ಅಂಕಣ

ಆಯಿತೇನೋ ಅರವತ್ತೊಂಬತ್ತು ವರ್ಷ ದ್ವಜಾರೋಹಣಕ್ಕೆ ಇವತ್ತಿಗೂ ಮೀನ-ಮೇಷ!

जननी जन्मभूमिश्च स्वर्गादपि गरीयसी ॥

ಎಂದು ಜಗತ್ತಿಗೆ ಹೇಳಿ ಕೊಟ್ಟವರು ನಾವು. ತಾಯಿ, ತಾಯ್ನೆಲದ ಬಗ್ಗೆ ದೇವರಿಗೂ ಮೀರಿದ ಅಭಿಮಾನ ಗೌರವ ಇಟ್ಟುಕೊಂಡು ಬಂದವರು ನಾವು. ಇವತ್ತು ನಾವು ಸ್ವತಂತ್ರರಾಗಿ ೬೯ ವರ್ಷವಾಯಿತು. ವರ್ತಮಾನದ ಅವಮಾನಕರ ಘಟನೆಗಳ ಬಗ್ಗೆ ಒಮ್ಮೆ ಕಣ್ಣಾಡಿಸಲೇ ಬೇಕಿದೆ.ಭಾರತದಲ್ಲೇ ಹುಟ್ಟಿದ ಕೆಲವು ಕೃತಘ್ನರು ಮೊದಲಿನಿಂದಲೂ ದೇಶದ ಬಗ್ಗೆ ಅವಮಾನ ಮಾಡುತ್ತಲೇ ಬಂದಿದ್ದಾರೆ. ಹಿಂದೊಮ್ಮೆ ಭಾರತಮಾತೆಯನ್ನೇ ನಗ್ನವಾಗಿ ಚಿತ್ರಿಸಿದ ಕೊಳಕು ಕುಂಚದ ಕಲಾವಿದ ಒಬ್ಬನೇ ಇದ್ದ ಆದರೇ ಇತ್ತೀಚಿನ ಬೆಳವಣಿಗೆ ಗಮನಿಸಿದರೆ ರಕ್ತ ಬೀಜಾಸುರನ ಸಂತಾನದಂತೆ ಕೃತಘ್ನತೆಯ ರಕ್ತದ ಕಣಕಣದಿಂದಲೂ ದೇಶಕ್ಕೆ ಅವಮಾನಗೈಯುವ ಅಸುರರು ಒಬ್ಬೊಬ್ಬರಾಗಿ ಹೊರ ಬರುತ್ತಿದ್ದಾರೆ.

1.  JNU ನ ಕಟ್ಟಡದ ಮೇಲೆ ಕೆಂಪು ಧ್ವಜ ಹಾರಿಸಿ ಲಾಲ್ ಸಲಾಮ್ ಎಂದ ಕನ್ಹಯ್ಯನೆಂಬ ದುರುಳನನ್ನು ನನ್ನ ಮಗ, ಅಮಾಯಕ ಎಂದು ಸಮರ್ಥಿಸಿಕೊಳ್ಳುವವರ ಮಧ್ಯೆ ನಾವಿರುವುದು ವಿಪರ್ಯಾಸದ ಸಂಗತಿಯೇ ಸರಿ. ದೇಶದಿಂದ ಅಲ್ಲವಂತೆ ದೇಶದಲ್ಲಿ ಸ್ವಾತಂತ್ರ್ಯ ಬೇಕಂತೆ.ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ಬರುವ ಹಾಗೆ ಮಾತಾಡಿದರೂ ಕ್ರಮ ತೆಗೆದುಕೊಳ್ಳದಿರುವ ಕಾನೂನು ವ್ಯವಸ್ಥೆ,  ಅವನನ್ನು ಭವಿಷ್ಯತ್ತಿನ ನಾಯಕ ಎಂಬಂತೆ ಬಿಂಬಿಸುತ್ತಿರುವ ಮಾಧ್ಯಮಗಳ ಪರಿಗೆ ಏನೆನ್ನಬೇಕೋ ತಿಳಿಯುತ್ತಿಲ್ಲ. ಅವನನ್ನು ಬಂಧಿಸಿದರೇನೊ ನಿಜ. ಆದರೆ ಜಾಮೀನಿನ ಮೇಲೆ ಹೊರಗೆ ಬಂದು ಅವನು ಮಾಡಿದ ಭಾಷಣವನ್ನು ಮೆಚ್ಚಿಕೊಂಡು ಅವನನ್ನು ಮುಂಬರುವ ಚುನಾವಣೆಗಳಿಗೆ ಅಸ್ತ್ರವಾಗಿ ಬಳಸಿಕೊಂಡರು. ಹೇಗಿದೆ ನೋಡಿ ಒಬ್ಬ ದೇಶವನ್ನು ಹಿಯಾಳಿಸಿದ ತಕ್ಷಣ ಗಣ್ಯ ವ್ಯಕ್ತಿಯಾಗಿಬಿಡುವುದು ನಮ್ಮ ದೇಶದಲ್ಲಿ ಮಾತ್ರ ಅನಿಸುತ್ತೆ .ಅವನನ್ನು ದೊಡ್ಡ ನಾಯಕನ ಹಾಗೆ ನೋಡುವುದಕ್ಕೆ ಅವನು ಮಾಡಿರುವ ಮಹತ್ಕಾರ್ಯವಾದರೂ ಏನು ?೨೦೦೧ ರಲ್ಲಿ ಭಾರತದ ಶಕ್ತಿ ಕೇಂದ್ರವಾದ ಸಂಸತ್ ಭವನದ ಮೇಲೆ ದಾಳಿಗೈದ  ಅಪ್ಜಲ್ ಗುರುವಿನ ಶೃದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಿರುತ್ತಾರೆ. ಅದೂ ಒಂದು ಪ್ರಶಂಸನೀಯ ಕೆಲಸವೇ?

