ಅಂಕಣ

ಪ್ರತಾಪ್ ಸಿಂಹರಿಗೆ ಬಹಿರಂಗ ಪತ್ರ

ಮಾನ್ಯ ಪ್ರತಾಪ್ ಸಿಂಹರೇ,

ಒಬ್ಬ ಸಾಮಾನ್ಯ ಪ್ರಜೆಯಾಗಿ ನನ್ನ ಕೆಲವು ಪ್ರಶ್ನೆಗಳು. ನಾನು ಕಾಂಗ್ರೆಸ್ ಏಜೆಂಟ್ ಅಲ್ಲ, ಅಥವಾ ಅವರನ್ನು ನಂಬುವ ಮೂರ್ಖ ಅಲ್ಲ. ನಿಮ್ಮ ಲೇಖನಕ್ಕಾಗಿ ಪ್ರತಿ ಶನಿವಾರ ಕಾಯುವ ಅಭಿಮಾನಿಗಳಲ್ಲಿ ನಾನು ಒಬ್ಬ. ನಿಮ್ಮ ಕೆಲವು ಲೇಖನಗಳೇ ನನಗೆ ರೋಮಾಂಚನ ಉಂಟು ಮಾಡಿವೆ. ಆದರೆ ಈ ಬಾರಿ ನಿಮ್ಮ ಲೇಖನ ಒಬ್ಬ ಬಿಜೆಪಿ ಭಟ್ಟಂಗಿಯ ಪರಮಾವಧಿಯಾ ಪರಾಕಾಷ್ಟೆ ತರಹ ಇತ್ತು! ಇದಕ್ಕೆ ಕಾರಣ ಕೆಳಗಿದೆ, ದಯವಿಟ್ಟು ಓದಿ!

2014 ರ ಪರಿಸ್ಥಿತಿ ಹೇಗಿತ್ತೆಂದರೆ ಮೋದಿ ಹೆಸರಿನಲ್ಲಿ ಒಂದು ಕತ್ತೆ ನಿಂತಿದ್ದರೂ ಗೆಲ್ಲುತ್ತಿತ್ತು, ನಿಮ್ಮ ಉದ್ಯಮ-ಪತ್ರಿಕೋದ್ಯಮ ಅಷ್ಟು ಅಟ್ಟಕ್ಕೇರಿಸಿತ್ತು ಮೋದಿಯವರನ್ನು. ಈ ದೇಶದ ಅಭಿವೃದ್ದಿಗಾಗಿ ನನ್ನಂತ ಯುವ ಜನತೆ ಮೋದಿ ಮುಖ ನೋಡಿ ವೋಟ್ ಕೊಟ್ಟಿದ್ದೇವೆ ಹೊರತು ಪ್ರತಾಪ್, ಪ್ರಹ್ಲಾದ್ ಜೋಶಿ ಅಥವಾ ಅನಂತ್ಕುಮಾರ್ ಮುಖ ನೋಡಿ ಯಾರೂ ವೋಟ್ ಒತ್ತಿಲ್ಲ, ಹೀಗಿರುವಾಗ ನೀರಿಗೆ ಕಷ್ಟ ಬಂದಾಗ ನಿಮ್ಮನು ಕೇಳದೆ ಕಾಂಗ್ರೆಸ್ನವರನ್ನು ಕೇಳಲಾದೀತೇ ಪ್ರತಾಪ್ ಸಿಂಹರವರೇ?

ಪ್ರತಾಪ್ರವರೇ ನೀವು ಹಿಸ್ಟರಿಯಲ್ಲಿ ನಿಸ್ಸೀಮರು ಎಂದು ಗೊತ್ತು, ನಮಗೆ ಬೇಕಿರುವುದು ವಾಸ್ತವ! ನಿಮ್ಮ ಮೋದಿಗೆ ಇಲ್ಲಿನ ಹೋರಾಟ ಕಾಣುವುದಿಲ್ಲ, ಒಮ್ಮೆ ನೀವೆಲ್ಲರೂ(18 ಜನ ಎಂಪಿ) ರಾಜೀನಾಮೆ ಕೊಟ್ಟು ಬಂದು ನೋಡಿ, ದೇಶ ತಿರುಗಿ ನೋಡುತ್ತೆ ನಮ್ಮ ಕಡೆ. ನೀವು ನಿಮ್ಮ ಲೇಖನದಲ್ಲಿ ಬರೆದಿರುವ ಯಾವ ರಾಜಕಾರಿಣಿಯಾದರೂ ಮಾತುಕತೆಗೆ ಬರುತ್ತಾರೆ, ಅದನ್ನು ಮೊದಲು ಮಾಡಿ. ಕಾಂಗ್ರೆಸ್ನವರ ಮೇಲೆ ಗೂಬೆ ಕೂರಿಸುವುದನ್ನು ಬಿಡಿ, ಏಕೆಂದರೆ ಅವರಿಗೆ ಯಾವ ಶಕ್ತಿಯೂ ಇಲ್ಲ, ನಿಮಗೆ ಇದೆ ಎಂದು ನಿಮ್ಮನು ಆರಿಸಿರುವುದು, ಅವರ ಮೇಲೆ ನೀವು ಕೇಸರೆರಚಕ್ಕಲ್ಲ.

