ಅಂಕಣ

ಮತ್ತದೇ ಮೆಲುಕು….ಕಾಡುವ ನೆನಪು

ಎಷ್ಟು ಚಂದವಿತ್ರಿ  ಬಾಲ್ಯಾವಸ್ಥೆ, ಮಣ್ಣಲ್ಲಿ ಆಟ ಆಡ್ತಿದ್ದೆ, ಮಳೇಲಿ ನೆಂದು ಕೆಮ್ಮು ಸೀನು ಬರ್ಸ್ಕೊಂಡು… ಬೈಸ್ಕೊಂಡು, ಅಮ್ಮನಿಂದ ಪ್ರೀತಿಯಾಗಿ ತಲೆ ಒರೆಸಿಕೊಂಡು, ಕಷಾಯ ಕುಡಿದು ಮಲಗುತ್ತಿದ್ದೆ, ಶಾಲೆ ಬಳಿ ಗೂಡಂಗಡಿಯಲ್ಲಿ ಅಜ್ಜಿ ಮಾರ್ತಿದ್ದ ಸೀಬೆಹಣ್ಣು ತಿಂತಿದ್ವಿ, ಭಾನುವಾರ ಬೇಗ ಎದ್ದು ಪಕ್ಕದ ಮನೆಯೋರು ಯಾವಾಗ ಬಾಗಲು ತೆಗಿತಾರೋ, ರಂಗೋಲಿಯಿಂದ…. ರಾಮಾಯಣದವರೆಗೂ ಬಾಯಿ ಬಿಟ್ಕೊಂಡು ಒಂದೂ ಜಾಹಿರಾತು ಬಿಡದೆ ದಿಟ್ಟಿಸಿ ನೋಡ್ತಿದ್ವಿ;  ಅವಾಗವಾಗ ಕೋರಸ್ ಕೊರಳಲ್ಲಿ ತಪ್ಪು ತಪ್ಪು ಶಬ್ದೋಚ್ಚಾರಣೆ ಮಾಡತಾ.. ಅದೂ ತಪ್ಪು ಹೇಳ್ತೀಯ ಅಂತ ಕಡ್ಡಿಯಲ್ಲಿ ಏಟು ತಿಂದದ್ದು ಉಂಟು ….ಎಲ್ಲಿ ಹೋಯ್ತು ಆ ದಿನಗಳು.

