ಈಗ್ಗೆ ಸರಿ ಸುಮಾರು 20 – 25 ವರ್ಷಗಳ ಹಿಂದೆ ಶಾಲಾ ದಿನಗಳಲ್ಲಿ ಟೆಲಿವಿಷನ್ ಕಾರ್ಯಕ್ರಮ ಎಂದರೆ ಕೇವಲ ದೂರದರ್ಶನ ವಾಹಿನಿ ಮಾತ್ರ, ಅದ್ರಲ್ಲೂ ಸಂಜೆ ಸೀಮಿತ ಅವಧಿಗೆ ಮಾತ್ರ ಪ್ರಾದೇಶಿಕ ಪ್ರಸಾರಕ್ಕೆ ಅವಕಾಶ. ಭಾನುವಾರದ ಸಂಜೆ ಬರುತ್ತಿದ್ದ ಕನ್ನಡ ಸಿನೆಮಾ ವಾರದ ಬೃಹತ್ ಮನರಂಜನೆಯ ಕಾರ್ಯಕ್ರಮ, ಚಲನ ಚಿತ್ರ ಪ್ರಸಾರಕ್ಕೆ ಮುನ್ನ ಬರುತ್ತಿದ್ದ ಸಾಮಾಜಿಕ ಕಳಕಳಿಯ ಜಾಹೀರಾತು “ಕುಡಿತದಿಂದ ಸರ್ವನಾಶ” ಎಂಬ ಮಹಾತ್ಮ ಗಾಂಧಿಯವರ ಸಂದೇಶ.
ಆಗೆಲ್ಲಾ ಹೆಚ್ಚು ಪ್ರಸಾರವಾಗುತ್ತಿದ್ದುದು ಕೂಡ ರಾಜಕುಮಾರ್ ಇಲ್ಲವೇ ಶಂಕರನಾಗ್ ಅಥವಾ ವಿಷ್ಣುವರ್ಧನ್ ನಟಿಸಿದಂತ ಸಾಂಸಾರಿಕ ಇಲ್ಲವೇ ಆಧ್ಯಾತ್ಮಿಕ ಅಥವಾ ಸಾಮಾಜಿಕ ಕಳಕಳಿಯ ಚಿತ್ರಗಳು. ಒಟ್ಟಿನಲ್ಲಿ ಮನೆಮಂದಿಯೆಲ್ಲ ಕುಳಿತು ನೋಡುವಂತ ಚಿತ್ರಗಳೇ ಆಗಿರುತ್ತಿದ್ದವು. ಸಾಮಾಜಿಕ ಚಿತ್ರಗಳಲ್ಲಿ ಕುಡಿತದಿಂದ ಆಗುವ ತೊಂದರೆ; ಕುಡಿತವೆಂಬ ಅನಿಷ್ಟದ ವಿರುದ್ಧ ಹೋರಾಡುವ ನಾಯಕ ನಟ ಹೀಗೆ ಇರುತ್ತಿತ್ತು ಕಥೆಯ ಹಂದರ.
ಆ ಚಿತ್ರಗಳನ್ನ ನೋಡಿ ಬೆಳೆದ ಅಂದಿನ ಪೀಳಿಗೆಯ ಚಿಕ್ಕ ಮಕ್ಕಳಾದ ನಮಗೆ, ಕುಡುಕರು ಎಂದರೆ ಒಂದು ಭಯ ಅಥವಾ ಅಸಹ್ಯವೆಂದರೂ ತಪ್ಪಿಲ್ಲ. ಬೆಂಗಳೂರಿನಂತ ಆಗಿನ್ನೂ ಈಗಿನಷ್ಟು ಬೆಳವಣಿಗೆಯಾಗದ ಊರಿನಲ್ಲಿ ವೈನ್ ಶಾಪ್’ಗಳ ಬಳಿ ನಡೆದು ಹೋಗಲು ಒಂದು ಅಂಜಿಕೆ. ಎಲ್ಲೋ ಒಂದೆಡೆ ಕುಡಿದು ಪ್ರಜ್ಞಾಹೀನ ಸ್ಥಿತಿಯಲ್ಲಿ ವ್ಯಕ್ತಿ ಬಿದ್ದಿದ್ದಾನೆಂದರೆ ಆ ರಸ್ತೆಯಲ್ಲಿ ಹೋಗದೆ ಬೇರೆ ದಾರಿ ಹಿಡಿದದ್ದು ಉಂಟು.
