ಅಂಕಣ

ಇಂಥ ಕೆಸರಿನಲ್ಲೂ ಅರಳಬಲ್ಲದೇ ಕಮಲ?

        ಮಂಗಳೂರಿಗೆ ಬಂದ ಅಮಿತ್ ಶಾ ಅವರು ಮುಂದಿನ ಮುಖ್ಯಮಂತ್ರಿ ಬಿ.ಎಸ್.ವೈ. ಎಂದು ಹೇಳಿದ್ದಾರೆ. ಈಗ ಈ ಸ್ಪಷ್ಟನೆ ಕೊಡುವ ಅಗತ್ಯವಿತ್ತಾ? ಮತ್ತು ಬಿ. ಎಸ್.ವೈ ಬಿಜೆಪಿಗೆ ಅನಿವಾರ್ಯವಾ ಎಂಬುದರ ಬಗ್ಗೆ ಸ್ವಲ್ಪ ನೋಡಬೇಕಿದೆ. ಯು.ಪಿ.ಎ ಸರ್ಕಾರದ ಸಮಯದಲ್ಲಾದ ಸಾಲು ಸಾಲು ಹಗರಣಗಳನ್ನು ಲೋಕಸಭೆಯಲ್ಲಿ ಕೇಂದ್ರ ಬಿಜೆಪಿಯವರು ಪ್ರಶ್ನಿಸಿದಾಗ ಕಾಂಗ್ರೆಸ್ಸಿನವರು ಕೇಳುತ್ತಿದ್ದದ್ದು ಒಂದೆ, ಯಡ್ಯುರಪ್ಪನವರ ಬಗ್ಗೆ ಏನು ಹೇಳುತ್ತೀರಿ? ಅಂತ… ಅದಕ್ಕೆ ಕೇಂದ್ರದ ಮಂದಿಗೆ ಉತ್ತರವಿರಲಿಲ್ಲ. ಒಮ್ಮೆಲೆ ಅವರನ್ನು ಉಚ್ಛಾಟಿಸಲು ಬಿ.ಎಸ್.ವೈ ಅಷ್ಟೊಂದು ಪ್ರಭಾವವಿಲ್ಲದ ವ್ಯಕ್ತಿಯೂ ಅಲ್ಲ. ಆದರೆ ಅವರ ತಪ್ಪುಗಳಿಗೆ ಸಮರ್ಥನೆಗಳನ್ನು ಕೊಡಲಾಗದೆ, ಅವರನ್ನು ಹೊರಕ್ಕೂ ಹಾಕದೇ ಸಂದಿಗ್ಧತೆಗೆ ಸಿಲುಕಿತ್ತು ಆಗಿನ ಪಕ್ಷ. ಅದಕ್ಕಿರುವ ಕಾರಣ, ಬಿ.ಎಸ್.ವೈ ರಹಿತ ರಾಜ್ಯ ಬಿಜೆಪಿಯನ್ನು ನೆನೆಯಲಿಕ್ಕೂ ಸಾಧ್ಯವಿಲ್ಲ. ಅವರು ಮಾಡಿದ ತಪ್ಪುಗಳು ಎಲ್ಲರಿಗೂ ಗೊತ್ತಿದ್ದರೂ ಒಮ್ಮೆ ಮೆಲಕು ಹಾಕೋಣ. ಇಷ್ಟೆಲ್ಲಾ ಆದರೂ ಬಿಜೆಪಿ ಅವರ ಬೆನ್ನಿಗೆ ನಿಂತದ್ದು ಯಾಕೆ? ಉತ್ತರ ಹುಡುಕೋಣ…

    ಅದು 2008 ಸುಮಾರು ನಾಲ್ಕು ದಶಕಗಳ ಕನಸು ನನಸಾಗುವ ಸಮಯ ಬಿ.ಎಸ್.ವೈ. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವ ಸಂದರ್ಭಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಜನ ಸಾಗರೋಪಾದಿಯಲ್ಲಿ ಬಂದು ಕಣ್ತುಂಬಿಕೊಂಡರು. ಶಿಸ್ತಿನ ಪಕ್ಷವೆಂದೆ ಹೆಸರಾಗಿದ್ದ ಬಿಜೆಪಿ ಕರ್ನಾಟಕ ಮಾತ್ರವಲ್ಲದೇ ಇಡೀ ದಕ್ಷಿಣ ಭಾರತದಲ್ಲೇ ಪ್ರಥಮ ಭಾರಿಗೆ ಅಧಿಕಾರ ಚುಕ್ಕಾಣಿ ಹಿಡಿಯುವ ಘಳಿಗೆ. ಕರ್ನಾಟಕ ರಾಜ್ಯ ಬಿಜೆಪಿಯ ಕಟ್ಟಾ ಕಾರ್ಯಕರ್ತ ಬಿ.