ಎಲ್ಲವೂ ನಾವೆಂದು ಕೊಂಡಂತೆ ಆಗುವುದೇ ಇಲ್ಲ. ಏನು ಗತಿಸಬೇಕೋ ಅದೇ ಗತಿಸುತ್ತದೆ. ಯಾರಿಂದಲೂ ಯಾವುದನ್ನೂ ಪರಿಪೂರ್ಣವಾಗಿ ಬದಲಿಸಲು ಸಾಧ್ಯವಿಲ್ಲ. ಆದರೂ ನಮಗೆ ಸರಿ ಹೊಂದಿಕೊಳ್ಳುವಂತೆ ಕೆಲವರನ್ನು ಅಥವಾ ಕೆಲವನ್ನು ಬದಲಿಸಲು ಮುಂದಾಗುತ್ತೇವೆ. ಆದರೆ ಆ ಬದಲಾವಣೆ ಎಷ್ಟರ ಮಟ್ಟಿಗೆ ಗಟ್ಟಿಯಾಗಿ ನಿಲ್ಲಲು ಸಾಧ್ಯ?ಅದರಲ್ಲಿ ನಿರಂತರ ಸ್ಥಿರತೆಯನ್ನು ಕಾಪಾಡಲು ಸಾಧ್ಯವೇ..?,ಬಹುಶಃ ಅಸಾಧ್ಯದ ಮಾತು. ನಾವೆಲ್ಲಾ ಕೇಳಿದ ಹಾಗೆ ‘ನಾಯಿ ಬಾಲ ಯಾವಾಗಲೂ ಡೊಂಕೇ..!’, ಇದು ಸರ್ವ ಕಾಲಕ್ಕೂ ಅನ್ವಯವಾಗುವ ಸತ್ಯ. ಹಾಗಿದ್ದಲ್ಲಿ ಇದಕ್ಕೊಂದು ಉತ್ತಮ ಉದಾಹರಣೆ..
ನಾವಿದ್ದ ಬಾಡಿಗೆ ಮನೆಯ ಪಕ್ಕದಲ್ಲಿ ಐದು ಬೈ ಹತ್ತು ಅಡಿ ಖಾಲಿ ಜಾಗವಿತ್ತು ಆದರೆ ಗೋಡೆ ಕಟ್ಟಲು ತಂದು ಹೆಚ್ಚಾದ ಕಲ್ಲುಗಳನ್ನು ಅಲ್ಲಿಯೇ ಬಿಸಾಕಿದ್ದರು. ಸುಮಾರು ತಿಂಗಳುಗಳಾದರೂ ಯಾರೂ ಅಲ್ಲಿಂದ ಕಲ್ಲನ್ನು ಕದಲಿಸಲಿಲ್ಲ. ಹಾಗಾಗಿ ಕಲ್ಲಿನ ಸಂಧಿಯಲ್ಲಿಯೇ ಇಲಿ ಹೆಗ್ಗಣಗಳು ತಮ್ಮ ಮನೆಯನ್ನು ಕಟ್ಟಿಕೊಂಡವು ಮತ್ತು ಹೊಟ್ಟೆ ಹಸಿದಾಗ ಅಕ್ಕಪಕ್ಕದ ಮನೆಯ ಜೊತೆಗೆ ನಮ್ಮ ಮನೆಯನ್ನೂ ಗೊತ್ತು ಮಾಡಿಕೊಂಡವು. ಇದಕ್ಕೆ ನಮ್ಮ ಸಮ್ಮತಿಯೇನೂ ಇರಲಿಲ್ಲ ಆದರೂ ಇಲಿಗಳು ಕೇಳಬೇಕಲ್ಲ ತಮ್ಮಿಷ್ಟದಂತೆ ಬದುಕುತ್ತಿದ್ದವು. ನಮಗೂ ಇಲಿಗಳ ಕಾಟ ಹೆಚ್ಚಾಗಿ ಸಮಸ್ಯೆಗೆ ಪರಿಹಾರ ಹುಡುಕುವುದರಲ್ಲಿ ಮಗ್ನರಾದೆವು. ಕೊನೆಗೆ ಹೊಳೆದದ್ದು ಆ ಕಲ್ಲಿನ ಗುಡ್ಡೆ..! ಎಷ್ಟು ಬೇಗ ಆ ಕಲ್ಲುಗಳು ಅಲ್ಲಿಂದ ಎತ್ತಂಗಡಿ ಆಗುತ್ತವೆಯೋ ಅಷ್ಟು ಬೇಗ ಇಲಿಗಳ ಕಾಟದಿಂದ ಮುಕ್ತಿ ದೊರೆಯಬಹುದೆಂದು ಗೊತ್ತಾಯಿತು. ಕಲ್ಲಿನ ಮಾಲಿಕರಿಗೆ ತಿಳಿಸಿದೆವು. ಸ್ವಲ್ಪ ದಿನದಲ್ಲಿಯೇ ಕಲ್ಲು ಗುಡ್ಡೆ ಮಾಯವಾಯಿತು ಜೊತೆಗೆ ಇಲಿಗಳ ಕಾಟವೂ ನಿಂತಿತು. ಈಗ ಉಳಿದದ್ದು ಬರೀ ಮಣ್ಣಿನ ನೆಲ. ನನಗೆ ಈ ಜಾಗವನ್ನು ಯಾವುದಾದರೂ ಕೆಲಸಕ್ಕೆ ಉಪಯೋಗಿಸ ಬಹುದೆಂದು ಆಗಾಗ ನನಗೆ ಅನಿಸುತ್ತಿತ್ತು.
ಶ್ರೀ ಕ್ಷೇತ್ರ ಕೊಟ್ಟೂರಿನ ಶ್ರೀ ಗುರು ಕೊಟ್ಟೂರೇಶ್ವರನ ಮೂರು ಮಠಗಳಲ್ಲಿ ಹಿರೇಮಠವೂ ಒಂದು. ಆ ಮಠದಲ್ಲಿ ಬೆಳ್ಳಂಬೆಳ್ಳಿಗ್ಗೆ ಭ್ರಾಮ್ಮೀ ಮಹೋರ್ತದಲ್ಲಿ ‘ಲಿಂಗಾಷ್ಟಕಂ..’ಹಾಡು ಕೇಳಿ ಬರುತ್ತಿತ್ತು. ನಮ್ಮನೆಯಿಂದ ಮಠ ಎರಡು ಕಿ.ಮೀ. ದೂರವಿದ್ದರೂ, ಮುಂಜಾನೆಯ ನಿಶಬ್ಧತೆಯಲ್ಲಿ ಎಲ್ಲವೂ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಆ ಹಾಡೇ ನಮ್ಮ ತಾಯಿಗೆ ಬೆಳ್ಳಿಗ್ಗೆ ಎದ್ದೇಳಲು ‘ಅಲರಾಂ..’ಆಗಿತ್ತು. ಹಾಸಿಗೆಯಿಂದ ಎದ್ದೊಡನೆಯೇ ನಿತ್ಯಕರ್ಮಾದಿಗಳನ್ನು ಮುಗಿಸಿ, ಮನೆಯ ಅಂಗಳದ ಕಸಗೂಡಿಸಿ ನೀರಿನಿಂದ ಚಿಮುಕಿಸುತ್ತಿದ್ದರು,ಒಮ್ಮೊಮ್ಮೆ ಸಗಣೆಯಿಂದಲೂ ಸಾರುತ್ತಿದ್ದರು ಮತ್ತು ಅದರ ಮೇಲೊಂದು ಸುಂದರ ರಂಗೋಲಿಯ ಚಿತ್ತಾರವೂ ಮೂಡುತ್ತಿತ್ತು. ಅದೇ ಸಮಯಕ್ಕೆ ಸರಿಯಾಗಿ ಒಂದು ಬಿದಿರು ಪುಟ್ಟಿಯಲ್ಲಿ ಮೆಂತ್ಯ, ಸೀಪಲ್ಕ, ಕೊತ್ತಂಬರಿ ಸ್ಯೂಡುಗಳನ್ನು ಹೊತ್ತು ‘ಸೊಪ್ಪಮಾ…ಸೊಪ್ಪೂ..’