ಅಂಕಣ

ಟ್ರಂಪ್ ವಿಷಯದಲ್ಲಿ ಅಮೇರಿಕಾದಮಿಡಿಯಾ ಮಾಡಿದ ತಪ್ಪೇನು? ನಾವುಅದರಿಂದ ಕಲಿಯಬೇಕೇನು?

2014 ರ ಲೋಕಸಭಾ ಚುನಾವಣೆ ಮುಗಿಯುತ್ತಿದ್ದ ಹಾಗೆಯೇ ರಾಜದೀಪ್ ಸರದೇಸಾಯಿ ಎಂಬ ಸ್ಯುಡೋ ಸೆಕ್ಯುಲರ್ ಪತ್ರಕರ್ತ ಒಂದು ಪುಸ್ತಕ ಬಿಡುಗಡೆ ಮಾಡುತ್ತಾನೆ. ಅದರೆ ಹೆಸರು ” 2014 ದಿ ಇಲೆಕ್ಷನ್ ದ್ಯಾಟ್ ಚೇಂಜ್ಡ್ ಇಂಡಿಯಾ”. ಈ ಪುಸ್ತಕದಲ್ಲಿ ರಾಜದೀಪ್ ಸರದೇಸಾಯಿಯ ವಿಚಾರ ಸ್ವಂತದ್ದು ಎಷ್ಟು ಇದೆ ಅದು ಓದಿದವರಿಗೆ ಗೊತ್ತು. ಅದರೊಳಗಿನ ವಿಷಯ ಹಾಗಿರಲಿ ಪುಸ್ತಕದ ಟೈಟಲ್ ಇದೆಯಲ್ಲಾ ಅದೇ ಕಾಪಿ ಆ್ಯಂಡ್ ಪೆಸ್ಟ್. ಆಶ್ಚರ್ಯ ಆಗ್ತಾ ಇದೆಯೇ? 1993 ರಲ್ಲಿ ಲೆವಿಸ್ ಗ್ಲೌಡ್ ಎಂಬ ಪ್ರೊಫೆಸರ್ ಒಂದು ಪುಸ್ತಕ ಬರೆಯುತ್ತಾರೆ ಅದರ ಹೆಸರೂ “1968 ದಿ ಎಲೆಕ್ಷನ್ ದ್ಯಾಟ್ ಚೇಂಜ್ಡ್ ಅಮೇರಿಕಾ”. ಪುಸ್ತಕದ ಮುಖಪುಟ, ಟೈಟಲ್ ಬರೆದ ರೀತಿ, ಅದೂ ನಕಲಿ ಮಾಡಿದ್ದಾನೆ. ಕೆಲವರು ರಾಜದೀಪ್ ಸರದೇಸಾಯಿ ಪುಸ್ತಕವನ್ನೇ ಲೆವಿಸ್ ಗ್ಲೌಡ್ ನಕಲಿ ಮಾಡಿದ್ದಾನೆ ಎನ್ನಬಹುದು…ಅದು ಬೇರೆ ವಿಷಯ!!! ಅದೇನೆ ಇರಲಿ ನಕಲಿ ಹೊಡೆದ ವಿಷಯ ಮುಖ್ಯ ಅಲ್ಲ, ಇಲ್ಲಿ ಯಾಕೆ ರಾಜದೀಪ್ ಹಾಗೂ “ಇಲೆಕ್ಷನ್ ದ್ಯಾಟ್ ಚೇಂಜ್ಡ್…” ಹೋಲಿಸುತ್ತಾ ಇದ್ದೇನೆ ಅಂದರೆ ಭಾರತದ ಕೆಲವು ನ್ಯೂಸೂಳೆಗಳು ತಮ್ಮನ್ನು ತಾವು ಅಮೇರಿಕಾ ಮಾದರಿಯ ಪತ್ರಕರ್ತರು ಎಂದು ತೋರಿಸಿಕೊಳ್ಳುತ್ತಿದ್ದಾರೆ. ತಾವು ಕೂಡ ಸೆಕ್ಯುಲರ್, ಪೊಲಿಟಿಕಲಿ ಕರೆಕ್ಟ್, ಇತ್ಯಾದಿ ಇತ್ಯಾದಿ ಅಮೇರಿಕಾ ಮೀಡಿಯಾದಿಂದ ನಕಲಿ ಹೊಡೆಯುತ್ತಿದ್ದಾರೆ. ಯಾರದೋ ಹೆಗ್ಗಳಿಕೆಗೆ ನಕಲಿ ಹೊಡೆದು ಎಡವಿ ಬೀಳುವುದು ಸರಿಯೇ? ತಪ್ಪುಗಳನ್ನು ಅನುಕರಿಸುವುದರಿಂದ ಆಗುವ ಅನಾಹುತ ಏನು? ಕಳೆದ ಭಾನುವಾರ ಟೈಮ್ಸ್ ಆಫ್ ಇಂಡಿಯಾದಲ್ಲಿ ಬಂದ ಚೇತನ್ ಭಗತ್ ಅವರ ಲೇಖನ ‘ಟ್ರಂಪ್ ಪ್ರಚಾರದಲ್ಲಿ ಅಮೇರಿಕಾ ಮೀಡಿಯಾ ಮಾಡಿದ ತಪ್ಪು ಏನು? ಭಾರತದ ಮೀಡಿಯಾ ಅದರಿಂದ ಸರಿಯಾಗಿ ಏನನ್ನು ಕಲಿಯಬೇಕು?’ ಬಹಳ‌ ಸೊಗಸಾಗಿದೆ. ಅವರು ಏನು ಹೇಳುತ್ತಾರೆ ನೋಡೋಣ.