ಎಸ್.ವೈ ಮುಖ್ಯಮಂತ್ರಿಯಾಗುವ ಸುಸಂದರ್ಭ. ಬಿ.ಎಸ್.ವೈ ಯಾರೋ ನಿರ್ಮಿಸಿದ ಅರಮನೆಯಲ್ಲಿ ರಾಜನಾಗುತ್ತಿರಲಿಲ್ಲ.ಆ ಅರಮನೆಯ ಒಂದೊಂದು ಇಟ್ಟಿಗೆಯನ್ನು ತಮ್ಮ ಕೈಯಾರೆ ಇಟ್ಟು ಕಟ್ಟಿಕೊಂಡದ್ದಾಗಿತ್ತು. ಅವರಿಗಿಂತಲೂ ಅರ್ಹ ಮತ್ತು ಯೋಗ್ಯ ವ್ಯಕ್ತಿ ಆ ಗದ್ದುಗೆಗೆ ಮತ್ತೊಬ್ಬರು ಇರಲಿಲ್ಲ. ಆದರೆ ಮುಂದಿನ ಹೆಜ್ಜೆಗಳು ಅಷ್ಟು ಸುಲಭವಾಗಿರಲಿಲ್ಲ. ಬಿಜೆಪಿಯ ಆಗಿನ ಸಂಖ್ಯಾವರ್ಧನೆಗಾಗಿ ಆಪರೇಷನ್ ಕಮಲಕ್ಕೆ ಕೈ ಹಾಕಿದ್ದೆ ಶಿಸ್ತಿನ ಪಕ್ಷದ ಮೊದಲ ಅಶಿಸ್ತಿನ ಹೆಜ್ಜೆಯಾಗಿತ್ತು. ಸಂಖ್ಯಾವರ್ಧನೆ ತಪ್ಪಲ್ಲದಿದ್ದರೂ ಹೊರಗಡೆಯಿಂದ ಪಕ್ಷದ ಕಕ್ಷೆಗೆ ಬಂದವರಿಗೆ ಕೊಡುವ ಪ್ರಾಶಸ್ತ್ಯ ಮೂಲ ಬಿಜೆಪಿಗರನ್ನು ನಿರ್ಲಕ್ಷಿಸುವ ಮಟ್ಟಿಗೆ ಹೋಯಿತು. ಹೊರಗಿನಿಂದ ಬಂದವರು ಸಂಪೂರ್ಣ ನಿಯಂತ್ರಣವನ್ನು ತಮ್ಮ ಕೈಗೆ ತೆಗೆದುಕೊಂಡು ಅವರ ಕಕ್ಷೆಯಲ್ಲಿ ಬಿ.ಎಸ್.ವೈ ಆದಿಯಾಗಿ ಎಲ್ಲರೂ ತಿರುಗುವಂತಾಯಿತು. ಇದೆಲ್ಲದರಿಂದ ಮುಂದೆ ಅಪಾಯವಿದೆ ಎಂದು ಪಕ್ಷದ ಹೈಕಮಾಂಡಿಗೆ ಗೊತ್ತಿದ್ದರೂ ಅಡ್ಡಿ ಪಡಿಸಲಿಲ್ಲ. ಕಾರಣ “ಬಿ.ಎಸ್.ವೈ ಬಿಟ್ಟರೆ ಪರ್ಯಾಯ ನಾಯಕರಾರು ಇರಲಿಲ್ಲ”. ಮುಂದೆ ರಾಜ್ಯ ಬಿಜೆಪಿಯ ಹೊಲಸು ರಾಜಕಾರಣ ಮುಂದುವರೆಯಿತು. ಬಳ್ಳಾರಿ ರೆಡ್ಡಿಗಳ ಹಗರಣಗಳು, ರೆಸಾರ್ಟ್ ರಾಜಕಾರಣ, ನೀಲಿಚಿತ್ರ ವೀಕ್ಷಿಸಿದ್ದ ಪ್ರಕರಣ, ರೇಣುಕಾಚಾರ್ಯನಂತವರ ನಡುವಳಿಕೆ, ಕೊನೆಗೆ ಸ್ವತಃ ಬಿ.ಎಸ್.ವೈ ಜೈಲಿಗೆ ಹೋಗುವ ಸಮಯ ಬಂತು. ಆದರೆ ಇಷ್ಟೆಲ್ಲಾ ಆದರೂ ಬಿ.ಎಸ್.ವೈ ತೋರಿದವರನ್ನೇ ಹೈಕಮಾಂಡ್ ಗದ್ದುಗೆಗೆ ಏರಿಸಿತು. ಕಾರಣ ಮತ್ತೊಮ್ಮೆ “ಅವರನ್ನು ಅಲ್ಲಗಳೆದರೆ ಕರ್ನಾಟಕದಲ್ಲಿ ಪಕ್ಷಕ್ಕೆ ಉಳಿವಿರಲಿಲ್ಲ.” ಆಗ ಬಿ.ಎಸ್.ವೈ ಅವರ ಆಯ್ಕೆ ಆಗಿನ ಕಾಲಕ್ಕೆ  ಮುಖ್ಯಮಂತ್ರಿ ಆಕಾಂಕ್ಷಿಯೇ ಅಲ್ಲದ ಸದಾನಂದ ಗೌಡರಾಗಿದ್ದರು. ಇಲ್ಲಿ ಬಿ.ಎಸ್.ವೈ ಅವರಿಗೆ ತಮ್ಮದೇ ಜಾತಿಯ ಶೆಟ್ಟರ್ ಅವರನ್ನು ಅಧಿಕಾರಕ್ಕೆ ತಂದರೆ ಮುಂದೆ ತಮಗೆ ಮುಳುವಾಗಬಹುದು ಎಂಬ ದೂ(ದು)ರಾಲೋಚನೆ ಕೂಡಾ ಇತ್ತು. ತಾವು ಕೂಡಿಸುವಾಗ ಕೂತು ಎಬ್ಬಿಸಿದಾಗ ಎದ್ದು ಹೋಗುವ ವ್ಯಕ್ತಿ ಬೇಕಾಗಿದ್ದ ಅಂಥವರನ್ನೇ ಆಯ್ದುಕೊಂಡರು. ಒಮ್ಮೆ ಸದಾನಂದ ಗೌಡರು ನಿಯಂತ್ರಣದಿಂದ ಹೊರ ಹೋಗುತ್ತಿದ್ದಾರೆ ಎಂಬುದು ಗೊತ್ತಾಗುತ್ತಿದ್ದಂತೆ ಶೆಟ್ಟರ್ ಅವರಿಗೆ ಅಧಿಕಾರ ಕೊಡಬೇಕು ಎಂದು ಹಟ ಹಿಡಿದರು. ಮತ್ತೆ ಕೇಂದ್ರ ಬಿಜೆಪಿ ಅವರ ಮಾತಿಗೆ ಹುಂಗುಟ್ಟಿತು.ಕಾರಣ “ಬಿ.ಎಸ್.ವೈ ಅಕ್ಷರಶಃ ಪ್ರಶ್ನಾತೀತರಾಗಿದ್ದರು.” ಅದಲ್ಲದೇ ಬಿ.ಎಸ್.ವೈ ಕರ್ನಾಟಕದ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಲಿಂಗಾಯಿತ ಸಮಾಜಕ್ಕೆ ಸೇರಿದವರು, ಉತ್ತರ ಕರ್ನಾಟಕದಲ್ಲಂತೂ ಅವರಷ್ಟು ವರ್ಚಸ್ಸಿರುವ ವ್ಯಕ್ತಿ ಮತ್ತೊಬ್ಬರಿರಲಿಲ್ಲ. ಜಗದೀಶ ಶೆಟ್ಟರ್ ಹುಬ್ಬಳ್ಳಿಯವರಾಗಿ ಅದೇ ಜಾತಿಗೆ ಸೇರಿದವರಾಗಿದ್ದರೂ ಜಾಸ್ತಿ ಓಟುಗಳನ್ನು ಸೆಳೆಯುವ ಪಕ್ಷಕ್ಕೆ ಅಧಿಕಾರಕ್ಕೆ ಏರಿಸುವಷ್ಟು ಬಹುಮತ ಗಳಿಸುವ ವರ್ಚಸ್ಸು ಅವರಿಗಿರಲಿಲ್ಲ. ಬರೀ ಲಿಂಗಾಯಿತ ಎಂಬ ಜಾತಿ ಒಂದೇ ಅಲ್ಲ ಅವರೊಬ್ಬ ಮಾಸ್ ಲೀಡರ್.