ಎಂದು ಕೂಗುತ್ತಾ ಬ್ಯಾಡರ ಹೆಂಗಸರು ಬರುತ್ತಿದ್ದರು. ಅವರು ಕೂಗುತ್ತಿದ್ದ ಧ್ವನಿಯಿಂದಲೇ ಇದೇ ಹೆಂಗಸು ಬಂದಿದ್ದಾಳೆ ಎಂದು ಮನೆಯಲ್ಲಿ ಅಂದಾಜಿಸುತ್ತಿದ್ದರು. ಕೆಲವರಲ್ಲಿ ಮಾತ್ರ ನನ್ನ ತಾಯಿ ಸೊಪ್ಪಿನ ವ್ಯಾಪಾರ ಮಾಡುತ್ತಿದ್ದರು ಕಾ ರಣಇಷ್ಟೇ ಸೊಪ್ಪು ಮಾರುವ ಹೆಂಗಸು ಹೆಚ್ಚು ಚೌಕಾಶಿ ಮಾಡುತ್ತಿದ್ದಳು ಮತ್ತು ಕಡಿಮೆ ದರದಲ್ಲಿ ಹೆಚ್ಚು ಸೊಪ್ಪುಗಳನ್ನು ಕೊಡುತ್ತಿದ್ದಳು. ಒಮ್ಮೆ ಒಂದು ರೂಪಾಯಿಗೆ ಎರಡು ಮೆಂತ್ಯ ಸೊಪ್ಪೆಂದು ಸೊಪ್ಪು ಮಾರುವ ಹೆಂಗಸು ಹೇಳುತ್ತಿದ್ದರೆ..
‘ಎಲ್ಲಾ ಕಡೆ ಒಂದು ರೂಪಾಯ್ಗೆ ನಾಕು ಕೊಡ್ತಾರೆ..’ಎಂದು ನನ್ನ ತಾಯಿ ಹೇಳಿದರು
‘ಆಯ್ತಮಾ..ನೀವ್ ಅಲ್ಲೇ ತಗೋಳ್ರೀ..’ ಎಂದು ಹೊರಟೇ ನಿಂತಳು ಆ ಹೆಂಗಸು. ಕೊನೆಗೂ ರೂಪಾಯ್ಗೆ ಮೂರರಂತೆ ವ್ಯವಹಾರ ಚುಕ್ತವಾಯಿತು. ನನಗಿದು ದಿನಂಪ್ರತಿಯ ನೋಟವಾಗಿತ್ತು.
ಹೀಗೆಯೇ ಕುಳಿತು ಕೊಂಡಾಗ ನನ್ನ ತಾಯಿಯನ್ನು ಕೇಳಿದೆ‘ಅವ್ವಾ..ಈ ಸೊಪ್ಪನ್ನ ಹ್ಯಾಂಗ ಬೆಳಿತಾರ..’
‘ಆ ಕೊತ್ತುಂಬರೀ ಕಾಲೇವ್ ಇದೆಯಲ್ಲ..ಅದೇ ನೀರು ತಗೊಂಡು..ಮಡಿಕಟ್ಟಿ, ಸೊಪ್ಪಿನ ಬೀಜ ಹಾಕ್ತಾರಾ..ಒಂದು ವಾರ್ದಾಗ ಎಲ್ಲಾ ಬಂದ್ಬಿಡ್ತಾವೆ..’ಎಂದು ಶಾರ್ಟ್ ಅಂಡ್ ಸ್ವೀಟ್ ಆಗಿ ಹೇಳಿದರು.
