ಅಂಕಣ

ಅಭಿಮಾನ ಶೂನ್ಯತೆ,ಅಂಧಾಭಿಮಾನದ ಮಧ್ಯದ ಸಮಸ್ಯೆಯ ತಾಯಿಬೇರು

       ಕಬಾಲಿ ಎಂಬ ಚಿತ್ರ ತೆರೆಗೆ ಅಪ್ಪಳಿಸಿತು. ಒಂದು ವಾರದಲ್ಲಿ ಅದರ ಅಸಲಿಯತ್ತನ್ನು ತೋರಿಸಿ ಹೋಯಿತು. ಏತನ್ಮಧ್ಯೆ ರಜನೀಕಾಂತ್ ಅವರ ಅಭಿಮಾನಿಗಳ ಪರಾಕುಗಳು, ತಮಿಳಿಗರ ಸಿನಿಮಾ ಮತ್ತು ಭಾಷೆಯ ಮೇಲಿನ ಅಭಿಮಾನ, ಹಬ್ಬಗಳಿಗೂ ರಜೆ ಕೊಡದ ಸಾಫ್ಟವೇರ್ ಕಂಪನಿಗಳು ದಿಢೀರ್ ಎಂದು ರಜೆ ಘೋಷಿಸಿದ್ದು, ಕನ್ನಡಿಗರ ಆಕ್ರೋಶ,ಪ್ರತಿಭಟನೆ, ಕನ್ನಡದ ಸಿನಿಮಾಗಳಿಗೆ ಜಾಗವಿಲ್ಲ ಎಂಬ ಕನ್ನಡಪರ ಕಾಳಜಿ, ರಜನೀಕಾಂತ್ ಪ್ರತಿಕೃತಿ ದಹನ ಇತ್ಯಾದಿ ನಡೆದು ಹೋದವು. ಕೆಲವರು ಕನ್ನಡಿಗರಿಗೆ ಕನ್ನಡದ ಮೇಲೆಯೇ ಅಭಿಮಾನವಿಲ್ಲ ಎಂದು ಜರಿದರು.ತಮಿಳಿಗರದು ಅಟ್ಟಹಾಸ ಎಂದೂ ಕರೆದರು. ರಜನೀಕಾಂತ್ ಕನ್ನಡದವರೆ ಎಂದು ಸಮಜಾಯಿಸಿ ಕೊಟ್ಟರು. ಸಿನಿಮಾ ನೋಡದೆ ಬೈದವರೂ, ಗುಣಗಾನ ಮಾಡಿದವರೂ ಸಮಸಂಖ್ಯೆಯಲ್ಲಿದ್ದರು. ಭಾಷೆ ಬೇರಾದರೇನು ನಾವೆಲ್ಲ ಒಂದೇ ಅಂದವರಿದ್ದರು. ತಮಿಳುನಾಡಲ್ಲಿ ಕನ್ನಡ ಮಾತಾಡಿದಾಗ ದಂಡ ಹಾಕುವ ಸಂದರ್ಭದಲ್ಲಿ ನಾವೆಲ್ಲರೂ ಒಂದೇ ಆಗಿರಲಿಲ್ಲವೇ?ಇದನ್ನೆಲ್ಲಾ ಪಕ್ಕಕ್ಕಿಟ್ಟು ಇಂಥ ಬೃಹದಾಕಾರದ ಸಮಸ್ಯೆಯ ತಾಯಿ ಬೇರಿರುವುದಾದರೂ ಎಲ್ಲಿ?ಎಂಬುದನ್ನು ಯೋಚಿಸಲೇ ಬೇಕಿದೆ. ಹೌದು ಅದಿರುವುದು ಕರ್ನಾಟಕದ ಮಣ್ಣಲ್ಲೆ…..

