ಅಂಕಣ

ಎಡ ಬಲದ ನಡುವೆ ಇರುವುದು ಹರಿತವಾದ ಅಲಗು

ಕೆಲವೊಂದು ಕೆಲಸಗಳು ಎಡಕೈಯಲ್ಲಿ ಮಾಡಲಷ್ಟೇ ಅನುಕೂಲ, ಇನ್ನು ಕೆಲವು ಕೆಲಸಗಳು ಬಲಕೈಯಲ್ಲಷ್ಟೇ ಮಾಡಲು ಅನುಕೂಲ. ಅವುಗಳನ್ನು ಅದಲು ಬದಲು ಮಾಡಿದರೆ ನಿಖರವಾದ ಹೊಂದಾಣಿಕೆ ಕಷ್ಟವಾಗುತ್ತದೆ. ಇನ್ನು ಎಡಕೈ ಬಲಕೈ ಎಂದು ಮೋಸ ಮಾಡಲಾರೆ ಎನ್ನುತ್ತಾ ಎಲ್ಲಾ ಕೆಲಸಗಳಿಗೆ ಎರಡೂ ಕೈಗಳನ್ನ ತೊಡಗಿಸಿಕೊಳ್ಳುವುದು ಮೂರ್ಖತನ. ಎಡಗೈ ಯಾವಾಗ ಬಳಸಲಿ, ಬಲಗೈ ಯಾವಾಗ ಬಳಸಲಿ ಹಾಗೂ ಎರಡೂ ಕೈಗಳನ್ನು ಎಲ್ಲಿ ಉಪಯೋಗಿಸಿದರೆ ಉತ್ತಮ ಎನ್ನುವುದು ತಿಳಿದಿದ್ದರೆ ಸಮಸ್ಯೆಯೇ ಇಲ್ಲ.

ಎಡಪಂಥೀಯ ಹಾಗೂ ಬಲಪಂಥೀಯ ವಿಚಾರಗಳಲ್ಲಿ ಒಂದನ್ನು ಅನುಸರಿಸುವವನಿಗೆ ತನ್ನ ವಿರೋಧಿ ಬಣದ ಆಕ್ರಮಣಗಳನ್ನ ಸಿದ್ಧಾಂತಗಳ ಬಲದಲ್ಲಿ ಆಧರಿಸಿ ನಿಲ್ಲಬಹುದು. ಎಡ ಬಲಗಳನ್ನು ಚಿಂತಿಸದೆ ಅದರ ನಡುವೆ ಸಂತೋಷದಿಂದ ಜೀವನ ನಡೆಸುವ ಬೇಕಾದಷ್ಟು ಜೀವಗಳಿವೆ. ಇವರಿಗೆ ಸಿದ್ಧಾಂತಗಳ ಚಿಂತೆಯಿರುವುದಿಲ್ಲ. ತಮ್ಮ ನಿತ್ಯ ಜೀವನದ ಅಗತ್ಯಗಳು ಈಡೇರಿದರಷ್ಟೇ ಸಾಕು.

ಆದರೆ ಎಡ-ಬಲದ ನಡುವೆ ನಿಲ್ಲಲು ತೊಳಲಾಡುವ ಒಂದಷ್ಟು ಜೀವಗಳಿವೆ. ಅತ್ತ ಎಡಪಂಥೀಯ ವಿಚಾರಗಳಲ್ಲೂ ತೊಡಗಿಸಿಕೊಳ್ಳಲು ಇಚ್ಚಿಸದೆ ಇತ್ತ ಬಲಕ್ಕೂ ನೆಚ್ಚಲು ಇಷ್ಟಪಡದೆ ಸಿದ್ಧಾಂತಗಳನ್ನು ಮೀರಿ ನಿಲ್ಲುವ ಪ್ರಯತ್ನವದು. ಅಷ್ಟು ಸಲೀಸಾಗಿ ಇದು ಅಸಾಧ್ಯವಾದದ್ದು. ಈ ಪ್ರಯತ್ನದಲ್ಲಿ ಸೋತಾಗ ಅಥವಾ ಕೈಗೆಟುಕದ ದ್ರಾಕ್ಷಿಯಂತಾದಾಗ ಆ ಸಂಕಟ ಹೇಳತೀರದು. ಅತ್ತ ಎಡದಿಂದಲೂ ಬಲದಿಂದಲೂ ಠೀಕೆ ಕೇಳಿಸಿಕೊಳ್ಳುವ ಪರಿಸ್ಥಿತಿ ಅವರದ್ದು. ಅದುವರೆಗೆ ಸಮಾಜದಲ್ಲಿ ಕಟ್ಟಿಕೊಂಡ ಅಥವಾ ಬಯಸಿದ “ತಕ್ಕಡಿ ಸರಿತೂಗಿಸುವ ಐಡೆಂಟಿಟಿ”ಯನ್ನ ಕಳೆದುಕೊಳ್ಳುವ ಭಯ ಒಂದೆಡೆಯಾದರೆ ಟೀಕೆಗಳ ಒತ್ತಡ ಮತ್ತೊಂದೆಡೆಯಿಂದ ಪರಿಸ್ಥಿತಿಯನ್ನ ಇನ್ನಷ್ಟು ಹದಗೆಡಿಸುತ್ತದೆ.

ಈ ಕೊರತೆಯ ಕೆರೆತ ತಲೆಯೊಳಗೆ ಪ್ರಾರಂಭವಾದಾಗ ಆಗುವ ಅವಾಂತರಗಳು ಅಷ್ಟಿಷ್ಟಲ್ಲ. ನಾವು ಆಲೋಚಿಸುವ ಪ್ರತಿಯೊಂದರ ಮೇಲು ಇದು ಬಂದು ಕುಳಿತುಬಿಡುತ್ತದೆ. ಬರುತ್ತಾ ಬರುತ್ತಾ ಪ್ರತಿಯೊಂದನ್ನು ಸಣ್ಣಪುಟ್ಟ ವಿಷಯಕ್ಕೂ ಸಮಾನ ತೂಕವನ್ನು ನೀಡುವ “ದೊಂಬರಾಟ” ತಲೆಯೊಳಗೆ ಅರಿವಿಲ್ಲದೆ ನಡೆದು ಬಿಡುತ್ತದೆ. ಇಲ್ಲಿಗೆ ಸಿದ್ಧಾಂತಗಳನ್ನು ಮೀರಿ ನಿಲ್ಲುವ ಪ್ರಯತ್ನ ಪೂರ್ತಿಯಾಗಿ ಸಮಾಧಿಯಾಗಿಬಿಡುತ್ತದೆ.

ಸರಿತೂಗಿಸುವ ಭರದಲ್ಲಿ ಎಷ್ಟೋ ಒಳ್ಳೆಯ ವಿಚಾರಗಳನ್ನ ನಾವು ಕಡೆಗಣಿಸಿ ಬಿಡುತ್ತೇವೆ. ಬಹಳಷ್ಟು ಒಳ್ಳೆಯದನ್ನು ಮಾಡುವ ವ್ಯಕ್ತಿಯನ್ನು ನಾವು ಅನುಮಾನದಿಂದ ನೋಡಲಾರಂಭಿಸುತ್ತೇವೆ. ಒಂದು ನಿರ್ದಿಷ್ಟ ಕಾಲದಲ್ಲಿ ಆ ವ್ಯಕ್ತಿಯನ್ನು ಟೀಕಿಸಲು ವಿಷಯಗಳು ಸಿಗದಿದ್ದರೂ ಮೊಸರಲ್ಲಿ ಕಲ್ಲು ಹುಡುಕುವಂತೆ ಕುಂತಲ್ಲಿ ನಿಂತಲ್ಲಿ ಕಲ್ಲು ಹುಡುಕಲಾರಂಭಿಸುತ್ತೇವೆ. ಇತ್ತೀಚೆಗೆ ಮೋದಿ ವಿಚಾರದಲ್ಲೂ ಆಗುತ್ತಿರುವುದು ಇಷ್ಟೆ. ಪ್ರಧಾನಿ ಮೋದಿ ನಡೆಯನ್ನು ಸಂಪೂರ್ಣವಾಗಿ ವಿರೋಧಿಸುವವರು ಒಂದು ವರ್ಗವಾದರೆ ಎಲ್ಲಾ ನಡೆಯನ್ನು ಒಪ್ಪಿಕೊಂಡು ಹೊಗಳು ಭಟರೆನಿಸಿಕೊಳ್ಳುತ್ತೇವೆಯೋ ಎಂಬ ಭಯದಲ್ಲಿ ಕೆಲವೊಂದನ್ನು ವಿರೋಧಿಸುವ ಒಂದು ವರ್ಗ ಇದ್ದೇ ಇದೆ.