ಅಂಗಡಿಯಿಂದ ಒಂದೆರೆಡು ತರಹದ ಸೊಪ್ಪಿನ ಬೀಜ ಮತ್ತು ಜೊತೆಗೆ ಮೆಣಸಿನ ಬೀಜವನ್ನೂ ತೆಗೆದುಕೊಂಡು ಬಂದೆ. ಇನ್ನು ಬೆಳೆಯ ಬೇಕಷ್ಟೇ. ಅದಕ್ಕೆ ಜಾಗ ಮೊದಲೇ ನಿರ್ಧರಿಸಿದ್ದ ನಮ್ಮನೆ ಪಕ್ಕದ ಮಣ್ಣಿನ ನೆಲ. ನೆಲವನ್ನು ಗಿಡ ಬೆಳೆಯುವ ಹಂತದವರೆಗೆ ಹದ ಮಾಡಿದೆ ಮತ್ತು ಮಡಿಯನ್ನೂ ಕಟ್ಟಿದೆ. ಸೊಪ್ಪಿನ ಬೀಜದ ಜೊತೆಗೆ ಮೆಣಸಿನ ಬೀಜವನ್ನೂ ಬಿತ್ತನೆ ಮಾಡಿ ಮುಗಿಸಿದೆ. ಇನ್ನೇನಿದ್ದರು ಫಲದ ನಿರೀಕ್ಷೆ. ಪ್ರತೀ ದಿನವೂ ಆ ಜಾಗಕ್ಕೆ ನನ್ನ ಭೇಟಿ ಇರುತ್ತಿತ್ತು ಕಾರಣ ನಾನು ನೆಟ್ಟ ಬೀಜಗಳು ಯಾವ ರೀತಿ ಫಲ ಕೊಡುವುದೆಂಬ ಕುತೂಹಲ. ಸ್ವಲ್ಪ ದಿನವಾದ ಮೇಲೆ ಸಣ್ಣದಾಗಿ ಭೂಮಿ ಮೇಲೆ ಮೊಳಕೆಗಳು ಹೊರ ಹೊಮ್ಮಿದವು. ನನ್ನ ಮನದಲ್ಲಿವೂ ಸಂತೋಷದ ಅಲೆ ಏಳಲು ಪ್ರಾರಂಭಿಸಿದವು. ನಿಸರ್ಗದಲ್ಲಿ ನಡೆಯುವ ಪ್ರತಿಯೊಂದು ಕ್ರಿಯೆಯೂ ಎಷ್ಟೊಂದು ಅದ್ಭುತ ಅಲ್ಲವೇ..?.ಬಿತ್ತಿದ್ದು ಒಂದು ಬೀಜ..ಮುಂದೆ ಅದು ಫಲ ಕೊಡುವುದು ಸಾವಿರಾರು ಬೀಜ, ಮತ್ತೇ ಅವುಗಳಿಂದ ಲಕ್ಷಾನು ಲಕ್ಷ ಬೀಜಗಳು..ಯಾರ ಯೋಚನೆಗೂ ನಿಲುಕದೇ ಇರುವಂತಹ ಬೀಜಾಂಕೃತ ರಹಸ್ಯ..!
ನಮ್ಮ ಮನೆಯ ಪಕ್ಕದಲ್ಲಿಯೇ ಮೆಂತ್ಯ, ಸೀಪಲ್ಕ, ಕೊತ್ತಂಬರಿ ಮತ್ತು ಐದಾರು ಮೆಣಸಿನ ಗಿಡಗಳು..! ಮೆಣಸಿನ ಗಿಡಗಳು ಇನ್ನೂ ಮೆಣಸಿನಕಾಯಿಯನ್ನು ಬಿಟ್ಟಿರಲಿಲ್ಲ. ಅಲ್ಲಿಗೆ ಸೊಪ್ಪುತಂದು ಮಾರುತ್ತಿದ್ದವರ ಹತ್ತಿರ ವ್ಯವಹಾರ ನಿಂತಿತು,ಇನ್ನೇನಿದ್ದರೂ ನಮ್ಮಲ್ಲಿದ್ದ ಸೊಪ್ಪನ್ನೇ ಊಟದಲ್ಲಿ ಉಪಯೋಗಿಸಲಾಗುತ್ತಿತ್ತು. ಪ್ರತೀ ಸಾರಿಗಿಂತ ಈ ಸಾರಿ ಮಾಡಿದ ಸಾಂಬಾರು ಹೆಚ್ಚು ರುಚಿ ಕೊಟ್ಟಿತು, ಕೊಡಲೇ ಬೇಕಿತ್ತು ಕಾರಣ ನಾನು ಖುದ್ದಾಗಿ ಬೆಳೆದ ಸೊಪ್ಪಲ್ಲವೇ..!? ಇನ್ನೂ ಮೆಣಸಿನ ಕಾಯಿಗಳು ನಿಧಾನವಾಗಿ ಮೆಣಸಿನ ಗಿಡದಲ್ಲಿ ಕಾಣಿಸತೊಡಗಿದವು. ಹಸಿರು ಬಣ್ಣದ ಮೆಣಸಿನಕಾಯಿಗಳನ್ನು ನೋಡಿದಾಗಲೆಲ್ಲಾ ‘ನಾನು ನೆಟ್ಟ ಬೀಜದಿಂದ ಬಂದ ಕಾಯಿ’ಗಳೆಂದು, ಅದರ ಮೇಲೆ ಹೆಮ್ಮೆ ಮೂಡುತ್ತಿತ್ತು.