“ಭಾರತ್ ಕೀ ಬರಬಾದಿ ತಕ್ ಜಂಗ ರಹೇಗಿ” ಎಂದು ಘೋಷಣೆ ಹಾಕುತ್ತಾನೆ. ಅದನ್ನು ರಾಹುಲ್ ಗಾಂಧಿ , ಕೇಜ್ರಿವಾಲ್’ರಿಂದ ಹಿಡಿದು ಹಲವು ಜನ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುತ್ತಾರೆ. ಅವನಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಕೊಟ್ಟದ್ದು ಭಾರತದ ಸಂವಿಧಾನವೇ ಅದೇ ಭಾರತವನ್ನು ತುಂಡರಿಸುವ ಮಾತಾಡಿ ಸ್ವಾತಂತ್ರ್ಯವನ್ನು ಸ್ವೇಚ್ಛೆಯಾಗಿ ಪರಿವರ್ತಿಸಿಕೊಂಡವನ ಬೆನ್ನಿಗೆ ನಿಲ್ಲುವವರೂ ದೇಶದ್ರೋಹಿಗಳೆ.

2. ಈ ಘಟನೆ ನಡೆದ ಮೇಲೆ ಕೇಂದ್ರ ಸರ್ಕಾರದವರು ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಕಡ್ಡಾಯವಾಗಿ ಧ್ವಜ ಹಾರಿಸಲೇಬೇಕೆಂಬ ಕಾನೂನು ತಂದಿತ್ತು. ಆಗ ವಿಚಿತ್ರವೆಂದರೆ ಅರ್ನಾಬ್ ಗೋಸ್ವಾಮಿ ಚರ್ಚೆಗೆ ಕರೆಯುತ್ತಾರೆ. ಚರ್ಚೆಯ ವಿಷಯ ಧ್ವಜ ಹಾರಿಸುವ ನಿರ್ಧಾರ ಸರಿಯೋ ತಪ್ಪೋ ಎಂದು. ಭಾರತದಲ್ಲಿ ಭಾರತದ ಧ್ವಜ ಹಾರಿಸಬೇಕೊ ಇಲ್ಲವೋ ಎಂಬುದು ಚರ್ಚಿಸುವ ವಿಷಯವೇ? ಸೈನ್ಯದಲ್ಲಿ ಸೇವೆ ಸಲ್ಲಿಸಿ ಬಂದ ಮೇಜರ್ ಜನರಲ್ ಜಿ.ಡಿ. ಭಕ್ಷಿ ಕಂಬನಿ ಮಿಡಿಯುತ್ತಾರೆ. ಸಾವಿರಾರು ಸಾವುಗಳನ್ನು ಕಣ್ಣಾರೆ ನೋಡಿದ ವ್ಯಕ್ತಿ ಅಕ್ಷರಶಃ ಗಟ್ಟಿ ಮನಸ್ಸಿನವನಾಗಿರುತ್ತಾನೆ. ಅಂಥವರ ಕಣ್ಣಲ್ಲೇ ನೀರು ಬಂತೆಂದರೆ ಪರಿಸ್ಥಿತಿಯ ಗಂಭೀರತೆಯನ್ನು ಅರಿಯಲೇಬೇಕಿದೆ.  ಆ ಕಣ್ಣೀರು ಕೃತಕತೆ ಅಲ್ಲ ಸುಂದರವಾದ ಮನೆಯನ್ನು ನೀವು ಕಷ್ಟಪಟ್ಟು ಕಟ್ಟಿರುತ್ತೀರಿ. ತಳ ತಳ ಹೊಳೆಯುವಂತೆ ಬಣ್ಣ ಹಚ್ಚಿರುತ್ತೀರಿ. ಆ ಮನೆಯ ಗೋಡೆಗೆ ಒಬ್ಬ ಕಾಲು ತಾಕಿಸಿದರೂ ನಿಮಗೆ ಸಿಟ್ಟು ಬಾರದೆ ಇರದು. ಅಂತದ್ದರಲ್ಲಿ ತಮ್ಮ ಸಾವನ್ನೂ ಲೆಕ್ಕಿಸದೇ ಮನುಷ್ಯರು ನಿಲ್ಲಲೂ ಆಗದ ಪ್ರತಿಕೂಲ ಗಡಿಗಳಲ್ಲಿ ಧ್ವಜ ಹಾರಿಸಿ ಬಂದವರಿಗೆ ಧ್ವಜಾರೋಹಣದ ಬಗ್ಗೆ ಹೀಗೆ ಚರ್ಚಿಸಿದರೆ ನೋವಾಗದೇ ಇರುತ್ತದೆಯೇ? ಈ ಚರ್ಚೆಯಲ್ಲಿ ಅಂದಿನ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಮಧ್ಯ ಪ್ರವೇಶಿಸಿ ನಾವೆಲ್ಲರೂ ನಿಮ್ಮ ಜೊತೆಗಿದ್ದೇವೆ ಎಂದು ಭಕ್ಷಿಯವರಿಗೆ ಸಮಾಧಾನ ಮಾಡುತ್ತಾರೆ.