ಕೊನೆಗೂ ಅಮೇರಿಕಾ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ರಿಪಬ್ಲಿಕ್ ಪಕ್ಷದಿಂದ ಡೊನಾಲ್ಡ್ ಟ್ರಂಪ್ ಆಯ್ಕೆ ಆಗಿದ್ದಾರೆ. ವಿಪರ್ಯಾಸ ಅಂದರೆ ಡೊನಾಲ್ಡ್ ಟ್ರಂಪ್ ಅವರ ಹೆಸರು ಪ್ರಸ್ತಾವ ಆದಾಗಿನಿಂದ ಅಮೇರಿಕಾದ ಮೀಡಿಯಾ ಹೌಸ್’ಗಳು ಟ್ರಂಪ್ ಗೆಲ್ಲವುದು ಅಸಾಧ್ಯ ಎನ್ನುತ್ತಿದ್ದವು. ಅಮೇರಿಕಾದ ಮೀಡಿಯಾ ಬಗ್ಗೆ ಯಾಕೆ ಸ್ಪೆಷಲ್ ಆಗಿ ಇಲ್ಲಿ ಹೇಳಬೇಕು ಅಂದರೆ ಅವು ತಮ್ಮ ರಿಸರ್ಚ್ ಹಾಗೂ ಕ್ರೆಡಿಬಿಲಿಟಿಗೆ ಜಗತ್ತ್ಪ್ರಸಿದ್ದ. ಆದರೆ ಅದೇ ಮಿಡಿಯಾ ಡೊನಾಲ್ಡ್ ಟ್ರಂಪ್ ಅವರ ಪ್ರಚಾರವನ್ನು ವ್ಯಂಗ್ಯವಾಗಿ ಕಂಡವು. ಅವನೊಬ್ಬ ಕಾಮುಕ, ವ್ಯಾಪಾರಸ್ಥ, ಕೋಮುವಾದಿ, ಜೋಕರ್, ಏನೆಂದವೋ, ಏನು ಬಿಟ್ಟವೋ ಇಡೀ ಜಗತ್ತಿಗೇ ಗೊತ್ತು. ಆದರೆ ಡೆವಿಡ್ ಟ್ರಂಪ್ ನೆವರ್ ಬಾದರ್ಡ್! ತಮ್ಮ ಕಠೋರ, ಪಾಲಿಟಿಕಲಿ ಇನ್ ಕರೆಕ್ಟ್, ಮುಸ್ಲಿಂ ವಿರೋಧಿ, ದೊಡ್ಡ ಗೋಡೆ ಕಟ್ಟಿ ಮೆಕ್ಸಿಕನ್’ರನ್ನು ದೂರವಿಡುತ್ತೇನೆ ಎನ್ನುತ್ತಲೇ ಪ್ರಚಾರ ಮುಂದುವರಿಸಿದರು. ಇತ್ತ ಮಾಧ್ಯಮಗಳು “OMG, ಇವನು ಹೀಗೆ ಹೇಳಿ ಬಿಟ್ಟನಾ? ನಂಬಲು ಸಾಧ್ಯವಿಲ್ಲ” ಎನ್ನುತ್ತಾ ಕಾಲ ಕಳೆದವು. ಟ್ರಂಪ್ ಅವರ ಈ ಪ್ರಚಾರ ಯಾಕೆ ವಿಭಿನ್ನವೆನಿಸಿತು ಅಂದರೆ ಈ ತರಹದ ಪೊಲಿಟಿಕಲಿ ಇನ್ ಕರೆಕ್ಟ್ ಪ್ರಚಾರ ನಡೆಸಿದ್ದು ಸೋ ಕಾಲ್ಡ್ ಪೊಲಿಟಿಕಲಿ ಕರೆಕ್ಟ್ ನೆಲದಲ್ಲಿ. ಸ್ವಾಮಿ… ಅಲ್ಲಿ ಅಮೇರಿಕಾದಲ್ಲಿ ದಪ್ಪಗಿರುವವನಿಗೆ ಧಡಿಯಾ ಅನ್ನೊದಿಲ್ಲ, ಕಪ್ಪು ಇರುವವನಿಗೆ ಕಪ್ಪು ಅನ್ನುವ ಹಾಗಿಲ್ಲ. ಯಾವುದನ್ನೂ ಇದ್ದ ಹಾಗೆ ಹೇಳುವ ಹಾಗಿಲ್ಲ, ಅಷ್ಟು ಸೋಫಿಸ್ಟಿಕೇಟೆಡ್ ಮೀಡಿಯಾ ಕಲ್ಚರ್ ! ಇಂತಹ ಸನ್ನಿವೇಶವನ್ನು ಸೃಷ್ಟಿ ಮಾಡಿದ್ದೇ ಅಲ್ಲಿಯ ಕೆಲ ಮೀಡಿಯಾ ಹೀರೋಗಳು. ಈಗ ಅವರಿಗೆ ಅನುಕೂಲ ಮಾಡಿಕೊಡುವ ಅಭ್ಯರ್ಥಿ ಬೇಕು. ಡಿಟ್ಟೋ ನಮ್ಮ ಬುದ್ಧಿಜೀವಿಗಳ ಹಾಗೆ. ಅವರ ಪ್ರಕಾರ ಯಾವ ರೀತಿಯಲ್ಲಿ ಟ್ರಂಪ್ ಪ್ರಚಾರ ಮಾಡಿದನೋ ಅದನ್ನಾಧಾರಿಸಿ ಡೊನಾಲ್ಡ್ ಟ್ರಂಪ್ ರಾಷ್ಟ್ರಪತಿ ಸ್ಥಾನಕ್ಕೆ ಅನರ್ಹ! “ವಿಗ್ ಹಾಕಿಕೊಳ್ಳುವ ಒಬ್ಬ ವ್ಯಕ್ತಿ ಅಮೇರಿಕಾದ ರಾಷ್ಟ್ರಪತಿ ಆಗಬಲ್ಲನೇ?” ಇಂತಕ ಮೂರ್ಖ ಪ್ರಶ್ನೆ ಅಮೇರಿಕಾ ಮೀಡಿಯಾದ್ದು.

ಟ್ರಂಪ್ ವಿಷಯದಲ್ಲಿ ಏನಾಯಿತು ಎಂಬುದು ಎಲ್ಲರಿಗೂ ಗೊತ್ತು. ಒಂದಾದ ಮೇಲೆ ಇನ್ನೊಂದು ಎನ್ನುತ ಪ್ರತಿಯೊಂದು ಪ್ರಾಥಮಿಕ ಹಂತದಲ್ಲೂ ಸ್ಪರ್ಧೆಯನ್ನು ಗೆದ್ದು ಇಂದು ರಾಷ್ಟ್ರಪತಿ ಸ್ಥಾನಕ್ಕೆ ಪೈಪೋಟಿ ನಡೆಸಬಹುದಾದ ಇಬ್ಬರಲ್ಲಿ ಒಬ್ಬರು. ಟ್ರಂಪ್ ಪ್ರೆಸಿಡೆನ್ಸಿಯಲ್ ಇಲೆಕ್ಷನ್ ಗೆಲ್ಲುತ್ತಾರೋ ಇಲ್ಲವೋ ಗೊತ್ತಿಲ್ಲ. ಗೆದ್ದರೆ ಅಮೇರಿಕಾಕ್ಕೆ ಅಥವಾ ಜಗತ್ತಿಗೆ ಟ್ರಂಪ್ ಏನು ಮಾಡಬಲ್ಲರು? ಹಿತವೋ, ಅಹಿತವೋ ಅದರ ಬಗ್ಗೆ ದೀರ್ಘ ಚರ್ಚೆಯ ಅವಶ್ಯಕತೆ ಇದೆ, ಇಲ್ಲಿ ಅದು ಅಸಾಧ್ಯ. ಇಲ್ಲಿ ಹೇಳಬೇಕಾದ ವಿಷಯ ಅಂದರೆ ಜಗತ್ತಿನ ‘ದಿ ಗ್ರೇಟ್ ಮಿಡಿಯಾ ಹಬ್’ ಅದು ಹೇಗೆ ಅಷ್ಟು ದೊಡ್ಡ ಬ್ಲಂಡರ್ ಮಾಡಲು ಸಾಧ್ಯ? ಮೊದಲು ಬುದ್ಧಿ ಇಲ್ಲದವರು, ಅನಕ್ಷರಸ್ತರು, ಮೂರ್ಖರು, ರಾಜಕೀಯದ ಬಗ್ಗೆ ಗಂಧಗಾಳಿಯೂ ಇರದ ಕೆಲವು ನಿಷ್ಪ್ರಯೋಜಕರು ಮಾತ್ರ ಟ್ರಂಪ್ ಬೆಂಬಲಿಗರು ಎನ್ನಲಾಗುತ್ತಿತ್ತು. ಇಂದು ಪೋಲ್ ಸಮೀಕ್ಷೆ ಶೇ. 