        ಇಷ್ಟೆಲ್ಲಾ ಗುದ್ದಾಟ ಹಗರಣ ನಾಟಕೀಯ ಬೆಳವಣಿಗೆಗಳು ನಡೆಯುತ್ತಿರುವಾಗಲೇ ಮತ್ತೊಂದು ಎಲೆಕ್ಷನ್ ಬಂದೇ ಬಿಟ್ಟಿತು. ಉಳಿದೆಲ್ಲ ಪಕ್ಷಗಳು ಎಲೆಕ್ಷನ್ನಿಗೆ ಆರು ತಿಂಗಳು ಮುಂಚೆಯೇ ಪ್ರಚಾರ ಶುರು ಮಾಡಿದರೆ. ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಇನ್ನೂ ಪೈಪೋಟಿ ನಡೆದಿತ್ತು. ಕೊನೆಗೊಮ್ಮೆ ಬಿ.ಎಸ್.ವೈ ಬಿಜೆಪಿಯಿಂದ ಹೊರ ಬಂದು ಕೆ.ಜೆ.ಪಿ ಕಟ್ಟಿ ತಾವೇ ಕಟ್ಟಿದ ಪಕ್ಷವನ್ನು ತಮ್ಮ ಕೈಯಾರೆ ಒಡೆಯಲು ಸನ್ನದ್ಧರಾದರು. ಮನವೊಲಿಸಲು ಹೈಕಮಾಂಡ್ ಒದ್ದಾಡಿದರೂ ವಿಫಲವಾಯಿತು. ಕೆಜೆಪಿ ಪ್ರಥಮ ಬಾರಿಗೆ ಚುನಾವಣೆಗೆ ಸಿದ್ಧವಾಯಿತು. ಚುನಾವಣಾ ಫಲಿತಾಂಶ ಬಂದಾಗ ಬಿಜೆಪಿ 110 ಸ್ಥಾನದಿಂದ 40 ಸ್ಥಾನಗಳಿಗೆ ಇಳಿದುಹೋಯಿತು. ಉತ್ತರ ಕರ್ನಾಟಕದಲ್ಲಂತೂ ಬಿಜೆಪಿ ಮಕಾಡೆ ಮಲಗಿತ್ತು. ಹಿಂದಿನ ಚುನಾವಣೆಯಲ್ಲಿ ಬಾಗಲಕೋಟೆ ಜಿಲ್ಲೆಯ ಆರಕ್ಕೆ ಆರು ಸೀಟುಗಳು ಬಿಜೆಪಿಯ ಪಾಲಾಗಿದ್ದವು. ಆದರೆ ಅಂತಹ ಭದ್ರಕೋಟೆಯೇ ಶಿಥಿಲವಾಗಿ ಕೇವಲ 1 ಸೀಟಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿತ್ತು. ಇದಕ್ಕೆ ಏನು ಕಾರಣ ಅಂತ ಬಿಡಿಸಿ ಹೇಳಬೇಕಿಲ್ಲ. ಬಿ.ಎಸ್.ವೈ ಅವರು ಮಾಡಿದ ಹಗರಣಗಳು ಇದಕ್ಕೆ ಕಾರಣವಾಗಿದ್ದರೆ ಅವರು ಬಿಟ್ಟು ಹೋದ ಪಕ್ಷಕ್ಕಿಂತ ಕೆಜೆಪಿಗೆ ಜಾಸ್ತಿ ಪೆಟ್ಟು ಬೀಳಬೇಕಿತ್ತು. ಆದರೇ ಕೆಜೆಪಿಯ ಕಮಾಲ್  ಹೇಗಿತ್ತೆಂದರೆ ಒಟ್ಟು ಚಲಾವಣೆಯಾದ ಮತಗಳ ಶೇಕಡಾ 10 ರಷ್ಟು ಕೆಜೆಪಿ ಬಾಚಿಕೊಂಡಿತ್ತು. ಬಿ.ಎಸ್.ವೈ ಮತ್ತೊಮ್ಮೆ ಪ್ರಭಾವಿ ವ್ಯಕ್ತಿ  ಎಂಬುದನ್ನು ಸಾಬೀತುಮಾಡಿದ್ದರು. ಆದರೆ ಬಿಜೆಪಿಯ ಹೊರಗೆ ನಿಂತು ಅಧಿಕಾರ ಚುಕ್ಕಾಣಿ ಹಿಡಿಯುವುದು ಅಸಾಧ್ಯ ಎಂಬುದನ್ನು ರಾಜ್ಯದ ಜನತೆ ತೋರಿಸಿಕೊಟ್ಟರು. ಕೆಜೆಪಿಯಲ್ಲೆ ಇದ್ದರೆ ಅಧಿಕಾರ ಎಂಬುದು ಗಗನಕುಸುಮ ಎಂಬುದು ಬಿ.