ಮಧ್ಯಾಹ್ನ ಊಟಕ್ಕೆ ಎಲ್ಲರೂ ಕುಳಿತ್ತಿದೆವು. ಊಟದಲ್ಲಿ ರೊಟ್ಟಿ, ಪಲ್ಯ ಅನ್ನ, ಮತ್ತು ಸಾರು. ನಮ್ಮನೆಯಲ್ಲಿಯ ಸಾಂಬಾರಿನಲ್ಲಿ ಖಾರ ಯಾವಾಗಲೂ ಕಡಿಮೆ. ನಾವು ಮತ್ತು ನಮ್ಮ ತಂದೆಯವರು ಅದನ್ನು ಇಷ್ಟಪಟ್ಟು ಊಟ ಮಾಡುತ್ತಿದ್ದೆವು ಆದರೆ ನನ್ನ ತಾಯಿ ಮನಸ್ಸಿಲ್ಲದಲೇ ಒಮ್ಮೊಮ್ಮೆ ಊಟ ಮಾಡುತ್ತಿದ್ದರು ಏಕೆಂದರೆ ಅವರಿಗೆ ಖಾರದ ಊಟ ಇಷ್ಟ. ಅಂದಿನ ದಿನದ ಸಪ್ಪೆ ಊಟ ನೋಡಿ ‘ಅವ್ವಾ.. ನಮ್ಮ ಗಿಡದ್ ಮೆಣಸಿನಕಾಯಿ ತರ್ಲೀ..’ಎಂದು ಹೇಳಿ ನಾಲ್ಕೈದು ಮೆಣಸಿನಕಾಯನ್ನು ಕಿತ್ತು ತಂದೆ. ಎಲ್ಲವನ್ನೂ ತಾಯಿಗೆ ಕೊಟ್ಟು ಒಂದನ್ನು ನಾನೇ ತಿನ್ನಲು ಸಿದ್ಧನಾದೆ ಏಕೆಂದರೆ ‘ನಾನು ನೆಟ್ಟ ಬೀಜದಿಂದ ಬಂದ ಕಾಯಿ..ಅಲ್ಲವೇ..!’. ನನ್ನ ತಾಯಿಗೆ ಖುಷಿಯಾಯಿತು. ನಾನೂ ಮೆಣಸಿನಕಾಯಿಯನ್ನು ತಿನ್ನಲು ಪ್ರಾರಂಭಿಸಿದೆ. ತಿಂದೊಡನೆಯೇ ಬಾಯಿಯಲ್ಲಿ ಎಲ್ಲಿಲ್ಲದ ಖಾರ..! ಬಾಯಿಯಲ್ಲಿಯ ಉರಿಯನ್ನು ತಡೆಯಲಾಗಲಿಲ್ಲ,ಮಾತು ಬಾರದೇ ಹಾಯ್…ಗುಟ್ಟುತ್ತಿದ್ದೆ, ಪಕ್ಕದಲ್ಲಿಯೇ ಇದ್ದ ಒಂದು ತಂಬಿಗೆ ನೀರನ್ನು ಗಟಗಟನೇ ಕುಡಿದು ಬಿಟ್ಟೆ, ಸ್ವಲ್ಪ ಸಮಾಧಾನವಾಯಿತು ಆದರೆ ಸಿಟ್ಟು ಆ ಮೆಣಸಿನಕಾಯಿ ಮತ್ತು ಅದರ ಜನ್ಮದಾತಿಯ ಮೇಲೆ ಬಂದಿತ್ತು.