50 % ರಷ್ಟು ಅಮೇರಿಕಾ ಟ್ರಂಪ್ ಬೆಂಬಲಿಗರು ಎಂದು ತೋರಿಸುತ್ತಿದೆ. ಏನೇ ಹೇಳಿ, ಜಗತ್ತಿನ ಅತೀ ಪ್ರಬಲ ರಾಷ್ಟ್ರದ ಅರ್ಧದಷ್ಟು ಮಂದಿ ಬೋಗಸ್ ಅಥವಾ ಮೂರ್ಖರಾಗಿರಲು ಸಾಧ್ಯವೇ ಇಲ್ಲ! ಅಂದರೆ ಮೀಡಿಯಾಕ್ಕೆ ಯಾಕೆ ಆ ತಪ್ಪು ಕಲ್ಪನೆ ಹುಟ್ಟಿತು? ಏನೋ ಮಿಸ್ ಆಗ್ತಾ ಇದೆ ಇಲ್ಲಿ ಅಲ್ವಾ? ಹಾಗಾದರೆ ಮೀಡಿಯಾ ಜಗತ್ತನ್ನು ಮಿಸ್ ಗೈಡ್ ಮಾಡ್ತಾ ಇದೆ ಎಂದಾಯ್ತು ಅಲ್ವಾ?

ಹೀಗಾಗಲು ಕಾರಣ ಏನು? ಮೊದಲನೆಯದಾಗಿ ಇವತ್ತು ಏನು ಮೀಡಿಯಾ ಅಂತ ಹೇಳ್ತಾ ಇವೆಯಲ್ಲ ಅವುಗಳಲ್ಲಿ ಸಾಕಷ್ಟು ಮಂದಿ ಓಬಿರಾಯನ ಕಾಲದ ಲಿಬರಲ್ ವಿಚಾರವಾದಿಗಳು ತುಂಬಿ ಕೊಂಡಿದ್ದಾರೆ. ಯಾಕೆ ಅಂದರೆ ಅಮೇರಿಕಾದ ಪ್ರತಿಷ್ಠಿತ ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಕಾಲೇಜಿನಿಂದ ಬರುವ ವಿದ್ಯಾರ್ಥಿಗಳೇ ಇಂದು ಆ ಮಾಧ್ಯಮಗಳ ಹೀರೋಗಳು. ಅವರೆಲ್ಲ ಅತ್ಯುತ್ತಮ ಕಾಲೇಜುಗಳಿಂದ ಬಂದು ಮೀಡಿಯಾ ಹೌಸ್ ಸೇರಿಕೊಂಡು ತಮ್ಮ ರಾಜ್ಯ ಕಟ್ಟಿಕೊಂಡವರು. ಅವರಿಗೆ ಜನಸಾಮಾನ್ಯರ ವಿಚಾರದ ಬಗ್ಗೆ ಕಾಳಜಿ ಇಲ್ಲ, ಜಗತ್ತಿನ ಬಗ್ಗೆ ತಮ್ಮದೇ ಆದ ವಿಚಾರವನ್ನು ಹೊಂದಿರತಕ್ಕಂತವರು. ಅವರು ಏನು ಮಾಡುತ್ತಾರೆ ಅಂದರೆ ಉನ್ನತ ವಿದ್ಯಾಸಂಸ್ಥೆ/ಕಾಲೇಜುಗಳಿಗೆ ಹೋಗಿ ತಮ್ಮ ವಿಚಾರಕ್ಕೊಂದೇ ಹೊಂದಿಕೊಳ್ಳುವಂತವರನ್ನು ಕೆಲಸಕ್ಕೆ ಆರಿಸಿ ಕರೆ ತರುತ್ತಾರೆ. ಕಾಲ ಕಳೆದಂತೆ ಇದೇ ಸಿಸ್ಟಮ್ ಮುಂದುವರಿದೆ. ಇಡೀ ಮಿಡಿಯಾ ಹೌಸ್’ನಲ್ಲಿ ಸಂಪೂರ್ಣ ಆದರ್ಶ ಲಿಬರಲ್’ಗಳೇ ತುಂಬಿಕೊಂಡು ಬಿಡುತ್ತಾರೆ. ತುಂಬಿಕೊಂಡರೆ ಬೇಸರವಿಲ್ಲ ಆದರೆ ಅವರ ವಿಚಾರಗಳು ಜನರ ವಿಚಾರಕ್ಕೆ ಹೊಂದುವುದೇ ಇಲ್ಲ, ಅದಾವುದೋ ಒಂದು ಏಕಾಂಗಿ ದ್ವೀಪದಲ್ಲಿ ಅವರ ವಿಚಾರಗಳು