3. ಮುಂದೆ ಇದೇ ಘಟನೆಗೆ ಸಂಬಂಧಿಸಿದ ಹಾಗೆ ಮೋಹನ್ ಭಾಗವತ್ ಅವರು ಮತ್ತೊಂದು ಹೇಳಿಕೆ ನೀಡುತ್ತಾರೆ. ಭಾರತ್ ಮಾತಾಕಿ ಜೈ ಎನ್ನುವುದನ್ನು ಮುಂದಿನ ಪೀಳಿಗೆಯವರಿಗೆ ಕಲಿಸಬೇಕು ಅಂತ. “ನನ್ನ ಕತ್ತಿಗೆ ಚೂರಿ ಹಿಡಿದರೂ ನಾನು ಭಾರತ್ ಮಾತಾಕಿ ಜೈ ಎನ್ನುವುದಿಲ್ಲ. ಹಾಗಂತ ಸಂವಿಧಾನದಲ್ಲಿ ಎಲ್ಲೂ ಉಲ್ಲೇಖವಿಲ್ಲ ” ಅಂತ ಓವೈಸಿ ಪ್ರತಿಕ್ರಿಯೆ ಕೊಡುತ್ತಾನೆ. ಮುಂದೆ ಭಾರತ್ ಮಾತಾಕಿ ಜೈ ಎನ್ನದಿರುವಂತೆ ಪತ್ವಾ ಕೂಡಾ ಹೊರಡಿಸುತ್ತಾರೆ. ದೇಶದಲ್ಲಿ ದೇಶಕ್ಕೆ ಅವಮಾನ ನಡೆಯುತ್ತಿರಬೇಕಾದರೆ ದೇಶದ ಕಾನೂನು ವ್ಯವಸ್ಥೆ ಸುಮ್ಮನಿರುವುದಾದರೂ ಏಕೆ? ಸಂವಿಧಾನದ ಕರ್ತೃಗಳಿಗೆ ಮುಂದೊಂದು ದಿನ ಹೀಗೆ ಭಾರತ ಮಾತೆಗೆ ಜೈಕಾರ ಹಾಕದವರೂ ಹುಟ್ಟುತ್ತಾರೆ ಎಂದು ಗೊತ್ತಿದ್ದಿದ್ದರೆ ಅದನ್ನು ಸ್ಪಷ್ಟವಾಗಿ ಉಲ್ಲೇಖ ಮಾಡುತ್ತಿದ್ದರೋ ಏನೊ? ಸಂವಿಧಾನದ ಮೂಲಭೂತ ಕರ್ತವ್ಯಗಳಲ್ಲಿ ನಾವು ಓದುವ ಮೊದಲ ಸಾಲೇ ರಾಷ್ಟ್ರಗೀತೆ, ರಾಷ್ಟ್ರಧ್ವಜ, ರಾಷ್ಟ್ರ ಲಾಂಛನಕ್ಕೆ ಗೌರವ ಸಲ್ಲಿಸಬೇಕು ಎಂದು ಈ ಒಂದು ಸಾಲಿನಲ್ಲೆ ಎಲ್ಲವೂ ಬಂತು. ಬುದ್ಧಿಹೀನರಿಗಾದರೆ ಭಾರತ್ ಮಾತಾ ಕೀ ಜೈ ಅನ್ನಬೇಕು ಎಂಬುದರ ಪ್ರತ್ಯೇಕ ಉಲ್ಲೇಖ ಬೇಕಾಗುತ್ತದೆ. ಸಾಹಿತಿ ಜಾವೇದ್ ಅಖ್ತರ್ ಮಾತಾಡುತ್ತಾ “ನಿಮಗೆ ಶೆರ್’ವಾಣಿ , ಕ್ಯಾಪ್ ಹಾಕುವುದಕ್ಕೂ ಸಂವಿಧಾನ ಹೇಳಿಲ್ಲ. ಭಾರತ್ ಮಾತಾ ಕೀ ಜೈ ನನ್ನ ಕರ್ತವ್ಯವೋ ಅಲ್ಲವೋ ಎಂಬುದರ ಬಗ್ಗೆ ನಾನು ಕೇಳಲಾರೆ. ಅದು ನನ್ನ ಹಕ್ಕು. ” ಎಂದು ಭಾರತ್ ಮಾತಾಕಿ ಜೈ ಎಂದು ಮೂರ್ನಾಲ್ಕು ಭಾರಿ ಪುನರುಚ್ಚರಿಸುತ್ತಾರೆ.

4. ಯಾಕೂಬ್, ೧೯೯೩ ರ ಮುಂಬೈ ದಾಳಿಯಲ್ಲಿ ಭಾಗಿಯಾದವನನ್ನು೧೧ ವರ್ಷಗಳ ತನಿಖೆಯ ನಂತರ ಗಲ್ಲಿಗೇರಿಸುತ್ತಾರೆ. ಆಗ ಗಲ್ಲಿಗೇರಿಸುವುದು ತಪ್ಪು ಒಬ್ಬರ ಪ್ರಾಣವನ್ನು ತೆಗೆಯುವ ಹಕ್ಕು ಸಂವಿಧಾನಕ್ಕೆ ಯಾರು ಕೊಟ್ಟರು ಎಂದು ಬೊಬ್ಬೆಗಳು ಕೇಳಿ ಬರುತ್ತವೆ. ಅದೇ ಯಾಕೂಬ್’ನಿಂದ ೨೫೭ ಜನ ಮರಣ ಹೊಂದಿದರಲ್ಲ. ಅವರನ್ನು ಕೊಲ್ಲಲು ಯಾಕೂಬ್’ಗೆ ಹಕ್ಕು ಕೊಟ್ಟವರಾರು? ಸಂವಿಧಾನವೆಂಬ ಪ್ರಶ್ನಾತೀತ ಗ್ರಂಥದ ಬಗ್ಗೆಯೇ ಪ್ರಶ್ನಿಸುವ ಜನ ನಮ್ಮ ಮಧ್ಯೆ ಇದ್ದಾರೆ. ಅವನನ್ನೇನು ಹಾಗೆ ಹಿಡಿದು ತಂದು ನೇಣಿಗೆ ಒಡ್ಡಲಿಲ್ಲ. ಹನ್ನೊಂದು ವರ್ಷ ತನಿಖೆಯಾಗಿದೆ.ರಾಷ್ಟ್ರಪತಿಗಳ ಕ್ಷಮಿಸುವುದಕ್ಕೆ ತಿರಸ್ಕರಿಸಿದ ನಂತರವೇ ಗಲ್ಲಿಗೇರಿಸಿದ್ದು. ಅವನ ಅಂತ್ಯ ಸಂಸ್ಕಾರಕ್ಕೆ ಸಾಗರೋಪಾದಿಯಲ್ಲಿ ಜನ ಸೇರುತ್ತಾರೆ.ತಪ್ಪು ನಮ್ಮದೇ. ಒಸಾಮಾ ಬಿನ್ ಲಾಡೆನ್’ನನ್ನು ಕೊಂದು ಹೆಣವನ್ನು ಸಮುದ್ರಕ್ಕೆಸೆದು ಹೋಯಿತಲ್ಲ ಅಮೇರಿಕಾ ಅದರ ನಡೆಯನ್ನು ನಾವು ಅನುಸರಿಸಬೇಕಿದೆ.

5.ಕಾಶ್ಮೀರದ ಕಾಲೇಜೊಂದರಲ್ಲಿ ಭಾರತ ಕ್ರಿಕೆಟ್ ಆಟದಲ್ಲಿ ವೆಸ್ಟ-ಇಂಡೀಸ್ ಜೊತೆ ಸೋತದ್ದಕ್ಕೆ ಸಂಭ್ರಮಾಚರಣೆ ಮಾಡುತ್ತಾರೆ. ಅದಕ್ಕೆ ವಿರೋಧಿಸಿ ಭಾರತ ಧ್ವಜ ಹಾರಿಸಿದವನ ಮೇಲೆ ಹಲ್ಲೆಯಾಗುತ್ತದೆ.ಅವನು ರಕ್ಷಣೆಗಾಗಿ ಸರ್ಕಾರದ ಮೊರೆ ಹೋಗುತ್ತಾನೆ. ಇದು ಹೊರಗೆ ಕಂಡು ಬರುವುದಷ್ಟೆ ಒಳಗಿಂದೊಳಗೆ ಎಷ್ಟೊ ಜನ ಪಾಕಿಸ್ತಾನ ಕ್ರಿಕೆಟ್ ಆಟದಲ್ಲಿ ಗೆದ್ದಾಗ ಸಂಭ್ರಮಿಸುವವರಿದ್ದಾರೆ. ಪಟಾಕಿ ಹೊಡೆಯುವವರಿದ್ದಾರೆ. ಕ್ರೀಡೆಯನ್ನು ಕ್ರೀಡೆಯಾಗಿ ತೆಗೆದುಕೊಳ್ಳಬೇಕು ಎಂದು ಸಮರ್ಥಿಸಿಕೊಳ್ಳುವವರೂ ಇದ್ದಾರೆ.ಕ್ರೀಡೆಯ ಮಾತು ಆಚೆಗಿರಲಿ ಧ್ವಜ ಹಾರಿಸಿದವನ ಮೇಲೆ ಕಲ್ಲು ತೂರಿದರೆಂದರೆ ದ್ವೇಷವಿರಿವುದು ದೇಶದ ಮೇಲೆ ಹೊರತು ಭಾರತದ ಕ್ರಿಕೆಟ್ ತಂಡದ ಮೇಲಲ್ಲ ಎಂಬುದು ಸ್ಪಷ್ಟ.

