ಸುಮಾರು ಎರಡು ವರ್ಷಗಳ ಹಿಂದೆ ಅಡುಗೆ ಮನೆಯ ಬಾಲ್ಕನಿಯಲ್ಲಿ ರಟ್ಟಿನ ಪೆಟ್ಟಿಗೆಯನ್ನು“ಗೂಡು ಪೆಟ್ಟಿಗೆ” (nest box) ಯಾಗಿ ಜೋಡಿಸಿದ್ದೆವು. ವಿರಳವಾಗಿ ಕಾಣಿಸುವ ಗುಬ್ಬಚ್ಚಿಗಳನ್ನು ಗೂಡು ಕಟ್ಟಲು ಆಕರ್ಷಿಸುವ ಉದ್ದೇಶವಾಗಿತ್ತು. ಆದರೆ ಗುಬ್ಬಚ್ಚಿಯ ಬದಲಿಗೆ ಮುನಿಯಾ ಜಾತಿಗೆ ಸೇರಿದ “ಕಪ್ಪು ಗಂಟಲಿನ ಮುನಿಯಾ” ಸಂಸಾರ ಮಾಡಲು ಶುರು ಮಾಡಿದವು. ಒಮ್ಮೆ ವಂಶಾಭಿವೃದ್ಧಿ ಮುಗಿದ ಮೇಲೆ ಮತ್ತೊಮ್ಮೆ,ಅದಾದ ಮೇಲೆ ಮಗದೊಮ್ಮೆ, ಹೀಗೆ ಗೂಡು ಕಟ್ಟಿ ಮರಿ ಮಾಡುತ್ತಿದ್ದವು. ಸುಮಾರು ಎರಡರಿಂದ ಎರಡೂವರೆ ತಿಂಗಳಿಗೊಮ್ಮೆ ಮರಿ ಹಾಕುತ್ತಿದ್ದವು. ಒಂದೇ ಜೋಡಿ ಹಕ್ಕಿಗಳೋ ಅಥವಾ ಬೇರೆ ಜೋಡಿಗಳೋ ಗೊತ್ತಿಲ್ಲ….ಒಮ್ಮೆ ಎರಡು ಜೋಡಿ ಹಕ್ಕಿಗಳು ಗೂಡಿಗಾಗಿ ಕಾದಾಡುತ್ತಿದ್ದವು. ಜಗಳವು ಸುಮಾರು 15 ನಿಮಿಷ ನಡೆದು, ಎರಡನೆಯದಾಗಿ ಬಂದ ಜೋಡಿ ಗೂಡು ಬಿಡುವುದರಲ್ಲಿ ಮುಕ್ತಾಯವಾಯಿತು. ಇದನ್ನು ನೋಡಿ ಇನ್ನೊಂದು“ಗೂಡು ಪೆಟ್ಟಿಗೆ” ಯನ್ನು ಇಟ್ಟರೆ ಹೇಗಾದೀತು ಎಂದುಕೊಂಡೆ. ಬೆಡ್‍ರೂಮಿನ ಬಾಲ್ಕನಿಯಲ್ಲಿ ಇನ್ನೊಂದು ಪೆಟ್ಟಿಗೆಯನ್ನು ಬಾಲ್ಕನಿಯ ಗ್ರಿಲ್‍ಗೆ ಜೋಡಿಸಿದೆ. ಆ ಬಾಲ್ಕನಿಯಲ್ಲಿ ಹಕ್ಕಿಗಳು ಬರುತ್ತಿದ್ದರೂ ಗೂಡು ಕಟ್ಟಿರಲಿಲ್ಲ. ಬಹುಷಃ ಕಡಿಮೆ ಎತ್ತರದಲ್ಲಿ ಗ್ರಿಲ್‍ಗೆ ಜೋಡಿಸಿರುವುದರಿಂದ ಅಸುರಕ್ಷಿತ ಅನಿಸಿರಬೇಕು.
