ಅಂಕಣ

ಆತ್ಮಹತ್ಯೆಗೆ ಶರಣಾದ ಮಾತ್ರಕ್ಕೆ ದಕ್ಷ ಅಧಿಕಾರಿಗಳೂ ಹೇಡಿಗಳೆನಿಸಿಕೊಳ್ಳುತ್ತಾರೆಯೇ?!

ಅದೇಕೆ ನಮ್ಮ ಕೆಲವು ರಾಜಕಾರಣಿಗಳಿಗೆ, ಪ್ರೀತಿ ಪಾತ್ರರನ್ನು ಕಳೆದುಕೊಂಡವರ ನೋವಿನ ಒಡಲಾಗ್ನಿಯ ಕಾವಿನ ತೀವೃತೆ ಅರಿವಾಗುವುದಿಲ್ಲಾ?ಕಿತ್ತು ತಿನ್ನುವ ಬಡತನ, ಹೆಜ್ಜೆ ಹೆಜ್ಜೆಗೂ ಅಡ್ಡಿಪಡಿಸುವ ಸಂಕಷ್ಟಗಳ ನಡುವೆಯೂ ಸಾಕಿ ಸಲಹಿ ಎದೆಯೆತ್ತರಕ್ಕೆ ಬೆಳೆಸಿದ ತಮ್ಮ ಮಕ್ಕಳನ್ನು ಸಮಾಜಕ್ಕೆ ಮಹತ್ತರ ಕೊಡುಗೆ ನೀಡಬಲ್ಲ ಮಾನವ ಸಂಪನ್ಮೂಲವನ್ನಾಗಿ ಪರಿವರ್ತಿಸಿ ಇನ್ನೇನು ನೆಮ್ಮದಿಯ ನಿಟ್ಟುಸಿರು ಬಿಡಬೇಕೆನ್ನುವಷ್ಟರಲ್ಲಿ ಅಂತಹವರನ್ನು ಕಳೆದುಕೊಳ್ಳಬೇಕಾದ ಸ್ಥಿತಿ ಒದಗಿ ಬಂದರೆ ಅದನ್ನು ಹೇಗೆ ತಾನೆ ಸ್ವೀಕರಿಸಿಯಾವು ಆ ಮುದಿ, ಮುಗ್ಧ ಜೀವಗಳು? ಆದರೂ ಅದರ ಗಾಂಭೀರ್ಯತೆ ಕೆಲವರಿಗೆ ಕಿಂಚಿತ್ತೂ ನಾಟುವುದಿಲ್ಲವಲ್ಲ. ಮಾನಸಿಕ ಆಘಾತದಿಂದ ಜರ್ಝರಿತವಾಗಿರುವುದಲ್ಲದೇ, ನ್ಯಾಯಕ್ಕಾಗಿ ನಿತ್ಯ ಮೊರೆಯಿಡಬೇಕಾದ ದುಃಸ್ಥಿತಿಯಲ್ಲಿರುವವರ ಮೇಲೆ ಕೆಲವರ ಕ್ಷುಲ್ಲಕ ಚುಚ್ಚು ಮಾತುಗಳ ಬರೆ ಬೀಳುತ್ತಲೇ ಇದೆ. ಅದಕ್ಕೆ ಇತ್ತೀಚಿನ ಉದಾಹರಣೆಯೆಂದರೆ‘ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿಗಳೆಲ್ಲ ಹೇಡಿಗಳು’ ಎಂದು ಷರಾ ಬರೆದ ಕರ್ನಾಟಕ ಸರ್ಕಾರದ ಇಂ‘ಧನ’ ಸಚಿವರ ಉಡಾಫೆಯ ನುಡಿಗಳು. ಇಷ್ಟು ನಿಕೃಷ್ಟವಾಯಿತೇ ಅಧಿಕಾರಿಗಳ ಸೇವೆ, ನಿಯತ್ತು ಹಾಗೂ ದಕ್ಷತೆಗಳೆಂಬ ಮೌಲ್ಯಗಳು?ಅಥವಾ ಅವುಗಳಿಗೆಲ್ಲಾ ಕವಡೆ ಕಾಸಿನ ಕಿಮ್ಮತ್ತೂ ಇರದೆನ್ನುವುದರ ಸಾಕ್ಷ್ಯವೇ ಇದು?