ಕಾಲ ಬದಲಾಯಿತು, ತಪ್ಪು! ಜನ ಮಾರ್ಪಾಡಾಗುತ್ತಿದ್ದರೆ “ಕಾಲ” ಮಾತ್ರ ಸೂಕ್ಷ್ಮವಾಗಿ ಎಲ್ಲವನ್ನೂ ಗಮನಿಸುತ್ತಿದೆ. ಆ ದಿನಗಳಲ್ಲಿ ಊರಿನ ಎಲ್ಲೋ ಒಂದು ಮೂಲೆಯಲ್ಲಿ ಕಾಣಸಿಗುತ್ತಿದ್ದ ನಶೆಯ ಅಂಗಡಿಗಳು ಇಂದು ಎಲ್ಲೆಂದರಲ್ಲಿ ರಾರಾಜಿಸುತ್ತಿವೆ. ಬಹುತೇಕ ಎಲ್ಲ ಬಡಾವಣೆಗಳ ಅವಿಭಾಜ್ಯ ಅಂಗವೇ ಆಗಿವೆ. ನಗರದ ಕೆಲವೊಂದು ಪ್ರಸಿದ್ಧ ಮಾಲ್’ಗಳಿಗೆ ಭೇಟಿಯಿತ್ತ ಸಮಯದಲ್ಲಿ ಕಂಡದ್ದು ಕಿಕ್ಕಿರದ ಭರ್ಜರಿ ಶಾಪ್ಗಳು!., ಇನ್ನು ಬಾರ್ ಮತ್ತು ರೆಸ್ಟೋರೆಂಟ್’ಗಳು ಎಣಿಕೆಗೆ ಮೀರಿದ್ದು. ಹಿಂದೆ ಒಂದು ಗಲ್ಲಿಗೋ, ಅಲ್ಲೊಂದು ಇಲ್ಲೊಂದು ಕುಡುಕ ಮಹಾಶಯರು ಕಾಣ ಸಿಗುತ್ತಿದ್ದರೆ ಇಂದು ಅವರ ಸಂಖ್ಯೆ ಕೂಡ ಹೆಚ್ಚುತ್ತಿದೆ, ಅದರಲ್ಲೂ ಯುವ ಜನತೆಗೆ ವಾರಾಂತ್ಯದ ಭರ್ಜರಿ ಕಾರ್ಯಕ್ರಮವೇ ಆಗಿದೆ. ಅದಕ್ಕೆ ಅಂಟಿಕೊಂಡಂತೆ ಅಪಘಾತಗಳು, ಜಗಳ, ಕ್ರೌರ್ಯ ಗಣನೀಯವಾಗಿ ಹೆಚ್ಚಿವೆ, ನ್ಯಾಯಾಂಗಕ್ಕೆ ದೊಡ್ಡ ಸವಾಲು ಎಸಗಿದೆ. ಕುಡಿದು ಗಲಾಟೆ ಮಾಡದಿದ್ದರೆ ಅದು ಉಚಿತವೇ? ತಮ್ಮಷ್ಟಕ್ಕೆ ತಾವು ಹೊದ್ದು ಮಲಗಿ ಯಾರಿಗೂ ತೊಂದರೆ ನೀಡದಿದ್ದರೆ, ಅದು ಮಹಾನ್ ಕಾರ್ಯವೆ?.