ಸುಮಾರು ಒಂದು ತಿಂಗಳ ನಂತರ ಒಮ್ಮೆ ಬೇರೊಂದು ಕಪ್ಪು-ಬಿಳಿ ಬಣ್ಣದ ಹಕ್ಕಿ ಹೊಸದಾಗಿ ಇಟ್ಟ ಪೆಟ್ಟಿಗೆಗೆ ಹೋಗಿ ಬರುವುದು ಕಾಣಿಸಿತು…“ಗೂಡು ಪೆಟ್ಟಿಗೆ” ಗೂಡುಕಟ್ಟಲು ಸೂಕ್ತವಾದ ಜಾಗವೆಂದು ತಿಳಿದ ಆ ಹಕ್ಕಿ, ಗೂಡು ಕಟ್ಟಲು ಶುರು ಮಾಡಿತು. ಅದರ ಫೋಟೋ ತೆಗೆದು ಅಂತರ್ಜಾಲದಲ್ಲಿ ಹುಡುಕಿದಾಗ ಅದು“ಒರಿಯಂಟಲ್ ಮ್ಯಾಗ್‍ಪೈ ರಾಬಿನ್” (Oriental Magpie Robin) ಅಂತ ತಿಳಿಯಿತು. ಕನ್ನಡದಲ್ಲೇನು ಹೆಸರು ಎಂದು ತಿಳಿಯಲಿಲ್ಲ… ಈ ರಾಬಿನ್ ಹಕ್ಕಿಯ ಗೂಡು ಮುನಿಯಾದ ಗೂಡಿನಂತಿರದೆ ತಟ್ಟೆ ಅಥವಾ ಬುಟ್ಟಿಯಾಕಾರದಲ್ಲಿತ್ತು. ಮೊದ ಮೊದಲು ಪಾಚಿಯಂತಹ ಜೌಗು ಪ್ರದೇಶದಲ್ಲಿ ಬೆಳೆಯುವ ಪ್ರಾಥಮಿಕ ಸಸ್ಯ (Premitive plant) ಗಳನ್ನು ತರುತಿತ್ತು. ನಂತರ ತೆಳ್ಳಗಿನ ಕಡ್ಡಿಗಳನ್ನು, ಹೆಚ್ಚಾಗಿ ಕೂಡು ಎಲೆಗಳ (compound leaf) ದಂಟನ್ನು ತರುತಿತ್ತು. ಪಾಚಿಯಂತಹ ಸಸ್ಯಗಳ ಉಪಯೋಗವೇನು? ತಿಳಿಯಲಿಲ್ಲ…ಸಂಜೆಯ ಸಮಯದಲ್ಲಿ ರಾಗವಾಗಿ ಕೂಗುತಿತ್ತು…ಸಾಮಾನ್ಯವಾಗಿ ಕೂಗು ಸಂಕ್ಷಿಪ್ತವಾಗಿದ್ದರೆ ಸಂಜೆಯ ಹೊತ್ತಲ್ಲಿ ಉದ್ದನೆಯ ರಾಗವಾಗಿತ್ತು. ಹೆಣ್ಣು ಹಕ್ಕಿಯೊಂದೇ ಗೂಡು ಕಟ್ಟುತಿತ್ತು…ಗಂಡು ಹಕ್ಕಿ ಆಗಾಗ್ಯೆ ಬಂದು ಹೋಗುತಿತ್ತು…ಅದಕ್ಕೆ ಗೂಡಿನ ರಕ್ಷಣೆಯ ಹೊಣೆ.!! ದೂರದಲ್ಲಿದ್ದು ಅಪಾಯದ ಸೂಚನೆಯನ್ನು ಕೂಗಿ ಹೇಳತಿತ್ತು… ಆದರೂ ಗಂಡು ಹಕ್ಕಿ ಬರೀ ಹೆದರುಪುಕ್ಕಲ…ಬೆಡ್‍ರೂಮಲ್ಲಿ ಕಾಣಿಸಿದರೂ‘ಪುರ್ರ್‍ರ್ರ್’ ಎಂದು ಹಾರಿ ಹೋಗುತಿತ್ತು. ಹೆಣ್ಣು ರಾಬಿನ್ ಮಾತ್ರ ತುಂಬಾ ಧೈರ್ಯವಂತೆ!!…ಬಾಲ್ಕನಿಗೆ ಹೋದರೂ ಹಾರುತ್ತಿರಲಿಲ್ಲ!!…ಏನಾದರೂ ಅಪಾಯದ ನೂಚನೆ ಇದ್ದರೆ ಮಾತ್ರ ಹಾರುತಿತ್ತು..! ದಿನ ಕಳೆದಂತೆ ಇನ್ನೂ ಸಲಿಗೆಯಾಯಿತು. ಎಷ್ಟೆಂದರೆ ಒಮ್ಮೆಯಂತೂ ನಾನು ಅರ್ಧ ಅಡಿ ಹತ್ತಿರದಿಂದ ಫೋಟೋ ಕ್ಲಿಕ್ಕಿಸಿದ್ದೆ. 10-12 ದಿನಗಳಲ್ಲಿ ಗೂಡು ರೆಡಿಯಾಯಿತು…ಹೆಣ್ಣು ಹಕ್ಕಿ ರಾತ್ರಿ ಕೂತು ಮೊಟ್ಟೆಯಿಡಲು ಶುರುಮಾಡಿತು…ದಿನಕ್ಕೊಂದಂತೆ 4ಮೊಟ್ಟೆಗಳನ್ನಿಟ್ಟಿತು. ತಿಳಿ ನೀಲಿ ಬಣ್ಣದ, ಕಂದು ಚುಕ್ಕೆಯಿರುವ, ಸುಮಾರು 15-20 ಮಿಮಿ ದೊಡ್ಡದಾದ, ಸರಿ ಸುಮಾರಿಗೆ ದುಂಡಗಿನ ಮೊಟ್ಟೆಗಳು ಬುಟ್ಟಿಯಾಕಾರದ ಗೂಡಿನ ಮಧ್ಯದಲ್ಲಿದವು…ಶ್ರೀಮತಿ ರಾಬಿನ್‍ಗೆ 24ಗಂಟೆಯೂ ಕಾವು ಕೊಡುವ ಕೆಲಸ…!! ಮಧ್ಯೆ ಒಮ್ಮೊಮ್ಮೆ ಹೋಗಿ ಆಹಾರ ತಿಂದು ಬರುತಿತ್ತು…ಒಂದು ಬಾಳೆಹಣ್ಣಿನ ತುಂಡನ್ನು ನೋಡೋಣವೆಂದು ಗ್ರಿಲ್ ಮೇಲೆ ಇಟ್ಟೆನು… ಹಕ್ಕಿ ಬಾಳೆಹಣ್ಣನ್ನೂ ತಿಂದಿತು… ಹಸಿವಾಗಿರಬೇಕಲ್ಲವೇ?