ಹಾರಾಡುತ್ತಿರುತ್ತವೆ. ಉದಾಹರಣೆಗೆ ಜೆ ಎನ್ ಯು ತರಹದ ಯುನಿವರ್ಸಿಟಿಯಿಂದ ಹೊರ ಬಂದವರು. ಎಲ್ಲರೂ ಮೋದಿಯನ್ನು ದ್ವೇಷಿಸುತ್ತಾರೆ ಎಂದ ಹಾಗೆ ಅಮೇರಿಕಾದಲ್ಲಿ ಎಲ್ಲರೂ ಡೋನಾಲ್ಡ್ ಟ್ರಂಪ್’ನ್ನು ತಿರಸ್ಕರಿಸುತ್ತಾರೆ ಅಂದರು. ಅಲ್ಲಿ ಟ್ರಂಪ್’ರವರನ್ನು ತಿರಸ್ಕರಿಸಿದವರು ‘ಎಲ್ಲರೂ’ ಅಲ್ಲ. ಮತ್ಯಾರು? ಇವರ ಅಕ್ಕ ಪಕ್ಕದ ಕ್ಯುಬಿಕಲ್’ನಲ್ಲಿ ಕೂರುವ ಸಹೋದ್ಯೋಗಿಗಳು, ಸಾಯಂಕಾಲ ಕೆಲಸದ ನಂತರ ಕುಡಿಯುವಾಗ ಕೈ ಜೋಡಿಸುವರು, ಪೇಸ್ ಬುಕ್ ಹಾಗೂ ವಾಟ್ಸಾಪ್ ಗೆಳೆಯ ಗೆಳತಿಯರು ಅಷ್ಟೇ. ನಂಬಿ ಬಿಡಿ, ಅದೊಂದು ಬಬಲ್ ಗುಂಪು ಅಷ್ಟೇ, ಅವರು ಹೇಳುವ ಹಾಗೆ ‘ಎಲ್ಲರೂ’ ಅಲ್ಲ.

ಇದು ನಮಗೆ ಹೊಸತಲ್ಲ ಯಾಕೆಂದರೆ ನರೇಂದ್ರ ಮೋದಿಯ ವಿಷಯದಲ್ಲೂ ಹೀಗೇ ನಡೆದಿತ್ತು. 2011- 2012 ರ ಸಮಯದಲ್ಲಿ ಯಾವುದೇ ಇಂಗ್ಲಿಷ್ ಮಿಡೀಯಾ ಅವರನ್ನು ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಕಂಡಿರಲಿಲ್ಲ. ಸೆಕ್ಯುಲರ್ ಯಾ ಲಿಬರಲ್ ಮಿಡೀಯಾ ಮೋದಿಜಿಯವರ ಜನಪ್ರಿಯತೆಯನ್ನು ಗ್ರಹಿಸುವಲ್ಲಿ ವಿಫಲರಾದವು. ಕೊನೆಯಲ್ಲಿ ಬೇರೆ ದಾರಿಯಿಲ್ಲದೆ ತಮ್ಮನ್ನು ತಾವು ತಿದ್ದಿಕೊಂಡವು. ಚುನಾವಣೆಯ ನಂತರವೂ ಕೂಡ ಕೈಲಾಗದೆ ಮೈ ಪರಚಿಕೊಂಡವರು ಎಷ್ಟೋ? ಇವತ್ತು ಟ್ರಂಪ್ ಅವರ ಜನಪ್ರಿಯತೆಯನ್ನು ವಿವರವಾಗಿ ವಿಶ್ಲೇಷಿಸಬಹುದು. ಅಮೇರಿಕದ ಜನರು ರಾಜಕೀಯ ಸಭ್ಯತೆಯಿಂದ ಬೇಸತ್ತು ಹೋಗಿದ್ದಾರೆ. ಪೊಲಿಟಿಕಲ್ ಕರೆಕ್ಟನೆಸ್ ಎಂಬುವುದಿದೆಯಲ್ಲ ಅದರಿಂದ ಜನರು ಅಲ್ಲಿ ಸುಸ್ತಾಗಿದ್ದಾರೆ. ಏನನಿಸುತ್ತದೆಯೋ ಅದನ್ನು ಹೇಳುವ ಹಾಗೆ ಇಲ್ಲ, ಅಲ್ಲಿಯ ಜನರಿಗ ಎಲ್ಲವನ್ನೂ ಮುಚ್ಚಿಕೊಂಡು ಶುಗರ್ ಕೋಟೆಡ್ ಶಬ್ಧಗಳಲ್ಲಿ ವರ್ಣಿಸಿ ಸಾಕಾಗಿದೆ. ಟ್ರಂಪ್ ಅಂತವರನ್ನು ಸೆಳೆದರು, ಅಂದರೆ ಬಹುಪಾಲು ಮಂದಿಗೆ ದನಿಯಾದರು. ಅರ್ಥಿಕ ಸ್ಥರದಲ್ಲಿ ಕೆಳಗಡೆ ಇರುವವರಿಗೆ ಹಾಲಿ ರಾಜಕೀಯ ವ್ಯಕ್ತಿಗಳು ಅವರ ಜೀವನವನ್ನು ಉದ್ಧಾರ ಮಾಡಬಹುದೆಂಬ ನಂಬಿಕೆಯೇ ಇಲ್ಲ. ಟ್ರಂಪ್ ಅವರನ್ನು ಶ್ರೀಮಂತ ವರ್ಗ ತಿರಸ್ಕಾರ ಮಡುತ್ತಿದೆ, ಆದರೆ ಅದೇ ಅವರನ್ನು ಸಾಮಾನ್ಯ ಜನರ ಹತ್ತಿರಕ್ಕೆ ತರುತ್ತಿದೆ. ಟ್ರಂಪ್ “ಅಮೇರಿಕಕ್ಕೆ ಸಿಇಓ ಬೇಕು” ಅಂದಾಗ, ಎಲ್ಲ ಶ್ರೀಮಂತ ವರ್ಗ ಟ್ರಂಪ್ ಅವರಿಗೆ “ಒಂದು ಕ್ಲಾಸೇ ಇಲ್ಲ ರಾಷ್ಟ್ರಪತಿಗೂ ಸಿಇಓಗೂ ಏನು ವ್ಯತ್ಯಾಸ ಇಲ್ಲವೇ?” ಅಂದುಕೊಂಡರು. ಆದರೆ ಜನ ಸಾಮಾನ್ಯರಿಗೆ ಗೊತ್ತು ಅವರ ಜೀವನ ಮಟ್ಟ ಹೆಚ್ಚಬೇಕು ಅಂದರೆ ಬರೀ ಭಾಷಣ ಮಾಡುವ ನಾಯಕ ಅಲ್ಲ ಬ್ಯುಸಿನೆಸ್ ಎಕ್ಯುಮೆನ್ ಇರುವ ಸಿಇಓ ಬೇಕು ಎಂದು. ಇನ್ನು ಟ್ರಂಪ್ ಅವರ ಭಾಷಾ ಪ್ರಯೋಗದ ಬಗ್ಗೆ ನೋಡೋಣ. ಸುಳ್ಳು ಭರವಸೆ ಆಗಿರಬಹುದು, ಗಾಳಿಯಲ್ಲಿ ಮಾತಾಡುವುದಾಗಿರಬಹುದು, ಇದ್ದದ್ದರ ಹತ್ತು ಪಟ್ಟು ಮಾಡಿ ಹೇಳುವುದಿರಬಹುದು, ಅವರದ್ದೇ ಕೆಲವು ಸಿದ್ಧಾಂತಗಳಿರಬಹುದು ಏನೇ ಆಗಿರಲಿ ಜನರಿಗೆ ಗೊತ್ತು ಅದಿಲ್ಲದೆ ರಾಜಕೀಯ ನಡೆಯುವುದಿಲ್ಲ ಎಂದು. ಟ್ರಂಪ್ ಹಾಗೂ ಸೋ ಕಾಲ್ಡ್ ಲಿಬರಲ್ ರಾಜಕೀಯ ಪುಢಾರಿಗಳ ನಡುವಿನ ವ್ಯತ್ಯಾಸ ಏನು ಅಂದರೆ ಟ್ರಂಪ್ ಹೇಳಿದ್ದನ್ನೇ ಉಳಿದ ನಾಯಕರು ಬಣ್ಣ ಹಚ್ಚಿ ಹೇಳುತ್ತಾರೆ ಅಷ್ಟೇ! ಹೀಗಾಗಿ ಒಟ್ಟಾಗಿ ನೋಡಿದಾಗ ಸಹಜವಾಗಿ ಟ್ರಂಪ್ ಜನಪ್ರಿಯತೆ ಹೆಚ್ಚಿದೆ ಆದರೆ ಅದು ಅಲ್ಲಿಯ ಕೆಲವು ಮಿಡೀಯಾಕ್ಕೆ ಇನ್ನೂ ಗೊತ್ತಾಗಿಲ್ಲ!