               ರಂಗಿತರಂಗದ ನಂತರ ಕೆಲವು ಗಮನಾರ್ಹ ಚಿತ್ರಗಳು ಕನ್ನಡದಲ್ಲಿ ಒಂದರ ನಂತರ ಇನ್ನೊಂದು ರಿಲೀಜ್ ಆಗಿದ್ದು ಕನ್ನಡ ಚಿತ್ರರಂಗ ಕಂಡುಕೊಂಡ ಒಂದು ಸಣ್ಣ ಬದಲಾವಣೆಯನ್ನು ಗಮನಿಸಬಹುದು. ಅಂದಾಜಿನ ಪ್ರಕಾರ ಕನ್ನಡದ ೬ ಕೋಟಿ ಜನಸಂಖ್ಯೆಯಲ್ಲಿ ಪಕ್ಕಾ ಕನ್ನಡಿಗರು(ಕನ್ನಡ ಓದಲು ಬರೆಯಲು ಮಾತಾಡಲು ಬರುವವರು) ೪ ಕೋಟಿ ಎಂದು ಇಟ್ಟುಕೊಳ್ಳೋಣ. ಇಷ್ಟು ಕಡಿಮೆ ಸಂಖ್ಯೆಗೆ ಇಳಿಸುವುದಕ್ಕೂ ಒಂದು ಕಾರಣವಿದೆ. ಮಂಗಳೂರಿನಲ್ಲಿ ಮಲೆಯಾಳಿಗರು,ಬೆಂಗಳೂರಿನಲ್ಲಿ ತಮಿಳಿಗರು, ಹೈದ್ರಾಬಾದ್ ಕರ್ನಾಟಕದ ತೆಲಗು ಜನ, ಮುಂಬೈ ಕರ್ನಾಟಕದ (ಮುಖ್ಯವಾಗಿ ಬೆಳಗಾವಿ) ಮರಾಠಿಗರು ಅಲ್ಲದೇ ನಾಡ ಭಾಷೆಗಿಂತ ಪ್ರಾದೇಶಿಕ ಭಾಷೆಗೆ ಒತ್ತು ಕೊಡುವವರು, ೯೦ ರ ದಶಕದ ಶಿಕ್ಷಣ ಪದ್ಧತಿಗೆ ಜೋತು ಬಿದ್ದ ಪಾಲಕರ ಒತ್ತಾಯದ ಮೇರೆಗೆ ಕಾನ್ವೆಂಟ್ ಸ್ಕೂಲ್ ಸೇರಿ ಕನ್ನಡ ಮಾತಾಡಲಿಕ್ಕೂ ಆಗದ ಹಾಗೆ ಆಂಗ್ಲದ ಕಡುಬನ್ನು ಗಂಟಲಲ್ಲಿ ಇಟ್ಟುಕೊಂಡ ಸೋಕಾಲ್ಡ್ ಕನ್ನಡಿಗರು ಇವರೆಲ್ಲ ಈ ಸಂಖ್ಯಾ ಇಳಿಕೆಗೆ ಕಾರಣ. ಬಹುಷಃ ನೀವೀಗ ಸಂಖ್ಯೆಯನ್ನು ಮತ್ತಷ್ಟು ಇಳಿಸಿದರೂ ಆಶ್ಚರ್ಯವಿಲ್ಲ. ಇರುವ ನಾಲ್ಕು ಕೋಟಿಯಲ್ಲಿ ಲಕ್ಷಕೊಬ್ಬನಾದರೂ ಸಿನಿಮಾ ಮಾಡಬಲ್ಲ ಕತೆ ಬರೆಯಲಾರನೇ? ಇಲ್ಲಿಯೇ ಇದೆ ಸಮಸ್ಯೆ. ಸಿನಿಮಾ ಕ್ಷೇತ್ರದಲ್ಲಿ ರಾಜಕೀಯವನ್ನು ನಾಚಿಸುವ ರಾಜಕಾರಣವೊಂದು ಅವಿತು ಕುಳಿತಿದೆ ಅದನ್ನು ಹೊರಗೆಳೆಯುವುದು ತುಂಬಾ ಕಷ್ಟ ಸಾಧ್ಯ.