ನಾನು ಖುದ್ದಾಗಿ ಬೀಜನೆಟ್ಟ, ನೀರುಣಿಸಿ ಬೆಳೆಸಿದ ಮೆಣಸಿನಕಾಯಿಯ ಗಿಡದ ಮೆಣಸಿನಕಾಯಿ ಇಷ್ಟೊಂದು ಖಾರವಿರಲು ಹೇಗೆ ಸಾಧ್ಯ..? ಎಂದು ನನಗೆ ನಾನೇ ಪ್ರಶ್ನೆಯನ್ನು ಹಾಕಿಕೊಂಡೆ, ಪ್ರಶ್ನೆಗೆ ಉತ್ತರವೂ ಸಿಕ್ಕಿತು ಆದರೆ ಒಪ್ಪಲು ನಾನು ಸಿದ್ಧನಿರಲಿಲ್ಲ. ಅರೇ..ಮೆಣಸಿನಕಾಯಿಗೆ ‘ಖಾರ’ವೇ ಅದರ ಗುಣಧರ್ಮ, ಅದಕ್ಕೆ ಸಿಹಿ ಮಿಶ್ರಿತ ಮಣ್ಣು ಹಾಕಿ ಬೆಳೆಸಿದರೂ ಅದು ಖಾರದ ಮೆಣಸಿನಕಾಯಿಯನ್ನೇ ಗಿಡದಲ್ಲಿ ಬಿಡುವುದು.
ನಾವೆಷ್ಟೇ ಪ್ರಯತ್ನ ಪಟ್ಟರೂ ಪ್ರಕೃತಿದತ್ತವಾಗಿ ಲಭಿಸುವ ವಸ್ತುವಿನಲ್ಲಿ ಬದಲಾವಣೆಯನ್ನು ತರಲು ಸಾಧ್ಯವಿಲ್ಲ,ಸಾಧ್ಯವಿದ್ದರೂ ಅಲ್ಪ ಕಾಲ ಮಾತ್ರ ಸ್ಥಿರದಿಂದಿರಲು ಸಾಧ್ಯ. ವಸ್ತು ಅಥವಾ ಜೀವಿಗಳಲ್ಲಿಯ ‘ಇನ್ಹೆರೆಂಟ್ ಕ್ಯಾರೆಕ್ಟರ್’ ಯಾವುದೂ ಬದಲಾಗುವುದಿಲ್ಲ. ‘ಹುಟ್ಟಿನ ಗುಣ ಸುಟ್ಟರೂ ಹೋಗುವುದಿಲ್ಲ’ಎನ್ನುತ್ತಾರಲ್ಲ ಹಾಗೆ..!
ಈ ವಿಷಯಕ್ಕೆ ಸಂಭಂದಿಸಿದ್ದನ್ನೇ ನೋಡಿದರೆ ನಮ್ಮ ಜೊತೆಯಲ್ಲಿರುವ ಸ್ನೇಹಿತರಾಗಲಿ, ಸಂಬಂದಿಕರಾಗಲಿ,ಹೆಂಡತಿಯಾಗಲಿ, ಮಕ್ಕಳಾಗಲಿ ತಮ್ಮ ಹುಟ್ಟು ಗುಣ ಹೇಗೆ ಇರುತ್ತದೆಯೋ ಹಾಗೆಯೇ ಇರುತ್ತಾರೆ ಮತ್ತು ಹಾಗೆಯೇ ನಡೆದುಕೊಳ್ಳುತ್ತಾರೆ. ಸ್ವಲ್ಪ ಮಟ್ಟಿಗೆ ಅವರನ್ನು ನಾವು ಬದಲಿಸಬಹುದು ಆದರೆ ಶಾಶ್ವತವಾಗಿ ಅಲ್ಲ. ಆದ್ದರಿಂದ ಹೊಂದಾಣಿಕಿಯೇ ಬದುಕು. ಪ್ರಕೃತಿಯಲ್ಲಿ ಇರುವ ಪ್ರತೀ ಜೀವಜಂತುವಿಗೂ ತನ್ನದೇ ಆದ ಗುಣಧರ್ಮವಿದೆ ಅದನ್ನು ಪ್ರಕೃತಿಯೂ ಬದಲಿಸಲು ಬಿಡುವುದಿಲ್ಲ ಹಾಗಾಗಿ ಪ್ರಕೃತಿಯೊಂದಿಗೆ ಹೆಜ್ಜೆ ಹಾಕೋಣ..ಪ್ರಶಾಂತತೆಯಿಂದ ಬಾಳೋಣ.