6.ಇತ್ತೀಚೆಗೆ ಉತ್ತರ ಪ್ರದೇಶದ ಎರಡು ಶಾಲೆಗಳಲ್ಲಿ ರಾಷ್ಟ್ರಗೀತೆಯನ್ನೇ ಬ್ಯಾನ್ ಮಾಡಿದ್ದ ಘಟನೆ ಬೆಳಕಿಗೆ ಬಂದಿದೆ.ಕಾರಣ ‘ಅಧಿನಾಯಕ ಜಯ ಹೈ’ ಅನ್ನುವ ಸಾಲು ಅವರ ಧರ್ಮಕ್ಕೆ ಅಡ್ಡಿಯಂತೆ.ವಂದೇ ಮಾತರಂ ಗೀತೆಯನ್ನು ಹಾಡೋಲ್ಲ ಎಂದು ವಿವಾದ ಸೃಷ್ಟಿಯಾಗಿದ್ದು ಹಳೆಯ ವಿಷಯ. ಭಾರತ ಮಾತೆಗೆ ಜೈಕಾರವನ್ನೇ ಹಾಕದವರು ವಂದಿಸುವುದಾದರೂ ಹೇಗೆ?.ಅದಕ್ಕೆ ಆ ಶಾಲೆಯ ಹಲವು ಸಿಬ್ಬಂದಿಗಳು ಸಾಮೂಹಿಕ ರಾಜೀನಾಮೆ ಕೊಡುತ್ತಾರೆ. ಆ ಶಾಲೆಯನ್ನು ತೆರೆಯಲು ಅನುಮತಿ ಇತ್ತದ್ದು ಇದೇ ಭಾರತ ಸರ್ಕಾರ ಎಂಬುದನ್ನು ಆ ಶಾಲೆಯವರು ಮರೆತಿದ್ದಾರೆ ಅನ್ನಿಸುತ್ತೆ. ಆದರೂ ಅವರ ಮೇಲೆ ಯಾವ ಕ್ರಮವೂ ಇಲ್ಲ.ಇಂಥ ತಪ್ಪು ಬೇರೆ ಕಡೆ ನಡೆದಿದ್ದರೆ ಅವರ ಸಂಸ್ಥೆಯ ಅನುಮತಿಯೇ ರದ್ದಾಗುತ್ತಿತ್ತು.

7.ಭಾರತದಲ್ಲಿ ಕೋಟಿಗಟ್ಟಲೆ ಸಂಪಾದನೆ ಮಾಡಿದ ಅಮೀರ್ ಖಾನ್ ಭಾರತ ಅಸಹಿಷ್ಣು ರಾಷ್ಟ್ರ ಅಂತ ಹೇಳಿಕೆ ಕೊಡುತ್ತಾನೆ. ಮಂಗಳೂರಿಗೊಮ್ಮೆ ಗೋರಕ್ಷಣೆಗಾಗಿ ಹೋರಾಡುತ್ತಿರುವ  ಪೈಜ್ ಖಾನ್ ಅವರು ಬಂದಿದ್ದರು.ಅವರು ಈ ವಿಷಯವಾಗಿ ಮಾತಾಡುತ್ತಾ ಅವರು ಹೇಳಿದ್ದನ್ನೇ ಯಥಾವತ್ತಾಗಿ ಇಲ್ಲಿ ಹೇಳಲು ಬಯಸುತ್ತೇನೆ. “ಭಾರತೀಯ ಮುಸ್ಲಿಂರಿಗೆ ಭಾರತಕ್ಕಿಂತ ಸಹಿಷ್ಣು ರಾಷ್ಟ್ರ ಜಗತ್ತಿನಲ್ಲಿ ಎಲ್ಲೂ ಇಲ್ಲ.ಅಮೆರಿಕಾದಲ್ಲಿ ಖಾನ್ ಎಂಬ ಹೆಸರು ಕೇಳಿದ ತಕ್ಷಣ ಮೇಲಿಂದ ಕೆಳಗಿನವರೆಗೂ ಚೆಕ್ ಮಾಡುತ್ತಾರೆ” ಇದಕ್ಕಿಂತಲೂ ಹೇಳಿಕೆ ಬೇಕೆ? ಇತ್ತೀಚೆಗಷ್ಟೆ ಶಾರೂಕ್  ಖಾನ್ ಅವರನ್ನು ಹೀಗೆ ಚೆಕ್ ಮಾಡಿರುವುದರಕ್ಕಿಂತ ಉದಾಹರಣೆ ಬೇಕೆ? ಅದಲ್ಲದೆ ಯಾವುದೇ ಒಂದು ಕೋಮುವಿಗೆ ಸೇರಿದ ವ್ಯಕ್ತಿ ತಪ್ಪೆಸಗಿದರೆ ಇಡೀ ಕೋಮುವನ್ನೇ ಸಂಶಯ ದೃಷ್ಟಿಯಿಂದ ನೋಡುವಷ್ಟು ಸಂಕುಚಿತ ವ್ಯಕ್ತಿತ್ವ ನಮ್ಮ ದೇಶದಲ್ಲಿಲ್ಲ. ಇಷ್ಟಿದ್ದರೂ ನಮ್ಮದು ಅಸಹಿಷ್ಣು ದೇಶ.

8. ಬುರ್ಹಾನ್ ದೇಶದ ಸೈನಿಕರಿಗೆ ಬಹಿರಂಗ ಸವಾಲು ಹಾಕುತ್ತಾನೆ. ಅಂಥವನನ್ನು ಮಟ್ಟ ಹಾಕದೇ ಬಿಟ್ಟಾರೇ ಸೈನಿಕರು. ಒಂದೊಮ್ಮೆ ಅವನ ಸಮಾಧಿಗೈದ ತಕ್ಷಣ ಅಡಗಿ ಕೂತಂತಹ ನೂರಾರು ಬರ್ಹಾನರು ಹೊರ ಬರುತ್ತಾರೆ. ಪಾಕಿಸ್ತಾನದ ಧ್ವಜ ಹಿಡಿದು ಬೀದಿಗಿಳಿಯುತ್ತಾರೆ. ಪ್ರಕೃತಿ ವಿಕೋಪಗಳಲ್ಲಿ ಯಾವ ಸೈನಿಕರು ಆ ಜನರ ಜೊತೆಗಿದ್ದರೋ ಅದೇ ಸೈನಿಕರ ಮೇಲೆ ಕಲ್ಲು ತೂರುತ್ತಾರೆ. ಒಬ್ಬನನ್ನು ಕೊಂದರೇನು ಇಂಥವರು ಮತ್ತೆ ಹುಟ್ಟುತ್ತಾರೆ ಎಂಬ ಮತ್ತೊಂದು ಹೇಳಿಕೆ ಅತ್ಯಂತ ಜವಾಬ್ದಾರಿಯುತ ವ್ಯಕ್ತಿಯಿಂದಲೇ ಬರುತ್ತದೆ.

9.ಒಬ್ಬ ಮಹಾನುಭಾವರು  “ಗೋಡ್ಸೆಯನ್ನು ಆರಾಧಿಸುವ ಜನರಿಂದ ನಾವು ದೇಶ ಪ್ರೇಮದ ಬಗ್ಗೆ ಕಲಿಯಬೇಕಿಲ್ಲ.”ಅಂಥ ಟ್ವೀಟ್ ಮಾಡುತ್ತಾರೆ. ಗೋಡ್ಸೆ ಮಾಡಿರುವುದು ಸರಿ ಎಂಬ ವಾದ ನನ್ನದಲ್ಲ.

ನಿಮ್ಮ ಅರ್ಥದಲ್ಲಿ ಗೊಡ್ಸೆ, ಕಸಬ್, ಅಪ್ಜಲ್ ಗುರು, ಯಾಕೂಬ್, ಬಹ್ರಾನ್ ಎಲ್ಲರೂ ಒಂದೇಯೇ?. ಆದರೆ ಗೋಡ್ಸೆಗೂ ಶಿಕ್ಷೆಯಾಗಿದೆ ಅಲ್ಲವೆ.? ಆದರೆ ಅವನಿಗಾಗಿ ಯಾರೂ ಶೃದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಲಿಲ್ಲ. ಗೋಡ್ಸೆಯ ಕೃತ್ಯದ ಪರವಾಗಿದ್ದವರ ಬಾಯಲ್ಲಿ “ಭಾರತ್ ಕೀ ಬರಬಾದಿ ತಕ್ ,ಜಂಗ್  ರಹೇಗಿ ” ಎಂಬ ಮಾತು ಬಂದಿಲ್ಲ.  ಭಾರತ್ ಮಾತಾಕೀ ಜೈ ಎಂಬುದನ್ನು ಹೇಳಲು ವಿರೋಧಿಸಿಲ್ಲ.