        ಕನ್ನಡದ ನಿರ್ಮಾಪಕರು ಒಂದು ತೆಲಗು,ತಮಿಳು ಚಿತ್ರದ ಹಕ್ಕಿಗಾಗಿ ಸುರಿಯುವ ಹಣದಲ್ಲಿ ಎರಡು ಸದಭಿರುಚಿಯ ಕನ್ನಡ ಕಥೆಗಳಿಗೆ ಸಿನಿಮಾ ರೂಪ ಕೊಡಬಹುದು. ಆ ಇಚ್ಛಾಶಕ್ತಿ ನಿರ್ಮಾಪಕರಲ್ಲಿಲ್ಲ. ಬೇರೆ ಭಾಷೆಯ ಚಿತ್ರಗಳನ್ನು ಇಷ್ಟ ಪಟ್ಟ ತಕ್ಷಣ ಭಟ್ಟಿ ಇಳಿಸಿ ಮತ್ತೆ ಪ್ಲಾಪ್ ಚಿತ್ರವನ್ನೇ ಕೊಡುತ್ತಾರೆ. ಒಮ್ಮೆ ಕರ್ನಾಟಕದ ಯಾವುದೋ ಊರಿನಿಂದ ಬಂದ ಯುವಕ ನಿರ್ಮಾಪಕರ ಎದುರಿಗೆ ತನ್ನ ಕಥೆಯನ್ನು ಇಟ್ಟಾಗ ದುರ್ಬಲನಾದ ಅವನ ಉತ್ತಮ ಕೃತಿಗೆ ತನ್ನ ಹೆಸರು ಕೊಟ್ಟು ಬಿಡುಗಡೆ ಮಾಡುವ ಉದಾಹರಣೆಗಳೇ ಜಾಸ್ತಿ. ಇಲ್ಲವಾದರೆ ಅಸಡ್ಡೆಯಿಂದ ನೀನು ಸಂಭಾವನೆ ಕೇಳದಿದ್ದರೆ ಮಾತ್ರ ಅವಕಾಶ ಕೊಡುತ್ತೇನೆ ಎಂದು ಬಿಡುವ ನಿರ್ದೇಶಕರೂ ಇದ್ದಾರೆ. ಆಗ ಅವನಿಗೊಂದು ಅವಕಾಶ ಸಿಕ್ಕರೆ ಸಾಕಾಗಿರುತ್ತೆ. ಆಕಸ್ಮಿಕವಾಗಿ ಒಪ್ಪಿಕೊಂಡು ಬಿಡುತ್ತಾನೆ. ಆಗ ನಾನು ಸ್ಟಾರ್ ನಟರಿದ್ದರೆ ಮಾತ್ರ ಸಿನಿಮಾ ತೆಗೆಯೋದು ಎಂಬ ಹೊಸ ತಗಾದೆ .ಅಪ್ಪಿ ತಪ್ಪಿ ಸ್ಟಾರ್ ನಟರು ಒಪ್ಪಿಕೊಂಡರೂ ಒಬ್ಬರು ಫ್ರೀ ಇದ್ದಾಗ ಇನ್ನೊಬ್ಬರು ಇರುವುದಿಲ್ಲ. ಎಲ್ಲರನ್ನೂ ಕೂಡಿಸಿ ಕ್ಯಾಮರಾ ಮುಂದೆ ತಂದು ನಿಲ್ಲಿಸಿದ ತಕ್ಷಣ ಈ ಸೀನ್ ಬೇಡ ಇದು ನನ್ನ ಪ್ರತಿಷ್ಠೆಗೆ ಒಗ್ಗುವಂತದಲ್ಲ ಆ ಸೀನ್ ಬೇಡ ಇತ್ಯಾದಿ ತಗಾದೆ. ಎಲ್ಲವೂ ಮುಗಿದ ಮೇಲೆ ಸೆನ್ಸಾರ್ ಕತ್ತರಿ; ತೆರೆಗೆ ಬರುವ ಹೊತ್ತಿಗೆ ಕಥೆಗಾರನ ಮೂಲ ಕಥೆ ಪೀತಾಂಬರವಾಗದೆ ಚಿಂದಿ ಬಟ್ಟೆಯಾಗಿರುತ್ತದೆ. ಇನ್ನು ಇದು ಬಿಡುಗಡೆಗೆ ಸಿದ್ಧವಾಗಿ ನಿಂತ ತಕ್ಷಣ ಸ್ಟಾರ್ ನಿರ್ದೇಶಕರ ಚಿತ್ರಗಳು ಚಿತ್ರಮಂದಿರಗಳಲ್ಲಿ ಕಾಲು ಮುರಿದುಕೊಂಡು ಬಿದ್ದಿರುತ್ತವೆ. ಹಾಗೋ ಹೀಗೋ ಬಿಡುಗಡೆ ಆದರೆ ಬಂದ ವಾರದಲ್ಲಿಯೇ ಮತ್ತೊಂದು ಅದ್ಧೂರಿ ಬ್ಯಾನರ್ ಚಿತ್ರ ರೆಡಿಯಾಗಿ ಥಿಯೆಟರ್ ಬಾಗಿಲು ಬಡೆಯುತ್ತಿರುತ್ತದೆ. ಹೊಸಬನ ಚಿತ್ರ ಅಲ್ಲಿಂದ ಎತ್ತಂಗಡಿ.ಈ ಹಿಂದೆ ಒಬ್ಬರು ಚಿತ್ರವನ್ನು ಎತ್ತಂಗಡಿ ಮಾಡಿದ್ದಕ್ಕೆ ಥಿಯೇಟರ್ ಮೇಲೇರಿ ಆತ್ಮಹತ್ಯೆಗೆ ಯತ್ನಿಸಿದ್ದನ್ನು ಇವತ್ತು ಕನ್ನಡದ ಚಿತ್ರಗಳಿಗೆ ಥಿಯೆಟರ್ ಇಲ್ಲ ಎಂದವರೇ ಗೇಲಿ ಮಾಡಿದ್ದರು. ಮತ್ತೆ ಹೊಸ ಮತ್ತು ಸೃಜನಶೀಲ ಚಿತ್ರಗಳು ಬರುವುದಾದರೂ ಹೇಗೆ?

      ನೀವೆಲ್ಲರೂ ಕೇಳಬಹುದು ಇಷ್ಟಿದ್ದರೂ ಇತ್ತೀಚೆಗೆ ಬಂದ ಚಿತ್ರಗಳು ಮೆಚ್ಚುಗೆ ಗಳಿಸಿದ್ದಾದರೂ ಹೇಗೆ?ಅಂತ. ಸುಮ್ಮನೆ ಆ ಚಿತ್ರಗಳ ತಾರಾಗಣವನ್ನೊಮ್ಮೆ ನೋಡಿ ಎಲ್ಲರೂ ಹೊಸಬರೇ ಅವಕಾಶದ ಆಕಾಂಕ್ಷಿಗಳೇ ಮೇಲಾಗಿ ಎಲ್ಲರೂ ಪ್ರತಿಭಾವಂತರೇ. ಒಂದೆಡೆ ಕನ್ನಡದ ಪ್ರಖ್ಯಾತಿಯ ಅಮಲಲ್ಲಿರುವ ನಟ,ನಿರ್ದೇಶಕ,ನಿರ್ಮಾಪರಿಂದ ಅವಕಾಶ ವಂಚನೆಗೊಳಗಾಗಿ ಹೊರ ಬಂದು ತಾವೇ ಗುಂಪು ಕಟ್ಟಿಕೊಂಡು ಹೊಸತನ್ನು ಕೊಡಲು ನಿರ್ಧರಿಸಿದರು. ಆಗ ಹುಟ್ಟಿದ್ದೇ ಈ ಚಿತ್ರಗಳು. ರಂಗಿತರಂಗ, ಕೆಂಡ ಸಂಪಿಗೆ, ತಿಥಿ,ಇಷ್ಟಕಾಮ್ಯ,ಕರ್ವ,U turn, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಸುಳಿ ಹೀಗೆ ಸಾಲು ಸಾಲು ಕನ್ನಡ ಚಿತ್ರಗಳು ಬಂದವು.ಕನ್ನಡದ ಚಿತ್ರಗಳೇ ಕನ್ನಡದ ಚಿತ್ರಗಳಿಗೆ ಆರೋಗ್ಯಕರ ಪ್ರತಿಸ್ಪರ್ಧೆ ನೀಡಿದವು.