ಹೋಗಲಿ ಹೀಗೆ ಮಾಡಿ, ರಾಜ್ಯದ ಒಟ್ಟೂ ಸಂಸದರು ಹೋಗಿ ಉತ್ತರ ಕರ್ನಾಟಕದವರ ಸಮಸ್ಯೆಯನ್ನು ಒಮ್ಮೆ ನೋಡಿಕೊಂಡು ಬನ್ನಿ, ಇದೂ ಸಾದ್ಯವೇ ಇಲ್ಲದ ಮಾತು! ಕಷ್ಟ ಬಂದಾಗ ನಮ್ಮ ಬಂಧುಗಳು ಬಂದು ಮಾತಾಡಿಸಿದರೆ ಏನೋ ಸಮಾಧಾನ, ನಮಗೆ ನೀವೇ ಸ್ವಾಮಿ ಬಂಧುಗಳು, ಸಿನಮಾ ಸ್ಟಾರ್‌ಗಳಲ್ಲ! ಬನ್ನಿ ಸ್ವಾಮಿ, ಬಂದು ನಮ್ಮ ಜೊತೆ ಮಾತಾಡಿ, ನಮ್ಮ ಕಷ್ಟ ನೋಡಿ, ಅಗಲಾದ್ರೂ ಅರಿವಾಗುತ್ತೆ, ಏನು ಸಮಸ್ಯೆ ಅಂತ. ಅದನ್ನು ಬಿಟ್ಟು ಗುಜರಾತ್ ಸರ್ಕಾರ ಸಾಧನೆಯನ್ನು ಪೇಸ್ಬುಕ್ ಶೇರ್ ಮಾಡುವುದಲ್ಲ!  ಭಟ್ಟಂಗಿತನ!

ಸರಿ, ಇವೆಲ್ಲವೂ ಅಂದುಕೊಂಡಷ್ಟು ಸುಲಭ ಅಲ್ಲ ಎಂದು ಗೊತ್ತಿದೆ, ಆದರೆ ನಿಮ್ಮ ಕಡೆಯಿಂದ ಪ್ರಯತ್ನವೇ ಇಲ್ಲವಲ್ಲಾ ಪ್ರತಾಪ್ ಸಿಂಹರವರೇ?! ನಿಯೋಗಗಳನ್ನು ಕರೆದುಕೊಂಡು ಹೋಗಿ ಅಲ್ಲಿ ಐಷಾರಾಮಿ ಹೋಟೆಲ್‌ಗಳಲ್ಲಿ ಇದ್ದಿದ್ದೇ ಆಯಿತು, ನಿಮ್ಮ ಪಕ್ಷಕ್ಕೆ 2 ಎಂಪಿಗಳು ಇರುವ ಗೋವಾ ಮುಖ್ಯವೋ ಅಥವಾ 17 ಇರುವ ಕರ್ನಾಟಕ ಬೇಕೋ? ಕೇಳಿ ನಿಮ್ಮ ಪ್ರಧಾನಿನ.

ಹೌದು, ವಾಜಪೇಯಿ ಕಾಲದಲ್ಲೇ ಇದು ಸಾದ್ಯವಾದದ್ದು ಎಂದಿರಲ್ಲ, ಅದನ್ನು ಹೇಳಿ ನಿಮ್ಮ ಪ್ರಧಾನಿಗೆ. ಉಮಾಭಾರತಿಯವರು ಪತ್ರ ಕಳಿಸಿದ್ದಾರೆ ಎನ್ನುತ್ತಿರಲ್ಲ ಸ್ವಾಮಿ, ಪತ್ರಕ್ಕೆ ಉತ್ತರಿಸಲು ಇದೇನು ಸಾಪ್ಟ್‌ವೇರ್ ಕಂಪನಿಯಾ? ಹೋರಾಟ ಮಾಡಿ ಸ್ವಾಮಿ ನಿಮ್ಮ ನಾಯಕನ ಮುಂದೆ! ಕಾಂಗ್ರೆಸ್ನವರನ್ನು ಸೋನಿಯಾ ಭಟ್ಟಂಗಿಗಳು ಅನ್ನುವುದಲ್ಲ, ನೀವೇನೆಂದು ತೋರಿಸಿ ಈ ಜನಕ್ಕೆ, ಆಗ ಒಪ್ಪುತ್ತೇವೆ ನಿಮ್ಮ ನೈತಿಕತೆ, ನಿಮ್ಮ ಚಾಕಚಕ್ಯತೆ, ಅದನ್ನು ಬಿಟ್ಟು ಬೇರೆಯವರಿಗೆ ಕೆಸರು ಎರಚಿದರೆ ನಿಮ್ಮ ಕೈ ಕಲೆಯಾಗುತ್ತಾ ಹೋಗುತ್ತದೆ. ಒರೆಸಲು ಕಡೆಗೆ ಮೋದಿ ಕೈಲೂ ಆಗುವುದಿಲ್ಲ.

