ಅಂಕಣ

ಯೋಧರಿಗಾಗಿ…

      ಯಾವುದೇ ಒಂದು ರಾಷ್ಟ್ರ ಸುಸ್ಥಿರವಾಗಿ,ಸದೃಢವಾಗಿ ಅಭಿವೃದ್ಧಿ ಹೊಂದಿ ಜಾಗತಿಕ ಮಟ್ಟದಲ್ಲಿ ತನ್ನ ಛಾಪನ್ನು ಮೂಡಿಸಬೇಕೆಂದರೆ ಆ ದೇಶದ ಆರ್ಥಿಕ ಸ್ಥಿರತೆಯ ಜೊತೆಗೆ ರಕ್ಷಣಾ ವಿಭಾಗವೂ ಕೂಡ ಉತ್ತಮ ಸ್ಥಿತಿಯಲ್ಲಿರಬೇಕು.ರಕ್ಷಣಾ ವಿಭಾಗ ಎಂದರೆ ಕೇವಲ ರಕ್ಷಣಾ ಮಂತ್ರಿ ಪ್ರಬುದ್ಧನಾಗಿರಬೇಕು ಎಂದರ್ಥವಲ್ಲ. ಮುಖ್ಯವಾಗಿ ಗಡಿ ಕಾಯುವ ಸೈನಿಕರು ಬಲಿಷ್ಠರಾಗಿರಬೇಕು,ಹೆಚ್ಚು ಆತ್ಮ ಸ್ಥೈರ್ಯವನ್ನು ಹೊಂದಿರಬೇಕು.ಇದು ಸಾಧ್ಯವಾಗಬೇಕಾದರೆ ಸರ್ಕಾರ ಸೈನಿಕರಿಗೆ ಉತ್ತಮ ಸೌಲಭ್ಯವನ್ನು ಒದಗಿಸಬೇಕು. ಆಗ ಅವರು ಮಾಡುವ ಸೇವೆಗೆ ಅರ್ಥ ಬರುತ್ತದೆ.ಆದರೆ ನಮ್ಮ ದೇಶದಲ್ಲಿ ಸೈನಿಕರ ಪರಿಸ್ಥಿತಿ ಹೇಗಿದೆ? ಅತ್ಯಂತ ಹೀನಾಮಾನವಾಗಿದ್ದ ಅವರ ಸ್ಥಿತಿ ಕಳೆದೆರೆಡು ವರ್ಷದಿಂದ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ ಎನ್ನಬಹುದೇನೋ… ಆದರೂ…!!