            ಸ್ವಾತಂತ್ರ್ಯ ದಿನಾಚರಣೆಯ ಮನರಂಜನಾ ಕಾರ್ಯಕ್ರಮದಲ್ಲಿ ಆತ್ಮಹತ್ಯೆಗೆ ಶರಣಾದ ಅಧಿಕಾರಿಗಳ ಭಾವಚಿತ್ರಗಳನ್ನು ಪ್ರದರ್ಶಿಸುವುದು ಸಾಂದರ್ಭಿಕತೆಗೆ ಸೂಕ್ತವಾದುದಲ್ಲ ಎನ್ನುವುದಾದರೆ,ಆಯ್ತು! ಸಚಿವರು ಅದನ್ನು ವಿರೋಧಿಸಿದ್ದನ್ನು ಒಂದು ಹಂತಕ್ಕೆ ಒಪ್ಪಬಹುದು ಕೂಡಾ. ಪ್ರದರ್ಶಿಸಬೇಕಾದರೆ ಸ್ವಾತಂತ್ರ್ಯಕ್ಕಾಗಿ ಬಲಿದಾನ ಹೊಂದಿದ ನಾಯಕರ ಚಿತ್ರಗಳನ್ನೇ ಪ್ರದರ್ಶಿಸಬಹುದು ಎಂಬ ಸಲಹೆಯೂ ಸಮರ್ಪಕವೇ ಆಗಿದೆ. ಅದಕ್ಕೂ ಮಿಕ್ಕಿ ಅದರಿಂದ ಅಲ್ಲಿ ನೆರೆದಿರುವ ಜನರ ಮನಸ್ಸಿನ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತಿತ್ತೋ ಇಲ್ಲವೋ,ಅದನ್ನು ತಡೆಯದಿದ್ದಕ್ಕೆ ಮಾಧ್ಯಮಗಳು ಸಚಿವರನ್ನು ಟೀಕಿಸುತ್ತಿದ್ದವೋ ಬಿಡುತ್ತಿದ್ದವೋ, ಆದರೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಈ ಮೂರು ಪ್ರಕರಣಗಳಿಗೆ ಸಂಬಂಧಿಸಿದವರ ಭಾವಚಿತ್ರಗಳನ್ನು ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಪ್ರದರ್ಶಿಸುವುದು ಸರ್ಕಾರಕ್ಕೆ ಮುಜುಗರದ ಸಂಗತಿಯಾದ್ದರಿಂದ ನಿಶ್ಚಿತವಾಗಿಯೂ ಸರ್ಕಾರ ಹಾಗೂ ಪಕ್ಷದ ಮುಖಂಡರಿಂದ ಸಚಿವರು ಪ್ರಶ್ನೆಗೀಡಾಗುವ ಸಂಭವವಂತೂ ಇದ್ದಿತ್ತು. ಇದರಿಂದ ಬಚಾವಾಗಲು ಸಚಿವರು ಆ ಮಾರ್ಗ ಹಿಡಿದಿರಬಹುದು ಎನ್ನುವುದು ಮೇಲ್ನೋಟಕ್ಕೆ ಸಾದರವಾಗುತ್ತದೆ. ಅದನ್ನೂ ಅಲ್ಲಗಳೆಯಲಾಗದು ಬಿಡಿ! ಕಾರಣ ಏನೇ ಇರಲಿ, ಅಷ್ಟಕ್ಕೇ ಸುಮ್ಮನಿದಿದ್ದರೆ ಆ ಸುದ್ಧಿ ಎಲ್ಲೋ ಒಂದು ಮೂಲೆಯಲ್ಲಿ ಮಿಂಚಿ ಮರೆಯಾಗಿರುತ್ತಿತ್ತು. ಬದಲಾಗಿ ತಮ್ಮ ಘನಂಧಾರಿ ಕೆಲಸವನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಸಚಿವರು ಆ ಅಧಿಕಾರಿಗಳನ್ನೆಲ್ಲಾ ಸಾರಸಗಟಾಗಿ ಹೇಡಿಗಳೆಂದು ಹೀಗಳೆದು ಉದ್ಧಟತನ ಮೆರೆಯಬೇಕಾಗಿರಲಿಲ್ಲ. ತನ್ನ ಮಗ ಹೇಡಿ ಎಂದು ಕರೆಸಿಕೊಂಡರೆ ಆ ಹೆತ್ತ ಕರುಳಿಗೆ ಆಗುವ ಸಂಕಟವನ್ನು ಊಹಿಸಲೂ ಸಾಧ್ಯವಿಲ್ಲ. ಇಂದಿಗೆ ಆ ಅಧಿಕಾರಿಗಳು ನಮ್ಮ ಜೊತೆಗಿಲ್ಲ ಆದರೆ ಅವರ ಮನೆಯವರು ನಿತ್ಯವೂ ಕಣ್ಣೀರಲ್ಲಿ ಕೈತೊಳೆಯುತ್ತಾ ವ್ಯವಸ್ಥೆಯ ವಿರುದ್ಧ ಹಿಡಿಶಾಪ ಹಾಕುತ್ತಲೇ ಇದ್ದಾರೆ ಎನ್ನುವುದನ್ನು ಮರೆಯಬಾರದು.

ಹೌದು! ಯಾವುದೇ ಒಂದು ಸಾಮಾಜಿಕ ವ್ಯವಸ್ಥೆಯಲ್ಲಿ ಆತ್ಮಹತ್ಯೆಯ ವೈಭವೀಕರಣ ಸಲ್ಲದು. ಆತ್ಮಹತ್ಯೆಗೆ ಶರಣಾದವರ ನಿರ್ಧಾರವನ್ನು ಸಮರ್ಥಿಸಲೂಬಾರದು. ಇದರಿಂದ ಆತ್ಮಹತ್ಯೆಯು ಒಂದು ಸಮೂಹ ಸನ್ನಿಯಾಗಿ ಪರಿವರ್ತನೆ ಹೊಂದುವ ಅಪಾಯವಿದೆ. ಸಮಸ್ಯಾ ಪರಿಹಾರದ ಉಳಿದೆಲ್ಲಾ ಮಾರ್ಗಗಳು ಗೌಣವಾಗಿ ಈ ಆಯ್ಕೆ ಹೆಚ್ಚು ಅಪ್ಯಾಯವೆನಿಸುವುದರ ಮೂಲಕ ಪರೋಕ್ಷ ಪ್ರಚೋದನೆಗೂ ಕಾರಣವಾಗಬಲ್ಲದೆಂಬ ಆತಂಕ ಸಹಜವಾದುದು. ಹಾಗೆಂದ ಮಾತ್ರಕ್ಕೆ ಆತ್ಮಹತ್ಯೆ ಮಾಡಿಕೊಂಡವರೆಲ್ಲಾ ಪರಮ ಹೇಡಿಗಳು ಎನ್ನಲಾಗುತ್ತದೆಯೇ? ಒಂದೊಮ್ಮೆ, ವ್ಯವಸ್ಥೆಯ ಲೋಪಗಳ ವಿರುದ್ಧ ಹೋರಾಡುತ್ತಾ, ಭ್ರಷ್ಟಾಚಾರ ಅನ್ಯಾಯ, ಅಕ್ರಮಗಳಿಗೆ ಸಡ್ಡು ಹೊಡೆದು