ಎಸ್.ವೈ ಅವರಿಗೆ ಅನ್ನಿಸಿರಲಿಕ್ಕೂ ಸಾಕು. ಮತ್ತೊಮ್ಮೆ ತಮ್ಮ ತವರಿಗೆ ಮರಳಲು ಮುಖವೂ ಇರದೇ, ಇದ್ದ ಪಕ್ಷದಲ್ಲಿ ಮುಂದುವರೆಯಲಿಕ್ಕೂ ಆಗದೇ ಸಂದಿಗ್ಧತೆಯಲ್ಲಿದ್ದರು. ಕೇಂದ್ರದವರೂ ಕೂಡಾ ಅವರನ್ನು ವಾಪಾಸ್ ಕರೆತರುವ ಸಂದರ್ಭಕ್ಕಾಗಿ ಕಾಯುತ್ತಿದ್ದರು. ರೋಗಿ ಬಯಸಿದ್ದು ವೈದ್ಯ ಹೇಳಿದ್ದು ಒಂದೇಯಾಗಿ ಬಂದ ಸಂದರ್ಭವೇ ಲೋಕಸಭಾ ಎಲೆಕ್ಷನ್.

ಒಂದೆಡೆ ಮೋದಿ  ಅಲೆಯಿದ್ದರೂ ಕೂಡಾ ಕರ್ನಾಟಕದಲ್ಲಿ ಪ್ರಾದೇಶಿಕವಾಗಿ ಪಕ್ಷವನ್ನು ಕಟ್ಟಲು ಬಿ.ಎಸ್.ವೈ ಅನಿವಾರ್ಯವಾಗಿದ್ದರು. ಅದನ್ನು ಬಿಜೆಪಿಯ ಪಡೆಯ ತಂತ್ರಗಾರ ಅಮಿತ್ ಶಾ ಅವರಿಗೆ ಬಿಡಿಸಿ ಹೇಳುವ ಅಗತ್ಯವಿರಲಿಲ್ಲ. ಅಷ್ಟರಲ್ಲಿ ಬಿ.ಎಸ್.ವೈ ಕೂಡಾ ಬಿಜೆಪಿಗೆ ಮರಳಲು ಇಚ್ಛಿಸಿದ್ದರು. ಒಮ್ಮೆ ಬಿಜೆಪಿಗೆ ಸೇರಿಕೊಂಡು ಪ್ರಚಾರಕ್ಕೆ ಧುಮುಕುತ್ತಿದ್ದಂತೆ ಮತ್ತೊಮ್ಮೆ ಬಿಜೆಪಿಗೆ ಆನೆಬಲ ಬಂದಂತಾಯ್ತು. ಮೋದಿ ಅಲೆ ಇದ್ದಾಗ್ಯೂ ಬಿ.ಎಸ್.ವೈ ಮರಳದಿದ್ದರೆ 17 ಸೀಟು ಕನಸಿನ ಮಾತಾಗಿತ್ತು. ಅದಲ್ಲದೆ ಉಳಿದೆಲ್ಲ ಕಡೆ ಮಕಾಡೆ ಮಲಗಿದ್ದ ಕಾಂಗ್ರೆಸ್ ಕರ್ನಾಟಕದಲ್ಲಿ ಅತಿ ಹೆಚ್ಚು ಅಂದರೆ  9 ಸೀಟುಗಳನ್ನು ಪಡೆದಿದ್ದು ಮತ್ತೊಮ್ಮೆ ಬಿ.ಎಸ್.ವೈ ಅವರ ಸ್ವಯಂಕೃತ ಅಪರಾಧವೇ ಕಾರಣ. ಉಳಿದೆಲ್ಲ ಕಡೆ ಪ್ರಚಾರ ಸಂದರ್ಭದಲ್ಲಿ ಕೇಂದ್ರ ಕಾಂಗ್ರೆಸ್ಸಿನ ಲಂಚಾವತಾರವನ್ನು ಎತ್ತಿ ತೋರಿಸುತ್ತಿದ್ದ ಬಿಜೆಪಿ ರಾಷ್ಟ್ರನಾಯಕರಿಗೆ ಕರ್ನಾಟಕದಲ್ಲಿ ಮಾತಾಡಲು ಸಣ್ಣದೊಂದು ಪಾಪಪ್ರಜ್ಞೆ   ಕಾಡುತ್ತಿತ್ತು. ಅದಕ್ಕೆ ಲೋಕಸಭಾ ಚುನಾವಣೆಯಲ್ಲಿ ಹಿಂದಿನ ಸಲಕ್ಕಿಂತ ಈ ಸಲ ಬಿಜೆಪಿ 2 ಸೀಟು ಕಡಿಮೆ  ದಕ್ಕಿದ್ದವು. ಕರ್ನಾಟಕದ ಮತದಾರ ಅಷ್ಟು ಸುಲಭಕ್ಕೆ ತನ್ನ ನಿರ್ಧಾರಗಳನ್ನು ಬದಲಾಯಿಸದೆ ತಾನೊಬ್ಬ ಪ್ರಜ್ಞಾವಂತ ಎಂಬುದನ್ನು ನಿರೂಪಿಸಿದ್ದ. ಇವೆಲ್ಲವೂ ಕೂಡಾ ಬಿ.ಎಸ್.ವೈ ಅವರಿಗೆ ಪಾಠಗಳೆ.