          ಮಳೆ ಗಾಳಿ ಚಳಿ ಇದಾವುದನ್ನೂ ಲೆಕ್ಕಿಸದೇ ದೇಶ ಕಾಯುವ ಕಾಯಕ ಮಾಡುವುದು ನಮ್ಮ ಸೈನಿಕರು. ಒಂದರ್ಥದಲ್ಲಿ “ಸ್ವಾರ್ಥದಲ್ಲಿ ನಿಸ್ವಾರ್ಥ ಸೇವೆ” ಅವರದ್ದು.ಹೌದು ತಮ್ಮ ಕುಟುಂಬ ಚೆನ್ನಾಗಿರಬೇಕೆಂಬ ಕಾರಣಕ್ಕಾಗಿ ಸೇನೆಯನ್ನು ಸೇರಿದರೂ ಸಾವಿಗೆ ಎದುರು ನೋಡುತ್ತಾ ಜೀವನ ಸಾಗಿಸುವುದು ನಿಸ್ವಾರ್ಥ ಎನ್ನಬಹುದು.ಶತ್ರುವಿನ ರೂಪದಲ್ಲಿ ಸಾವು ಯಾವಾಗ ಬೇಕಾದರೂ ತಮ್ಮ ಮೇಲೆರಗಬಹುದು ಎಂಬುದು ಅವರಿಗೆ ಗೊತ್ತಿರುತ್ತದೆ ಆದರೂ ಅದರ ಪರಿವೇ ಇಲ್ಲದೇ ಕಾಯಕ ಮಾಡುತ್ತಾರಲ್ಲಾ  ಅವರೇ ನಮ್ಮ ನಿಜವಾದ ಹೀರೋಗಳು. ಸುನಾಮಿ ಸಂಭವಿಸಲಿ ಅಲ್ಲಿಯ ರಕ್ಷಣಾ ಕಾರ್ಯದ ಜವಾಬ್ದಾರಿ ಸೈನಿಕರದ್ದು,ಭೂಕಂಪ ಸಂಭವಿಸಲಿ ಅಲ್ಲಿಯ ರಕ್ಷಣಾ ಕಾರ್ಯದ ಜವಾಬ್ದಾರಿ ಸೈನಿಕರದ್ದು, ಕೊಳವೆ ಬಾವಿಯಲ್ಲಿ ಯಾರಾದರೂ ಸಿಲುಕಿಕೊಳ್ಳಲಿ ಅಲ್ಲಿಯ ರಕ್ಷಣಾ ಕಾರ್ಯದ ಜವಾಬ್ದಾರಿ ಸೈನಿಕರದ್ದು,ಉಗ್ರರು ದಾಳಿ ನಡೆಸಲಿ ಆಗಲೂ ಅವರನ್ನು ದಮನ ಮಾಡುವ ಕೆಲಸ ನಮ್ಮ ಸೈನಿಕರದ್ದು. ಇನ್ನು ಗಲಭೆಗಳು,ಕೋಮು ಗಲಭೆಗಳು,ರಾಜಕೀಯ ಕಚ್ಚಾಟದಿಂದ ತಲೆದೋರುವ ಸಮಸ್ಯೆಗಳು ಅದಲ್ಲದೇ ನಾಲಾಯಕ್ ನಾಯಕರುಗಳಿಗೆ ರಕ್ಷಣೆ ನೀಡುವುದೂ ಕೂಡಾ ನಮ್ಮ ಸೈನಿಕರೇ ಆಗಿರುತ್ತಾರೆ.ಹೀಗೆ ಇಡೀ ದೇಶದಲ್ಲಿ ಎಲ್ಲಿ ಏನೇ ವಿಪತ್ತು ಸಂಭವಿಸಿದರು ,ಅಲ್ಲಿಯ ಪರಿಸ್ಥಿತಿಯನ್ನು ಸಂಪೂರ್ಣ ತಿಳಿಗೊಳಿಸುವ ಜವಾಬ್ದಾರಿ ಸೈನಿಕರೇ ಹೊತ್ತಿರುತ್ತಾರೆ. +50 ಡಿಗ್ರಿ ವಾತಾವರಣದಿಂದ -50ಡಿಗ್ರಿ ವಾತಾವರಣದಲ್ಲೂ ಜೀವದ ಹಂಗನ್ನು ತೊರೆದು ಶತ್ರುವಿನ ಕಪಿಮುಷ್ಟಿಯಿಂದ ತಾಯ್ನಾಡನ್ನು ರಕ್ಷಿಸಲು ಗುಂಡನ್ನು ಗುಂಡಿಗೆಯ ಒಳಗೆ ತೆಗೆದುಕೊಳ್ಳುತ್ತಾರಲ್ಲಾ ಅವರುಗಳಿಗೆ ನಾವು ಸದಾ ಚಿರಋಣಿಗಳಾಗಿರಬೇಕು. ಆದರೆ ನಾವುಗಳು ಮಾಡುತ್ತಿರುವುದೇನು?