     ಈ ಹಿಂದಿನ ಕೆಲವು ದಿನಗಳ ಪರಿಸ್ಥಿತಿಯನ್ನು ನಿಮ್ಮ ಮುಂದೆ ಇಡುತ್ತೇನೆ. ಕನ್ನಡದ ಒಳ್ಳೆಯ ಸ್ಫುರದ್ರೂಪಿ ನಟಿಯರಿಗೆ ಕನ್ನಡಿಗರು ಅವಕಾಶ ಕೊಡಲಿಲ್ಲ. ಅದನ್ನು ಬಿಟ್ಟು ಬೇರೆ ಭಾಷೆಯಿಂದ ಬಂದ ಕನ್ನಡದ ಒಂದು ಪದವನ್ನು ಉಚ್ಛರಿಸಲಾಗದ ನಟಿಯರಿಗೆ ಅವಕಾಶ ಕೊಟ್ಟರು. ನಮ್ಮ ರಾಜ್ಯದ ಹುಡುಗಿಯರ ಪ್ರತಿಭೆಗೆ ಬೆರಗಾದ ತಮಿಳು ತೆಲಗಿನವರು ಅವರಿಗೆ ಮಣೆ ಹಾಕಿದರು. ಅವರ ನಟನೆಯ ಬಂಡವಾಳದಿಂದ ಅತ್ಯುತ್ತಮ ಸಿನಿಮಾಗಳನ್ನು ಹೊರ ತಂದರು. ಆ ನಟಿಯರು ಪ್ರಸಿದ್ಧಿ ಪಡೆದ ಮೇಲೆ ಮತ್ತೆ ಕನ್ನಡಕ್ಕೆ ಮರಳಿ ಅಂದರೆ ಆಗುವ ಮಾತೆ? ಕೈತುಂಬಾ ಸಿನಿಮಾ ಇಟ್ಟುಕೊಂಡು ಇಲ್ಲಿಗ್ಯಾಕೆ ಬರ್ತಾರೆ?ಕನ್ನಡಾಭಿಮಾನದ ಬಗ್ಗೆ ತಮ್ಮ ಚಿತ್ರಗಳಿಗೆ ಥಿಯೇಟರ್ ಇಲ್ಲ ಎಂದು ಹೇಳುವವರು ಕನ್ನಡದ ಪ್ರತಿಭಾವಂತರನ್ನು ನಡೆಸಿಕೊಂಡು ರೀತಿ ಒಪ್ಪತಕ್ಕದ್ದೆ? ನಟಿಯರನ್ನು ಬಿಡಿ ಕನ್ನಡದ ಹಿರಿಯ ನಟರು ಪೋಷಕ ಪಾತ್ರಧಾರಿಗಳು ಒಬ್ಬರು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಬೇರೆ ಭಾಷೆಯ ನಟಿಯರು ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತಿರಬೇಕಾದರೆ ಇವರೆಲ್ಲ ಸಾಲಿನಲ್ಲಿ ಹೋಗಿ ಸಂಭಾವನೆ ಪಡೆಯಬೇಕಿತ್ತಂತೆ. ಕಲೆಯ ಬದುಕಲ್ಲಿ ಕನ್ನಡವನ್ನು ಬಿಟ್ಟು ಬೇರೆ ಊರಗೋಲೆ ಇಲ್ಲದ ಆ ಹಿರಿಯ ಜೀವಗಳಿಗೆ ನಾವು ಕನಿಷ್ಠ ಸೌಜನ್ಯವನ್ನು ತೋರದಿದ್ದರೆ ಹೇಗೆ? ಅಣ್ಣಾವ್ರೂ ಅಷ್ಟು