ನಮ್ಗೆಲ್ಲಾ ಜನವರಿ ಒಂದು ಅಂದ್ರೆ ದೊಡ್ಡ ಮನುಷ್ಯರು ಆಚರಿಸೋ ಒಂದು ಹಬ್ಬ ನಮ್ಮ ಪಾಲಿಗೆ ಕ್ಯಾಲೆಂಡರ್ ಒಂದೇ ಹೊಸದು! ಅದೂ, ಇಡೀ ವರ್ಷದ ಹಾಳೆಗಳನ್ನ ತಿರುಗಿಸಿ ಎಷ್ಟು ರಜ ಸಿಗತ್ತೆ ಅಂಥ ನೋಡೋ ಸಂಭ್ರಮ, ಶಾಲಾ ದಿನಗಳ ನಮ್ಮ ಪಾಲಿನ ಅಂದಿನ ದೊಡ್ಡ ಹಬ್ಬ ಅಂದ್ರೆ ಏಪ್ರಿಲ್ 10 ಪರೀಕ್ಷೆ ಮುಗಿಸಿ ಫಲಿತಾಂಶ ಬರೋ ದಿನ; ಆಮೇಲೆ, ಊರು (ಮನೆ) ಬಿಟ್ಟು ಅಜ್ಜಿ (ನಂತರದ  ಸೋದರಮಾವನ) ಮನೆಗೆ ಹೋಗೋದು ಹಬ್ಬವೇ ಹಬ್ಬ …ಮತ್ತೆ ಜೂನ್ ಬಂತು ಅಂದ್ರೆ ಅತ್ಕೊಂಡು ಮನೆ ಕಡೆ ಹೆಜ್ಜೆ ಹಾಕಿ, ಮುಂದಿನ ಕ್ಲಾಸ್’ಗೆ ಹೋಗೋ ಕಾತರ ಪೂರಿತ ಅನುಭವ …ಆಗ ಸಿಗ್ತಿದ್ದ ದೊಡಮ್ಮನ / ಚಿಕ್ಕಮ್ಮನ ಮಕ್ಕಳು (ಅಣ್ಣಂದ್ರು) ಓದಿ ಮುಗಿಸಿದ ಕ್ಲಾಸ್ ಟೆಕ್ಸ್ಟ್ ಬುಕ್ಸ್, ಅವರು ಕೊಡ್ತಿದ್ದ ಬಿಳಿ  ಶೂಸ್ ಅಥವಾ ಸುಮಾರಾಗಿ ಚೆನ್ನಾಗೇ ಇರೋ ಅಂಗಿ ಚಡ್ಡಿ ಹಾಕ್ಕೊಳ್ಳೋ ಸಂಭ್ರಮ ..ಮತ್ತದೇ ಶೈಕ್ಷಣಿಕ ವರ್ಷದ ಓಟ, ಕ್ಲಾಸ್’ನಲ್ಲಿ ಫೆವರೇಟ್ ಟೀಚರ್ ಹತ್ರ ಶಭಾಷ್’ಗಿರಿ ಗಿಟ್ಟಿಸ್ಕೊಳ್ಳೋ ಆತುರ, ಸದಾ (ಯಾಕೋ, ಏನೋ) ಬಯ್ಯೋ ಟೀಚರ್ ಹತ್ರ ಬೈಸ್ಕೊಳ್ದೆ ಇದ್ರೆ ಸಾಕಪ್ಪ ಅನ್ನೋ ಭಾವನೆ .

ಬೆಳೆದ್ವಿ ಬೆಳೆದ್ವಿ …ವರ್ಷಗಳ ನಂತರ ವರ್ಷ ಉರುಳಿದರೆ ಅದನ್ನ “ಬೆಳವಣಿಗೆ” ಅಂತ ಹೇಳ್ಬೇಕು ಅನ್ನೋದೇ ಲೋಕೋಕ್ತಿಯೇನೋ ಅನ್ನೋ ತರ ದೊಡ್ಡವರಾಗಿ ಬಿಟ್ವಿ, ಅದಕ್ಕೆ ತಕ್ಕಂತೆ ಒಂದು ಕ್ಲಾಸ್’ನಿಂದ ಒಂದು ಕ್ಲಾಸ್’ಗೆ ಪ್ರಮೋಷನ್ …ಅನಿವಾರ್ಯ ಕಾರಣಗಳಿಂದ ಒಂದು ಬಾಡಿಗೆ ಮನೆಯಿಂದ ಮತ್ತೊಂದಕ್ಕೆ ಒಂದು ಏರಿಯಾದಿಂದ ಮತ್ತೊಂದಕ್ಕೆ, ಹೊಸ ಸ್ನೇಹಿತರು, ಹೊಸ ನೆರೆಹೊರೆ …ನಮಗೆ ಗೊತ್ತಾಗಿಯೋ ಗೊತ್ತಾಗದೆಯೋ ಏನೋ ಒಂದು ಹೊಸ ಹೊಸ ಭಾವನೆಗಳು, ಸಂಕೋಚ, ಎಲ್ಲವನ್ನು ಬದುಕು ಕೊಟ್ಟು ಬಿಡ್ತು.