ನಿರಂತರವಾಗಿ ವ್ಯವಸ್ಥೆಯ ಸುಧಾರಣೆಗೆ ಹೆಣಗಾಡುತ್ತಾ ಅದರಲ್ಲಿ ಯಶಸ್ವಿಯಾಗಲಾಗದೇ ಬೇಸತ್ತು ಕುಣಕೆಗೆ ಗೋಣು ಚೆಲ್ಲಿದವರನ್ನು ಹೇಡಿಗಳು ಎಂದು ಕರೆಯುವುದಾದರೆ, ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿ, ಒಂದಿಲ್ಲೊಂದು ಅನ್ಯಾಯ, ಅಕ್ರಮಗಳ ಹಳವಂಡದೊಂದಿಗೆ,ಅದನ್ನು ಬಯಲು ಮಾಡುವವರಿಗೆ ಬೆದರಿಕೆ ಒಡ್ಡುತ್ತಾ ಹಣ ಬಲ, ತೋಳ್ಬಲಗಳ ಮೂಲಕ ಗಳಿಸಿಕೊಂಡ ರಾಜಕೀಯ ಪ್ರಾಬಲ್ಯದ ನೆರವಿನಿಂದ ತಮ್ಮದೇ ಸಾಮ್ರಾಜ್ಯ ಕಟ್ಟಿಕೊಂಡವರಂತೆದರ್ಪದಿಂದ ಮೆರೆಯುತ್ತಿರುವವರನ್ನು ಯಾವ ಹೆಸರಿನಿಂದ ಕರೆಯಬೇಕು? ಹೇಗಾದರೂ ಸರಿ, ತಮ್ಮ ಅಸ್ತಿತ್ವ ಉಳಿಸಿಕೊಂಡಿದ್ದಾರೆ ಮತ್ತು ಆತ್ಮಹತ್ಯೆಗೆ ಮುಂದಾಗಲಿಲ್ಲ ಎಂಬ ಒಂದೇ ಕಾರಣಕ್ಕೆ ಅವರನ್ನು ಮಹಾನ್ ಸಂಭಾವಿತರು, ಧೈರ್ಯವಂತರು ಎಂದು ಕರೆಯಲಾದೀತೆ? ಎಲ್ಲಾ ಆತ್ಮಹತ್ಯೆಗಳನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗಲಾಗದು ಸ್ವಾಮಿ. ಒಂದೊಮ್ಮೆ ಆತ್ಮಹತ್ಯೆ ಮಾಡಿಕೊಳ್ಳುವುದು ಹೇಡಿತನ ಎನ್ನುವುದೇ ಸಚಿವರ ನಿಲುವಾಗಿದ್ದರೆ ಅಂದು ರೋಹಿತ್ ವೇಮುಲನ ಆತ್ಮಹತ್ಯೆಯ ಸಂದರ್ಭದಲ್ಲಿ ಅವರದೇ ಸರ್ಕಾರದ ಮುಖ್ಯಸ್ಥರು ಕಂಬನಿಗೆರೆದು ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಕ್ಕೆ ಏನಾದರೂ ಉಸುರಿದ್ದರೇ ಇವರು? ತಮ್ಮದೇ ಪಕ್ಷದ ಯುವರಾಜ ಅಲ್ಲಿಗೆ ಭೇಟಿ ಕೊಟ್ಟಿದ್ದಾಗಲೂ ಇದೇ ಅಭಿಪ್ರಾಯ ಇತ್ತೇ ಅವರಲ್ಲಿ?

            ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ, ಆತ್ಮಹತ್ಯೆಗೆ ಶರಣಾದ ಅಧಿಕಾರಿಗಳ ಭಾವಚಿತ್ರ ಪ್ರದರ್ಶಿಸಿದ್ದು ತಪ್ಪು ಮತ್ತದು ಅಪಮಾನಕಾರಿ ಎಂಬ ಕಾರಣಕ್ಕೆ ಸಚಿವರ ದೇಶಭಕ್ತಿ ಒಮ್ಮೆಗೇ ಪುಟಿದೆದ್ದಿತಂತೆ! ತದನಂತರದಲ್ಲಿ ಕಾರಣ ಕೇಳಿ ಮಂಡ್ಯ ಜಿಲ್ಲಾ ಉಪನಿರ್ದೇಶಕರಿಗೆ ನೋಟಿಸ್ ಕೂಡಾ ಜಾರಿ ಮಾಡಲಾಗಿದೆ. ಇನ್ನೆಂದೂ ಅಂಥ ಭಾವಚಿತ್ರಗಳನ್ನು ಪ್ರದರ್ಶಿಸಬಾರದು ಕೇವಲ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರವನ್ನಷ್ಟೇ ಪ್ರದರ್ಶಿಸಬೇಕೆಂಬ ಸುತ್ತೋಲೆಯೂ ಇಷ್ಟರಲ್ಲೇ ಹೊರ ಬೀಳಲಿದೆ. ಇದು ದೇಶ ಭಕ್ತಿಯೆಂದರೆ!! ಆದರೆ, ಇನ್ನೊಂದೆಡೆ ಕಾರ್ಯಕ್ರಮವೊಂದರಲ್ಲಿ ದೇಶವಿರೋಧಿ ಘೋಷಣೆಗಳು ಹೊರ ಹೊಮ್ಮಿವೆ. ಭಯೋತ್ಪಾದಕರಿಗೂ ಜೈಕಾರ ಹಾಕಲಾಗಿದೆ. ದೇಶದ ಸೌಹಾರ್ದತೆ, ಐಕ್ಯತೆ ಹಾಗೂ ಸಾರ್ವಭೌಮತೆಗೆ ಭಂಗ ತರುವ ಚಟುವಟಿಕೆಗಳು ನಡೆದಿರುವ ಬಗ್ಗೆ ದೂರು ದಾಖಲಾಗಿದೆ. ಸೂಕ್ತ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆಗಳು ತಾರಕಕ್ಕೇರಿವೆ. ಅದೇ ಸಚಿವರಿರುವ ಪಕ್ಷದ ರಾಷ್ಟ್ರೀಯ ಮುಖಂಡರೋರ್ವರು, ರಾಷ್ಟ್ರವಿರೋಧಿ ಚಟುವಟಿಕೆ ನಡೆಸಿದ ಆರೋಪಕ್ಕೆ ಒಳಗಾಗಿರುವ ಸಂಸ್ಥೆಗೆ ಅಭಯವನ್ನಿತ್ತಿದ್ದಾರೆ. “ಕೇಸ್ ಮಾತ್ರ ದಾಖಲಿಸಲಾಗಿದೆಯೇ ಹೊರತು, ಯಾರನ್ನೂ ಬಂಧಿಸುವುದಿಲ್ಲ. ಈ ಬಗ್ಗೆ ನಾನು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದ್ದೇನೆ” ಎಂಬ ಸಮಾಧಾನದ ಮಾತುಗಳನ್ನು ಟ್ವೀಟಿಸುವ ಮೂಲಕ ಆ ಸಂಸ್ಥೆಗೆ ಸಾಂತ್ವನ ಹೇಳಿದ್ದಾರೆ. ಆ ಪ್ರಕರಣದಲ್ಲಿದ್ದ ಪ್ರಕಟವಾಗಿದ್ದ ದೇಶಭಕ್ತಿ ಅದ್ಯಾಕೋ ಈ ಪ್ರಕರಣದಲ್ಲಿ ವ್ಯಕ್ತವಾಗಲೇ ಇಲ್ಲಾ!! ಇದೆಂಥಾ ವಿರೋಧಾಭಾಸ?!

-ಸಂದೇಶ್. ಎಚ್. ನಾಯ್ಕ್ ಹಕ್ಲಾಡಿ

ಕುಂದಾಪುರ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!