ನಿಜವಾಗಿ ತಪ್ಪಿದ್ದಲ್ಲಿ ತಪ್ಪನ್ನು ಕಂಡುಕೊಳ್ಳುವುದು ಇಂತವರಿಗೆ ಸಾಧ್ಯವಾಗುವುದೇ ಇಲ್ಲ. ಕೆಲವೊಂದು ಘಟನೆಗಳನ್ನು ಸಮಾನವಾಗಿ ನೋಡಬೇಕು ಎಂಬುದನ್ನು ತಲೆಯಲ್ಲಿಟ್ಟುಕೊಂಡು ನೋಡುವುದರಿಂದಲೇ ಅದು ಹಾದಿ ತಪ್ಪುತ್ತದೆ. ಇದೇ ರೀತಿಯಾಗಿಯೇ ಕೆಲವು ಕಡೆ ಒಂದು ವರ್ಗದ ನಾಯಕರು ತಪ್ಪಿದ್ದರೂ ಅದನ್ನು ಕಾಣದೆ ಇನ್ನೊಂದು ವರ್ಗದ ಬೆಂಬಲಕ್ಕೆÉ ನಿಲ್ಲುವುದು. ರಾಜಕೀಯ ಪಕ್ಷಗಳ ದೊಂಬರಾಟಕ್ಕೆ ಕೇವಲ  ಮತ ರಾಜಕೀಯ ಕಾರಣವಾಗಿರುವುದಿಲ್ಲ. ಈ ಒಂದು ಕಾರಣವೂ ಇರುತ್ತದೆ. ಸಮಾನತೆ ಎಂಬುದು ದೃಷ್ಟಿಕೋನಕ್ಕೆ ತಕ್ಕಂತೆ ಬದಲಾಗುತ್ತಾ ಇರುತ್ತದೆ. ಹೊರಗಿನ ಸಮಾಜವನ್ನು ತೃಪ್ತಿಪಡಿಸಲು ಹೊರಟವರಿಗೆ ಮಾತ್ರ್ರ ಈ ಸಮಸ್ಯೆ ಉದ್ಭವಿಸುತ್ತದೆ.

ನೆಚ್ಚಿದ ಸಿದ್ಧಾಂತವಿರಲಿ, ಅದರಿಂದ ಹೊರಬರುವ ಪ್ರಯತ್ನವೇ ಇರಲಿ, ಎಲ್ಲವೂ ವ್ಯಕ್ತಿತ್ವ ರೂಪುಗೊಳ್ಳುವುದಕ್ಕೆ ಕೊಡುಗೆ ನೀಡಬೇಕು. ಅಷ್ಟೆ! ಸಿದ್ಧಾಂತಗಳೇ ಅಳತೆಗಳಾದಾಗ ಅವುಗಳ ಒಳಗೆ ಬದುಕಬೇಕಾದ ಅಥವಾ ಅವುಗಳಿಂದ ಹೊರಬರುವ ಅನಿವಾರ್ಯತೆ ರೂಪುಗೊಳ್ಳುತ್ತದೆ. ಪ್ರತಿಯೊಂದನ್ನು ಸಿದ್ಧಾಂತಗಳ ಕಣ್ಣಿನಲ್ಲಿ ನೋಡಿ ಅವುಗಳನ್ನು ಮೀರಬೇಕು ಎನ್ನುವುದು ನಮಗೆ ನಾವು ಹಾಕಿಕೊಳ್ಳುವ ಮಿತಿಗಳಾಗಿಬಿಡುತ್ತದೆ. ಸಿದ್ಧಾಂತಗಳೊಳಗೆ ಸಿಕ್ಕಿಹಾಕಿಕೊಳ್ಳುವುದು ಎಷ್ಟೂ ಹಾನಿಕಾರಕವೋ ಅದರೊಳಗಿನಿಂದ ಹೊರಬಂದು ಸರಿತೂಕಗಳಿಸಿಕೊಳ್ಳಬೇಕೆಂಬ ಹಂಬಲವೂ ಕೂಡಾ ನಮ್ಮ ಆಲೋಚನೆಯ ಬೆಳವಣಿಗೆಯನ್ನು ನಿಲ್ಲಿಸಿ ಬಿಡುತ್ತದೆ. ಅವುಗಳಿಂದ ಹೊರಗಿರುವ ವಿಶಾಲವಾದ ಸಾಧ್ಯತೆಗಳು ಸಿದ್ಧಾಂತಗಳ ಕರಿನೆರಳಿನಲ್ಲಿ ಮುಳುಗಿ ಹೋಗುತ್ತದೆ. ಪ್ರತಿಯೊಂದಕ್ಕೂ ಇರುವ ವಿಸ್ತಾರವಾದ ಸಾಧ್ಯತೆಗಳನ್ನು ನಮಗೆ ಗುರುತಿಸಲು ಸಾಧ್ಯವಾಗುವ ಮನಸ್ಸು ನಿರ್ಮಾಣವಾದಾಗ ಸಿದ್ಧಾಂತಗಳನ್ನು ಮೀರಿ ನಿಲ್ಲುವ ಕೆಲಸ ತನ್ನಿಂದ ತಾನಾಗಿಯೇ ನಡೆದು ಬಿಡುತ್ತದೆ. ಇರದಿದ್ದರೆ ಎಡ ಬಲದ ನಡುವಿನ ಹರಿತವಾದ ಅಲಗಿನಲ್ಲಿ ಅಡಿ ತಪ್ಪಿ ಘಾಸಿಗೊಳಗಾಗಬೇಕಾಗುತ್ತದೆ.

-ಶಶಾಂಕ್ ಬಜೆ

shashankbaje@yahoo.in

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!