  ಕೇಂದ್ರದವರು ಬಿ.ಎಸ್.ವೈ ಹಗರಣಗಳಿಂದ ಮುಕ್ತರಾದ ತಕ್ಷಣ ಅವರಿಗೊಂದು ಮಂತ್ರಿ ಪದವಿ ಖಾತ್ರಿಯಾಗಿದ್ದರೂ ಬಿ.ಎಸ್.ವೈ ಅದರ ಆಕಾಂಕ್ಷಿಯಾಗಿರಲಿಲ್ಲ. ಕಾರಣ ರಾಜ್ಯದಲ್ಲಿನ ಬಿಜೆಪಿ ತಮ್ಮ ಹಿಡಿತದಿಂದ ತಪ್ಪಿಸಿಕೊಳ್ಳುತ್ತೆ ಅನ್ನುವ ಲೆಕ್ಕ ಒಂದು ಕಡೆಯಾದರೇ , ಗೆಲ್ಲುವ ಕುದುರೆಯ ಹಿಂದೆ ಬೆನ್ನು ಹತ್ತುವ ಅನಂತಕುಮಾರ್ ಅಲ್ಲಿರುವಾಗ ತಾವು ಕರ್ನಾಟಕದಿಂದ ಎರಡನೇ ಸಾಲಿನ ನಾಯಕರಾಗಿ ಉಳಿಯಲು ಮನಸ್ಸಿರದಿರುವುದೂ ಒಂದು ಕಾರಣವಿರಬಹುದು. ಅಷ್ಟರಲ್ಲಿ ಕರ್ನಾಟಕದ ರಾಜ್ಯಾಧ್ಯಕ್ಷರಾದ ಪ್ರಹ್ಲಾದ್ ಜೋಷಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬತ್ತಿದ್ದರು. ಉಳಿದ ಒಂದೆರಡು ರಾಜ್ಯಗಳಲ್ಲಿ ಮೋದಿಯವರ ಪ್ರಭಾವವನ್ನು ನಂಬಿಯೇ ವಿಧಾನಸಭೆ ಚುನಾವಣೆಗೆ ಸಿದ್ಧವಾದ ಬಿಜೆಪಿಗೆ ಪ್ರಾದೇಶಿಕ ವರ್ಚಸ್ಸಿಲ್ಲದ ವ್ಯಕ್ತಿ ಮೋದಿ ಪ್ರಭಾವವಿದ್ದರೂ ಗೆಲ್ಲಲಾರ ಎಂಬುದು ಅರಿವಾಗಿತ್ತು. ಇಂತವೊಂದು ನಿರ್ವಾತವನ್ನು ತುಂಬಲು ಮತ್ತು ರಾಜ್ಯದಲ್ಲಿನ ಕಾಂಗ್ರೆಸ್ ತಪ್ಪುಗಳು ಸಾಲು ಸಾಲಾಗಿ ಮಾಡುತ್ತಿದ್ದರೂ ಅದರ ಬಗ್ಗೆ ಮಾತೆತ್ತದೆ ಸುಮ್ಮನಿದ್ದ ಬಿಜೆಪಿ ಶಾಸಕರಿಗೆ ಒಬ್ಬ ನಾಯಕನ ಅವಶ್ಯಕತೆ ಇತ್ತು. ಅದಕ್ಕೆ ಮತ್ತೊಮ್ಮೆ ಬಿ.ಎಸ್.ವೈ ರಾಜ್ಯಕ್ಕೆ ಮರಳಿದರು. ಹಿಂದೆ ತಮ್ಮ ಸರಿಸಮರನ್ನು ಪಕ್ಕಕ್ಕೆ ತಳ್ಳಿದ ಬಿ.