ಸಾಮಾನ್ಯವಾಗಿ ಹುಳ-ಕೀಟಗಳನ್ನು ತಿನ್ನುವ ರಾಬಿನ್ ಆಗೊಮ್ಮೆ-ಈಗೊಮ್ಮೆ ಸಣ್ಣ ಹಣ್ಣುಗಳನ್ನೂ ತಿನ್ನುವುದಿದೆಯಂತೆ…
ಈ ಮಧ್ಯೆ ಮೊದಲನೇ ಬಾಲ್ಕನಿಯ ಮುನಿಯಾ ಗೂಡಿಗೆ ಬೇರೋಂದು ಜೋಡಿಯಿಂದ ಪೈಪೋಟಿ ಶುರವಾಯಿತು. ಅದಕ್ಕಂತೇ ಇನ್ನೊಂದು ರಟ್ಟಿನ ಪೆಟ್ಟಿಗೆಯನ್ನು ಅಡುಗೆ ಮನೆ ಬಾಲ್ಕನಿಯ ಮುನಿಯಾ ಗೂಡಿನ ಮೇಲೆ ಜೋಡಿಸಿದೆನು. 4-5ದಿನ ಕಾವು ಕೊಟ್ಟ ರಾಬಿನ್, ಒಮ್ಮಿಂದೊಮ್ಮೆ ಕಾಣೆಯಾಯಿತು. ಗೂಡನ್ನು ಇಣುಕಿ ನೋಡಿದರೆ ಮೊಟ್ಟೆ ಹಾಗೆಯೇ ಇದ್ದವು…ಏನಾಯಿತಪ್ಪಾ!?ಯಾಕೆ ಬಿಟ್ಟು ಹೋಯಿತು…!? ಮಾರನೇ ದಿನ ರಾಬಿನ್ ಜೋಡಿಗಳು ಮುನಿಯಾ ಗೂಡಿನ ಮೇಲಿನ“ಗೂಡು ಪೆಟ್ಟಿಗೆ”ಯನ್ನು ಆಕ್ರಮಿಸಿತು…ಗೂಡು ಕಟ್ಟಲೂ ಶುರು ಮಾಡಿತು.!!..ಮುನಿಯಾ ಕೆಳಗಿನ ಮಹಡಿ…!! ರಾಬಿನ್ ಮೇಲಿನ ಮಹಡಿ!…ಸಹಬಾಳ್ವೆಯನ್ನು ನೋಡಲು ನಮಗೆ ಕತೂಹಲ…ಆಶ್ಚರ್ಯ!…ಸಂತೋಷ ಕೂಡ…!! ಮುನಿಯಾ ಆವಾಗಲೇ ಮೊಟ್ಟೆಯಿಟ್ಟಾಗಿತ್ತು. ರಾಬಿನ್ ದಂಪತಿಗಳಿಗೆ ಗೂಡುಕಟ್ಟುವ ತರಾತುರಿ!!!…ಶಾಂತತೆ ಬೇಕಾಗಿದ್ದ ಮುನಿಯಕ್ಕೆ ಮೇಲ್ಮಹಡಿಯಲ್ಲಿ ಯಾವಾಗಲೂ ಗಲಾಟೆ,,ಶಬ್ದ. ಹೊಸತಾಗಿ ಕಟ್ಟಿದ ಅಪಾರ್ಟಮೆಂಟಲ್ಲಿ ವಾಸಿಸಲು ಶುರು ಮಾಡಿದಾಗ ನಮಗಾದ ಅನುಭವವೂ ಇದೇ. ಮೇಲಿನ ಮಹಡಿಗಳಲ್ಲಿ ಕೆಲಸ ಮುಗಿಯದ ಕಾರಣ ನಿತ್ಯವೂ ಶಬ್ದ..ಗಲಾಟೆ. ರಾತ್ರಿ ಪಾಳಿ ಮಾಡಿ ಮಲಗಿದಾಗ ನಿತ್ಯವೂ ನಿದ್ರಾಭಂಗವಾಗುತಿತ್ತು. ಇಲ್ಲಿ ಮುನಿಯಾ ಅಡಚಣೆಗಳನ್ನು ಸಹಿಸಿ ವಾಸಿಸಿರುವುದು ನೋಡಿ ಖುಶಿಯಾಗುತಿತ್ತು. 4-5ದಿನಗಳ ನಂತರ ಮುನಿಯಾಗಳು ರಾಬಿನ್ ಹಕ್ಕಿಯ ಗೌಜಿಗೆ ಹೆದರಿ ಓಡಿಯೇ ಹೊದವು!..ಪಾಪ ಮುನಿಯಾ…ಒಂದು ಇನ್ನೊಂದರ ವೈರಿಯಲ್ಲದಿದ್ದರೂ ಅತೀ ಸನಿಹದ ವಾಸ ದುಸ್ತರವೆನಿಸಿರಬೇಕು. ಪ್ರಕೃತಿ ನಿಯಮ…ನಾವೇನು ಮಾಡುವುದು?…ರಾಬಿನ್ ಸಂಸಾರವಾದರೂ ನೆಮ್ಮದಿಯಿಂದಿರಲಿ ಎಂದು ಆಶಿಸಿದೆವು. 10-12ದಿನಗಳಲ್ಲಿ ಗೂಡು ರೆಡಿ!!….
ಬೆಡ್‍ರೂಮ್ ಬಾಲ್ಕನಿಯಲ್ಲಿ ಅರ್ಧಕ್ಕೇ ಬಿಟ್ಟು ಹೋದ ಗೂಡನ್ನು ಒಂದು ವಾರದ ನಂತರ ತೆಗೆದು ನೋಡಿದೆವು. ಗೂಡು ತುಂಬಾ ಇರುವೆಗಳು.!!..ನಾಲ್ಕು ಮೊಟ್ಟೆಗಳಲ್ಲಿ ಒಂದನ್ನು ಇರುವೆಗಳು ಸಂಪೂರ್ಣ ಖಾಲಿ ಮಾಡಿದ್ದವು!! ಬೇರೆ ಮೊಟ್ಟೆಗಳನ್ನು ಮುತ್ತಿಕೊಂಡು ತಿನ್ನುತ್ತಿದ್ದವು…ಪೆಟ್ಟಿಗೆ ಬಿಚ್ಚಿ ಗೂಡು ಕಟ್ಟಿದ ವೈಖರಿಯನ್ನು ನೋಡಿದರೆ ಆಶರ್ಯವಾಯಿತು!! ಪಾಚಿ ಮುಂತಾದ ಜೌಗು ಪ್ರದೇಶದ ಸಸ್ಯಗಳನ್ನು ಪೆಟ್ಟಿಗೆಯ ಮೂಲೆ-ಮೂಲೆಯಲ್ಲಿ ಇಟ್ಟಿತ್ತು…ಹಕ್ಕಿಗಳ ವಿಸರ್ಜನೆಯಿಂದಲೋ ಏನೋ, ಪಾಚಿ ಪೆಟ್ಟಿಗೆಗೆ ಗಟ್ಟಿಯಾಗಿ ಅಂಟಿಕೊಂಡಿತ್ತು!!. ಮಳೆಗಾಲದಲ್ಲಿ ಗೂಡನ್ನು ನೀರಿನಿಂದ ಸುರಕ್ಷಿತವಾಗಿಡುವ ವಿನ್ಯಾಸವಿರಬೇಕು!! ಚಿಕ್ಕ ಕಡ್ಡಿಗಳನ್ನು ಸುತ್ತಲೂ ಜೋಡಿಸಿ ಮಧ್ಯ ಗುಂಡಿಯಾಗಿರುವ ಗೂಡನ್ನು ರಚಿಸಿತ್ತು…ನೋಡಲು ಅಷ್ಟೇನೂ ಸುಂದರವಾಗಿಲ್ಲದಿದ್ದರೂ ಮರಿಗಳ ಬೆಳವಣಿಗೆಗೆ ಸೂಕ್ತವಾಗಿ ಸುರಕ್ಷಿತವಾಗಿತ್ತು…
ಹದಿನೈದು ದಿನಗಳ ರಜೆಯಿಂದ ವಾಪಾಸು ಬಂದಾಗ ರಾಬಿನ್ ಮರಿಯಾಗಿದ್ದವು!! ರಾಬಿನ್ ದಂಪತಿಗಳು ಮರಿಗಳ ಹೊಟ್ಟೆಯನ್ನು ತುಂಬಿಸಲು ಸಂಪೂರ್ಣ ಪ್ರಯತ್ನ ಮಾಡುತ್ತಿದ್ದವು…! ಗೂಡುನ್ನು ಹೆಣ್ಣು ಹಕ್ಕಿ ಮಾತ್ರ ಕಟ್ಟಿದ್ದರೂ, ಮರಿಗಳನ್ನು ಸಾಕುವ ಜವಾಬ್ದಾರಿ ಎರಡೂ ಹಕ್ಕಿಗಳು ಸೇರಿ ನಿಭಾಯಿಸುತ್ತಿದ್ದವು.!.. ಪ್ರತೀ 5-10 ನಿಮಿಷಕ್ಕೊಮ್ಮೆ ಎರಡೂ ಹಕ್ಕಿಗಳು ಹುಳ-ಹುಪ್ಪಟೆ, ಕೀಟ, ಹಾತೆ ಇತ್ಯಾದಿ ಆಹಾರ ಸಾಮಗ್ರಿಗಳನ್ನು ತಂದು ಮರಿಗಳ ಬಾಯಿಗೆ ತುರುಕುತ್ತಿದ್ದವು. ಗಂಡು ಹಕ್ಕಿ ಸಾಮಾನ್ಯವಾಗಿ ಕಂಬಳಿ ಹುಳ (caterpillar)ಗಳನ್ನು ಹೆಚ್ಚಾಗಿ ತರುತ್ತಿದ್ದರೆ, ಹೆಣ್ಣು ಹಕ್ಕಿ ನೊಣ,ಜೇಡ, ಹಾತೆಗಳನ್ನು ಹೆಚ್ಚಾಗಿ ಹಿಡಿದು ತರುತ್ತಿತ್ತು…ಇಷ್ಟು ಹುಳಗಳನ್ನು ಅಲ್ಪ ಸಮಯದಲ್ಲಿ ತರುವುದು ಆಶ್ಚರ್ಯವಲ್ಲವೇ?!! ಬೀಜ ಕಾಳುಗಳನ್ನು ತಿನ್ನುವ ಹಕ್ಕಿಗಳಾದರೂ ಬೆಳೆದ ಗದ್ದೆಯನ್ನೊ, ಶೇಖರಿಸಿದ ಜಾಗವನ್ನು ಗುರುತಿಸಿ ತರಬಹುದು…ಇಲ್ಲಿ ಜೀವಂತ ಕೀಟಗಳನ್ನು ಹುಡುಕಿ,ಹಿಡಿದು ತರಬೇಕು…ನಮಗೆ ಕಷ್ಟಕರವೆನಿಸಿದರೂ ಈ ಹಕ್ಕಿಗಳಿಗೆ ಇದು ಕರತಲಾಮಲಕ….ದಿನವೊಂದಕ್ಕೆ ನೂರಾರು ಹುಳ/ಕೀಟಗಳನ್ನು ಹಿಡಿಯುವ ಈ ಹಕ್ಕಿಗಳು, ಕೃಷಿಕರಿಗೆ ಮಾಡುವ ಉಪಕಾರ ಅಷ್ಟಿಟ್ಟಲ್ಲ….ಜೋಡಿ ಹಕ್ಕಿಗಳ ಶ್ರಮ ಅತೀವವಾಗಿದ್ದರೂ ಅವುಗಳಗೆ ಅದೇ ಖುಷಿ,ಸಂಭ್ರಮ!! ಆಹಾರ ತರುವಾಗಲೂ ಹೆದರುಪುಕ್ಕಲು ಗಂಡು ಹಕ್ಕಿ ಅಡುಗೆ ಮನೆಗೆ ಹೋದರೆ ಸಾಕು,ಪುರ್ರ್‍ರ್ರ್ ಎಂದು ಹಾರಿ ಹೋಗುತಿತ್ತು. ಮರಿಗಳು ದೊಡ್ಡದಾದಂತೆ ಅವುಗಳ ಕೂಗೂ ಸಹ ಜಾಸ್ತಿಯಾಗತೊಡಗಿತು. ಅಪ್ಪ-ಅಮ್ಮ ಬರುವಾಗ ಕಾದು ಕೂತು ಕೂಗಿ-ಕೂಗಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವು. “ಅಳುವ ಮಗುವಿಗೆ ಅಧಿಕ ಹಾಲು” ಎನ್ನುವಂತೆ ಈ ಮರಿಗಳಿಗೆ ಕೂಗೇ ಹೊಟ್ಟೆ ತುಂಬಿಸಿಕೊಳ್ಳವ ಸಾಧನ! 10-12 ದಿನಗಳ ಕಳೆದ ಮೇಲೆ ಗೂಡಿನಲ್ಲಿ ರೆಕ್ಕೆ ಬಡಿಯುವ ಶಬ್ದ ಕೇಳಿಸುತಿತ್ತು. ಗೂಡಿನ ಬಾಗಿಲಿಗೆ ಬಂದು ಪೋಷಕರಿಗಾಗಿ ಕಾಯುತ್ತಿದ್ದವು.