ಇಲ್ಲಿ ನಾವುಗಳು ಎಂದರೆ ನಮ್ಮನ್ನೂ ಸೇರಿಸಿ,ನಮ್ಮನು ಪ್ರತಿನಿಧಿಸುತ್ತಿರುವ ನಮ್ಮ ನಾಯಕರುಗಳು ಅಂದರೆ ರಾಜಕಾರಣಿಗಳು. ಹಣದ ದುರಾಸೆಗೆ ಇಂದಿನ ನಮ್ಮ ರಾಜಕಾರಣಿಗಳು ,ತಮ್ಮ ಸ್ವಾರ್ಥಕ್ಕೆ ಸೈನಿಕರನ್ನು,ಅವರ ಸವಲತ್ತುಗಳನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ.ಯುದ್ಧದಲ್ಲಿ ಮಡಿದ ಸೈನಿಕರ ಕುಟುಂಬದವರಿಗೆ ಭರಪೂರ ಆಶ್ವಾಸನೆಗಳು, ಪೊಳ್ಳು ಭರವಸೆಗಳನ್ನು ನಮ್ಮ ರಾಜಕಾರಣಿಗಳು ನೀಡುತ್ತಾರೆ. 10 ಜನ ಸೈನಿಕರ ಕುಟುಂಬಕ್ಕೆ ಆಶ್ವಾಸನೆ ಕೊಟ್ಟಿದ್ದಲ್ಲಿ ಕೇವಲ ಎರಡೋ ಮೂರೋ ಕುಟುಂಬಗಳಿಗೆ ಅದರ ಫಲ ಸಿಕ್ಕಿರುತ್ತದೆ ಅದೂ ಪೂರ್ಣ ಪ್ರಮಾಣದಲ್ಲಿ ಅಲ್ಲ.ಉಳಿದ ಕುಟುಂಬಗಳು ಸರ್ಕಾರದ ನೆರವನ್ನು ನಿರೀಕ್ಷಿಸುತ್ತಾ ಕಳೆದುಕೊಂಡ ಸೈನಿಕನ ನೆನಪಿನ ಕಣ್ಣೀರಿನಲ್ಲಿ ಕೈ ತೊಳೆಯುವ ಪರಿಸ್ಥಿತಿ ಮಾಡಿಬಿಟ್ಟಿದ್ದಾರೆ. ಇನ್ನು ಯುದ್ಧದಲ್ಲಿ ಗಾಯಗೊಂಡು ನಿವೃತ್ತಿ ಹೊಂದಿದಂತಹ ಸೈನಿಕರ ಪಾಡು ಅಕ್ಷರಶಃ ಕರ್ಣ ಕಠೋರ. ಕೈಯೋ ಕಾಲನ್ನೋ ಕಳೆದುಕೊಂಡ ಅವರಿಗೆ ಉದ್ಯೋಗದ ಭರವಸೆ ಕೊಟ್ಟು ಪ್ರತಿದಿನ ಸರ್ಕಾರಿ ಕಛೇರಿಗೂ ಮನೆಗೂ ಅಡ್ಡಾಡಿಸುವ ದೃಶ್ಯ ನೋಡಲಸಾಧ್ಯ.ಅಧಿಕಾರಿಗಳನ್ನು ಕೇಳಿದರೆ ಬೇಜವಾಬ್ದಾರಿ ಉತ್ತರಗಳು, ಇನ್ನು ರಾಜಕಾರಣಿಗಳನ್ನು ವಿಚಾರಿಸಿದರೆ ಮತ್ತದೇ ಪೊಳ್ಳು ಭರವಸೆ…. ಥೂ ನಾಚಿಕೆಯಾಗಬೇಕು…ತನ್ನ ಪ್ರಾಣದ ಹಂಗನ್ನು ತೊರೆದು ದೇಶ ಕಾಯುವ ಕೆಲಸ ಮಾಡಿದ ಯೋಧನಿಗೆ ಇಂತಹ ಪರಿಸ್ಥಿತಿ ಎಂದರೆ ಇದಕ್ಕೆಲ್ಲಾ ಪರೋಕ್ಷವಾಗಿ ನಾವೇ ಕಾರಣ ಎಂಬುದನ್ನೂ ಮರೆಯಬಾರದು.