ಎಸ್.ವೈ ಮೇಲೆ ಇವತ್ತಿಗೂ ರಾಜ್ಯ ಬಿಜೆಪಿಯ ನಾಯಕರಿಗೆ ಅಪನಂಬಿಕೆ ಇದೆ. ಅದಕ್ಕೆ ಸಮರ್ಥನೆ ಕೊಡುವಂತೆ ಬಿ.ಎಸ್.ವೈ ಪದಾಧಿಕಾರಿಗಳ ಆಯ್ಕೆ ಮಾಡಿದ್ದರು. ‘ಹಿಂದ’  ಸಂಘಟನೆ ಸಿದ್ದರಾಮಯ್ಯನವರ ಅಹಿಂದ ವರ್ತುಲದಿಂದ ಮತವನ್ನು ಸೆಳೆಯೋಕೆ ಕಟ್ಟಿಕೊಂಡಂತೆ ಮೇಲ್ನೋಟಕ್ಕೆ ಕಂಡರೂ ಅಲ್ಲಿ ಈಶ್ವರಪ್ಪ ತಮ್ಮದೇ ಒಂದು ಪ್ರಭಾವಿ ವಲಯ ಸೃಷ್ಟಿಸಲು ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ವ್ಯರ್ಥ ಎನ್ನಲಿಕ್ಕೂ ಕಾರಣವಿದೆ. ಯಾವ ರೀತಿ ಲಿಂಗಾಯಿತ ಮತಗಳನ್ನು ಸೆಳೆಯಲು ಶೆಟ್ಟರ್ ಅವರಿಗಿಂತ ಬಿ.ಎಸ್.ವೈ ಸಮರ್ಥರೋ. ಅದೇ ರೀತಿ ಅಹಿಂದ ಮತಗಳನ್ನು ಸೆಳೆಯಲು ಸಿದ್ಧರಾಮಯ್ಯ ಈಶ್ವರಪ್ಪನವರಿಗಿಂತ ಪ್ರಬಲರು. ಅವರು ರಾಜಕೀಯಕ್ಕೆ ಬಂದಾಗಿನಿಂದ ಅಹಿಂದದ ಪರವಾಗಿ ತಮಗಾದಷ್ಟು ಬೆಂಬಲ ಸೂಚಿಸುತ್ತಲೇ ಬಂದಿದ್ದಾರೆ. ಈಶ್ವರಪ್ಪ ಅವರಂತೆ ಒಮ್ಮೆಲೆ ಅವರಿಗೆ ಸಂಗೊಳ್ಳಿರಾಯಣ್ಣ ನೆನಪಾಗಲಿಲ್ಲ.ದೇವರಾಜ್ ಅರಸ್ ಅವರ ನಂತರ ಅವರಷ್ಟಲ್ಲದಿದ್ದರೂ ಕೊಂಚ ಮಟ್ಟಿಗೆ ಆದರೂ ಅಹಿಂದ ಬಳಗದಲ್ಲಿ ತಮ್ಮ ಪ್ರಭಾವವನ್ನು ಉಳಿಸಿಕೊಂಡು ಬಂದವರೆಂದರೆ ಸಿದ್ಧರಾಮಯ್ಯ. ತೀರಾ ಇತ್ತೀಚೆಗೆ ದಲಿತ ಮುಖ್ಯಮಂತ್ರಿ ಎಂಬ ಮಾತು ಕೇ ಳಿಬರುತ್ತಿದ್ದಂತೆ ಸ್ವಲ್ಪ ಮಟ್ಟಿಗೆ ಅಹಿಂದದಿಂದ ಹಿಂದೆ ಸರಿದರು.