ಅದೊಂದು ದಿನ ಹೀಗೆ ಮರಿ ಹಕ್ಕಿಗಳು ಕೂತಿರುವಾಗ ಅಕಸ್ಮಾತ್ ಆಗಿ ಬಾಲ್ಕನಿ ಬಾಗಿಲು ತೆರೆದು ಬಿಟ್ಟೆ.. ಒಂದು ಮರಿ ಗಾಬರಿಗೊಂಡು ಹಾರಿ ಹೊರಗೆ ಬಂದಿತು. ಸರಿಯಾಗಿ ಹಾರಲಾಗದ ಮರಿಯು ಗಾಬರಿಯಿಂದ ಒಮ್ಮೆ ಬಾಲ್ಕನಿಯ ಗ್ರಿಲ್ ಮೇಲೆ, ಮತ್ತೊಮ್ಮೆ ಕಿಟಕಿಯ ಮೇಲೆ ಕೂರುತ್ತಾ ಚಡಪಡಿಸುತಿತ್ತು…ಈ ಮರಿ ಹಕ್ಕಿಯ ಭಯವೊ,ತವಕವೊ, ಹುಚ್ಚು ಧೈರ್ಯವೊ?… ಅಂತೂ ಸಂಕಟಕ್ಕೆ ಸಿಲುಕಿತು. ಸ್ವಲ್ಪದರಲ್ಲೇ ಒಂಟಿ ಮರಿಯ ತೊಳಲಾಟ ಕಂಡ ಇನ್ನೆರಡೂ ಹಕ್ಕಿಗಳು ಹುಚ್ಚು ಧೈರ್ಯ ಮಾಡಿ ಗೂಡಿನಿಂದ ಹೊರ ಬಂದು ಅವುಗಳೂ ಪೇಚಾಡಲು ಶುರು ಮಾಡಿದವು. ಇದನ್ನು ನೋಡಿ ನಮಗೆ ತುಂಬಾ ದುಃಖವಾಯಿತು. ಛೆ! ನಾನೇನು ಮಾಡಿದೆ? ಎಂದು ಪಶ್ಚಾತ್ತಾಪವಾಯಿತು. ನಿಶ್ಚಿಂತೆಯಿಂದಿದ್ದ ಮರಿಗಳನ್ನು ಏಳಿಸಿದೆನಲ್ಲಾ…ಅಷ್ಟೊತ್ತಿಗೆ ತಾಯಿ ಹಕ್ಕಿಯ ಆಗಮನ. ಚೀಕರಿಸುತ್ತಿದ್ದ ಮರಿಗಳ ಪಾಡನ್ನು ನೋಡಿ ಗಾಬರಿಗೊಂಡಿತು. ಒಂದೆರಡು ಬಾರಿ ಗೂಡಿಗೆ ಹಾರಿ ಮರಿಗಳನ್ನು ಗೂಡು ಸೇರಲು ಪ್ರೇರೇಪಿಸಿತು. ಗಾಬರಿ ಮತ್ತು ಯದ್ವಾತದ್ವ ಹಾರಾಟದಿಂದ ಬಳಲಿದ ಮರಿಗಳು ಗೂಡು ಸೇರಲು ಅಶಕ್ತರಾಗಿದ್ದವು. ತಾಯಿ ಹಕ್ಕಿ ಬಾಲ್ಕನಿಯ ಕಿಟಕಿಯ ಮೇಲೆ ಆಹಾರ ಕೊಟ್ಟು ಹಾರಿ ಹೋಯಿತು. ಗಂಡು ಹಕ್ಕಿಯೂ ಬಂದು ಆಹಾರ ಕೊಟ್ಟು ಹೋಯಿತು. ಪೋಷಕ ಹಕ್ಕಿಗಳಿಂದ ಆಹಾರ ತಿಂದ ಮರಿಗಳು ಸ್ವಲ್ಪ ಸುಧಾರಿಸಿದವು. ಸ್ವಲ್ಪ ಧೈರ್ಯವೂ ಬಂದಿರಬೇಕು. ಆದರೆ ಅದು ಅತೀ ಕ್ಷಣಿಕವಾಗಿತ್ತು. ಎಲ್ಲಿತ್ತೊ ಏನೋ, ಕಾಗೆಯೊಂದು ಬಂದ ಬಾಲ್ಕನಿಯಲ್ಲಿ ಪ್ರತ್ಯಕ್ಷವಾಯಿತು. ಎಲ್ಲೋ ಹಾರುತ್ತಿದ್ದ ಕಾಗೆಯ ಕಣ್ಣಿಗೆ ಈ ಅಶಕ್ತ ಮರಿಗಳು ಕಾಣಿಸಿಯೇ ಬಿಟ್ಟವು. “ಬಾಣಲೆಯಿಂದ ತಪ್ಪಿ ಒಲೆಗೇ ಬಿದ್ದಂತಾಯಿತು”. ಕೂಡಲೇ ಕಾಗೆಯನ್ನು ಓಡಿಸಿದೆವು. ಅದೇನು ಪ್ರಕೃತಿ ನಿಯಮ?! ಆಹಾರ ಸರಪಣಿಯ ನಾಲ್ಕನೇ ಕೊಂಡಿಯಾಗಿ ಕಾಗೆ ಪ್ರಕಟವಾಗಿತ್ತು! ಶಾಂತವಾಗಿ ನೆಮ್ಮದಿಯಿಂದ ಗೂಡಲ್ಲಿ ಕೂತಿದ್ದ ಈ ಮರಿಗಳಿಗೆ ನೋಡು-ನೋಡುತ್ತಲೇ ಸಾವು-ಬದುಕಿನ ಹೋರಾಟ!!. ನಮ್ಮಿಬ್ಬರಿಗೂ ಸಹ ಗಾಬರಿ-ದುಃಖ. ನನಗೆ ಇದೆಲ್ಲಾ ನನ್ನಿಂದಲೇ ಆಯಿತಲ್ಲಾ ಎಂಬ ಪಶ್ಚಾತ್ತಾಪ. ಛೆ! ಈ ರಾಬಿನ್ ದಂಪತಿಗಳಿಗೆ ಸಂತಾನೊತ್ಪತ್ತಿಗೆ ಎಷ್ಟು ಕಂಟಕವಪ್ಪಾ..?! ಮೊದಲ ಗೂಡಲ್ಲಿ ಮರಿಯಾಗುವ ಮೊದಲೇ ಇರುವೆ ಹಾವಳಿ..ಈಗ ಮರಿಗಳನ್ನು ಉಳಿಸಿಕೊಳ್ಳವುದು ಕಷ್ಟಕರವೇ ಸರಿ. ಹೀಗೆ ಪೋಷಕ ಹಕ್ಕಿಗಳು ಆಹಾರ ತಂದು ಕೊಡುತ್ತಿದ್ದವು. ನಮಗೆ ಕಾದು ಕೂತು ಕಾಗೆಗಳನ್ನು ಓಡಿಸುವ ಕೆಲಸ..! ಮರಿಗಳಂತೂ ಕಾಗೆಗೆ ಹೆದರಿಕೊಂಡು ಬಾಲ್ಕನಿಯಲ್ಲಿಟ್ಟ ಹೂಕುಂಡಗಳ ಸಂಧಿನಲ್ಲಿ ಅಡಗಿ ಕುಳಿತ್ತಿದ್ದವು. ಸಂಜೆಯ ಹೊತ್ತಿಗೆ ಸ್ವಲ್ಪ ಸುಧಾರಿಸಿಕೊಂಡು ಆಗೊಮ್ಮೆ ಈಗೊಮ್ಮೆ ಗ್ರಿಲ್ ಮೇಲೆ ಕೂರತ್ತಿದ್ದವು. ಸಂಜೆ 5 ಗಂಟೆಯ ಸುಮಾರಿಗೆ ಮೂರೂ ಮರಿ ಹಕ್ಕಿಗಳನ್ನು ಪೋಷಕ ಹಕ್ಕಿಗಳು ಕಾಡಿಗೆ ಕರೆದ್ಯೊದವು. ಅಧ್ಯಾಯ ಸುಖಾಂತ್ಯವೇ?ನಮಗಂತೂ ಸಮಾಧಾನವಾಯಿತು. ನೂರಕ್ಕೆ ನೂರಲ್ಲದಿದ್ದರೂ ಮರಿಗಳು ಬದುಕುಳಿಯುವ ಸಾಧ್ಯತೆಯೇ ಜಾಸ್ತಿಯನಿಸಿತು…
ಮುನಿಯಾ ಮತ್ತು ರಾಬಿನ್’ಗಳ ಎರಡೂ ಗೂಡನ್ನು ತೆಗೆದು ಸ್ವಚ್ಛಗೊಳಿಸಿ ಮತ್ತೆ ಜೋಡಿಸಿದೆನು. ಸುಮಾರು 20 ದಿನಗಳ ಬಳಿಕ ಪುನಃ ರಾಬಿನ್ ಹಕ್ಕಿಗಳು ಗೂಡು ಕಟ್ಟಲು ಶುರು ಮಾಡಿದವು. ಅಂದರೆ ಹಿಂದಿನ ಕಹಿ ನೆನಪುಗಳಾಗ್ಯೂ ಸಫಲತೆ ತೃಪ್ತಿ ತಂದಿರಬೇಕು. ಕಾಡಿಗೆ ಹೋಲಿಸಿದರೆ ಮನುಷ್ಯರ ಒಡನಾಟದಲ್ಲಿ ಗೂಡು ಕಟ್ಟುವುದು ಸುರಕ್ಷಿತವೆನಿಸಿರಬೇಕು. ಮೊದಲಿನಂತೆಯೇ ಗೂಡು ಕಟ್ಟಿ ಮೊಟ್ಟೆಯಿಟ್ಟು ನಾಲ್ಕು ಮರಿಗಳನ್ನು ಬೆಳೆಸಿದವು. ತದನಂತರ ಕಳೆದ ಒಂದು ವರ್ಷದಲ್ಲಿ ಮುನಿಯಾ ಮಾತ್ರ ಸಂಸಾರ ಮಾಡುತ್ತಿದೆ. ರಾಬಿನ್ ಗೂಡ ಕಟ್ಟಲಿಲ್ಲ.