ಅಲ್ಲಾ ಸ್ವಾಮಿ, ಕೆಲ ಜಾತಿ ಸಂಘಟನೆಗಳೇ, ಖಾಸಗೀ ವಲಯದಲ್ಲಿ ಮೀಸಲಾತಿ ಬೇಕು ನಮಗೆ ಎಂದು ಬೊಂಬಡ ಬಜಾಯಿಸುವ ನಿಮಗೆ ಸೇನೆಯಲ್ಲೂ ನಮಗೆ ಮೀಸಲಾತಿ ನೀಡಿ ಎನ್ನಲು ಉಸಿರು ಹೊರಡುವುದಿಲ್ಲ ಯಾಕೆ? ಅದಿರಲಿ, ಇಲ್ಲ ಸಲ್ಲದ ವಿಚಾರ ಇಟ್ಟುಕೊಂಡು ಪ್ರತಿಭಟನೆ ಮಾಡುವ ನಿಮ್ಮಂತಹ ಸಂಘಟನೆಗಳು, ಕೆಲ ಅಧಿಕ ಪ್ರಸಂಗಿ ಬುದ್ಧಿ ಜೀವಿಗಳೇ  ಸೈನಿಕರಿಗೆ ಅನ್ಯಾಯವಾಗುತ್ತಿರುವುದು ನಿಮ್ಮ ಕಣ್ಣ ಮುಂದೆಯೇ ಕಾಣುತ್ತಿದ್ದರೂ ಬಾಯಿಗೆ ದೊಡ್ಡ ಬೀಗ ಜಡಿದುಕೊಂಡು ಕುಳಿತಿರುತ್ತೀರಲ್ಲಾ , ಈ ವಿಚಾರಗಳಿಗೆ ಪ್ರತಿಭಟನೆ ಮಾಡಲು ನಿಮಗೆ ಸಾಧ್ಯವಿಲ್ಲವೋ? ಒಮ್ಮೆ ಯೋಚಿಸಿ ಗಡಿ ಕಾಯುವ ಯೋಧರೇ ದೇಶದ ವಿರುದ್ಧ ತಿರುಗಿ,ತೊಡೆ ತಟ್ಟಿ ನಿಂತರೆ ನಮ್ಮನ್ನು ನಿಮ್ಮನ್ನು ಕಾಪಾಡುವವರು ಯಾರು? ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆಯ ಮಾತು ನಿಜವಾಗದಂತೆ ನೋಡಿಕೊಳ್ಳಬೇಕಾದುದು ನಮ್ಮ ನಿಮ್ಮೆಲ್ಲರ ಕರ್ತವ್ಯ. ಯೋಧರೂ ಕೂಡಾ ನಮ್ಮಂತೇ ಮನುಷ್ಯರೇ , ಅವರಿಗೂ ಕೂಡಾ ನಮಗಿರುವಂತೆ ಕುಟುಂಬವಿರುತ್ತದೆ, ಸ್ನೇಹಿತರಿರುತ್ತಾರೆ. ಅವರನ್ನು ನಮ್ಮೊಳಗೊಬ್ಬರು ಎಂದು ಭಾವಿಸಬೇಕು. ಅವರಿಗೆ ನೋವಾದರೆ ನಮಗೇ ನೋವಾಯಿತೆಂಬ ಭಾವನೆ ಮೂಡಬೇಕು. ನಮಗಾಗಿ ಅವರು ದುಡಿಯುವಾಗ ಅವರಿಗಾಗಿ ಕಿಂಚಿತ್ತಾದರೂ ನಮ್ಮ ಮನ ಕರಗಬೇಕು. ಅವರ ಮನದ ತುಡಿತಗಳಿಗೆ ನಮ್ಮ ಮನ ಮಿಡಿಯಬೇಕು. ನಮ್ಮಂತೆ ಅವರು ಎಂದು ಭಾವಿಸಿ ಅವರ ಏಳಿಗೆಗೆ ನಾವೂ  ಕೂಡಾ ಕೈಜೋಡಿಸಬೇಕು.ಸರ್ಕಾರ ಹಾಗೂ ಸೇನೆ ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುವಂತಹ ಪರಿಸ್ಥಿಯನ್ನು ನಿರ್ಮಾಣ ಮಾಡಬೇಕಾದುದು ನಮ್ಮ ಜವಾಬ್ದಾರಿ. ಆಗಲೇ ದೇಶದ ಅಭಿವೃದ್ಧಿ ಸಾಧ್ಯ.

||ಜೈ ಹಿಂದ್||

 -Nagaraj Bhat TR

 

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!