ಆಗಷ್ಟ ೧೬ರ ಬೆಳಿಗ್ಗೆ FIR ದಾಖಲೆ ಮಾಡುವುದಷ್ಟೇ ಅಲ್ಲ. ಅವರನ್ನು ಬಂಧಿಸಿ ಎಂದು ಶಾಂತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿ ಪರಿಷತ್ ಸದಸ್ಯರ ಮೇಲೆ ಲಾಠಿ ಪ್ರಹಾರ ಮಾಡಿ ಬಂಧಿಸಿದಿರಲ್ಲ? ಮಾನವ ಹಕ್ಕುಗಳು ಆಜಾದಿಯೆಂದು ಕೂಗುವ ಕಾಶ್ಮೀರಿಗಳಿಗಷ್ಟೆ ಸೀಮಿತವೇ, ದೇಶದ ಪರವಾಗಿ ಘೋಷಣೆ ಕೂಗಿದವರಿಗೆ ಅನ್ವಯಿಸುವುದಿಲ್ಲವೇ? ಕಾರ್ಯಕ್ರಮಕ್ಕೆ ರಕ್ಷಣೆ ಕೊಡಲು ಹೋದಾಗ ನಿಮ್ಮ ಕೈಯಲ್ಲಿ ಲಾಠಿ ಇರಲಿಲ್ಲವೆ?ಅಂದರೆ ನಿಮ್ಮ ಲಾಠಿ ದೇಶದ್ರೋಹಿಗಳ ಪರವಾಗಿದೆಯೇ? ಪರಿಷತ್ತಿನ ಸದಸ್ಯರು ಬೇಡಿಕೆಯಲ್ಲಿ ಇರುವ ತಪ್ಪಾದರೂ ಏನು? ಇಂಥ ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದ ಅಮ್ನೇಸ್ಟಿ ಇಂಟರ್-ನ್ಯಾಷನಲ್ ಮೇಲೆ ನಿಷೇಧ ಹೇರಬೇಕು. ಈ ಕಾರ್ಯಕ್ರಮಕ್ಕೆ ಅವಕಾಶ ಕೊಟ್ಟಿದ್ದ ದಿ ಯುನೈಟೆಡ್ ಥಿಯೋಲಾಜಿಕಲ್ ಕಾಲೇಜ್ ಬಗ್ಗೆಯೂ ಸಂಪೂರ್ಣ ತನಿಖೆಯಾಗಬೇಕು. ಅ.ಭಾ.ವಿ.ಪ ಕಾರ್ಯಕರ್ತೆ ತನ್ಮಯೀಯವರು ಹೇಳುವಂತೆ ಇದೇ ತರಹದ ಕಾರ್ಯಕ್ರಮಗಳನ್ನು ದೇಶದ ಬೇರೆಡೆಗಳಲ್ಲಿ ಸಂಸ್ಥೆ ಹಮ್ಮಿಕೊಂಡಿದೆ ಅವುಗಳನ್ನು ರದ್ದುಗೊಳಿಸಬೇಕು. ಅ.ಭಾ.ವಿ.ಪ.ದವರ ಈ ಬೇಡಿಕೆಗಳಲ್ಲಿರುವ ತಪ್ಪಾದರೂ ಏನು? ಶಾಂತ ರೀತಿಯಲ್ಲಿ ಪ್ರತಿಭಟಿಸುತ್ತಿರುವವರನ್ನು ಮನ ಬಂದಂತೆ ಥಳಿಸಿದರಲ್ಲ ಏಕೆ? ಈ ಹೋರಾಟ ಇಷ್ಟಕ್ಕೆ ನಿಲ್ಲುವುದಿಲ್ಲ. ರಾಜ್ಯದೆಲ್ಲೆಡೆ ಇದು ಪ್ರವಹಿಸುತ್ತದೆ. ಎಲ್ಲೆಡೆ ವಿದ್ಯಾರ್ಥಿ ಸಂಘಟನೆಯವರು ಎದ್ದು ನಿಂತರೆ ನೀವು ಅದ್ಹೇಗೆ ನಿಯಂತ್ರಿಸುತ್ತೀರಿ?