ಈ ಹಿಂದೆ ಸೈಕಲ್ ಹೊಡ್ಕೊಂಡೋ ಅಥವಾ ನೆಡ್ಕೊಂಡೋ ಹೋಗ್ತಿದ್ದ ದೊಡ್ಡಪ್ಪ, ಚಿಕ್ಕಪ್ಪನ ಮನೆ ದೂರ ಆಗೋಯ್ತು, 24 ತಾಸು ದಿನಕ್ಕೆ ಸಾಲದೆ ಬಂತು, ಶಾಲೆ ನಂತರ ಕಾಲೇಜು ಬ್ಯುಸಿ ಲೈಫ್ ಆಗಿ ಕಾಣ ಸಿಕ್ತು. ಶಾಲೆ ಸಹಪಾಠಿಗಳು ದೂರ ದೂರ ಆಗಕ್ಕೆ ಶುರು ಆದ್ರೂ , ಒಂದ್ಯಾವ್ದೋ ಬಸ್ ಸ್ಟಾಪಿನಲ್ಲೋ, ಅಥವಾ ಯಾವ್ದೋ ಪ್ರೋಗ್ರಾಮ್ನಲ್ಲೋ ಸಿಕ್ರೆ “ಹೇಯ್ ಏನೋ ಎಲ್ಲಿ ಇದ್ದೀಯೋ, ಏನು ಮಾಡ್ತಿದ್ದೆಯೋ, ಸಿಗತೀನಿ ಬೈ” ಅಂಥ ಹೇಳಿ ಮರೆಯಾಗೋ ಸನ್ನಿವೇಶಗಳು ಹಲವು ಆದ್ವು.

ಇನ್ನು ವರ್ಷಕ್ಕೆ ಒಂದು ಗಣಪತಿ ಹಬ್ಬಕ್ಕೋ, ಉಗಾದಿಗೋ, ಇನ್ನೂ ಕೆಲವೊಮ್ಮೆ ಹತ್ತಿರದ ಬಂಧುಗಳು ತುಂಬಾ ದೂರ ಆದಾಗ (ನಮ್ಮನ್ನಗಲಿದಾಗ) ಉಳಿದ ಜೀವಂತ ಬಂಧುಗಳ ದರ್ಶನ ಭಾಗ್ಯ!!!! ಪ್ರಾಪ್ತಿಯಾಗೋ ಕಾಲ ಬಂದ್ಬಿಡ್ತು!!…

ಮುಂಜಿ, ಮದುವೆ ಸಮಾರಂಭ ಅಥವಾ ಬಂಧುಗಳ ಅಗಲಿಕೆ “ಸೋಷಿಯಲ್ ಗಾಥೇರಿಂಗ್” ಪ್ಲಾಟ್ಫಾರ್ಮ್’ಗಳಾಗಿ ಪರಿವರ್ತನೆಗೊಂಡಿದೆ ಅಂದ್ರೆ ತುಂಬಾ ಬೇಸರ ಆಗತ್ತೆ ಕಣ್ರೀ.

ಇದೇ ವೇಗದ ಜೀವನದಲ್ಲಿ ಮತ್ತೆ ಬೇರೆ ಬೇರೆ ಹಂತ ಯೌವ್ವನಾವಸ್ಥೆ ನಮ್ಮ ಮದುವೆ, ಮನೆ ಕಟ್ಟಿಸೋದು / ಕೊಂಡುಕೊಳ್ಳೋದು, ವರ್ಕ್ ಲೈಫ್ ಬ್ಯಾಲನ್ಸ್ ಜೀವನದ ಸರ್ಕಸ್ ಮತ್ತೆ ಮಕ್ಕಳು , ಸಂಭ್ರಮ-ಸಂಘರ್ಷ , ಸುಖ-ದುಃಖ, ಮತ್ತದೇ ಹೊಸ ಕ್ಯಾಲೆಂಡರ್, ಪಂಚಾಂಗ,…..

ಘಟಿಸಿದ ಘಟನೆಗಳ ನೆನಪುಗಳ ಮತ್ತದೇ ಮೆಲುಕು….ಕಾಡುವ ನೆನಪು

-ಪ್ರವೀಣ್ ಎಸ್

praveen.moudgal@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!