ದೊಡ್ಡ ನಟರಾದರೂ ಹಿರಿಯ ನಟರಿಗೆ, ನಿರ್ದೇಶಕರಿಗೆ ಬಂದ ತಕ್ಷಣ ಎದ್ದು ನಿಂತು ನಮಸ್ಕರಿಸುತ್ತಿದ್ದರಂತೆ. ಒಮ್ಮೆ ಪದ್ಮಾ ವಾಸಂತಿಯವರು ಹೇಳಿದಂತೆ ಪುಟ್ಟಣ್ಣ ಕಣಗಾಲ್ ನಿರ್ದೇಶಕರಾದ ಚಿತ್ರದಲ್ಲಿ ಅಭಿನಯಿಸುವಾಗ ಅವರ ಬಗ್ಗೆ ಯಾವಾಗಲೂ ಗೌರವ ಬೆರೆತ ಭಯ ಇರುತ್ತಿತ್ತಂತೆ. ಆಗ ಚಿತ್ರರಂಗದಲ್ಲಿ ಆ ಸಂಸ್ಕಾರ ಇದ್ದದ್ದಕ್ಕೆ ಅವರಲ್ಲಿನ ಸೃಜನಶೀಲತೆ ಚಿತ್ರಗಳಾಗಿ ಜನರ ಮನಸ್ಸಲ್ಲಿ ಅಚ್ಚಳಿಯದೇ ಉಳಿದಿವೆ. ಅದಲ್ಲದೆ ಹಿರಿಯ ನಟಿ ಲಕ್ಷ್ಮೀ ಅವರು ರಿಯಾಲಿಟಿ ಶೋದಲ್ಲಿ ಕನ್ನಡದ ರಾಜ್ ಅವರ ಚಿತ್ರಗಳು ತಮಿಳು, ತೆಲುಗಿಗೆ ರಿಮೇಕ್ ಆಗುತ್ತಿತ್ತು ಎಂದು ಹೇಳಿದ್ದರು. ಲಕ್ಷ್ಮೀ ಕೂಡಾ ಮೂಲತಃ ಕನ್ನಡಿಗರಲ್ಲ ಆದರೇ ಯಾವುದೇ ಪೂರ್ವಾಗ್ರಹವಿಲ್ಲದೇ  ಒಳ್ಳೆಯದನ್ನು ಒಪ್ಪಿಕೊಂಡರು.ಕನ್ನಡ ಚಿತ್ರರಂಗದ ವೈಭವದ ದಿನಗಳನ್ನು ಕಂಡವರಿಗೆ ಬೇಜಾರಾಗದೇ ಇರುತ್ತಾ?  ಕನ್ನಡಿಗರಲ್ಲದವರು ಮೈಕ್ ಮುಂದೆ ನಿಂತು ಹಾಡಲು ನಿಂತಾಗ ಕನ್ನಡದ ಗಾಯಕರು ಟಿವಿ ಶೋಗಳ ಆ್ಯಂಕರ್ ಆಗಿ ಹೊಟ್ಟೆ ತುಂಬಿಸಿಕೊಳ್ಳುತ್ತಿರುವುದು ವಿಪರ್ಯಾಸ. ಕನ್ನಡದ ೯೦ ರ ದಶಕದ ಚಿತ್ರಗಳಲ್ಲಿದ್ದ ಒಳ್ಳೆಯ ಗಾಯಕರೊಬ್ಬರು ಸಂದರ್ಶಕರ ಪ್ರಶ್ನೆಗೆ ಉತ್ತರಿಸುತ್ತಾ “ನಮ್ಮ ಮಕ್ಕಳನ್ನು  ಚಿತ್ರರಂಗಕ್ಕೆ ಬಿಡುವುದಿಲ್ಲ. ಬಿಟ್ಟರೂ ಕನ್ನಡ ಚಿತ್ರರಂಗದಲ್ಲಿ ಮಾತ್ರ ಬಿಡುವುದಿಲ್ಲ. ಇಲ್ಲಿ ನಡು ನೀರಿನಲ್ಲಿ ಕೈ ಬಿಡುವವರೇ ಜಾಸ್ತಿ” ಎಂದರು.