     ದೇಶದ ಬಗ್ಗೆ ಒಳ್ಳೆಯದನ್ನು ಮಾತಾಡಿದರೆ ಬಲಪಂಥಕ್ಕೆ     ಸೇರಿಸಿ ಬಿಡುವ ಜನರ ಕಾಮಾಲೆ ಕಣ್ಣುಗಳಿಗೆ ದೇಶ ವಿರೋಧಿ ಅಲೆಯೆಬ್ಬಿಸುವವರು ಪ್ರಗತಿಪರರಂತೆ ಕಾಣುವುದು ಸಹಜ. ಭಾರತಕ್ಕೆ ಸ್ವತಂತ್ರ ಬಂದಿದ್ದು ಅದನ್ನು ಉಳಿಸಿಕೊಳ್ಳಲು ಮಾಡಿದ ಹೋರಾಟ ಅವಿರತವಾದದ್ದು. ಭಾರತಕ್ಕೆ ಸ್ವತಂತ್ರ ಬಂದಾಗ ೬೦೦ಕ್ಕೂ ಹೆಚ್ಚು ಸಂಸ್ಥಾನಗಳನ್ನು ಭಾರತಮಾತೆಯ ಮಡಿಲಿಗೆ ಸೇರಿಸಲು ಪಟೇಲರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ,” ಭಾರತ ಕೋ ಟುಕಡೆ ಕರದೆಂಗೆ” ಎನ್ನುವವರಿಗೆ ೬೦೦ ತುಕಡಿಗಳ ಮಹಾರಾಜರನ್ನು ಕರಗಿಸಿ ಈಗಿನ ಭಾರತದ ಭೂಪಟದ ಅಚ್ಚಿಗೆ ಹಾಕಲು ಪಟ್ಟ ಶ್ರಮ ಅದರ ಪ್ರಾಮುಖ್ಯತೆ ತಿಳಿಯುವುದಾದರೂ ಹೇಗೆ? ಒಬ್ಬ ಉಗ್ರನನ್ನು ಹುತಾತ್ಮನಂತೆ ಪೂಜಿಸುವವರಿದ್ದಾರೆ ಅಂದರೆ ಅದು ‘ಮತಿ’ಭ್ರಮಣೆಯ ಪರಮಾವಧಿಯೇ ಸರಿ. ಇದಕ್ಕೆಲ್ಲಾ ಒಂದು ಕಾರಣ ನಮ್ಮ ಕಾನೂನಿಲ್ಲರುವ ಸಡಿಲಿಕೆಯೂ ಹೌದು. ಮತ್ತೊಂದು ದೇಶದಲ್ಲಿ ಈ ತರಹದ ಕೃತ್ಯಗಳು ಆಗಿರುವುದು ಸಾಬೀತಾಗುತ್ತಿದ್ದಂತೆ ಗಲ್ಲಿಗೇರಿಸುತ್ತಾರೆ. ಆದರೆ ನಮ್ಮಲ್ಲಿ ಎಲ್ಲಾ ಸಾಕ್ಷ್ಯ ಸಾಭೀತಾದ ಮೇಲು ಕಡತ ರಾಷ್ಟ್ರಪತಿಯ ಮೇಜಿನವರೆಗೆ ಹೋಗಲು ಅವಕಾಶವಿದೆ.ಕೊನೆಗೆ ಅಲ್ಲಿಯೂ ಅವನಿಗೆ ಶಿಕ್ಷೆ ಖಚಿತವಾದ ಮೇಲೂ ಅವನಿಗೆ ಜೈಲಿನಲ್ಲಿ ಕೂಡಿಸಿಕೊಂಡು ತಿನ್ನಿಸಿ ಕೊಬ್ಬಿಸುತ್ತೇವೆ. ಪಾಕಿಸ್ತಾನದ ಒಬ್ಬ ಯುವಕ ತಾನು ವಿರಾಟ್ ಕೊಹ್ಲಿ ಅಭಿಮಾನಿ ಎಂದಾಕ್ಷಣ ಅವನಿಗೆ ಹತ್ತು ವರ್ಷ ಜೈಲು ಶಿಕ್ಷೆ ವಿಧಿಲಾಯಿತು. ಆಫ್ರೀದಿ ಭಾರತ ಒಳ್ಳೆಯ ದೇಶ ಎಂದಾಕ್ಷಣ ಅವನ ಮೇಲೆ ನೋಟೀಸ್ ಜಾರಿಯಾಯಿತು. ಆಫ್ರೀದಿಯಾಗಲಿ ಆ ಯುವಕನಾಗಲಿ ಪಾಕಿಸ್ತಾನದ ವಿರೋಧವಾಗಿ ಏನೂ ಹೇಳಿರಲಿಲ್ಲ. ಭಾರತದ ಪರವಾಗಿ ಮಾತಾಡಿದ್ದರಷ್ಟೆ. ಆದರೂ ಅವರನ್ನು ಶಿಕ್ಷೆಗೆ ತಳ್ಳಿದ್ದರು.ಇನ್ನು ನಮ್ಮ ನೆಲದಲ್ಲಿಯೇ ನಿಂತು ನಮ್ಮ ದೇಶದ ಬಗ್ಗೆಯೇ ಮಾತಾಡುವವರನ್ನು ಶಿಕ್ಷಿಸದಷ್ಟು ಕಾನೂನು ವ್ಯವಸ್ಥೆ ಸಾಮರ್ಥ್ಯಶೂನ್ಯವಾಗಿದೆ ಎಂದರೆ ವಿಚಿತ್ರ ವಿಪರ್ಯಾಸ.