ನೆನ್ನೆ, ಮೊನ್ನೆ ಬಂದ ಸುದ್ಧಿ, ಬೆಂಗಳೂರಿನಲ್ಲಿ ಮದ್ಯದ ಅಂಗಡಿಗಳು ಮಧ್ಯರಾತ್ರಿಯ ನಂತರವೂ ಕಾರ್ಯ ನಿರ್ವಹಿಸುತ್ತವೆ. ಅಬ್ಭಾ ಎಂತಹಾ ಸುದ್ಧಿರೀ ಇದು, ನಿಜವಾಗಿಯೂ ಕಳವಳಕಾರಿ. ಈಗಲೇ ರಾತ್ರಿ ಹತ್ತರ ನಂತರ ಬೆಂಗಳೂರಿನಲ್ಲಿ ಒಬ್ಬಂಟಿಯಾಗಿ ಓಡಾಡುವುದು ಕಷ್ಟ (ಕೇವಲ ಮಹಿಳೆಯರಿಗಷ್ಟೇ ಅಲ್ಲ, ಪುರುಷರಿಗೂ ಕೂಡ) ಅಂತಹುದರಲ್ಲಿ ಈ ರೀತಿ ಅಂಗಡಿಗಳ ತೆರೆದು ಪುಂಡಾಟಿಕೆಗೆ ಪ್ರೋತ್ಸಾಹ ನೀಡಿದಂತಲ್ಲವೆ??. ಮಧ್ಯರಾತ್ರಿ ಒಬ್ಬಂಟಿ ಹೆಣ್ಣು ಮಗಳು ಧೈರ್ಯವಾಗಿ ಓಡಾಡುವಂತಾದಾಗ ನಿಜ ಸ್ವಾತಂತ್ರ್ಯ ಎಂಬ ಗಾಂಧಿ ತಾತನ ರಾಮ ರಾಜ್ಯ ದೊರಕುವುದೆ?
ಎಷ್ಟೆಲ್ಲಾ ಬದಲಾವಣೆಯಾಗ್ತಿದೆ!!. ಅಭಿವೃದ್ಧಿ ಎಂಬ ಮೂಲ ಮಂತ್ರ ಜಪಿಸುವ ಇಂದಿನ ನಾಗರಿಕತೆ ನಿಜವಾಗಿಯೂ ಮೌಲ್ಯಾಧಾರಿತವೇ? ಯಾತಕ್ಕೆ ಈ ರೀತಿಯ ಬದಲಾವಣೆ? ಇಂದು ಕುಡಿತದ ಅಭ್ಯಾಸ ಹೆಚ್ಚಿದೆ ಎಂತಾದರೆ ಕುಡಿತವನ್ನು ಹೆಚ್ಚಿಸುವ ಮಾರ್ಗೋಪಾಯಗಳು ಹೆಚ್ಚಿದೆ ಎಂದರೆ ಅತಿಶಯೋಕ್ತಿಯಲ್ಲ.ಮಾಧ್ಯಮಗಳ ಜಾಹೀರಾತಿನಲ್ಲಿ ಬರುವ ಹೆಸರಾಂತ ಬ್ರಾಂಡ್ ಸೋಡಾ ಅಥವಾ ಮಿನೆರಲ್ ವಾಟೆರ್ ಎಂದು ತೋರಿಸಿದರು ಅದರ ಮೂಲ ಅಥವಾ ಮುಖ್ಯ ಉತ್ಪನ್ನ ಹೆಂಡವೇ!.
ಇನ್ನು ಕುಡಿತದ ಉತ್ಪನ್ನಗಳಲ್ಲಿ ಕೂಡ ಒಂದು ಸಮಾಜಮುಖಿ ವಾಕ್ಯ! ಜವಾಬ್ಧಾರಿಯುತವಾಗಿ ಕುಡಿಯಿರಿ!…
ಈ ನನ್ನ ಅಭಿಪ್ರಾಯಗಳನ್ನ ನನ್ನ ಹತ್ತಿರದ ವರ್ಗಕ್ಕೆ ಹಂಚಿಕೊಂಡರೆ ಅವರ ಕಡೆಯಿಂದ ಬರುವ ಉತ್ತರ”….ಅದೆಲ್ಲ ನಿಂಗ್ಯಾಕೆ, ನೀನು ಕುಡಿಯಲ್ಲ ತಾನೇ ; ಅದು ಕುಡಿಯೋರ ಹಣೆ ಬರಹ, ಯಾಕೆ ತಲೆ ಕೆಡಿಸ್ಕೊಳ್ಳುತಿ?” ಅಂದ್ರೆ ಆಶ್ಚರ್ಯ ಇಲ್ಲ…
ಆದ್ರೂ ಪ್ರಶ್ನೆಗಳು ಕಾಡ್ತವೆ ಕಣ್ರೀ!