      ಈಗಲೂ ಕಾಲ ಮಿಂಚಿಲ್ಲ. ಕನ್ನಡದ ಸ್ಟಾರ್ ನಟರಿಗೆ ಅಷ್ಟೆ ಅವಕಾಶ ನೀಡುವ ನಿರ್ಮಾಪಕರು ಕನ್ನಡದ ನವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿ ಕೊಡಬೇಕು.ಕನ್ನಡದಲ್ಲಿ ಜನ್ಮ ಪೂರ್ತಿ ಓದಿದರೂ ಮುಗಿಯದಷ್ಟು ಸಾಹಿತ್ಯ ಭಂಡಾರವಿದೆ. ಅದರಿಂದ ಸಿನಿಮಾ ಮಾಡಬಲ್ಲ ಕಾದಂಬರಿಗಳನ್ನು ಆಯ್ದುಕೊಳ್ಳಬೇಕು. ಇಲ್ಲವೇ ಗುರುಪ್ರಸಾದ್,ಪ್ರಕಾಶ್ ಅಂತಹ ಒಳ್ಳೆಯ ನಿರ್ದೇಶಕರು ಒಳ್ಳೆಯ ಕತೆಯನ್ನು ಮಾಡಬೇಕು. ಹಿಂದೊಮ್ಮೆ ರವಿಚಂದ್ರನ್ ಗುರುಪ್ರಸಾದ್ ಅವರಿಗೆ ರಿಯಾಲಿಟಿ ಶೋದಲ್ಲಿ “ನಿಮ್ಮಂಥ ಪ್ರತಿಭಾವಂತರು ಕಿರುತೆರೆಗೆ ಅಂಟಿಕೊಂಡು ಸಮಯ ಹಾಳು ಮಾಡದೆ ಒಳ್ಳೆಯ ಸ್ಕ್ರಿಪ್ಟ್ ರೆಡಿ ಮಾಡಬೇಕು” ಎಂದು ಹೇಳಿದ್ದರು. ಇಂಥ ಒಳ್ಳೆಯ ನಿರ್ದೇಶಕರು ಕಥೆ ಮಾಡಿ ಚಿತ್ರದಲ್ಲಿ ಕನ್ನಡದ ನಟ ನಟಿಯರಿಗೆ, ಗಾಯಕರಿಗೆ,ಕಲಾವಿದರಿಗೆ ಅವಕಾಶ ಕೊಟ್ಟು ಅವರಲ್ಲಿನ ಕಲಾ ಶ್ರೀಮಂತಿಕೆಯನ್ನು ದುಡಿಸಿಕೊಂಡರೆ ಯಾವ ಪ್ರತಿಭಟನೆಯ ಅವಶ್ಯಕತೆಯೂ ಇಲ್ಲ. ರಂಗಿತರಂಗ ಬಂದ ತಕ್ಷಣ ಬಾಹುಬಲಿ ಬಲವಿಲ್ಲದೇ ಓಡಿದ್ದು ಇಲ್ಲಿ ನೆನೆಯಬಹುದು.  ಇದಕ್ಕೊಂದು ಉದಾಹರಣೆ ಎಂದರೆ ನಾಗತಿಹಳ್ಳಿ ಚಂದ್ರಶೇಖರ್ ಅವರು ಇಷ್ಟಕಾಮ್ಯ ಚಿತ್ರದಲ್ಲಿ ಕಿರುತೆರೆಯ ನಟರಿಗೆ ಅವಕಾಶವಿತ್ತು ಅವರಲ್ಲಿನ ಕಲಾ ಪ್ರಚ್ಛನ್ನತೆಯನ್ನು ಹೊರಗೆಳೆದಿದ್ದಾರೆ. ಹಿರಿಯರು ಉಳ್ಳವರು ಕಿರಿಯರ ಬೆಂಗಾವಲಿಗೆ ನಿಂತರೆ ಕನ್ನಡ ಚಿತ್ರರಂಗದ ಅಣ್ಣಾವ್ರ ಸಮಯದ ಮಹಾ ಮನ್ವಂತರ ಮರುಕಳಿಸುವುದರಲ್ಲಿ ಸಂಶಯವಿಲ್ಲ. ಆ ಕಾಲ ಮತ್ತೆ ಮರುಕಳಿಸಲಿ ಕನ್ನಡಿಗರ ಅಭಿಮಾನ ಶೂನ್ಯತೆಯನ್ನು ಜಾಗೃತಗೊಳಿಸಿ ಬೇರೆ ರಾಜ್ಯಕ್ಕೆ ಹೋದಾಗ ಕನ್ನಡ ಮಾತಾಡಿದ್ದಕ್ಕೆ ದಂಡ ಹಾಕಿದ ಪರಭಾಷಿಗರ ದರ್ಪವನ್ನು ಮಟ್ಟ ಹಾಕಲಿ …..

 —    ರಾಹುಲ್ ಹಜಾರೆ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!