ಈ ಹಕ್ಕಿಗಳು ಕಾಡಲ್ಲಿ ಗೂಡು ಕಟ್ಟಿ ಮರಿಗಳನ್ನು ಬೆಳೆಸುತ್ತವೆ. ಕಾಡಿನಲ್ಲಿ ಇವುಗಳ ಗೂಡು ಕಟ್ಟುವ ಮತ್ತು ಮರಿ ಮಾಡುವ ವೈಖರಿಯನ್ನು ನೋಡುವುದು ಅಸಾಧ್ಯ. ಅಲ್ಲದೇ ಅದು ಹಕ್ಕಿಗಳಿಗೆ ಅಡಚಣೆಯೇ ಆಗುತ್ತದೆ. ಆದರೆ ಈ ಹಕ್ಕಿಗಳು ನಮ್ಮ ಬಾಲ್ಕನಿಯಲ್ಲಿ ಗೂಡು ಕಟ್ಟಿ, ಗೂಡು ಕಟ್ಟುವ ಕಾರ್ಯವೈಖರಿ, ಮರಿಗಳ ಬಗ್ಗೆ ಕಾಳಜಿ ಮತ್ತು ಮರಿಗಳನ್ನು ಬೆಳೆಸುವ ರೀತಿಯನ್ನು ತಿಳಿಸಿ ಕೊಟ್ಟವು. ಅದಲ್ಲದೇ ನಿತ್ಯವೂ ಮಧುರವಾಗಿ ಹಾಡುತ್ತಾ ನಮ್ಮನ್ನು ಮನರಂಜಿಸುತಿದ್ದವು.
ಒರಿಯಂಟಲ್ ಮ್ಯಾಗ್‍ಪೈ ರಾಬಿನ್ ಸುಮಾರು 19ಸೆ.ಮೀ ಉದ್ದವಿರುವ ಕಪ್ಪು-ಬಿಳಿ ಬಣ್ಣದ ಪಕ್ಷಿ. ಯಾವಾಗಲೂ ಬಾಲವನ್ನು ಮೇಲಕ್ಕೆತ್ತಿರುವುದು ಇದರ ಸ್ವಭಾವ!. ಗಂಡು ಹಕ್ಕಿ ಖಡಕ್ ಕಪ್ಪು ಬಣ್ಣದ್ದಾಗಿದ್ದರೆ, ಹೆಣ್ಣು ಹಕ್ಕಿ ಸ್ವಲ್ಪ ಬೂದು ಮಿಶ್ರಿತ ಬಣ್ಣದ್ದಾಗಿರುತ್ತದೆ. ಭಾರತದಲ್ಲಿ ಮಾರ್ಚನಿಂದ ಜುಲೈವರೆಗೆ ಮರಿ ಮಾಡುವ ಈ ಹಕ್ಕಿಯು ಮರದ ಪೊಟರೆ, ಮನೆ-ಮಾಡುಗಳ ಸಂಧಿನಲ್ಲಿ ಗೂಡು ಕಟ್ಟುತ್ತದೆ. ಮನುಷ್ಯರ ಒಡನಾಟದಲ್ಲಿ ಹೆಚ್ಚಾಗಿ ಕಾಣ ಸಿಗುವ ರಾಬಿನ್, “ಗೂಡು ಪೆಟ್ಟಿಗೆ”ಯನ್ನು ಗೂಡು ಕಟ್ಟಲು ಆರಿಕೊಳ್ಳುವುದು ಸಾಮಾನ್ಯ. ಗೂಡು ಕಟ್ಟುವ ಕೆಲಸದಲ್ಲಿ ಹೆಣ್ಣು ಜಾಸ್ತಿ ತೊಡಗಿಸಿಕೊಂಡರೆ,ಗಂಡು ಗೂಡಿನ ರಕ್ಷಣಾ ಕಾರ್ಯ ನೋಡಿಕೊಳ್ಳುತ್ತದೆ. ಪ್ರಾಚೀನ ಕಾಲದಲ್ಲಿ ಈ ರಾಬಿನ್ ಹಕ್ಕಿಗಳನ್ನು ಇವುಗಳ ಹಾಡುವ ಸ್ವಭಾವಕ್ಕಾಗಿ ಮನೆಗಳಲ್ಲಿ ಪಂಜರದಲ್ಲಿಟ್ಟು ಸಾಕುತ್ತಿದ್ದರು. ನಮ್ಮಂತೆ ಇವುಗಳೂ ಸ್ವತಂತ್ರವಾಗಿರುವುದು ಉಚಿತವಲ್ಲವೇ?