ಈ ಟ್ರಂಪ್ ಜನಪ್ರಿಯತೆಯ ಎಪಿಸೋಡಿನಿಂದ ಭಾರತೀಯ ಮಿಡೀಯಾದವರು ಕಲಿಯಬೇಕಾದದ್ದು ಬಹಳ ಇದೆ. ಅಮೇರಿಕಾದಲ್ಲಿ ಭಾರತದಲ್ಲಿದ್ದಷ್ಟು ಸಂಕೀರ್ಣತೆ ಇಲ್ಲ, ಅಲ್ಲಿ ಬಹಳ ಸಿಂಪಲ್. ಆದರೂ ಅವರಿಂದ ಜನಪ್ರಿಯತೆ ಅರಿಯಲು ಆಗಿಲ್ಲ ಅಂದರೆ ಭಾರತದಲ್ಲಿ ಇನ್ನೆಷ್ಟು ಕಷ್ಟ ಆಗಬಹುದು? ಜಾತಿ, ಮತ, ಪಂಥ, ಅದು ಇದು ಅಂತ ಬಹಳ ಕಾಂಪ್ಲೆಕ್ಸ್ ನಮ್ಮ ರಾಜಕೀಯ ಚದುರಂಗ. ಇವೆಲ್ಲವನ್ನೂ ಭೇದಿಸಿ ಜನರ ಮನಸ್ಸನ್ನು ಅರ್ಥ ಮಾಡಿಕೊಳ್ಳುಬೇಕು ಅಂದರೆ ಅದು ಬಹಳ ಕಷ್ಟ. ಇವತ್ತು ಹೇಗಾಗಿದೆ ಅಂದರೆ ಮೀಡಿಯಾ ಜನರೇ ಒಂದು ಗುಂಪು ಸಾಮಾನ್ಯರೇ ಒಂದು ಗುಂಪು. ಜನರ ನೋವು ಅವರಿಗೆ ಕಾಣಿಸುವುದಿಲ್ಲ, ಅವರು ತೋರಿಸುವುದು ನಮಗೆ ಕಾಣುವುದಿಲ್ಲ. ಹೀಗಾಗಿ ಜನಸಾಮಾನ್ಯರಿಗೆ ಮೀಡಿಯಾದ ಮೇಲಿನ ನಂಬಿಕೆ ಕಳೆದುಹೋಗಿದೆ. ಮೀಡಿಯಾ ಜನರನ್ನು ರಿಪ್ರೆಸೆಂಟ್ ಮಾಡುತ್ತಿಲ್ಲ ಎಂಬ ನಂಬಿಕೆ ಗಟ್ಟಿಯಾಗಿದೆ. ಅದಕ್ಕಾಗಿಯೇ ಅಲ್ಲವೆ #ಪ್ರೆಸ್ಟಿಟ್ಯೂಟ್’ಗಳು ಎಂಬ ಶಬ್ಧಗಳು ಹುಟ್ಟಿಕೊಂಡಿದ್ದು. ಜನರ ಆಕ್ರೋಶವನ್ನು ನಾವು ಪ್ರತಿನಿತ್ಯ ಸೊಶಿಯಲ್ ಮೀಡಿಯಾದಲ್ಲಿ ಕಾಣಬಹುದು. ಇದೆಲ್ಲಾ ಏನು ತೋರಿಸುತ್ತದೆ ಅಂದರೆ ಜನರು ಏನನ್ನು ಅನುಭವಿಸುತ್ತಿದ್ದಾರೋ ಅದನ್ನು ಮೀಡಿಯಾ ಎತ್ತಿ ಹೇಳುತ್ತಿಲ್ಲ, ಅದು ತನ್ನದೇ ಗೋಗಲ್’ನಲ್ಲಿ ತನಗೆ ಹೇಗೆ ಬೇಕೋ ಹಾಗೆ ನೋಡುತ್ತಿದೆ. ಮೀಡಿಯಾ ಯಶಸ್ವಿಯಾಗಲು ಅಥವಾ ಒಂದು ರಾಜಕೀಯ ಪಕ್ಷ ಯಶಸ್ವಿಯಾಗಲು ಅವುಗಳ ಕಿವಿ ನೆಲಕ್ಕಿರಬೇಕು. ಜನರ ಮನದಲ್ಲಿನ ಆಗು ಹೋಗುಗಳ ಅರಿವಿರಬೇಕು. ಇಂದು ಯಾವುದೇ ಪಾರ್ಟಿ ಆಗಿರಲಿ ಅವುಗಳ ಕಿವಿ ಮುಕ್ಕಾಲು ಭಾಗ ಕೇವಲ ಮೀಡಿಯಾದ ಮೇಲಿದೆ. ಮೀಡಿಯಾ ಹಾರ್ದಿಕ್ ಪಟೇಲ್ ಚಳುವಳಿ ಅಷ್ಟು ಯಶಸ್ವಿ ಆಗುತ್ತದೆ ಎಂದು ಹೇಳಲಿಲ್ಲ ಆದರೆ ಜನರಿಗೆ ಗೊತ್ತಿತ್ತು ಅದಕ್ಕಾಗಿಯೇ ಅಮೇಲೆ ಅದು ಬಹಳಷ್ಟು ಮಂದಿಗೆ ಆಶ್ಚರ್ಯ ಹುಟ್ಟಿಸಿದ್ದು. ಇನ್ನೊಂದು ಉದಾಹರಣೆ ಮೀಡಿಯಾಕ್ಕೆ ಅಸಹಿಷ್ಣುತೆ ಕಂಡಿತು ಆದರೆ ಜನರಿಗೆ ಕಾಣಲೇ ಇಲ್ಲ. ಇವತ್ತು ಕಲಿಯಬೇಕಾದ ವಿಷಯ ಅಂದರೆ ಇನ್ನಾದರೂ ಈ ಮೀಡಿಯಾ ಹೌಸ್’ಗಳು ದೊಡ್ಡ ದೊಡ್ಡ ಕಾಲೇಜು, ಹೆಸರಾಂತ ಯುನಿವರ್ಸಿಟಿಗಳಿಂದ ತಮ್ಮಂತಹ ಸಿಕ್ಯುಲರ್, ಲಿಬರಲ್, ಭಯೋತ್ಪಾದಕರ ತಳಸ್ಪರ್ಶಿ, ದೇಶ ವಿರೋಧಿಗಳನ್ನು ಪೂಜಿಸುವಂತಹ ಅಭ್ಯರ್ಥಿಗಳನ್ನು ಆರಿಸಿ ಕರೆದು ತರುವುದನ್ನು ಬಿಟ್ಟು ನಿಜವಾಗಿ ಭಾರತದ ಜನಮನ ಅರಿತವರನ್ನು ಅಥವಾ ಅರಿಯಲು ಆಸಕ್ತಿ ಇರುವವರನ್ನು ಆಯ್ಕೆ ಮಾಡಿ ತಂದು ಬೆಳೆಸಬೇಕು. ರಾಜಕೀಯ ಪಾರ್ಟಿಗಳು ಹಾಗೆಯೇ ಜನರ ಅಭಿಪ್ರಾಯ ಅರಿಯಲು ಹೆಚ್ಚು ಹೆಚ್ಚು ಪ್ರಯತ್ನ ನಡೆಸಬೇಕೇ ಹೊರತು ಬರೀ ಮಿಡಿಯಾ ರಿಪೋರ್ಟ್ ಮೇಲೆ ಆಧಾರವಾಗಿ ನಿಲ್ಲಬಾರದು. ತಮ್ಮ ತಮ್ಮ ವಾಟ್ಸಾಪ್, ಟ್ವಿಟರ್ ಹಾಗೂ ಪೇಸ್ ಬುಕ್ ಪ್ರಪಂಚದ ಹೊರಗೂ ಬಂದು ನೋಡಬೇಕು, ನಿಜವಾದ ಜನಜೀವನ ಅರ್ಥ ಮಾಡಿಕೊಳ್ಳಬೇಕು.

Facebook ಕಾಮೆಂಟ್ಸ್

ಲೇಖಕರ ಕುರಿತು

Vikram Joshi

ಬೆಳೆದಿದ್ದು ಕರ್ನಾಟಕದ ಕರಾವಳಿಯಲ್ಲಿ, ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್. ಆಟೋಮೊಬೈಲ್ ಕಂಪನಿಯಲ್ಲಿ ಕೆಲಸ. ಮಿಷಿಗನ್ ಯುನಿವರ್ಸಿಟಿಯಿಂದ ಆಟೊಮೊಬೈಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ. ಉದ್ಯೋಗ ಹಾಗೂ ಸಂಸಾರದಿಂದ ಬಿಡುವು ಸಿಕ್ಕಾಗ ಬರೆವಣಿಗೆ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!