ಕನ್ಹಯ್ಯಾ ಜೈಲಿನಿಂದ ಬಂದ ಭಾಷಣದಲ್ಲಿ ಹೇಳಿದ್ದ ಒಂದು ಮಾತನ್ನು  ಇಲ್ಲಿ ಪ್ರಸ್ತಾಪಿಸಿ ಈ ಲೇಖನವನ್ನು ಮುಗಿಸುತ್ತೇನೆ. ಜೈಲಿನಲ್ಲಿ ಇದ್ದಾಗ ಊಟದ ತಟ್ಟೆಯ ಜೊತೆಗೆ ಎರಡು ಬಟ್ಟಲನ್ನು ಕೊಟ್ಟರಂತೆ. ಒಂದರ ಬಣ್ಣ ನೀಲಿ ಇನ್ನೊಂದರ ಬಣ್ಣ ಕೆಂಪಾಗಿತ್ತಂತೆ. ಅದರಿಂದಲೇ ದೇಶದಲ್ಲಿ ಬರುವ ದಿನಗಳಲ್ಲಿ ಒಂದು ಬದಲಾವಣೆಯಾಗಬಹುದು ಎಂದೆನಿಸಿತಂತೆ. ಅದನ್ನೇ ಸಿಕ್ಸ್ತಸೆನ್ಸ್ ಎಂಬಂತೆ ಹೇಳಿದ್ದ ನಾನ್ಸೆನ್ಸ್ . ಕನ್ಹಯ್ಯಾ ಯಾಕೆ ತಟ್ಟೆ ಹಸಿರಾಗಿರಲಿಲ್ಲವೇ? ದೆಹಲಿಯ ಟೋಪಿವಾಲ ಊಟಕ್ಕಿಕ್ಕಲಿಲ್ಲವೇ? ಯುವರಾಜ ರಣವೀಳ್ಯ ಕೊಡಲಿಲ್ಲವೇ? ಯಾರ ಮುಂದೆ ಹೇಳುತ್ತೀಯಾ ಈ ರಂಗು ರಂಗಿನ ಕಥೆಯನ್ನು? ಭಾರತದಲ್ಲಿ ಇನ್ನೂ ಚೈತನ್ಯಶಕ್ತಿ ಕುಂದಿಲ್ಲ. ನಿನ್ನಂತವರ ಮಧ್ಯೆ ನಿನ್ನದೇ ವಯಸ್ಸಿನ ಸೈನಿಕರಿರುವವರೆಗೆ, ಹಲವರ ವಿರೋಧದ ನಂತರವೂ ಕಾಶ್ಮೀರದ ವಿಶ್ವವಿದ್ಯಾಲಯದಲ್ಲಿ ಧ್ವಜ ಹಾರಿಸಿದ ಆ ಯುವಕನಂತವರಿರುವವರೆಗೆ, ಫೈಜ್ ಖಾನ್ ಜಾವೇದ್ ಅಖ್ತರ್ ಅಂಥ ರಾಷ್ಟ್ರಪ್ರೇಮಿ ಮುಸ್ಲಿಮರಿರುವವರೆಗೆ ಯಾವ ರಂಗು ನಡೆಯುವುದಿಲ್ಲ. ನಡೆಯುವುದೇನಿದ್ದರು ತಿರಂಗ ಮಾತ್ರ. ಅದನ್ನು ಹಾರಿಸುವುದಕ್ಕೆ ಮೀನಮೇಷ ಹಾಕುತ್ತ ಕೂರುವುದೇ ಇಲ್ಲ, ಅದು ನಮ್ಮ ಹಕ್ಕು. ಸ್ವಾತಂತ್ರ್ಯ ದಿನಾಚರಣೆ ಯಾಂತ್ರಿಕವಾಗದೇ ಜನರಲ್ಲಿ  ದೇಶದ ಬಗ್ಗೆ ಜಾಗೃತಿಯಾಗಲಿ. ಭಾರತ ವಿಶ್ವಗುರುವಾಗಲಿ, ಸಾವಿರಾರು ಜನರ ಪರಿಶ್ರಮದಿಂದ ಸಿಕ್ಕ ಈ ಸ್ವಾತಂತ್ರ್ಯ ದೇಶಕ್ಕೆ ಕಂಟಕ ತರುವ ಸ್ವೇಚ್ಛೆಯಾಗದಿರಲಿ.  ಎಲ್ಲರಿಗೂ ಸ್ವಾತಂತ್ರ್ಯ ದಿನದ ಶುಭಾಷಯಗಳು .

ಭಾರತ್ ಮಾತಾಕಿ ಜೈ…..

-ರಾಹುಲ್ ಹಜಾರೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!