ಬಿ.ಎಸ್.ವೈ ಮಾಡಬೇಕಿರುವುದು ಇಷ್ಟೆ. ಮೊದಲಿಗೆ ಕಾಂಗ್ರೆಸ್ ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸಬೇಕು. ಕೇಂದ್ರದ ಬಿಜೆಪಿ ಸರ್ಕಾರದ ಒಂದೊಂದು ನಡೆಯನ್ನು ಸೂಕ್ಷ್ಮವಾಗಿ ಪರಿಗಣಿಸಿ ತಪ್ಪಲ್ಲದಿದ್ದರೂ ತಪ್ಪನ್ನು ಸೃಷ್ಟಿಸಿ ವಿರೋಧಿಸುತ್ತಿರುವ ಕೇಂದ್ರ ಕಾಂಗ್ರೆಸ್ಸಿನಿಂದಲಾದರೂ ಇದನ್ನು ಕಲಿತುಕೊಳ್ಳಬೇಕು. ನಂತರ ಪ್ರತಿಯೊಂದು ಪಕ್ಷದಲ್ಲೂ ಸಣ್ಣ ಪುಟ್ಟ ಗುಂಪುಗಾರಿಕೆ ಸಹಜ. ಅಂಥವರನ್ನು ಹೇಗೆ ಸರಿದಾರಿಗೆ ತರಬೇಕು ಎಂಬುದು ಜಾಣ್ಮೆ. “ನರೇಂದ್ರ ಮೋದಿ ಆಟ ಗುಜರಾತ್ ಹೊರತು ಮತ್ತೆಲ್ಲೂ ನಡೆಯೊಲ್ಲ” ಎಂದವರಿಗೆ ಮೋದಿ ಒಂದು ಪ್ರತಿಷ್ಠಿತ ಖಾತೆ ಕೊಟ್ಟು ತೆಪ್ಪಗಾಗಿಸಲಿಲ್ಲವೇ. ಅವರ ಕೈಗೆ ಖಾತೆ ಮಾತ್ರ ಕೊಟ್ಟರು. ಆದರೆ ನಿಯಂತ್ರಣವನ್ನಲ್ಲ. ಅದರಿಂದ ನೀವು ಕಲಿತುಕೊಳ್ಳಬೇಕು. ನಿಮ್ಮ ಅಕ್ಕಪಕ್ಕದಲ್ಲಿ ಅಂತಹ ಆಕಾಂಕ್ಷಿಗಳಿರುತ್ತಾರೆ. ಅವರು ಮುಖ್ಯಮಂತ್ರಿ ಪದವಿಗೆ ಕೈಚಾಚದಿದ್ದರೂ ಒಂದು ಸಚಿವ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವ ಅಲ್ಪತೃಪ್ತರು ಅವರನ್ನು ನಿರ್ಲಕ್ಷಿಸದೇ ಮತ್ತು ಸಂಪೂರ್ಣ ನಿಯಂತ್ರಣವನ್ನು ಅವರ ಕೈಗೆ ಕೊಡದೆ ಸರಿದೂಗಿಸಿಕೊಂಡು ಹೋಗಬೇಕು. ಅವರು ಪಕ್ಷಕ್ಕೆ ಅಧಿಕಾರ ತಂದುಕೊಡದಷ್ಟಲ್ಲದಿದ್ದರೂ ಪಕ್ಷವನ್ನು ಒಡೆಯುವಷ್ಟು ಸಮರ್ಥರಾಗಿರುತ್ತಾರೆ. ಮೇಲ್ನೋಟಕ್ಕೆ ಎಲ್ಲವೂ ಸರಿಯಾಗಿದೆ ಎಂದರೂ ಬಿಜೆಪಿಯ ಒಳಗೆ ಸಣ್ಣ ಕೆಸರೆರಚಾಟವಿದೆ. ಆ ಕೆಸರಿನಲ್ಲಿ ಕಮಲವನ್ನು ಬಿ.ಎಸ್.ವೈ ಅರಳಿಸಬಲ್ಲರೇ ಎಂಬುದನ್ನು ಕಾದು ನೋಡಬೇಕಾಗಿದೆ..

Facebook ಕಾಮೆಂಟ್ಸ್

ಲೇಖಕರ ಕುರಿತು

Rahul Hajare

ಬಾಹುಬಲಿ ತಾಂತ್ರಿಕ ವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯನಿಕೇಶನ್ ಇಂಜನೀಯರಿಂಗ್ ಪದವಿ
ಸದ್ಯಕ್ಕೆ ಮಂಗಳೂರಿನ ಬ್ಯಾಂಕ್'ನಲ್ಲಿ ಉದ್ಯೋಗ ಕತೆ,ಲೇಖನ, ಕವಿತೆ ಬರೆಯುವುದು ಪ್ರವೃತ್ತಿ. ಚೆಸ್,ಕ್ರಿಕೆಟ್ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!