ಇನ್ನೊಂದು ವಿಷಯ ರಾಜ್ಯದ ಒಂದು ಕಡೆ ಕಸದ ಡಬ್ಬಿಯಲ್ಲಿ ಧ್ವಜಾರೋಹಣ ಮಾಡಿದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರ ಬಗ್ಗೆ ಕ್ರಮ ತಗೆದುಕೊಳ್ಳುವುದನ್ನು ಬಿಡಿ.ಆ ವಿಷಯದ ಸತ್ಯಾಸತ್ಯತೆಯ ಬಗ್ಗೆ ಒಂದು ಸ್ಪಷ್ಟನೆಯನ್ನು ಕೊಡೊ ಆಸಕ್ತಿಯನ್ನೂ ಯಾರೂ ತೋರುತ್ತಿಲ್ಲ. ಯಾರದೋ ಒಬ್ಬರ ಅಜಾಗರೂಕತೆಯಿಂದ ಧ್ವಜ ಉಲ್ಟಾ ಹಾರಿಸಿದ್ದ ಘಟನೆಗಳು ಕಂಡು ಬರುತ್ತಿದ್ದವು. ಈಗ ಉದ್ದೇಶಪೂರ್ವಕವಾಗಿ ಕಸದ ಡಬ್ಬಿಯಲ್ಲಿ ಹಾರಿಸಿರುವ ಘಟನೆ ಬೆಳಕಿಗೆ ಬಂದರೂ ಕ್ರಮ ಕೈಗೊಳ್ಳುತ್ತಿಲ್ಲ ಏಕೆ? ಧ್ವಜವನ್ನು ಎಲ್ಲೆಂದರಲ್ಲಿ ಹೇಗೆಂದರೆ ಹಾಗೆ ಹಾರಿಸುವುದು ಕೂಡಾ ಮಾನವ ಹಕ್ಕುಗಳಿಗೆ ಒಳ ಪಡುತ್ತದೆಯೇ? ಭಾರತ ಸ್ವತಂತ್ರಗೊಂಡು ೬೯ ವರ್ಷ ಕಳೆದರೂ ನಮ್ಮೊಳಗಿನ ಶತೃಗಳನ್ನೂ ನಾವು ಮಟ್ಟ ಹಾಕದಷ್ಟು ಸಾಮರ್ಥ್ಯಶೂನ್ಯರಾಗಿರುವುದು ವಿಪರ್ಯಾಸದ ಸಂಗತಿ . ಕದ್ದು ಮುಚ್ಚಿ ಇಂಥ ಘಟನೆಗಳು ನಡೆಯುತ್ತಿದ್ದರೆ ಬೇರೆ ವಿಷಯ. ಉದ್ದೇಶಪೂರ್ವಕವಾಗಿ , ರಾಜಾರೋಷವಾಗಿ ನಡೆಯುತ್ತಿದ್ದರೂ ನೀವು ಇನ್ನೇನೂ ತನಿಖೆ ನಡೆಸಬೇಕು? ಯಾವ ವಿಡಿಯೋ ನೋಡಬೇಕು? ನಿಮ್ಮಂಥ ಕೃತಘ್ನರಿಗೆ, ನಿಮ್ಮ ಬೌದ್ಧಿಕ ದಿವಾಳಿತನಕ್ಕೆ ಏನೆನ್ನಬೇಕೋ ತಿಳಿಯುತ್ತಿಲ್ಲ. ಭಾರತ ಕೇ ಬರಬಾದಿ ಎಂದರೆ ಎಲ್ಲರನ್ನೂ ತಟ್ಟಬೇಕಾದ ವಿಷಯ. ಆದರೂ ಅ.ಭಾ.ವಿ.ಪ ಸಂಘದವರು ಮಾತ್ರ ವಿರೋಧಿಸಿ ಉಳಿದವರೆಲ್ಲಾ ಪ್ರತಿಕ್ರಿಯಿಸದೇ ಇರುವುದು ಬೌದ್ಧಿಕ ಷಂಡತನದ ಪರಮಾವಧಿಯೇ ಸರಿ. ರಾಷ್ಟ್ರದ ಬಗ್ಗೆ ಕನಿಷ್ಟ ಕಾಳಜಿಯೂ ಇಲ್ಲದಿರುವುದು ವಿಪರ್ಯಾಸದ ಸಂಗತಿ. ಅ.ಭಾ.ವಿ.ಪ. ಸಂಘದವರ ಈ ಪ್ರತಿಭಟನೆ ಮುಂದುವರೆಯಲಿ. ನಾಳೆಯ ರಾಷ್ಟ್ರರಥ ಚಾಲಕರಲ್ಲಿ (ಯುವಕರಲ್ಲಿ )  ಇಷ್ಟಾದರೂ ದೇಶಾಭಿಮಾನ ದೇಶದ ಪರವಾಗಿ ನಿಲ್ಲುವ ಮನಸ್ಸಿರುವುದು. ಹೆಮ್ಮೆಯ ವಿಷಯ. ಎಷ್ಟು ಜನ ಕನ್ಹಯ್ಯ ಬಂದರು ಅ.ಭಾ.ವಿ.ಪ ಸಂಘವಿರುವ ತನಕ ಅವನ ಮತ್ತು ಅವನ ಬೆನ್ನಿಗೆ ನಿಂತ ರಾಜಕೀಯ ಪಕ್ಷಗಳ ಆಟ ನಡೆಯುವುದಿಲ್ಲ.

Facebook ಕಾಮೆಂಟ್ಸ್

ಲೇಖಕರ ಕುರಿತು

Rahul Hajare

ಬಾಹುಬಲಿ ತಾಂತ್ರಿಕ ವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯನಿಕೇಶನ್ ಇಂಜನೀಯರಿಂಗ್ ಪದವಿ
ಸದ್ಯಕ್ಕೆ ಮಂಗಳೂರಿನ ಬ್ಯಾಂಕ್'ನಲ್ಲಿ ಉದ್ಯೋಗ ಕತೆ,ಲೇಖನ, ಕವಿತೆ ಬರೆಯುವುದು ಪ್ರವೃತ್ತಿ. ಚೆಸ್,ಕ್ರಿಕೆಟ್ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!