ಗೋವಾ ಹಾಗೂ ಮಹಾರಾಷ್ಟ್ರ ವಿರೋಧ ಪಕ್ಷದವರನ್ನು ಒಪ್ಪಿಸಿ ಎನ್ನುತ್ತಾರಲ್ಲ ಯಡಿಯೂರಪ್ಪನವರು, ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ, ಒಬ್ಬ ರೈತ ನಾಯಕನಾಗಿ ಅವರೇ ಹೋಗಿ ಮಾತಾಡಲಿ ಬೇರೆ ಪಕ್ಷದವರ ಜೊತೆ! ಅದು ಏತಕ್ಕೆ ಸಾದ್ಯವಿಲ್ಲ?? ರಾಜಕೀಯ ಸ್ವಾಮಿ, ರಾಜ್‌ಕೀಯ! ನಿಮಗೆ ಕರ್ನಾಟಕದಲ್ಲಿ ಗಲಾಟೆ ಆಗಬೇಕು, ಕರ್ನಾಟಕ ಬಂದ್ ಆಗಬೇಕು, ನಮ್ಮಂತ ಸಾಮಾನ್ಯರಿಗೆ ಹೊರೆ ಆಗಬೇಕು. ನಮ್ಮ ಹೊರೆ ತಗ್ಗಿಸಲಿ ಎಂದು ನಿಮ್ಮನ್ನು ಕಳಿಸಿದರೆ ಇನ್ನೇನೋ ಹೇಳುತ್ತೀರಲ್ಲಾ ಸ್ವಾಮಿ! ಯಾರನ್ನೂ ನಂಬೋಣ ನಾವು ಕನ್ನಡಿಗರು??

ಕಾಂಗ್ರೆಸ್ನವರು ಮಂತ್ರಿಗಳಾಗಿದ್ದಾಗ ಕೇಂದ್ರದಲ್ಲಿ ಏನು ಮಾಡಿದ್ದರು ಎನ್ನುತ್ತಿದ್ದಿರಲ್ಲಾ, ನೀವೇನು ಮಾಡುತ್ತಿದ್ದೀರಿ ಸ್ವಾಮಿ? ಅನಂತ್ ಕುಮಾರ್’ಗೆ ಯಡಿಯೂರಪ್ಪ ಬೆಳೆಯಬಾರದು, ಯಡ್ಡಿಗೆ ಅನಂತ ಬೆಳೆಯಬಾರದು, ಅಲ್ಲಿಗೆ ನಾವು ಬೆಳೆಯುವುದಿಲ್ಲ! ಪ್ರತಾಪ್ರವರೇ ಒಮ್ಮೆ ಯೋಚಿಸಿ, ಮೈಸೂರಿನಲ್ಲಿ ಬರೀ ನಿಮ್ಮ ವರ್ಚಸ್ಸಿನಿಂದ ವಿಶ್ವನಾತ್’ರನ್ನು ಸೋಲಿಸಲು ಆಯಿತೇ? ಖಂಡಿತ ಇಲ್ಲ, ಅದು ಮೋದಿಯ ಮೋಡಿಯ ಅಲೆ ಅಷ್ಟೇ, ಅಲೆ ನಿಂತ ಮೇಲೆ ಆ ಅಲೆ ಏನು ತಂದಿದೆ ಅಂತ ಜನ ಹುಡುಕುತ್ತಿದ್ದಾರೆ! ಪೇಸ್ಬುಕ್ನಲ್ಲಿನ ನಿಮ್ಮ ಪೋಸ್ಟ್ಗಳನ್ನಲ್ಲ!

ನಿಜವಾಗಲೂ ತಬ್ಬಲಿಗಳಾಗಿರೋದು ಕನ್ನಡಿಗರೇ ಸ್ವಾಮಿ, ಅಲ್ಲಿ ಅಮ್ಮ ತನ್ನ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾಳೆ, ನಾಯ್ಡು ಕರ್ನಾಟಕದಲ್ಲಿ ರೋಡ್ ಶೋ ಮಾಡುತ್ತಿದ್ದಾರೆ, ತೆಲಂಗಾಣ ಪ್ರವಾಸೋದ್ಯಮದವರು ಬೆಂಗಳೂರು ಬಿಎಂಟಿಸಿ ಬಸ್’ನಲ್ಲೇ ನಮ್ಮನು ಕರೆಯುತ್ತಿದ್ದಾರೆ, ನಮ್ಮನು ನೋಡಿಕೊಳ್ಳಲು ನಾಯಕರೇ ಇಲ್ಲದಂತಾಗಿದೆ. ಇರುವವರೂ ನಿಮ್ಮಂತೆ  ಭಟ್ಟಂಗಿತನ ಮಾಡುತ್ತಾ ಕೆಸರೆರಚಾಡಿಕೊಂಡಿದ್ದಾರೆ.

ಇಂತೀ

ಸಾಮಾನ್ಯ ಕನ್ನಡಿಗ

– ಗುರುದತ್ ಎಸ್

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!